Tag: tooth

  • ಹಲ್ಲು ವಕ್ರವಾಗಿದೆ ಎಂದು ಮದುವೆಯಾದ 5 ತಿಂಗಳಿಗೆ ತಲಾಖ್ ಕೊಟ್ಟ

    ಹಲ್ಲು ವಕ್ರವಾಗಿದೆ ಎಂದು ಮದುವೆಯಾದ 5 ತಿಂಗಳಿಗೆ ತಲಾಖ್ ಕೊಟ್ಟ

    ಹೈದರಾಬಾದ್: ಪತ್ನಿಯ ಹಲ್ಲು ವಕ್ರವಾಗಿದೆ ಎಂದು ಪತಿಯೊಬ್ಬ ತಾನು ಮದುವೆಯಾದ ಐದೇ ತಿಂಗಳಿಗೆ ತಲಾಖ್ ನೀಡಿರುವ ಘಟನೆ ಹೈದರಾಬಾದ್ ಕುಶೈಗುಡಾದಲ್ಲಿ ನಡೆದಿದೆ.

    ಮುಸ್ತಾಫಾ ಮತ್ತು ರುಖ್ಸಾನಾ ಬೇಗಂ ಜೂನ್ 27 ರಂದು ಮದುವೆಯಾಗಿದ್ದು, ಮದುವೆಯಾದ ಐದೇ ತಿಂಗಳಿಗೆ ಮುಸ್ತಾಫಾ ರುಖ್ಸಾನಾ ಬೇಗಂ ಹಲ್ಲು ವಕ್ರವಾಗಿದೆ. ಈಕೆಯ ಜೊತೆ ಬಾಳಲು ನನಗೆ ಇಷ್ಟವಾಗುತ್ತಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ್ದಾನೆ.

    ಈಗ ಈ ವಿಚಾರವಾಗಿ ಪತಿ ಮುಸ್ತಾಫಾ ವಿರುದ್ಧ ರುಖ್ಸಾನಾ ಬೇಗಂ ದೂರು ನೀಡಿದ್ದು, ಮುಸ್ತಾಫಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಾಯ್ದೆಯ ಸೆಕ್ಷನ್ 498 ಎ, ವರದಕ್ಷಿಣೆ ಕಾಯ್ದೆ ಮತ್ತು ತ್ರಿವಳಿ ತಲಾಖ್ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಸರ್ಕಲ್ ಇನ್ಸ್ ಪೆಕ್ಟರ್ ಕೆ, ಚಂದ್ರಶೇಖರ್, ಆಕೆ ವರದಕ್ಷಿಣೆ ತಂದಿಲ್ಲ ಎಂದು ತಲಾಖ್ ನೀಡಿದ್ದಾನೆ. ಆದರೆ ಆಕೆಯ ಹಲ್ಲು ವಕ್ರವಾಗಿಯೇ ಎಂದು ಕಾರಣ ನೀಡುತ್ತಿದ್ದಾನೆ ಎಂದು ಹೇಳಿದ್ದಾರೆ.

    ನಮ್ಮ ಮದುವೆಯ ಸಮಯದಲ್ಲಿ ಮುಸ್ತಾಫಾ ಕುಟುಂಬದವರು ತುಂಬ ವರದಕ್ಷಿಣೆ ಕೇಳಿದ್ದರು. ಅದರಂತೆ ನಮ್ಮ ಮನೆಯವರು ನೀಡಿದ್ದರು. ಆದರೆ ಮದುವೆ ನಂತರ ನನ್ನ ಪತಿ ಮತ್ತು ಆತನ ಮನೆಯವರು ಸೇರಿಕೊಂಡು ನನಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ನಂತರ ಮುಸ್ತಾಫಾ ನಮ್ಮ ಮನೆಗೆ ಬಂದು ನನ್ನ ತಮ್ಮ ಬೈಕನ್ನು ತೆಗೆದುಕೊಂಡು ಬಂದಿದ್ದರು ಎಂದು ರುಖ್ಸಾನಾ ಬೇಗಂ ಪೊಲೀಸರಿಗೆ ಹೇಳಿದ್ದಾಳೆ.

