Tag: Tour

  • ಹಂಪಿಯಲ್ಲಿ ಪ್ರವಾಸಿಗರ ದಂಡು – ಬ್ಯಾಟರಿ ಚಾಲಿತ ವಾಹನಗಳಿಲ್ಲದೇ ಪರದಾಡಿದ ಜನ

    ಹಂಪಿಯಲ್ಲಿ ಪ್ರವಾಸಿಗರ ದಂಡು – ಬ್ಯಾಟರಿ ಚಾಲಿತ ವಾಹನಗಳಿಲ್ಲದೇ ಪರದಾಡಿದ ಜನ

    ಬಳ್ಳಾರಿ: ಸರಣಿ ರಜೆ ಹಿನ್ನೆಲೆ ದಕ್ಷಿಣ ಕಾಶಿ, ವಿಶ್ವವಿಖ್ಯಾತ ಹಂಪಿಗೆ (Hampi) ಪ್ರವಾಸಿಗರ (Tourist) ದಂಡು ಹರಿದು ಬಂದಿದೆ.

    ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ವಿಶ್ವಪ್ರಸಿದ್ಧ ಹಂಪಿ ಕಳೆದೆರಡು ದಿನಗಳಿಂದ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ವಿಜಯ-ವಿಠ್ಠಲ ದೇಗುಲ, ಕಲ್ಲಿನ ತೇರು ಹಾಗೂ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಸಹಸ್ರಾರು ಪ್ರವಾಸಿಗರು ಸೇರಿದ ಕಾರಣ ಹೆಚ್ಚಿನ ಜನದಟ್ಟಣೆಯಿಂದ ಹಲವೆಡೆ ಟ್ರಾಫಿಕ್ (Traffic) ಕಿರಿಕಿರಿ ಉಂಟಾಗಿತ್ತು.ಇದನ್ನೂ ಓದಿ: ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರಗಳ ಸಾವು ಮಣ್ಣಿನ ಗಣಪನ ಪೂಜಿಸಲು ಈಶ್ವರ್ ಖಂಡ್ರೆ ಮನವಿ

    ಹಂಪಿಯ ಸ್ಮಾರಕಗಳ ಬಳಿ ಜನಸಾಗರವೇ ಹರಿದು ಬಂದಿದರೂ ಬ್ಯಾಟರಿ ಚಾಲಿತ ವಾಹನಗಳಿಲ್ಲದೇ ಪ್ರವಾಸಿಗರು ಪರದಾಡಿದರು. ಇತ್ತ ಸರಣಿ ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರಿಂದ ಜನಸಂದಣೆ ನಿಯಂತ್ರಿಸಲು ಪೊಲೀಸರ ಹರಸಾಹಸಪಟ್ಟರು.

  • ಮಲ್ನಾಡ್ ಬ್ಯೂಟಿಯ ಬೆನ್ನತ್ತಿ – ಒಂದು ಟ್ರಿಪ್ ಅಲ್ಲದ ಟ್ರಿಪ್!

    ಮಲ್ನಾಡ್ ಬ್ಯೂಟಿಯ ಬೆನ್ನತ್ತಿ – ಒಂದು ಟ್ರಿಪ್ ಅಲ್ಲದ ಟ್ರಿಪ್!

    ಲೆನಾಡು (Malenadu) ಅಂದ್ರೆ ಅದೊಂದು ಸುಂದರವಾದ ಪ್ರಪಂಚ.. ಅದಕ್ಕೆ ಭೂಮಿ ಮೇಲಿನ ಯಾವ ಸ್ಥಳ ಕೂಡ ಹೋಲಿಕೆ ಮಾಡೋಕೆ ಸಾಧ್ಯವಿಲ್ಲ..! ಇದು ನಾನಲ್ಲಿಯವನು ಎಂಬ ಕಾರಣಕ್ಕೆ ಹೇಳ್ತಿರೋ ಮಾತಲ್ಲ. ಇಲ್ಲಿನ ಸುಂದರವಾದ ಪ್ರಕೃತಿ, ಬೆಟ್ಟ ಗುಡ್ಡ, ಜನ ಜೀವನ, ವಿಶೇಷ ಸಂಸ್ಕೃತಿ, ಅಡುಗೆ ಹೀಗೆ ನಾನಾ ರೀತಿಯ ವೈವಿದ್ಯತೆ ಹೊಸ ಜಗತ್ತನ್ನೇ ತನ್ನೊಳಗೆ ಸೃಷ್ಟಿಸಿಕೊಂಡಿದೆ.

     

    ಈ ನೆಲದಲ್ಲಿ ಒಂದು ಸುವಾಸನೆಯ ಕಂಪಿದೆ.. ಇಲ್ಲಿನ ಗಾಳಿಯಲ್ಲಿ ಹಾಗೇ ತೇಲಿ ಬರುವ ಸಪ್ತಸ್ವರಗಳಿವೆ… ಇದನ್ನೆಲ್ಲ ಇಂದಿಗೂ ಇಲ್ಲಿನ ಪ್ರಕೃತಿ ಕಾಪಾಡಿಕೊಂಡು ಬಂದಿದೆ. ಇದನ್ನೆಲ್ಲ ನೀವು ಅನುಭವಿಸೋಕೆ ಮಲೆನಾಡಿನ ಕಾಡುಗಳನ್ನು ಸುತ್ತಬೇಕು. ಇಲ್ಲಿ ಟ್ರಿಪ್‌ ಮಾಡ್ಬೇಕು.. ಅಂದ್ರೆ ಸದಾ ಗಿಜಿಗುಡುವ ಜಾಗ ಬಿಟ್ಟು ಬರಬೇಕು! ಇಲ್ಲೂ ಅಷ್ಟೇ ತುಂಬಿ ತುಳುಕುವ ತಾಣಗಳನ್ನು ಬಿಟ್ಟು, ರಸ್ತೆಯೇ ಇಲ್ಲದ ರಸ್ತೆಯಲ್ಲಿ ಸಾಗಬೇಕು! ಒಂದು ಟ್ರಿಪ್ ಅಲ್ಲದ ಟ್ರಿಪ್ ಮಾಡ್ಬೇಕು!

    ಹೌದು, ನಾನು ಕಳೆದ ವಾರನೇ ಹೇಳಿದ್ದೆ ಇಲ್ಲಿನ ಮಳೆಗಾಲದಲ್ಲಿ ನಾನಾ ಜಲಪಾತಗಳು ಹುಟ್ಟಿಕೊಳ್ತವೆ.. ಮಳೆ ಮುಗಿದ ತಕ್ಷಣ ಅವೆಲ್ಲ ಹಾಗೇ ಮತ್ತೆ ಮೌನವಾಗಿ… ಇಲ್ಲದಂತೆ ಸಾಗರದಲ್ಲಿ ಕರಗಿ ಕಳೆದು ಹೋಗುತ್ತವೆ. ಅಂತಹ ಸಾವಿರ ಸಾವಿರ ಜಾಗಗಳು ನಮ್ಮ ಪಶ್ಚಿಮಘಟ್ಟಗಳಲ್ಲಿ ಇವೆ. ಸುಮ್ಮನೆ ಹಾಗೇ ಶರಾವತಿಯ ಹಿನ್ನೀರಿನ ಜಗತ್ತು ಹೊನ್ನೆಮರಡಿನ ಆ ಕಾಡುಗಳನ್ನು ಸುಮ್ಮನೆ ಮೌನವಾಗಿ ಸುತ್ತುವಾಗ ನನಗೆ ಇಂತಹ ಪ್ರಪಂಚದ ಅನುಭವವಾಗಿದ್ದು. ಇವತ್ತು ಅಲ್ಲಿ ಜೋರು ಮಳೆಯಾಗ್ತಿದೆ… ಸುಮ್ಮನೆ ಒಂದು ಗಟ್ಟಿಮುಟ್ಟಾದ ರೈನ್‌ಕೋಟನ್ನು ಹಾಕಿ ಹೊರಟರೆ ಅಲ್ಲಿನ ಕಾಡುಗಳ ಗೂಗಲ್‌ ಮ್ಯಾಪ್‌ನಲ್ಲಿ ಸಿಕ್ಕದ ದಾರಿಗಳಲ್ಲಿ ಓಡಾಡಿದರೆ ಆ ಅನುಭವ ಖಂಡಿತ ಸಿಗುತ್ತೆ! ಇದನ್ನೂ ಓದಿ: ಮಲೆನಾಡಿನ ಮಳೆಗಾಲದ ಗೆಳೆಯರು!

    ನನಗಿನ್ನೂ ನೆನಪಿದೆ.. ಅಂತಹ ಬಿಸಿಲಲ್ಲೂ ಸದಾ ನೆರಳು.. ರಾತ್ರಿಯ ಅನುಭವ ಕೊಡುವ ಕಾಡು.. ಇಂತಹ ಕಾಡು, ಮಳೆಯನ್ನೆ ಅಲ್ವಾ ಕುವೆಂಪು ವರ್ಣಿಸಿದ್ದು, ಇಂತಹ ಸ್ವರ್ಗದಲ್ಲೇ ಅಲ್ವಾ ತೇಜಸ್ವಿ ಸುತ್ತಾಡಿದ್ದು. ಹೌದು ಇಂತಹದೇ ಕಾಡು! ತೇಜಸ್ವಿ ʻಕಿವಿʼಯನ್ನು ಕರೆದುಕೊಂಡು ಹೋಗುತ್ತಿದ್ದಿದ್ದು ಇದೇ ಬಗೆಯ ಕಾಡುಗಳಲ್ಲೇ. ಮಳೆಗಾಲದಲ್ಲಿ ಹುಟ್ಟಿ ಆಗಿಹೋಗುವ ಜಲಪಾತಗಳು ಮಾತ್ರ ಅಲ್ಲಿಲ್ಲ.. ಎಂದೂ ಬತ್ತದ ಹೆಸರಿಲ್ಲದ ಶರಾವತಿಗೆ ಉಸಿರು ಕೊಡುವ ಝರಿಗಳು ಅಲ್ಲಿವೆ. ಅವ್ಯಾವುದಕ್ಕೂ ಹೆಸರಿಲ್ಲ. ಮ್ಯಾಪ್‌ನಲ್ಲಿ ಗುರುತಿಸಿಕೊಳ್ಳುವ ಹಂಬಲವೂ ಅವುಗಳಿಗಿಲ್ಲ. ಅವುಗಳನ್ನು ನಾವಾಗಿಯೇ ಹುಡುಕಿ ಹೊರಟಾಗ ಕಣ್ಣಿಗೆ ಬೀಳುತ್ತವೆ ಅಷ್ಟೇ!

    ಹೊನ್ನೆಮರಡು (Honnemaradu), ಹಂಸಗಾರು (Hamsagaru) ಘಟ್ಟದ ಕಾಡುಗಳಲ್ಲಿ ಇಂತಹ ಲೆಕ್ಕವಿಲ್ಲದಷ್ಟು ಝರಿಗಳಿವೆ. ಅದೆಷ್ಟೋ ಶತಮಾನಗಳ ದೈತ್ಯ ಮರಗಳಿವೆ.. ಅದೆಷ್ಟೋ ನಮಗೆ ನಿಮಗೆ ಪರಿಚಯವಿಲ್ಲದ ಹಕ್ಕಿ, ಬಳ್ಳಿ ಮರಗಳಿವೆ..! ಅವುಗಳನ್ನು ನೋಡುವ ಒಂದು ಟ್ರಿಪ್‌ ಮಾಡೋದಾದ್ರೆ ಸಾಗರದ ಹೊನ್ನೆಮರಡು ಅಥವಾ ಹಂಸಗಾರಿನ ಘಟ್ಟಕ್ಕೆ ಹೋಗಬೇಕು. ಸಾಗರದಿಂದ ಎರಡೂ ಪ್ರದೇಶಗಳು ಜೋಗ ಮಾರ್ಗದಲ್ಲಿ ಸಿಗುತ್ತವೆ. ಈ ಘಟ್ಟ ಪ್ರದೇಶಕ್ಕೆ ಹೋಗುವುದಾದರೆ ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತದೆ. ಅಲ್ಲದೇ ಸ್ಥಳೀಯರ ಸಹಾಯ ಬೇಕಾಗುತ್ತದೆ. ಇಲ್ಲವಾದರೆ, ಹೋಗಲು ಸಿಕ್ಕ ದಾರಿ ವಾಪಸ್‌ ಸಿಗೋದು ಕಷ್ಟ!

    ಇದೇ ಟೈಮ್‌ನಲ್ಲೇ ಅಲ್ಲಿ ಇನ್ನೊಂಥರ ಅತಿಥಿಗಳ ಕಾಟ! ನೀವೆಲ್ಲ ನೋಡಿರ್ತಿರಿ.. ಜಿಗಳೆಗಳು.. ಅದೇ ಜಾತಿಯ ಉಂಬಳ ಎಂದು ಕರೆಯುವ ರಕ್ತ ಹೀರುವ ಜೀವಿಗಳ ಕಾಟ! ಅವು ಕಚ್ಚಿದ್ದೇ ಗೊತ್ತಾಗಲ್ಲ.. ಹೊಟ್ಟೆ ತುಂಬಾ ರಕ್ತ ಹೀರಿ ಬಾಯಿಬಿಟ್ಟ ಮೇಲೆ ವಿಪರೀತ ತುರಿಕೆ..! ಅವುಗಳನ್ನು ಅವಾಯ್ಡ್‌ ಮಾಡೋದು ಸ್ವಲ್ಪ ಕಷ್ಟ.. ಆದ್ರೆ ಡೆಟಾಲ್‌… ಸ್ಥಳೀಯರು ಬಳಸುವ ಹೊಗೆಸೊಪ್ಪು, ಸುಣ್ಣದಿಂದ ಕಚ್ಚದಂತೆ ಅಥವಾ ಕಚ್ಚಿ ಹಿಡಿದಿದ್ದನ್ನು ತೆಗೆದು ಹಾಕಲು ಬಳಸ್ಕೋಬಹುದು!

    ಈ ಭಾಗಗಳಲ್ಲಿ ನಿಮಗೆ ನಾನು ಕಳೆದ ವಾರ ಹೇಳಿದ ಎಲ್ಲಾ ಅತಿಥಿಗಳು ಸಿಗ್ತಾರೆ… ಕಳಲೆ, ನೂರಾರು ಬಗೆಯ ಅಣಬೆಗಳು (ಅದರಲ್ಲಿ ಕೆಲವಷ್ಟೇ ತಿನ್ನಲು ಯೋಗ್ಯವಾದದ್ದು), ಏಡಿ, ಸೀತಾಳೆಯಂತಹ ನೂರಾರು ಬಗೆಯ ಹೂಗಳು, ವಿವಿಧ ಜಾತಿಯ ಜೇನುನೊಣಗಳ ಗೂಡುಗಳು ಕಾಣಸಿಗುತ್ತವೆ.

    ಬಿದಿರಿನದ್ದೆ ಒಂದಷ್ಟು ರಾಶಿ ಗಿಡಗಳು ಬೆಳೆದಿರುವ ಜಾಗಗಳಲ್ಲಿ ಕಳಲೆಗಳು, ಕೆಲವೆಡೆ ಕಾಡುಪ್ರಾಣಿಗಳು ಅವುಗಳನ್ನು ಅಲ್ಲಲ್ಲಿ ತಿಂದು ಹಾಕಿರುತ್ತವೆ. ಇನ್ನೂ ಕೆಲವೆಡೆ ಸ್ಥಳೀಯರು ತೆಗೆದಿರುತ್ತಾರೆ. ಆದರೆ ಬಿದಿರಿನ ಸಂತತಿ ಮುಂದುವರೆಯಲಿ ಅಂತ ಒಂದೆರಡನ್ನ ಹಾಗೇ ಉಳಿಸಿರುತ್ತಾರೆ. ಅವು ಎರಡು ಮೂರು ದಿನಕ್ಕೆ ಬೆಳೆದು ದೊಟ್ಟ ಬಿದಿರಿನ ಮೇಳೆಯಂತೆ ಕಾಣುತ್ತವೆ! ಇನ್ನೂ ಅದೇ ಜಾಗದ ತೋಟಗಳಿಗೆ, ಕೆರೆಗಳ ಜಾಗಗಳಿಗಿಳಿದರೆ ಏಡಿ, ಮೀನುಗಳು ಕಣ್ಣಿಗೆ ಬೀಳುತ್ತವೆ. ಈಗೆಲ್ಲ ಅವುಗಳನ್ನು ಹಿಡಿಯುವ ಕ್ರೇಜ್‌ ಜನರಿಗೆ ಕಡಿಮೆ ಆಗಿದೆ. ಆದ್ರೆ ನೋಡೋಕಂತು ಸಿಕ್ಕೇ ಸಿಗ್ತವೇ!

    ಇನ್ನೂ ಅಣಬೆಗಳು ತಿನ್ನಲು ಯೋಗ್ಯವಾದಂತಹವು, ಹೆಗ್ಗಾಲಣಬೆ, ನುಚ್ಚಣಬೆ, ಎಣ್ಣೆ ಅಣಬೆ ಹೀಗೆ ಅವೆಲ್ಲ ಕೆಲವು ಫಲವತ್ತಾದ ಜಾಗಗಳಲ್ಲಿ ತಲೆ ಎತ್ತಿರುತ್ತವೆ. ಇನ್ನೂ ಕೆಲವರು ಸಿಡಿಲು ಬಡಿದ ಜಾಗಗಳಲ್ಲಿ, ಮಳೆ ಬಂದು.. ಒಂದೆರಡು ಬಿಸಿಲು ಬಿಟ್ಟರೆ ಹುಟ್ಟಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಇನ್ನೂ ಕಾಡಿನ ಜಾತಿಯ ಅಣಬೆಗಳು ಊರಲ್ಲೂ ನೋಡಲು ಸಿಕ್ತವೇ! ಕೆಲವು ಜಾತಿಯವೂ ನೆಲದಲ್ಲಿ, ಇನ್ನೂ ಕೆಲವು ಮರಗಳ ಮೇಲೆ ಹಾಗೆ ಹುಟ್ಟಿಕೊಂಡಿರುತ್ತವೆ. ನೂರಾರು ಬಣ್ಣದ ಬಗೆ ಬಗೆಯ ಅಣಬೆಗಳು ಅಲ್ಲೆಲ್ಲ ಸಿಗ್ತವೆ… ಅವಕ್ಕೆಲ್ಲ ವಿಜ್ಞಾನಿಗಳು ಹೆಸರಿಟ್ಟಿದ್ದಾರೆ… ನಮ್ಮ ಹಳ್ಳಿ ಜನ ಎಲ್ಲಾ ಅಣಬೆಗೂ ಸೇರಿಸಿ.. ಕಾಡಣಬೆ ಅಂತ ಒಂದೇ ಪದದಲ್ಲಿ ಕರೆದು ಬಿಡ್ತಾರೆ..!

    ಹೊನ್ನೆಮರಡಿಗೆ ಹೋಗೋದು ಹೇಗೆ?
    ಹೊನ್ನೆಮರಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರು ಸುತ್ತುವರೆದಿರುವ ಒಂದು ಪುಟ್ಟ ಗ್ರಾಮ. ಈ ಸಾಹಸಮಯ ತಾಣ ಸಾಗರದಿಂದ 28 ಕಿ.ಮೀ ದೂರವಿದೆ. ಜೋಗ ಹೋಗುವ ಮಾರ್ಗದಲ್ಲಿ ಸಿಗುವ ಚೂರಿಕಟ್ಟೆಯಂದ ಎಡಕ್ಕೆ ತಿರುಗಿ ಒಂದು ಕಿ.ಮೀ ಪ್ರಯಾಣದ ಬಳಿಕ ಮುಖ್ಯರಸ್ತೆಯಿಂದ ಎಡಕ್ಕೆ ಸಿಗುವ ದಾರಿಗೆ ಇಳಿದರೆ, ಸುಮಾರು 10 ಕಿ.ಮೀ ಪ್ರಯಾಣದ ಬಳಿಕ ಈ ಊರು ಸಿಗುತ್ತದೆ.

    – ಗೋಪಾಲಕೃಷ್ಣ

  • ಮಲೆನಾಡಿನ ಮಳೆಗಾಲದ ಗೆಳೆಯರು!

    ಮಲೆನಾಡಿನ ಮಳೆಗಾಲದ ಗೆಳೆಯರು!

    ತ್ತೀಚೆಗೆ ಎಷ್ಟೋ ಜನ ಮಲೆನಾಡಿನ (Malenadu) ಭಾಗಗಳಿಗೆ ಟ್ರಿಪ್‌ (Tour) ಬಂದವರು ಅಲ್ಲಿನ ಮಳೆ (Rain), ಕಾಡು ವಿಡಿಯೋ ಮಾಡಿ ಯಾವಾಗಲೂ ಬಚ್ಚಲು ಮನೆ ಥರ ಇರುತ್ತೆ ಅನ್ನೋ ಸಿನಿಮಾ ಡೈಲಾಗ್‌ ಸೇರಿಸಿ ಹಂಚಿಕೊಳ್ತಿದಾರೆ. ಅವರಿಗೆಲ್ಲ ಮಲೆನಾಡು ಭೂಮಿ ಮೇಲಿನ ಸ್ವರ್ಗ ಅಂತ ಗೊತ್ತಿಲ್ಲ.. ಇಡೀ ವಿಶ್ವದಲ್ಲಿ ನನ್ನ ಪಾಲಿಗೆ ಕರ್ನಾಟಕದ (Karnataka) ಮಲೆನಾಡಿನ ಭಾಗಗಳು ಒಂದು ವಿಶೇಷವಾದ ಪ್ರಪಂಚವೇ ಸೈ.. ಹಾಗಂತ ಎಲ್ಲಾ ಪ್ರದೇಶಗಳಿಗೂ ತನ್ನದೇ ಆದ ಸೌಂದರ್ಯ, ವಿಶೇಷ ಇದ್ದೇ ಇರುತ್ತೆ.. ಅದು ಒಂದೊಂದು ಕಾಲದಲ್ಲಿ ಒಂದೊಂದು ಚೆಲುವು.. ಹಾಗೇ ಮಲೆನಾಡದಲ್ಲಿ ಮಳೆಗೆ ಇಲ್ಲಿನ ಪ್ರಕೃತಿ, ಜನಜೀವನ, ಸಣ್ಣ ಪುಟ್ಟ ಝರಿ ಜಲಪಾತಗಳು ಮತ್ತಷ್ಟು ಸೌಂದರ್ಯ ಹೆಚ್ಚಿಸುತ್ತವೆ.

