Tag: Tomato Market

  • ರಾಜ್ಯಕ್ಕೂ ತಟ್ಟಿದ ಬಾಂಗ್ಲಾ ಆರ್ಥಿಕ ಬಿಕ್ಕಟ್ಟಿನ ಎಫೆಕ್ಟ್ – ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ದಿಢೀರ್ ಕುಸಿತ

    ರಾಜ್ಯಕ್ಕೂ ತಟ್ಟಿದ ಬಾಂಗ್ಲಾ ಆರ್ಥಿಕ ಬಿಕ್ಕಟ್ಟಿನ ಎಫೆಕ್ಟ್ – ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ದಿಢೀರ್ ಕುಸಿತ

    – ಕೋಲಾರದ ಟೊಮೆಟೋ ಬೆಳೆಗಾರರು ಕಂಗಾಲು

    ಕೋಲಾರ: ಭಾರತದ ನೆರೆಯ ದೇಶ ಬಾಂಗ್ಲಾದೇಶದಲ್ಲಿ (Bangladesh Crisis) ಉದ್ಭವವಾಗಿರುವ ಅರಾಜಕತೆ, ಆಂತರಿಕ ಕಲಹ, ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಏಷ್ಯಾದ ಎರಡನೇ ಅತಿದೊಡ್ಡ ಟೊಮೆಟೋ (Tomato) ಮಾರುಕಟ್ಟೆಗೆ ತಟ್ಟಿದೆ. ಪರಿಣಾಮ ಕೋಲಾರದ ಟೊಮೆಟೋ ಬೆಳೆಗಾರರು ಮತ್ತು ವ್ಯಾಪಾರಸ್ಥರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಟೊಮೆಟೋ ಬೆಲೆ ಕೂಡಾ ತೀವ್ರ ಕುಸಿತ ಕಂಡಿದೆ.

    ಕಳೆದ ಒಂದೂವರೆ ತಿಂಗಳಿಂದ ಭಾರತದ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದರ ಎಫೆಕ್ಟ್ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ (Kolar) ಎಂಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕುಸಿತ ಕಂಡಿದೆ. ಪ್ರತಿನಿತ್ಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ಬಾಂಗ್ಲಾದೇಶಕ್ಕೆ 800-1000 ಟನ್ ಟೊಮೆಟೋ ರಪ್ತು ಮಾಡಲಾಗುತ್ತಿತ್ತು. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಕೇವಲ 50-60 ಟನ್ ಟೊಮೆಟೋ ರಫ್ತಾಗುತ್ತಿದೆ. ಬೇಡಿಕೆ ಇಲ್ಲದೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದೆ. ಇದನ್ನೂ ಓದಿ: ಇಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ – ಹೊರರೋಗಿಗಳಿಗಿಲ್ಲ ಚಿಕಿತ್ಸೆ

    ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ಆಗಸ್ಟ್ ತಿಂಗಳಲ್ಲಿ ಬಾಕ್ಸ್ ಟೊಮೆಟೋ ಬೆಲೆ 800-900 ಇತ್ತು. ಇವತ್ತು ಮಾರುಕಟ್ಟೆಯಲ್ಲಿ ಬೆಲೆ ಕೇವಲ 300-400 ರೂಪಾಯಿಗೆ ಇಳಿದಿದೆ. ಒಂದುವೇಳೆ ವ್ಯಾಪಾರಸ್ಥರೊಂದಿಗೆ ಸಂಪರ್ಕ ಕಡಿತವಾದರೆ ಬಾಕಿ ಬರಬೇಕಾಗಿರುವ ಕೋಟ್ಯಂತರ ರೂಪಾಯಿ ಹಣ ಬಾರದಾಗುತ್ತದೆ. ನಾವು ನಷ್ಟ ಅನುಭವಿಸುವ ಸ್ಥಿತಿ ಎದುರಾಗುತ್ತದೆ ಎಂದು ಬಾಂಗ್ಲಾದೊಂದಿಗೆ ವ್ಯವಹಾರ ನಡೆಸುತ್ತಿರುವ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

    ಬಾಂಗ್ಲಾದೊಂದಿಗೆ ಟೊಮೆಟೋ ವಹಿವಾಟು ನಡೆಸುತ್ತಿದ್ದ ವ್ಯಾಪಾರಸ್ಥರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಾರು ತಿಂಗಳಿಂದ ವ್ಯಾಪಾರ ವಹಿವಾಟು ನಡೆಸಿರುವ ಸುಮಾರು 50-60 ಕೋಟಿ ರೂ. ಬಾಕಿ ಬರಬೇಕಿದೆ. ಸದ್ಯದ ಬಾಂಗ್ಲಾದೇಶದ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಎರಡು ಲಕ್ಷಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡುವಂತಿಲ್ಲ. ಆದರೂ ಕೂಡಾ ಅವರೊಂದಿಗೆ ವಹಿವಾಟು ಸಂಪರ್ಕ ಕಡಿದುಕೊಳ್ಳಬಾರದು ಎನ್ನುವ ಕಾರಣಕ್ಕಾಗಿ ಈಗಲೂ ನಿತ್ಯ ಒಂದೆರಡು ಲಾರಿ ಬಾಂಗ್ಲಾ ದೇಶಕ್ಕೆ ಟೊಮೆಟೋ ರಪ್ತು ಮಾಡಲಾಗುತ್ತಿದೆ. ಅಂದಾಜಿನ ಪ್ರಕಾರ 200 ರಿಂದ 300 ಕೋಟಿ ಟೊಮೆಟೋ ಹಣ ಬಾಕಿ ಬರಬೇಕಾಗಿದೆ ಎಂದರು. ಇದನ್ನೂ ಓದಿ: ಸುಡಾನ್ ಅರೆಸೇನಾ ಪಡೆಯಿಂದ ನಾಗರಿಕರ ಮೇಲೆ ದಾಳಿ – 80 ಜನರ ಬಲಿ

