ಬೆಂಗಳೂರು: ಖ್ಯಾತ ಪತ್ರಕರ್ತ, ಲೇಖಕ ಮತ್ತು ಅಂಕಣಕಾರ ಟಿ.ಜೆ.ಎಸ್. ಜಾರ್ಜ್ (97) ಬೆಂಗಳೂರಿನಲ್ಲಿ ನಿಧನರಾದರು. ಕೇರಳದಲ್ಲಿ ಜನಿಸಿ, ಮುಂಬೈನಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಜಾರ್ಜ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಇಂದು ಸಂಜೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು.
ತಯ್ಯಿಲ್ ಜೇಕಬ್ ಸೋನಿ ಜಾರ್ಜ್ (TJS George) ಅವರು ಮೇ 7, 1928 ರಂದು ಕೇರಳದಲ್ಲಿ ಜನಿಸಿದ್ದರು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ಇವರು ನಂತರ ಮುಂಬೈನ ಫ್ರೀ ಪ್ರೆಸ್ ಜರ್ನಲ್‌ನಲ್ಲಿ ವೃತ್ತಿಜೀವನವನ್ನು ಆರಂಭಿಸಿದರು.
ದಶಕಗಳ ಕಾಲ ಅವರು ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್, ದಿ ಸರ್ಚ್‌ಲೈಟ್, ಫಾರ್ ಈಸ್ಟರ್ನ್ ಎಕನಾಮಿಕ್ ರಿವ್ಯೂಗಳಿಗೆ ಬರೆದಿದ್ದರು. ಹಾಂಗ್ ಕಾಂಗ್‌ನಲ್ಲಿ ಏಷ್ಯಾವೀಕ್‌ನ ಸ್ಥಾಪಕ ಸಂಪಾದಕರಾದರು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕೀಯ ಸಲಹೆಗಾರರಾಗಿ ಜಾರ್ಜ್ ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದರು. ಸಾಪ್ತಾಹಿಕ ಅಂಕಣ ‘ಪಾಯಿಂಟ್ ಆಫ್ ವ್ಯೂ‘ 25 ವರ್ಷಗಳ ಕಾಲ ಬರೆದಿದ್ದರು. ಜೂನ್ 2022 ರಲ್ಲಿ ಕೊನೆಯ ಬಾರಿ ಬರೆದು ತಮ್ಮ ಅಂಕಣ ಬರಹಕ್ಕೆ ಪೂರ್ಣ ವಿರಾಮ ಹಾಕಿದರು. ಜಾರ್ಜ್ ಅವರ ಪಾಯಿಂಟ್ ಆಫ್ ವ್ಯೂ ಕನ್ನಡಪ್ರಭದಲ್ಲಿ ‘ನೇರಮಾತು’ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು. ಇದನ್ನೂ ಓದಿ: ಮೈಸೂರು ದಸರಾ | ಸಿಎಂ ಜೊತೆ ತೆರೆದ ಜೀಪಿನಲ್ಲಿ ಮಹದೇವಪ್ಪ ಮೊಮ್ಮೊಗನ ಪ್ರಯಾಣ
ಸಿಎಂ ಕಂಬನಿ
ಜಾರ್ಜ್ ಅವರು ತಮ್ಮ ಹರಿತವಾದ ಲೇಖನಿ ಮತ್ತು ರಾಜಿಯಾಗದ ಧ್ವನಿಯಿಂದ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ್ದರು. ಓದುಗರನ್ನು ಯೋಚಿಸುವಂತೆ, ಪ್ರಶ್ನಿಸುವಂತೆ ಮತ್ತು ತೊಡಗಿಸಿಕೊಳ್ಳುವಂತೆ ಮಾಡಿದ ನಿಜವಾದ ಸಾರ್ವಜನಿಕ ಬುದ್ಧಿಜೀವಿಯಾಗಿದ್ದರು. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಕಂಬನಿ ಮಿಡಿದಿದ್ದಾರೆ.