    ವರದಕ್ಷಿಣೆ ವಿಚಾರವಾಗಿ ನನ್ನ ಗಂಡನ ಮನೆಯವರು ನಿರಂತರವಾಗಿ ಹಿಂಸಿಸುತ್ತಿದ್ದರು. ನನ್ನ ಗಂಡನಿಗೆ ನನ್ನ ಹಲ್ಲು ವಕ್ರವಾಗಿ ಇರುವುದು ಇಷ್ಟವಿರಲಿಲ್ಲ. ಯಾವುಗಲೂ ಅ ವಿಚಾರದಲ್ಲಿ ನನ್ನನ್ನು ಬೈಯುತ್ತಿದ್ದರು. ವರದಕ್ಷಿಣೆ ತೆಗೆದುಕೊಂಡು ಬಾರದಕ್ಕೆ ನನ್ನನ್ನು ಒಂದು ಕೋಣೆಯಲ್ಲಿ 15 ದಿನ ಕೂಡಿ ಹಾಕಿದ್ದರು. ಆ ಸಮಯದಲ್ಲಿ ನನ್ನ ಆರೋಗ್ಯ ಹದಗೆಟ್ಟ ಕಾರಣ ನನ್ನನ್ನು ತವರು ಮನೆಗೆ ಬಿಟ್ಟು ಹೋದರು ಎಂದು ರುಖ್ಸಾನ ಹೇಳಿದ್ದಾಳೆ.

    ತವರು ಮನೆಗೆ ಬಂದ ನಾನು ಸುಧಾರಿಸಿಕೊಂಡು ಮತ್ತೆ ಗಂಡನ ಮನೆಗೆ ಹೋದಾಗ ನಿನ್ನ ಹಲ್ಲು ವಕ್ರವಾಗಿದೆ. ನನಗೆ ನೀನು ಇಷ್ಟವಿಲ್ಲ ಎಂದು ಹೇಳಿ ಮುಸ್ತಾಫಾ ಮೊಬೈಲ್ ಫೋನಿನಲ್ಲೇ ತಲಾಖ್ ನೀಡಿದರು. ಈಗ ನಾನು ಈ ವಿಚಾರವಾಗಿ ಕುಶೈಗುಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನನಗೆ ಈ ಪ್ರಕರಣದಲ್ಲಿ ನ್ಯಾಯ ಬೇಕು ಎಂದು ರುಖ್ಸಾನ ಮನವಿ ಮಾಡಿದ್ದಾಳೆ.

  • ಟೈಗರ್ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಿದ ವೈದ್ಯರು

    ಟೈಗರ್ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಿದ ವೈದ್ಯರು

    ಬರ್ಲಿನ್: ಇಟಾಲಿಯನ್ ಕಳ್ಳಸಾಗಾಣಿಕೆದಾರರಿಂದ 2013ರಲ್ಲಿ ರಕ್ಷಿಸಿದ್ದ ಬಂಗಾಳದ ಟೈಗರ್ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಲಾಗಿದೆ.

    ಕಾರಾ ಇದೇ ವರ್ಷ ಆಗಸ್ಟ್ ನಲ್ಲಿ ಆಟಿಕೆ ಅಗಿಯುವಾಗ ಒಂದು ಕೋರೆಹಲ್ಲು ಮುರಿದಿತ್ತು. ಇದರಿಂದಾಗಿ ಮೂಳೆ ಇರುವ ಮಾಂಸವನ್ನು ತಿನ್ನಲು ಭಾರೀ ಸಮಸ್ಯೆ ಎದುರಿಸುತ್ತಿದ್ದಳು. ಹೀಗಾಗಿ ಜರ್ಮನಿಯ ಮೆಸ್ವೀಲರ್ ನಗರದಲ್ಲಿ ಡೆನ್ಮಾರ್ಕ್ ನ ತಜ್ಞರು ಶಸ್ತ್ರಚಿಕಿತ್ಸೆ ಮೂಲಕ ಬಂಗಾಳದ ಹೆಣ್ಣು ಹುಲಿ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಿದ್ದಾರೆ. ಶಸ್ತ್ರಚಿಕಿತ್ಸೆಯಾದ ಮೂರು ವಾರಗಳ ನಂತರ ಕಾರಾ ಸಾಮಾನ್ಯ ಸ್ಥಿತಿಗೆ ಮರಳಿದ್ದಾಳೆ.