  • ಕೋಟೆನಾಡಿನ ಟೊಮೆಟೊ ಬೆಳೆಗಾರರಲ್ಲಿ ಉತ್ಸಾಹ ಮೂಡಿಸಿದ ಮಾರುಕಟ್ಟೆ

    ಕೋಟೆನಾಡಿನ ಟೊಮೆಟೊ ಬೆಳೆಗಾರರಲ್ಲಿ ಉತ್ಸಾಹ ಮೂಡಿಸಿದ ಮಾರುಕಟ್ಟೆ

    ಚಿತ್ರದುರ್ಗ: ಟೊಮೆಟೊ ಬೆಳೆದು ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿ, ಟೊಮೆಟೊ ಸಹವಾಸವೇ ಬೇಡವೆಂದು ಸುಮ್ಮನಾಗಿದ್ದ ಜಿಲ್ಲೆಯ ರೈತರಲ್ಲಿ ಖಾಸಗಿ ಮಾರುಕಟ್ಟೆಯೊಂದು ಮತ್ತೆ ಉತ್ಸಾಹ ಮೂಡಿಸಿದೆ.

    ಜಿಲ್ಲೆಯ ಚಳ್ಳಕೆರೆ ತಾಲೂಕು ಚಿಕ್ಕಮ್ಮನಹಳ್ಳಿ ಬಳಿ ಖಾಸಗಿ ಮಾರುಕಟ್ಟೆಯೊಂದು ನಿನ್ನೆಯಿಂದ ಆರಂಭವಾಗಿದೆ. ಹೀಗಾಗಿ ಕಳೆದ 18 ತಿಂಗಳಿಂದ ಟೊಮೆಟೊ ಬೆಳೆದು, ಮಾರಾಟ ಮಾಡಲಾಗದೆ, ಹೊಲದಲ್ಲೇ ಕೊಳೆತು ಹೋಗ್ತಿದ್ದ ಟೊಮೆಟೊದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಕೊರೊನಾ ಮಹಾಮಾರಿ ಆರ್ಭಟದ ವೇಳೆ ಎದುರಾದ ಲಾಕ್‍ಡೌನ್ ನಿಂದಾಗಿ ಸಹ ಕೋಲಾರದ ಮಾರುಕಟ್ಟೆಗೆ ಟೊಮೆಟೊ ಸಾಗಿಸಲಾಗದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ, ಈ ಭಾಗದ ರೈತರು ಕಂಗಾಲಾಗಿದ್ದರು. ಸರ್ಕಾರದಿಂದ ಪರಿಹಾರ ಬರುವುದೆಂಬ ನಿರೀಕ್ಷೆಯಲ್ಲಿದ್ದರು.

    ಈ ವೇಳೆ ಆಂಧ್ರಪ್ರದೇಶದ ವರ್ತಕರಾದ ಅನಂತರೆಡ್ಡಿ ಹಾಗೂ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ರೈತ ವೆಂಕಟೇಶ ರೆಡ್ಡಿ ನೇತೃತ್ವದಲ್ಲಿ ಚಿಕ್ಕಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಟೊಮೆಟೊ ಮಾರುಕಟ್ಟೆ ನಿನ್ನೆಯಿಂದ ಆರಂಭವಾಗಿದ್ದು, ರಾಜ್ಯದ ದಾವಣಗೆರೆ, ತುಮಕೂರು, ಬಳ್ಳಾರಿ ಜಿಲ್ಲೆಗಳು ಸೇರಿದಂತೆ ಪಕ್ಕದ ಆಂಧ್ರ ಪ್ರದೇಶದ ರೈತರು ಕೂಡ ಈ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ.

    ಈ ಮಾರುಕಟ್ಟೆಯಿಂದಾಗಿ ರೈತರಿಗೆ ತಗುಲುತಿದ್ದ ದುಬಾರಿ ಸಾರಿಗೆ ವೆಚ್ಚ ಉಳಿತಾಯವಾಗಲಿದೆ. ಟೊಮೆಟೊ ಗುಣಮಟ್ಟಕ್ಕೆ ತಕ್ಕಂತೆ ಸೂಕ್ತ ಬೆಲೆ ಸಿಗುತ್ತಿರುವ ಪರಿಣಾಮ ಉತ್ತಮ ಲಾಭವಾಗುತ್ತಿದೆ ಎಂದು ಅನ್ನದಾತರು ಸಂತಸ ವ್ಯಕ್ತಪಡಿಸಿದ್ದಾರೆ.