Tag: Tour

  • ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

    ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

    ಚಿಕ್ಕಮಗಳೂರು: ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ಕಾಲುಜಾರಿ ಭದ್ರಾ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಂಬುತೀರ್ಥದ ಬಳಿ ನಡೆದಿದೆ.

    ಕಿರಣ್ ಕೊಟ್ಯಾನ್(26) ನದಿಯಲ್ಲಿ ಕೊಚ್ಚಿ ಹೋದ ಯುವಕ. ಮಂಗಳೂರಿನಿಂದ 13 ಮಂದಿಯ ತಂಡ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ಬಂದಿತ್ತು. ಈ ವೇಳೆ ಅಂಬುತೀರ್ಥದ ಬಳಿ ಕಿರಣ್ ಕೊಟ್ಯಾನ್ ಯುವಕ ಕಾಲು ಜಾರಿ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಬಳಿಕ ಅವರ ಸ್ನೇಹಿತರು ಕಿರಣ್ ಕೊಟ್ಯಾನ್ ಅವರನ್ನು ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಕಳಸ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿರುವ ಕಿರಣ್ ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಕಿರಣ್ ಜೊತೆಯಲ್ಲಿ ಬಂದಿದ್ದವರು ಸ್ಥಳದಲ್ಲಿದ್ದು, ಪೊಲೀಸರಿಗೆ ಶೋಧಕಾರ್ಯಕ್ಕಾಗಿ ಮಾಹಿತಿ ನೀಡುತ್ತಿದ್ದಾರೆ.

    ಕಿರಣ್ ಕೊಟ್ಯಾನ್ ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

  • ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧರಾದ ಬಿಎಸ್‍ವೈ

    ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧರಾದ ಬಿಎಸ್‍ವೈ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.

    ನಗರದ ವಿದ್ಯಾರಣ್ಯಪರಂನ ಸಭಾಭವನದಲ್ಲಿ ಶತಾಯುಷಿ ಕೆ.ವೀರಣ್ಣ ತಿಂಡ್ಲು ಅವರ ಶತಮಾನದ ನಮನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಬಿ.ಎಸ್ ಯಡಿಯೂರಪ್ಪ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ಜುಲೈ 16, 17 ರಂದು ನಮ್ಮ ಪ್ರಮುಖ ನಾಯಕರ ಜೊತೆ ಸಮಾಲೋಚನೆ ನಡೆಸುತ್ತೇನೆ. ಜುಲೈ 20ರ ನಂತರ ನಾವು ರಾಜ್ಯಾದ್ಯಂತ ಪ್ರವಾಸ ಮಾಡುವ ಯೋಚನೆ ಇದೆ ಅಂದ್ರು.

    ರೈತರ ಸಾಲ ಮನ್ನಾ ವಿಚಾರವಾಗಿ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತಾಡಿರೋದಾಗಿ ಸಿಎಂ ಹೇಳಿದ್ದಾರೆ. ಆದರೆ ಯಾವುದರಲ್ಲೂ ಸ್ಪಷ್ಟತೆ ಇಲ್ಲ. ರಾಜ್ಯಾದ್ಯಂತ ಅನೇಕ ಜ್ವಲಂತ ಸಮಸ್ಯೆಗಳಿವೆ. ಹೀಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮೂರು-ನಾಲ್ಕು ತಂಡಗಳನ್ನು ರಚನೆ ಮಾಡಿಕೊಂಡು ಪ್ರವಾಸ ಮಾಡುತ್ತೇವೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಮೂರ್ನಾಲ್ಕು ಸಾವಿರ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ. ಮೈತ್ರಿ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ವಿಧಾನಪರಿಷತ್ ಸದಸ್ಯೆ ತೇಜಸ್ವಿ ಮತ್ತು ಕೂಳದ ಮಠದ ಸ್ವಾಮೀಜಿ ಉಪಸ್ಥಿತಿಯಲ್ಲಿದ್ದರು.