    ಮಲೆನಾಡಿಗೆ ಮತ್ತಷ್ಟು ಜೀವ ತುಂಬುವ ವಿಶೇಷ ಅತಿಥಿಗಳು ಸಹ ಇದ್ದಾರೆ. ಅವರೆಲ್ಲ ಮಳೆಗಾಲಕ್ಕೆ ಬಂದು ಹೋಗುವವರು. ಈಗ ಬಂದ್ರೆ ಮತ್ತೆ ಬರೋದು ಮುಂದಿನ ಮಳೆಗಾಲಕ್ಕೆ..! ಅಂತಹ ಕೆಲವು ಅತಿಥಿಗಳ ಪರಿಚಯನಾ ಇವತ್ತು ಮಾಡ್ಕೊಡ್ತಿನಿ.

    ಅಪ್ಸರೆ ಜಡೆಯಂತ ಜಲಪಾತಗಳು!
    ಮಲೆನಾಡಿನಲ್ಲಿ ಬರುವ ಈ ದೊಡ್ಡ ದೊಡ್ಡ ಜಲಪಾತಗಳನ್ನು ನಾವು ನೀವೆಲ್ಲ ನೋಡೇ ಇರುತ್ತೇವೆ. ಆದ್ರೆ ಈ ಮಳೆಗಾಲದಲ್ಲಿ ಮಾತ್ರ ಬಂದು ಹೋಗುವ, ಎಷ್ಟೋ ಹೆಸರಿಲ್ಲದ ಜಲಪಾತಗಳು ಲೆಕ್ಕಕ್ಕೆ ಸಿಗುವುದಿಲ್ಲ. ಅವೆಲ್ಲ ಹೀಗೆ ಹೈವೇ ಪಕ್ಕದಲ್ಲಿ ಕಾರು ನಿಲ್ಲಿಸಿದ ತಕ್ಷಣ ಕಣ್ಣಿಗೂ ಬೀಳೋದಿಲ್ಲ. ಅಂತಹ ಅಪ್ಸರೆಯರ ಜಡೆ ಚೆಲುವು ಕಾಣಬೇಕಾದರೆ, ಪಶ್ಚಿಮ ಘಟ್ಟಗಳ ಕಾಡುಗಳನ್ನು ಸೇರಬೇಕು. ಯಾವ ನದಿಯೋ ಗೊತ್ತಿಲ್ಲ… ಎಲ್ಲೋ ಒಂದೊಂದು ಮೂಲೆಯಲ್ಲಿ ಸಣ್ಣದಾಗಿ ಹುಟ್ಟಿ ಅಲ್ಲಲ್ಲಿ ಅದೆಷ್ಟೋ ಕಡೆಗಳಲ್ಲಿ ಧುಮುಕಿ ಹರಿಯುವ ಈ ಜಲಪಾತಗಳಿಗೆ ಹೆಸರಿಟ್ಟವರಿಲ್ಲ. ನೋಡಿದವರ ಸಂಖ್ಯೆಯೂ ಕಡಿಮೆ..! ಪೇಟೆಯ ಜನಕ್ಕೆ ಆ ಜಾಗಗಳು ಗೊತ್ತಿಲ್ಲ.. ಅಲ್ಲಿಯ ಹಳ್ಳಿಯ ಜನಗಳಿಗೆ ಅದು ವಿಶೇಷ ಎಂದು ಅನಿಸದೇ ಅವು ಅಪರಿಚಿತರಾಗೇ ಉಳಿದು ಬಿಡುತ್ತವೆ.

    ಪ್ರೆಟ್ಟಿ ಫ್ಲವರ್ಸ್‌!
    ಮಳೆಗಾಲದಲ್ಲಿ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಈ ಸಮಯದಲ್ಲಿ ಮಾತ್ರ ಕಾಣಸಿಗುವ ಹೂಗಳು ಸಿಗುತ್ತವೆ. ಅದರಲ್ಲಿ ನಾನಾ ಬಗೆಯ ಆರ್ಕಿಡ್‌ಗಳು ಹಾಗೂ ನೆಲದ ಮೇಲೆಯೇ ಅರಳಿ ಮಣ್ಣಾಗುವ ಅದೆಷ್ಟೋ ಅಪರಿಚಿತ ಹೂಗಳು ಸೇರಿವೆ. ಈ ಸಮಯದಲ್ಲಿ ಹೆಚ್ಚಿನದ್ದಾಗಿ ಕಾಣಸಿಗುವುದು ಸೀತಾಳೆ ಹೂ, ಮತ್ತು ಕಾಡು ಅರಶಿನದ ಹೂ, ಇವು ಮಳೆಯಗಾಲದಲ್ಲಿ ಮಲೆನಾಡಿನ ಅಂಗಳವನ್ನು ಶೃಂಗರಿಸಲು ಬರುವ ವಿಶೇಷ ಆಭರಣಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಅಷ್ಟೊಂದು ಚೆಂದವಾಗಿ ಅಲ್ಲಲ್ಲಿ ಅಲಂಕಾರಕ್ಕೆ ಜೋಡಿಸಿಟ್ಟಂತೆ ಅರಳಿ ನಿಂತಿರುತ್ತವೆ ಈ ವಿಶೇಷ ಹೂಗಳು. ಇವು ಒಮ್ಮೆ ಆಗಿ ಹೋದರೆ ಮತ್ತೆ ಬರುವುದು ಮುಂದಿನ ಮಳೆಗಾಲಕ್ಕೆ. ಅಲ್ಲಿಯ ತನಕವೂ ಈ ಚೆಲುವು ಮಲೆನಾಡಿನ ಚೆಲುವೆಯ ಕೊರಳಿನಲ್ಲಿ ಹಾರವಾಗಿ ಉಳಿದಿರುತ್ತವೆ!

    ಕಲರ್‌ ಫುಲ್‌ ಅಣಬೆಗಳು!
    ಮಳೆ ಆರಂಭವಾಗಿ, ಒಂದು ಸಣ್ಣ ಬಿಸಿಲು ಬಿಟ್ರೆ ಸಾಕು.. ಕೆಲವು ಭಾಗಗಳಲ್ಲಿ ಅಣಬೆಗಳು ಬೆಳೆಯುತ್ತವೆ. ಅದರಲ್ಲಿ ಕೆಲವನ್ನು ಮನುಷ್ಯರು ತಿನ್ನಬಹುದು. ಇನ್ನೂ ಕೆಲವು ವಿಷಕಾರಿ ಅಂಶಗಳಿರುವಂತಹ ಅಣಬೆಗಳು ಇರುತ್ತವೆ. ಒಟ್ಟಾರೆ ಈ ಅಣಬೆಗಳಿಗೆ ಪ್ರಕೃತಿ ದತ್ತವಾಗಿ ಬಂದಂತಹ ವಿಶೇಷ ಬಣ್ಣ, ಸೌಂದರ್ಯ ಇರುತ್ತದೆ. ಇಂತಹ ವಿಶೇಷತೆಯನ್ನ ನೀವು ಎಂಜಾಯ್‌ ಮಾಡೋದಾದ್ರೆ, ಸಿಟಿ ಬಿಟ್ಟು ಮಳೆಕಾಡಿನ ಕಡೆ ಸ್ವಲ್ಪ ಓಡಾಡಬೇಕು! ಇಲ್ಲಿ ಬೆಳೆಯುವ ತಿನ್ನಬಹುದಾದ ಅಣಬೆಗಳಲ್ಲಿ ಅಪಾರವಾದ ಪ್ರೊಟೀನ್‌ ಇರುತ್ತದೆ. ಅಲ್ಲದೇ ಅನೇಕ ಸಣ್ಣಪುಟ್ಟ ಕಾಯಿಲೆಗಳಿಗೆ ರೋಗನಿರೋದಕ ಶಕ್ತಿಯನ್ನು ಒದಗಿಸುತ್ತದೆ.

    ಕಳಲೆ
    ಇದು ಮಲೆನಾಡಿಗರ ಅಚ್ಚುಮೆಚ್ಚಿನ ಆಹಾರ ಪದಾರ್ಥಗಳಲ್ಲಿ ಒಂದು. ಕಳಲೆ ಎಂದರೆ ಬಿದಿರಿನ ಮೊಳಕೆ.. ಇದು ದೊಡ್ಡ ಬಿದರಿನ ಗಿಡಗಳ ಕೆಳಗೆ ಮಳೆಗಾಲದ ಸಮಯದಲ್ಲಿ ಮಾತ್ರ ಮೊಳಕೆಯೊಡೆಯುತ್ತವೆ. ಹೀಗೆ ಮೊಳಕೆಯಾದ ಕಳಲೆಯನ್ನು ತಂದು ಜನ ಸಾರು, ಪಲ್ಯವನ್ನು ಮಾಡುತ್ತಾರೆ. ಇದು ಮಲೆನಾಡಿಗರಿಗೆ ಉಚಿತವಾಗಿ ಸಿಗುವಂತಹದ್ದು. ಆದರೆ ಬೇರೆ ಭಾಗಗಳಲ್ಲಿ ಹಣಕ್ಕೆ ಮಾರಾಟ ಮಾಡಲಾಗುತ್ತದೆ. ಇದರ ಮಾರಾಟ ನಿಷಿದ್ಧ ಆದರೂ ಜನ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾರಾಟ ಮಾಡ್ತಾರೆ.

