Tag: Toll fees

  • ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಐ.ಆರ್.ಬಿ ಕಂಪನಿ ಚತುಷ್ಪತ ರಸ್ತೆ ಕಾಮಗಾರಿ ಅಪೂರ್ಣ ವಾಗಿರುವಾಗಲೇ ಟೋಲ್ ನಿರ್ಮಾಣ ಮಾಡಿ ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇಂದು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು ನಿನ್ನೆದಿನ ಐ.ಆರ್.ಬಿ ಕಂಪನಿ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡಿದ್ದೇನೆ. ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದು ತಪ್ಪು, ಮಾಜಾಳಿಯಿಂದ ಅಂಕೋಲದ ವರೆಗೆ ಶೇಕಡ 50 ರಷ್ಟು ಕಾಮಗಾರಿ ಪೂರ್ಣವಾಗಿಲ್ಲ ಆದರೂ ಅಂಕೋಲದ ಬೇಲಿಕೇರಿ ಬಳಿ ಶುಲ್ಕ ವಸೂಲಿ ಮಾಡುತಿದ್ದಾರೆ, ಅರಗ, ಅಮದಳ್ಳಿ, ಚಂಡಯಾ, ಹಟ್ಟಿಕೇರಿ ಬಿಡ್ಜ್ ಗಳು, ರಸ್ತೆಗಳೇ ಆಗಿಲ್ಲ. ಹೀಗಿರುವಾಗ ಹೇಗೆ ಶುಲ್ಕ ವಸೂಲಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಕರಾವಳಿ ಭಾಗದಲ್ಲಿನ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಲೇ ಬೇಕು ಈ ಹಿಂದೆ ಮಾಜಾಳಿ ನಂತರ ಗೋವಾ ಗಡಿಯಲ್ಲಿ ಗೋವಾ ಸರ್ಕಾರದ ಟೋಲ್ ಗೆ ಕಾರವಾರದ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಬೇಕೆಂದು ಗೋವಾದ ಅಂದಿನ ಮುಖ್ಯಮಂತ್ರಿ ಪಾಲೇಕರ್ ರವರಿಗೆ ನಾನು ಶಾಸಕನಾಗಿದ್ದಾಗ ವಿನಾಯ್ತಿ ನೀಡಬೇಕೆಂದು ಕೇಳಿದ್ದೆ ಆಗ ಕಾರವಾರದ ವಾಹನಗಳಿಗೆ ವಿನಾಯ್ತಿ ನೀಡಿದ್ದರು. ಆದರೇ ನಮ್ಮಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಿಲ್ಲ, ಕೇಳಿದರೆ ವೈಟ್ ಬೋರ್ಡ ಗೆ ಮಾತ್ರ ನೀಡುತ್ತೇವೆ ಎಂದು ಕಂಪನಿಯವರು ಹೇಳುತ್ತಾರೆ. ಇದು ತಪ್ಪು ಎಲ್ಲಾ ವಾಹನಗಳಿಗೆ ವಿನಾಯ್ತಿ ನೀಡಬೇಕು, ಕಾಮಗಾರಿ ಪೂರ್ಣವಾಗದೇ ಶುಲ್ಕ ವಸೂಲಿ ಮಾಡುತಿದ್ದಾರೆ. ನಾನು ಮಾಜಾಳಿಯಿಂದ ಅಂಕೋಲದ ವರೆಗೆ ರಸ್ತೆ ಸರ್ವೆ ಮಾಡಿಸಿ ಐ.ಆರ್.ಬಿ ಕಂಪನಿ ವಿರುದ್ಧ ಕೋರ್ಟ ನಲ್ಲಿ ದಾವೆ ಹೂಡುತ್ತೇನೆ. ಹತ್ತು ದಿನ ಸಮಯ ಕೇಳಿದ್ದಾರೆ ತೆಗೆದುಕೊಳ್ಳಲಿ ಆದರೇ ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯ್ತಿ ನೀಡಲೇ ಬೇಕು ಎಂದರು.