  • ಬಜೆಟ್ ಮುಗಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಸ

    ಬಜೆಟ್ ಮುಗಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಸ

    ಬಾಗಲಕೋಟೆ: ಬಜೆಟ್ ಮುಗಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಬದಾಮಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

    ಇದೇ ತಿಂಗಳು 17 ರಂದು ಸಾಯಾಂಕಾಲ ಮಾಜಿ ಸಿಎಂ ಸಿದ್ದರಾಮಯ್ಯ ಬದಾಮಿಗೆ ಆಗಮಿಸಲಿದ್ದಾರೆ. ಎರಡು ದಿನಗಳ ಕಾಲ ಬದಾಮಿಯ ಹೊರ ವಲಯದಲ್ಲಿರುವ ಕೃಷ್ಣಾ ಹೆರಿಟೇಜ್ ನಲ್ಲಿ ವಾಸ್ತವ್ಯ ಹೂಡಲಿದ್ದು, 18 ರಂದು ತಾಲೂಕು ಕೆಡಿಪಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಬದಾಮಿ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ಐತಿಹಾಸಿಕ ತಾಣಗಳ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಇದರ ಜೊತೆಗೆ ಬದಾಮಿ ತಾಲೂಕಿನಾದ್ಯಂತ ಇರುವ ಕೆರೆಗಳನ್ನ ತುಂಬುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. 19 ರಂದು ತಾಲೂಕಿನ ಕುಂದುಕೊರತೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.

    ಈಗಾಗಲೇ ಬದಾಮಿ ಕ್ಷೇತ್ರದಲ್ಲಾಗಬೇಕಿರುವ ಐಟಿಐ ಕಾಲೇಜು, ಜವಳಿ ಪಾರ್ಕ್, ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಹಾಗೂ ಆಯಾ ಇಲಾಖೆಯ ಸಚಿವರುಗಳಿಗೆ ಪ್ರತ್ಯೇಕ 8 ಪತ್ರಗಳನ್ನ ಸಹ ಬರೆದಿದ್ದಾರೆ. ಆ ಬಗ್ಗೆಯೂ ತಾಲೂಕಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮೂಲಭೂತ ಸೌಕರ್ಯಗಳ ಒದಗಿಸುವ ಬಗ್ಗೆ ಸೂಚಿಸಲಿದ್ದಾರೆ. 19 ರಂದು ಸಾಯಂಕಾಲ ಬದಾಮಿಯಿಂದ ಮರಳಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

  • ಮೈತ್ರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಬಿಎಸ್‍ವೈ ಪ್ಲಾನ್!

    ಮೈತ್ರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಬಿಎಸ್‍ವೈ ಪ್ಲಾನ್!

    – ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು 6 ತಂಡಗಳೊಂದಿಗೆ ಸಜ್ಜಾದ ಯಡಿಯೂರಪ್ಪ!

    ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ.

    ಯಡಿಯೂರಪ್ಪ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗುತ್ತಿದ್ದಾರೆ. ರಾಜ್ಯದ ರೈತರ ಸಮಗ್ರ ಸಮಸ್ಯೆಗಳನ್ನರಿಯಲು ಯಡಿಯೂರಪ್ಪ 6 ತಂಡಗಳನ್ನು ರಚಿಸಿದ್ದಾರೆ. ಇಂದಿನಿಂದ ಜೂನ್ 30 ವರೆಗೆ ಒಟ್ಟು 15 ದಿನಗಳ ಕಾಲ ರಾಜ್ಯಾದ್ಯಂತ ಆ 6 ತಂಡಗಳು ಪ್ರವಾಸ ಆರಂಭಿಸಲಿವೆ. ರೈತ ಮೋರ್ಚಾದ ಐದು ತಂಡಗಳಿಂದ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲಿವೆ.

    ಪ್ರವಾಸ ಮಾಡಲಿರುವ ತಂಡಗಳು
    ತಂಡ 1 – ರಾಜ್ಯ ಬಿಜೆಪಿ ರೈತ ಮೋರ್ಚಾ ಅದ್ಯಕ್ಷ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಪ್ರವಾಸ ಮಾಡಲಿದ್ದು, ಈ ತಂಡ ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಬಾಗಲಕೋಟೆ, ವಿಜಯಪುರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತದೆ.

    ತಂಡ 2 – ಬಳ್ಳಾರಿ, ಬೀದರ್, ಕಲಬುರ್ಗಿ ನಗರ, ಕಲಬುರ್ಗಿ ಗ್ರಾಮಾಂತರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತವೆ.

    ತಂಡ -3 – ಈಶ್ವರ ಚಂದ್ರ ಹೊಸಮನಿ ನೇತೃತ್ವದಲ್ಲಿ ಮೂರನೇ ತಂಡದ ಕಾರ್ಯ ನಿರ್ವಹಣೆ ಮಾಡುತ್ತದೆ. ಈ ತಂಡ ಹಾವೇರಿ, ಗದಗ, ಧಾರವಾಡ, ಧಾರವಾಡ ಗ್ರಾಮೀಣ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತವೆ.

    ತಂಡ -4 – ನಂಜುಂಡೇಗೌಡ ಅವರ ನೇತೃತ್ವದಲ್ಲಿ ನಾಲ್ಕನೇ ತಂಡದ ಪ್ರವಾಸ ಮಾಡಲಿದ್ದು, ಮೈಸೂರು ನಗರ, ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತವೆ.

    ತಂಡ 5 – ಪವಿತ್ರಾ ರಾಮಯ್ಯ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿದ್ದು, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತವೆ.

    ತಂಡ 6 – ಶಿವಪ್ರಸಾದ್ ನೇತೃತ್ವದಲ್ಲಿ ಕೊನೆಯ 6ನೇ ತಂಡದ ಪ್ರವಾಸ ಮಾಡಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತವೆ.

    ತಂಡಗಳಿಗೆ ಯಡಿಯೂರಪ್ಪ ನೀಡಿದ ಟಾಸ್ಕ್:
    * ಸಾಲ ಮನ್ನಾಕ್ಕೆ ಆಗ್ರಹಿಸಿ ಮೈತ್ರಿ ಸರ್ಕಾರದ ವಿರುದ್ದ ರೈತರನ್ನು ಹುರಿದುಂಬಿಸಬೇಕು.
    * ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಜನರಿಗೆ ಮನವರಿಕೆ ಮಾಡುವುದು.
    * ಆಯಾ ಜಿಲ್ಲೆಗಳಲ್ಲಿನ ರೈತರ ಮೂಲಭೂತ ಸಮಸ್ಯೆಗಳನ್ನು ಪಟ್ಟಿ ಮಾಡುವುದು.
    * ಪ್ರಧಾನಿ ನರೇಂದ್ರ ಮೋದಿ ರೈತರಿಗೆ ನೀಡಿರುವ ಯೋಜನೆಗಳ ಮನವರಿಕೆ ಮಾಡುವುದು.
    * ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲಿಸುವಂತೆ ರೈತರಿಗೆ ಮನವಿ ಮಾಡುವುದು.
    * ಪ್ರತಿ ಜಿಲ್ಲೆಗಳಲ್ಲಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಸುವುದು.

    ಆರು ತಂಡಗಳ ಕಾರ್ಯ ನಿರ್ವಹಣೆ:
    * ಬಿ.ಎಸ್.ವೈ ನೀಡಿರುವ ಟಾಸ್ಕ್ ಕಡ್ಡಾಯವಾಗಿ ಪೂರೈಸಲೇಬೇಕು.
    * ಪ್ರವಾಸದ ಸಂಪೂರ್ಣ ವರದಿ ರೈತ ಮೋರ್ಚಾ ಅದ್ಯಕ್ಷ ಲಕ್ಷ್ಮಣ ಸವದಿ ಕೈ ಸೇರಲಿದೆ.
    * ಲಕ್ಷ್ಮಣ ಸವದಿ ಸಂಪೂರ್ಣ ವರದಿಯನ್ನು ರೈತ ಮೋರ್ಚಾ ಉಸ್ತುವಾರಿ ರವಿಕುಮಾರ್ ಗೆ ನೀಡಬೇಕು.
    * ರೈತ ಮೋರ್ಚಾ ಉಸ್ತುವಾರಿ ಹೊತ್ತಿರುವ ರವಿಕುಮಾರ್.
    * ರವಿಕುಮಾರ್ ಸಂಪೂರ್ಣ ವರದಿಯನ್ನು ಯಡಿಯೂರಪ್ಪ ಕೈಗೊಪ್ಪಿಸಲಿದ್ದಾರೆ.

  • ಮೈಸೂರು ಮೃಗಾಲಯದಲ್ಲಿ ಅತಿಥಿಗಳ ಆಗಮನ – ಪ್ರವಾಸಿಗರಿಗೆ ಸಂತಸ

    ಮೈಸೂರು ಮೃಗಾಲಯದಲ್ಲಿ ಅತಿಥಿಗಳ ಆಗಮನ – ಪ್ರವಾಸಿಗರಿಗೆ ಸಂತಸ

    ಮೈಸೂರು: ನಗರದ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಮೂವರು ಹೊಸ ಅತಿಥಿಗಳ ಆಗಮನವಾಗಿದೆ. ಈ ಹೊಸ ಅತಿಥಿಗಳು ಮೃಗಾಲಯಕ್ಕೆ ಬರುವ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದ್ದು, ಆ ಅತಿಥಿಗಳ ಆಗಮನ ಅಲ್ಲಿನ ಸಿಬ್ಬಂದಿಗಳಿಗೂ ಖುಷಿ ತಂದಿದೆ.

    ಮೃಗಾಲಯದಲ್ಲರುವ ಖುಷಿ ಜಿರಾಫೆ ಹಾಗೂ ನೀರು ಕುದುರೆ ಮರಿಗಳಿಗೆ ಜನ್ಮ ನೀಡಿದ್ದು, ಈಗ ಎಲ್ಲಾ ಪ್ರವಾಸಿಗರ ಆಕರ್ಷಣೆ ಆಗಿದೆ. ಆದರೆ ನೀರು ಕುದುರೆ ಮರಿ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ಕಾರಣ ಆ ಮರಿಗಳು ತಿಂಗಳುಗಟ್ಟಲೆ ನೀರಿನಲ್ಲೇ ಇರುವುದರಿಂದ ಈ ಕುರಿತು ಮಾಹಿತಿ ಸಂಗ್ರಹಣೆ ಕಷ್ಟವಾಗಲಿದೆ.

    ಇವೆರಡೂ ಮರಿಗಳ ಜನನದ ಜೊತೆಗೆ ಮೃಗಾಲಯಕ್ಕೆ ಮತ್ತೆರಡು ವಿಶೇಷ ಅತಿಥಿಗಳು ಆಗಮಿಸಿದ್ದು ತಿಂಗಳ ಹಿಂದೆ ಮೃಗಾಲಯ ಸೇರಿಕೊಂಡಿದ್ದ ಶ್ರೀಲಂಕಾದ ಹಸಿರು ಅನಾಕೊಂಡಗಳು ಇಂದಿನಿಂದ ಸಾರ್ವಜನಿಕರ ವಿಕ್ಷಣೆಗೆ ಲಭ್ಯವಾಗಿವೆ.

    ದೇಶದ ಎರಡೇ ಎರಡು ಮೃಗಾಲಯದಲ್ಲಿ ಈ ಹಸಿರು ಅನಾಕೊಂಡಗಳು ಕಾಣಸಿಗುತ್ತದೆ. ಅದರಲ್ಲಿ ಮೈಸೂರು ಮೃಗಾಲಯ ಕೂಡ ಒಂದು. ಶ್ರೀಲಂಕಾದಿಂದ ಕಳೆದ ತಿಂಗಳು ಆಮದು ಮಾಡಿಕೊಂಡಿರುವ ಅನಾಕೊಂಡ ಹಾವುಗಳನ್ನ ಒಂದು ತಿಂಗಳ ಕಾಲ ಅದರ ಚಲನವಲನಗಳ ಮೇಲೆ ಗಮನ ಹರಿಸಲಾಗಿತ್ತು. ಯಾವುದೇ ಸಮಸ್ಯೆ ಇಲ್ಲ ಎಂದು ದೃಢವಾದ ಬಳಿಕ ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗಿದೆ. ಈಗ ಸದ್ಯ ಈ ಹಸಿರು ಅನಾಕೊಂಡಗಳು ಆರೋಗ್ಯವಾಗಿದ್ದು ಮೃಗಾಲಯಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಿವೆ.

  • ಡಿವೈಡರ್ ಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿ – 7 ಮಂದಿಗೆ ಗಾಯ, ಮಹಿಳೆ ಗಂಭೀರ

    ಡಿವೈಡರ್ ಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿ – 7 ಮಂದಿಗೆ ಗಾಯ, ಮಹಿಳೆ ಗಂಭೀರ

    ಮಂಡ್ಯ: ಮಿನಿ ಬಸ್ ಪಲ್ಟಿಯಾದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕೆ.ಆರ್ ಸಾಗರ ಟೋಲ್ ಬಳಿ ನಡೆದಿದೆ.

