Tag: Tom Hanks

  • ವಿಶ್ವಾದ್ಯಂತ 1.26 ಲಕ್ಷ ಜನರಲ್ಲಿ ಕೊರೊನಾ- ಹಾಲಿವುಡ್ ನಟ, ಪತ್ನಿಗೂ ಸೋಂಕು

    ವಿಶ್ವಾದ್ಯಂತ 1.26 ಲಕ್ಷ ಜನರಲ್ಲಿ ಕೊರೊನಾ- ಹಾಲಿವುಡ್ ನಟ, ಪತ್ನಿಗೂ ಸೋಂಕು

    – ವಿಶ್ವ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಡಬ್ಲ್ಯುಎಚ್‍ಓ

    ನವದೆಹಲಿ: ಮಹಾಮಾರಿ ಕೊರೊನಾಗೆ ವಿಶ್ವವೇ ತಲ್ಲಣಿಸಿದ್ದು, ದಿಗ್ಬಂಧನ ಹಾಕಿದಂತಾಗಿದೆ. ಇದೀಗ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿಗೂ ಕೊರೊನಾ ಸೋಂಕು ತಗಲಿರುವುದು ಖಚಿತವಾಗಿದ್ದು, ಪ್ರಪಂಚದಾದ್ಯಂತ ಒಟ್ಟು 1,26,293 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

    ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಅವರಿಗೆ ಸೋಂಕು ತಗುಲಿರುವುದನ್ನು ಖಚಿತವಾಗುತ್ತಿದ್ದಂತೆ ಇವರ ಪತ್ನಿ, ನಟಿ ರಿಟಾ ವಿಲ್ಸನ್ ಅವರಿಗೂ ಕೊರೊನಾ ತಗುಲಿರುವುದು ದೃಢಪಟ್ಟಿದೆ. ನಿನ್ನೆಯಷ್ಟೇ ಬ್ರಿಟನ್‍ನ ಆರೋಗ್ಯ ಸಚಿವೆಗೆ ಕೊರೊನಾ ತಗುಲಿರುವುದು ವರದಿಯಾಗಿತ್ತು. ಇದೀಗ ಹಾಲಿವುಡ್ ನಟ ಹಾಗೂ ಪತ್ನಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿಶ್ವಾದ್ಯಂತ ಸೋಂಕು ಆವರಿಸುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಓ) ಇದನ್ನು ವಿಶ್ವ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದೆ.

    ವಿಶ್ವದಾದ್ಯಂತ ಒಟ್ಟು 1,26,293 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 4,633 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ನಿನ್ನೆ 61 ಜನರಿಗೆ ಸೋಂಕಿರುವುದು ಪತ್ತೆಯಾಗಿತ್ತು. ಇಂದು 67ಕ್ಕೆ ಹೆಚ್ಚಳವಾಗಿದೆ ಎಂಬ ವರದಿ ಬಂದಿದೆ. ಇನ್ನು ರಾಜ್ಯದಲ್ಲಿ ನಾಲ್ವರಿಗೆ ಕೊರೊನಾ ತಗುಲಿದ್ದು, ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸಭೆ ನಡೆಸಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಮಾರ್ಚ್ 15ರ ವರೆಗೆ ವೀಸಾಗಳನ್ನು ಕ್ಯಾನ್ಸಲ್ ಮಾಡಿ ಆದೇಶ ಹೊರಡಿಸಿದ್ದಾರೆ. ಡಿಪ್ಲೊಮ್ಯಾಟಿಕ್, ಅಫೀಶಿಯಲ್, ಯುಎನ್ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ ಹಾಗೂ ಪ್ರಾಜೆಕ್ಟ್ ವಿಸಾಗಳನ್ನು ಹೊರತುಪಡಿಸಿ ಉಳಿದೆಲ್ಲ ವೀಸಾಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದು ಮಾರ್ಚ್ 13ರ ಮಧ್ಯರಾತ್ರಿಯಿಂದ ಜಾರಿಯಾಗಲಿದೆ.

    ಮಹಾರಾಷ್ಟ್ರ ಹಾಗೂ ಜೈಪುರದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಎರಡು ದಾಖಲಾದರೆ, ಪುಣೆಯೊಂದರಲ್ಲೇ 8 ಪ್ರಕರಣಗಳು ಪತ್ತೆಯಾಗಿವೆ. ಜೈಪುರದಲ್ಲಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿದ್ದು, ಇಟಲಿಯ ಇಬ್ಬರಿಗೆ ಹಾಗೂ ದುಬೈನಿಂದ ವಾಪಾಸಾಗಿರುವ ಭಾರತೀಯರೊಬ್ಬರಲ್ಲಿ ಕಾಣಿಸಿಕೊಂಡಿದೆ.

    ರಾಜ್ಯದಲ್ಲಿಯೂ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ವಿಶೇಷ ಕಠಿಣ ಕಾನೂನು ಜಾರಿ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಸೆಕ್ಷನ್ 2,3 ಮತ್ತು 4ರಡಿ ರಾಜ್ಯ ಸರ್ಕಾರ `ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್ -19 ನಿಯಂತ್ರಣ 2020′ (Karnataka Epidemic Diseases, COVID-19 Regulations, 2020) ಹೆಸರಿನಲ್ಲಿ ನಿಯಂತ್ರಣ ಕ್ರಮವನ್ನು ಪ್ರಕಟಿಸಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಠಿಣ ನಿಯಮವನ್ನು ಜಾರಿ ಮಾಡಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದರೆ ಈ ನಿಯಮ ಜಾರಿಯಾಗಲಿದೆ. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ 13 ರೂಲ್ಸ್