Tag: Tom and Jerry

  • ಸ್ನೇಹ, ಪ್ರೀತಿಯ ತೊಳಲಾಟದಲ್ಲಿ ಬದುಕಿನ ವಾಸ್ತವತೆಯನ್ನು ತಿಳಿಸುವ ಟಾಮ್ ಅಂಡ್ ಜೆರ್ರಿ

    ಸ್ನೇಹ, ಪ್ರೀತಿಯ ತೊಳಲಾಟದಲ್ಲಿ ಬದುಕಿನ ವಾಸ್ತವತೆಯನ್ನು ತಿಳಿಸುವ ಟಾಮ್ ಅಂಡ್ ಜೆರ್ರಿ

    ಚಿತ್ರ: ಟಾಮ್ ಅಂಡ್ ಜೆರ್ರಿ
    ನಿರ್ದೇಶನ: ರಾಘವ್ ವಿನಯ್ ಶಿವಗಂಗೆ
    ನಿರ್ಮಾಪಕ: ರಾಜು ಶೇರಿಗಾರ್
    ಸಂಗೀತ: ಮ್ಯಾಥ್ಯೂಸ್ ಮನು
    ಛಾಯಾಗ್ರಹಣ: ಸಂಕೇತ್ ಎಂವೈಸ್
    ತಾರಾಗಣ: ನಿಶ್ಚಿತ್ ಕೊರೋಡಿ, ಚೈತ್ರಾ ರಾವ್, ತಾರಾ, ಜೈಜಗದೀಶ್, ಪ್ರಕಾಶ್ ತುಮಿನಾಡು, ಕಡ್ಡಿಪುಡಿ ಚಂದ್ರು, ಇತರರು

    ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ ಪರಿಚಿತರಾಗಿದ್ದ ರಾಘವ್ ವಿನಯ್ ಶಿವಗಂಗೆ ಕೆಜಿಎಫ್ ಸಿನಿಮಾ ಡೈಲಾಗ್ ರೈಟರ್ ಆಗಿ ಮುನ್ನೆಲೆಗೆ ಬಂದು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಟಾಮ್ ಅಂಡ್ ಜೆರ್ರಿ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ.

    Tom and Jerry film

    ಟಾಮ್ ಅಂಡ್ ಜೆರ್ರಿ ಸತ್ಯ ಹಾಗೂ ಧರ್ಮ ಇಬ್ಬರು ಸ್ನೇಹಿತರ ನಡುವೆ ನಡೆಯುವ ಕಥೆ. ಒಂದು ಜರ್ನಿಯಿಂದ ಆರಂಭವಾಗುವ ಕಥೆಯಲ್ಲಿ ಊಹಿಸಲಾಗದ ಫ್ಲ್ಯಾಶ್ ಬ್ಯಾಕ್ ಸ್ಟೋರಿಯಿದೆ. ಮಧ್ಯಮ ವರ್ಗದ ಹುಡುಗ ಧರ್ಮ ಹಾಗೂ ಶ್ರೀಮಂತಿಕೆಯಲ್ಲಿ ಬೆಳೆದ ಸತ್ಯ, ಇಬ್ಬರ ಜೀವನದ ದೃಷ್ಟಿಕೋನ ತುಂಬ ಭಿನ್ನವಾದದ್ದು. ನಾಯಕ ಧರ್ಮನಿಗೆ ಮಧ್ಯಮ ವರ್ಗದ ಹೊಂದಾಣಿಕೆ ಜೀವನಕ್ಕಿಂತ ಬದುಕಿದ್ರೆ ಧಾಮ್ ಧೂಮ್ ಆಗಿ ಬದುಕಬೇಕೆಂಬ ಆಸೆ. ಸತ್ಯಳಿಗೆ ಶ್ರೀಮಂತಿಕೆಯ ಜೀವನ ಅನ್ನೋದೇ ಬೇಸರದ ಮಾತು. ಜೀವನದ ಬಗೆಗೆ ಪರಸ್ಪರ ವಿರುದ್ಧ ದೃಷ್ಟಿಕೋನ ಹೊಂದಿರುವ, ವಾದ ವಿವಾದ, ಸತ್ಯ ಮಿಥ್ಯಗಳ ಹುಡುಕಾಟದಲ್ಲೇ ಸಾಗುತ್ತಿದ್ದ ಇವರ ಸ್ನೇಹ ಪ್ರೀತಿ ಹಂತ ತಲುಪಿದಾಗ ಏನಾಗುತ್ತದೆ ಅನ್ನೋದೇ ಕುತೂಹಲದ ಎಳೆ. ಅದರೊಂದಿಗೆ ಒಂದಿಷ್ಟು ರೋಚಕ ಟ್ವಿಸ್ಟ್, ಟರ್ನ್ ಗಳು, ಆಕ್ಷನ್ ಸೀನ್ ಗಳು ಬೆರೆತು ಮಜಾ ನೀಡುತ್ತದೆ ಸಿನಿಮಾ. ಇದನ್ನೂ ಓದಿ: ಟಾಮ್ ಅಂಡ್ ಜೆರ್ರಿ’ ಟ್ರೇಲರ್‌ಗೆ ಸಿಕ್ತು ಒಂದು ಮಿಲಿಯನ್‍ಗೂ ಹೆಚ್ಚಿನ ಜನರ ಪ್ರೀತಿ


