Tag: Tour

  • ಸ್ವಿಟ್ಜರ್ಲ್ಯಾಂಡ್‌ಗೆ ತೆರಳಲು ಬಿಎಸ್‍ವೈ ಭರ್ಜರಿ ತಯಾರಿ

    ಸ್ವಿಟ್ಜರ್ಲ್ಯಾಂಡ್‌ಗೆ ತೆರಳಲು ಬಿಎಸ್‍ವೈ ಭರ್ಜರಿ ತಯಾರಿ

    ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬಿ.ಎಸ್ ಯಡಿಯೂರಪ್ಪ ಅವರು ವಿದೇಶ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ.

    ಜನವರಿ ತಿಂಗಳಲ್ಲಿ ಸಿಎಂ ವರು ಕೇಂದ್ರ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಸ್ವಿಟ್ಜರ್ಲ್ಯಾಂಡ್ ದೇಶಕ್ಕೆ 5 ದಿನಗಳ ಕಾಲ ಪ್ರವಾಸ ಹೊರಡುತ್ತಿದ್ದಾರೆ. ಸಿಎಂ, ಸರ್ಕಾರಿ ಕೆಲಸದ ನಿಮಿತ್ತ ಜನವರಿ 21ರಿಂದ 25ರವರೆಗೆ 5 ದಿನಗಳ ಕಾಲ ಸ್ವಿಟ್ಜರ್ಲ್ಯಾಂಡ್ ಪ್ರವಾಸಕ್ಕೆ ತೆರಳುತ್ತಿದ್ದಾರೆ.

    ಜನವರಿ ತಿಂಗಳಿನಲ್ಲಿ ಹೇಳಿ ಕೇಳಿ ಚಳಿ ಹೆಚ್ಚು ಇರಲಿದೆ. ಅದರಲ್ಲೂ ಈ ಸಮಯದಲ್ಲಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ತಾಪಮಾನ 2 ರಿಂದ 7 ಡಿಗ್ರಿ ಸೆಲ್ಸಿಯಸ್ ನಷ್ಟು ಇದೆ. ಹಾಗಾಗಿ ಸಿಎಂ ಯಡಿಯೂರಪ್ಪ ಸ್ವಿಟ್ಜರ್ಲ್ಯಾಂಡ್ ಚಳಿ ತಡೆದುಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬೆಚ್ಚನೆಯ ಉಡುಪುಗಳನ್ನು ತರಿಸಿಕೊಂಡಿದ್ದಾರೆ. ತಲೆಗೆ ಬೆಚ್ಚನೆಯ ಟೋಪಿ, ಸ್ವೆಟರ್, ಜಾಕೆಟ್, ಕೈ ಕಾಲುಗಳಿಗೆ ಗ್ಲೌಸ್ ಗಳನ್ನು ಸಿಎಂಗಾಗಿ ಖರೀದಿಸಲಾಗಿದೆ.

    ಸ್ವಿಟ್ಜರ್ಲ್ಯಾಂಡ್ ನ ಡಾವೋಸ್ ನಲ್ಲಿ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ನಡೆಯಲಿದೆ. ಕೇಂದ್ರ ಸರ್ಕಾರದ ಸಚಿವರ ಜೊತೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. 100ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು ಕೂಡ ಭಾಗವಹಿಸಲಿದ್ದಾರೆ. ಸಭೆಗೆ ಮಧ್ಯಪ್ರದೇಶ, ಪಂಜಾಬ್ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ.

    ಅಪರೂಪಕ್ಕೆ ವಿದೇಶ ಪ್ರವಾಸ:
    ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಿದೇಶ ಪ್ರವಾಸ ಅಂದ್ರೆ ಅಷ್ಟಕ್ಕಷ್ಟೇ. ಇದೂವರೆಗೆ 2-3 ಬಾರಿ ಮಾತ್ರ ಯಡಿಯೂರಪ್ಪ ವಿದೇಶ ಪ್ರವಾಸ ಮಾಡಿದ್ದಾರೆ ಅಷ್ಟೇ. 2011ರ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಆಗಿದ್ದಾಗ 6 ದಿನಗಳ ಕಾಲ ಯಡಿಯೂರಪ್ಪ ಮಾರಿಷಸ್ ದೇಶಕ್ಕೆ ಪ್ರಯಾಣ ಮಾಡಿದ್ದರು. ಮಕ್ಕಳು, ಮೊಮ್ಮಕ್ಕಳ ಜೊತೆ ಯಡಿಯೂರಪ್ಪ ಮಾರಿಷಸ್ ನಲ್ಲಿ ಕಳೆದು ಬಂದಿದ್ದರು.

  • ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಮರಕ್ಕೆ ಡಿಕ್ಕಿ – ಶಿಕ್ಷಕ ಸಾವು

    ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಮರಕ್ಕೆ ಡಿಕ್ಕಿ – ಶಿಕ್ಷಕ ಸಾವು

    ಶಿವಮೊಗ್ಗ: ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಖಾಸಗಿ ಬಸ್ ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ವಾಪಸ್ ಹೋಗುತ್ತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‍ನಲ್ಲಿದ್ದ ದೈಹಿಕ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕು ಅರಬಿಳಚಿ ಬಳಿ ನಡೆದಿದೆ.

    ಹರಿಕೃಷ್ಣ(45) ಮೃತ ಶಿಕ್ಷಕ. ಭದ್ರಾವತಿ ತಾಲೂಕಿ ಮಾರಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ ಪ್ರೌಢಶಾಲೆಯ 30 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ರಾತ್ರಿ ಪ್ರವಾಸ ಮುಗಿಸಿ ವಾಪಸ್ ಬಂದಿದ್ದರು. ಮಾರಶೆಟ್ಟಿಹಳ್ಳಿಯಲ್ಲಿ ಕೆಲ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ, ಇಬ್ಬರು ವಿದ್ಯಾರ್ಥಿಗಳನ್ನು ಅರಬಿಳಚಿ ಗ್ರಾಮಕ್ಕೆ ಇಳಿಸಿ ಬಸ್ ವಾಪಸ್ ಹೋಗುತ್ತಿತ್ತು. ಆದರೆ ಬಸ್ ಅರಬಿಳಚಿ ಹಾಗೂ ಕಲ್ಲಿಹಾಳ್ ರಸ್ತೆ ಮಧ್ಯೆ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ.

    ಪರಿಣಾಮ ಬಸ್‍ನಲ್ಲಿದ್ದ ಶಾಲೆಯ ದೈಹಿಕ ಶಿಕ್ಷಕ ಹರಿಕೃಷ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಸ್ ಅಪಘಾತವಾಗುತ್ತಿದ್ದಂತೆಯೇ ಬಸ್ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಡಿವೈಡರ್‌ಗೆ ಬೈಕ್ ಡಿಕ್ಕಿ- ಗೆಳೆಯನ ಜೊತೆಗೆ ಪ್ರವಾಸ ಕೈಗೊಂಡಿದ್ದ ಪ್ರೇಮಿ ಸಾವು

    ಡಿವೈಡರ್‌ಗೆ ಬೈಕ್ ಡಿಕ್ಕಿ- ಗೆಳೆಯನ ಜೊತೆಗೆ ಪ್ರವಾಸ ಕೈಗೊಂಡಿದ್ದ ಪ್ರೇಮಿ ಸಾವು

    ಗದಗ: ಸವಾರನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನರಗುಂದ ಹೊರವಲಯದಲ್ಲಿ ನಡೆದಿದೆ.

    ಮಹಾರಾಷ್ಟ್ರ ರಾಜ್ಯ ಪುಣೆ ಮೂಲದ ರತ್ನಮಾಲಾ (21) ಮೃತ ದುರ್ದೈವಿ. ಈ ಘಟನೆಯಲ್ಲಿ ನಿಖಿಲ್ ಹಾತಪಡೆ (25)ತಲೆಗೆ ಪೆಟ್ಟು ಬಿದ್ದಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.

    ನಿಖಿಲ್ ಹಾಗೂ ರತ್ನಮಾಲಾ ಪರಸ್ಪರ ಪ್ರೀತಿಸುತ್ತಿದ್ದರು. ಈ ಜೋಡಿಯು ಕರ್ನಾಟಕದ ಐತಿಹಾಸಿಕ ಸ್ಥಳಗಳ ವೀಕ್ಷಣೆಗಾಗಿ ಪ್ರವಾಸ ಕೈಗೊಂಡಿದ್ದರು. ಮಹಾರಾಷ್ಟ್ರದಿಂದ ಹಂಪಿ, ಬಾದಾಮಿ, ಬನಶಂಕರಿ ವೀಕ್ಷಿಸಿದ್ದ ಪ್ರೇಮಿಗಳು ನರಗುಂದ ಮಾರ್ಗವಾಗಿ ಹುಬ್ಬಳ್ಳಿ ಹೊರಟಿದ್ದರು. ಆದರೆ ವೇಗವಾಗಿ ಬೈಕ್ ಓಡಿಸುತ್ತಿದ್ದ ಪರಿಣಾಮ ನರಗುಂದ ಹೊರವಲಯದಲ್ಲಿ ಸವಾರನ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

    ರತ್ನಮಾಲಾ ತಲೆಗೆ ಬಲವಾದ ಹೊಡೆತ ಬಿದ್ದ ಪರಿಣಾಮ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಖಿಲ್ ತಲೆಗೂ ಹೊಡೆತ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರೇಮಿಗಳನ್ನು ರಕ್ಷಿಸಲು ಸಹಾಯ ಮಾಡಿ ಮಾನವೀಯತೆ ಮೆರದಿದ್ದಾರೆ. ನಿಖಿಲ್ ಸ್ಥಿತಿ ಚಿಂತಾಚನಕವಾಗಿದ್ದರಿಂದ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಾಗಿದೆ. ಈ ಕುರಿತು ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಲೆಗಳ ಹೊಡೆತಕ್ಕೆ ಸಿಲುಕಿ ಯುವಕ ಸಾವು

    ಅಲೆಗಳ ಹೊಡೆತಕ್ಕೆ ಸಿಲುಕಿ ಯುವಕ ಸಾವು

    ಚಾಮರಾಜನಗರ: ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು ದೀಪು(26) ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಯುವಕ ದೀಪು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು. ಈತ ತನ್ನ ಸ್ನೇಹಿತರ ಶನಿವಾರ ಪಾಂಡಿಚೇರಿಗೆ ಪ್ರವಾಸಕ್ಕೆ ತೆರಳಿದಾಗ ಈ ಘಟನೆ ನಡೆದಿದೆ.

    ಚಾಮರಾಜನರದ ದೀಪು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ವೀಕೆಂಡ್ ಇದ್ದ ಕಾರಣ ಸ್ನೇಹಿತ ಜೊತೆ ಕಾರಿನಲ್ಲಿ ಪ್ರವಾಸ ಹೋಗಿದ್ದಾರೆ. ಈ ವೇಳೆ ಪಾಂಡೀಚೇರಿಯ ಬೀಚ್‍ನಲ್ಲಿ ಸ್ನೇಹಿತರ ಜೊತೆ ಆಟವಾಡುವ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ದೀಪು ಸಾವನ್ನಪ್ಪಿದ್ದಾನೆ.

  • ತಲಕಾಡು ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ತಲಕಾಡು ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಮೈಸೂರು: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ತಲಕಾಡು ಬಳಿಯ ನಿಸರ್ಗಧಾಮದಲ್ಲಿ ನಡೆದಿದೆ.

    ಬೆಂಗಳೂರಿನ ಹೆಬ್ಬಾಳದ ಪರಿಕ್ರಮ ಹ್ಯುಮಾನಿಟಿ ಫೌಂಡೇಶನ್ ಕಾಲೇಜಿನ ಪ್ರಥಮ ಪಿಯುಸಿಯ 45 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ನಿಸರ್ಗಧಾಮಕ್ಕೆ ಬಂದಿದ್ದರು. ಈ ವೇಳೆ ನಿಸರ್ಗ ಧಾಮದ ಬಳಿ ಇರುವ ನದಿಯಲ್ಲಿ ಈಜಾಡಲು ಐವರು ವಿದ್ಯಾರ್ಥಿಗಳು ತೆರಳಿದ್ದಾಗ, ಅವರಲ್ಲಿ ಅಲ್ಫ್ರೆಡ್ ವಿಜಯ್(16) ಹಾಗೂ ಹೇಮಂತ್(17) ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ನೀರಿನಲ್ಲಿ ಮುಳುಗುತ್ತಿದ್ದ ಇನ್ನೂ ಮೂವರು ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸದ್ಯ ತಲಕಾಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ಜೆಡಿಎಸ್‍ನ ಮಲೇಷ್ಯಾ ಟ್ರಿಪ್ ರದ್ದಾಗಲು ಕಾರಣವೇನು?

    ಜೆಡಿಎಸ್‍ನ ಮಲೇಷ್ಯಾ ಟ್ರಿಪ್ ರದ್ದಾಗಲು ಕಾರಣವೇನು?

    ಬೆಂಗಳೂರು: ಅಸಮಾಧಾನಿತ ಶಾಸಕರನ್ನು ಸಮಾಧಾನ ಪಡಿಸೋಕೆ ಮಲೇಷ್ಯಾ ಟ್ರಿಪ್ ಹೊರಟಿದ್ದ ಜೆಡಿಎಸ್ ಟ್ರಿಪ್ ಕ್ಯಾನ್ಸಲ್ ಮಾಡಿರುವುದು ಯಾಕೆ ಅನ್ನೋ ಕುತೂಹಲ ಎಲ್ಲರಿಗೂ ಮೂಡಿತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಜೆಡಿಎಸ್ ಅಂತರ್ಹಕಲಹದ ರಹಸ್ಯವನ್ನ ಪಬ್ಲಿಕ್ ಟಿವಿ ಬಿಚ್ಚಿಟ್ಟಿದೆ.