    ಪ್ರೊಟೀನ್‌ ಕಾರ್ಬೊಹೈಡ್ರೋಜನ್‌, ಖನಿಜಾಂಶ, ನಾರಿನಾಂಶ ಅಧಿಕವಾಗಿದ್ದು, ಕ್ಯಾಲ್ಸಿಯಂ, ಕಡಿಮೆ ಪ್ರಮಾಣದಲ್ಲಿರುವುದರಿಂದ ಇದು ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಕರುಳುಗೆ ಸಂಬಂಧಿಸಿದ ಸಮಸ್ಯೆಗೆ ಇದು ಉತ್ತಮ ಆಹಾರ. ಆಯುರ್ವೇದ ಮತ್ತು ನಾಟಿ ವೈದ್ಯರು ಸಹ ಇದನ್ನೊಂದು ಉತ್ತಮ ಔಷಧೀಯ ಗುಣಗಳಿರುವ ಆಹಾರ ಎಂದು ಸೇವಿಸಲು ಸಲಹೆ ನೀಡುತ್ತಾರೆ. ಇನ್ನೂ ಕ್ಯಾನ್ಸರ್‌ನಂತಹ ಮಾರಕ ರೋಗಗಳ ವಿರುದ್ಧವೂ ಹೋರಾಡುವ ಅಂಶಗಳನ್ನು ಕಳಲೆ ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯ.

    ಏಡಿ& ಮೀನು!
    ಮಲೆನಾಡಿನ ಕೃಷಿಕರಿಗೆ ಇದೊಂದು ಹಬ್ಬ..! ಮಳೆಗಾಲಕ್ಕೆ ಹೊರ ಬಂದು ಅಡ್ಡಾಡುವ ಏಡಿಗಳು, ನೀರು ಹರಿಯುವ ವಿರುದ್ಧವಾಗಿ ಸಂಚರಿಸಿ ಹುಲ್ಲಿನ ಮೇಲೆ ಹರಿದಾಡುವ ಮೀನುಗಳ ಶಿಕಾರಿ, ಅದರ ಮಜವೇ ಬೇರೆ. ತಲೆಗೆ ಟಾರ್ಚ್‌ ಕಟ್ಟಿ ʻಬಾವ ಕೆರೆ ತುಂಬಿ, ಮೀನು ಹತ್ತಿದಾವಂತೋʼ ಅಂತ ಹೇಳಿ ಹತ್ತಾರು ಜನ ಹೋಗಿ ಮೀನು ಏಡಿ ಹಿಡಿಯುವ ಗುಂಪು, ಅವುಗಳನ್ನು ಅಡುಗೆ ಮಾಡಿ ತಿನ್ನೋದಕ್ಕಿಂತ, ಅಲ್ಲಿ ಹುಡುಕಾಡೋದು ಒಂಥರಾ ಕ್ರೇಜ್‌. ಮೀನು ಸಿಕ್ಕಾಗ ಒಂಥರಾ ಖುಷಿ, ಸಿಗದಿದ್ದಾಗ ಅದನ್ನೇ ಹೇಳಿಕೊಂಡು ನಕ್ಕು ಕಾಲಕಳೆಯೋದು, ಅದೆಲ್ಲದರ ನಡುವೆ ಜೋ ಎಂದು ಸುರಿಯುವ ಮಳೆ, ಹರಿಯುವ ಹಳ್ಳಕೊಳ್ಳಗಳು!

     

    ಈ ಚಟುವಟಿಕೆ ಎಲ್ಲಾ ನಡೆಯೋದು ಆದಷ್ಟು ಗದ್ದೆ ತೋಟಗಳ ಪಕ್ಕದಲ್ಲಿ. ಮೊದಲೆಲ್ಲ ಗದ್ದೆ ತೋಟಗಳಿಗೆ ರಸಾಯನಿಕ ಗೊಬ್ಬರ ಔಷಧಗಳ ಬಳಕೆ ಕಡಿಮೆ ಇತ್ತು. ಹಾಗಾಗಿ ಕೆರೆ, ಗದ್ದೆಗಳಲ್ಲಿ ಎಷ್ಟೊತ್ತಿಗೂ, ಮೀನುಗಳು, ಏಡಿಗಳು ಕಾಣ್ತಿದ್ವು, ಈಗೆಲ್ಲ ಲಾಭ ಬೇಕು ಅಂತ ಇರೋಬರೋ ಔಷಧಿ, ರಾಸಾಯನಿಕ ಗೊಬ್ಬರ ಹಾಕಿ ಏಡಿ, ಮೀನುಗಳ ಸಂತತಿ ಬಹಳಷ್ಟು ಕಡಿಮೆ ಆಗಿವೆ. ಇನ್ನೂ 10-20 ವರ್ಷಗಳಲ್ಲಿ ಇದೇ ರೀತಿ ಮುಂದುವರೆದ್ರೆ ನಿರ್ನಾಮವೇ ಆಗಬಹುದೇನೋ?

    ಹೀಗೆ ಮಲೆನಾಡಲ್ಲಿ ಕಣ್ಣಿಗೆ ಕಾಣುವ, ಕಾಣದ ಅದೆಷ್ಟೋ ಅತಿಥಿಗಳು ಮಳೆಗಾಲಕ್ಕೆ ಬಂದು ಹೋಗ್ತಾರೆ.. ಅದು ಅದೆಷ್ಟು ಶತಶತಮಾನಗಳಿಂದ ನಡೆದುಕೊಂಡು ಬಂದಿದಿಯೋ, ಅದೆಷ್ಟು ಶತಮಾನಗಳು ಮುಂದುವರಿಯತ್ತೋ ಗೊತ್ತಿಲ್ಲ. ಈ ಚೆಲವು ಅದೆಷ್ಟೋ ಮಂದಿಯ ಅನುಭವಕ್ಕೆ ಬಂದಿರತ್ತೆ.. ಈ ಬರಹ ಓದಿ… ಹೌದಲ್ವಾ? ಅಂತ ಒಂದು ಸಾಲು ಹೇಳಿದ್ರೂ ಸಾಕು… ನನಗೆ ತೃಪ್ತಿ!

    ಇಂತಹ ಪ್ರಕೃತಿಯ ಸೊಬಗನ್ನು ನೋಡಿ ಸಂಭ್ರಮಿಸಲು ನೀವು ಹೋಗಬೇಕಾದ ಒಂದಷ್ಟು ವಿಶಿಷ್ಟ ತಾಣಗಳ ಬಗ್ಗೆ ಮುಂದಿನ ಬುಧವಾರ (ಜೂ.25) ಮತ್ತೊಂದು ಬರಹದಲ್ಲಿ ತಿಳಿಸ್ತೇನೆ.

    – ಗೋಪಾಲಕೃಷ್ಣ

  • ಭೀಕರ ಕರಾಳತೆ ನೆನಪಿಸುವ ಪಹಲ್ಗಾಮ್ ಅಟ್ಯಾಕ್- ವಿಶ್ವ ನಾಯಕರ ಭೇಟಿ ಹೊತ್ತಲ್ಲೇ ದಾಳಿ ಏಕೆ?

    ಭೀಕರ ಕರಾಳತೆ ನೆನಪಿಸುವ ಪಹಲ್ಗಾಮ್ ಅಟ್ಯಾಕ್- ವಿಶ್ವ ನಾಯಕರ ಭೇಟಿ ಹೊತ್ತಲ್ಲೇ ದಾಳಿ ಏಕೆ?

    ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ (Pahalgam Terror Attack) ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು (Terrorist) ನಡೆಸಿದ ನರಮೇಧ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಭಾರತದಲ್ಲಾದ (India) ಭೀಕರ ಭಯೋತ್ಪಾದಕ ದಾಳಿಗಳ ಕರಾಳತೆಯನ್ನು ಮತ್ತೆ ನೆನಪಿಸುವಂತಹ ಹೇಯಕೃತ್ಯ ಇದಾಗಿದೆ. 26/11ರ ಮುಂಬೈ ದಾಳಿಯ ನಂತರ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಿದ ಅತಿದೊಡ್ಡ ಭಯೋತ್ಪಾದಕ ಅಟ್ಯಾಕ್ ಇದು. ಹೆಂಡತಿ, ಮಕ್ಕಳು ಮತ್ತು ಕುಟುಂಬ ಸದಸ್ಯರ ಎದುರೇ ಸಂತ್ರಸ್ತರನ್ನು ಉಗ್ರರು ಕ್ರೂರವಾಗಿ ಗುಂಡಿಕ್ಕಿ ಕೊಂದರು. ತಮ್ಮವರನ್ನು ಕಳೆದುಕೊಂಡು ಕುಟುಂಬಸ್ಥರು ದುಃಖಿಸುತ್ತಿರುವುದು ನಿಜಕ್ಕೂ ಕರುಣಾಜನಕವಾಗಿದೆ.

    ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಸೌದಿ ಅರೇಬಿಯಾಕ್ಕೆ ಸಾಗರೋತ್ತರ ಪ್ರವಾಸಲ್ಲಿರುವ ಹೊತ್ತಲ್ಲೇ ನಡೆದ ಉಗ್ರ ದಾಳಿಗೆ 26 ಮಂದಿ ಅಸುನೀಗಿದರು. 17ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಕೃತ್ಯ ಇತಿಹಾಸದ ಕರಾಳತೆಯನ್ನು ಮತ್ತೆ ನೆನಪಿಸಿದಂತಿದೆ. ಅಷ್ಟಕ್ಕೂ ಹಿಂದೆಯಾದ ಆ ದಾಳಿ ಯಾವುದು? ಏನಾಗಿತ್ತು?

    ಜಮ್ಮು-ಕಾಶ್ಮೀರಕ್ಕೆ ಪ್ರವಾಸಿಗರ ದಂಡು
    ವಾಸ್ತವವಾಗಿ 2019ರ ಆಗಸ್ಟ್‌ ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆದುಕೊಂಡ ನಂತರ ರಾಜ್ಯಕ್ಕೆ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಬರಲಾರಂಭಿಸಿದರು. ಪ್ರವಾಸೋದ್ಯಮವು ಸ್ಥಳೀಯ ಉದ್ಯೋಗ ಮತ್ತು ವ್ಯವಹಾರಗಳಿಗೆ ಉತ್ತೇಜನ ನೀಡಿತು. ರಾಜ್ಯಕ್ಕೆ ಸುಭದ್ರ ಆರ್ಥಿಕತೆಗೆ ಭದ್ರ ಬುನಾದಿಯಾಗುವ ಸೂಚನೆ ಸಿಕ್ಕಿತ್ತು. ಆದರೆ, ಪಹಲ್ಗಾಮ್ ದಾಳಿಯು ಉಗ್ರರ ಕ್ರೂರತ್ವವನ್ನು ಕಾಶ್ಮೀರದಲ್ಲಿ (Jammu Kashmir) ಪುನರುಜ್ಜೀವನಗೊಳಿಸುವಂತಿದೆ. ವಿದೇಶಿ ನಾಯಕರು ಮತ್ತು ಅಧಿಕಾರಿಗಳು ದೇಶದಲ್ಲಿದ್ದಾಗ, ನಾಗರಿಕರ ಮೇಲಿನ ಭಯೋತ್ಪಾದಕ ದಾಳಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಗಿಟ್ಟಿಸುವ ಉದ್ದೇಶದ್ದೇ ಎಂಬ ಪ್ರಶ್ನೆ ಮೂಡಿದೆ.

    ದಾಳಿ ಬಗ್ಗೆ ಯುಎಸ್ ನಾಯಕರು ಹೇಳಿದ್ದೇನು?
    ಅಮೆರಿಕವು ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ (India) ಬಲವಾಗಿ ನಿಂತಿದೆ. ಉಗ್ರರ ದಾಳಿಗೆ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಪ್ರಧಾನಿ ಮೋದಿ ಮತ್ತು ಭಾರತದ ಜನತೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿ ಕಳವಳಕಾರಿ ಸುದ್ದಿ ಎಂದು ಪ್ರತಿಕ್ರಿಯಿಸಿದ್ದಾರೆ.

    ಭಾರತದ ಪಹಲ್ಗಾಮ್‌ನಲ್ಲಿ ನಡೆದ ವಿಧ್ವಂಸಕ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಉಷಾ ಮತ್ತು ನಾನು ಸಂತಾಪ ಸೂಚಿಸುತ್ತೇವೆ. ಈಚೆಗಷ್ಟೇ ನಾವು ಭಾರತದ ಸೌಂದರ್ಯ ಮತ್ತು ಜನರ ಪ್ರೀತಿಗೆ ಮಾರುಹೋಗಿದ್ದೆವು. ದೇಶದ ಜನತೆ ಪ್ರೀತಿಯೊಂದಿಗೆ ಹಿಂತಿರುಗಿದ್ದೆವು. ಆದರೆ, ಈಗ ಭೀಕರ ದಾಳಿಯಿಂದಾಗಿ ಅನೇಕರು ದುಃಖಿಸುವಂತಾಗಿದೆ. ನಾವು ಅವರೊಂದಿಗಿದ್ದೇವೆ ಎಂದು ಮೊನ್ನೆಯಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸಂತಾಪ ಸೂಚಿಸಿದ್ದಾರೆ.

    2000 ದಲ್ಲಿ ಏನಾಗಿತ್ತು?
    2000, ಮಾರ್ಚ್ 20 ರ ರಾತ್ರಿ ಪಾಕಿಸ್ತಾನ ಪ್ರಯೋಜಿತ ಉಗ್ರಗಾಮಿಗಳಿಂದ ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಚಿಟ್ಟಿಂಗ್‌ಹೊರಾ ಗ್ರಾಮದಲ್ಲಿ 36 ಸಿಖ್ ಗ್ರಾಮಸ್ಥರ ಹತ್ಯಾಕಾಂಡ ನಡೆಯಿತು. ಆ ಸಂದರ್ಭದಲ್ಲೇ ಮಾ.21-25ರ ವರೆಗೆ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದರು. ಪಾಕಿಸ್ತಾನವನ್ನು ಒಳಗೊಳ್ಳುವ ಬಗ್ಗೆ ಕ್ಲಿಂಟನ್ ಅವರ ಜೊತೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾತುಕತೆ ನಡೆಸಿದ್ದರು. ಆ ಸಮಯದಲ್ಲಿ ಕ್ಲಿಂಟನ್ ಜೈಪುರ ಮತ್ತು ಆಗ್ರಾ ಪ್ರವಾಸ ಮಾಡಿದ್ದರು.

    2002ರಲ್ಲಿ ಮತ್ತೊಂದು ದಾಳಿ
    ಎರಡು ವರ್ಷಗಳ ತರುವಾಯ, ದಕ್ಷಿಣ ಏಷ್ಯಾದ ವ್ಯವಹಾರಗಳ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಕ್ರಿಸ್ಟಿನಾ ಬಿ ರೊಕ್ಕಾ ಭಾರತಕ್ಕೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲೇ 2002ರ ಮೇ 14 ರಂದು ಕಲುಚಕ್ ಬಳಿ ಭಯೋತ್ಪಾದಕ ದಾಳಿ ನಡೆಯಿತು. ಮೂವರು ಉಗ್ರರು ಹಿಮಾಚಲ ರಸ್ತೆ ಸಾರಿಗೆ ನಿಯಮದ ಬಸ್ಸಿನಲ್ಲಿ ಮನಾಲಿಯಿಂದ ಜಮ್ಮುವಿಗೆ ಹೊರಟಿದ್ದವರ ಮೇಲೆ ದಾಳಿ ಮಾಡಿ 7 ಜನರನ್ನು ಕೊಂದರು. ಸಾಲದೆಂಬಂತೆ ಸೇನಾ ಸಿಬ್ಬಂದಿಗಳಿರುವ ಕ್ವಾಟ್ರಸ್‌ಗೆ ನುಗ್ಗಿ ನಿರ್ದಾಕ್ಷಿಣ್ಯವಾಗಿ ಗುಂಡಿನ ಮಳೆಗರೆದರು. ಈ ಕ್ರೂರ ಕೃತ್ಯಕ್ಕೆ 10 ಮಕ್ಕಳು, 8 ಮಹಿಳೆಯರು ಮತ್ತು ಐವರು ಸೇನಾ ಸಿಬ್ಬಂದಿ ಸೇರಿ 23 ಮಂದಿ ಬಲಿಯಾದರು. ಹತ್ಯೆಗೀಡಾದ ಮಕ್ಕಳು 4-10 ವರ್ಷದೊಳಗಿನವರಾಗಿದ್ದರು. ದಾಳಿಯಲ್ಲಿ 34 ಜನರು ಗಾಯಗೊಂಡಿದ್ದರು.

    ಪಾಕ್ ಮುಖ್ಯಸ್ಥನ ಆ ಹೇಳಿಕೆ ಬೆನ್ನಲ್ಲೇ ದಾಳಿ!
    ಪಾಕಿಸ್ತಾನದ ಪಾಲಿಗೆ ಕಾಶ್ಮೀರವು ಕಠನಾಳವಿದ್ದಂತೆ (ತಲೆಯಿಂದ ಹೃದಯಕ್ಕೆ ರಕ್ತ ಒಯ್ಯುವ ನಾಳ). ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು. ಅದನ್ನು ಪಾಕಿಸ್ತಾನಕ್ಕೆ ಸೇರಿಸುವ ಸಂಬಂಧ ವೀರೋಚಿತ ಹೋರಾಟ ನಡೆಸುತ್ತಿರುವ ನಮ್ಮ ಕಾಶ್ಮೀರಿ ಸಹೋದರರನ್ನು ನಾವು ಎಂದಿಗೂ ಕೈಬಿಡುವುದಿಲ್ಲ ಎಂದು ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಸೇನೆ ಮುಖ್ಯಸ್ಥ ಅಸೀಮ್ ಮುನೀರ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪಹಲ್ಗಾಮ್‌ನಲ್ಲಿ ಭೀಕರ ಉಗ್ರ ದಾಳಿ ನಡೆದಿದೆ. ಇದು ಕಾಶ್ಮೀರ ಬಗೆಗಿನ ಪಾಕ್ ನಿಲುವನ್ನು ಪ್ರತಿಬಿಂಬಿಸುವಂತಿದೆ.

    ಭಾರತದ ಮಿನಿ ಸ್ವಿಜರ್ಲ್ಯಾಂಡ್ ‘ಪಹಲ್ಗಾಮ್’
    ಪಹಲ್ಗಾಮ್ ಭಾರತದ ಮಿನಿ ಸ್ವಿಜರ್ಲ್ಯಾಂಡ್ ಇದ್ದಂತೆ. ಮೆಡೋಸ್ ಮತ್ತು ಮೊಘಲ್ ತೋಟಗಳು ವಸಂತಕಾಲಕ್ಕೆ ಸಾಕ್ಷಿಯಾಗಲು ಸಾವಿರಾರು ಜನರನ್ನು ಆಕರ್ಷಿಸುತ್ತಿವೆ. ಇದು ಹಲವು ಕಾರಣಗಳಿಗೆ ಮಹತ್ವದ್ದಾಗಿದೆ. ಅಮರನಾಥ ಗುಹೆಯ ಎರಡು ಮಾರ್ಗಗಳಲ್ಲಿ ಇದೂ ಒಂದು. ಇದರ ಮಾರ್ಗದ ಮುಖಾಂತರವೇ ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳು ಹೊರಡಬೇಕು. ಲಕ್ಷಾಂತರ ಯಾತ್ರಿಕರನ್ನು ಆಕರ್ಷಿಸುತ್ತದೆ. ಇದು ಬೈಸರನ್ ಪೈನ್ ಅರಣ್ಯಕ್ಕೆ ನೆಲೆಯಾಗಿದೆ. ಜನಪ್ರಿಯ ಟ್ರೆಕ್ಕಿಂಗ್ ಮಾರ್ಗವೂ ಆಗಿದೆ.

    ಜಮ್ಮು-ಕಾಶ್ಮೀರ ಪ್ರವಾಸೋದ್ಯಮಕ್ಕೆ ಕುತ್ತು
    ಸ್ಥಳೀಯ ಉದ್ಯಮದಾರರು ಭಯೋತ್ಪಾದಕ ದಾಳಿಯಿಂದ ಕಂಗೆಟ್ಟಿದ್ದಾರೆ. ಇದು ನಿಜಕ್ಕೂ ರಾಜ್ಯಕ್ಕೆ ದೊಡ್ಡ ಹೊಡೆತ. ಶಾಂತಿಯುತ ಪರಿಸ್ಥಿತಿಯಿಂದಾಗಿ ಕಳೆದ ಕೆಲವು ವರ್ಷಗಳಿಂದ ಈ ವಲಯದಲ್ಲಿ ಬೆಳವಣಿಗೆ ಕಂಡಿತ್ತು. ಆದರೆ, ಈಗ ನಡೆದ ಉಗ್ರರ ದಾಳಿಯು ಕ್ಷಣಾರ್ಧದಲ್ಲಿ ಎಲ್ಲವನ್ನೂ ಮಣ್ಣುಪಾಲು ಮಾಡಿತು. ಪ್ರವಾಸಿಗರು ಭಯಭೀತರಾಗಿದ್ದಾರೆ. ಸಾವಿರಾರು ಮಂದಿ ಈಗಾಗಲೇ ಮಾಡಿದ್ದ ಬುಕ್ಕಿಂಗ್ ರದ್ದುಗೊಳಿಸಿದ್ದಾರೆ ಎಂದು ಕಾಶ್ಮೀರದ ಟ್ರಾವೆಲ್ ಏನೆಂಟ್ಸ್ ಅಸೋಷಿಯೇಷನ್‌ನ ಅಧ್ಯಕ್ಷ ರೌಫ್ ಟ್ರಾಂಬೂ ಬೇಸರ ವ್ಯಕ್ತಪಡಿಸಿದ್ದಾರೆ.

    ಜಮ್ಮು-ಕಾಶ್ಮೀರವು ಪ್ರವಾಸಿ ಸ್ನೇಹಿ ತಾಣವಾಗಿ ಪ್ರಚಾರ ಮಾಡುವಲ್ಲಿ ಕೇಂದ್ರವು ಕ್ರಿಯಾಶೀಲವಾಗಿತ್ತು. 2023ರ ಮೇ ತಿಂಗಳಲ್ಲಿ ಶ್ರೀನಗರವು ಮೂರನೇ ಜಿ20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆ ಆಯೋಜಿಸಿತ್ತು. ಇಲ್ಲಿ ಚಲನಚಿತ್ರಗಳನ್ನು ಚಿತ್ರೀಕರಣ ಉತ್ತೇಜಿಸಲು ಚಲನಚಿತ್ರ ನೀತಿಯನ್ನು ಅಭಿವೃದ್ಧಿಪಡಿಸಲಾಯಿತು. 2024ರಲ್ಲೇ 2.3 ಕೋಟಿ ಪ್ರವಾಸಿಗರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಕಾರ, 2018ರಲ್ಲಿ ಆರ್ಟಿಕಲ್ 370 ರದ್ದತಿಗೂ ಮುನ್ನ ಪ್ರವಾಸಿಗರ ಸಂಖ್ಯೆ 1.6 ಕೋಟಿ ಇತ್ತು. ಅದರಲ್ಲಿ 8.3 ಲಕ್ಷ ಮಂದಿ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದರು.

  • ಭಾರತೀಯ ಪ್ರವಾಸಿಗರ ಕೊಂಡೊಯ್ಯುತ್ತಿದ್ದ ಬಸ್ ಅಪಘಾತ – 25 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಭಾರತೀಯ ಪ್ರವಾಸಿಗರ ಕೊಂಡೊಯ್ಯುತ್ತಿದ್ದ ಬಸ್ ಅಪಘಾತ – 25 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಲಕ್ನೋ: ನೇಪಾಳದ ಪೊಖಾರಾಕ್ಕೆ ಭಾರತೀಯ ಪ್ರವಾಸಿಗರನ್ನು (Indian Tourists) ಕೊಂಡೊಯ್ಯುತ್ತಿದ್ದ ಬಸ್ ಒಂದು ಡಾಂಗ್ ಜಿಲ್ಲೆಯ ಚಿಸಾಪಾನಿಯಲ್ಲಿ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ 25 ಜನ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಬಸ್‌ನ ಬ್ರೇಕ್ ವಿಫಲವಾದ ಕಾರಣ ಚಾಲಕ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಗಾಯಗೊಂಡ 25 ಪ್ರವಾಸಿಗರಲ್ಲಿ 19 ಜನರನ್ನು ಉತ್ತರ ಪ್ರದೇಶದ ತುಲಸೀಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ (Health Center) ದಾಖಲಿಸಲಾಗಿದೆ. ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಆದ್ರೆ ಗಂಭೀರವಾಗಿ ಗಾಯಗೊಂಡ ಮೂವರನ್ನು ನೇಪಾಳದ ಆಸ್ಪತ್ರೆಯಲ್ಲಿ (Nepal Hospital) ಚಿಕಿತ್ಸೆಗಾಗಿ ಇರಿಸಲಾಗಿದೆ ಎಂದು ತುಲಸೀಪುರದ ಸರ್ಕಲ್ ಆಫೀಸರ್ ಬೃಜನಂದನ್ ರಾಯ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಟೆಂಟ್‌ ಸಾಮಗ್ರಿ ಪೂರೈಸುತ್ತಿದ್ದ ಕಂಪನಿಯ ಗೊಡೋನ್​ನಲ್ಲಿ ಅಗ್ನಿ ದುರಂತ

    ಈ ಬಸ್ ಲಕ್ನೋದಿಂದ ಪೊಖಾರಾಕ್ಕೆ ಪ್ರಯಾಣಿಸುತ್ತಿತ್ತು, ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶದ ಲಕ್ನೋ, ಸೀತಾಪುರ, ಹರದೋಯ್ ಮತ್ತು ಬರಾಬಂಕಿ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಅಪಘಾತದ ಸುದ್ದಿ ತಿಳಿದ ಕೂಡಲೇ, ನೇಪಾಳದ ಗಢವಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿಂದ 19 ಜನರನ್ನು ತುಲಸೀಪುರಕ್ಕೆ ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಸಲು ಮುಂದಾದ ಮಹಿಳೆ

    ಸ್ಥಳೀಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಚಾಲಕನ ಕಾರ್ಯಾಚರಣೆ ಮತ್ತು ಬಸ್‌ನ ಯಾಂತ್ರಿಕ ಸ್ಥಿತಿಯ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕುಸಿತ – 9 ತಿಂಗಳ ಮಗು ಸೇರಿ ನಾಲ್ವರು ಸಾವು

  • ಅಂತರರಾಜ್ಯ ಪ್ರವಾಸಿ ತಾಣಗಳಿಗೆ KSTDC ಪ್ಯಾಕೇಜ್ ಟೂರ್ – ಯಾವ ಸ್ಥಳಕ್ಕೆ ಎಷ್ಟು ರೂ?

    ಅಂತರರಾಜ್ಯ ಪ್ರವಾಸಿ ತಾಣಗಳಿಗೆ KSTDC ಪ್ಯಾಕೇಜ್ ಟೂರ್ – ಯಾವ ಸ್ಥಳಕ್ಕೆ ಎಷ್ಟು ರೂ?

    ಬೆಂಗಳೂರು:ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ (KSTDC) ಪ್ರವಾಸಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅಂತರರಾಜ್ಯ ಪ್ರವಾಸಿ ತಾಣಗಳಿಗೆ ಕೆಎಸ್‌ಟಿಡಿಸಿಯಿಂದ ಪ್ಯಾಕೇಜ್ ಟೂರ್ (Package Tour) ಆಯೋಜನೆ ಮಾಡಲಾಗುತ್ತಿದೆ. ಪ್ರಮುಖವಾಗಿ ವಿವಿಧ ಹಾಗೂ ಪ್ರಖ್ಯಾತ 9 ಸ್ಥಳಗಳಿಗೆ ಸರ್ಕಾರದಿಂದ ಕೈಗೆಟ್ಟಕುವ ದರದಲ್ಲಿ ಪ್ಯಾಕೇಜ್ ಮಾಡಲಾಗಿದೆ.ಇಂದಿನಿಂದಲೇ ಬುಕ್ಕಿಂಗ್ ಆರಂಭವಾಗಿವೆ.

    ಈ ಪ್ಯಾಕೇಜ್ ನಲ್ಲಿ ಪ್ರವಾಸಿಗರ ಊಟ, ಹೋಟೆಲ್, ವಸತಿ ವ್ಯವಸ್ಥೆಯನ್ನು ಕೆಎಸ್‌ಟಿಡಿಸಿಯಿಂದಲೇ ಆಯೋಜನೆ ಮಾಡಲಾಗಿದೆ. ಎಲ್ಲಾ ಪ್ಯಾಕೇಜ್‌ಗಳಲ್ಲೂ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಲಾಗಿದೆ. ಒಂದು ಟಿಕೆಟ್ ಗಿಂತ‌ ಮೂರು ಜನ ಬುಕ್ ಮಾಡಿದರೆ ಟೂರ್ ಪ್ಯಾಕೇಜ್ ರೇಟ್ ನಲ್ಲಿ ಕಡಿಮೆ ದರ ದೊರೆಯಲಿದೆ.

    ಯಾವ ಸ್ಥಳಕ್ಕೆ ಎಷ್ಟು ರೂ?
    ಕೃಷ್ಣಗಿರಿ ಡ್ಯಾಮ್ ಹೊಗೆನಕಲ್ ಒಂದು ದಿನದ ಟೂರ್ ಪ್ಯಾಕೇಜ್ – ಒಬ್ಬರಿಗೆ 1,480 ರೂ.
    ಸೀನಿಯರ್ ಸಿಟಿಜನ್ ಗೆ 200 ರೂಪಾಯಿ ರಿಯಾಯಿತಿ

    ತಿರುವಣ್ಣಮಲೈ-ಗಿರಿವಲಂ 2 ದಿನದ ಟೂರ್ ಪ್ಯಾಕೇಜ್ – ಒಬ್ಬರಿಗೆ 5,210 ರೂ.
    ಸೀನಿಯರ್ ಸಿಟಿಜನ್ 300 ರೂ. ರಿಯಾಯಿತಿ

    ಯಗಚಿ-ಚಿಕ್ಕಮಗಳೂರು ಟೂರ್ ಪ್ಯಾಕೇಜ್ – ಎರಡು ದಿನದ ಪ್ಯಾಕೇಜ್‌ಗೆ 6,460 ರೂ.
    ಸೀನಿಯರ್ ಸಿಟಿಜನ್ 325 ರೂ. ರಿಯಾಯಿತಿ

    ಕೊಚ್ಚಿ-ಆಲೆಪ್ಪಿ ಟೂರ್ ಪ್ಯಾಕೇಜ್  -ನಾಲ್ಕು ದಿನಕ್ಕೆ 12,980 ರೂ.
    ಸೀನಿಯರ್ ಸಿಟಿಜನ್‌ 675 ರೂ.ರಿಯಾಯಿತಿ

    ತಮಿಳುನಾಡು-ನವಗ್ರಹ ಟೂರ್ ಪ್ಯಾಕೇಜ್ – ನಾಲ್ಕು ದಿನಕ್ಕೆ ಒಬ್ಬರಿಗೆ 7,820 ರೂ.
    ತೆಕ್ಕಡಿ-ಮುನ್ನಾರ್ ಟೂರ್ ಪ್ಯಾಕೇಜ್ ಐದು ದಿನಕ್ಕೆ ಒಬ್ಬರಿಗೆ 13,030 ರೂ.

    ತೆಕ್ಕಡಿ-ಆಲೆಪ್ಪಿ-ಮುನಾರ್-ಆರು ದಿನಕ್ಕೆ ಒಬ್ಬರಿಗೆ 20,050 ರೂ.
    ಪಂಡಾರಪುರ-ಶಿರಡಿ-ಎಲ್ಲೋರ-ಕೊಲ್ಲಾಪುರ ಟೂರ್ ಒಬ್ಬರಿಗೆ ಆರು ದಿನಕ್ಕೆ 18,590 ರೂ.

  • 20 ಸಾವಿರದಲ್ಲಿ 18 ದಿನಗಳ ಉತ್ತರ ಭಾರತ ಪ್ರವಾಸ – MSIL ಟೂರ್‌ ಪ್ಯಾಕೇಜ್‌ಗೆ ಎಂಬಿಪಿ ಚಾಲನೆ

    20 ಸಾವಿರದಲ್ಲಿ 18 ದಿನಗಳ ಉತ್ತರ ಭಾರತ ಪ್ರವಾಸ – MSIL ಟೂರ್‌ ಪ್ಯಾಕೇಜ್‌ಗೆ ಎಂಬಿಪಿ ಚಾಲನೆ

    ಬೆಂಗಳೂರು: ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಸರಕಾರಿ ನೌಕರರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಎಂಎಸ್‌ಐಎಲ್‌ (MSIL) ಸಂಸ್ಥೆ ರೂಪಿಸಿರುವ ನಾನಾ ತರಹದ ಆಕರ್ಷಕ ಟೂರ್‌ ಪ್ಯಾಕೇಜುಗಳಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ (MB Patil) ಬುಧವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಸಂಸ್ಥೆಯ ಡೈರಿ, ಕ್ಯಾಲೆಂಡರ್‌ ಮತ್ತು ಬಾಂಡ್ ಜೆರಾಕ್ಸ್ ಪೇಪರ್ ಕೂಡ ಬಿಡುಗಡೆ ಮಾಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ʻಎಂಎಸ್‌ಐಎಲ್‌ ಮೊದಲಿನಿಂದಲೂ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿದೆ. ಈಗ ಟೂರ್‌ ಪ್ಯಾಕೇಜುಗಳ (Tour Package) ಮೂಲಕ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈ ಪ್ಯಾಕೇಜುಗಳ ಅಡಿಯಲ್ಲಿ‌ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆದಿಕೈಲಾಸ ಮತ್ತು ವಾರಣಾಸಿಗೆ ಪ್ರವಾಸ ಆಯೋಜಿಸಲಾಗುವುದು. ಮುಖ್ಯವಾಗಿ ನಾವು ಆಫ್-ಲೈನ್‌ ಪ್ರವಾಸಿಗರಿಗೆ ಆದ್ಯತೆ ಕೊಡುತ್ತಿದ್ದೇವೆ ಎಂದಿದ್ದಾರೆ.

    ಈ ಪ್ಯಾಕೇಜುಗಳಲ್ಲಿ ಸುರಕ್ಷತೆ, ಶುಚಿರುಚಿಯಾದ ಆಹಾರ, ಮನೆ ಬಾಗಿಲಿನಿಂದಲೇ ಕರೆದುಕೊಂಡು ಹೋಗಿ ವಾಪಸ್‌ ಅಲ್ಲಿಗೇ ಬಿಡುವುದು, ಸಹಾಯಕರ ನೆರವು, ಮಾಸಿಕ ಕಂತುಗಳಲ್ಲಿ ಹಣ ಪಾವತಿ, ಲಕ್ಕಿ ಡ್ರಾ, ಕೈಗೆಟುಕುವ ವೆಚ್ಚದಲ್ಲಿ ಉತ್ತರ ಭಾರತ ಪ್ರವಾಸ ಮುಂತಾದ ಸೌಲಭ್ಯ ಮತ್ತು ಆಕರ್ಷಣೆಗಳಿವೆ. ಗುಂಪು ಪ್ರವಾಸ ಮಾಡಲು ಬಯಸುವವರಿಗೆ ಪ್ರತಿ ಬ್ಯಾಚಿನಲ್ಲಿ ಗರಿಷ್ಠ 100 ಮಂದಿಗೆ ಅವಕಾಶ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಇದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದು ʻಸ್ಟಡಿ-ಕಂ-ಪ್ಲೆಷರ್‌ ಟೂರ್‌, ಇಕೋ ಟೂರಿಸಂ ಮತ್ತು ಕರಾವಳಿ ಪ್ರದೇಶಗಳ ವೀಕ್ಷಣೆ ಇರುವ ಕೋಸ್ಟಲ್‌ ಟೂರಿಸಂ ಮುಂತಾದ ಪ್ಯಾಕೇಜುಗಳನ್ನು ರೂಪಿಸಲು ಎಂಎಸ್‌ಐಎಲ್‌ ಚಿಂತಿಸುತ್ತಿದೆ. ಸಂಸ್ಥೆಯು ಸದ್ಯಕ್ಕೆ ರೂಪಿಸಿರುವ ಪ್ಯಾಕೇಜಿನಲ್ಲಿ ಕೇವಲ 20 ಸಾವಿರ ರೂ. ವೆಚ್ಚದಲ್ಲಿ 15ರಿಂದ 18 ದಿನಗಳ ಉತ್ತರ ಭಾರತ ಪ್ರವಾಸ ಮಾಡಿಕೊಂಡು ಬರಬಹುದು ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಜಾತ್ರೆಯಲ್ಲಿ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ – ಎದ್ನೋ, ಬಿದ್ನೋ ಅಂತ ಓಡಿದ ಜನ

    ಸರ್ಕಾರಿ ಉದ್ಯೋಗಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿರುವ ಪ್ಯಾಕೇಜಿನಲ್ಲಿ ಮೊದಲು 50% ರಷ್ಟು ಹಣ ಪಾವತಿಸಿ, ಪ್ರವಾಸ ಕೈಗೊಳ್ಳಬಹುದು. ಪ್ರವಾಸ ಮುಗಿಸಿಕೊಂಡು ಬಂದ ಬಳಿಕ ಉಳಿದ 50%ರಷ್ಟು ಹಣವನ್ನು ಮಾಸಿಕ ಕಂತುಗಳಲ್ಲಿ ಕಟ್ಟಬಹುದು. ಹಾಗೆಯೇ ಲಕ್ಕಿ ಡ್ರಾದಲ್ಲಿ ವಿಜೇತರಾಗುವ ಅದೃಷ್ಟಶಾಲಿಗಳು ಡ್ರಾ ನಂತರದ ಹಣವನ್ನು ಪಾವತಿಸಬೇಕಾಗಿಲ್ಲ. ಈ ಎಲ್ಲ ಪ್ಯಾಕೇಜುಗಳಲ್ಲೂ ಎಂಎಸ್‌ಐಎಲ್‌ ವತಿಯಿಂದ ಟೂರ್‌ ಮ್ಯಾನೇಜರ್‌ ಅಥವಾ ಸಹಾಯಕರೊಬ್ಬರು ಜತೆಗಿರಲಿದ್ದು, ಪ್ರವಾಸಿಗರ ಬೇಕು-ಬೇಡಗಳನ್ನು ಆಲಿಸಿ, ನೆರವು ನೀಡಲಿದ್ದಾರೆ ಎಂದು ಅವರು ನುಡಿದಿದ್ದಾರೆ.

    ಪ್ರವಾಸಿಗರಿಗೆ ಆದಷ್ಟು ಕಡಿಮೆ ವೆಚ್ಚದಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಸಾಧ್ಯವಾಗಬೇಕು ಎನ್ನುವ ಆಶಯದೊಂದಿಗೆ ಎಂಎಸ್‌ ಐಎಲ್‌ ಮೂಲಕ ಈ ಹೆಜ್ಜೆ ಇಡಲಾಗುತ್ತಿದೆ. ಖಾಸಗಿ ಸಂಸ್ಥೆಗಳ ದರಕ್ಕೆ ಹೋಲಿಸಿದರೆ ನಾವು ನಿಗದಿ ಪಡಿಸಿರುವ ದರ ತುಂಬಾ ಕಡಿಮೆ ಇದೆ. ಹಾಗೆಯೇ ಪ್ರತಿಯೊಂದು ಸೇವೆಯನ್ನೂ ಗುಣಮಟ್ಟದೊಂದಿಗೆ ಒದಗಿಸಲಾಗುವುದು ಎಂದು ಪಾಟೀಲ ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಎಂಎಸ್ಐಎಲ್‌ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಎಂಎಸ್ಐಎಲ್ ನಿರ್ದೇಶಕ ಚಂದ್ರಪ್ಪ, ಪ್ರವಾಸ ವಿಭಾಗದ ಮುಖ್ಯಸ್ಥ ರವಿಕುಮಾರ್ ಮುಂತಾದವರು ಭಾಗವಹಿಸಿದ್ದರು.‌

    ಎಲ್ಲೆಲ್ಲಿಗೆ ಪ್ರವಾಸ ಪ್ಯಾಕೇಜು?
    ಎಂಎಸ್‌ ಐಎಲ್‌ ಸಂಸ್ಥೆಯ ಟೂರ್ಸ್‌ ಅಂಡ್‌ ಟ್ರಾವೆಲ್ಸ್‌ ವಿಭಾಗವು ಈ ಟೂರ್‌ ಪ್ಯಾಕೇಜುಗಳನ್ನು ನಿರ್ವಹಿಸಲಿದೆ. ಇದರಡಿಯಲ್ಲಿ ಕಾಶಿ, ಅಯೋಧ್ಯೆ, ಪುರಿ, ಆದಿ ಕೈಲಾಸ ಮುಂತಾದ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳಿಗೆ ಪ್ರವಾಸಿಗರನ್ನು ಅದು ಕರೆದೊಯ್ಯಲಿದೆ. ಜೊತೆಗೆ ದುಬೈ, ಸಿಂಗಪುರ್‌, ವಿಯಟ್ನಾಂ, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್‌ ಮತ್ತು ಯೂರೋಪಿನ ಹಲವು ದೇಶಗಳಿಗೂ ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜುಗಳನ್ನು ರೂಪಿಸಿದೆ. ಈ ಪ್ರವಾಸಗಳಿಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬಹುದು.

    24/7 ಸಹಾಯವಾಣಿ ಸೌಲಭ್ಯ
    ಪ್ರವಾಸಿಗರ ಅನುಕೂಲಕ್ಕೆ ಎಂಎಸ್‌ ಐಎಲ್‌ 24/7 ಸಹಾಯವಾಣಿ ಮತ್ತು ವಾಟ್ಸ್ಯಾಪ್‌ ಸೌಲಭ್ಯವನ್ನೂ (080-45888882, 9353645921) ಹೊಂದಿದೆ. ಇದರ ನಿರ್ವಹಣೆಗಾಗಿ ಪ್ರತ್ಯೇಕ ತಂಡವೇ ಇರಲಿದೆ. ಒಂದು ನಂಬರಿನಲ್ಲಿ ಯಾರಾದರೂ ಮಾತನಾಡುತ್ತಿದ್ದರೆ, ಅದು ತಾನಾಗಿಯೇ ಮತ್ತೊಂದು ಸಂಖ್ಯೆಗೆ ಸಂಪರ್ಕ ಕಲ್ಪಿಸುವ ಕ್ಲೌಡ್‌ ಬೇಸ್ಡ್‌ ಟೆಲಿಕಾಂ ಸಿಸ್ಟಮ್‌ ಅನ್ನು ಅಳವಡಿಸಿಕೊಳ್ಳಲಾಗಿದೆ.

    ಎಂಎಸ್ಐಎಲ್ ಚಿಟ್ ಫಂಡ್ ಬಲವರ್ಧನೆ
    ಈಗಿನ ಸರಕಾರವು ಎಂಎಸ್ಐಎಲ್, ಮೈಸೂರು ಪೇಂಟ್ಸ್ & ವಾರ್ನಿಶ್, ಎನ್.ಜಿ.ಇ.ಎಫ್ ಮುಂತಾದವುಗಳನ್ನು ಲಾಭದಾಯಕವನ್ನಾಗಿ ಮಾಡುತ್ತಿದೆ. ಎಂಎಸ್ಐಎಲ್ ಸದ್ಯಕ್ಕೆ ವಾರ್ಷಿಕ 250 ಕೋಟಿ ರೂ.ಗಳ ಚಿಟ್ ಫಂಡ್ ನಡೆಸುತ್ತಿದೆ. ಇದನ್ನು ಮುಂದಿನ 5 ವರ್ಷಗಳಲ್ಲಿ ವರ್ಷಕ್ಕೆ 5,000 ಕೋಟಿ ರೂ. ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ. ಹಾಗೆಯೇ, ಸಂಸ್ಥೆಯ 200 ಮದ್ಯದ ಅಂಗಡಿಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಯಡಿ 63 ಮಳಿಗೆಗಳ ಕೆಲಸ ಮುಗಿದಿದ್ದು, ಇಲ್ಲೆಲ್ಲ ವಹಿವಾಟು ಮೂರು ಪಟ್ಟು ಹೆಚ್ಚಾಗಿದೆ. ಮೈಸೂರು ಪೇಂಟ್ಸ್ & ವಾರ್ನಿಶ್ ಮೂಲಕ ಗೃಹ ಬಳಕೆಯ ಪೇಂಟ್ ತಯಾರಿಕೆಗೂ ಗಮನ ಹರಿಸಲಾಗಿದೆ. ಹುಬ್ಬಳ್ಳಿ ಎನ್ಜಿಇಎಫ್ ದೆಹಲಿಯ ನೂತನ ಸಂಸತ್ ಭವನ ಮತ್ತು ರೈಲ್ವೆ ಇಲಾಖೆಗೆ ತನ್ನ ಟ್ರಾನ್ಸ್-ಫಾರ್ಮರುಗಳನ್ನು ಪೂರೈಸುತ್ತಿದೆ. ಬಿಇಚ್ಇಎಲ್ ಜತೆ ಒಪ್ಪಂದ ಮಾಡಿಕೊಂಡು ಅದನ್ನು ಪುನರುಜ್ಜೀವನ ಗೊಳಿಸುವ ಉದ್ದೇಶ ಇದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

     

  • ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ!

    ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ!

    ಬೆಳಗಾವಿ: ಸರ್ಕಾರಿ ಶಾಲಾ ಮಕ್ಕಳು (Govt School Students) ಬಸ್ಸಿನಲ್ಲಿ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಆದರೆ ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಮಕ್ಕಳು ವಿಮಾನದಲ್ಲಿ ಪ್ರವಾಸ (Flight Tour) ಮಾಡಿದ್ದಾರೆ.

    ಮಕ್ಕಳ ಹಾಜರಾತಿ ಹೆಚ್ಚಿಸುವ ಸಲುವಾಗಿ ಶಿಕ್ಷಕ ಪ್ರಕಾಶ್ ದೇವಣ್ಣವರ್ ಸುಮಾರು ಎರಡೂವರೆ ಲಕ್ಷ ರೂ. ಖರ್ಚು ಮಾಡಿ 17 ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ನೀಡಿದ್ದಾರೆ.

    ವಿದ್ಯಾರ್ಥಿಗಳಿಂದ ತಲಾ ಮೂರು ಸಾವಿರ ರೂ. ಹಣ ಪಡೆದ ಶಿಕ್ಷಕ ಉಳಿದ ಹಣವನ್ನು ತಾವೇ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಜೀವ ಇರುವವರೆಗೂ ದರ್ಶನ್ ನನ್ನ ಮಗನೇ: ಸುಮಲತಾ

    ಗುರುವಾರ ಸಂಜೆ ಬೆಳಗಾವಿಯಿಂದ (Belagavi) ಹೈದರಾಬಾದ್ (Hyderabad) ಹೋಗಿರುವ ಮಕ್ಕಳು ರಾಮೋಜಿ ಫಿಲ್ಮ್ ಸಿಟಿ, ಚಾರ್ ಮಿನಾರ್, ಗೋಲ್ಕೊಂಡ ಸೇರಿ ಹಲವು ಸ್ಥಳಗಳನ್ನು ನೋಡಿದ್ದಾರೆ. ಶನಿವಾರ  ಸಂಜೆ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಬೆಳಗಾವಿಗೆ ವಾಪಸ್‌ ಆಗಲಿದ್ದಾರೆ.

     

  • ಪ್ರವಾಸಿಗರಿಲ್ಲದೇ ಪರದಾಟ- ಭಾರತದಲ್ಲಿ ರೋಡ್‌ ಶೋಗೆ ಮಾಲ್ಡೀವ್ಸ್‌ ಪ್ಲಾನ್‌

    ಪ್ರವಾಸಿಗರಿಲ್ಲದೇ ಪರದಾಟ- ಭಾರತದಲ್ಲಿ ರೋಡ್‌ ಶೋಗೆ ಮಾಲ್ಡೀವ್ಸ್‌ ಪ್ಲಾನ್‌

    ಮಾಲೆ:‌ ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಮುನಿಸಿನ ನಡುವೆ ಪ್ರವಾಸಿಗರನ್ನು ಮರಳಿ ಸೆಳೆಯಲು ಭಾರತದಲ್ಲಿ ರೋಡ್‌ಶೋಗಳನ್ನು ನಡೆಸುವುದಾಗಿ ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆ (Maldivian tourism body) ಹೇಳಿದೆ.

    ಈ ಸಂಬಂಧ ಮಾಲ್ಡೀವ್ಸ್ ಅಸೋಸಿಯೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ಮತ್ತು ಟೂರ್ ಆಪರೇಟರ್ಸ್ (MATATO) ಅವರು ಮಾಲೆಯಲ್ಲಿ ಭಾರತೀಯ ಹೈಕಮಿಷನರ್ ಮುನು ಮಹಾವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದ ಪ್ರಮುಖ ನಗರಗಳಲ್ಲಿ ಸಮಗ್ರ ರೋಡ್ ಶೋಗಳನ್ನು (Road Show In India) ನಡೆಸುವುದರ ವಿಚಾರವಾಗಿ ಪ್ರಸ್ತಾಪಿಸಿದ್ದಾರೆ.

    ಇತ್ತೀಚೆಗೆ ಗಮನಾರ್ಹ ಕುಸಿತ ಕಂಡ ಪ್ರವಾಸೋದ್ಯಮ ಸಂಸ್ಥೆಯನ್ನು ಮತ್ತಷ್ಟು ಉತ್ತೇಜಿಸಲು ಭಾರತದಾದ್ಯಂತದ ಪ್ರಮುಖ ಪ್ರವಾಸಿ ಸಂಘಗಳು ಮತ್ತು ಉದ್ಯಮದ ಪಾಲುದಾರರೊಂದಿಗೆ ಪಾಲುದಾರಿಕೆಯನ್ನು ಹೊಂದಲು ಅವರು ಎದುರು ನೋಡುತ್ತಿದ್ದಾರೆ ಎಂದು MATATO ತಿಳಿಸಿರುವುದಾಗಿ ವರದಿಯಾಗಿದೆ.

    ಪ್ರಸ್ತುತ ಭಾರತದ ಪ್ರಮುಖ ನಗರಗಳಲ್ಲಿ ಸಮಗ್ರ ರೋಡ್ ಶೋಗಳನ್ನು ಪ್ರಾರಂಭಿಸಲು ಮತ್ತು ಮುಂಬರುವ ತಿಂಗಳುಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಯೋಜನೆಗಳು ನಡೆಯುತ್ತಿವೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.  ಇದನ್ನೂ ಓದಿ: ಮೋದಿಯನ್ನು ಟೀಕಿಸಿದ ಮಾಲ್ಡೀವ್ಸ್‌ಗೆ ಶಾಕ್ – ಭಾರತೀಯ ಪ್ರವಾಸಿಗರ ಸಂಖ್ಯೆ 33%ರಷ್ಟು ಕುಸಿತ

    ಪ್ರವಾಸಿಗರ ಕುಸಿತ ಏಕೆ..?: ಜನವರಿ 6 ರಂದು ಲಕ್ಷ ದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಲ್ಡೀವ್ಸ್‌ನ ಮೂವರು ಸಚಿವರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ಗೆ ಭೇಟಿ ನೀಡುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ 6ನೇ ಸ್ಥಾನಕ್ಕೆ ಕುಸಿದಿತ್ತು.

    ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಪ್ರಸ್ತುತ ಮಾಲ್ಡೀವ್ಸ್‌ಗೆ ಭೇಟಿ ನೀಡುವವರ ಪಟ್ಟಿಯಲ್ಲಿ ಚೀನಾ 71,995 ಪ್ರವಾಸಿಗರೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಇದರ ನಂತರದಲ್ಲಿ ಬ್ರಿಟನ್‌ (66,999), ರಷ್ಯಾ (66,803), ಇಟಲಿ (61,379), ಜರ್ಮನಿ (52,256) ದೇಶಗಳಿವೆ. ಭಾರತ 37,417 ಪ್ರವಾಸಿಗರೊಂದಿಗೆ 6ನೇ ಸ್ಥಾನದಲ್ಲಿದೆ.

  • ಮುತ್ತತ್ತಿಯಲ್ಲಿ ಮೈಸೂರಿನ ನಾಲ್ವರು ಜಲಸಮಾಧಿ

    ಮುತ್ತತ್ತಿಯಲ್ಲಿ ಮೈಸೂರಿನ ನಾಲ್ವರು ಜಲಸಮಾಧಿ

    ಮಂಡ್ಯ: ಮುತ್ತತ್ತಿಗೆ (Muthathi) ಪ್ರವಾಸ ಬಂದಿದ್ದ ಮೈಸೂರಿನ (Mysuru) ನಾಲ್ವರು ಕಾವೇರಿ ನದಿಯಲ್ಲಿ (Cauvery River) ಈಜಲು ಹೋಗಿ ಜಲಸಮಾಧಿಯಾಗಿದ್ದಾರೆ.

    ದುರಂತದಲ್ಲಿ ತಂದೆ ನಾಗೇಶ್(40), ಮಗ ಭರತ್(17) ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹ ಪತ್ತೆ, ಮತ್ತಿಬ್ಬರ ಶವಕ್ಕಾಗಿ ಹುಡುಕಾಟ ನಡೆಯುತ್ತಿದ್ದು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಪಾಲಿಕೆ ಮೇಯರ್ ಚುನಾವಣೆಗೆ ಬಳ್ಳಾರಿಯಲ್ಲಿ ಚಿನ್ನ, ಬೆಳ್ಳಿ ಗಿಫ್ಟ್ ಪಾಲಿಟಿಕ್ಸ್

    ಮೈಸೂರಿನ ಕನಕಗಿರಿಯಿಂದ ಮಳವಳ್ಳಿ ತಾಲೂಕಿನ ಮುತ್ತತ್ತಿಗೆ ಒಂದೇ ಬಸ್‌ನಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿ 40 ಮಂದಿ ಪ್ರವಾಸ ಬಂದಿದ್ದರು. ನದಿಯಲ್ಲಿ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.