    ಎಲ್ಲಾ ಸಿನಿಮಾಗಳಲ್ಲೂ ಇರುವಂತೆ ಇಲ್ಲೂ ಸ್ನೇಹ, ಪ್ರೀತಿ, ಸೆಂಟಿಮೆಂಟ್‍ಗಳಿವೆ. ಆದ್ರೆ ಅದರಾಚೆ ಸಿನಿಮಾ ವಿಭಿನ್ನವಾಗಿ ನಿಲ್ಲೋದು ಜನರಿಗೆ ತಲುಪಿಸಲು ಹೊರಟ ಸಂದೇಶದಿಂದ. ಹಣ, ಪ್ರೀತಿ, ಭಾವನೆಗಳು, ತಂದೆ ತಾಯಿ ಪ್ರಾಮುಖ್ಯತೆಯನ್ನು ನಿರ್ದೇಶಕರು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.  ಆದ್ರೆ ಅದನ್ನು ಹೇಳುವ ಬರದಲ್ಲಿ ದ್ವಿತೀಯಾರ್ಧ ಕೊಂಚ ಲ್ಯಾಗ್ ಎನಿಸಿ ಪ್ರೇಕ್ಷಕರನ್ನು ಕಾಡುತ್ತದೆ. ರೊಟೀನ್ ಸ್ಟೋರಿ ಎನಿಸಿದ್ರು ಕೂಡ ಹೊಸತರನಾದ ಸ್ಕ್ರೀನ್ ಪ್ಲೇ ಹಾಗೂ ಡೈಲಾಗ್ ಅದನ್ನು ಮರೆಮಾಚುತ್ತದೆ. ಒಂದಿಷ್ಟು  ಕಡೆ ಎಡವಿದರೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಚಿತ್ರತಂಡ ಗೆದ್ದಿದೆ ಎನ್ನಬಹುದು.

    ನಾಯಕ ನಿಶ್ಚಿತ್ ಕೊರೋಡಿ ನಟನೆಯಲ್ಲಿ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಳ್ಳುತ್ತಾರೆ. ಭವಿಷ್ಯದಲ್ಲಿ ಚಂದನವನಕ್ಕೆ ಭರವಸೆಯ ನಟನಾಗುವ ಎಲ್ಲಾ ಲಕ್ಷಣಗಳು ಇವರಲ್ಲಿವೆ. ನಟನೆ, ಆಕ್ಷನ್, ಹಾಡು, ಸೆಂಟಿಮೆಂಟ್ ಹೀಗೆ ಎಲ್ಲಾ ತರವಾದ ದೃಶ್ಯಗಳಲ್ಲೂ ಇವರ ಅಭಿನಯ ಗಮನ ಸೆಳೆಯುತ್ತದೆ. ಜೋಡಿಹಕ್ಕಿಯ ಜಾನಕಿ ಟೀಚರ್ ಚೈತ್ರಾ ರಾವ್ ಈ ಸಿನಿಮಾದಲ್ಲಿ ಜಾಸ್ತಿನೇ ಇಷ್ಟವಾಗುತ್ತಾರೆ. ಹೊಸ ಬಗೆಯ ಪಾತ್ರ ಹಾಗೂ ಅವ್ರ ಲುಕ್, ಚಿನಕುರುಳಿಯಂತ ಮಾತು ಚಿತ್ರದ ಪ್ರಮುಖ ಆಕರ್ಷಣೆ ಅಂದ್ರೆ ತಪ್ಪಾಗೋದಿಲ್ಲ. ತಾಯಿ ಪಾತ್ರದಲ್ಲಿ ನಟಿ ತಾರಾ ಮನಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತಾರೆ.  ಚಿತ್ರದಲ್ಲಿ ಅನುಭವಿ ಕಲಾವಿದರ ಸಂಖ್ಯೆ ದೊಡ್ಡದಿದ್ದು ಎಲ್ಲರೂ ತಮ್ಮ ಪಾತ್ರಕ್ಕೆ  ಜೀವ ತುಂಬಿ ನ್ಯಾಯ ಒದಗಿಸಿದ್ದಾರೆ.


    ಮ್ಯಾಥ್ಯೂಸ್ ಮನು ಸಂಗೀತ ಎಲ್ಲರನ್ನು ತಲೆದೂಗುವಂತೆ ಮಾಡುತ್ತೆ, ಹಿನ್ನೆಲೆ ಸಂಗೀತ ಕೂಡ ಹೊಸತನದೊಂದಿಗೆ ಅಷ್ಟೇ ಚೆಂದವಾಗಿ ಸಂಯೋಜನೆ ಮಾಡಿದ್ದಾರೆ. ಸಂಕೇತ್ ಎಂವೈಸ್ ಕ್ಯಾಮೆರಾವರ್ಕ್ ಹಾಡು, ಟ್ರೇಲರ್ ನಲ್ಲಿ ನೋಡಿ ಇಷ್ಟಪಟ್ಟವರಿಗೆ ಸಿನಿಮಾದಲ್ಲಿ ಮತ್ತಷ್ಟು ಇಷ್ಟವಾಗುತ್ತೆ. ಅರ್ಜುನ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದ ಸಾಹಸ ದೃಶ್ಯಗಳು ಕೂಡ ಅಷ್ಟೇ ಗಮನ ಸೆಳೆಯುತ್ತವೆ.

    ಪಬ್ಲಿಕ್ ರೇಟಿಂಗ್: 3.5 /5

  • ನಾಳೆಯಿಂದ ರಾಜ್ಯಾದ್ಯಂತ ತೆರೆ ಮೇಲೆ ‘ಟಾಮ್ ಅಂಡ್ ಜೆರ್ರಿ’ಯ ಪ್ರೀತಿಯ ಕಾದಾಟ ಶುರು

    ನಾಳೆಯಿಂದ ರಾಜ್ಯಾದ್ಯಂತ ತೆರೆ ಮೇಲೆ ‘ಟಾಮ್ ಅಂಡ್ ಜೆರ್ರಿ’ಯ ಪ್ರೀತಿಯ ಕಾದಾಟ ಶುರು

    ಹಾಡು ಹಾಗೂ ಭರವಸೆ ಮೂಡಿಸುವ ಟ್ರೇಲರ್ ಮೂಲಕ ಸಖತ್ ಸುದ್ದಿಯಲ್ಲಿರುವ ಸಿನಿಮಾ ಟಾಮ್ ಅಂಡ್ ಜೆರ್ರಿ. ಡೈಲಾಗ್ ರೈಟರ್ ಆಗಿದ್ದ ರಾಘವ್ ವಿನಯ್ ಶಿವಗಂಗೆ ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಈ ಚಿತ್ರದ ಮೇಲೆ ಚಂದನವನದಲ್ಲಿ ಹಾಗೂ ಪ್ರೇಕ್ಷಕರ ಮನದಲ್ಲೂ ಸಾಕಷ್ಟು ನಿರೀಕ್ಷೆ ಇದೆ. ಇದಕ್ಕೆ ಕಾರಣ ಚಿತ್ರದ ಪ್ರಾಮಿಸಿಂಗ್ ಆದ ತುಣುಕುಗಳು. ಹೊಸತನದೊಂದಿಗೆ, ಹೊಸತಂಡ ಕಟ್ಟಿಕೊಂಡು ಬಂದಿರುವ ನಿರ್ದೇಶಕರು ನಾಳೆಯಿಂದ ರಾಜ್ಯಾದ್ಯಂತ ಟಾಮ್ ಅಂಡ್ ಜೆರ್ರಿಯ ಕಥೆ ಹೇಳಲಿದ್ದಾರೆ.

    Tom and Jerry film

    ಕೊರೊನಾ ಹೊಡೆತದಿಂದ ಚೇತರಿಸಿಕೊಂಡ ಸಿನಿಮಾಗಳಲ್ಲಿ ಟಾಮ್ ಅಂಡ್ ಜೆರ್ರಿಯೂ ಒಂದು. ಇದೀಗ ಎಲ್ಲಾ ಸುಧಾರಣೆಯ ಹಂತಕ್ಕೆ ಬರುತ್ತಿದ್ದು, ತಮ್ಮ ಸಿನಿಮಾ ಮೂಲಕ ಮನರಂಜನೆ ನೀಡೋಕೆ ಸಕಲ ಸಿದ್ದವಾಗಿದೆ ಚಿತ್ರತಂಡ. ಸ್ಯಾಂಡಲ್‍ವುಡ್ ಅಂಗಳದಲ್ಲಿ ಡೈಲಾಗ್ ರೈಟರ್ ಆಗಿ, ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರಾಘವ್ ವಿನಯ್ ಶಿವಗಂಗೆ ಕೆಜಿಎಫ್ ಸಿನಿಮಾಗೆ ಡೈಲಾಗ್ ಬರೆದು ಖ್ಯಾತಿ ಗಳಿಸಿಕೊಂಡಿದ್ದಾರೆ. ಈಗ ಚೊಚ್ಚಲ ಸಿನಿಮಾ ನಿರ್ದೇಶಿಸಿ ಬಿಡುಗಡೆಯ ಸಂತಸದಲ್ಲಿದ್ದಾರೆ.

    ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದಲ್ಲಿ ಗಂಟುಮೂಟೆ ಸಿನಿಮಾ ಮೂಲಕ ಪರಿಚಿತರಾಗಿರುವ ನಿಶ್ಚಿತ್ ಕೊರೋಡಿ, ಜೋಡಿಹಕ್ಕಿ ಜಾನಕಿ ಟೀಚರ್ ಖ್ಯಾತಿಯ ಚೈತ್ರಾ ರಾವ್ ನಾಯಕ ಹಾಗೂ ನಾಯಕಿ. ಈ ಇಬ್ಬರ ಕಾಂಬೀನೇಶನ್ ಟ್ರೇಲರ್ ಮತ್ತು ಹಾಡಿನಲ್ಲಿ ಮೋಡಿ ಮಾಡಿದ್ದು, ತೆರೆ ಮೇಲೆ ಇವರನ್ನು ನೋಡಲು ಕಾತುರರಾಗಿದ್ದಾರೆ ಚಿತ್ರರಸಿಕರು. ಇದನ್ನೂ ಓದಿ: ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    ಯೂತ್ ಓರಿಯೆಂಟೆಂಡ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಬಂಡವಾಳ ಹೂಡಿದ್ದು, ವಿನಯ್ ಚಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಈಗಾಗಲೇ ಎರಡು ಹಾಡುಗಳು ಸೂಪರ್ ಹಿಟ್ ಆಗಿ ಎಲ್ಲರ ಫೇವರೇಟ್ ಆಗಿವೆ. ಉಳಿದಂತೆ ಸಂಕೇತ್ ಎಂವೈಎಸ್ ಛಾಯಾಗ್ರಹಣ,  ಸೂರಜ್ ಅಂಕೋಲೆಕರ್ ಸಂಕಲನವಿದೆ. ಇದನ್ನೂ ಓದಿ: ಗೃಹಿಣಿ, ಮಗುವಿನ ತಾಯಿಯಾಗಬಯಸಿದ್ದಾರಂತೆ ಕಂಗನಾ- ಬಾಳ ಸಂಗಾತಿ ಬಗ್ಗೆ ನಟಿ ಸುಳಿವು!

    ಟಾಮ್ ಅಂಡ್ ಜೆರ್ರಿಯ ತಾರಾಬಳಗವೂ ಕಲರ್ ಫುಲ್ ಆಗಿದ್ದು, ಸೂರ್ಯ ಶೇಖರ್, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಸಿನಿಮಾ ನಾಳೆಯಿಂದ ಚಿತ್ರಮಂದಿರದ ಅಂಗಳದಲ್ಲಿ ಮೋಡಿ ಮಾಡಲು ಸಜ್ಜಾಗಿದೆ.

  • ‘ಟಾಮ್ ಅಂಡ್ ಜೆರ್ರಿ’ ಟ್ರೇಲರ್‌ಗೆ ಸಿಕ್ತು ಒಂದು ಮಿಲಿಯನ್‍ಗೂ ಹೆಚ್ಚಿನ ಜನರ ಪ್ರೀತಿ

    ‘ಟಾಮ್ ಅಂಡ್ ಜೆರ್ರಿ’ ಟ್ರೇಲರ್‌ಗೆ ಸಿಕ್ತು ಒಂದು ಮಿಲಿಯನ್‍ಗೂ ಹೆಚ್ಚಿನ ಜನರ ಪ್ರೀತಿ

    `ಹಾಯಾಗಿದೆ ಎದೆಯೊಳಗೆ’ ಎಂಬ ಹಾಡಿನ ಮೂಲಕವೇ ಚಿತ್ರರಸಿಕರಿಗೆ ಸಿನಿಮಾದ ಆಮಂತ್ರಣ ನೀಡಿ ಭರವಸೆಯ ಅಚ್ಚೊತ್ತಿದ್ದ ಚಿತ್ರತಂಡ ಟಾಮ್ ಅಂಡ್ ಜೆರ್ರಿ. ಹಾಡುಗಳ ಮೂಲಕವೇ ಮೋಡಿ ಮಾಡಿ ಈಗ ಮತ್ತಷ್ಟು ಅಚ್ಚರಿ ಹೊತ್ತ ಟ್ರೇಲರ್ ಬಿಡುಗಡೆ ಮಾಡಿ ಮಗದಷ್ಟು ನಿರೀಕ್ಷೆ ಹೆಚ್ಚಿಸಿದೆ. ಟ್ರೇಲರ್ ಕಂಡ ಪ್ರೇಕ್ಷಕರ ಮನದಲ್ಲೀಗ ಒಂದೇ ಆಸೆ ಅದು ಸಿನಿಮಾ ಕಣ್ತುಂಬಿಕೊಳ್ಳಲೇಬೇಕೆಂದು.

    ರಾಘವ್ ವಿನಯ್ ಶಿವಗಂಗೆ ಮೊದಲ ಬಾರಿ ನಿರ್ದೇಶಕನಾಗಿ ಬಡ್ತಿ ಹೊಂದಿರುವ ಸಿನಿಮಾ ಟಾಮ್ ಅಂಡ್ ಜೆರ್ರಿ. ಚಿತ್ರದ ಎರಡು ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಬಯಕೆ ಸೃಷ್ಟಿಸಿದ್ದ ಈ ಚಿತ್ರತಂಡವೀಗ ಭರವಸೆಯ ಹಾಗೂ ಫ್ರೆಶ್ ಎನಿಸುವ ಟ್ರೇಲರ್ ತುಣುಕನ್ನು ಬಿಡುಗಡೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಏನೋ ಹೊತನವಿದೆ, ಚಿತ್ರತಂಡ ಹೊಸತೇನೋ ಪ್ರಯತ್ನ ಪಟ್ಟಿದೆ ಎಂಬುದನ್ನು ಟ್ರೇಲರ್ ನೋಡಿದ ಮೊದಲ ಬಾರಿಗೆ ಅನ್ನಿಸದೇ ಇರದು. ಅದಕ್ಕೆ ಸಾಕ್ಷಿ ಎನ್ನುವಂತೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲ ಕಮೆಂಟ್ ಸೆಕ್ಷನ್ ನಲ್ಲಿ ಚಿತ್ರದ ಮೇಕಿಂಗ್, ಹೊಸತನದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಟ್ರೇಲರ್ ತುಣುಕಿನಲ್ಲಿರುವ ಡೈಲಾಗ್? ಗಳು ಸಖತ್ ವೈರಲ್ ಆಗುತ್ತಿವೆ, ಮೆಚ್ಚುಗೆ ಗಳಿಸಿಕೊಳ್ಳುತ್ತಿವೆ. ಟಾಮ್ ಅಂಡ್ ಜೆರ್ರಿಯಂತೆ ಕಿತ್ತಾಡೋ ಸ್ನೇಹಿತರ ತರಲೆ ತುಂಟಾಟ ಒಂದು ಕಡೆಯಾದ್ರೆ, ಬದುಕಿನ ಬಗ್ಗೆ ಸ್ವಾರಸ್ಯಕರವಾದ ಸತ್ಯಾಸತ್ಯತೆಯನ್ನೇನೋ ಹೇಳ ಹೊರಟಿದೆ ಎನ್ನುವುದರ ಸುಳಿವನ್ನೂ ಟ್ರೇಲರ್ ನೀಡಿದೆ. ಒಟ್ಟಿನಲ್ಲಿ, ಟಾಮ್ ಅಂಡ್ ಜೆರ್ರಿ ಟ್ರೇಲರ್ ಹೊಸ ಬಝ್ ಕ್ರಿಯೇಟ್ ಮಾಡಿರೋದಂತೂ ಸುಳ್ಳಲ್ಲ.

    ನವೆಂಬರ್ 12ಕ್ಕೆ ಬಿಡುಗಡೆಯಾಗಲು ಸಕಲ ಸಿದ್ಧವಾಗಿ ನಿಂತಿರುವ ಸಿನಿಮಾ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ ಕನಸಿನ ಸಿನಿಮಾವಾಗಿದೆ. ಚಿತ್ರಕ್ಕೆ ಗಂಟುಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿ, ಜೋಡಿಹಕ್ಕಿ ಖ್ಯಾತಿಯ ಚೈತ್ರಾ ರಾವ್ ನಾಯಕ ಹಾಗೂ ನಾಯಕಿ. ಟ್ರೇಲರ್ ಹಾಗೂ ಹಾಡುಗಳ ಮೂಲಕ ಈ ಇಬ್ಬರ ಕಾಂಬಿನೇಶನ್ ಸಖತ್ ಮೋಡಿ ಮಾಡಿದ್ದು, ಪೂರ್ಣ ಪ್ರಮಾಣದಲ್ಲಿ ಈ ಜೋಡಿಯನ್ನು ಸ್ಕ್ರೀನ್ ಮೇಲೆ ಕಾಣಲು ಕಾತರರಾಗಿದ್ದಾರೆ ಚಿತ್ರ ಪ್ರೇಮಿಗಳು.

    ಚಿತ್ರಕ್ಕೆ ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ನಿರ್ಮಾಪಕ ರಾಜು ಶೇರಿಗಾರ್ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ವಿನಯ್ ಚಂದ್ರ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರ ಮೊದಲ ಸಿನಿಮಾ ಇದಾಗಿದ್ದು ತಮ್ಮದೇ ಬ್ಯಾನರ್ ನಡಿ ಚೊಚ್ಚಲ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ಮೊದಲ ಸಿನಿಮಾ ಬಿಡುಗಡೆಯ ಸಂತಸ ಅವರಲ್ಲಿಯೂ ಮನೆ ಮಾಡಿದೆ.

    ಟಾಮ್ ಅಂಡ್ ಜೆರ್ರಿ ಚಿತ್ರದ ತಾರಾಬಳಗವೂ ದೊಡ್ಡಿದಿದೆ. ಹಿರಿಯ ಹಾಗೂ ಅನುಭವಿ ಕಲಾವಿದರ ದಂಡು ಸಿನಿಮಾದಲ್ಲಿದ್ದು, ಸೂರ್ಯ ಶೇಖರ್, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

    ಮ್ಯಾಥೂಸ್ ಮನು ಸಂಗೀತದಲ್ಲಿ ಈಗಾಗಲೇ ಎರಡು ಹಾಡುಗಳು ಮನಸೂರೆಗೊಂಡಿದ್ದು, ಉಳಿದ ಹಾಡುಗಳ ಮೇಲೂ ಅಪಾರ ನಿರೀಕ್ಷೆ ಇದೆ. ಉಳಿದಂತೆ ಸಂಕೇತ್ ಎಂವೈಎಸ್ ಛಾಯಾಗ್ರಹಣ, ಸೂರಜ್ ಅಂಕೋಲೆಕರ್ ಸಂಕಲನ ಚಿತ್ರಕ್ಕಿದೆ. ಸೆನ್ಸಾರ್ ನಲ್ಲಿ ಯು/ಎ ಸರ್ಟಿಫೀಕೇಟ್ ಪಡೆದಿರುವ ಟಾಮ್ ಅಂಡ್ ಜೆರ್ರಿ ನವೆಂಬರ್ 12ಕ್ಕೆ ಅದ್ದೂರಿಯಾಗಿ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ.

  • ನವೆಂಬರ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ ‘ಟಾಮ್ ಅಂಡ್ ಜೆರ್ರಿ’

    ನವೆಂಬರ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ ‘ಟಾಮ್ ಅಂಡ್ ಜೆರ್ರಿ’

    ಬೆಂಗಳೂರು: ನಿರ್ದೇಶಕ ರಾಘವ್ ವಿನಯ್ ನವೆಂಬರ್ ನಲ್ಲಿ ‘ಟಾಮ್ ಅಂಡ್ ಜೆರ್ರಿ’ ಕಥೆ ಹೇಳಲಿದ್ದಾರೆ. ಟಾಮ್ ಅಂಡ್ ಜೆರ್ರಿ ಎಂದಾಕ್ಷಣ ನಮಗೆ ನಮ್ಮ ಬಾಲ್ಯ ಕಣ್ಮುಂದೆ ಬರುತ್ತೆ. ಇವತ್ತಿಗೂ ಟಾಮ್ ಅಂಡ್ ಜೆರ್ರಿ ಎಲ್ಲರ ಹಾರ್ಟ್ ಫೇವರೇಟ್. ಈ ಹೆಸರಿನಲ್ಲೀಗ ಸಿನಿಮಾವೊಂದು ಸೆಟ್ಟೇರಿ ಹೊಸ ಕಥೆ ಹೇಳ ಹೊರಟಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ, ಬಿಡುಗಡೆಯ ದಿನಾಂಕವನ್ನು ಹೊತ್ತು ಬಂದಿರುವ ಈ ಚಿತ್ರ ನ.12ಕ್ಕೆ ಬಿಡುಗಡೆಗೆ ಸಜ್ಜಾಗಿದೆ.

    ‘ಟಾಮ್ ಅಂಡ್ ಜೆರ್ರಿ’ ಸಿನಿಮಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿದೆ. ರಾಘವ್ ವಿನಯ್ ಶಿವಗಂಗೆ ಈ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್. ಕೆಜಿಎಫ್ ಸಿನಿಮಾದ ಒನ್ ಆಫ್ ದಿ ಡೈಲಾಗ್ ರೈಟರ್ ಆಗಿ, ಖ್ಯಾತಿಗಳಿಸಿರುವ ಇವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಹಾಡುಗಳ ಮೂಲಕ ಸಿನಿ ಪ್ರಿಯರಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಸೆನ್ಸಾರ್ ಅಂಗಳದಲ್ಲಿ ಯು/ಎ ಮುದ್ರೆ ಪಡೆದುಕೊಂಡಿದ್ದು, ಇನ್ನೇನಿದ್ರು ಚಿತ್ರಮಂದಿರಕ್ಕೆ ಕಾಲಿಡೋದೊಂದೇ ಬಾಕಿ ಇದೆ. ಇದನ್ನೂ ಓದಿ: ಜಿಮ್‍ನತ್ತ ಮುಖ ಮಾಡಿದ ಗೀತಾ ಭಾರತಿ ಭಟ್

    ‘ಟಾಮ್ ಅಂಡ್ ಜೆರ್ರಿ’ ಯೂತ್ ಓರಿಯೆಂಟೆಡ್ ಸಿನಿಮಾವಾಗಿದೆ. ಯುವ ಪೀಳಿಗೆಯನ್ನು ಸೆಳೆಯುವ ಸಬ್ಜೆಕ್ಸ್ ಸಿನಿಮಾದಲ್ಲಿದೆ. ಒಂದೊಳ್ಳೆಯ ಸಂದೇಶವೂ ಇದೆ. ಇಬ್ಬರು ಸ್ನೇಹಿತರ ನಡುವಿನ ಜಗಳ, ಕೋಪ, ತರಲೆ, ತಮಾಷೆ, ಪ್ರೀತಿ, ಆಕ್ಷನ್ ಎಲ್ಲವೂ ಒಳಗೊಂಡಿರುವ ಈ ಸಿನಿಮಾದಲ್ಲಿ ಗಂಟು ಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿ, ಚೈತ್ರಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ರಾಜು ಶೇರಿಗಾರ್ ಈ ಚಿತ್ರದ ನಿರ್ಮಾಪಕ. ಮೊದಲ ಬಾರಿ ಸಿನಿಮಾ ನಿರ್ಮಾಣಕ್ಕೆ ಇಳಿದಿರುವ ಇವರು ತಮ್ಮದೇ ರಿದ್ಧಿ ಸಿದ್ಧಿ ಫಿಲ್ಮ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಖಳನಟನಾಗಿ ಸೂರ್ಯ ಶೇಖರ್ ಮಿಂಚಿದ್ದು, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ,ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಒಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಏಕವಚನದಲ್ಲಿ ಬೈಯ್ದಿದ್ದಾರೆ – ಸಿದ್ದುಗೆ ಕಟೀಲ್ ಸವಾಲು

    ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಒಂದಕ್ಕಿಂತ ಒಂದು ಹಾಡುಗಳು ಡಿಫ್ರೆಂಟ್ ಆಗಿ ಮೂಡಿ ಬಂದಿವೆ. ಈಗಾಗಲೇ ಸಿದ್ ಶ್ರೀರಾಮ್ ದನಿಯಲ್ಲಿ ಮೂಡಿ ಬಂದ ‘ಹಾಯಾಗಿದೆ ಎದೆಯೊಳಗೆ’ ಹಾಡು ಮ್ಯಾಜಿಕ್ ಮಾಡಿದ್ದು, ಎಲ್ಲರ ಫೇವರೇಟ್ ಆಗಿದೆ. ಉಳಿದಂತೆ ಸಂಕೇತ್ ಎಂವೈಎಸ್ ಕ್ಯಾಮೆರಾ ನಿರ್ದೇಶನ, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ‘ಟಾಮ್ ಅಂಡ್ ಜೆರ್ರಿ’ ಚಿತ್ರಕ್ಕಿದೆ.

  • ಟಾಮ್ ಆಂಡ್ ಜೆರ್ರಿ ಸೃಷ್ಟಿಕರ್ತನ ಅಚ್ಚರಿಯ ಕಹಾನಿ!

    ಟಾಮ್ ಆಂಡ್ ಜೆರ್ರಿ ಸೃಷ್ಟಿಕರ್ತನ ಅಚ್ಚರಿಯ ಕಹಾನಿ!

    ಟಾಮ್ ಆಂಡ್ ಜೆರ್ರಿ ಅಂತೊಂದು ಹೆಸರು ಕೇಳಿದಾಕ್ಷಣವೇ ತುಟಿಯಂಚಿಗೆ ಮಂದಹಾಸ ತಂದುಕೊಂಡು ಕಣ್ಣರಳಿಸುವ ದೊಡ್ಡ ದಂಡೇ ವಿಶ್ವಾದ್ಯಂತ ತುಂಬಿಕೊಂಡಿದೆ. ಅದಾಗತಾನೇ ಕಣ್ಣು ತೆರೆದ ಎಳೆ ಮಕ್ಕಳಿಂದ ಹಿಡಿದು ಹಣ್ಣಣ್ಣು ಮುದುಕರವರೆಗೂ ಟಾಮ್ ಆಂಡ್ ಜೆರ್ರಿಯ ಕಣ್ಣಾಮುಚ್ಚಾಲೆಯಾಟದ ಆನಿಮೇಟೆಡ್ ಕಾಮಿಡಿ ಎಪಿಸೋಡುಗಳು ಮುದ ನೀಡುತ್ತವೆ. ದೇಶ ಭಾಷೆಗಳ ಗಡಿಯ ಹಂಗಿಲ್ಲದೆ ಎಲ್ಲರನ್ನೂ ಆವರಿಸಿಕೊಂಡ ಟಾಮ್ ಆಂಡ್ ಜೆರ್ರಿಯ ನಿರ್ದೇಶಕರಲ್ಲೊಬ್ಬರಾಗಿದ್ದವರು ಜೆನಿ ಡಿಚ್. ಎಲ್ಲರ ಮನಸುಗಳಿಗೂ ಮುದ ನೀಡುವಂಥ ಈ ಸೀರೀಸ್ ಮೂಲಕ ವಿಶ್ವ ವಿಖ್ಯಾತಿ ಗಳಿಸಿಕೊಂಡಿದ್ದ ಜೆನಿ ಡಿಚ್ ಭರ್ತಿ ತೊಂಬತೈದು ವಸಂತಗಳ ತುಂಬು ಜೀವನ ನಡೆಸಿ ನಿರ್ಗಮಿಸಿದ್ದಾರೆ.

    ಟಾಮ್ ಆಂಡ್ ಜೆರ್ರಿ ಅಮೆರಿಕದ ಯಶಸ್ವಿ ಆನಿಮೇಷನ್ ಸೀರೀಸ್. 1940ರ ದಶಕದಿಂದ ಆರಂಭವಾಗಿದ್ದ ಇದು ಅದ್ಯಾವ ಥರದಲ್ಲಿ ಖ್ಯಾತಿ ಗಳಿಸಿಕೊಂಡಿತ್ತೆಂದರೆ ಅತ್ಯಂತ ಕಡಿಮೆ ಕಾಲಾವಧಿಯಲ್ಲಿಯೇ ವಿಶ್ವಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಮಕ್ಕಳನ್ನು ಮುದಗೊಳಿಸುತ್ತಾ ಮನೆ ತುಂಬಾ ಈ ಸೀರೀಸ್‍ನ ಹವಾ ಹಬ್ಬಿಕೊಳ್ಳಲಾರಂಭಿಸಿತ್ತು. ಇದನ್ನು 1940ರಿಂದ 1967ರವರೆಗೆ ಎಂಟು ಮಂದಿ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಇದೀಗ ನಿಧನರಾಗಿರುವ ಜೆನಿ ಡಿಚ್ ಅದರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ.

    1961ರಿಂದ 62ರವರೆಗೆ ಸರಿಸುಮಾರು ಹದಿಮೂರು ಟಾಮ್ ಆಂಡ್ ಜೆರ್ರಿ ಎಪಿಸೋಡುಗಳನ್ನು ಜೆನಿ ಡಿಚ್ ನಿರ್ದೇಶನ ಮಾಡಿದ್ದರು. ಅಷ್ಟೂ ಎಪಿಸೋಡುಗಳು ಬೇರೆಲ್ಲವನ್ನು ಮೀರಿಸಿ ಖ್ಯಾತಿ ಗಳಿಸಿ ಈಗಲೂ ಮಾಸದಂತೆ ಉಳಿದುಕೊಂಡಿವೆ. ಒಂದು ಬಲಾಢ್ಯ ಬೆಕ್ಕಿನೊಂದಿಗೆ ಕಣ್ಣಾಮುಚ್ಚಾಲೆಯಾಡಿ, ಥರ ಥರದಲ್ಲಿ ಕ್ವಾಟಲೆ ಕೊಡುತ್ತಲೇ ಪುಟ್ಟ ಇಲಿಯೊಂದು ಹೇಗೆ ತಪ್ಪಿಸಿಕೊಳ್ಳುತ್ತದೆಂಬುದನ್ನು ನಾನಾ ಥರದಲ್ಲಿ ಪ್ರಚುರಪಡಿಸೋ ಟಾಮ್ ಆಂಡ್ ಜೆರ್ರಿ ಸೀರೀಸ್‍ಗೆ ಡೆನಿ ಡಿಚ್ ಅವರ ನಿರ್ದೇಶನ ಮತ್ತಷ್ಟು ಖ್ಯಾತಿ ತಂದು ಕೊಟ್ಟಿತ್ತು. ಕಾಮಿಕ್ ಆರ್ಟಿಸ್ಟ್ ಆಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಸ್ಟಾರ್ ಅನ್ನಿಸಿಕೊಂಡಿದ್ದ ಜೆನಿ ಡಿಚ್ ಈ ಸೀರೀಸ್ ಮೂಲಕ ಆನಿಮೇಟರ್ ಆಗಿ, ನಿರ್ದೇಶಕರಾಗಿಯೂ ವಿಶ್ವಾದ್ಯಂತ ಹೆಸರು ಮಾಡಿದ್ದರು.

    ಬಹುಶಃ ಟಾಮ್ ಆಂಡ್ ಜೆರ್ರಿ ಆಟವನ್ನು ಕಣ್ತುಂಬಿಕೊಂಡು ಖುಷಿಗೊಳ್ಳುವ ಬಹುಪಾಲು ಜನರಿಗೆ ಅದರ ಸೃಷ್ಟಿಯ ಹಿಂದಿರುವ ಡೆನಿ ಡಿಚ್‍ರಂಥಾ ನಿರ್ದೇಶಕರ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ ಒಂದು ಸುದೀರ್ಘ ಹಾದಿಯಲ್ಲಿ ಪಾದ ಸವೆಸದೇ ಹೋದರೆ ಇಂಥಾ ಸಾರ್ವಕಾಲಿಕ ಅದ್ಭುತಗಳು ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ನೋಡ ಹೋದರೆ, ಜೆನಿ ಡಿಚ್ ಅವರ ಕಲೆಯ ಹಾದಿ ಕೂಡಾ ಕುತೂಹಲಕರವಾಗಿದೆ. ಅಂದಹಾಗೆ ಅವರು 1924ರಲ್ಲಿ ಚಿಕಾಗೋದ ಸಾಮಾನ್ಯ ಕುಟುಂಬವೊಂದರ ಕೂಸಾಗಿ ಕಣ್ತೆರೆದಿದ್ದರು. ಡಿಚ್ ಐದು ವರ್ಷದ ಮಗುವಾಗಿದ್ದಾಗಲೇ ಅವರ ಇಡೀ ಕುಟುಂಬ ಕ್ಯಾಲಿಫೋರ್ನಿಯಾಗೆ ಸ್ಥಳಾಂತರಗೊಂಡಿತ್ತು. ಆದ ಕಾರಣ ಅವರ ವಿದ್ಯಾಭ್ಯಾಸವೂ ಅಲ್ಲಿಯೇ ಮುಂದುವರೆದಿತ್ತು.

    ಹಾಗೆ ಬೆಳೆದ ಜೆನಿ ಡಿಚ್‍ಗೆ ಬಾಲ್ಯದಿಂದಲೇ ಬಣ್ಣಗಳತ್ತ ಬಣ್ಣಿಸಲಾಗದಂಥಾ ಬೆರಗು ಮೂಡಿಕೊಂಡಿತ್ತು. ಕುಂಚದಲ್ಲಿಯೇ ಖುಷಿ ಕಾಣಲಾರಂಭಿಸಿದ್ದ ಅವರು ಅದೇ ಆಸಕ್ತಿಯನ್ನು ಮನದಲ್ಲಿಟ್ಟುಕೊಂಡೇ 1942ರ ಸುಮಾರಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿಕೊಂಡಿದ್ದರು. ಆ ಹೊತ್ತಿನಲ್ಲಿ ಅಮೆರಿಕನ್ ಆವಿಗೇಷನ್‍ನಲ್ಲಿ ವಿಮಾನಗಳ ನೀಲನಕ್ಷೆ ಸಿದ್ಧಪಡಿಸುವ ಕೆಲಸವೂ ಸಿಕ್ಕಿತ್ತು. ಅದು ಅವರ ಆಸಕ್ತಿಗೆ ತಕ್ಕುದಾಗಿ ಒಲಿದಿದ್ದ ಮಹಾ ಅವಕಾಶ. ಅದನ್ನು ಸದುಪಯೋಗಪಡಿಸಿಕೊಂಡ ಡೆನಿ ಡಿಚ್ ನಂತರ ಅಮೆರಿಕಾದ ಪ್ರಖ್ಯಾರ ಜಝ್ ಮ್ಯಾಗಜೈನಿನಲ್ಲಿ ಕಾಮಿಕ್ ಆರ್ಟಿಸ್ಟ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದರು. ಆ ಹಂತದಲ್ಲಿ ಅದರ ದಾಖಲಾರ್ಹ ಕವರ್‍ಗಳಲ್ಲಿ ಅವರದ್ದೇ ಕಲೆ ನಾಟ್ಯವಾಡಿತ್ತು. ಅದರಿಂದಲೇ ಭಾರೀ ಜನಪ್ರಿಯತೆಯೂ ಸಿಕ್ಕಿತ್ತು. ಆ ಪತ್ರಿಕೆ ಅದ್ಯಾವ ಪಾಟಿ ಜನಪ್ರಿಯಗೊಂಡಿತ್ತೆಂದರೆ, ಹಾಲಿವುಡ್ ಮಟ್ಟದಲ್ಲಿಯೂ ಅದಕ್ಕೆ ಅಭಿಮಾನಿಗಳಿದ್ದರು.

    ಡಿಚ್ ಅವರ ಕಲೆ ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಅದರತ್ತ ಆ ಕಾಲಕ್ಕೆ ಹಾಲಿವುಡ್ ನಿರ್ದೇಶಕರುಗಳ ಕಣ್ಣು ಬಿದ್ದಿತ್ತು. ಅದರ ಫಲವಾಗಿಯೇ ಅವರು 1940ರ ಹೊತ್ತಿಗೆಲ್ಲ ಯುನೈಟೈಡ್ ಪ್ರೊಡಕ್ಷನ್ಸ್ ಆಫ್ ಅಮೆರಿಕಾ ಸಂಸ್ಥೆ ಸೇರಿಕೊಂಡಿದ್ದರು. ಅಲ್ಲಿಂದಾಚೆಗೆ ಆನಿಮೇಷನ್‍ನತ್ತ ಆಸಕ್ತಿ ಕೇಂದ್ರೀಕರಿಸಿಕೊಂಡ ಡಿಚ್ ಅಲ್ಲಿಯೇ ಒಂದಷ್ಟು ಕಾಲ ಕಾರ್ಯ ನಿರ್ವಹಿಸಿದ್ದರು. ನಂತರ 1961ರಲ್ಲಿ ಹನ್ನಾ ಬರ್ಬೇರಾ ರಚನೆಯ ಟಾಮ್ ಆಂಡ್ ಜೆರ್ರಿ ಸೀರೀಸ್‍ನ ಎಪಿಸೋಡ್‍ಗಳನ್ನು ನಿರ್ದೇಶಿಸುವ ಜವಾಬ್ದಾರಿಯೂ ಅವರನ್ನು ಅರಸಿ ಬಂದಿತ್ತು. ಅದು ಅವರ ವೃತ್ತಿ ಬದುಕಿನ ಮಹತ್ತರ ಘಟ್ಟ. ಅದಾಗಲೇ ಪ್ರಸಿದ್ಧಿ ಪಡೆದಿದ್ದ ಆ ಸೀರೀಸ್ ಅನ್ನು ಹದಿಮೂರು ಎಪಿಸೋಡುಗಳಲ್ಲಿಯೇ ಮತ್ತಷ್ಟು ಉತ್ತುಂಗಕ್ಕೇರಿಸಿದ ಕೀರ್ತಿ ಜೆನಿ ಡಿಚ್ ಹೆಸರಿಗೆ ಶಾಶ್ವತವಾಗಿ ಅಂಟಿಕೊಂಡಿದೆ.

    ಹಾಗೆ ಟಾಮ್ ಆಂಡ್ ಜೆರ್ರಿ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ್ದ ಡಿಚ್, ಆ ನಂತರದಲ್ಲಿಯೂ ಕಲೆಯ ಸಂಗದಲ್ಲಿಯೇ ಲವಲವಿಕೆಯಿಂದ ಮುಂದುವರೆಯುತ್ತಾ ಬಂದಿದ್ದರು. ವಯಸ್ಸು ಸಂಧ್ಯಾ ಕಾಲವನ್ನು ಸಂಧಿಸಿದ್ದರೂ ಸದಾ ಹೊಸಾ ಸೃಷ್ಟಿಯತ್ತ ಗಮನ ನೆಟ್ಟಿದ್ದ ಅವರು ಕಡೆಯವರೆಗೂ ಕ್ರಿಯಾಶೀಲರಾಗಿಯೇ ಗುರುತಿಸಿಕೊಂಡಿದ್ದರು. ನಿರ್ದೇಶಕನಾಗಿ ಆಸ್ಕರ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಜೆನಿ ಡಿಚ್ ಓರ್ವ ಅಪ್ರತಿಮ ಕಲೆಗಾರ. ಸೀಮಿತ ತಂತ್ರಜ್ಞಾನದಲ್ಲಿಯೇ ಮಹತ್ತರವಾದ ಸೃಷ್ಟಿಗಳನ್ನು ಮಾಡಿದ ಪ್ರತಿಭಾವಂತ. ಇದೀಗ ಆ ಇತಿಹಾಸವನ್ನು ಸಂಪನ್ನವಾಗುಳಿಸಿ ಅವರು ನಿರ್ಗಮಿಸಿದ್ದಾರೆ. ಆದರೆ ಅವರ ಕೈಚಳಕದಲ್ಲಿ ಮೂಡಿ ಬಂದಿರೋ ಟಾಮ್ ಆಂಡ್ ಜೆರ್ರಿ ಮಾತ್ರ ತಲೆಮಾರುಗಳಾಚೆಗೂ ಜನರನ್ನು ಆವರಿಸಿಕೊಳ್ಳುತ್ತಲೇ ಇರುತ್ತದೆ.