Tag: toilets

  • LPG ಗ್ಯಾಸ್, ಟಾಯ್ಲೆಟ್‌ ಕಟ್ಟೋದು ಮಹಿಳಾ ಸಬಲೀಕರಣ ಅಲ್ಲ: ಪ್ರಿಯಾಂಕಾ ಗಾಂಧಿ

    LPG ಗ್ಯಾಸ್, ಟಾಯ್ಲೆಟ್‌ ಕಟ್ಟೋದು ಮಹಿಳಾ ಸಬಲೀಕರಣ ಅಲ್ಲ: ಪ್ರಿಯಾಂಕಾ ಗಾಂಧಿ

    ನವದೆಹಲಿ: ಎಲ್‍ಪಿಜಿ ಸಿಲಿಂಡರ್ ಕೊಡೋದು, ಟಾಯ್ಲೆಟ್ ಕಟ್ಟಿಸಿಕೊಡುವುದು ಮಹಿಳಾ ಸಬಲೀಕರಣ ಅಲ್ಲ ಎಂದು ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

    ಮುಂದಿನ ಉತ್ತರಪ್ರದೇಶ ಚುನಾವಣೆಗಾಗಿ ರಾಯ್ ಬರೇಲಿಯಲ್ಲಿ ನಡೆದ ಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಮಹಿಳೆಯರ ಸ್ವಾಭಿಮಾನದಿಂದ ಬದುಕುವುದು ಹಾಗೂ ಎಲ್ಲಾ ತಾರತಮ್ಯಗಳ ವಿರುದ್ಧ ಹೋರಾಡೋದು ಮಹಿಳಾ ಸಬಲೀಕರಣವೇ ಹೊರತು, ಎಲ್‍ಪಿ ಮತ್ತು ಟಾಯ್ಲೆಟ್ ಕಟ್ಟೋದು ಅಲ್ಲ ಎಂದು ಆಡಳಿಯ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ. ದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್

    ಧರ್ಮದ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಹುಲ್ ಗಾಂಧಿ ಹಿಂದು ಮತ್ತು ಹಿಂದುತ್ವದ ಕುರಿತಾಗಿ ಹೇಳಿರುವುದು ಸರಿ ಇದೆ. 2 ಪದಗಳ ನಡುವೆ ಇರುವ ವ್ಯತ್ಯಾಸದ ಕುರಿತಾಗಿ ರಾಹುಲ್ ಮಾತನಾಡಿದ್ದನು. ಹಿಂದುತ್ವ ಪ್ರೀತಿ ಮತ್ತು ಏಕತೆಯನ್ನು ಕಲಿಸುತ್ತದೆ. RSS ಮತ್ತು ಬಿಜೆಪಿ ಅವರು ಬಲಪಂಥೀಯರು ಆಗಿದ್ದಾರೆ ಎಂದು ಹೇಳಿದ್ದಾರೆ. ದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ

    BJP - CONGRESS

    ಮಹಿಳೆಯರ ಬಲವರ್ಧನೆಗೆ ಮೋದಿವ ಅವರ ನೇತೃತ್ವದ ಸರ್ಕಾರ ಯಾವುದೇ ಕೊಡುಗೆ ಕೊಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ವೋಟ್ ನೀಡಬೇಕಾದ ಸಮಯದಲ್ಲಿ ಸರಿಯಾಗಿ ಯೋಚಿಸಿ ಎಂದು ಪ್ರಿಯಾಂಕಾ ಗಾಂಧಿ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.

  • ಕಾಲೇಜು ಕಾಂಪೌಂಡ್ ಅಂದಕ್ಕಾಗಿ ಶೌಚಾಲಯ ತೆರವು- ವಿದ್ಯಾರ್ಥಿಗಳ ಆಕ್ರೋಶ

    ಕಾಲೇಜು ಕಾಂಪೌಂಡ್ ಅಂದಕ್ಕಾಗಿ ಶೌಚಾಲಯ ತೆರವು- ವಿದ್ಯಾರ್ಥಿಗಳ ಆಕ್ರೋಶ

    ರಾಯಚೂರು: ಕಾಲೇಜು ಮುಂದೆ ಚೆನ್ನಾಗಿ ಕಾಣೋದಿಲ್ಲ ಅಂತ ಏಕಾಏಕಿ ಸರ್ಕಾರಿ ಪ್ರೌಢಶಾಲೆ ಶೌಚಾಲಯವನ್ನ ತೆರವು ಮಾಡಿರುವ ಘಟನೆ ರಾಯಚೂರಿನ ಯರಮರಸ್ ಕ್ಯಾಂಪ್‍ನಲ್ಲಿ ನಡೆದಿದೆ. ಮಾಹಿತಿಯೂ ನೀಡದೇ ಶಾಲೆ ಇಲ್ಲದ ವೇಳೆ ಶೌಚಾಲಯ ತೆರವು ಮಾಡಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ.

    ರಾಯಚೂರು ಸರ್ಕಾರಿ ಇಂಜನಿಯರಿಂಗ್ ಕಾಲೇಜು ಗೇಟ್ ಗೆ ಎದುರುಗಡೆ ಇದೆ ಅಂತ ಏಕಾಏಕಿ ಶೌಚಾಲಯ ತೆರವು ಮಾಡಲಾಗಿದೆ. ಇಂಜಿನಿಯರಿಂಗ್ ಕಾಲೇಜ್ ಪ್ರಾಚಾರ್ಯರು ಪ್ರೌಢಶಾಲೆ ವಿದ್ಯಾರ್ಥಿಗಳ ಬಗ್ಗೆ ನಿಷ್ಕಾಳಜಿ ತೋರಿದ್ದು ತಪ್ಪು ಅಂತ ಪೋಷಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ವ ಮಾಹಿತಿ ನೀಡಿ ಪರ್ಯಾಯ ವ್ಯವಸ್ಥೆ ಮಾಡದೇ ಒಂದೇ ಬಾರಿಗೆ ಜೆಸಿಬಿಯಿಂದ ತೆರವು ಮಾಡಲಾಗಿದೆ.

    ಕೊನೆಗೆ ವಿದ್ಯಾರ್ಥಿಗಳ ಆಕ್ರೋಶ, ಪ್ರತಿಭಟನೆಗೆ ಮಣಿದು ನೂತನ ಶೌಚಾಲಯ ಕಟ್ಟಿಸಿಕೊಡುವುದಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಆಡಳಿತ ಮಂಡಳಿ ಭರವಸೆ ನೀಡಿದೆ. ಹೊಸ ಶೌಚಾಲಯ ನಿರ್ಮಾಣವಾಗುವವರೆಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಈ ಶಾಲೆಯಲ್ಲಿ 178 ಮಕ್ಕಳು ಓದುತ್ತಿದ್ದು ಎಲ್ಲರಿಗೂ ತೊಂದರೆಯಾಗಿದೆ.

  • ಮಕ್ಕಳ ಶೌಚವನ್ನು ಚೀಲದಲ್ಲಿ ಸಂಗ್ರಹಿಸಿಟ್ಟು ಶೌಚಾಲಯಕ್ಕಾಗಿ ಪ್ರತಿಭಟಿಸಿದ ಮಹಿಳೆಯರು

    ಮಕ್ಕಳ ಶೌಚವನ್ನು ಚೀಲದಲ್ಲಿ ಸಂಗ್ರಹಿಸಿಟ್ಟು ಶೌಚಾಲಯಕ್ಕಾಗಿ ಪ್ರತಿಭಟಿಸಿದ ಮಹಿಳೆಯರು

    ತುಮಕೂರು: ಚಿಕ್ಕಮಕ್ಕಳ ಶೌಚವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟು ಶೌಚಾಲಯ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.

    ತುಮಕೂರಿನ ಶಿರಾ ತಾಲೂಕು ಪಟ್ಟನಾಯಕನಹಳ್ಳಿಯ ದೊಡ್ಡಬಾಣಗೆರೆ ಗ್ರಾಮದ ದಲಿತ ಕಾಲೋನಿಯಲ್ಲಿ ಈ ಪ್ರತಿಭಟನೆ ಮಾಡಲಾಗಿದೆ. ಕಾಲೋನಿಯಲ್ಲಿ ಶೌಚಾಲಯ ಇಲ್ಲದೆ ಸುಮಾರು 120 ಕುಟುಂಬ ತೊಂದರೆ ಅನುಭವಿಸುತ್ತಿವೆ. ಆದ್ದರಿಂದ ಮಹಿಳೆಯರು ರಾತ್ರಿ ಹೊತ್ತು ಮಾತ್ರ ಬಯಲಿಗೆ ಹೋಗುವ ಅನಿವಾರ್ಯತೆ ಇದ್ದು, ಶೌಚಾಲಯ ನಿರ್ಮಾಣಕ್ಕಾಗಿ ಆಗ್ರಹಿಸಿ ಚಿಕ್ಕಮಕ್ಕಳ ಶೌಚವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