    ಡ್ಯಾನಿಶ್ ದಂತವೈದ್ಯರ ತಂಡವು ಕಾರಾಳ ದಂತ ಶಸ್ತ್ರಚಿಕಿತ್ಸೆಯನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಿದೆ. ಆಗಸ್ಟ್ ಮೊದಲ ವಾರದಲ್ಲಿ ಮುರಿದ ಹಲ್ಲು ಬದಲಿಸಲು ಎರಡನೇ ಹಲ್ಲು ತಯಾರಿಸಲಾಗಿತ್ತು. ಈ ಶಸ್ತ್ರಚಿಕಿತ್ಸೆಯು ಎರಡು ಗಂಟೆ ತೆಗೆದುಕೊಂಡಿತ್ತು. ಎರಡನೇ ಬಾರಿಗೆ ಚಿನ್ನದ ಹಲ್ಲನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಅಳವಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮೊದಲು ನಾಲ್ಕು ಗಂಟೆ, ಬಳಿಕ ಒಂದೂವರೆ ಗಂಟೆ ಬೇಕಾಯಿತು.

    3 ವಾರ ಚಿನ್ನದ ಹಲ್ಲು ನೆಕ್ಕಿದ ಕಾರಾ:
    ಮೂರು ವಾರಗಳ ನಂತರ ನಿಜವಾದ ಹಲ್ಲಿನ ಬದಲಿಗೆ ಚಿನ್ನದ ಹಲ್ಲು ಹೊಂದಿಸಲಾಗಿದೆ. ಈ ಸಮಯದಲ್ಲಿ ಅವಳಿಗೆ ಮೂಳೆ ಇಲ್ಲದೆ ಮಾಂಸ ತಿನ್ನಲು ನೀಡಲಾಗಿತ್ತು. ಆಗ ಹಲ್ಲುಗಳಿಲ್ಲದ ಸಮಸ್ಯೆ ಎದುರಿಸಿತ್ತು. ಹಲ್ಲುಗಳನ್ನು ಅಳವಡಿಸಿದ ನಂತರ ಕಾರಾ ಸುಮಾರು ಮೂರು ವಾರಗಳ ಕಾಲ ಅವುಗಳನ್ನು ನೆಕ್ಕುತ್ತಿದ್ದಳು. ಇದನ್ನು ಆಕೆಯ ಆರೈಕೆದಾರರು ಗಮನಿಸಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ ಜೀವಶಾಸ್ತ್ರಜ್ಞ ಇವಾ ಲಿಂಡೆನ್ಸ್‍ಮಿಡ್ಟ್, ನಮ್ಮ ಕಾರ್ಯ ಸಂತೋಷ ತಂದಿದೆ. ಈಗ ಕಾರಾ ಮಾಂಸವನ್ನು ಸರಿಯಾಗಿ ಕತ್ತರಿಸಿ ತಿನ್ನಬಹುದು. ಚಿನ್ನದ ಹಲ್ಲು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅವಳು ತನ್ನ ಹೊಸ ಚಿನ್ನದ ಹಲ್ಲುಗಳನ್ನು ತೋರಿಸುತ್ತಾ ನಗುವಂತೆ ಕಾಣಿಸುತ್ತಾಳೆ. ಕಾರಾಳ ಹಲ್ಲುಗಳು ಸರಿಯಾಗಿ ಸೇರಿಕೊಂಡಿವೆ ಎಂದು ಕ್ಷ-ಕಿರಣದಲ್ಲಿ ನಮಗೆ ತಿಳಿದಿದೆ ಎಂದು ತಿಳಿಸಿದ್ದಾರೆ.

    ನಾವು ವಿಶ್ವಪ್ರಸಿದ್ಧ ದಂತವೈದ್ಯರ ತಂಡವನ್ನು ಹೊಂದಿದ್ದೇವೆ. ಹೀಗಾಗಿ ಶಸ್ತ್ರಚಿಕಿತ್ಸೆ ಸುಲಭವಾಗಿದೆ. ತಜ್ಞರಲ್ಲಿ ವಿಯೆನ್ನಾ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಪಶುವೈದ್ಯರು ಮತ್ತು ದಂತವೈದ್ಯರಾದ ಜೇನ್ ರುಹಾನು ಮತ್ತು ಡಾ. ಜೋಹಾನ್ನಾ ಪನ್ನರ್ ಸೇರಿದ್ದಾರೆ ಎಂದು ಇವಾ ಲಿಂಡೆನ್ಸ್‍ಮಿಡ್ಟ್ ಮಾಹಿತಿ ನೀಡಿದ್ದಾರೆ.

  • ಮಲೆಮಹದೇಶ್ವರ ಬೆಟ್ಟದಲ್ಲಿ ಕಾಡಾನೆಗೆ ಗುಂಡಿಟ್ಟ ಪಾಪಿಗಳು..!

    ಮಲೆಮಹದೇಶ್ವರ ಬೆಟ್ಟದಲ್ಲಿ ಕಾಡಾನೆಗೆ ಗುಂಡಿಟ್ಟ ಪಾಪಿಗಳು..!

    ಸಾಂದರ್ಭಿಕ ಚಿತ್ರ

    ಚಾಮರಾಜನಗರ: ದಂತಕ್ಕಾಗಿ ಕಾಡೆನೆಯೊಂದಕ್ಕೆ ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದು ಆನೆಯ ಎರಡು ದಂತಗಳನ್ನು ಅಪಹರಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಧಾಮದ ಕೊತ್ತನೂರು ವಲಯದ ಚಿಕ್ಕಲ್ಲೂರು ಗಸ್ತಿನಲ್ಲಿ ಜರುಗಿದೆ.

    ವೀರಪ್ಪನ್ ಅಟ್ಟಹಾಸದ ನಂತರ ಇದೀಗ ಮತ್ತೆ ಮಲೆಮಹದೇಶ್ವರ ಬೆಟ್ಟದ ಭಾಗದಲ್ಲಿ ದಂತ ಚೋರರು ಹುಟ್ಟಿಕೊಂಡಿದ್ದಾರೆ. ಸುಮಾರು 50 ವರ್ಷದ ಗಂಡಾನೆಯ ದಂತಕ್ಕಾಗಿ ಚೋರರು ನಾಡಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ.

    ಆನೆಯ ದಂತದ ಭಾಗಕ್ಕೆ ಆ್ಯಸಿಡ್ ಹಾಕಿ ಎರಡು ದಂತವನ್ನು ತೆಗೆದುಕೊಂಡು ಹೋಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಆನೆಯ ಕಳೆ ಬರಹ ಪತ್ತೆಯಾಗಿದೆ. 2015ರಿಂದ ಇದೂವರೆಗೆ 5 ಆನೆಗಳನ್ನು ಕೊಂದು ದಂತಗಳನ್ನು ದಂತ ಚೋರರು ಅಪಹರಿಸಿದ್ದಾರೆ.

    ಒಟ್ಟಿನಲ್ಲಿ ವೀರಪ್ಪನ್ ಬಳಿಕ ಮತ್ತೆ ದಂತಚೋರರು ಆನೆಗಳನ್ನು ಕೊಲ್ಲುತ್ತಿರೋದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv