Tag: Tour

  • ಮುರುಡೇಶ್ವರ ನೇತ್ರಾಣಿಯಲ್ಲಿ ಗರಿ ಗೆದರಿದ ಸ್ಕೂಬಾ ಡೈವಿಂಗ್

    ಮುರುಡೇಶ್ವರ ನೇತ್ರಾಣಿಯಲ್ಲಿ ಗರಿ ಗೆದರಿದ ಸ್ಕೂಬಾ ಡೈವಿಂಗ್

    -ಒಂದು ತಿಂಗಳು ಅವಕಾಶ ಕಲ್ಪಿಸಿದ ಜಿಲ್ಲಾಡಳಿತ

    ಕಾರವಾರ: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ನಡೆಯುತಿದ್ದ ಜಲಸಾಹಸ ಕ್ರೀಡೆಯು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ಆರಂಭವಾಗಿದೆ.

    ಕೊರೊನಾ ಇಳಿಕೆಯಾದ ಕಾರಣ ಜಿಲ್ಲೆಯಲ್ಲಿ ನಡೆಯುತಿದ್ದ ಜಲಸಾಹಸ ಕ್ರೀಡೆಗೆ ಅವಕಾಶ ಕಲ್ಪಿಸಿ ಕೊಡುವ ಜೊತೆಗೆ ಇದೀಗ ಮುರುಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿ ಪ್ರಾರಂಭವಾಗಿದ್ದ ಸ್ಕೂಬಾ ಡೈವ್‍ಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಇದನ್ನೂ ಓದಿ: ಪ್ರವಾಸಿಗರ ಮನಸೆಳೆಯುವ ಕಡಲಾಳದ ಸ್ಕೂಬಾ ಡೈವಿಂಗ್-ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್

    ಪಶ್ಚಿಮ ಕರಾವಳಿಯಲ್ಲಿ ಮೊದಲು ಪ್ರಾರಂಭ:

    ಭಾರತದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪವನ್ನು ಹೊರತುಪಡಿಸಿದರೆ ಎರಡನೇ ಮತ್ತು ಅತ್ಯಂತ ಸುರಕ್ಷತೆ ಇರುವ ನೇತ್ರಾಣಿ ದ್ವೀಪದಲ್ಲಿ ಮಾತ್ರ ಸ್ಕೂಬಾ ಡೈವ್ ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನೇತ್ರಾಣಿ ಅಡ್ವೆಂಚರ್ಸ್ 2009ರ ಡಿಸೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ಮುರುಡೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ಯಾಡಿ ನೋಂದಾಯಿತ ಡೈವ್ ಕೇಂದ್ರವಾಗಿದ್ದು, ಸ್ಕೂಬಾ ಡೈವರ್‍ ಗಳು ಮತ್ತು ಬೋಧಕರಿಗೆ ಮಹತ್ವಾಕಾಂಕ್ಷೆಯ ಡಿಸ್ಕವರ್ ಸ್ಕೂಬಾ ಡೈವ್ ಮತ್ತು ವೃತ್ತಿಪರ ಪ್ರಮಾಣೀಕರಣ ಕೋರ್ಸ್‍ಗಳನ್ನು ನೀಡುತ್ತದೆ. ಪ್ಯಾಡಿ ಜಾಗತಿಕ ಮಾನದಂಡಗಳ ಪ್ರಕಾರ ನೇತ್ರಾಣಿ ಅಡ್ವೆಂಚರ್ಸ್ ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತದೆ. ಸ್ಕೂಬಾ ಡೈವಿಂಗ್ ಸೆಪ್ಟೆಂಬರ್ ಮಧ್ಯದಿಂದ ಪ್ರಾರಂಭವಾಗುತ್ತದೆ ಮತ್ತು ಮೇ ಅಂತ್ಯದವರೆಗೆ ನಡೆಯುತ್ತದೆ. ಆದರೇ ಇದೀಗ ಜಿಲ್ಲಾಡಳಿತ ಒಂದು ತಿಂಗಳು ಮಾತ್ರ ಸ್ಕೂಬಾ ಡೈವ್‍ಗೆ ಅವಕಾಶ ಮಾಡಿಕೊಟ್ಟಿದೆ.

    ಏನಿದು ಸ್ಕೂಬಾ ಡೈವ್?ಹೇಗಿರುತ್ತೆ ಕಡಲಾಳದ ಸೌಂದರ್ಯ?

    ಸಮುದ್ರದಾಳದಲ್ಲಿ ಇಳಿದು ಅಲ್ಲಿನ ಜೀವಚರಗಳನ್ನು ವೀಕ್ಷಿಸುವುದೇ ಸ್ಕೂಬಾ ಡೈವ್. ಇದಕ್ಕಾಗಿ ಆಕ್ಸಿಜನ್ ಸಿಲಿಂಡರ್ ತುಂಬಿದ ಪರಿಕರಗಳನ್ನು ಹಾಕಿಕೊಂಡು ಸಮುದ್ರದ ಮಧ್ಯಭಾಗದಲ್ಲಿ ಜಂಪ್ ಮಾಡುವ ಮೂಲಕ ಕಡಲಿನ ಆಳಕ್ಕೆ ಇಳಿಯಲಾಗುತ್ತದೆ. ಇದಕ್ಕಾಗಿ ಈಜು ಬರಬೇಕು ಎಂದೇನೂ ಇಲ್ಲ. ಆದರೇ ಧೈರ್ಯ ಬೇಕು. ಇನ್ನು ಸುರಕ್ಷತೆ ದೃಷ್ಟಿಯಿಂದ ನುರಿತ ತರಬೇತುದಾರರು ಸಹಾಯಕ್ಕೆ ಇರುತ್ತಾರೆ. ಉಸಿರಾಟದ ಸಾಧನ ಧರಿಸಿ ನೀರೊಳಗೆ ಮುಳುಗಿ ಹವಳಗಳನ್ನು ನೋಡುವ, ಮೀನಿನಂತೆ ಸಮುದ್ರದಲ್ಲಿ ಈಜಾಡಬೇಕು ಎನ್ನುವ ಆಸಕ್ತಿ ಇರುವ ಯಾವುದೇ ವ್ಯಕ್ತಿ ಸ್ಕೂಬಾ ಡೈವಿಂಗ್ ಮಾಡಬಹುದು. ನೀರಿನ ಅಡಿಯಲ್ಲಿ ಸಂವಹನಕ್ಕಾಗಿ ಬಳಸಬೇಕಾದ ವಿವಿಧ ಕೈ ಸನ್ನೆಗಳು, ಮೂಲ ಉಸಿರಾಟದ ತತ್ವಗಳು ಮತ್ತು ಉಪಕರಣಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಆಸಕ್ತರಿಗೆ ಮಾರ್ಗದರ್ಶಕರು ತಿಳಿಸಿಕೊಡುತ್ತಾರೆ. ಕೈ ಚಿಹ್ನೆಗಳನ್ನು ತಪ್ಪಾಗಿ ಗ್ರಹಿಸಬಾರದು, ಕಿವಿಗಳ ಮೇಲಿನ ಒತ್ತಡವನ್ನು ಹೇಗೆ ಸಮನಾಗಿಸುವುದು ಎಂಬುದನ್ನು ಕಲಿಯುವುದು ಅವಶ್ಯಕ. ಕೆಲವು ನಿರ್ವಾಹಕರು ತೀರದ ಬಳಿ ಅಥವಾ ಈಜುಕೊಳದಲ್ಲಿ ಪ್ರಾತ್ಯಕ್ಷಿಕೆ ನೀಡಿ ವಿವರಿಸುತ್ತಾರೆ. ನಂತರ ಹವಳಗಳಿರುವ ತಾಣಕ್ಕೆ ದೋಣಿಯಲ್ಲಿ ಹೋಗಿ ಗೈಡ್ ಮತ್ತು ಹವ್ಯಾಸಿ ಮುಳುಗುಗಾರರು ಇಬ್ಬರೂ ನೀರಿಗೆ ಧುಮುಕಿ ನೀರೊಳಗಿನ ಮೀನುಗಳು ಮತ್ತು ಹವಳಗಳನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತಾರೆ. ಇದನ್ನೂ ಓದಿ: ಸಮುದ್ರದಾಳದಲ್ಲಿ ಪತಿ ಜೊತೆ ನಟಿಯ ಸ್ಕೂಬಾ ಡೈವಿಂಗ್

    ನೇತ್ರಾಣಿ ದ್ವೀಪದಲ್ಲಿ ಹವಳದ ದಿಬ್ಬಗಳು, ಡಾಲ್ಫಿನ್‍ಗಳು, ವಿವಿಧ ಜಾತಿಯ ಆಮೆಗಳು, ಚಿಟ್ಟೆ ಮೀನು, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು ಮತ್ತು ಸೀಗಡಿ ಮೀನುಗಳು ಕಂಡು ಬರುತ್ತವೆ. ಓರ್ಕಾ ಮತ್ತು ತಿಮಿಂಗಿಲಗಳನ್ನೂ ಸಹ ಇಲ್ಲಿ ನೋಡಬಹುದಾಗಿದ್ದು ಅಪರೂಪದ ಜಲಚರಗಳ ಆಗರವಾಗಿದ್ದು ಇವುಗಳನ್ನು ಸಮುದ್ರದಾಳಕ್ಕೆ ಇಳಿದು ವೀಕ್ಷಿಸಬಹುದಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಾಲಯ ಪಟ್ಟಣವಾದ ಮುರುಡೇಶ್ವರದಿಂದ ಸುಮಾರು 10 ನಾಟಿಕಲ್ ಮೈಲುಗಳಷ್ಟು (19 ಕಿ.ಮೀ) ದೂರದಲ್ಲಿರುವ ಪಾರಿವಾಳ ದ್ವೀಪ ಎಂದೂ ಕರೆಯಲ್ಪಡುವ ನೇತ್ರಾಣಿ ಮೇಲಿನಿಂದ ಹೃದಯ ಆಕಾರದಲ್ಲಿ ಕಾಣುತ್ತದೆ ಇದನ್ನು ‘ಭಾರತದ ಡೈವಿಂಗ್‍ನ ಹೃದಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಭಾರತೀಯ ನೌಕಾದಳವು ಸಮರಾಭ್ಯಾಸ ಮಾಡುವ ಪ್ರದೇಶವೂ ಇದಾಗಿದ್ದು, ಹಿಂದೆ ಈ ಭಾಗಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೇ ಜಿಲ್ಲಾಡಳಿತದ ದೂರ ದೃಷ್ಟಿಯಿಂದ ಇದೀಗ ಈ ಭಾಗದಲ್ಲಿ ಪ್ರವಾಸಿಗರಿಗೆ ತೆರಳಲು ಅವಕಾಶಗಳನ್ನು ನೀಡಿದೆ. ಇದನ್ನೂ ಓದಿ: ದುಬೈನಲ್ಲಿ ಸ್ಕೈ ಡೈವ್ ಮಾಡಿದ ನೀರಜ್

    ತೆರಳುವುದು ಹೇಗೆ? ವ್ಯವಸ್ಥೆ ಏನು?

    ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಪಶ್ವಿಮ ಕರಾವಳಿ ತೀರ ಪ್ರದೇಶವಾಗಿದೆ. ಬಸ್, ರೈಲು ಹಾಗೂ ವಿಮಾನದಲ್ಲಿ ಸಹ ಇಲ್ಲಿಗೆ ಬರಬಹುದಾಗಿದೆ. ಗೋಕರ್ಣದಿಂದ ಕೇವಲ 54 ಕಿ.ಮೀ ದೂರದಲ್ಲಿದೆ.

    ವಿಮಾನದ ಮೂಲಕ:
    ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣಕ್ಕೆ 153 ಕಿ.ಮೀ ದೂರದಲ್ಲಿದೆ. ಇದು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ವಿದೇಶದಲ್ಲಿರುವ ಕೆಲವು ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಮುರುಡೇಶ್ವರ ತಲುಪಲು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.

    ರೈಲಿನ ಮೂಲಕ:
    ಮುರುಡೇಶ್ವರ ರೈಲು ನಿಲ್ದಾಣವು ಮಂಗಳೂರು ಮತ್ತು ಮುಂಬೈಗೆ ಸಂಪರ್ಕ ಹೊಂದಿದೆ. ಮಂಗಳೂರು ಪ್ರಮುಖ ರೈಲುಮಾರ್ಗವಾಗಿದ್ದು, ಇದು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಮುರುಡೇಶ್ವರ ರೈಲು ನಿಲ್ದಾಣವು ಪಟ್ಟಣದಿಂದ ಪೂರ್ವಕ್ಕೆ ಕೇವಲ 2 ಕಿ.ಮೀ ದೂರದಲ್ಲಿದೆ ಮತ್ತು ಬಸ್ಸುಗಳು ಮತ್ತು ಆಟೋರಿಕ್ಷಾಗಳ ಮೂಲಕ ತಲುಪಬಹುದಾಗಿದೆ.

    ರಸ್ತೆ ಮಾರ್ಗ:
    ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಮುರುಡೇಶ್ವರನನ್ನು ಮುಂಬೈ, ಕೊಚ್ಚಿ ಮತ್ತು ಬೆಂಗಳೂರಿಗೆ ಸಂಪರ್ಕಿಸುತ್ತವೆ. ಮುಂಬೈಯನ್ನು ಕೊಚ್ಚಿಗೆ ಸಂಪರ್ಕಿಸುವ ಎನ್‍ಎಚ್-17 ನಲ್ಲಿ ನೆಲೆಗೊಂಡಿರುವ ಸಾಮಾನ್ಯ ಬಸ್‍ಗಳು ಎರಡು ನಗರಗಳ ನಡುವೆ ನಿಯಮಿತವಾಗಿ ಚಲಿಸುತ್ತವೆ ಮತ್ತು ಮಂಗಳೂರಿನ ಮೂಲಕ ಹಾದು ಹೋಗುತ್ತವೆ. ಬೆಂಗಳೂರು ಈ ಪ್ರದೇಶದ ಇತರ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ.

    ವಸತಿ ವ್ಯವಸ್ಥೆ:
    ಮುರಡೇಶ್ವರ ಪ್ರಸಿದ್ಧ ಪ್ರವಾಸಿ ಸ್ಥಳವಾದ್ದರಿಂದ ವಸತಿ ವ್ಯವಸ್ಥೆ ಸಾಕಷ್ಟಿದೆ. ಖಾಸಗಿ ಲಾಡ್ಜ್‍ಗಳು, ಸರ್ಕಾರಿ ವಸತಿಗೃಹ ಹಾಗೂ ಹೋಮ್ ಸ್ಟೇಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇಲ್ಲಿಗೆ ಬರುವವರು ಸ್ಕೂಬಾ ಡೈ ಜೊತೆಗೆ ಹೊನ್ನಾವರ ಭಾಗದ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಹೊಂದಿದ ಇಕೋ ಬೀಚ್ ಸೌಂದರ್ಯ ಸವಿಯುವ ಜೊತೆಗೆ ಕಾಂಡ್ಲ ವನದಲ್ಲಿ ವಾಕ್ ಸಹ ಮಾಡಬಹುದಾಗಿದ್ದು, ಪ್ರವಾಸಿಗರಿಗೆ ಅತೀ ಕಡಿಮೆ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ಇಲ್ಲಿ ವ್ಯವಸ್ಥೆ ಮಾಡಿದೆ.

  • ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ಅನುಮತಿ ಇಲ್ಲ- ಸಿದ್ದರಾಮಯ್ಯ ದಾವಣಗೆರೆ ಪ್ರವಾಸ ರದ್ದು

    ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ಅನುಮತಿ ಇಲ್ಲ- ಸಿದ್ದರಾಮಯ್ಯ ದಾವಣಗೆರೆ ಪ್ರವಾಸ ರದ್ದು

    ಬೆಂಗಳೂರು: ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ಅನುಮತಿ ಸಿಗದ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಾವಣಗೆರೆ ಪ್ರವಾಸವನ್ನು ರದ್ದು ಮಾಡಿದ್ದಾರೆ.

    ದಾವಣಗೆರೆಯಲ್ಲಿ ಬೆಳಗ್ಗಿನಿಂದಲೇ ಮಳೆ, ದಟ್ಟ ಮೋಡ ಕವಿದ ವಾತಾವರಣ ಇರುವುದರಿಂದ ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ಅವಕಾಶ ಸಿಕ್ಕಿಲ್ಲ. ಮಳೆ-ಮೋಡದಿಂದಾಗಿ ಸಿದ್ದರಾಮಯ್ಯ ದಾವಣಗೆರೆ ಪ್ರವಾಸ ರದ್ದಾಗಿದೆ.

    ಸಿದ್ದರಾಮಯ್ಯನವರು ಜಕ್ಕೂರು ಏರೋಡ್ರಂ ನಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ತೆರಳಬೇಕಿತ್ತು. ಆದರೆ ತೀವ್ರ ಮೋಡ ಕವಿದ ವಾತಾವರಣ ಹಾಗೂ ಮಳೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ದಾವಣೆಗೆರೆಯಲ್ಲಿ ನಡೆಯಲಿರುವ ಜಾತಿ ಗಣತಿ ಅನುಷ್ಠಾನದ ಹೋರಾಟಕ್ಕೆ ಸಿದ್ದರಾಮಯ್ಯ ಗೈರಾಗುತ್ತಿದ್ದಾರೆ. ಕೊನೆ ಕ್ಷಣದಲ್ಲಿ ದಾವಣಗೆರೆ ಪ್ರವಾಸವನ್ನು ರದ್ದು ಮಾಡಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ- ಟಿಕೆಟ್‍ಗಾಗಿ ಬಿಜೆಪಿ, ಕಾಂಗ್ರೆಸ್ ಆಕಾಂಕ್ಷಿಗಳು ತೆರೆಮರೆಯ ಕಸರತ್ತು

    ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಜಾತಿವಾರು ಸಮೀಕ್ಷೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ದಾವಣಗೆರೆಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಬೆಲೆ ಏರಿಕೆ ವಿರೋಧಿಸಿ ಕಿಸಾನ್ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನಾ ರ್ಯಾಲಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣ, ದೇವರಾಜ್ ಅರಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಹೋರಾಟದಲ್ಲಿ ಭಾಗವಹಿಸಬೇಕಿತ್ತು. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮತ್ತೆ ರಣ ಮಳೆ- ಪ್ರವಾಹ ಪರಿಸ್ಥಿತಿ

    ಧರಣಿಯಲ್ಲಿ ಎಚ್.ಎಂ.ರೇವಣ್ಣ, ವಿ.ಆರ್.ಸುದರ್ಶನ್, ಕೆ.ರಮೇಶ್ ಕುಮಾರ್, ವಿ.ಎಸ್.ಉಗ್ರಪ್ಪ, ಲಕ್ಷ್ಮಿ ನಾರಾಯಣ್, ಸಿ.ಎಸ್.ದ್ವಾರಕನಾಥ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ 10 ಸಾವಿರ ಮಂದಿ ಭಾಗಿಯಾಗುವ ಸಾಧ್ಯತೆ ಇದೆ. ಇಡೀ ದಿನ ದಾವಣಗೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳಬೇಕಿತ್ತು. ಆದರೆ ಇದೀಗ ಪ್ರವಾಸವನ್ನೇ ಸಿದ್ದರಾಮಯ್ಯ ರದ್ದು ಮಾಡಿದ್ದಾರೆ.

  • ಕಬಿನಿ ಫಾರೆಸ್ಟ್‌ನಲ್ಲಿ  ಗಣೇಶ್, ರಾಜೂಗೌಡ ಫ್ಯಾಮಿಲಿ ಟ್ರಿಪ್

    ಕಬಿನಿ ಫಾರೆಸ್ಟ್‌ನಲ್ಲಿ  ಗಣೇಶ್, ರಾಜೂಗೌಡ ಫ್ಯಾಮಿಲಿ ಟ್ರಿಪ್

    ಮೈಸೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸುರಪುರ ಶಾಸಕ ರಾಜೂಗೌಡ ಅವರು ಫ್ಯಾಮಿಲಿ ಜೊತೆಗೆ ಹೆಚ್ ಡಿ ಕೋಟೆಯ ಸುತ್ತಮುತ್ತ ಪ್ರದೇಶಗಳಲ್ಲಿ ಜಾಲಿ ಟ್ರಿಪ್ ಮಾಡುತ್ತಿದ್ದಾರೆ.

    ಸಚಿವ ಸ್ಥಾನದಿಂದ ವಂಚಿತಗೊಂಡು ಮತ್ತು ಸಚಿವ ಆನಂದ್ ಸಿಂಗ್ ರಾಜೀನಾಮೆ ವಿಚಾರದಲ್ಲಿ ಸದಾ ಸುದ್ದಿಯಲ್ಲಿದ್ದ ಸುರಪುರ ಶಾಸಕ ಈಗ ಫ್ಯಾಮಿಲಿ ಜೊತೆಗೆ ಜಾಲಿ ಟ್ರಿಪ್‍ನಲ್ಲಿದ್ದಾರೆ. ಗಣೇಶ್ ಮತ್ತು ರಾಜೂಗೌಡರ ಕುಟುಂಬದ ಜೊತೆಗೆ ಸದ್ಯ ಎಂಜಾಯ್ಮೆಂಟ್ ಮೂಡ್‍ನಲ್ಲಿದ್ದಾರೆ. ಇದನ್ನೂ ಓದಿ: ಮತದಾರ ಪ್ರಭುಗಳ ಖುಣ ತೀರಿಸುವ ಕೆಲಸ ಮಾಡುತ್ತೇನೆ: ಮುನಿರತ್ನ

     

    View this post on Instagram

     

    A post shared by Ganesh (@goldenstar_ganesh)

    ಹೆಚ್ ಡಿ ಕೋಟೆ ಕಾನನ ಪ್ರದೇಶದಲ್ಲಿ ಚಾರಣ ಮಾಡುತ್ತಿರುವ ರಾಜೂಗೌಡರಿಗೆ, ಗಣೇಶ್ ಮತ್ತು ನಟ ರವಿಶಂಕರ್ ಜೊತೆಯಾಗಿದ್ದಾರೆ. ಮೊದಲಿಂದಲೂ ಸಿನಿಮಾ ಮಂದಿಜೊತೆಗೆ ಉತ್ತಮ ಒಡನಾಟ ಹೊಂದಿರುವ ರಾಜೂಗೌಡ ಒಂದೆರಡು ದಿನ ರಾಜಕೀಯ ಜಂಜಾಟ ಬಿಟ್ಟು ಕುಟುಂಬದವರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಹೆಚ್ ಡಿ ಕೋಟೆ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: ಸಮಯ ಪ್ರಜ್ಞೆ ಮೆರೆದ KSRTC ಚಾಲಕ – 50ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪಾರು

     

    View this post on Instagram

     

    A post shared by Ganesh (@goldenstar_ganesh)

    ಕಬಿನಿ ನದಿಯಲ್ಲಿ ಫ್ಯಾಮಿಲಿ ಜೊತೆಗೆ ಬೋಟ್‍ನಲ್ಲಿ ಕುಳಿತು ಎಂಜಾಯ್ ಮಾಡಿದ್ದಾರೆ. ಕಬಿನಿ ಫಾರೆಸ್ಟ್‌ನಲ್ಲಿ ಸಫಾರಿ ಹೋಗುವಾಗ ಗಣೇಶ್ ಅವರ ಕ್ಯಾಮೆರಾಗೆ ಚಿರತೆ ಸೆರೆ ಸಿಕ್ಕಿದೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಗಣೇಶ್ ಅವರು ಕುಟುಂಬದ ಜೊತೆಗೆ ಜಾಲಿ ಟ್ರಿಪ್ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

  • ಮಮತಾ ನಾಡಿನಲ್ಲಿ ಅಮಿತ್ ಶಾ ಪ್ರವಾಸ

    ಮಮತಾ ನಾಡಿನಲ್ಲಿ ಅಮಿತ್ ಶಾ ಪ್ರವಾಸ

    -ಟಿಎಂಸಿ ನಾಯಕರ ರಾಜೀನಾಮೆ

    ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮುಖಂಡರಾದ ಅಮಿತ್ ಶಾ ಎರಡು ದಿನಗಳ ಪ್ರವಾಸಕ್ಕೆ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ. ಬಿಜೆಪಿ ನಾಯಕರು ವಿಮಾನ ನಿಲ್ದಾಣದಲ್ಲಿ ಶಾ ಅವರನ್ನು ಸ್ವಾಗತಿಸಿದ್ದಾರೆ.

    ವಿಧಾನಸಭಾ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ತಮ್ಮ ಪಕ್ಷದ ಪ್ರಚಾರ, ಮತ್ತು ಕಾರ್ಯವೈಖರಿಯನ್ನು ತಿಳಿಯಲು ಕೆಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ.

    ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರ ದತ್ತ ಇಂದು ಬೆಳಗ್ಗೆ ಟಿಎಂಸಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿನ್ನೆಯಷ್ಟೇ ಸುವೇಂದು ಅಧಿಕಾರಿ ಮತ್ತು ಜಿತೇಂದ್ರ ತಿವಾರಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳ ಭೇಟಿ ಹಿನ್ನೆಲೆಯಲ್ಲಿ ಟಿಎಂಸಿ ಶಾಸಕರು ರಾಜೀನಾಮೆ ಸಲ್ಲಿಸುತ್ತಿದ್ದಾರೆ.

    ಕೋಲ್ಕತ್ತಾಗೆ ಆಗಮಿಸಿದ ನಂತರ ಅಮಿತ್ ಶಾ ಗುರುದೇವ್ ಟ್ಯಾಗೋರ್, ಈಶ್ವರ್ ಚಂದ್ರ ವಿದ್ಯಾ ಸಾಗರ್ ಮತ್ತು ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಇದ್ದಂತಹ ಶ್ರೇಷ್ಠ ಪೂಜ್ರು ಇದ್ದ ಭೂಮಿಗೆ ನಾನು ನಮಸ್ಕರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಮಿಡ್ನಾಪುರದಲ್ಲಿ ನಡೆಯಲಿರುವ ಸಾರ್ವಜನಿಕ ರ್ಯಾಲಿಯಲ್ಲಿ ಶಾ ಮಾತನಾಡಲಿದ್ದಾರೆ. ರ್ಯಾಲಿಯಲ್ಲಿ ಟಿಎಂಸಿ ನಾಯಕರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ.

  • ಮಾಲ್ಡಿವ್ಸ್‌ನಲ್ಲಿ ಅವನೇ ಶ್ರಿಮನ್ನಾರಾಯಣ ಬೆಡಗಿ ಮಸ್ತ್ ಮಜಾ

    ಮಾಲ್ಡಿವ್ಸ್‌ನಲ್ಲಿ ಅವನೇ ಶ್ರಿಮನ್ನಾರಾಯಣ ಬೆಡಗಿ ಮಸ್ತ್ ಮಜಾ

    ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಬೆಡಗಿ ಶಾನ್ವಿ ಶ್ರೀವಾಸ್ತವ್ ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಮಾಲ್ಡಿವ್ಸ್ ಕಡಲ ಕಿನಾರೆಯಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Shanvi sri (@shanvisri)

    ಶಾನ್ವಿ ಶ್ರೀವಾಸ್ತವ್ ಎರಡ್ಮೂರು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಇತ್ತೀಚೆಗೆ ಕಸ್ತೂರಿ ಮಹಲ್ ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸುತ್ತಿರುವ ಕುರಿತು ಇತ್ತೀಚೆಗೆ ಟ್ವೀಟ್ ಮಾಡಿ ಬಹಿರಂಗಪಡಿಸಿದ್ದಾರೆ. ದಿನೇಶ್ ಬಾಬು ನಿರ್ದೇಶನದ ಕಸ್ತೂರಿ ಮಹಲ್ ಚಿತ್ರಕ್ಕೆ ಆರಂಭದಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ಆಯ್ಕೆಯಾಗಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ಹೊರ ನಡೆದಿದ್ದರಿಂದ ಅವರ ಜಾಗಕ್ಕೆ ಶಾನ್ವಿಯವರನ್ನು ಚಿತ್ರ ತಂಡ ಆಯ್ಕೆ ಮಾಡಿಕೊಂಡಿದೆ.

     

    View this post on Instagram

     

    A post shared by Shanvi sri (@shanvisri)

    ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಲಕ್ಷ್ಮೀ ಅವತಾರ ತಾಳಿದ್ದ ಶಾನ್ವಿ, ತಮ್ಮ ವಿಶಿಷ್ಟ ನಟನೆ ಮೂಲಕವೇ ಪ್ರೇಕ್ಷಕರನ್ನು ಸೆಳೆದಿದ್ದರು. ಇದೀಗ ಕಸ್ತೂರಿ ಮಹಲ್ ಹಾಗೂ ತ್ರಿಶೂಲಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿಡುವು ಸಿಕ್ಕಿದ್ದು, ಹೀಗಾಗಿ ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಮಾಲ್ಡಿವ್ಸ್‍ನ ಕಡಲ ಕಿನಾರೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದು, ವಿಡಿಯೋ ಹಾಗೂ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಲಾಕ್‍ಡೌನ್ ಬಳಿಕ ಮಾಲ್ಡಿವ್ಸ್ ನಟಿ ಮಣಿಯರ ಹಾಟ್‍ಸ್ಪಾಟ್ ಎನ್ನುವಂತಾಗಿದ್ದು, ಇತ್ತೀಚೆಗೆ ಕಾಜಲ್ ಸಹ ತಮ್ಮ ಹನಿಮೂನ್‍ಗೆ ಮಾಲ್ಡಿವ್ಸ್‍ಗೆ ತೆರಳಿದ್ದರು. ಅಲ್ಲದೆ ನಟಿ ಪ್ರಣಿತಾ ಸುಭಾಶ್ ಸಹ ಮಾಲ್ಡಿವ್ಸ್‍ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಶಾನ್ವಿ ಶ್ರೀವಾಸ್ತವ ಸಹ ಕಡಲ ಕಿನಾರೆಯಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಕನ್ನಡದಲ್ಲಿ ಚಂದ್ರಲೇಖ ಬಳಿಕ ಅವರು ನಟಿಸುತ್ತಿರುವ ಎರಡನೇ ಹಾರರ್ ಚಿತ್ರ ಕಸ್ತೂರಿ ಮಹಲ್. ದಿನೇಶ್ ಬಾಬು ನಿರ್ದೇಶನದ ಚಿತ್ರವಾಗಿದ್ದರಿಂದ ನಿರೀಕ್ಷೆ ಇನ್ನೂ ಹೆಚ್ಚಿದೆ. ನನ್ನ ಕನ್ನಡದ ಮೊದಲ ಚಿತ್ರದ ಬಳಿಕ ಮತ್ತೊಮ್ಮೆ ಹಾರರ್ ಸಿನಿಮಾ ಮಾಡುತ್ತಿದ್ದೇನೆ. ಇನ್ನೂ ಹೆಚ್ಚಿನ ಅವಕಾಶಗಳ ನಿರೀಕ್ಷೆಯಲ್ಲಿರುವುದಾಗಿ ಅವರು ಈ ಹಿಂದೆ ಹೇಳಿಕೊಂಡಿದ್ದರು.

  • ಗೆಳೆಯರ ಜೊತೆ ‘ರಾಬರ್ಟ್’ ಬೈಕ್ ರೈಡ್ – 3 ದಿನ ಮಡಿಕೇರಿಯಲ್ಲಿ ಸಾರಥಿ

    ಗೆಳೆಯರ ಜೊತೆ ‘ರಾಬರ್ಟ್’ ಬೈಕ್ ರೈಡ್ – 3 ದಿನ ಮಡಿಕೇರಿಯಲ್ಲಿ ಸಾರಥಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಚಿತ್ರರಂಗದ ಗೆಳೆಯರು ಮತ್ತು ಕೆಲ ಬಾಲ್ಯದ ಸ್ನೇಹಿತರ ಜೊತೆಗೆ ಜಾಲಿಯಾಗಿ ಬೈಕ್ ರೈಡ್ ಹೋಗಿದ್ದಾರೆ.

    ದರ್ಶನ್ ಅವರು ಆಗಾಗ ಟ್ರಿಪ್ ಹೋಗುತ್ತಿರುತ್ತಾರೆ. ಅದರಲ್ಲೂ ಕಾರು, ಬೈಕಿನ ಮೇಲೆ ಹೆಚ್ಚಿನ ಕ್ರೇಜ್ ಹೊಂದಿರುವ ಡಿಬಾಸ್, ಗೆಳೆಯರ ಜೊತೆ ವರ್ಷಕ್ಕೆ ಒಂದು ಬಾರಿ ಟ್ರಿಪ್ ಹೋಗುತ್ತಾರೆ. ಅಂತಯೇ ಈ ಬಾರಿ ಕೂಡ ತಮ್ಮ 15ಕ್ಕೂ ಹೆಚ್ಚು ಮಂದಿ ಗೆಳೆಯರೊಂದಿಗೆ ಮಡಿಕೇರಿಗೆ ಮೂರು ದಿನದ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.

    ಇಂದು ಆರ್.ಆರ್ ನಗರದ ನಿವಾಸದಿಂದ ಸಾರಥಿಯ ನೇತೃತ್ವದಲ್ಲೇ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್ ಮತ್ತು ಚಿಂಗಾರಿಯ ಬಾಲ್ಯದ ಗೆಳೆಯರು ಮಡಿಕೇರಿ ಕಡೆ ಹೋಗಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಡಿಬಾಸ್ ಮತ್ತವರ ಸ್ನೇಹಿತರು ಅಲ್ಲೇ ತಂಗಲಿದ್ದಾರೆ. ದರ್ಶನ್ ಅವರು ಟ್ರಿಪ್ ಹೊರಟಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

    ದರ್ಶನ್ ಅವರ ನಿವಾಸದ ಮುಂದೆ ಸುಮಾರು 15ಕ್ಕೂ ಹೆಚ್ಚಿನ ಬೈಕ್‍ಗಳು ನಿಂತಿರುವ ಫೋಟೋಗಳು ಮತ್ತು ಅವರು ಮನೆಯಿಂದ ಸೂಪರ್ ಬೈಕಿನಲ್ಲಿ ಹೋಗುತ್ತಿರುವ ವಿಡಿಯೋಗಳನ್ನು ಅವರ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಡಿ ಬಾಸ್ ತಮ್ಮ ನೀಲಿ ಬಣ್ಣದ ಬೈಕಿನಲ್ಲಿ ಕಪ್ಪು ಜಾಕೆಟ್ ತೊಟ್ಟು ರೈಡ್‍ಗೆ ಹೋಗಿದ್ದಾರೆ. ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಅವರು ತಾವು ರೈಡಿಗೆ ಸಿದ್ಧವಾಗಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

  • 10 ನಿಮಿಷದಲ್ಲೇ ಪ್ರವಾಹ ಪ್ರವಾಸ ಮಾಡಿದ ಆರ್ ಅಶೋಕ್

    10 ನಿಮಿಷದಲ್ಲೇ ಪ್ರವಾಹ ಪ್ರವಾಸ ಮಾಡಿದ ಆರ್ ಅಶೋಕ್

    ಕಲಬುರಗಿ: ಪ್ರವಾಹ ವೀಕ್ಷಸಲೆಂದು ಜಿಲ್ಲೆಗೆ ಬಂದಿದ್ದ ಕಂದಾಯ ಸಚಿವ ಆರ್. ಅಶೋಕ್, ಕೇವಲ 10 ನಿಮಿಷದಲ್ಲಿ ಪ್ರವಾಹ ವೀಕ್ಷಣೆ ಮಾಡಿ ವಾಪಸ್ ಆಗಿದ್ದಾರೆ.

    ಮಹಾಮಳೆಗೆ ಕಲಬುರಗಿ ಜಿಲ್ಲೆ ತತ್ತರಿಸಿ ಹೋಗಿದೆ. ಮನೆಗಳಿಗೆ ನೀರು ನುಗ್ಗಿ ದವಸ-ಧಾನ್ಯಗಳನ್ನು ನಾಶವಾಗಿವೆ. ಜನರು ಇರುವ ಸೂರನ್ನು ಕಳೆದುಕೊಂಡು ಪರಾದಡುತ್ತಿದ್ದಾರೆ. ಈ ರೀತಿಯ ಪರಿಸ್ಥಿತಿಯಲ್ಲಿ ಜನರ ಜೊತೆಗೆ ಇದ್ದು, ಸ್ಪಂದಿಸಬೇಕಾದ ಸಚಿವರು ಕಾಟಾಚಾರಕ್ಕೆ ಎಂಬಂತೆ 10 ನಿಮಿಷಗಳ ಕಾಲ ನೆರೆ ವೀಕ್ಷಣೆ ಮಾಡಿ ವಾಪಸ್ ಆಗಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

    ಇಂದು ಆರ್ ಆಶೋಕ್ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಹಾಗೂ ಸುರಪುರ ಶಾಸಕ ರಾಜೂಗೌಡ ಅವರು ಮಹಾಮಳೆ ಜಲಾವೃತವಾಗಿರುವ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಇದಾದ ನಂತರ ಗ್ರಾಮದ ಗಂಜಿ ಕೇಂದ್ರಕ್ಕೂ ಭೇಟಿ ಕೊಟ್ಟಿದ್ದಾರೆ. ಈ ವೇಳೆ ನಮ್ಮನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಎಂದು ಕೈ ಮುಗಿದು ಗ್ರಾಮದ ಮಹಿಳೆಯರು ಬೇಡಿಕೊಂಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಅವರ ಜೊತೆಯಲ್ಲಿ ಇದ್ದು ಧೈರ್ಯ ಹೇಳಬೇಕಾದ ಜನಪ್ರತಿನಿಧಿಗಳು ಕೇವಲ 10 ನಿಮಿಷ ಸ್ಥಳದಲ್ಲಿದ್ದು, ಅಲ್ಲಿಂದ ಕಲ್ಕಿತ್ತಿದ್ದಾರೆ.

    ಕಳೆದ ನಾಲ್ಕು ಐದು ದಿನಗಳಿಂದ ಸುರಿಯುತ್ತಿರುವ ಮಹಾಮಳೆ ಕಲಬುರಗಿ ಅಕ್ಷರಸಃ ತತ್ತರಿಸಿ ಹೋಗಿದೆ. ಮಹಾಮಳೆಗೆ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ 30 ಹೆಚ್ಚು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ದವಸ ಧಾನ್ಯಗಳನ್ನು ಕಳೆದುಕೊಂಡು ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳು ಪುಸ್ತಕಗಳನ್ನು ಕಳೆದುಕೊಂಡು ಹೈರಾಣಾಗಿದ್ದಾರೆ. ಮಳೆ ನಿಂತು ಹೋದ ಮೇಲೆ ಈ ಗ್ರಾಮ ಜನರ ಬದುಕು ಬೀದಿಗೆ ಬಿದ್ದಿದೆ. ಮಹಾಮಳೆಯಿಂದ ದವಸ, ಧಾನ್ಯಗಳನ್ನು, ಕುರಿಗಳನ್ನು ಸೇರಿದಂತೆ ಎಲ್ಲವನ್ನು ಗ್ರಾಮಸ್ಥರು ಕಳೆದುಕೊಂಡಿದ್ದಾರೆ.

  • ಜಮಾತ್‍ಗೆ ಹೋಗಿಬಂದಿದ್ದ ದಂಪತಿ ಕ್ವಾರಂಟೈನ್ – 17 ಮಂದಿಗೆ ಕೊರೊನಾ ಟೆಸ್ಟ್

    ಜಮಾತ್‍ಗೆ ಹೋಗಿಬಂದಿದ್ದ ದಂಪತಿ ಕ್ವಾರಂಟೈನ್ – 17 ಮಂದಿಗೆ ಕೊರೊನಾ ಟೆಸ್ಟ್

    ಚಿಕ್ಕಬಳ್ಳಾಪುರ: ಜಿಲ್ಲೆಯಿಂದ ದೆಹಲಿಯ ಜಮಾತ್‍ಗೆ ಹೋಗಿ ಬಂದ 17 ಮಂದಿ ಪತ್ತೆಯಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಮಾರ್ಚ್ 05ರಿಂದ ಮಾರ್ಚ್ 10ರ ಒಳಗಾಗಿ ಆಗ್ರಾ, ಅಜ್ಮೀರ್ ಹಾಗೂ ದೆಹಲಿ ಪ್ರವಾಸಕ್ಕೆ ತೆರಳಿ ವಾಪಸ್ಸಾಗಿದ್ದ ದಂಪತಿಯನ್ನ ಪತ್ತೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಂಪತಿಯನ್ನ ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿದೆ. ಇದಲ್ಲದೇ ಫೆಬ್ರವರಿ 08ರಿಂದ ಫೆಬ್ರವರಿ 15ರ ಮಧ್ಯೆ ಜಮಾತ್‍ಗೆ ಹೋಗಿಬಂದಿದ್ದ 15 ಮಂದಿಯನ್ನ ಪತ್ತೆ ಮಾಡಲಾಗಿದೆ.

    ಈಗಾಗಲೇ ಅವರು ವಾಪಸ್ಸಾಗಿ 45 ದಿನಗಳು ಕಳೆದಿದ್ದು, ಇದುವರೆಗೂ ಯಾರಲ್ಲಿಯೂ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಅನುಮಾನದ ಮೇರೆಗೆ 15 ಮಂದಿಯನ್ನ ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ 17 ಮಂದಿಯ ಬ್ಲಡ್ ಸ್ಯಾಂಪಲ್ ಹಾಗೂ ಗಂಟಲು ದ್ರವ ಪಡೆದುಕೊಂಡು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಎಸ್‍ಪಿ ಅವರು ತಿಳಿಸಿದರು.

  • ಪುರಾಣ, ಐತಿಹಾಸಿಕ ಚರಿತ್ರೆಯ ಶಕ್ತಿ ಕೇಂದ್ರ ಶಿರಸಂಗಿಯ ಕಾಳಿ ದೇವಾಲಯ

    ಪುರಾಣ, ಐತಿಹಾಸಿಕ ಚರಿತ್ರೆಯ ಶಕ್ತಿ ಕೇಂದ್ರ ಶಿರಸಂಗಿಯ ಕಾಳಿ ದೇವಾಲಯ

    – ಐವರು ರಾಕ್ಷಸರನ್ನು ಸಂಹಾರಗೈದ ಕಾಳಿ
    – ಋಷ್ಯಶೃಂಗರ ಆಶೀರ್ವಾದ ಪಡೆದ ರಾಮ

    ಯುಗಾದಿ ಹತ್ತಿರ ಬರುತ್ತಿದೆ. ಈ ಯುಗಾದಿ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹೋಗುವುದು ವಾಡಿಕೆ. ಹೀಗಾಗಿ ಈ ವಾರದ ‘ಪಬ್ಲಿಕ್ ಟೂರ್’ ನಲ್ಲಿ ಯುಗಾದಿ ವೇಳೆ ವಿಶೇಷ ಜಾತ್ರೆ ನಡೆಯುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿರುವ ಶ್ರೀ ಕಾಳಿಕಾದೇವಿಯ ದೇವಾಲಯದ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪೌರಾಣಿಕ ಹಿನ್ನೆಲೆ, ರಾಮಾಯಣದ ಕಾಲದಲ್ಲಿ ರಾಮ ಲಕ್ಷ್ಮಣರು ಭೇಟಿ ನೀಡಿರುವ ಶಾಸನದ ಉಲ್ಲೇಖ, ರಾಜಮಹಾರಾಜರ ಕಾಲದ ಐತಿಹಾಸಿಕ ಚರಿತ್ರೆ ಹೀಗೆ ಎಲ್ಲ ಶಕ್ತಿಗಳನ್ನೊಳಗೊಂಡ ಶಕ್ತಿಕೇಂದ್ರ ಶಿರಸಂಗಿಯ ಶ್ರೀ ಕಾಳಿಕಾದೇವಿಯ ದೇವಸ್ಥಾನ.

    ಪ್ರತಿ ವರ್ಷ ಯುಗಾದಿಯಂದು ಬಂದು ತಾವು ಬೆಳೆದ ಹೊಸ ಗೋಧಿ ಧಾನ್ಯವನ್ನು ಕಾಳಿಕಾ ದೇವಿಗೆ ಅರ್ಪಿಸಿ, ಅದರಿಂದ ತಯಾರಿಸಿದ ಪ್ರಸಾದವನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸ್ವೀಕರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂಬುದು ಇಲ್ಲಿಗೆ ಬರುವ ವಿಶ್ವಕರ್ಮ ಸಮಾಜದ ಭಕ್ತರ ನಂಬಿಕೆ.

    ಪ್ರತಿ ಯುಗಾದಿ ಸಂದರ್ಭದಲ್ಲಿ ಇಲ್ಲಿ ಐದು ದಿನಗಳ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಯುಗಾದಿ ಅಮವಾಸ್ಯೆಯ ಬೆಳಿಗ್ಗೆ ದೇವಿಯ ಅಭಿಷೇಕದೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭವಾಗುತ್ತವೆ. ಧ್ವಜಾರೋಹಣ, ದೇವಿಗೆ ಹೊಸ ಗೋಧಿಯ (ನಿಧಿ) ಅರ್ಪಣೆ, ನಂತರ ಚೈತ್ರಶುದ್ಧ ಪ್ರತಿಪದೆಯ ಬೆಳಿಗ್ಗೆ 5 ಘಂಟೆಗೆ ಬುತ್ತಿ ಹಾರಿಸುವ ಕಾರ್ಯಕ್ರಮ ನಡೆಯುತ್ತದೆ. ಕಾಳಿಕಾದೇವಿ ರಾಕ್ಷಸರ ಸಂಹಾರ ಮಾಡಿದ ಸಂದರ್ಭದ ಸಂಕೇತವಾಗಿ ಈ ಆಚರಣೆ ನಡೆಯುತ್ತದೆ.

    ಅನ್ನವನ್ನು ರುಂಡದ ಆಕಾರದಲ್ಲಿ ಮಾಡಿ ಹಾರಿಸಲಾಗುತ್ತದೆ. ಈ ಬುತ್ತಿ ಯಾರಿಗೆ ಸಿಗುತ್ತದೋ ಅವರ ಜೀವನದಲ್ಲಿ ಅನ್ನ ಮತ್ತು ವಸ್ತ್ರಕ್ಕೆ ಕೊರತೆ ಇರುವುದಿಲ್ಲ ಎಂಬ ನಂಬಿಕೆಯಿದೆ. ಬುತ್ತಿ ಸಿಕ್ಕವರಿಗೆ ಭಾಗ್ಯದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ. ಯುಗಾದಿಯ ಪ್ರತಿಪದೆಯ ನಂತರ ಬರುವ ಐದೂ ಪಂಚಮಿ ತಿಥಿಗಳೂ ಕೂಡ ವಿಶೇಷ ದಿನಗಳಾಗಿವೆ. ಅದರಲ್ಲೂ ಐದನೇ ಪಂಚಮಿ ಯಂದು ಹೆಚ್ಚಿನ ಮಹತ್ವ. ದೇವಿಯು ಚೈತ್ರ ಶುದ್ದ ಪ್ರತಿಪದೆಯಂದು ರಾಕ್ಷಸರ ಸಂಹಾರಕ್ಕೆ ಹೋದವಳು ಜೇಷ್ಠ ಶುದ್ಧ ಪಂಚಮಿ (ಐದನೇ ಪಂಚಮಿ) ಯಂದು ಮರಳಿ ದೇವಸ್ಥಾನಕ್ಕೆ ಬರುತ್ತಾಳೆ ಎಂಬುದು ವಾಡಿಕೆ.

    ಎಲ್ಲಿದೆ?
    ದೇವಸ್ಥಾನ ಇರುವ ಶಿರಸಂಗಿ ಗ್ರಾಮವೂ ಬೆಳಗಾವಿಯಿಂದ 80 ಕಿ.ಮೀ, ಬೆಂಗಳೂರಿನಿಂದ 400 ಕಿ.ಮೀ ಹಾಗೂ ಸವದತ್ತಿಯಿಂದ 22 ಕಿ.ಮೀ, ಧಾರವಾಡದಿಂದ 55 ಕಿ.ಮೀ ದೂರದಲ್ಲಿದೆ.

    ರಾಮಕೃಷ್ಣ ಪರಮಹಂಸರು ಕಾಳಿಕಾ ದೇವಿಯನ್ನು ಪೂಜಿಸಿ ಸಾಕ್ಷಾತ್ಕಾರ ಮಾಡಿಕೊಂಡು ಕಾಳಿಕಾದೇವಿಯ ಭಕ್ತರಾಗಿದ್ದರು. ಸ್ವಾಮಿ ವಿವೇಕಾನಂದರೂ ಕೂಡ ಕಾಳಿಕಾ ದೇವಿ ಬಗ್ಗೆ ಭಕ್ತಿಪರವಶರಾಗಿ ಚೈತನ್ಯಮಯರೂಪ ಎಂದು ವರ್ಣಿಸಿದ್ದರು. ಕವಿ ಡಿ.ಎಸ್.ಕರ್ಕಿಯವರು ತಮ್ಮ ಕವನದಲ್ಲಿ ಉತ್ತರ ಕರ್ನಾಟಕದ ವಿವಿಧ ಸ್ಥಳಗಳ ವರ್ಣನೆಯಲ್ಲಿ ಶಿರಸಂಗಿಯನ್ನು ಕೂಡ ನೆನಪಿಸಿಕೊಂಡಿದ್ದಾರೆ.

    ನಾನು ನೀನು ಮೋಡಮೋಡವಾಗಿ ತೇಲಿಬಂದು
    ನಮ್ಮ ನಾಡ ಮುಗಿಲಿನಲ್ಲಿ ಮೇಳಗೂಡಿ ನಿಂದು,
    ಬನವಾಸಿಯ ಮಧುಕೇಶ್ವರ,ಕಡಲ ಕಾರವಾರ
    ಸೊಗಲಕೊಲಿದ ಸೋಮೇಶ್ವರ,ಗೋಕರ್ಣ ತೀರ,
    ಶಿರಸಂಗಿ ಮಾತೆ ಶ್ರೀ ಕಾಳಿಕಾ ಪ್ರಧಾಮ
    ಗಜಶಾಲೆಯ ವಿಜಯನಗರ ಪಂಪಾಪತಿಪುರ,
    ಜೋಗದ ಜಲ ತುಂಬಿ ಬರಲಿ ಜೀವನದಲಿ ಸಾರ”

    ಪುರಾಣ ಕಥೆ ಏನು?
    ಶ್ರೀ ಮಾರ್ಕಂಡೇಯ ಪುರಾಣದಂತೆ ಸಾವರ್ಣಿಕ ಮನ್ವಂತರದ ಸಪ್ತಋಷಿಗಳಲ್ಲಿ ಓರ್ವರಾದ ಋಷ್ಯಶೃಂಗರಿಗೆ ಶ್ರೀ ಕಾಳಿಕಾದೇವಿ ಪ್ರತ್ಯಕ್ಷಳಾಗಿ ಆಶೀರ್ವದಿಸಿದ ಸ್ಥಳ ಈ ಶಿರಸಂಗಿ ಎನ್ನುವ ಕಥೆ ಪುರಾಣದಲ್ಲಿದೆ. ಕಲ್ಯಾಣ ಚಾಲುಕ್ಯರ ಆಡಳಿತ ಅವಧಿಯಲ್ಲಿ ಮೊದಲನೆಯ ಜಗದೇಕಮಲ್ಲ-2, ಹಾಗೂ ಎರಡನೇಯ ವೀರ ಸೋಮೇಶ್ವರ ಕಾಲದ ಶಾಸನಗಳು ಇಲ್ಲಿ ಲಬ್ಯವಾಗಿದ್ದು. ಕ್ರಿ.ಶ.1148 ರ ಶಾಸನದಲ್ಲಿ “ಕುಂತಳದಲ್ಲಿ ಬರುವ ಚಿನ್ನ ಹೂ ಬೆಳುವಲ”ಎಂದು ಹೇಳುವ ಮೂಲಕ 30 ಗ್ರಾಮಗಳಿಗೆ ಮುಖ್ಯ ಪಟ್ಟಣವೆನಿಸಿದ್ದು ಋಷ್ಯಶೃಂಗಿಗ್ರಾಮ ಎಂದು ಹೇಳಿದೆ. ಇನ್ನೊಂದು ಶಾಸನ ಹೆಬ್ಬಯ್ಯ ನಾಯಕನಿಗೆ ಸಂಬಂಧಿಸಿದ ವಿವರಣೆ ಹೊಂದಿದೆ.

    ವಿಶ್ವಕರ್ಮ ವಂಶಜ, ಕಾಶ್ಯಪ ಗೋತ್ರಜರಾದ ವಿಭಾಂಡಕ ಮುನಿಯ ಮಗನಾದ ಋಷ್ಯಶ್ರಂಗ ಮುನಿಗಳಿಗೆ ಜಮದಗ್ನಿ, ಭಾರ್ಗವ ಇತ್ಯಾದಿ ಋಷಿಗಳು ಸತ್ಕರಿಸಿ ಗೌರವಿಸುತ್ತಾರೆ. ಅವರ ಪ್ರಾರ್ಥನೆಯ ಮೇರೆಗೆ ಋಷ್ಯಶೃಂಗ ಮುನಿ ಈಗಿನ ಶಿರಸಂಗಿ ಪ್ರದೇಶದಲ್ಲಿ 10 ವರ್ಷಗಳ ಕಾಲ ಕಠೋರ ತಪಸ್ಸು ಆಚರಿಸಿದ್ದರಂತೆ. ಆದರೆ, ಈ ಮುನಿಗಳ ಯಜ್ಞಯಾಗಗಳನ್ನು ಐವರು ರಾಕ್ಷಸರಾದ ನಲುಂದಾಸುರ (ಈಗಿನ ಧಾರವಾಡ ಜಿಲ್ಲೆಯ ನವಲಗುಂದದ ವಾಸಿ), ನರುಂದಾಸುರ (ಈಗಿನ ಗದಗ ಜಿಲ್ಲೆಯ ನರಗುಂದದ ವಾಸಿ), ಹಿರಿಕುಂಬಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ. ಹಿರೇಕುಂಬಿ ಗ್ರಾಮದ ವಾಸಿ), ಚಿಕ್ಕುಂಬಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ. ಚಿಕ್ಕುಂಬಿ ಗ್ರಾಮದ ವಾಸಿ) ಹಾಗೂ ಬೆಟ್ಟಾಸುರ (ಈಗಿನ ಬೆಳಗಾವಿಯ ಜಿ. ಸವದತ್ತಿ ತಾ.ಬೆಟಸೂರ ಗ್ರಾಮದ ವಾಸಿ) ಕೆಡಿಸುತ್ತಿದ್ದರು.

    ಋಷ್ಯಶೃಂಗ ಮುನಿಯ ಕಠೋರ ಪ್ರಾರ್ಥನೆಯ ಮೇರೆಗೆ ಹಾಗೂ ಆತನ ತಪಸ್ಸನ್ನು ಮೆಚ್ಚಿ ಆದಿಶಕ್ತಿ ಜಗನ್ಮಾತೆ ಶ್ರೀ ಕಾಳಿಕಾದೇವಿ ಅವತಾರದಲ್ಲಿ ಪ್ರತ್ಯಕ್ಷಳಾಗಿ ಐದು ರಾಕ್ಷಸರನ್ನು ಕೊಂದು ಅವರ ರುಂಡಗಳನ್ನು ಕಡಿದು ಆಕಾಶದತ್ತ ತೂರಿದಳು ಎಂಬ ಪ್ರತೀತಿ. ಆಗ ಋಷ್ಯಶೃಂಗ ಮುನಿಗಳ ಕೋರಿಕೆಯಂತೆ ಶಾಂತಸ್ವರೂಪಳಾಗಿ ಜಗನ್ಮಾತೆ ಶ್ರೀ ಕಾಳಿಕಾದೇವಿಯೂ ಶಿರಸಂಗಿಯಲ್ಲಿ ನೆಲೆಸಿದಳು ಎಂದು ಪುರಾಣದಲ್ಲಿ ಉಲ್ಲೇಖವಿದೆ.

    ವಿಶೇಷತೆ ಏನು?
    ಶಿರಸಂಗಿ ಕಾಳಿಕಾ ಮಾತೆಯ ದೇವಾಲಯ ಆವರಣದಲ್ಲಿ ಹಬ್ಬೇಶ್ವರ ದೇವಾಲಯ, ಕಲ್ಮೇಶ್ವರ ದೇವಾಲಯ, ಭೈರವೇಶ್ವರ ದೇವಾಲಗಳಲ್ಲಿ ಕಂಡು ಬರುವ ಗಣೇಶ, ಷಣ್ಮುಖ, ಉಮಾಮಹೇಶ್ವರ, ಕಾಳಭೈರವ, ಚನ್ನಭೈರವ, ಸಪ್ತಮಾತೃಕೆಯರು, ಸೂರ್ಯ ನಾರಾಯಣ ಶಿಲ್ಪಗಳು ಕಲ್ಯಾಣ ಚಾಲುಕ್ಯರ ಶಿಲ್ಪಕಲಾ ವೈಭವಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಕಲ್ಮೇಶ್ವರ ದೇವಾಲಯ ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಮುಖಮಂಟಪ ಹೊಂದಿದ್ದು, ಈ ದೇವಾಲಯದಲ್ಲಿ ಶಿವಲಿಂಗವಿದ್ದು ಇಳಿದಾದ ಮೇಲ್ಚಾವಣೆ ಈ ದೇವಾಲಯದ ವಿಶೇಷ. ದೇವಾಲಯ ಪಕ್ಕದಲ್ಲಿ ಕ್ರಿ.ಶ.1148ರ ಶಿಲಾಶಾಸನವಿದೆ. ಇವುಗಳಲ್ಲದೇ ಭೀಮರತಿ ಹೊಂಡ, ಮೌನೇಶ್ವರ ದೇವಾಲಯ, ಖಡ್ಗತೀರ್ಥ, ರಾಮಲಕ್ಷ್ಮಣರ ದೇವಾಲಯಗಳು ಕೂಡ ಇಲ್ಲಿನ ಪ್ರಮುಖ ಆಕರ್ಷಣೆ.

    ಕ್ರಿ.ಶ.1ನೇ ಶತಮಾನದಲ್ಲಿ ಕಾಳಿಕಾ ದೇವಸ್ಥಾನ ನಿರ್ಮಾಣಗೊಂಡಿರಬಹುದು ಪುರಾತತ್ವ ಇಲಾಖೆ ತಿಳಿಸಿದೆ. ಈ ದೇವಾಲಯವನ್ನು ಹೇಮಾಡನೆಂಬುವನು ಕಟ್ಟಿದ್ದು, ದೇವಿಯ ಗರ್ಭಗುಡಿಯು ಬೇರೆಯಾಗಿದ್ದು ಮಂಟಪವು ದೊಡ್ಡದಿದೆ. ಶ್ರೀ ಕಾಳಿಕಾದೇವಿಯ ಮೂರ್ತಿಯು 9 ಅಡಿ ಎತ್ತರವಿದ್ದು ಸ್ವರ್ಣ ರೇಖಾಂಕಿತ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತನೆ ಹೊಂದಿದೆ. ಬಲಗೈಯಲ್ಲಿ ಖಡ್ಗ, ತ್ರಿಶೂಲ, ಬಾಕು, ಎಡಗೈಯಲ್ಲಿ ಡಮರು, ಸರ್ಪ, ಖೇಟಕ ಮತ್ತು ಪಾನ ಪಾತ್ರೆ ಹೊಂದಿದ್ದು ಆಕರ್ಷಕವಾಗಿದೆ. ಪೂಜಾ ಸಮಯದಲ್ಲಿ ದೇವಿ ತನ್ನದೇ ಆಭರಣಗಳ ಮೂಲಕ ಶೋಭಿಸುತ್ತಾಳೆ

    ಪ್ರತಿ ವರ್ಷ ನಡೆಯುವ ಯುಗಾದಿಗೆ ದೇವಿಯ ಪಲ್ಲಕ್ಕಿ ಉತ್ಸವ ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಕಾಳಿಕಾದೇವಿಯ ಎದುರಿನಲ್ಲಿ ದೇವಿಗೆ ಆಭಿಮುಖವಾಗಿ ಕಾಲಭೈರವ ದೇವಾಲಯವಿದೆ. ಈ ದೇವಾಲಯವನ್ನು ಕ್ರಿ.ಶ. 11ನೇ ಶತಮಾನದಲ್ಲಿ ಚಾಲುಕ್ಯ ಅರಸರ ಮಾಂಡಲಿಕನಾಗಿದ್ದ ಹೆಬ್ಬೆಯ ನಾಯಕನು ಕಟ್ಟಿಸಿದ್ದಾನೆ. ಕಾಳಿಕಾ ದೇವಸ್ಥಾನದ ಬದಿಯಲ್ಲಿ ಕಮಠೇಶ್ವರ ಹಾಗೂ ಭೈರವೇಶ್ವರ ದೇವಾಲಯಗಳಿವೆ. ಕಮಠೇಶ್ವರ ದೇವಾಲಯದ ಮುಂಭಾಗದಲ್ಲಿ ಬ್ರಹ್ಮದೇವರ ವೇದಿಕೆಯಿದೆ. ಕಾಳಿಕಾ ದೇವಸ್ಥಾನದ ಪೂರ್ವಾಭಿಮುಖವಾಗಿರುವ ಮಹಾದ್ವಾರ ದಾಟಿದ ಕೂಡಲೇ ಒಳಗೆ ಎಡಬದಿಗೆ, ಬುತ್ತಿ ಹಾರಿಸುವ ವೇದಿಕೆ ಇದೆ.

    ಇದೆಲ್ಲವೂ ದೇವಸ್ಥಾನದ ಒಳಗಡೆ ಆದರೆ ಇನ್ನು ಶ್ರೀ ಕಾಳಿಕಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಎಡಬದಿಗೆ ಬನ್ನಿ ಮಹಾಂಕಾಳಿ ಎಂಬ ಹೆಸರಿನ ಚಿಕ್ಕ ಗುಡಿಯಿದೆ. ಶ್ರೀ ಕಾಳಿಕಾದೇವಿಯ ಪಲ್ಲಕ್ಕಿಯು ಇಲ್ಲಿಯವರೆಗೂ ತರಲಾಗುತ್ತದೆ. ಇದಕ್ಕೆ ಕಾಳಿಕಾ ಪಾದಗಟ್ಟೆ ಅಂತಾ ಕರೆಯುತ್ತಾರೆ. ಕಾಳಿಕಾ ದೇವಸ್ಥಾನದಿಂದ ತುಸು ದೂರದಲ್ಲಿ ಭೀಮರಥಿ ಹೊಂಡವಿದೆ. ಇದರ ಬದಿಗೆ ಖಡ್ಗತೀರ್ಥ ಎಂಬ ಮತ್ತೊಂದು ಹೊಂಡವಿದೆ. ರಾಕ್ಷಸರ ಸಂಹಾರದ ನಂತರ ಕಾಳಿಕಾದೇವಿ ತನ್ನ ಖಡ್ಗವನ್ನು ಈ ಹೊಂಡದಲ್ಲಿ ತೊಳೆದಿದ್ದರಿಂದ ಅದಕ್ಕೆ ಖಡ್ಗತೀರ್ಥವೆಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಇದೇ ಹೊಂಡದ ಪಕ್ಕದಲ್ಲಿ ಬೆಟ್ಟದ ಮೇಲೆ ಶ್ರೀ ಕಾಳಿಕಾದೇವಿಯ ಹೆಜ್ಜೆಗುರುತುಗಳಿವೆ. ರಾಕ್ಷಸರ ಸಂಹಾರ ಮಾಡುವ ಸಂದರ್ಭದಲ್ಲಿ ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಹಾರಿದ ವೇಳೆ ಈ ಹೆಜ್ಜೆಗುರುತುಗಳು ಮೂಡಿವೆ ಅನ್ನೋದು ಇಲ್ಲಿನ ನಂಬಿಕೆ.

    ಈ ದೇವಾಲಯದಲ್ಲಿ ಶುಕ್ರವಾರ, ಮಂಗಳವಾರ ಹಾಗೂ ಅಮವಾಸ್ಯೆಯಂದು ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗುತ್ತದೆ. ಪ್ರತಿನಿತ್ಯವೂ ಬೆಳಿಗ್ಗೆ 4 ಗಂಟೆಯಿಂದಲೇ ಪೂಜೆ ಆರಂಭವಾಗುತ್ತದೆ. ವಿಶೇಷವಾಗಿ ಸೀರೆಗಳಿಂದ ದೇವಿಯನ್ನು ಅಲಂಕರಿಸಲಾಗುತ್ತೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಗ್ಗೆ 3 ಗಂಟೆಯಿಂದಲೇ ಪ್ರಾರಂಭವಾಗುವ ಮಹಾಪೂಜೆ, ಪಂಚಾಮೃತ ಅಭೀಷೇಕ, ನೈವೇದ್ಯಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿರುತ್ತದೆ.

    ರಾಮಾಯಣದ ಕಥೆ ಏನು?
    ರಾಮಾಯಣಕ್ಕೆ ಸಂಬಂಧಿಸಿದಂತೆ ರಘುವಂಶದ ಚಕ್ರವರ್ತಿ ದಶರಥನು ಅನೇಕ ವರ್ಷಗಳ ಕಾಲ ಮಕ್ಕಳಾಗದೇ ಇದ್ದಾಗ ಯಜ್ಞಯಾಗಾದಿಗಳನ್ನು ಮಾಡುವ ಸಂದರ್ಭದಲ್ಲಿ ಋಷ್ಯಶೃಂಗ ಮುನಿಗಳನ್ನು ಆಹ್ವಾನಿಸಿ ಆ ಯಾಗಕ್ಕೆ ಅಗ್ನಿಹೋತ್ರಿಯಾಗಲು ಕೋರಿಕೆ ಸಲ್ಲಿಸಿದ್ದನಂತೆ. ಇದರ ಕುರುಹಾಗಿ ಲಂಕಾಸುರನ ಸಂಹರಿಸಿ ಅಯೋಧ್ಯೆಯಿಂದ ರಾಮನು ಮರಳಿ ಬರುವಾಗ ಇಲ್ಲಿಗೆ ಆಗಮಿಸಿ ಕಾಳಿಕಾ ಮಾತೆಯನ್ನು ಪೂಜಿಸಿ ಋಷ್ಯಶೃಂಗ ಮುನಿಗಳ ಆಶೀರ್ವಾದ ಪಡೆದ ಬಗ್ಗೆ ಕೂಡ ಉಲ್ಲೇಖಗಳು ಪುರಾಣದಲ್ಲಿ ಬರುತ್ತವೆ. ಬಹುತೇಕ ಮಾಹಿತಿ ಕ್ರಿ.ಶ 1148 ರಲ್ಲಿ ಕಲ್ಯಾಣ ಚಾಲುಕ್ಯ ಅರಸು ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಕಾಳಿಕಾ ದೇವಸ್ಥಾನದ ಬಳಿ ನೆಟ್ಟ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ.

    ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ವ್ಯವಸ್ಥೆಯಿದೆ. ಈ ದೇವಾಲಯ ಆವರಣದಲ್ಲಿರುವ ಸಭಾಮಂಟಪದಲ್ಲಿ ವಿವಾಹಗಳು ಜರುಗುತ್ತವೆ. ಅಲ್ಲದೇ ಮಲ್ಲಕಂಭ, ಯೋಗ, ಸಂಗೀತ, ಗಾಯನ. ವಿವಿಧ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ. ದೇವಾಲಯ ಪಕ್ಕದಲ್ಲಿ ವಿಭಿನ್ನ ಕಲಾಕೃತಿಗಳ ಉದ್ಯಾನ ನಿರ್ಮಿಸಲಾಗುತ್ತಿದ್ದು ಅದು ಕೂಡ ಗಮನ ಸೆಳೆಯುತ್ತದೆ. ದೇವಾಲಯಕ್ಕೆ ಬರುವಾಗ ಮಾರ್ಗ ಮಧ್ಯೆ ಶಿರಸಂಗಿ ಲಿಂಗರಾಜರ ಕೋಟೆ ಇದೆ. ಇದೂ ಕೂಡ ಪ್ರವಾಸಿ ತಾಣವೇ.

    ಈ ದೇವಾಲಯದಲ್ಲಿ ಕಾಯಿ ಕಟ್ಟುವ ಕಾರ್ಯ ಭಕ್ತಾಧಿಗಳಿಂದ ಜರುಗುತ್ತದೆ. ಇಲ್ಲಿ ಹರಕೆ ಹೊತ್ತು ಬರುವ ಭಕ್ತರು ದೇವಾಲಯ ಆವರಣದಲ್ಲಿ ಕಾಯಿ ಕಟ್ಟುವರು. ಅಂದರೆ ದೇವಿಯ ಮೊರೆ ಹೋಗಿ ಹರಕೆ ಹೊತ್ತು ದೇವಾಲಯದಲ್ಲಿ 51 ರೂ. ನೀಡಿ ಕಾಯಿ ಪಡೆದು ಇಲ್ಲಿ ಕಟ್ಟುವರು. ತಮ್ಮ ಹರಕೆ ಈಡೇರಿದ ನಂತರ ಬಂದು ಕಾಯಿಯನ್ನು ಬಿಚ್ಚಿ ಅಭಿಷೇಕ ಮಾಡಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
    –  ಅರುಣ್ ಬಡಿಗೇರ್

     

  • ಪ್ರವಾಸಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂ. ಹಣ ಲಪಟಾಯಿಸಿದ ಶಿಕ್ಷಕ

    ಪ್ರವಾಸಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂ. ಹಣ ಲಪಟಾಯಿಸಿದ ಶಿಕ್ಷಕ

    ಯಾದಗಿರಿ: ಪ್ರವಾಸಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂ. ಹಣವನ್ನು ಶಾಲಾ ಶಿಕ್ಷಕನೊಬ್ಬ ಜೀಬಿಗೆ ಇಳಿಸಿಕೊಂಡು ಪರಾರಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗಡಿ ಗ್ರಾಮದ ಹಗರಟಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 2019ರ ಡಿಸೆಂಬರ್ ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ವಿದ್ಯಾರ್ಥಿಗಳಿಂದ ಹಣವನ್ನು ಸಂಗ್ರಹಿಸಲಾಗಿತ್ತು. ಹೀಗೆ ಸಂಗ್ರಹಿಸಿದ ಹಣವನ್ನು ಶಾಲಾ ದೈಹಿಕ ಶಿಕ್ಷಕ ಎಂ.ಬಿ ದೇಸಾಯಿ ಲಪಟಾಯಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಈ ಶಾಲೆಯಲ್ಲಿ ಒಟ್ಟು 168 ವಿದ್ಯಾರ್ಥಿಗಳಿದ್ದು, ಒಂದು ವಾರದ ಟೂರ್ ಗಾಗಿ 63 ವಿದ್ಯಾರ್ಥಿಗಳಿಂದ ತಲಾ 2,900ರಂತೆ ಒಟ್ಟು 1,82,700 ರೂಪಾಯಿ ಸಂಗ್ರಹಿಸಲಾಗಿತ್ತು. ಈ ಪ್ರವಾಸದ ಜವಾಬ್ದಾರಿಯನ್ನು ದೈಹಿಕ ಶಿಕ್ಷಕ ಎಂ.ಬಿ.ದೇಸಾಯಿಗೆ ವಹಿಸಲಾಗಿತ್ತು. ಬಸ್ ಬುಕ್ ಮಾಡುತ್ತೇನೆ ಎಂದು 2019 ಡಿ. 26ರಂದು ಹಣ ತೆಗೆದುಕೊಂಡು ಹೋಗಿದ್ದ ದೇಸಾಯಿ, ಒಂದು ತಿಂಗಳು ಕಳೆದರೂ ಮರಳಿ ಶಾಲೆಗೆ ಬಂದಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದಾಗ ಸತ್ಯ ಬಯಲಾಗಿದೆ.

    ಮಕ್ಕಳು ಮನೆಯಲ್ಲಿ ತಮ್ಮ ಪಾಲಕರ ಬಳಿ ಕಾಡಿ ಬೇಡಿ ಪ್ರವಾಸಕ್ಕೆ ಹಣ ಸಂಗ್ರಹಿಸಿಕೊಂಡು ಶಿಕ್ಷಕರಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಸಾಲ ಮಾಡಿ ತಂದು ಕೊಟ್ಟಿದ್ದಾರೆ. ದೈಹಿಕ ಶಿಕ್ಷಕ ಪ್ರವಾಸಕ್ಕೆ ಕರೆದುಕೊಂಡು ಹೋಗದೆ ನಮಗೆ ಮೋಸ ಮಾಡಿದ್ದಾರೆ ಎಂದು ಬಡ ಪೋಷಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

    ಹಣ ತೆಗೆದುಕೊಂಡು ಹೋದ ದೈಹಿಕ ಶಿಕ್ಷಕ ಒಂದು ವಾರ ಶಾಲೆಗೆ ಬಂದರೆ ಮೂರು ವಾರ ಬರುವುದಿಲ್ಲ. ಸರಿಯಾಗಿ ಶಾಲೆಗೆ ಬಾರದೆ ಕಾಲಹರಣ ಮಾಡುತ್ತಿರುವ ದೈಹಿಕ ಶಿಕ್ಷಕನ ಮೇಲೆ ಹಲವಾರು ಆರೋಪಗಳಿವೆ. ಹೀಗಿದ್ದರೂ ಇತನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಶಾಲಾ ಮುಖ್ಯಶಿಕ್ಷಕನ ಮೇಲೆ ಅನುಮಾನ ಮೂಡಿದೆ.