    ಸರ್ಕಾರಿ ಬಸ್ಸುಗಳ ಮೇಲೆ ಟೋಲ್ ಶುಲ್ಕ:
    ಕಾರವಾರದಿಂದ ಅಂಕೋಲಕ್ಕೆ ಹೋಗುವ ಸ್ಥಳೀಯ ಸರ್ಕಾರಿ ಬಸ್ ಗಳಿಗೆ ಟೋಲ್ ಶುಲ್ಕದಿಂದಾಗಿ ಪ್ರಯಾಣಿಕರ ಮೇಲೆ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಮೂರು ಕಡೆ ಟೋಲ್‍ಗಳಿದ್ದು, ಕೆಎಸ್‌ಆರ್‌ಟಿಸಿಯ ಬಸ್ಸಿಗೆ ಕ್ರಮವಾಗಿ 9 ರೂ., ಸ್ಲೀಪರ್ ಗೆ 13 ರೂ., ರಾಜಹಂಸಕ್ಕೆ 10 ರೂ. ಏರಿಸಲಾಗಿದೆ. ಆದರೆ ಲೋಕಲ್ ಬಸ್ಸಿಗೆ ವಿನಾಯ್ತಿ ನೀಡಬೇಕು ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಹೊರೆ ತಪ್ಪುತ್ತದೆ. ಪ್ರತಿ ಟ್ರಿಪ್‍ಗೆ ಟೋಲ್ ಶುಲ್ಕ ತೆಗೆದುಕೊಳ್ಳುವುದನ್ನು ಬಿಡಬೇಕು. 24 ಘಂಟೆಗೆ ತೆಗೆದುಕೊಳ್ಳಬೇಕು. ಐ.ಆರ್.ಬಿ ಕಂಪನಿ ರಸ್ತೆಯಲ್ಲಿ ದರೋಡೆಗೆ ಮಾಡುತಿದ್ದಾರೆ. ಇದು ಸರಿಯಲ್ಲ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸತೀಶ್ ಸೈಲ್ ಹೇಳಿದರು.

    ಅಪಘಾತ ತಪ್ಪಿಸಲು ಬೀದಿ ದೀಪ ಅಳವಡಿಸಿ:
    ಮಾಜಾಳಿಯಿಂದ ಅಂಕೋಲ ಭಾಗದಲ್ಲಿ ಅಲ್ಲಲ್ಲಿ ಬೀದಿ ದೀಪವನ್ನು ರಸ್ತೆಯಲ್ಲಿ ಅಳವಡಿಸಲಾಗಿದೆ. ಆದರೆ ಎಲ್ಲಿ ಅವಷ್ಯಕತೆ ಇದೆಯೋ ಅಲ್ಲಿ ಅಳವಡಿಸಿಲ್ಲ. ರಸ್ತೆ ತಿರುವು, ಗ್ರಾಮಗಳು ಇರುವ ಪ್ರದೇಶಕ್ಕೆ ಕಡ್ಡಾಯವಾಗಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು. ಇತ್ತ ರಸ್ತೆಯನ್ನು ಸಹ ಸಮರ್ಪಕವಾಗಿ ಮಾಡದೇ ಅಪಘಾತವಾಗಿ ಜನರು ಸಾಯುವಂತಾಗಿದೆ ಎಂದು ಐ.ಆರ್.ಬಿ ಕಂಪನಿ ವಿರುದ್ಧ ಸತೀಶ್ ಸೈಲ್ ಆಕ್ರೋಶ ವ್ಯಕ್ತಪಡಿಸಿದರು.

  • ಪಂಪ್‍ವೆಲ್ ಫೈಓವರ್ ಅಪೂರ್ಣ: ತಲಪಾಡಿ ಟೋಲ್ ಸಂಗ್ರಹ ಸ್ಥಗಿತ

    ಪಂಪ್‍ವೆಲ್ ಫೈಓವರ್ ಅಪೂರ್ಣ: ತಲಪಾಡಿ ಟೋಲ್ ಸಂಗ್ರಹ ಸ್ಥಗಿತ

    – ಒಂದು ದಿನದ ಮಟ್ಟಿಗೆ ಟೋಲ್ ಸಂಗ್ರಹ ತಡೆ ಹಿಡಿದ ಬಿಜೆಪಿ

    ಮಂಗಳೂರು: ಕರ್ನಾಟಕ-ಕೇರಳದ ಗಡಿಭಾಗದಲ್ಲಿರುವ ತಲಪಾಡಿ ಟೋಲ್ ಗೇಟ್‍ನಲ್ಲಿ ಬುಧವಾರ ಟೋಲ್ ಸಂಗ್ರಹ ಸ್ಥಗಿತವಾಗಿದ್ದು, ಜನ ಒಂದು ದಿನದ ಮಟ್ಟಿಗೆ ಟೋಲ್ ಫ್ರೀ ಸಂಚಾರ ಮಾಡಿ ಖುಷಿ ಪಟ್ಟರು. ಈ ಟೋಲ್ ಸಂಗ್ರಹ ಇಂದು ಒಂದು ದಿನದ ಮಟ್ಟಿಗೆ ಸ್ಥಗಿತಗೊಳ್ಳಲು ಕಾರಣವಾಗಿದ್ದೂ ಅದೇ ಪಂಪ್‍ವೆಲ್ ಫೈಓವರ್ ಎನ್ನುವುದು ಒಂದು ವಿಶಿಷ್ಟ ಸುದ್ದಿ.

    ಹತ್ತು ವರ್ಷಗಳಿಂದಲೂ ಕಾಮಗಾರಿ ನಡೆಯುತ್ತಿರುವ ಪಂಪ್‍ವೆಲ್ ಫ್ಲೈ ಓವರ್ ಇನ್ನೂ ಪೂರ್ಣಗೊಳ್ಳದಿರಲು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೂ ಸಂಸದ ನಳಿನ್ ಕುಮಾರ್ ಅವರು ಮಾತ್ರ ಅಧಿಕಾರಿಗಳ ತಲೆ ಮೇಲೆ ಹಾಕಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಪಂಪ್‍ವೆಲ್ ಫೈಓವರ್ ಬಳಿ ಭೇಟಿ ನೀಡಿದ್ದ ನಳಿನ್ ಕುಮಾರ್ ಕಟೀಲ್ ಡಿಸೆಂಬರ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು ಜನವರಿ 1ರಂದು ಫೈಓವರ್ ಉದ್ಘಾಟನೆ ಎಂದಿದ್ದರು. ಆದರೆ ಇನ್ನೂ ಕಾಮಗಾರಿ ಮುಗಿಯದಿದ್ದ ಕಾರಣ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯಾವಾಗ ಪೂರ್ಣಗೊಳ್ಳುತ್ತೆ ಎಂದು ಸ್ಪಷ್ಟನೆ ಕೇಳಿದ್ದರು. ಇದನ್ನೂ ಓದಿ: ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್

    ಅಧಿಕಾರಿಗಳು ಇನ್ನೂ ಕೆಲ ತಿಂಗಳ ಸಮಯ ಕೇಳಿರುವುದರಿಂದ ಒಂದು ತಿಂಗಳ ಒಳಗೆ ಪೂರ್ಣಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಂದು ಗಡುವು ನೀಡಿದ್ದಾರೆ. ಜೊತೆಗೆ ಆ ಒಂದು ತಿಂಗಳ ಕಾಲ ಈ ಹೈವೇಲಿ ಸಿಗುವ ತಲಪಾಡಿ ಟೋಲ್ ಗೇಟ್‍ನಲ್ಲಿ ಯಾವುದೇ ವಾಹನಗಳಿಂದಲೂ ಟೋಲ್ ಶುಲ್ಕ ಸಂಗ್ರಹಿಸಬಾರದು ಎಂದು ಟೋಲ್ ಗುತ್ತಿಗೆ ಪಡೆದಿರುವ ನವಯುಗ್ ಕಂಪನಿಯ ಸಿಬ್ಬಂದಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಸೂಚಿಸದ್ದರು. ಆದರೆ ಇಂದು ಮುಂಜಾನೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಿದ್ದನ್ನು ತಿಳಿದ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಬಿಜೆಪಿ ಕಾರ್ಯಕರ್ತರೊಂದಿಗೆ ತಲಪಾಡಿ ಟೋಲ್ ಗೇಟ್‍ಗೆ ಧಾವಿಸಿದರು. ಬಳಿಕ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಸಾಂಕೇತಿಕವಾಗಿ ಇಂದು ಒಂದು ದಿನದ ಮಟ್ಟಿಗೆ ಟೋಲ್ ಸಂಗ್ರಹ ಮಾಡದಂತೆ ಕೇಳಿಕೊಂಡರು.

    ಈ ವೇಳೆ ವಾಗ್ದಾದ ನಡೆದು ಬಳಿಕ ಒಂದು ದಿನ ಟೋಲ್ ಸಂಗ್ರಹ ಸ್ಥಗಿತಕ್ಕೆ ಟೋಲ್ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಆದರೆ ಸಂಸದರ ಸೂಚನೆ ಇರೋದು ಪಂಪ್‍ವೆಲ್ ಫೈಓವರ್ ಪೂರ್ಣಗೊಳ್ಳುವವರೆಗೂ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕೆಂದು. ನಾಳೆಯಿಂದ ಮತ್ತೆ ಎಂದಿನಂತೆ ಟೋಲ್ ಸಂಗ್ರಹ ಇರುವುದರಿಂದ ಸಂಸದರು ಈ ಮಾತನ್ನೂ ಉಳಿಸಿಕೊಳ್ಳೋದಿಲ್ಲ ಅನ್ನೋದು ಗ್ಯಾರಂಟಿಯಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.