    ಗಾಯಾಳುಗಳನ್ನು ಬೆಂಗಳೂರು ಮತ್ತು ಆಂಧ್ರಪ್ರದೇಶ ಮೂಲದ ಪ್ರವಾಸಿಗರು ಎಂದು ತಿಳಿದುಬಂದಿದೆ. ಇವರೆಲ್ಲರೂ ಪ್ರವಾಸಕ್ಕೆಂದು ಬರುತ್ತಿದ್ದರು. ಈ ವೇಳೆ ಕೆ.ಆರ್ ಸಾಗರ ಟೋಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಬಳಿಕ ಮಿನಿ ಬಸ್ ಪಲ್ಟಿಯಾಗಿದೆ. ಪರಿಣಾಮ ಏಳು ಮಂದಿಗೆ ಗಾಯಗಳಾಗಿವೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಾಗಲಕ್ಷ್ಮೀ ಅವರನ್ನು ಕೂಡಲೇ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಕೆ.ಆರ್ ಸಾಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ಮಲೇಷಿಯಾದಲ್ಲಿ ಕಿಚ್ಚ ಫ್ಯಾಮಿಲಿ

    ಮಲೇಷಿಯಾದಲ್ಲಿ ಕಿಚ್ಚ ಫ್ಯಾಮಿಲಿ

    ಬೆಂಗಳೂರು: ಇತ್ತೀಚೆಗೆ ನಟ ಕಿಚ್ಚ ಸುದೀಪ್ ತಮ್ಮ ಪತ್ನಿ ಪ್ರಿಯಾ ಸುದೀಪ್ ಮತ್ತು ಮಗಳು ಸಾನ್ವಿ ಜೊತೆ ಬಿಡುವು ಮಾಡಿಕೊಂಡು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ.

    ಸುದೀಪ್ ಮಗಳು ಸಾನ್ವಿಗೆ ಬೇಸಿಗೆ ರಜೆ ಶುರುವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ರಜಾ ಸಿಕ್ಕಿರೆ ಸಾಕು ಮಜಾ ಮಾಡುವ, ಸುತ್ತಾಡುವ ಮೂಡನಲ್ಲಿರುತ್ತಾರೆ. ಆದ್ದರಿಂದ ಸುದೀಪ್ ದಂಪತಿ ಮತ್ತು ಮಗಳು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ.

    ಸಾಲು ಸಾಲು ಸಿನಿಮಾಗಳ ಶೂಟಿಂಗ್ ನಲ್ಲೂ ಬಿಡುವು ಇದ್ದಾಗ ತಮ್ಮ ಪ್ರೀತಿಯ ಮಗಳು ಮತ್ತು ಪತ್ನಿಯ ಜೊತೆ ಆರು ದಿನಗಳ ಕಾಲ ಮಲೇಷಿಯಾ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಪ್ರವಾಸ ಮುಗಿಸಿ ಬಂದ ನಂತರ ಪ್ರಿಯಾ ಸುದೀಪ್ ಅಲ್ಲಿ ತೆಗೆದ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ನನಗೆ ಇಷ್ಟವಾದ ವ್ಯಕ್ತಿಗಳ ಜೊತೆ ಮರೆಯಲಾಗದ ಮಧುರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.

    ಸುದೀಪ್ ಮೊದಲು ಮಗಳನ್ನ ಜಪಾನ್ ಗೆ ಕರೆದುಕೊಂಡು ಹೋಗಬೇಕೆಂದು ಅಂದುಕೊಂಡಿದ್ದರು. ಆದರೆ ಶೂಟಿಂಗ್ ಇದ್ದುದ್ದರಿಂದ ಆರು ದಿನಗಳ ಕಾಲ ಮಾತ್ರ ರಜೆ ಇತ್ತು. ಆದ್ದರಿಂದ ಮಲೇಷಿಯಾಕ್ಕೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸುದೀಪ್ `ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ.

  • ಮೋದಿ ದೇಶದಲ್ಲಿ `ಮೌನಿ ಬಾಬಾ’, ವಿದೇಶದಲ್ಲಿ ಮಾತ್ರ ಮಾತಾಡ್ತಾರೆ : ಶಿವಸೇನೆ

    ಮೋದಿ ದೇಶದಲ್ಲಿ `ಮೌನಿ ಬಾಬಾ’, ವಿದೇಶದಲ್ಲಿ ಮಾತ್ರ ಮಾತಾಡ್ತಾರೆ : ಶಿವಸೇನೆ

    ಮುಂಬೈ: ಬಿಜೆಪಿ ಪಕ್ಷದ ಬಹುಕಾಲದ ಮಿತ್ರ ಪಕ್ಷವಾಗಿದ್ದ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮೋದಿ ದೇಶದ ಸ್ಥಳೀಯ ವಿಷಯಗಳನ್ನು ವಿದೇಶಿದಲ್ಲಿ ನಿಂತು ಮಾತನಾಡುತ್ತಾರೆ. ಪ್ರಧಾನಿಗಳ ಈ ನಡೆ ಸೂಕ್ತವಲ್ಲ ಎಂದು ಕಿಡಿಕಾರಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಇಂಗ್ಲೆಂಡ್ ಪ್ರವಾಸವನ್ನು ಟೀಕಿಸಿರುವ ಶಿವಸೇನೆ, ಬಹುಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ಪರಾರಿಯಾಗಿರುವ ವಿಜಯ್ ಮಲ್ಯ ಅಲ್ಲೇ ಇದ್ದರೂ ಪ್ರಧಾನಿಗಳು ಬರಿಗೈ ನಲ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ ಅಂತಾ ವ್ಯಂಗ್ಯ ಮಾಡಿದೆ.

    ತನಗೆ ಕಾಂಗ್ರೆಸ್ ಅಥವಾ ಗಾಂಧಿ ಹೆಸರಿನ ಕುಟುಂಬದ ವಿರುದ್ಧ ಅಸಮಾಧಾನವಿದ್ದು, ಆದರೆ ದೇಶದ ವಿಷಯಗಳ ಕುರಿತು ವಿದೇಶದಲ್ಲಿ ಮಾತನಾಡುವುದು ಯಾರಿಗೂ ಲಾಭ ತಂದು ಕೊಡುವುದಿಲ್ಲ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹೇಳಿದೆ.

    ಇದೇ ವೇಳೆ ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಯನ್ನು ಅನುಸರಿಸಬೇಕು ಎಂದು ತಿಳಿಸಿದೆ. ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಮನಮೋಹನ್ ಸಿಂಗ್ ತಮ್ಮ ಆಡಳಿತ ಅವಧಿಯಲ್ಲಿ ಹೇಗೆ ತಮ್ಮನ್ನು ಮೌನಿ ಎಂದು ಟೀಕಿಸುತ್ತಿದ್ದು ಇಂದು ತಮಗೂ ಆನ್ವಯವಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಶೀವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

    ಇಂಗ್ಲೆಂಡ್ ಪ್ರವಾಸದ ವೇಳೆ ಪ್ರಧಾನಿ ಮೋದಿ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಲಂಡನ್ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಭಾವುಕರಾಗಿದ್ದರು. ಅಲ್ಲದೇ ಕಳೆದ ಬಾರಿ ಜಪಾನ್ ಪ್ರವಾಸದ ವೇಳೆ ಸಭೆಯೊಂದರಲ್ಲಿ ಭ್ರಷ್ಟಾಚಾರದ ಕುರಿತು ಹೇಳಿಕೆ ನೀಡಿದ್ದರು. ಈ ಎರಡು ಘಟನೆಗಳನ್ನು ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿರುವ ಶಿವಶೇನೆ ವಿದೇಶದಲ್ಲಿ ಭಾರತ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ ದೇಶದ ಹೆಸರಿಗೆ ಕೆಟ್ಟ ಅಭಿಪ್ರಾಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.  ಇದನ್ನೂ ಓದಿ : ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಮೋದಿ ಗಮನ ಹರಿಸಬೇಕು- ಐಎಂಎಫ್ ಮುಖ್ಯಸ್ಥೆ

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸದ್ಯ ಮಾತನಾಡಲು ಆರಂಭಿಸಿದ್ದಾರೆ. ಆದರೆ ಪ್ರಧಾನಿಗಳು ಮೌನಿಯಾಗಿದ್ದಾರೆ. ರಾಹುಲ್ ಗಾಂಧಿ ಮೋದಿ ಅವರನ್ನು ಮೌನವಾಗಿ ಮಾಡಲು 15 ನಿಮಿಷ ಸಮಯಾವಕಾಶ ಕೇಳಿರುವುದು ಪ್ರಧಾನಿ ಮೌನಿಯಾಗಿದ್ದರೆ ಎಂಬುವುದಕ್ಕೆ ಸೂಕ್ತ ಸಾಕ್ಷಿ ಎಂದು ಹೇಳಿದೆ.  ಇದನ್ನೂ ಓದಿ: ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ

     

  • ಚುನಾವಣಾ ಭಾಗ್ಯಕ್ಕೆ ಚಿಕ್ಕಬಳ್ಳಾಪುರದ ಬಾಲಕ ಬಲಿ?