    ಮಲೇಷ್ಯಾ ಪ್ರವಾಸಕ್ಕೆ ಕರೆದೊಯ್ಯಲು ಶಾಸಕರ ಪಾಸ್ ಪೋರ್ಟ್ ಕಲೆ ಹಾಕಲು ಮುಂದಾದ ಮಾಜಿ ಸಿಎಂ ಕುಮಾರಸ್ವಾಮಿಗೆ ಕೇವಲ 14 ಪಾಸ್ ಪೋರ್ಟ್ ಗಳಷ್ಟೆ ಸೇರಿವೆ. ಉಳಿದವರ ಪಾಸ್ ಪೋರ್ಟ್ ಕೇಳುವಷ್ಟರಲ್ಲೇ ದೇವೇಗೌಡರ ಬೀಗರು, ಮದ್ದೂರಿನ ಶಾಸಕರಾದ ಡಿ.ಸಿ ತಮ್ಮಣ್ಣ ಬಂಡಾಯದ ಮೊದಲ ಬಾವುಟ ಹಾರಿಸಿದ್ದಾರೆ. ನಾನು ಮಲೇಷ್ಯಾಕ್ಕೂ ಬರಲ್ಲ ಮುಂದೆ ಚುನಾವಣೆಗೂ ನಿಲ್ಲಲ್ಲ. ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ ಎಂದು ಉಲ್ಟಾ ಹೊಡೆದಿದ್ದಾರೆ.

    ಶಾಸಕರ ಅಸಮಾಧಾನ ಕಂಡು ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿಗೆ ಹೆಚ್‍ಡಿಕೆ ಶಾಸಕರ ಪಾಸ್ ಪೋರ್ಟ್ ಸಂಗ್ರಹಿಸಿ ಎಂದಿದ್ದಾರೆ. ಮಾಜಿ ಸಿಎಂ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಶಾಕ್ ಆಗುವಂತಹ ಪ್ರತಿಕ್ರಿಯೆ ನೀಡಿದ್ದಾರೆ. ನಾನೇ ಮಲೇಷ್ಯಾಕ್ಕೆ ಬರಲ್ಲ ನನಗೆ ರಾಜ್ಯಾಧ್ಯಕ್ಷ ಸ್ಥಾನವೂ ಬೇಡ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಬೇಡ ನಾನೇ ನಿವೃತ್ತಿ ಘೋಷಿಸುತ್ತೇನೆ ಎಂದು ಕೈ ಎತ್ತಿದ್ದಾರೆ.

    ಸ್ವತಃ ಬೀಗರು ಒಂದು ಕಡೆ, ಪಕ್ಷದ ರಾಜ್ಯಾಧ್ಯಕ್ಷರು ಇನ್ನೊಂದು ಕಡೆ ಬಂಡಾಯದ ಬಾವುಟ ಹಾರಿಸುತ್ತಿದ್ದಂತೆ ಉಳಿದ ಶಾಸಕರು ಹಾಗೂ ಪರಿಷತ್ ಸದಸ್ಯರು ಕೂಡ ಮಲೇಷ್ಯಾ ಪ್ರವಾಸ ಬೇಡ ಎಂದಿದ್ದಾರೆ. ಹೀಗೆ ಸ್ವತ: ಸಂಬಂಧಿಕರು ಹಾಗೂ ರಾಜ್ಯಾಧ್ಯಕ್ಷರ ಅಸಮಾಧಾನ ಕಂಡು ಮಾಜಿ ಸಿಎಂ ಕೂಡ ಶಾಕ್ ಆಗಿದ್ದಾರೆ.

    ನಮ್ಮವರೇ ಬರಲು ಒಪ್ಪದ ಮೇಲೆ ಬೇರೆ ಶಾಸಕರನ್ನ ಎಷ್ಟು ಒತ್ತಾಯಿಸಿದರೂ ಪ್ರಯೋಜನ ಆಗಲ್ಲ. ಕೇವಲ ಬೆರಳೆಣಿಕೆ ಶಾಸಕರನ್ನ ಕರೆದೊಯ್ದು ಮತ್ತಷ್ಟು ಗೊಂದಲ ಮೂಡಿಸಿವುದು ಬೇಡ ಎಂದು ಮಲೇಷ್ಯಾ ಪ್ರವಾಸವನ್ನೇ ರದ್ದು ಮಾಡಿದ್ದಾರೆ ಎನ್ನಲಾಗಿದೆ.

  • ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಕೇರಳದ ಯುವಕ ನಾಪತ್ತೆ

    ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಕೇರಳದ ಯುವಕ ನಾಪತ್ತೆ

    ಶಿವಮೊಗ್ಗ: ಮಲೆನಾಡ ಸುಂದರ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಯುವಕ ನಾಪತ್ತೆಯಾಗಿದ್ದಾನೆ.

    ಕೇರಳದ ಕಣ್ಣೂರು ಜಿಲ್ಲೆಯ ತಲಚ್ಚೇರಿಯ ಲಿವಿಲ್ ರಾಜ್(27) ನಾಪತ್ತೆಯಾಗಿದ್ದಾನೆ. ಕಳೆದ 3 ದಿನಗಳ ಹಿಂದೆ ಮಲೆನಾಡ ಸುತ್ತಮುತ್ತಲ ಪ್ರದೇಶಕ್ಕೆ ಪ್ರವಾಸಕ್ಕೆಂದು 7 ಮಂದಿ ಸ್ನೇಹಿತರ ಜೊತೆ ಲಿವಿಲ್ ಬಂದಿದ್ದನು. ಆದರೆ ಭಾನುವಾರ ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರ ಜೊತೆ ಲಿವಿಲ್ ಹೋಗಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಸ್ನೇಹಿತ ನಾಪತ್ತೆ ಹಿನ್ನೆಲೆಯಲ್ಲಿ ಇತರೆ ಸ್ನೇಹಿತರು ಕೆಲ ಕಾಲ ಆತ ನಾಪತ್ತೆಯಾದ ಸ್ಥಳದಲ್ಲೇ ಹುಡುಕಾಟ ನಡೆಸಿದ್ದಾರೆ. ಆದರೆ ಯಾರಿಗೂ ಕೂಡ ಲಿವಿಲ್ ಸಿಕ್ಕಿಲ್ಲ. ತಮ್ಮ ಜೊತೆಗೇ ಇದ್ದವನು ಎಲ್ಲಿಗೆ ಹೋದ, ಏನಾದ ಎಂದು ಸ್ನೇಹಿತರಿಗೆ ತಿಳಿಯಲಿಲ್ಲ.

    ಈ ಘಟನೆಯಿಂದ ಗಾಬರಿಗೊಂಡ ಸ್ನೇಹಿತರು ಲಿವಿಲ್ ಬಗ್ಗೆ ಆತನ ಪೋಷಕರಿಗೆ ವಿಷಯ ತಿಳಿಸಿ, ಕೇರಳಕ್ಕೆ ವಾಪಾಸ್ಸಾಗಿದ್ದಾರೆ. ಇತ್ತ ಮಗ ನಾಪತ್ತೆಯಾಗಿದ್ದಕ್ಕೆ ಸ್ವತಃ ಲಿವಿಲ್ ಪೋಷಕರು ಹಾಗು ಕೇರಳ ಪೊಲೀಸರು ಕೊಡಚಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಸ್ಥಳೀಯ ಪೊಲೀಸರು ಕೂಡ ಸಾಥ್ ಕೊಟ್ಟಿದ್ದಾರೆ. ಆದರೆ ಈವರೆಗೂ ಲಿವಿಲ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

    ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತದಲ್ಲಿ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ ಯುವಕನೊಬ್ಬ ನಾಪತ್ತೆಯಾಗಿದ್ದನು. ಬಿಕ ಆತನ ಪತ್ತೆಗೆ ಸಾಕಷ್ಟು ಹುಡುಕಾಟ ನಡೆದಿತ್ತು. ಆದರೆ ಎರಡು ದಿನಗಳ ಬಳಿಕ ಯುವಕ ತೀರ್ಥದ ಪೈಪ್ ಗುರುತಿನ ಮೂಲಕ ಸುಬ್ರಹ್ಮಣ್ಯಕ್ಕೆ ವಾಪಸ್ಸಾಗುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿತ್ತು.

  • ಗುಜರಾತ್ ಪ್ರವಾಸದಲ್ಲಿ ಎಚ್‍ಡಿಡಿ – ಏಕತಾ ಪ್ರತಿಮೆಗೆ ಭೇಟಿ

    ಗುಜರಾತ್ ಪ್ರವಾಸದಲ್ಲಿ ಎಚ್‍ಡಿಡಿ – ಏಕತಾ ಪ್ರತಿಮೆಗೆ ಭೇಟಿ

    ಗಾಂಧಿನಗರ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಉಕ್ಕಿನ ಪ್ರತಿಮೆ ಇರುವ ಸ್ಥಳಕ್ಕೆ ಭಾರತದ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿ ನೀಡಿದ್ದಾರೆ.

    ಗುಜರಾತ್‍ನ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರದ ಅಣೆಕಟ್ಟಿನ ಬಳಿ ಇರುವ ಸರ್ದಾರ್ ವಲ್ಲಭಬಾಯಿ ಅವರ 182 ಮೀಟರ್ ಉದ್ದದ ಏಕತಾ ಪ್ರತಿಮೆಯನ್ನು ದೇವೇಗೌಡರು ವೀಕ್ಷಿಸಿದ್ದಾರೆ.

    ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಗುಜರಾತ್‍ಗೆ ವಿಮಾನ ಮೂಲಕ ಪ್ರಯಾಣ ಬೆಳೆಸಿರುವ ಗೌಡರು, ಏಕತಾ ಪ್ರತಿಮೆಯ ಜೊತೆಗೆ ಗುಜರಾತ್ ನಲ್ಲಿರುವ ಇತರ ಪ್ರದೇಶಗಳಿಗೂ ಭೇಟಿ ನೀಡಲಿದ್ದಾರೆ. ಇದರ ಜೊತೆಗೆ ಗರುಡೇಶ್ವರ ದೇವಸ್ಥಾನ, ರಂಗ್ ಅವದೂತ್ ಮಹಾರಾಜ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.

    ದೇಶದ ಏಕತೆಗೆ ಶ್ರಮಿಸಿದ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ 2018 ಅಕ್ಟೋಬರ್ 31 ಅನಾವರಣ ಮಾಡಲಾಯಿತು. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಿದೆ. ವಲ್ಲಭಭಾಯ್ ಅವರ ಪೂರ್ಣ ಪ್ರತಿಮೆ ಇದಾಗಿದ್ದು ಧೋತಿ ಮತ್ತು ಜುಬ್ಬ ತೊಟ್ಟ ಸ್ಯಾಂಡಲ್ ಚಪ್ಪಲಿ ಧರಿಸಿರುವ ಪಟೇಲ್ ರ ಸರಳ ವ್ಯಕ್ತಿತ್ವವನ್ನು ನಾವು ಪ್ರತಿಮೆಯಲ್ಲಿ ಕಾಣಬಹುದು.

    ಈ ಯೋಜನೆ ಆರಂಭಗೊಂಡಿದ್ದು ಹೇಗೆ?
    2010 ರಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯನ್ನು ಘೋಷಿಸಿದ್ದರು. 2013 ರಲ್ಲಿ ಯೋಜನೆ ನಿರ್ಮಾಣ ಶಂಕುಸ್ಥಾಪನೆ ನಡೆಸಿ ಕಾಮಗಾರಿಯನ್ನು ಆರಂಭಿಸಲಾಯಿತು. 2015 ರಲ್ಲಿ ಹೈಡ್ರಲಾಜಿಕಲ್ ಸಮೀಕ್ಷೆ, ಸುರಂಗ ಪರೀಕ್ಷೆ, ನೆರಳು ಬೆಳಕಿನ ಅಧ್ಯಯನಗಳನ್ನು ಪೂರ್ಣಗೊಳಿಸಿದ ಎಲ್ ಆಂಡ್ ಟಿ ಸಂಸ್ಥೆಯೂ ಈ ಬೃಹತ್ ಯೋಜನೆ ಉಸ್ತುವಾರಿಯನ್ನು ಹೊತ್ತುಕೊಂಡು ಸಂಪೂರ್ಣ ಮಾಡಿದೆ. 182 ಮೀಟರ್ ಎತ್ತರ ಈ ಪ್ರತಿಮೆಗೆ 25 ಸಾವಿರ ಟನ್ ಉಕ್ಕು, 90 ಸಾವಿರ ಟನ್ ಸಿಮೆಂಟ್, ಸುಮಾರು ಏಳು ಕಿಲೋಮೀಟರ್ ತ್ರಿಜ್ಯದಿಂದ ಕಾಣುವ ಹಾಗೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ಹಲವು ಕಡೆಯಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು.

    ಎಷ್ಟು ಖರ್ಚಾಗಿದೆ?
    ವಿಶ್ವದ ಉತ್ಕೃಷ್ಟ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪವನ್ನು ಏಕತಾ ಮೂರ್ತಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. 2,989 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನಷ್ಟೇ ಗಟ್ಟಿಯಾಗಿ ಪ್ರತಿಮೆ ನಿರ್ಮಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು 2012-13ರ ಬಜೆಟ್ ನಲ್ಲಿ 100 ಕೋಟಿ, 2014-15ರ ಬಜೆಟ್ ನಲ್ಲಿ 500 ಕೋಟಿ ಹಣವನ್ನು ಗುಜರಾತ್ ಸರ್ಕಾರ ನೀಡಿತ್ತು. 200 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ 2014-15ರ ಬಜೆಟ್ ನಲ್ಲಿ ನೀಡಿತ್ತು.

    ಏನೆಲ್ಲ ವಿಶೇಷತೆಯಿದೆ?
    ಪ್ರತಿಮೆಯಲ್ಲೇ ಎರಡು ಲಿಫ್ಟ್ ಗಳಿವೆ. ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರವಾಸಿಗರ ವಸತಿಗಾಗಿ 52 ರೂಂಗಳಿರುವ ಶ್ರೇಷ್ಠ ಭಾರತ ಹೆಸರಿನ ತ್ರಿಸ್ಟಾರ್ ಲಾಡ್ಜ್ ನಿರ್ಮಿಸಿದೆ. ಸೆಲ್ಫಿ ಪಾಯಿಂಟ್, ರೆಸ್ಟೋರೆಂಟ್‍ಗಳು, ಫೆರ್ರಿ ಸೇವೆ, ಬೋಟಿಂಗ್ ಸೌಕರ್ಯವಿದೆ. 250 ಟೆಂಟ್‍ಗಳಿರುವ `ಟೆಂಟ್ ಸಿಟಿ’, 306 ಮೀಟರ್ ಉದ್ದದ ಮಾರ್ಬಲ್ ಫ್ಲೋರಿಂಗ್ ವಾಕ್‍ವೇ, ವೀಕ್ಷಣಾ ಗ್ಯಾಲರಿಯೂ ಇದೆ. ಪಟೇಲರಿಗೆ ಸಂಬಂಧಿಸಿದ ಮ್ಯೂಸಿಯಂ. ಆಡಿಯೊ-ವಿಡಿಯೋ ಗ್ಯಾಲರಿ, ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ. ನಾಲ್ಕು ಹಂತದಲ್ಲಿ ಕಾಮಗಾರಿ ಮಾಡಲಾಗಿದ್ದು ತ್ರೀಡಿ ತಂತ್ರಜ್ಞಾನದ ಮೂಲಕ ಪಟೇಲರ ಚಿತ್ರಗಳನ್ನು ಸೃಷ್ಟಿಸಿ ಅವರ ಸಾಧನೆಗಳನ್ನು ಪ್ರವಾಸಿಗರಿಗೆ ತಿಳಿಸಲಾಗುತ್ತದೆ.

  • ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್ – ವೇಳಾ ಪಟ್ಟಿ ಬಿಡುಗಡೆ

    ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್ – ವೇಳಾ ಪಟ್ಟಿ ಬಿಡುಗಡೆ

    ನವದೆಹಲಿ: ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಆಗಸ್ಟ್ 3 ರಿಂದ ಮೂರು ಮಾದರಿಯ ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್‍ಗೆ ಟೀಂ ಇಂಡಿಯಾ ತೆರೆಳಲಿದೆ. ಈ ಹಿನ್ನೆಲೆಯಲ್ಲಿ ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಆಟಗಾರರನ್ನು ಆಯ್ಕೆ ಮಾಡಿದೆ.

    ಆಗಸ್ಟ್ 3 ರಿಂದ ಮೂರು ಪಂದ್ಯಗಳ ಟಿ-20 ಸರಣಿಯೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸವು ಪ್ರಾರಂಭವಾಗುತ್ತದೆ. ನಂತರ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಆಗಸ್ಟ್ 8 ರಿಂದ ಸೆಪ್ಟಂಬರ್ 3ರ ತನಕ 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇಲ್ಲಿ ನಡೆಯುವ ಎರಡು ಟೆಸ್ಟ್ ಪಂದ್ಯಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಉದ್ಘಾಟನಾ ಆವೃತ್ತಿಯ ಭಾಗವಾಗಲಿವೆ.

    ಇಂಡಿಯಾ ಟೂರ್ ವೆಸ್ಟ್ ಇಂಡೀಸ್‍ನ ಸಂಪೂರ್ಣ ವೇಳಾ ಪಟ್ಟಿ

    1. ಟಿ-20 ಸರಣಿ
    * ಆಗಸ್ಟ್ 3 (ಶನಿವಾರ) ಮೊದಲ ಟಿ-20 ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 4 (ಭಾನುವಾರ) ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ ಮೈದಾನ- ಸಮಯ, ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 6 (ಮಂಗಳವಾರ) ಗಯಾನಾದ ಪ್ರಾವಿಡೆನ್ಸ್ ಮೈದಾನ- ಸಮಯ-ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)

    ಟಿ-20 ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ.

    2. ಏಕದಿನ ಸರಣಿ
    * ಆಗಸ್ಟ್ 8 (ಗುರುವಾರ) ಮೊದಲನೇ ಏಕದಿನ- ಗಯಾನಾದ ಪ್ರಾವಿಡೆನ್ಸ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 11 (ಭಾನುವಾರ) ಎರಡನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)
    * ಆಗಸ್ಟ್ 14 (ಬುಧವಾರ) ಮೂರನೇ ಏಕದಿನ- ಟ್ರಿನಿಡಾಡ್‍ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನ- ರಾತ್ರಿ 7 ಗಂಟೆ (ಭಾರತೀಯ ಕಾಲಮಾನ)

    ಏಕದಿನ ತಂಡ:
    ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ.

    3. ಟೆಸ್ಟ್ ಸರಣಿ
    * ಆಗಸ್ಟ್ 22 ಗುರುವಾರ ದಿಂದ ಆಗಸ್ಟ್ 26 ಸೋಮವಾರದ ವರಗೆ 1 ನೇ ಟೆಸ್ಟ್ ಆಂಟಿಗುವಾದ ಸರ್ ವಿವಿಯನ್ ರಿಚಡ್ರ್ಸ್ ಮೈದಾನದಲ್ಲಿ
    * ಆಗಸ್ಟ್ 30 ಶುಕ್ರವಾರದಿಂದ ಸೆಪ್ಟೆಂಬರ್ 03 ಮಂಗಳವಾರದ ವರೆಗೆ 2 ನೇ ಟೆಸ್ಟ್ ಜಮೈಕಾದ ಸಬಿನಾ ಪಾರ್ಕ್ ಮೈದಾನದಲ್ಲಿ

    ಟೆಸ್ಟ್ ತಂಡ:
    ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ (ಉಪನಾಯಕ), ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಕೆ. ಎಲ್.ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್.

  • ಚಿತ್ರರಂಗಕ್ಕೆ ಹರಿಪ್ರಿಯಾ ಚಿಕ್ಕ ಬ್ರೇಕ್!

    ಚಿತ್ರರಂಗಕ್ಕೆ ಹರಿಪ್ರಿಯಾ ಚಿಕ್ಕ ಬ್ರೇಕ್!

    ಬೆಂಗಳೂರು: ಹರಿಪ್ರಿಯಾ ಅಂದರೆ ಭಿನ್ನಾತಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದಿರೋ ಪ್ರತಿಭಾವಂತ ನಟಿ. ಅವರ ಪಾಲಿಗೆ ಈ ವರ್ಷ ಸುಗ್ಗಿ ಸಂಭ್ರಮ. ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿ, ಇನ್ನೂ ಒಂದಷ್ಟು ಅವಕಾಶಗಳೂ ಅವರಿಗಾಗಿ ಕಾದು ನಿಂತಿವೆ. ಹೀಗಿರುವಾಗಲೇ ಹರಿಪ್ರಿಯಾ ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರ ಸರಿಯೋ ನಿರ್ಧಾರ ಪ್ರಕಟಿಸಿದ್ದಾರೆ!

    ಈ ಸುದ್ದಿ ಕೇಳಿದಾಕ್ಷಣವೇ ಅರೇ ಅಂಥಾದ್ದೇನಾಯ್ತೆಂಬ ದಿಗಿಲು ತುಂಬಿದ ಪ್ರಶ್ನೆ ಕಾಡೋದು ಸಹಜವೇ. ಆದರೆ ಈ ಬಗ್ಗೆ ಖುದ್ದು ಹರಿಪ್ರಿಯಾ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಕೆಲ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರವಾಗಿ ಹೇಳೋದಾದರೆ ಈ ತಾತ್ಕಾಲಿಕ ಬ್ರೇಕ್ ಹಿಂದಿರೋದು ರಿಲ್ಯಾಕ್ಸ್ ಆಗೋ ಉದ್ದೇಶವಷ್ಟೇ!

    `ನಾನು ನಟಿಸಲು ಒಪ್ಪಿಕೊಂಡಿದ್ದ ಬಿಚ್ಚುಗತ್ತಿ, ಕುರುಕ್ಷೇತ್ರ, ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲೀತನಕ, ಕಥಾ ಸಂಗಮ ಸೇರಿದಂತೆ ಎಲ್ಲ ಚಿತ್ರಗಳ ನನ್ನ ಭಾಗದ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿದ್ದೇನೆ. ಈ ಎಲ್ಲ ಸಿನಿಮಾಗಳಲ್ಲಿಯೂ ನನ್ನ ಪಾತ್ರ ವಿಭಿನ್ನವಾಗಿದೆ. ಅದನ್ನು ಪ್ರೇಕ್ಷಕರೆದುರು ಅನಾವರಣಗೊಳಿಸಲು ಕಾತರಳಾಗಿದ್ದೇನೆ. ಇದೆಲ್ಲವನ್ನೂ ಬಿಡುವೇ ಇಲ್ಲದಂತೆ ಮಾಡಿ ಮುಗಿಸಿದ್ದೇನೆ. ಇದೀಗ ನಾನು ಪ್ರವಾಸ ಹೊರಟಿದ್ದೇನೆ. ಈ ಚಿಕ್ಕ ಬ್ರೇಕ್ ಆದ ನಂತರ ಹೊಸ ಚಿತ್ರದ ವಿವರಗಳೊಂದಿಗೆ ನಿಮ್ಮೆದುರು ಮತ್ತೆ ಬರುತ್ತೇನೆ’ ಎಂಬರ್ಥದಲ್ಲಿ ಹರಿಪ್ರಿಯಾ ಬರೆದುಕೊಂಡಿದ್ದಾರೆ.

     

    ಹರಿಪ್ರಿಯಾ ವರ್ಷದಿಂದೀಚೆಗೆ ಒಂದರ ಹಿಂದೊಂದರಂತೆ ಬಿಡುವೇ ಇರದೇ ನಟಿಸುತ್ತಾ ಬಂದಿದ್ದಾರೆ. ಆದ ಕಾರಣ ಒಂದಷ್ಟು ದಿನ ರಿಲ್ಯಾಕ್ಸ್ ಆಗಲು ಪ್ರವಾಸ ಹೊರಟಿರುವಂತಿದೆ. ಇನ್ನು ಮುಂದೆ ಅವರು ನಟಿಸಿರೋ ಸಾಲು ಸಾಲು ಚಿತ್ರಗಳು ತೆರೆ ಕಾಣಲಿವೆ. ಅದರ ಜೊತೆಗೆ ಈ ಬ್ರೇಕ್ ಮುಗಿಸಿಕೊಂಡು ಅವರು ಮತ್ತೆ ಮರಳಲಿದ್ದಾರೆ.