Tag: toll collection

  • ಜೀವಿತಾವಧಿ ಮುಗಿದ ವಾಹಗಳನ್ನ ANPR ಕ್ಯಾಮೆರಾ ಹೇಗೆ ಪತ್ತೆ ಹಚ್ಚುತ್ತೆ?

    ಜೀವಿತಾವಧಿ ಮುಗಿದ ವಾಹಗಳನ್ನ ANPR ಕ್ಯಾಮೆರಾ ಹೇಗೆ ಪತ್ತೆ ಹಚ್ಚುತ್ತೆ?

    ದೆಹಲಿಯಲ್ಲಿ ಆಗಾಗ್ಗೆ ಉಂಟಾಗುವ ವಾಯುಮಾಲಿನ್ಯ (Air Pollution) ತಡೆಯಲು ಬಿಜೆಪಿ ನೇತೃತ್ವದ ದೆಹಲಿ ರಾಜ್ಯ ಸರ್ಕಾರ (Delhi Government) ಇತ್ತೀಚೆಗೆ ಹೊಸ ಆದೇಶವೊಂದನ್ನ ಪ್ರಕಟಿಸಿತ್ತು. 10 ವರ್ಷ ಮೇಲ್ಪಟ್ಟ ಡೀಸೆಲ್‌ 15 ವರ್ಷ ಹಳೆಯದಾದ ಪೆಟ್ರೋಲ್‌ ವಾಹನಗಳಿಗೆ ಇಂಧನ ನಿಷೇಧಿಸುವಂತೆ ಆದೇಶ ಹೊರಡಿಸಿತ್ತು. ಅದಕ್ಕಾಗಿ ಹಳೆಯ ವಾಹನಗಳನ್ನು ಗುರುತಿಸಿ ಪೆಟ್ರೋಲ್‌ ಬಂಕ್‌ಗಳಿಗೆ (Petrol Pumps) ಸಂದೇಶ ಕಳುಹಿಸಲು ಸೆಂಟ್ರಲ್‌ ಡೇಟಾಬೇಸ್‌ ವ್ಯವಸ್ಥೆ ರೂಪಿಸಲಾಗಿತ್ತು. ಜೊತೆಗೆ ದೆಹಲಿಯ 498 ಬಂಕ್‌ಗಳಿಗೆ ಸುತ್ತೋಲೆ ರವಾನಿಸಿದ್ದ ಸರ್ಕಾರ, 15 ವರ್ಷದ ಹಳೆಯ ಪೆಟ್ರೋಲ್‌, 10 ವರ್ಷದ ತುಂಬಿದ ಡೀಸೆಲ್‌ ವಾಹನಗಳಿಗೆ ಇಂಧನ ಪೂರೈಸಬಾರದು ಎಂದು ಸೂಚಿಸಿತ್ತು.

    ದೆಹಲಿಯಲ್ಲಿ ಶೇ.50ರಷ್ಟು ವಾಯು ಮಾಲಿನ್ಯ ವಾಹನಗಳಿಂದ ಉಂಟಾಗುತ್ತಿದೆ ಎಂದು ಅಂದಾಜಿಸಿ, ವಾಯು ಗುಣಮಟ್ಟ ಕಾಪಾಡುವ ಉದ್ದೇಶದಿಂದ ವಾಯುಗುಣ ಮಟ್ಟ ನಿರ್ವಹಣಾ ಆಯೋಗ ಇಂಧನ ನಿರ್ಬಂಧಿಸುವ ಆದೇಶ ಹೊರಡಿಸಿತ್ತು. ಕಾರು, ದ್ವಿಚಕ್ರ ವಾಹನ, ಟ್ರಕ್‌, ವಿಂಟೇಜ್‌ ಆಟೋಮೊಬೈಲ್ಸ್‌ ಸೇರಿದಂತೆ ಸುಮಾರು 62 ಲಕ್ಷ ವಾಹನಗಳನ್ನು ಹಳೆಯ ವಾಹನಗಳ (Old Vehicles) ಪಟ್ಟಿಗೆ ಸೇರಿಸಲಾಗಿತ್ತು. ಇದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?

    ʻಹಸಿರು ನೀತಿ’ (ಗ್ರೀನ್‌ ಪಾಲಿಸಿ) ಹೆಸರಿನಲ್ಲಿ ಸರ್ಕಾರ ಹೊಸ ವಾಹನ ಖರೀದಿಗೆ ಪರೋಕ್ಷವಾಗಿ ಒತ್ತಡ ಹಾಕುತ್ತಿದೆ. ಹೊಸ ಕಾರು ಖರೀದಿಸಿದ್ರೆ ಸಾಮಾನ್ಯ ಜನತೆ ಶೇ.45ರಷ್ಟು ಜಿಎಸ್‌ಟಿ ಪ್ಲಸ್‌ ಸೆಸ್‌ ತೆರಬೇಕಾಗುತ್ತದೆ. ಹಾಗಾಗಿ ಇದು ಹಿಂಬಾಗಿಲ ಮೂಲಕ ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ಪ್ರಯತ್ನವಾಗಿದೆ ಎಂದು ವಾಹನ ಮಾಲೀಕರು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಯೋಗಿ ಮಾತಿಗೂ ಕಿಮ್ಮತ್ತಿಲ್ಲ – ವಿದ್ಯಾರ್ಥಿನಿಗೆ ಶುಲ್ಕ ವಿನಾಯ್ತಿ ಕೊಡಲು ನಿರಾಕರಿಸಿ‌ದ RSS ಮೂಲದ ಶಿಕ್ಷಣ ಸಂಸ್ಥೆ

    ಜನಾಕ್ರೋಶ ಹೆಚ್ಚಾದ ಬೆನ್ನಲ್ಲೇ ಆದೇಶವನ್ನು ಹಿಂಪಡೆಯಲಾಗಿದೆ. ಈ ಬೆನ್ನಲ್ಲೇ ʻತಾಂತ್ರಿಕ ಸವಾಲುಗಳು, ಸಂಕೀರ್ಣ ವ್ಯವಸ್ಥೆಗಳಿಂದ ಇಂಧನ ನಿರ್ಬಂಧಿಸುವ ಆದೇಶ ಜಾರಿಗೊಳಿಸುವುದು ಕಷ್ಟವಾಗಿದೆ. ಹೀಗಾಗಿ ಮಾಲಿನ್ಯಕ್ಕೆ ದಾರಿ ಮಾಡಿಕೊಡುವ ಕಳಪೆ ನಿರ್ವಹಣೆಯ ವಾಹನಗಳನ್ನು ಜಪ್ತಿ ಮಾಡುವ ವ್ಯವಸ್ಥೆ ರೂಪಿಸಲಾಗುವುದುʼ ಎಂದು ಪರಿಸರ ಸಚಿವ ಮಂಜಿಂದರ್‌ ಸಿಂಗ್‌ ಸಿರ್ಸಾ ಹೇಳಿದ್ದರು. ಇದಕ್ಕೆ ಪೂರಕವಾಗಿ ಒಂದಿಷ್ಟು ಕೆಲಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮತ್ತೆ ಈ ಆದೇಶ ಸಕ್ರೀಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: PSI ಪರೀಕ್ಷೆಯಲ್ಲಿ ಫೇಲ್‌, ಆದ್ರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದ ಐನಾತಿ ಮಹಿಳೆ ಅಂದರ್‌

    ಮಾಲಿನ್ಯ ತಡೆಗೆ ಮುಂದಾಗಿರುವ ದೆಹಲಿ ಸರ್ಕಾರ ವಾಹನಗಳ ವಯೋಮಿತಿಗಳನ್ನು ತಿಳಿಯಲು ಮತ್ತು ಅನುಷ್ಠಾನಕ್ಕೆ ತರಲು ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಾದ್ಯಂತ (ಎನ್‌ಸಿಆರ್‌) ಟೋಲ್‌ ಬೂತ್‌ಗಳು ಮತ್ತು ಪೆಟ್ರೋಲ್‌ ಪಂಪ್‌ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಶುರು ಮಾಡಿದೆ. ಈ ಹೈಟೆಕ್‌ ಕ್ಯಾಮೆರಾ 15 ವರ್ಷಕ್ಕಿಂತ ಮೇಲ್ಪಟ್ಟ ಹಳೆಯದಾದ ಪೆಟ್ರೋಲ್‌ ವಾಹನ ಮತ್ತು 10 ವರ್ಷ ಮೇಲ್ಪಟ್ಟ ಡೀಸೆಲ್‌ ವಾಹನಗಳನ್ನ ಗುರುತಿಸಲು ಸಹಾಯ ಮಾಡುತ್ತದೆ. ಬಳಿಕ ಅವುಗಳ ವಯೋಮಿಯನ್ನು ಗುರುತಿಸಿ ಸ್ಕ್ರಾಪ್‌ಪಿಂಗ್‌ಗೆ ರವಾನಿಸಲು ಅನುಕೂಲವಾಗುತ್ತದೆ. ಇದನ್ನೂ ಓದಿ: ಆರ್ಥಿಕ ನೆರವು, ವಿವಾಹದ ಭರವಸೆ ನೀಡಿ ಹಿಂದೂಗಳನ್ನ ಇಸ್ಲಾಂಗೆ ಮತಾಂತರ – ಮಾಸ್ಟರ್‌ ಮೈಂಡ್‌ ಸೇರಿ ಇಬ್ಬರು ಅರೆಸ್ಟ್‌

    ಸದ್ಯ ANPR ಕ್ಯಾಮೆರಾಗಳನ್ನು ದೆಹಲಿಯ 500 ಪೆಟ್ರೋಲ್‌ ಪಂಪ್‌ಗಳಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗುರಗಾಂವ್‌ನಲ್ಲಿರುವ ಪಂಪ್‌ಗಳಲ್ಲೂ ಈ ಕ್ಯಾಮೆರಾಗಳ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಇದರಲ್ಲಿನ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ತಂತ್ರಜ್ಞಾನವನ್ನು ಬಳಸಿಕೊಂಡು, ಕ್ಯಾಮೆರಾಗಳು ನಂಬರ್ ಪ್ಲೇಟ್ ಡೇಟಾವನ್ನು ಡಿಜಿಟಲ್ ಮಾಹಿತಿಯಾಗಿ ಪರಿವರ್ತಿಸುತ್ತವೆ. ಜೊತೆಗೆ ದೆಹಲಿಯಲ್ಲಿ ನೋಂದಣಿಯಾದ ವಾಹನದ ವಿವರಗಳು ಮತ್ತು ಬಳಕೆಯ ಅವಧಿಯನ್ನ ತಕ್ಷಣವೇ ಬಹಿರಂಗಪಡಿಸುತ್ತವೆ. ಇದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಅನುಕೂಲವಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇಷ್ಟೇ ಅಲ್ಲ ANPR ಕ್ಯಾಮೆರಾಗಳು ಹಳೆಯ ವಾಹನಗಳನ್ನು ಪತ್ತೆಹಚ್ಚುವ ಜೊತೆಗೆ ಇತರ ಕೆಲಸಗಳಿಗೂ ಉಪಯೋಗವಾಗಲಿದೆ ಅದೇನೆಂಬುದನ್ನು ತಿಳಿಯಲು ಮುಂದೆ ಓದಿ…

    ANPR ಕ್ಯಾಮೆರಾದ ಬೆಲೆ ಎಷ್ಟು?

    ಭಾರತದಲ್ಲಿ ANPR ಕ್ಯಾಮೆರಾಗಳ ಬೆಲೆ 20,000 ರೂ. ನಿಂದ 50,000 ರೂ.ವರೆಗೆ ಇದೆ. ಆದಾಗ್ಯೂ, ಹೆಚ್ಚಿನ ರೆಸಲ್ಯೂಶನ್ ಅಥವಾ ಮುಂದುವರಿದ ಮಾದರಿಗಳು ಇನ್ನೂ ದುಪ್ಪಟ್ಟು ವೆಚ್ಚವಾಗಬಹುದು.

    ಈ ಕ್ಯಾಮೆರಾಗಳು ಯಾವುದಕ್ಕೆಲ್ಲ ಅನುಕೂಲ?

    * ಸಂಚಾರ ನಿರ್ವಹಣೆ: ಪ್ರತಿ ವಾಹನದ ಸ್ಪೀಡ್‌ ಅಂದಾಜಿಸಲು, ಸಿಗ್ನಲ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಹಾಗೂ ವಾಹನ ದಟ್ಟಣೆ ಮಾದರಿಯನ್ನ ವಿಶ್ಲೇಷಣೆ ಮಾಡಲು ಬಳಸಲಾಗುತ್ತದೆ.
    * ಕಾನೂನು ಮತ್ತು ಸುವ್ಯವಸ್ಥೆ: ಕದ್ದ ವಾಹನಗಳನ್ನು ಗುರುತಿಸಲು, ಶಂಕಿತರನ್ನು ಪತ್ತೆಹಚ್ಚಲು ಮತ್ತು ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಲು ಅನುಕೂಲವಾಗುತ್ತದೆ.
    * ಪಾರ್ಕಿಂಗ್ ನಿರ್ವಹಣೆ: ವಾಹನ ಪ್ರವೇಶ ಮತ್ತು ನಿರ್ಗಮನ ದಾಖಲಿಸಲು ಮತ್ತು ಸ್ವಯಂಚಾಲಿತ ಪಾರ್ಕಿಂಗ್ ಶುಲ್ಕ ಸಂಗ್ರಹ ಸಕ್ರಿಯಗೊಳಿಸಲು ಅನುಕೂಲ.
    * ಟೋಲ್ ಸಂಗ್ರಹ: ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಖ್ಯೆ ಫಲಕಗಳನ್ನು ರೀಡ್‌ ಮಾಡುವ ಮೂಲಕ ಸ್ವಯಂಚಾಲಿತ ಟೋಲ್ ಕಡಿತಕ್ಕಾಗಿ ಬಳಸಲಾಗುತ್ತದೆ.
    * ಭದ್ರತೆ: ನಿರ್ಬಂಧಿತ ಅಥವಾ ಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ವಾಹನಗಳನ್ನು ಪತ್ತೆಹಚ್ಚಲು ಮತ್ತು ಕಣ್ಗಾವಲು ಹೆಚ್ಚಿಸಲು ಸುಲಭವಾಗುತ್ತದೆ.

    ಕ್ಯಾಮೆರಾಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

    * ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾ ವಾಹನದ ನಂಬರ್ ಪ್ಲೇಟನ್ನು ಸುಲಭ ಮತ್ತು ಸ್ಪಷ್ಟವಾಗಿ ರೀಡ್‌ ಮಾಡುತ್ತದೆ.
    * ಇದರಲ್ಲಿನ OCR (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಸಾಫ್ಟ್‌ವೇರ್ ಇಮೇಜ್‌ನಿಂದ ಆಲ್ಫಾನ್ಯೂಮರಿಕ್ ಕೋಡನ್ನು (ನಂಬರ್‌ ಪ್ಲೇಟ್‌ನಲ್ಲಿರುವ ಸಂಖ್ಯೆಗಳು)‌ ರೀಡ್‌ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಹೊರತೆಗೆಯುತ್ತದೆ.
    * ಕೇಂದ್ರ ಡೇಟಾಬೇಸ್‌ನೊಂದಿಗೆ ಕ್ರಾಸ್-ಚೆಕ್ ಮಾಡುವ ಮೂಲಕ ನೋಂದಣಿ ಯಂತಹ ವಾಹನ ವಿವರ ಹಾಗೂ ನಿಜವಾದ ಮಾಲೀಕರನ್ನು ಪತ್ತೆ ಮಾಡುತ್ತದೆ.
    * ಈ ಡೇಟಾಗಳನ್ನು ಅಪರಾಧ ಪತ್ತೆ, ಸಂಚಾರ ನಿಯಮ ಉಲ್ಲಂಘನೆ ಇನ್ನಿತರ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.

    ಇದರ ಅನುಕೂಲ ಮತ್ತು ಅನಾನುಕೂಲಗಳೇನು?

    * ಸಮಯ ಉಳಿತಾಯದೊಂದಿಗೆ ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ.
    * ವಾಹನ ಗುರುತಿಸುವಿಕೆಯಲ್ಲಿ ಮಾನವ ದೋಷದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಂದ್ರೆ ಮನುಷ್ಯನಿಂದ ಆಗುವ ದೋಷಗಳನ್ನು ಇದು ಮಾಡುವುದಿಲ್ಲ.
    * ದಿನದ 24 ಗಂಟೆಯೂ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿದೆ.
    * ವಾಹನ ಮತ್ತು ಮಾಲೀಕರ ಮಾಹಿತಿಯನ್ನು ಸಂಗ್ರಹಿಸುವ ಜೊತೆಗೆ ಸಂಗ್ರಹಿಸಿದ ಮಾಹಿತಿಯನ್ನ ಗೌಪ್ಯವಾಗಿಡಲು ಸಹಾಯಕವಾಗುತ್ತದೆ.
    * ಇದರ ಅನಾನುಕೂಲವೆಂದರೆ ಕಳಪೆ ಹವಾಮಾನ ಪರಿಸ್ಥಿತಿ ಅಥವಾ ಕಡಿಮೆ ಬೆಳಕಿನ ವಾತಾವರಣ ಇರುವಾಗ ನಿಖರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರಲಿದೆ.

    ಪೆಟ್ರೋಲ್‌ ಪಂಪ್‌ಗಳಲ್ಲಿ ಈ ಕ್ರಮ ಏಕೆ?

    ಪೆಟ್ರೋಲ್‌ ಪಂಪ್‌ಗಳಲ್ಲಿ ANPR ಕ್ಯಾಮೆರಾಗಳನ್ನು ಅಳವಡಿಸುವ ಮುಖ್ಯ ಉದ್ದೇಶವೇ ವಾಯುಮಾಲಿನ್ಯ ತಡೆಯುವುದು. ಮಾಲಿನ್ಯಕಾರಕ ವಾಹನಗಳನ್ನು ಗುರುತಿಸಿದ್ರೆ, ಅವುಗಳ ವಯೋಮಿತಿ ಗಮನಿಸಿ ಬಳಿಕ ಅವುಗಳನ್ನು ನಿಷೇಧಿಸುವ ಕೆಲಸಕ್ಕೆ ಮುಂದಾಬಹುದು ಅನ್ನೋದು ಸರ್ಕಾರದ ಚಿಂತನೆ.

  • ಹೋರಾಟಕ್ಕೆ ಜಯ – ಕೊನೆಗೂ ಸುರತ್ಕಲ್‌ ಟೋಲ್‌ ಸಂಗ್ರಹ ಕೇಂದ್ರ ರದ್ದು

    ಹೋರಾಟಕ್ಕೆ ಜಯ – ಕೊನೆಗೂ ಸುರತ್ಕಲ್‌ ಟೋಲ್‌ ಸಂಗ್ರಹ ಕೇಂದ್ರ ರದ್ದು

    ಮಂಗಳೂರು: ಕೊನೆಗೂ ಕರಾವಳಿ ಭಾಗದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದ ಸುರತ್ಕಲ್(Surathkal) ಸಮೀಪದ ಟೋಲ್ ಸಂಗ್ರಹ ಕೇಂದ್ರ(Toll Collection) ರದ್ದಾಗಿದೆ.

    ಸಂಸದ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಟ್ವೀಟ್‌ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಟೋಲ್‌ ಸಂಗ್ರಹ ಕೇಂದ್ರವನ್ನು ರದ್ದು ಮಾಡಬೇಕೆಂದು ಜನರು ಪ್ರತಿಭಟನೆಗೆ ಇಳಿದಿದ್ದರು.

    ಈ ಸಂಬಂಧ ಟ್ವೀಟ್‌ ಮಾಡಿದ ನಳಿನ್‌ ಕುಮಾರ್‌, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದಿದ್ದಾರೆ.

    ರದ್ದಾಗಿದ್ದು ಯಾಕೆ?
    60 ಕಿ.ಮೀ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ.  ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿರುವ  ಟೋಲ್‍ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿತ್ತು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

    ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‍ನ ಎನ್‌ಐಟಿಕೆ ಬಳಿ ಕಾರ್ಯಾಚರಿಸುತ್ತಿರುವ ಟೋಲ್‍ಗೇಟ್, ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್‍ಗೇಟ್ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. ತಾತ್ಕಾಲಿಕ ನೆಲೆಯಲ್ಲಿ ಆರಂಭವಾದ ಟೋಲ್‌ನಲ್ಲೀ ಈಗಲೂ ಹಣ ಸಂಗ್ರಹ ಮಾಡುತ್ತಿರುವುದು ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.

    ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 60 ಕಿ.ಮೀ ಒಳಗಿನ ಎಲ್ಲ ಟೋಲ್‍ಗೇಟ್‍ಗಳನ್ನು 90 ದಿನಗಳೊಳಗೆ ತೆರವುಗೊಳಿಸುವುದಾಗಿ ಲೋಕಸಭೆಯಲ್ಲಿ ಹೇಳಿದ್ದರು. ಈ ಹಿನ್ನೆಲೆ ಸಂಸದರು, ಶಾಸಕರು ಸುರತ್ಕಲ್ ಟೋಲ್‍ಗೇಟ್ ತೆರವು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ಭರವಸೆಯ ಗಡವು ಜೂನ್ 22ಕ್ಕೆ ಮುಕ್ತಾಯಗೊಂಡಿದ್ದರೂ ಟೋಲ್‌ ಸಂಗ್ರಹ ನಡೆಯುತ್ತಿತ್ತು. ಹೀಗಾಗಿ ಅಕ್ರಮವಾಗಿ ನಡೆಯುತ್ತಿರುವ ಟೋಲ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಾಜ್ಯ ಹೆದ್ದಾರಿಗೂ ಇನ್ಮುಂದೆ ಟೋಲ್ ಕಟ್ಟಬೇಕು!- 1 ಕಿ.ಮೀಗೆ ಎಷ್ಟು ರೂ. ಟೋಲ್?

    ರಾಜ್ಯ ಹೆದ್ದಾರಿಗೂ ಇನ್ಮುಂದೆ ಟೋಲ್ ಕಟ್ಟಬೇಕು!- 1 ಕಿ.ಮೀಗೆ ಎಷ್ಟು ರೂ. ಟೋಲ್?

    ಬೆಂಗಳೂರು: ಈ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಟೋಲ್ ಶುಲ್ಕ ಪಾವತಿ ಮಾಡಬೇಕಿತ್ತು. ಆದರೆ ಇನ್ನುಮುಂದೆ ರಾಜ್ಯ ಹೆದ್ದಾರಿಗೂ ಟೋಲ್ ವಿಧಿಸುವ ಮೂಲಕ, ರಾಜ್ಯ ಸರ್ಕಾರ ಹೊಸ ಆದಾಯದ ಮೂಲವನ್ನು ಹುಡುಕಿಕೊಳ್ಳಲು ಮುಂದಾಗಿದೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಬಿಓಟಿ (ಬಿಲ್ಡ್- ಆಪರೇಟ್- ಟ್ರಾನ್ಸ್‌ಫರ್‌) ಆಧಾರದಲ್ಲಿ ಹೆದ್ದಾರಿ ಅಭಿವೃದ್ಧಿ ಪಡಿಸಿರುವುದರಿಂದ ಟೋಲ್ ಸಂಗ್ರಹ ಅನಿವಾರ್ಯವಾಗಿದೆ. ಹೀಗಾಗಿ ಪ್ರತಿ ವರ್ಷ ಶೇ.10 ರಷ್ಟು ಟೋಲ್ ಶುಲ್ಕ ಹೆಚ್ಚಳ ಮಾಡಬೇಕು ಎನ್ನುವ ವಿಚಾರ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.  ಇದನ್ನು ಓದಿ: ಫಸ್ಟ್ ಟೈಂ ರಾಜ್ಯ ಹೆದ್ದಾರಿಗೂ ಟೋಲ್- ಸಮ್ಮಿಶ್ರ ಸರ್ಕಾರದ ಪ್ರಯೋಗಕ್ಕೆ ಜನಾಕ್ರೋಶ

    ರಾಜ್ಯ ಹೆದ್ದಾರಿಗಳಿಗೆ ಟೋಲ್ ವಿಧಿಸಲು 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಿರ್ಧಾರ ಆಗಿದೆ. ಈ ನಿಟ್ಟಿನಲ್ಲಿ 17 ಟೆಂಡರ್ ಕರೆಯಲಾಗಿದ್ದು, ಅದರಲ್ಲಿ 5 ಟೆಂಡರ್ ನೀಡಲಾಗಿದೆ. ಮೊದಲ ವರ್ಷ ಶೇ.10, ಎರಡನೇ ವರ್ಷ ಶೇ.20 ಹಾಗೂ ಮೂರನೇ ಅವಧಿಗೆ ಶೇ.30 ದರ ಹೆಚ್ಚಳವಾಗಲಿದೆ. 2015ರಲ್ಲಿ ಟೋಲ್ ಸಂಗ್ರಹಕ್ಕೆ ನಿಯಮಾವಳಿ ರಚಿಸಲಾಗಿದ್ದು, 2017ರಲ್ಲಿಯೇ ಟೆಂಡರ್ ಕರೆಯಲಾಗಿತ್ತು ಎಂದ ಸಚಿವರು, ವಿಶ್ವ ಬ್ಯಾಂಕ್ ಮತ್ತು ಎಡಿಬಿ ಬ್ಯಾಂಕ್ ಅನುದಾನ ಅಡಿಯಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

    ಎಲ್ಲೆಲ್ಲಿ ಟೋಲ್ ಸಂಗ್ರಹ:
    ಈಗಾಗಲೇ ಪಡುಬಿದ್ರೆ- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಎರಡು ದಿನಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಹೊಸಕೋಟೆ – ಚಿಂತಾಮಣಿ- 58, ತುಮಕೂರು-ಪಾವಗಡ, ಮುದುಗಲ್-ತಾವರೆಗೇರಾ ರಾಜ್ಯ ಹೆದ್ದಾರಿ ಟೋಲ್ ಸಂಗ್ರಹಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ಬಾಕಿ ಇರುವ ಬೇರೆ ಬೇರೆ ಮಾರ್ಗಗಳಲ್ಲಿ ಯೋಜನೆ ಅನುಷ್ಠಾನ ಹಂತದಲ್ಲಿದೆ. ಕೋಟಲ್ ಸಂಗ್ರಹಕ್ಕೆ ಕೆಶಿಪ್ ಮತ್ತು ಕೆಆರ್ ಡಿಸಿಎಲ್ ಸಂಸ್ಥೆಗಳು ಕಾಮಗಾರಿ ನಡೆಸಿವೆ. 3 ವರ್ಷಗಳ ಅವಧಿಗೆ ಟೆಂಡರ್ ನೀಡಲಾಗಿದೆ ಎಂದು ಹೇಳಿದರು.

    ಕಿಮೀಗೆ ಎಷ್ಟು?
    ಪ್ರಸ್ತಾವಿತ 17 ರಾಜ್ಯ ಹೆದ್ದಾರಿಗಳಲ್ಲಿ ಕಾರ್, ಜೀಪ್, ವ್ಯಾನ್ ಮತ್ತಿತರ ಲಘು ಮೋಟಾರು ವಾಹನಗಳಿಗೆ ಪ್ರತಿ ಕಿಮೀಗೆ 58 ಪೈಸೆ, ಕಡಿಮೆ ಭಾರ ಹೊರುವ ಭಾರೀ ವಾಹನಗಳಿಗೆ 86 ಪೈಸೆ, ಬಸ್ ಮತ್ತು ಟ್ರಕ್‍ಗೆ 1.73 ರೂ., ನಿಗದಿಪಡಿಸಲಾಗಿದೆ. ಮಲ್ಟಿ ಎಕ್ಸೆಲ್, ಅರ್ಥ್ ಮೂವಿಂಗ್ ಮಷಿನರಿ ಮತ್ತು 3ರಿಂದ 6 ಎಕ್ಸೆಲ್ ವಾಹನಗಳಿಗೆ 2.57 ರೂ. ಹಾಗೂ ಭಾರೀ ವಾಹನ ಮತ್ತು ಸೆವೆನ್ ಎಕ್ಸಲ್ ಗಿಂತ ಅಧಿಕ ಭಾರದ ವಾಹನಗಳಿಗೆ 3.45 ರೂ.ದಂತೆ ಶುಲ್ಕ ಸಂಗ್ರಹಿಸಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಕ್ಕೂ ಕ್ಯಾರೇ ಎನ್ನದ ಅಶೋಕ್ ಖೇಣಿ- ನೈಸ್ ರಸ್ತೆ ಟೋಲ್ ಇಳಿಸಲ್ಲ ಎಂದು ಸೆಡ್ಡು

    ಸರ್ಕಾರಕ್ಕೂ ಕ್ಯಾರೇ ಎನ್ನದ ಅಶೋಕ್ ಖೇಣಿ- ನೈಸ್ ರಸ್ತೆ ಟೋಲ್ ಇಳಿಸಲ್ಲ ಎಂದು ಸೆಡ್ಡು

    ಬೆಂಗಳೂರು: ಜಿಎಸ್‍ಟಿ ಜಾರಿ ಬಳಿಕ ಏರಿಕೆ ಮಾಡಲಾಗಿರೋ ಟೋಲ್ ಶುಲ್ಕವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ನೈಸ್ ಸಂಸ್ಥೆ ಸರ್ಕಾರಕ್ಕೆ ಹೇಳಿದೆ.

    ಜಿಎಸ್‍ಟಿ ಜಾರಿ ಬಳಿಕ ಟೋಲ್ ಶುಲ್ಕವನ್ನು ಏಕಾಏಕಿ ಏರಿಸಲಾಗಿತ್ತು. ಸರ್ಕಾರದ ಅನುಮತಿ ಪಡೆಯದೆ ಟೋಲ್ ಶುಲ್ಕ ಏರಿಸಿದ್ದಕ್ಕೆ ಆಕ್ಷೇಪಿಸಿ ಲೋಕೋಪಯೋಗಿ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಇದೀಗ ನೋಟಿಸ್‍ಗೆ 9 ಪುಟಗಳಲ್ಲಿ ಉತ್ತರಿಸಿರುವ ನೈಸ್ ಸಂಸ್ಥೆ, ಟೋಲ್ ರಿಯಾಯಿತಿ ಒಪ್ಪಂದದ ಉಲ್ಲಂಘನೆಯಾಗಿಲ್ಲ. ಹೀಗಾಗಿ ಟೋಲ್ ಶುಲ್ಕ ಹೆಚ್ಚಳ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.

    ಜಲೈ 7ರಂದು ನೈಸ್ ಸಂಸ್ಥೆಗೆ ನೋಟಿಸ್ ನೀಡಿದ್ದ ಲೋಕೋಪಯೋಗಿ ಇಲಾಖೆ 7 ದಿನಗಳೊಳಗೆ ಶುಲ್ಕ ಹೆಚ್ಚಳ ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು.

  • ಟೋಲ್ ವಿರೋಧಿಸಿ ಉಡುಪಿ ಬಂದ್ – ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಟೋಲ್ ಸಂಗ್ರಹ ವಿಚಾರದಲ್ಲಿ ಗಲಾಟೆ ನಡೀತಿದೆ. ಮಂಗಳೂರು- ಉಡುಪಿ- ಕುಂದಾಪುರ ನಡುವೆ ಮೂರು ಟೋಲ್ ಗೇಟ್ ನಿರ್ಮಾಣ ಮಾಡಿದ್ದೇ ಈ ಹೋರಾಟಕ್ಕೆ ಕಾರಣವಾಗಿದೆ.

    ಎರಡೂ ಟೋಲ್‍ಗಳ ಮೂಲಕ ಹೋಗಿ ಬರೋ ಎಲ್ಲಾ ವಾಹನಗಳಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಉಡುಪಿ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಬಸ್ ಗಳು ಹೆದ್ದಾರಿಗೆ ಇಳಿದಿಲ್ಲ. ಪರಿಣಾಮ ಪ್ರಯಾಣಿಕರು ಉಡುಪಿ ಬಸ್ ನಿಲ್ದಣದಲ್ಲೇ ಬಸ್ಸಿಲ್ಲದೆ ಪರದಾಡುತ್ತಿದ್ದಾರೆ. ಬಂದ್ ಬಗ್ಗೆ ಮಾಹಿತಿ ಇಲ್ಲದವರು ಕೂಡ ಪರದಾಟ ಮಾಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮಂಗಳೂರು, ಚಿಕ್ಕಮಗಳೂರು, ಕಾರವಾರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 6 ಇನ್ಸ್‍ಪೆಕ್ಟರ್, 35 ಎಸ್‍ಐ, 25 ಎಎಸ್‍ಐ, 5 ಕೆಎಸ್‍ಆರ್‍ಪಿ, 6 ಡಿಎಆರ್ ಪೊಲೀಸರು, 109 ಮಂದಿ ಹೋಮ್ ಗಾರ್ಡ್‍ಗಳನ್ನ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‍ಗೆ ನೇಮಕ ಮಾಡಲಾಗಿದೆ. ಪಡುಬಿದ್ರೆ ಸಮೀಪದ ಹೆಜಮಾಡಿಯಲ್ಲಿ ನಡೆದ ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಕೆನರಾ ಬಸ್ ಮಾಲೀಕರ ಸಂಘ, ಟ್ಯಾಕ್ಸಿಮೆನ್ ಅಸೋಸಿಯೇಷನ್, ಗೂಡ್ಸ್ ವಾಹನ ಚಾಲಕ ಮಾಲೀಕರ ಸಂಘ- ಹೋಟೆಲ್ ಮತ್ತು ಬಾರ್ ಅಸೋಸಿಯೇಷನ್ ಇಂದು ಬಂದ್ ಮಾಡೋ ನಿರ್ಧಾರ ಮಾಡಿತ್ತು.

    ಹೆಜಮಾಡಿ ಮತ್ತು ಸಾಸ್ತಾನದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಬಂದ್ ನ ಮುಂದಾಳತ್ವ ವಹಿಸಿದೆ. ಹೈವೇಯುದ್ದಕ್ಕೂ ಅಲ್ಲಲ್ಲಿ ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಉಡುಪಿ ರಿಜಿಸ್ಟ್ರೇಷನ್ ನ ಕೆ.ಎ 20 ಎಲ್ಲಾ ವಾಹನಗಳಿಗೆ ಉಚಿತ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಅನ್ನೋದು ಹೋರಾಟಗಾರರ ಉದ್ದೇಶ. ಆಂಧ್ರ ಮೂಲದ ನವಯುಗ ಕನ್‍ಸ್ಟ್ರಕ್ಷನ್‍ಗೆ ಹೈವೇ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಜಗನ್ಮೋಹನ್ ರೆಡ್ಡಿ ಜೈಲುವಾಸದಿಂದ ಮತ್ತು ಉಡುಪಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ನದಿ- ಉಪನದಿಗಳು ಹಾದು ಹೋಗೋದರಿಂದ ಕಾಮಗಾರಿ ವಿಳಂಬವಾಗಿದೆ.

    ಇನ್ನು ಕೆಲವೆಡೆ ಸ್ಟೇ ಬಂದಿರೋದ್ರಿಂದ ಪಡುಬಿದ್ರೆ- ಕುಂದಾಪುರ ಭಾಗದಲ್ಲಿ ರಸ್ತೆಕಾಮಗಾರಿ ಪೂರ್ಣಗೊಂಡಿಲ್ಲ. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಕಂಪನಿ ರಸ್ತೆ ಮಾಡಿರೋದ್ರಿಂದ ಬ್ಯಾಂಕ್ ಗೆ ಮರುಪಾವತಿ ಮಾಡಲು ಒತ್ತಡ ಬರುತ್ತಿದೆ ಅಂತ ಜಿಲ್ಲಾಡಳಿತಕ್ಕೆ ನವಯುಗ ಒತ್ತಡ ಹಾಕಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸುಂಕ ವಸೂಲಿಗೆ ಪರವಾನಿಗೆ ನೀಡಿದೆ. ಸೆಕ್ಷನ್ 144 ಹಾಕಿ ಹೋರಾಟ ನಡೆಯದಂತೆ ನೋಡಿಕೊಳ್ಳುತ್ತಿದೆ ಎನ್ನಲಾಗಿದೆ.