    ಚುನಾವಣಾ ಭಾಗ್ಯಕ್ಕೆ ಚಿಕ್ಕಬಳ್ಳಾಪುರದ ಬಾಲಕ ಬಲಿ?

    ಚಿಕ್ಕಬಳ್ಳಾಪುರ: ಚುನಾವಣಾ ಪ್ರವಾಸ ಭಾಗ್ಯಕ್ಕೆ ಬಾಲಕ ಬಲಿಯಾದನಾ ಅನ್ನೋ ಅನುಮಾನದ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ಪೂಜನಹಳ್ಳಿ ಗ್ರಾಮದಿಂದ ತಮಿಳುನಾಡಿನ ಮೇಲ್ ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಬಸ್ ಮೂಲಕ 50ಕ್ಕೂ ಹೆಚ್ಚು ಮಂದಿ ಪ್ರವಾಸಕ್ಕೆ ತೆರಳಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುವಾಗ ಮಹಾಬಲೀಪುರಂ ಬೀಚ್ ನಲ್ಲಿ ಆಟ ಆಡುವ ವೇಳೆ ಬಾಲಕ ಅಭಿಷೇಕ್ (14) ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

    ಈ ಪ್ರವಾಸವನ್ನ ಗ್ರಾಮದ ಚಂದ್ರಕಲಾ ಎಂಬವರು ಆಯೋಜನೆ ಮಾಡಿದ್ದರು. ಹೀಗಾಗಿ ಚಂದ್ರಕಲಾ ಯಾವುದೋ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು, ಚುನಾವಣಾ ಸಮಯದಲ್ಲಿ ಮತದಾರರ ಓಲೈಕೆಗೆ ಪ್ರವಾಸ ಭಾಗ್ಯ ಆಯೋಜಿಸಿರಬಹದು ಅಂತ ಶಂಕಿಸಲಾಗಿದೆ.

    ಘಟನೆ ನಡೆದ ನಂತರ ಬಾಲಕನ ಮೃತದೇಹ ಹುಡುಕಾಟದ ಕಾರ್ಯ ನಡೆಸುವುದರ ಬದಲು, ಪ್ರವಾಸಕ್ಕೆ ಕರೆದುಕೊಂಡು ಹೋದವರನ್ನ ವಾಪಸ್ ಕರೆದುಕೊಂಡು ಬಂದಿದ್ದಾರೆ. ಇದೆಲ್ಲದರ ನಡುವೆ ಪ್ರವಾಸ ಆಯೋಜನೆ ಮಾಡಿದ್ದ ಚಂದ್ರಕಲಾ ಊರಿಗೆ ಬಾರದೇ ಅರ್ಧ ದಾರಿಯಲ್ಲಿ ಬಸ್ ನಿಂದ ಇಳಿದು ನಾಪತ್ತೆಯಾಗಿದ್ದಾರೆ. ಇದ್ರಿಂದ ಚಂದ್ರಕಲಾ ವಿರುದ್ಧ ಮೃತನ ಪೋಷಕರು ಹಾಗೂ ಗ್ರಾಮಸ್ಥರು ಕೆಂಡಾಮಂಡಲರಾಗಿದ್ದಾರೆ. ಮತ್ತೊಂದೆಡೆ 20 ವರ್ಷಗಳ ನಂತರ ಹುಟ್ಟಿದ್ದ, ಇಡೀ ವಂಶಕ್ಕೆ ಗಂಡು ದಿಕ್ಕಾಗಿದ್ದ ಒಬ್ಬ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    ಘಟನೆ ಸಂಬಂಧ ಮಹಾಬಲೀಪುರಂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಇತ್ತ ಸ್ಥಳೀಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಂದ್ರಕಲಾ ವಿರುದ್ಧ ದೂರು ದಾಖಲಿಸಲು ಹೋದ್ರೆ, ಕೆಲ ರಾಜಕೀಯ ಮುಖಂಡರು ದೂರು ದಾಖಲಿಸದಂತೆ ಒತ್ತಡ ಹಾಕಿರುವ ವಿಚಾರ ತಿಳಿದು ಬಂದಿದೆ. ಒಟ್ಟಿನಲ್ಲಿ ಇದೀಗ ಪ್ರವಾಸ ಭಾಗ್ಯದಿಂದ ಬಾಲಕ ಸಾವನ್ನಪ್ಪಿರುವ ಪ್ರಕರಣ ಸಹಜವಾಗಿ ರಾಜಕೀಯ ತಿರುವು ಪಡೆದುಕೊಂಡಿದೆ.

  • ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ವಿಶೇಷ ಪ್ರವಾಸವನ್ನು ಆಯೋಜಿಸಿದೆ.

    ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಕೈಗೆಟಕುವ ದರದಲ್ಲಿ ನಂದಿಬೆಟ್ಟ ಮತ್ತು ಮೈಸೂರು, ಹಾಸನ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸವನ್ನು ಆಯೋಜಿಸಿದೆ. ಏಪ್ರಿಲ್ 1ರಿಂದ ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

    1.ಬೆಂಗಳೂರು-ದೇವನಹಳ್ಳಿ-ನಂದಿಬೆಟ್ಟ ಪ್ರವಾಸ: ಒಂದು ದಿನದ ಪ್ರವಾಸವಾಗಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಈ ಪ್ರವಾಸವನ್ನು ಆಯೋಜಿಸಲಾಗುತ್ತಿದೆ. ಈ ಪ್ರವಾಸವು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ನಿರ್ಗಮಿಸಿ ದೇವನಹಳ್ಳಿ ಕೋಟೆ-ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಜನ್ಮಸ್ಥಳ-ನಂದಿಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ಸಾಯಂಕಾಲ 5 ಗಂಟೆವರೆಗೆ ನಂದಿಬೆಟ್ಟದ ವೀಕ್ಷಣೆ ಮಾಡುವ ವ್ಯವಸ್ಥೆ ಇರುತ್ತದೆ. ಈ ಪ್ರವಾಸದ ದರವು ಪ್ರತಿಯೊಬ್ಬರಿಗೆ ಊಟದ ವ್ಯವಸ್ಥೆ ಸೇರಿ 700 ರೂ. ಆಗಿರುತ್ತದೆ.

    2.ಬೆಂಗಳೂರು-ಮೈಸೂರು-ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ-ಪ್ರವಾಸ: ಇದು 2 ದಿನಗಳ ಪ್ರವಾಸವಾಗಿದ್ದು, ಮೊದಲನೆ ದಿನ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಶ್ರೀರಂಗಪಟ್ಟಣ-ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆ.ಆರ್ ಸಾಗರ ವೀಕ್ಷಣೆ ಮತ್ತು ಕೆ.ಆರ್ ಸಾಗರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡನೇ ದಿನ ಬೆಳಿಗ್ಗೆ ಕೆ.ಆರ್ ಸಾಗರದಿಂದ ಹೊರಟು ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ ವೀರನಾರಾಯಣಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡುವ ವ್ಯವಸ್ಥೆ ಇದೆ. ಈ ಪ್ರವಾಸದ ದರವು ಊಟದ ವ್ಯವಸ್ಥೆ ಸೇರಿ ಪ್ರತಿಯೊಬ್ಬರಿಗೆ 1,900 ರೂ. ಆಗಿದೆ.

    ಪ್ರವಾಸಿಗರು ಇದೇ ರೀತಿ ಮುಂಬರುವ ಬೇಸಿಗೆ ರಜೆ ಹಿನ್ನೆಲೆಯಲ್ಲಿ ನಿಗಮದಿಂದ ಮೈಸೂರು-ಊಟಿ-ಕೊಡೆಕೆನಾಲ್-ಕೊಡಗಿನ ಪ್ರವಾಸಿ ಸ್ಥಳಗಳಿಗೆ ಬೇಡಿಕೆಗೆ ಅನುಗುಣವಾಗಿ ಪ್ರವಾಸಗಳನ್ನು ಆಯೋಜಿಸಲಾಗಿದೆ. ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಲು, ಬುಕ್ಕಿಂಗ್ ಗಾಗಿ
    www.kstdc.co  ವೆಬ್ ಸೈಟ್ ಹಾಗೂ ದೂರವಾಣಿ ಸಂಖ್ಯೆ – 89706 50070, 080-43344334 ಸಂಪರ್ಕಿಸಬಹುದಾಗಿದೆ.