    ಬೆಳಗಿನ ಜಾವ ಚಿಕ್ಕಮಕ್ಕಳು ಮಾಡಿದ ಶೌಚವನ್ನ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಟ್ಟು ರಾತ್ರಿ ವೇಳೆ ಅದನ್ನು ವಿಲೇವಾರಿ ಮಾಡುವ ಪರಿಸ್ಥಿತಿಯನ್ನು ಈ ಭಾಗದ ಜನ ಎದುರಿಸುತ್ತಿದ್ದಾರೆ. ದೊಡ್ಡಬಾಣಗೆರೆ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯಕ್ಕೆ ಈ ಕಾಲೋನಿಗೆ ಈ ದುರ್ಗತಿ ಬಂದಿದೆ ಎಂದು ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ರಾತ್ರಿ ಪ್ರತಿಭಟನೆ ಮಾಡಿ ಗ್ರಾಮ ಪಂಚಾಯ್ತಿ ವಿರುದ್ಧ ಹರಿಹಾಯ್ದರು.

    ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ, ಆದಷ್ಟು ಬೇಗ ಈ ಕಾಲೋನಿ ಜನರಿಗೆ ಶೌಚಾಲಯ ನಿರ್ಮಿಸಿ ಕೊಡಬೇಕು. ಜೊತೆಗೆ ನಿರ್ಲಕ್ಷ್ಯ ತೋರಿದ ಗ್ರಾಮ ಪಂಚಾಯ್ತಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.

  • ಹೆಸರಿಗೆ ಮಾತ್ರ ಬಯಲುಮುಕ್ತ ಗ್ರಾಮ- ಇಲ್ಲಿ ಶೌಚಾಲಯವೂ ಇಲ್ಲ, ಜನರ ಪರದಾಟವೂ ತಪ್ಪಿಲ್ಲ

    ಹೆಸರಿಗೆ ಮಾತ್ರ ಬಯಲುಮುಕ್ತ ಗ್ರಾಮ- ಇಲ್ಲಿ ಶೌಚಾಲಯವೂ ಇಲ್ಲ, ಜನರ ಪರದಾಟವೂ ತಪ್ಪಿಲ್ಲ

    ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯನ್ನು ಕಳೆದ ವರ್ಷ ಬಯಲುಮುಕ್ತ ಶೌಚಾಲಯ ಜಿಲ್ಲೆ ಎಂದು ಘೋಷಿಸಲಾಗಿದೆ. ಆದರೆ ಅದು ಅಧಿಕಾರಿಗಳ ಘೋಷಣೆಯಲ್ಲಷ್ಟೇ ಬಯಲು ಮುಕ್ತ ಶೌಚಾಲಯ ಜಿಲ್ಲೆಯಾಗಿದೆ.

    ಹೌದು. ರಾಮನಗರ ತಾಲೂಕಿನ ಕೂಟಗಲ್ ಸಮೀಪದ ತಿಗಳರದೊಡ್ಡಿ ಗ್ರಾಮಸ್ಥರು ಇಲ್ಲಿಯ ತನಕ ಗ್ರಾಮದಲ್ಲಿ ಒಂದು ಶೌಚಾಲಯವನ್ನೂ ಕಂಡಿಲ್ಲ. ಅಲ್ಲದೆ ಗುಡಿಸಲು ಮುಕ್ತ ರಾಜ್ಯದ ಕಲ್ಪನೆಯಲ್ಲೂ ಸಹ ಈ ಗ್ರಾಮಕ್ಕೆ ಯಾವುದೇ ಪ್ರಯೋಜನವಾಗದೆ ಗುಡಿಸಲುಗಳಲ್ಲೇ ಜನ ವಾಸವಾಗಿದ್ದಾರೆ. ಶೌಚಾಲಯಕ್ಕೆ ಬಯಲನ್ನೇ ಆಧಾರವಾಗಿಸಿಕೊಂಡಿದ್ದು ಪುರುಷರು ಹೇಗೋ ಕಾಲ ಕಳೆದರೆ. ಕತ್ತಲಾಗುವುದನ್ನು ಕಾಯ್ದುಕೊಂಡೇ ಮಹಿಳೆಯರು ಶೌಚಾಲಯಕ್ಕೆ ಹೋಗಬೇಕು. ಹೀಗಾಗಿ ರಾಮನಗರ ಹೆಸರಿಗೆ ಮಾತ್ರ ಬಯಲುಮುಕ್ತ ಜಿಲ್ಲೆಯಾಗಿದೆ.

    ಅಲ್ಲದೆ ಶೌಚಕ್ಕೆ ಜಮೀನುಗಳಿಗೆ ಹೋದರೆ ಅದರ ಮಾಲೀಕರು ಬೈಯುತ್ತಾರೆ. ಕತ್ತಲಾದ ಮೇಲೆ ಹೋಗಬೇಕಾದರೆ ಕಾಡು ಪ್ರಾಣಿಗಳು ಯಾವಾಗ ದಾಳಿ ಮಾಡುತ್ತವೋ ಎನ್ನುವ ಆತಂಕದಲ್ಲಿಯೇ ಬಯಲಿಗೆ ಹೋಗಬೇಕು. ಯಾರೇ ಬಂದರೂ ಅಷ್ಟೇ, ಕೇವಲ ಭರವಸೆಗಳನ್ನ ನೀಡಿ ಹೋಗುತ್ತಾರೆ. ಆದರೆ ಯಾರೂ ಕೂಡ ನಮಗೆ ನೆರವಾಗುತ್ತಿಲ್ಲ, ಗ್ರಾಮದ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸ್ಥಳೀಯ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ತಿಗಳರದೊಡ್ಡಿ ಗ್ರಾಮವನ್ನು ಯಾವ ಆಧಾರದ ಮೇಲೆ ಬಯಲು ಮುಕ್ತ ಗ್ರಾಮವನ್ನಾಗಿ ಅಧಿಕಾರಿಗಳು ಘೋಷಿಸಿದ್ದಾರೋ ಗೊತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗೆ ಪಣ ತೊಟ್ಟಿದ್ದಾರೆ ಸಿಇಒ ರವೀಂದ್ರ

    ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗೆ ಪಣ ತೊಟ್ಟಿದ್ದಾರೆ ಸಿಇಒ ರವೀಂದ್ರ

    ಚಿತ್ರದುರ್ಗ: ಬಯಲು ಬಹಿರ್ದೆಸೆ ಮುಕ್ತ ಮಾಡಬೇಕೆಂದು ರಾಜ್ಯ ಸರ್ಕಾರ ಕನಸು ಕಂಡಿದೆ. ಎಲ್ಲಾ ಕಡೆ ಇದು ಪರಿಣಾಮಕಾರಿಯಾಗಿ ಜಾರಿಗೆ ಬರ್ತಿಲ್ಲ. ಆದರೆ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಒ ರವೀಂದ್ರ ಅವರು ಈ ಅಭಿಯಾನದಲ್ಲಿ ಯಶಸ್ವಿಯಾಗಿಸಿ ಇಂದು ಪಬ್ಲಿಕ್ ಹೀರೋ ಆಗಿದ್ದಾರೆ.

    ಹೌದು, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿಇಓ ರವೀಂದ್ರ ಅವರು ತಮಟೆ ಬಾರಿಸಿಕೊಂಡು ಮೆರವಣಿಗೆ ಹೊರಟು ಮಹಿಳೆಯರಿಗೆ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸಿ, ಸರ್ಕಾರ ಕಂಡ ಬಯಲು ಬಹಿರ್ದೆಸೆ ಮುಕ್ತ ರಾಜ್ಯದ ಕನಸನ್ನು ನನಸಾಗುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯನ್ನು ಹಿಂದುಳಿದ ಬರದನಾಡು ಎಂದು ಕರೆಯುತ್ತಾರೆ. ಇಲ್ಲಿನ ಬಹುತೇಕರು ಶೈಕ್ಷಣಿಕವಾಗಿ ಅಭಿವೃದ್ಧಿ ಕಾಣದೇ ಬಯಲು ಬರ್ಹಿದೆಸೆಗೆ ಹೋಗುತ್ತಾರೆ. ಇದರಿಂದಾಗಿ ಹಲವು ಬಾರಿ ವನ್ಯ ಮೃಗಗಳಾದ ಆನೆ, ಕರಡಿ ಹಾಗು ಹಾವಿನ ದಾಳಿಗೆ ಸಿಲುಕಿ ಅನೇಕರು ಬಲಿಯಾಗಿದ್ದಾರೆ.

    ಇದನ್ನು ಮನಗೊಂಡ ಚಿತ್ರದುರ್ಗ ಜಿಲ್ಲಾಪಂಚಾಯ್ತಿ ಸಿಈಓ ಪಿ.ಎನ್.ರವಿಂದ್ರ ಈ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಟ್ಟಿದ್ದೂ, ಗೃಹ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸೋ ಮೂಲಕ ಜನಮನ್ನಣೆ ಗಳಿಸಿದ್ದಾರೆ.

    ರವೀಂದ್ರ ಅವರು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಅಭಿಯಾನ ಆರಂಭಿಸಿ ‘ನಮ್ಮ ನಡಿಗೆ ಶೌಚಾಲಯ ನಿರ್ಮಾಣದ ಕಡೆಗೆ’ ಅನ್ನೋ ವಿಶೇಷ ಅಭಿಯಾನ ನಡೆಸುತ್ತಿದ್ದಾರೆ. ನಿತ್ಯವೂ ಬೆಳ್ಳಂಬೆಳಿಗ್ಗೆ ಒಂದೊಂದು ಗ್ರಾಮಪಂಚಾಯ್ತಿಗೆ ಭೇಟಿ ನೀಡಿ ಜಾಗೃತಿ ಮೂಡಿಸ್ತಿದ್ದಾರೆ. ಸ್ಥಳದಲ್ಲೇ ಸರ್ಕಾರದ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆಗೆ ನಾಂದಿ ಹಾಡಿದ್ದಾರೆ.

    ಜಿಲ್ಲೆಯಲ್ಲಿ ಈ ಅಭಿಯಾನ ಬಹುತೇಕ ಯಶಸ್ವಿಯಾಗಿದೆ. ಬಹುತೇಕ ಮಂದಿ ಗೃಹ ಶೌಚಾಲಯದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಲ್ಲದೆ ಈ ಪ್ರಯೋಗದ ಫಲವಾಗಿ, 90% ಬದಲಾವಣೆ ಕೂಡ ಆಗಿದೆ. ಬಯಲು ಬಹಿರ್ದೆಸೆಯಿಂದಾಗುವ ಸಾಂಕ್ರಾಮಿಕ ರೋಗಬಾಧೆ ಕುರಿತು ಜಾಗೃತಿಯನ್ನು ಮೂಡಿಸ್ತಿರೋ ರವೀಂದ್ರ ಅವರು, ವನ್ಯಜೀವಿಗಳಿಂದ ಪ್ರಾಣಕ್ಕೆ ಬರ್ತಿದ್ದ ಸಂಚಕಾರವನ್ನೂ ದೂರ ಮಾಡಿಸಿದ್ದಾರೆ.

    ಒಟ್ಟಾರೆ ಕೆಲವು ಮೂಡನಂಬಿಕೆಗಳು ಮತ್ತು ಸರ್ಕಾರ ಅನುದಾನ ಸರಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪದ ಕಾರಣದಿಂದಾಗಿ ಇಲ್ಲಿನ ಬಹುತೇಕ ಗ್ರಾಮಗಳ ಗ್ರಾಮಸ್ಥರು ಬಯಲು ಬಹಿರ್ದೆಸೆಗೆ ತೆರಳುತ್ತಿದ್ದರು. ಆದ್ರೆ ವಿಶೇಷ ಶೈಲಿಯಲ್ಲಿ ಅವರ ಮನ ಗೆದ್ದು, ಗೃಹ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಪ್ರೇರೆಪಿಸಿ, ಚಿತ್ರದುರ್ಗ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಟ್ಟಿರೋ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಸಿಇಓ ರವೀಂದ್ರ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv