ಹೆಸರಾಂತ ನಿರ್ದೇಶಕ ರಾಜಮೌಳಿ (Rajamouli) ಮತ್ತು ಮಹೇಶ್ ಬಾಬು (Mahesh Babu) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಸಿಂಪಲ್ ಆಗಿರುವಂತಹ ಶೀರ್ಷಿಕೆ (Title) ಇಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಜಮೌಳಿ ಎರಡು ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ ಒಂದನ್ನು ಪಕ್ಕಾ ಮಾಡಲಿದ್ದಾರೆ. ಮಹಾರಾಜ್ ಅಥವಾ ಚಕ್ರವರ್ತಿ ಎನ್ನುವ ಹೆಸರನ್ನು ರಾಜಮೌಳಿ ಆಯ್ಕೆ ಮಾಡಿದ್ದಾರೆ.
ಒಂದು ಕಡೆ ಶೀರ್ಷಿಕೆ ಪಕ್ಕಾ ಮಾಡುವಲ್ಲಿ ರಾಜಮೌಳಿ ತೊಡಗಿದ್ದರೆ ಮತ್ತೊಂದು ಕಡೆ ಈ ಸಿನಿಮಾಗೆ ಇಂಡೋನೇಷಿಯಾದ ನಟಿ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ (Chelsea Elizabeth Islan) ಅವರನ್ನು ನಾಯಕಿಯಾಗಿ ಚಿತ್ರತಂಡ ಫೈನಲ್ ಮಾಡಿದೆ ಎನ್ನುವ ಸುದ್ದಿಯೂ ಇದೆ. ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಇದರ ಜೊತೆಗೆ ಚಿತ್ರಕ್ಕೆ ಬೇಕಾಗಿರೋ ಪಾತ್ರಧಾರಿಗಳ ಹುಡುಕಾಟ ಕೂಡ ನಡೆಯುತ್ತಿದೆ.
ನಟಿ ಚೆಲ್ಸಿಯಾ ಅವರನ್ನು ಕೆಲದಿನಗಳ ಹಿಂದೆ ಸ್ಕ್ರೀನ್ ಟೆಸ್ಟ್ ಕೂಡ ಮಾಡಿದ್ದರು ಎನ್ನಲಾಗುತ್ತಿದೆ. ಇಂಡೋನೇಷಿಯಾದ ಮೂಲದ ಈ ನಟಿ ‘ಟೇಂಟಂಗಾ ಮೆಸಾ ಗಿಟು’ ಹೆಸರಿನ ಟಿವಿ ಸರಣಿ ಮೂಲಕ ಜನಪ್ರಿಯತೆ ಗಳಿಸಿದವರು.
ನಟ ಮಹೇಶ್ ಬಾಬುಗೆ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ ನಾಯಕಿ ಎಂಬ ಸುದ್ದಿ ಚಿತ್ರತಂಡದಿಂದ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಸುದ್ದಿ ಕೇಳಿರೋ ಪ್ರಿನ್ಸ್ ಮಾತ್ರ ಸಖತ್ ಖುಷಿಪಟ್ಟಿದ್ದಾರೆ. ವಿಷ್ಯ ಏನೇ ಇರಲಿ ಸಿನಿಮಾ ಬೇಗ ತೆರೆಯ ಮೇಲೆ ನೋಡಬೇಕು ಅಂತ ಅಭಿಮಾನಿಗಳು ಕಾಯ್ತಿದ್ದಾರೆ.
ಸಿನಿಮಾ ಪ್ರೇಮಿಗಳ ತಂಡವೊಂದು ಅತ್ಯಂತ ಶ್ರದ್ಧೆಯಿಂದ, ಪ್ರೀತಿಯಿಂದ ನಿರ್ಮಾಣ ಮಾಡಿದ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಆ ಸಿನಿಮಾದ ಹೆಸರೇ ಭಾವತೀರಯಾನ (Bhavateera Yana). ಇಂದಿನ ಯುವಕ, ಯುವತಿಯರ ಭಾವನೆ, ಪ್ರೀತಿಯ ಹಾಡು ಪಾಡು, ನೋವು ನಲಿವು, ಸುಖ ದುಖಗಳನ್ನು ತೆರೆದಿಡುವ ಪ್ರಯತ್ನವಾಗಿ ಈ ಸಿನಿಮಾ ಮೂಡಿಬಂದಿದೆ. ಆರೋಹಾ ಫಿಲಂಸ್ ಮೂಲಕ ಮಯೂರ ಅಂಬೇಕಲ್ಲು ಹಾಗೂ ತೇಜಸ್ ಕಿರಣ್ ವರ್ಷದ ಹಿಂದೆ ಫಸ್ಟ್ ಲವ್ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದರು, ಮಯೂರ ಅಂಬೆಕಲ್ಲು ನಿರ್ದೇಶನದ ಆ ಕಿರುಚಿತ್ರ ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಾಗಿ ನೋಡುಗರೆಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು, ಅದರ ಎರಡನೇ ಭಾಗ ಮಾಡಿದಾಗ ಇದನ್ನು ಸಿನಿಮಾ ಮಾಡಿ ಎಂದು ಹಿರಿಯರೆಲ್ಲರೂ ನೀಡಿದ ಸಲಹೆಯಿಂದ ಪ್ರೇರಿತರಾದ ಈ ತಂಡ ಇದೀಗ ಎರಡು ಭಾಗದ ಈ ಶಾರ್ಟ್ ಫಿಲಂ ಅನ್ನು ಸಿನಿಮಾ ರೂಪಕ್ಕೆ ತಂದಿದೆ, ಆ ಚಿತ್ರದ ಶೀರ್ಷಿಕೆ (Title) ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು.
ಒಬ್ಬ ಹುಡುಗನ ಪ್ರೀತಿಯ ಪಯಣ ಈ ಚಿತ್ರದಲ್ಲಿದ್ದು, ತೇಜಸ್ ಕಿರಣ್ ಹಾಗೂ ಆರೋಹಿ ನೈನಾ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇವರ ಸಂಧ್ಯಾಕಾಲದ ಪಾತ್ರಗಳನ್ನು ಹಿರಿಯ ಕಲಾವಿದರಾದ ರಮೇಶ್ ಭಟ್ ಹಾಗೂ ವಿದ್ಯಾಮೂರ್ತಿ ನಿರ್ವಹಿಸಿದ್ದಾರೆ. ಅಂಕಣಕಾರ ಎ.ಆರ್. ಮಣಿಕಾಂತ್ ಅವರ ಜನಪ್ರಿಯ ಲೇಖನಗಳ ಗುಚ್ಚ ಭಾವತೀರಯಾನ, ಅದನ್ನೇ ತಮ್ಮ ಚಿತ್ರದ ಶೀರ್ಷಿಕೆಯಾಗಿ ಮಯೂರ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ಭಾಮಾ ಹರೀಶ್, ನಿತ್ಯಾನಂದ ಪ್ರಭು, ಕರಿಸುಬ್ಬು, ಶಿಲ್ಪಾ ಶ್ರೀನಿವಾಸ್, ಲಯನ್ ವೆಂಕಟೇಶ್ ಅಲ್ಲದೆ ಪತ್ರಕರ್ತ ಎ.ಆರ್. ಮಣಿಕಾಂತ್ ಕೂಡ ಹಾಜರಿದ್ದು ಟೈಟಲ್ ಲಾಂಚ್ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟ ರಮೇಶ್ ಭಟ್ ನನ್ನ 50 ವರ್ಷಗಳ ಜರ್ನಿಯಲ್ಲಿ ಮನೆಗೆ ಸ್ವೀಟ್ಸ್, ಬೊಕ್ಕೆ ತಂದು ಪಾತ್ರ ಕೊಟ್ಟವರು ತುಂಬಾ ವಿರಳ. ಈ ಹುಡುಗರು ನನಗೆ ಅಷ್ಟು ಗೌರವ ಕೊಟ್ಟರು. ಈ ಇಬ್ಬರು ಹುಡುಗರು ತುಂಬಾ ಕಾನ್ಫಿಡೆಂಟಾಗಿ ಸಿನಿಮಾ ಮಾಡಿದ್ದಾರೆ, ಇಡೀ ತಂಡ ಪ್ರೀತಿಯಿಂದ ಹಾನೆಸ್ಟಾಗಿ ಕೆಲಸ ಮಾಡಿದೆ. ಮನುಷ್ಯನಿಗೆ ಪ್ರಬುದ್ದತೆ ಬಂದಮೇಲೆ ತಾನು ಮಾಡಿದ ಸರಿ ತಪ್ಪುಗಳನ್ನು ಅವಲೋಕಿಸುವ ಸಮಯ ಬಂದಿರುತ್ತದೆ, ಮನದ ತೊಳಲಾಟಗಳನ್ನು ವ್ಯಕ್ತಪಡಿಸುವ ನನ್ನ ಈ ಪಾತ್ರ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ ಎಂದು ಹೇಳಿದರು. ನಂತರ ಮಾತನಾಡಿದ ವಿದ್ಯಾಮೂರ್ತಿ ಇದು ಭಾವನೆಗಳೇ ತುಂಬಿದ ಯಾನ ಎನ್ನಬಹದು. ರಮೇಶ್ ಭಟ್ ಅವರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು.
ನಾಯಕನಟ ತೇಜಸ್ ಮಾತನಾಡುತ್ತ, ಒಬ್ಬ ಯುವಕನ ಲೈಫ್ ಜರ್ನಿ ಈ ಚಿತ್ರದಲ್ಲಿದೆ. ವಿದ್ಯಾಮೂರ್ತಿ ಅವರ ಪ್ರಿ ಕ್ಲೈಮ್ಯಾಕ್ಸ್ ಸೀನ್ ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ, ವಿಶಾಖ ನಾಗಲಾಪುರ ತುಂಬಾ ಚೆನ್ನಾಗಿ ಡೈಲಾಗ್ ಬರೆದಿದ್ದಾರೆ. ಎರಡೂ ಭಾಗದ ಶಾರ್ಟ್ ಫಿಲಂ 40 ನಿಮಿಷ ಇತ್ತು, ನಂತರ ಒಂದಷ್ಟು ಪಾತ್ರಗಳನ್ನು ಸೇರಿಸಿದಾಗ ಒಂದು ಗಂಟೆಯ ಕಥೆ ಹೆಚ್ಚಾಯಿತು. ನಮ್ಮ ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದರು.
ನಿರ್ದೇಶನದ ಜೊತೆ ಸಂಗೀತ ಸಂಯೋಜನೆಯನ್ನೂ ಮಾಡಿರುವ ಮಯೂರ (Mayura) ಮಾತನಾಡುತ್ತ ಈ ಕಾನ್ಸೆಪ್ಟ್ ಶುರುವಾಗಲು ಕಾರಣ ಕೃಷ್ಣ, ಅವರು ಕೊಟ್ಟ ಸಣ್ಣ ಲೈನ್ ಈಗ ಸಿನಿಮಾವಾಗಿದೆ. ನಮ್ಮ ತಂದೆ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿಕೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎಂದರು. ನಂತರ ನಾಯಕಿ ಆರೋಹಿ ನೈನಾ ಮಾತನಾಡಿ ನಮ್ಮ ಪುಟ್ಟ ಹೆಜ್ಜೆಗೆ ನಿಮ್ಮ ಸಹಕಾರ ಬೇಕು. ಆರಂಭದಲ್ಲಿ ವೆಬ್ ಸೀರೀಸ್ ಮಾಡಬೇಕು ಎಂದುಕೊಂಡಿದ್ದೆವು, ನಂತರ ಶಾರ್ಟ್ ಫಿಲಂ ಈಗ ಚಲನಚಿತ್ರವಾಗಿದೆ ಎಂದರು.
ಡಾಲಿ ಧನಂಜಯ (Dolly Dhananjay) ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಿಹಿ ಸುದ್ದಿನಾ ಅಂದ್ರೆ ಮದುವೆ ಅಗ್ತಿದ್ದಾರಾ ಅಂತ ಅಚ್ಚರಿ ಪಡಬೇಡಿ. ಡಾಲಿ ಪ್ರೊಡಕ್ಷನ್ ನಿಂದ ಮತ್ತೊಂದು ಸಿನಿಮಾ (New Movie) ಸೆಟ್ಟೇರುತ್ತಿದೆ ಎನ್ನುವುದೇ ಅಭಿಮಾನಿಗಳಿಗೆ ಖುಷಿಯ ವಿಚಾರ. ಹೌದು ಧನಂಜಯ ನಿರ್ಮಾಣದ ‘ಡಾಲಿ ಪಿಕ್ಚರ್ಸ್’ನ ಐದನೇ ಸಿನಿಮಾ ಸೆಟ್ಟೇರುತ್ತಿದೆ. ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ಹಿಟ್ ನೀಡಲು ಸಜ್ಜಾಗಿದೆ.
‘ಟಗರು ಪಲ್ಯ’ ಸಕ್ಸಸ್ ನಲ್ಲಿರುವ ‘ಡಾಲಿ ಪಿಚ್ಚರ್’ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ. ಈ ಬಗ್ಗೆ ಡಾಲಿ ಪಿಚ್ಚರ್ ಸಾಮಾಜಿಕ ಜಾಲರಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ ಯಾವ ಸಿನಿಮಾ, ಹೀರೋ ಯಾರು ಎನ್ನುವ ಯಾವುದೇ ಡೀಟೇಲ್ಸ್ ಬಿಟ್ಟು ಕೊಟ್ಟಿಲ್ಲ.
ಬಡವರ ಮಕ್ಕಳು ಬೆಳಿಬೇಕು ಎನ್ನುವ ಡಾಲಿ ಅದರಂತೆ ತಮ್ಮ ಪ್ರೊಡಕ್ಷನ್ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಅದರಂತೆ ಈ ಬಾರಿ ಯಾವ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದಾರೆ, ಧನಂಜಯ ಅವರ ಪ್ರೊಡಕ್ಷನ್ ನಿಂದ ಯಾವ ಹೀರೋ, ನಿರ್ದೇಶಕ ಮತ್ತು ನಾಯಕಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
5ನೇ ಸಿನಿಮಾ ಬರ್ತಿದೆ ಎಂದು ಮಾಹಿತಿ ಹಂಚಿಕೊಂಡಿರುವ ಡಾಲಿ ಪಿಕ್ಚರ್ಸ್ ಇದೇ ತಿಂಗಳು ಫೆಬ್ರವರಿ 14ಕ್ಕೆ ಸಿನಿಮಾದ ಟೈಟಲ್ (Title) ಮತ್ತು ಹೀರೋ ಯಾರು ಎಂದು ಅನೌನ್ಸ್ ಮಾಡಲಿದ್ದಾರೆ.
ವಿನೋದ್ ಪ್ರಭಾಕರ್ (Vinod Prabhakar) ನಾಯಕರಾಗಿ ನಟಿಸುತ್ತಿರುವ 25 ನೇ ಚಿತ್ರದ ಶೀರ್ಷಿಕೆ ಅನಾವರಣ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಇದೇ ಸಂದರ್ಭದಲ್ಲಿ ಪದ್ಮಾವತಿ ಫಿಲಂಸ್ ಎಂಬ ನೂತನ ನಿರ್ಮಾಣ ಸಂಸ್ಥೆ ಕೂಡ ಆರಂಭವಾಯಿತು. ಗೃಹ ಸಚಿವ ಜಿ.ಪರಮೇಶ್ವರ್ ನೂತನ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು. ‘ಬಲರಾಮನ ದಿನಗಳು’ (Balaramana Dinagalu) ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಆ ದಿನಗಳು ಖ್ಯಾತಿಯ ಕೆ.ಎಂ.ಚೈತನ್ಯ (KM Chaitanya) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಿರ್ಮಾಪಕ ಶ್ರೇಯಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರದ ಶೀರ್ಷಿಕೆ ಅನಾವರಣ ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಟೈಗರ್ ಎಂದು ಬಿರುದು ನೀಡಿ ಸನ್ಮಾನಿಸಲಾಯಿತು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.
ಪ್ರತಿಯೊಬ್ಬರಿಗೂ ಜೀವನದಲ್ಲಿ ವೈದ್ಯ, ಪೊಲೀಸ್, ರಾಜಕಾರಣಿ, ವಿಜ್ಞಾನಿ ಹೀಗೆ ಏನೇನೋ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ, ನಮ್ಮ ಶ್ರೇಯಸ್‍ಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಆಸೆ ಇದ್ದು, ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಹಿಂದೆ ಸಿನಿಮಾದಲ್ಲಿ ಸಂದೇಶ ಇರುತ್ತಿತ್ತು. ಮೌಲ್ಯಗಳ ಪಾಠ ಇರುತ್ತಿತ್ತು. ಈಗ ಕಮರ್ಷಿಯಲ್ ಚಿತ್ರಗಳ ಸಂಖ್ಯೆ ಜಾಸ್ತಿ ಆಗಿದೆ. ಹಣ ಮಾಡಬೇಕು ನಿಜ. ಆದರೆ, ಜೊತೆಗೆ ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದು ಸಂದೇಶ ಸಹ ಹೋಗಬೇಕು. ಚಲನಚಿತ್ರ ಒಂದು ಪ್ರಬಲವಾದ ಮಾಧ್ಯಮ. ಈ ಮಾಧ್ಯಮದ ಮೂಲಕ ಜನರ ಮನಸ್ಸು ಬದಲಾವಣೆ ಮಾಡುವ ಅವಕಾಶವಿರುತ್ತದೆ. ಹಾಗಾಗಿ, ಯಾವ ಸಿನಿಮಾ ಮಾಡಿದರೂ ಅದರ ಮೂಲಕ ಪ್ರೇಕ್ಷಕರಿಗೆ ಒಂದು ಸಂದೇಶ ಕೊಡಿ. ನನಗೆ ಟೈಗರ್ ಪ್ರಭಾಕರ್ ಪರಿಚಿತರು. ಅವರ ಮಗ ಇಂದು ತಮ್ಮ 25ನೇ ಸಿನಿಮಾ ಮಾಡುತ್ತಿದ್ದಾರೆ. ಇದು ತಮಾಷೆ ವಿಷಯವಲ್ಲ. ಅವರು ಇನ್ನೂ 25 ಸಿನಿಮಾಗಳನ್ನು ಮಾಡಲಿ ಎಂಬುದು ನನ್ನ ಹಾರೈಕೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಚಿತ್ರ ನಿರ್ಮಿಸಬೇಕು ಎಂಬುದು ನನ್ನ ಕನಸು ಎಂದು ಮಾತನಾಡಿದ ನಿರ್ಮಾಪಕ ಶ್ರೇಯಸ್, ಆ ಕನಸಿಗೆ ನನ್ನ ತಂದೆ, ತಾಯಿ ಮತ್ತು ಸಹೋದರ ಶಕ್ತಿ ತುಂಬುತ್ತಿದ್ದಾರೆ. ವಿನೋದ್ ಪ್ರಭಾಕರ್ ಅವರು ನನ್ನ ಚಿತ್ರರಂಗದ ಗುರುಗಳು. ಅವರ ಸಹಕಾರದಿಂದ ನಾನು ಪದ್ಮಾವತಿ ಫಿಲಂಸ್ ಎಂಬ ಸಂಸ್ಥೆ ಹುಟ್ಟುಹಾಕಿ ಈ ಚಿತ್ರ ನಿರ್ಮಿಸುತ್ತಿದ್ದೇನೆ ಎಂದರು. ನನಗೆ ಈ ಸಂಸ್ಥೆಯವರು ಟೈಗರ್ ಎಂಬ ಬಿರುದು ಕೊಟ್ಟಿದ್ದಾರೆ. ನನ್ನ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೆ ಸಿದ್ದವಾಗುತ್ತಿದೆ. ಬಿರುದಿಗೆ ಆ ಚಿತ್ರಗಳು ಧಕ್ಕೆ ತರದಂತೆ ನೋಡಿಕೊಳ್ಳುತ್ತೇನೆ. ಚೈತನ್ಯ ಅವರ ‘ಆ ದಿನಗಳು’ ಚಿತ್ರ ನೋಡಿದಾಗಿನಿಂದ ನಾನು ಅವರ ಅಭಿಮಾನಿ. ಅವರ ಜೊತೆಗೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ. ಅವರೇನು ಬಲರಾಮನ ಪಾತ್ರ ಸೃಷ್ಠಿ ಮಾಡಿದ್ದಾರೋ, ಪ್ರಾಣ ಒತ್ತೆಯಿಟ್ಟು, ಬೆವರು-ರಕ್ತ ಹರಿಸಿ ಅದಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂದರು ನಾಯಕ ವಿನೋದ್ ಪ್ರಭಾಕರ್.
ಹೆಚ್ಚಿನ ಸಿನಿಮಾಗಳಲ್ಲಿ ಮನರಂಜನೆ ಇರುತ್ತದೆ. ಸಂದೇಶಗಳು ಕಡಿಮೆಯಾಗುತ್ತಿವೆ ಎಂದು ಮಾತು ಅರಂಭಿಸಿದ ನಿರ್ದೇಶಕ ಕೆ.ಎಂ.ಚೈತನ್ಯ, ನಾನು ನಿರ್ದೇಶಿಸಿರುವ ಸಿನಿಮಾಗಳಲ್ಲಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಸಂದೇಶ ಹೇಳಿದ್ದೇನೆ. ಇದರಲ್ಲೂ ಅದು ಮುಂದುವರೆಯುತ್ತದೆ. ಈ ಚಿತ್ರ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಶ್ರೇಯಸ್. ಈ ಕಥೆ ಆಯ್ಕೆ ಮಾಡಿದ್ದು ಅವರು. ಭೂಗತಲೋಕದ ಬಗ್ಗೆ ಸಾಕಷ್ಟು ಕಥೆಗಳನ್ನು ಮಾಡಿದ್ದೆ. ಅದರಲ್ಲಿ ಯಾವ ಕಥೆ ಮಾಡಬೇಕು ಅಂತ ಹೇಳಿದ್ದು ಅವರೆ. ಜೊತೆಗೆ ಬಹಳ ವರ್ಷಗಳಿಂದ ವಿನೋದ್ ಪ್ರಭಾಕರ್ ಜೊತೆಗೆ ಚಿತ್ರ ಮಾಡುವ ಆಸೆ ಇತ್ತು. ಅದಕ್ಕೆ ಪೂರಕವಾಗಿ ಕಥೆ ಸಿಕ್ಕಿದೆ. ಈ ಚಿತ್ರಕ್ಕೆ ಅವರು ಬಹಳ ಅತ್ಯುತ್ತಮ ಆಯ್ಕೆ. ಇದು ಭೂಗತಲೋಕದ ಸಿನಿಮಾ. ಭೂಗತ ಲೋಕದ ಜೊತೆಗೆ ಸಮಾಜ, ರಾಜಕೀಯ ಹೀಗೆ ಎಲ್ಲಾ ಆಯಾಮಗಳು ಇರುತ್ತವೆ. ಚಿತ್ರದ ಬಗ್ಗೆ ಈಗಲೇ ಹೆಚ್ಚು ಹೇಳುವುದು ಕಷ್ಟ. ನಿಜಜೀವನದ ಕಥೆ ಆಧರಿಸಿದ ಕಾಲ್ಪನಿಕ ಚಿತ್ರ. ಇದು ಯಾವುದೇ ವ್ಯಕ್ತಿಯ ಕುರಿತಾದ ಚಿತ್ರ ಅಲ್ಲ. ಇದರಲ್ಲಿ ಮನರಂಜನೆ ಇರುತ್ತದೆ. ಇಡೀ ಕುಟುಂಬ ನೋಡುವ ಚಿತ್ರ ಎಂದು ತಿಳಿಸಿದರು.
‘ರಂಗಿತರಂಗ’ ಸಿನಿಮಾದ ಯಶಸ್ವಿ ಜೋಡಿ ನಿರೂಪ್ ಭಂಡಾರಿ ಮತ್ತು ಸಾಯಿ ಕುಮಾರ್ ವಿಬಿನ್ನ ಕಥಾವಸ್ತುವನ್ನು ಹೊಂದಿದ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ.‘ಅಂಕಿತ್ ಸಿನಿಮಾಸ್’ ನಿರ್ಮಾಣದ ಈ ಚಿತ್ರದ ಟೈಟಲ್ ಮತ್ತು ಮೊದಲ ಲುಕ್ ಇಂದು ಬಿಡುಗಡೆಯಾಗಿದೆ. ‘ಸತ್ಯ ಸನ್ ಆಫ್ ಹರಿಶ್ಚಂದ್ರ’ (Satya Son of Harishchandra) ಈ ಚಿತ್ರದ ಶೀರ್ಷಿಕೆ. ಇಂದು ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಹಿತವಾದ ವರ್ಣ ಸಂಯೋಜನೆಯೊಂದಿಗೆ ಸುಂದರವಾಗಿ ಮೂಡಿ ಬಂದಿದೆ.
ಮಗನಾಗಿ ನಿರೂಪ್ ಭಂಡಾರಿ (Nirup Bhandari) ಫಸ್ಟ್ ಲುಕ್ ಆಕರ್ಷಕವಾಗಿದೆ. ಅಪ್ಪನಾಗಿ ಸಾಯಿ ಕುಮಾರ್ (Sai Kumar) ಅವರ ಗತ್ತು ರಾಜಗಾಂಭೀರ್ಯದಿಂದ ಕೂಡಿದೆ.ಈ ಫಸ್ಟ್ ಲುಕ್ ನಲ್ಲಿರುವ “ನನ್ನ ತಂದೆಯೇ ನನ್ನ ವಿಲನ್” ಘೋಷವಾಕ್ಯ ದೊಂದಿಗೆ ನಿರ್ದೇಶಕ ಸಚಿನ್ ವೀಕ್ಷಕರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಂದೆ ಮತ್ತು ಮಗನ ಕಥಾ ಹಂದರವನ್ನು ಹೊಂದಿರುವುದರಿಂದ ಈ ಚಿತ್ರದ ಫಸ್ಟ್ ಲುಕ್ಕನ್ನು ನಾಯಕ ಮತ್ತು ನಿರ್ಮಾಪಕರ ತಂದೆಯರು ಜಂಟಿಯಾಗಿ ಬಿಡುಗಡೆ ಮಾಡಿದ್ದು ಔಚಿತ್ಯಪೂರ್ಣವಾಗಿತ್ತು. ಸತ್ಯ ಮತ್ತು ಸುಳ್ಳಿನ ಮಧ್ಯ ನಡೆಯುವ ಸಂಘರ್ಷದ ಕಥಾ ಹಂದರ ಹೊಂದಿರುವ ಸತ್ಯ ಸನ್ ಆಫ್ ಹರಿಶ್ಚಂದ್ರ ಸಿನಿಮಾ ಹಾಸ್ಯ ಹಾಗೂ ಸಾಂಸಾರಿಕ ಕಥಾವಸ್ತುವನ್ನು ಹೊಂದಿದ್ದು ಇದರ ಚಿತ್ರಣ ತೀರ್ಥಹಳ್ಳಿ ಮತ್ತು ಚೆನ್ನಗಿರಿಯಆಸುಪಾಸಿನ ಸುಂದರ ತಾಣದಲ್ಲಿ ಭರದಿಂದ ಸಾಗಿದೆ. ತಾರಾಗಣದಲ್ಲಿ ಬೃಂದಾ ಆಚಾರ್ಯ, ಅಂಕಿತಾ ಅಮರ್, ಸ್ವಾತಿ ಗುರುದತ್, ಎಂ ಕೆ ಮಠ, ಚೇತನ್ ದುರ್ಗಾ,ಮುಂತಾದವರು ನಿರೂಪ್ ಮತ್ತು ಸಾಯಿ ಕುಮಾರ್ ಅವರ ಮೇಲಾಟಕ್ಕೆ ಸಾಥ್ ಕೊಡಲಿದ್ದಾರೆ
“ಸತ್ಯ ಸನ್ ಆಫ್ ಹರಿಶ್ಚಂದ್ರ” ಚಿತ್ರವನ್ನು ಸಚಿನ್ ವಾಲಿ ನಿರ್ದೇಶಿಸುತ್ತಿದ್ದು “ಅಂಕಿತ್ ಸಿನಿಮಾಸ್” ಬ್ಯಾನರ್ ನಡಿಯಲ್ಲಿ ಅಂಕಿತ್ ಸೋನಿಗಾರ ನಿರ್ಮಿಸುತ್ತಿದ್ದಾರೆ. ಮೂಲತಃ ಪೂಣೆಯವರಾದ ಅಂಕಿತ್ ಅವರು ಕನ್ನಡದ ಮೇಲಿನ ಅಭಿಮಾನದಿಂದ ಕನ್ನಡ ಚಿತ್ರವನ್ನು ನಿರ್ಮಿಸುತ್ತಿರುವುದು ಪ್ರಶಂಸನೀಯ.
ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ, ಉಜ್ವಲ್ ಚಂದ್ರ ಸಂಕಲನ, ಜೋ಼ಹ ಕಬೀರ್ ವಸ್ತ್ರ ವಿನ್ಯಾಸ ಹಾಗೂ ಉಲ್ಲಾಸ್ ಹೈದೂರ್ ಕಲಾ ನಿರ್ದೇಶನವಿದೆ. “ಸತ್ಯಸನ್ ಆಫ್ ಹರಿಶ್ಚಂದ್ರ” ಚಿತ್ರವನ್ನು ಅಮೃತ್ ಸೋನೀಗಾರ ಪ್ರಸ್ತುತ ಪಡಿಸುತ್ತಿದ್ದಾರೆ.
ಹೀರೋ ಅಂದ್ರೆ ಹ್ಯಾಂಡ್ಸಮ್ ಆಗಿ ಇರಬೇಕು, ಜಿಮ್ ಮಾಡಿ ಫಿಟ್ ಆಗಿ ಇರಬೇಕು. ಈ ಗುಣಗಳಿದ್ದವನೂ ಮಾತ್ರ ಹೀರೋ ಆಗೋದಿಕ್ಕೆ ಸಾಧ್ಯ ಎಂಬ ಕಾಲವೆಲ್ಲಾ ಹೋಗಿ ಆಯ್ತು. ಈಗ ಯಾರ್ ಬೇಕಾದ್ರೂ ಹೀರೋ ಆಗಬಹುದು. ಆದ್ರೆ ನಟನಾ ಪ್ರತಿಭೆ ಇರಬೇಕು ಅಷ್ಟೇ. ಈಗ ಯಾಕೆ ಈ ಮಾತು ಅಂತೀರಾ? ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮುರುಗನಾಗಿ ಖಳನಾಯಕನ ಪಾತ್ರ ಮಾಡಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಮುನಿಕೃಷ್ಣ (Munikrishn) ಮತ್ತೊಮ್ಮೆ ನಿಮ್ಮ ಮುಂದೆ ಬರ್ತಿದ್ದಾರೆ. ಕೊಡೆಮುರುಗ ಎಂಬ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಅವರೀಗ ಸತ್ಯಮಂಗಳ ಸಿನಿಮಾದಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಮುನಿಕೃಷ್ಣಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಕ್ಕೆ ಕಾರಣ ಏನು ಅನ್ನೋದನ್ನು ನಿರ್ದೇಶಕರು ತಿಳಿಸಿದ್ದಾರೆ. ಪ್ರತಿ ಸೂಪರ್ ಸ್ಟಾರ್ ಅವರ ಮೊದಲ ಸಿನಿಮಾ ಬೆಂಬಲ ಕೊಟ್ಟಿದ್ದಕ್ಕೆ ಸ್ಟಾರ್ ಆಗಿರ್ತಾರೆ. ಅದೇ ರೀತಿ ಮುನಿಕೃಷ್ಣಅವರ ಸಿನಿಮಾ ಮೇಲಿನ ಪ್ರೀತಿ, ಡೆಡಿಕೇಷನ್ ದೊಡ್ಡದಿದೆ ಅನ್ನೋದು ನಿರ್ದೇಶಕರ ಮಾತು.
ಸತ್ಯಮಂಗಳ (Satyamangala) ಸಿನಿಮಾದ ಟೈಟಲ್ (Title) ಬಿಡುಗಡೆಯಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಚಿಕ್ಕ ಹಳ್ಳಿಯೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಗಿಣಿ ವಿಶೇಷ ಅತಿಥಿಯಾಗಿ ಆಗಮಿಸಿ, ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಸತ್ಯಮಂಗಳ ಸಿನಿಮಾಗೆ ಆರ್ಯನ್ ಪ್ರತಾಪ್ ಸಾರಥಿ. ಕಾರಂಜಿ ಹಾಗೂ ಚೆಲುವೆಯೇ ನಿನ್ನ ನೋಡಲು ಚಿತ್ರಗಳಿಗೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರುವ, ಕನ್ನಡ 90/11, ತಮಿಳಿನ ಹೇರ್ ಕೆನಾರ್ ಕಿರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರ ಏಳು ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದೆ. ಮಣಿರತ್ನಂ ಸಾರಥ್ಯದ ಅಲೈ ಪಾಯುತೇ, ರಾವಣ್ ಗೆ ಅಸಿಸ್ಟೆಂಟ್ ಡೈರೆಕ್ಷರ್ ಆಗಿ, ಹಾಲಿವುಡ್ ವಿಲ್ ಸ್ಮಿತ್ ಬಳಗದಲ್ಲಿಯೂ ದುಡಿದಿರುವ ಆರ್ಯನ್ ಪ್ರತಾಪ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ಯಮಂಗಳ ಸಿನಿಮಾಗೆ ಅವ್ರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಫಸ್ಟ್ ಫಿಲ್ಮಂ ಎವರ್ ಮೇಡ್ ಸ್ಕ್ರಿಪ್ಟ್ ಸೀನ್ ಸಾಹಸಕ್ಕೆ ಗಿನ್ನಿಸ್ ಬುಕ್ ರೆಕಾರ್ಡ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಅಡ್ವೆಂಚರ್ಸ್ ಥ್ರಿಲ್ಲಿಂಗ್ ಕಹಾನಿಯ ಸತ್ಯಮಂಗಳ ಸಿನಿಮಾದಲ್ಲಿ ದಿ ಗ್ರೇಟ್ ಖಲಿ, ಬಾಲಿವುಡ್ ಅರ್ಬಾಜ್ ಖಾನ್, ಕನಕ್ ಪಾಂಡೆ, ಶರಣ್ಯ, ಸಂಜಯ್ ಕುಮಾರ್ ರವಿ ಕಹಳೆ, ವಿಜಯ್ ಚಿಂದೂರ್, ಮಂತೇಶ್ ಹಿರೇಮಠ್, ಜಿಜಿ ತಾರಾಬಳಗದಲ್ಲಿದ್ದಾರೆ. ಹೂವಿನ ಹಡಗಲಿ ಶಾಸಕರಾದ ಕೃಷ್ಣ ನಾಯಕ್ ಅರ್ಪಿಸ್ತಿರುವ ಈ ಚಿತ್ರವನ್ನು ASA ಪ್ರೊಡಕ್ಷನ್ ಮತ್ತು ಐರಾ ಪ್ರೊಡಕ್ಷನ್ ನಡಿ ಶಂಕರ್ ಬಿ ಹಾಗೂ ಮುನಿಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರಶೇಖರ್ ಕೆಎಸ್ ಕ್ಯಾಮೆರಾ, ವೀರ್ ಸಮರ್ಥ್ ಸಂಗೀತ, ಎಂಎನ್ ವಿಶ್ವ ಸಂಕಲನ, ಪೀಟರ್ ಹೈನ್ಸ್ ಸ್ಟಂಟ್, ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.
ಸತ್ಯಮಂಗಳ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ದಾಂಡೇಲಿ, ಮಲೆ ಮಹಾದೇಶ್ವರ ಬೆಟ್ಟ, ಶ್ರೀಲಂಕಾ, ಕಟ್ಮುಂಡು, ಬ್ಯಾಂಕಕ್ ಭಾಗದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಚಿತ್ರತಂಡ 10 ದಿನಗಳ ಕಾಲ ಬ್ಯಾಂಕಕ್ ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದೆ. ವಿಶೇಷ ಅಂದರೆ ಸತ್ಯಮಂಗಳ ಸಿನಿಮಾದಲ್ಲಿ ಪಾಂಡಿಚೇರಿ ಮುಖ್ಯಮಂತ್ರಿ ಎನ್,. ರಂಗಸ್ವಾಮಿ ನಟಿಸಿದ್ದಾರೆ. ಯಾವ ಪಾತ್ರ ಅನ್ನೋದನ್ನು ಚಿತ್ರತಂಡ ಗುಟ್ಟುಬಿಟ್ಟು ಕೊಟ್ಟಿಲ್ಲ.
ಕೆ.ಆರ್.ಎಸ್ ಪ್ರೊಡಕ್ಷನ್ಸ್ ನ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಪ್ಪಾ ಐ ಲವ್ ಯೂ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದು, ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.
ಜೂಟಾಟ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಥರ್ವ್ ಆರ್ಯ ಅಪ್ಪಾ ಐ ಲವ್ ಯೂ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಎರಡನೇ ಪ್ರಯತ್ನ. ಟೈಟಲ್ ಹೇಳುವಂತೆ ಇದು ತಂದೆಯ ಮಹತ್ವ ಸಾರುವ ಸಿನಿಮಾ. ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ತಂದೆ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದೇ ಕಥೆಯ ತಿರುಳು. ಇಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.
ಅಪ್ಪಾ ಐ ಲವ್ ಯೂ ಸಿನಿಮಾಗೆ ನಾಗಾರ್ಜುನ್ ಆರ್ ಡಿ ಛಾಯಾಗ್ರಹಣ, ವೇಧಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, k. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.
ರಜನಿಕಾಂತ್ ಹೊಸ ಸಿನಿಮಾದ ಟೈಟಲ್ ಫಿಕ್ಸ್ ಆಗಿದೆ. ಇವರ 170ನೇ ಚಿತ್ರಕ್ಕೆ ‘ವೇಟ್ಟೈಯನ್’ (Vettaiyan) ಎಂದು ಹೆಸರಿಡಲಾಗಿದ್ದು, ರಜನಿ ಸಖತ್ ಮಾಸ್ ಫೀಲ್ ಕೊಡುವಂತಹ ಪಾತ್ರ ಮಾಡಲಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ. ಟೈಟಲ್ ಜೊತೆಗೆ ಒಂದು ಸಣ್ಣ ವಿಡಿಯೋ ತುಣುಕೊಂದನ್ನೂ ರಿಲೀಸ್ ಮಾಡಲಾಗಿದೆ.
ನಾನಾ ಕಾರಣಗಳಿಂದ ಈ ಚಿತ್ರ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ನಟಿಸಲಿದ್ದಾರೆ. ಹಲವು ವರ್ಷಗಳ ಬಳಿಕ ಭಾರತೀಯ ಸಿನಿಮಾ ರಂಗದ ಇಬ್ಬರು ದಿಗ್ಗಜರು ಒಂದಾಗಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಇದು ನಿಜನಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಕೊನೆಗೂ ಅದು ನಿಜವಾಗಿದೆ. ಮೂರು ದಶಕದ ಬಳಿಕ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಒಟ್ಟಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಚಿತ್ರರಂಗದ ದಂತಕಥೆ ಎಂದರೆ ಒಬ್ಬರು ರಜನಿಕಾಂತ್(Rajanikanth), ಮತ್ತೊಬ್ಬರು ಅಮಿತಾಭ್ ಬಚ್ಚನ್. ಈ ಜೋಡಿ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.ಬಳಿಕ ತಲೈವಾ- ಬಿಗ್ ಬಿ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲೇಯಿಲ್ಲ. ಈ ಸ್ಟಾರ್ ಕಿಲಾಡಿ ಜೋಡಿ, ಇದೀಗ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಲೈವಾ-ಬಿಗ್ ಬಿ (Bigg B) ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳಲು ಕೌಂಟ್‌ಡೌನ್ ಶುರುವಾಗಿದೆ.
ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ(Lyca Productions) ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ರಜನಿಯ 170ನೇ ಚಿತ್ರಕ್ಕೆ ಹಣ ಸುರಿಯುತ್ತಿದೆ. ವಿಶೇಷ ಅಂದರೆ ರಜನಿ ಜೊತೆ ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್ (Amitabh Bacchan) ಕೂಡ ನಟಿಸುತ್ತಿದ್ದಾರೆ.
ರಜನಿಕಾಂತ್- ಅಮಿತಾಭ್ ಬಚ್ಚನ್ ಭಾರತೀಯ ಚಿತ್ರರಂಗದ ಘಟಾನುಘಟಿ ನಾಯಕರು. ಈ ಇಬ್ಬರು ತಾರೆಯರು ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದವು. ರಜನಿ- ಅಮಿತಾಭ್ ಬಚ್ಚನ್ ಅಭಿನಯಕ್ಕೂ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು. ಈ ಸಿನಿಮಾಗಳ ಯಶಸ್ಸಿನ ನಂತರ ಇದೀಗ 32 ವರ್ಷದ ಬಳಿಕ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಹಣ ಹಾಕುತ್ತಿದೆ.ಬಹಳ ಅದ್ಧೂರಿಯಾಗಿ ಮೂಡಿ ಬರಲಿರುವ ಈ ಪ್ರಾಜೆಕ್ಟ್ ಮುಂದಿನ ತಿಂಗಳ ಅಂತ್ಯಕ್ಕೆ ಟೇಕಾಫ್ ಆಗಲಿದೆ.
ದಿನಕರ್ ತೂಗುದೀಪ (Dinkar Thoogudeep) ಅವರ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivaraj Kumar) ನಾಯಕರಾಗಿ ನಟಿಸಲಿರುವ ನೂತನ ಚಿತ್ರ ಹೊಸವರ್ಷಕ್ಕೆ ಘೋಷಣೆಯಾಗಿತ್ತು. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ಈ ನೂತನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ರಾಜ್ಯದ ಜನತೆಗೆ ಸಂಕ್ರಾಂತಿ ಶುಭಾಶಯ ತಿಳಿಸಿದೆ.
ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್ ಕೇಶವ್ ಹಾಗೂ ಬಿ.ಎಸ್ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರಿಯದರ್ಶಿನಿ ರಾಮರೆಡ್ಡಿ ಕಥೆ ಬರೆದಿದ್ದಾರೆ. ಮಹಾ ಶಿವರಾತ್ರಿ ಹಬ್ಬದ ವೇಳೆಗೆ ಶೀರ್ಷಿಕೆ ಬಿಡುಗಡೆಯಾಗಲಿದೆ. ಕುತೂಹಲ ಮೂಡಿಸುವಂತಹ ಶೀರ್ಷಿಕೆಯನ್ನು (Title) ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹಾಗೂ ದಿನಕರ್ ತೂಗುದೀಪ ಅವರ ಕಾಂಬಿನೇಶನ್ ನಲ್ಲಿ ಮೂಡಿಬರಲಿರುವ ಈ ಚಿತ್ರದ ಕುರಿತು ಅಭಿಮಾನಿ ವಲಯದಲ್ಲಿ ಹಾಗೂ ಚಿತ್ರೋದ್ಯಮದಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಯಾವ ರೀತಿಯ ಕಥೆಯನ್ನು ನಿರ್ದೇಶಕರು ಹೇಳಬಹುದು ಎನ್ನುವ ಕುತೂಹಲವೂ ಇದೆ.
ದಸರಾ ಹಬ್ಬದಂದು ಚಾಲನೆ ನೀಡಿದ್ದ ದಳಪತಿ ವಿಜಯ್ ನಟನೆಯ 68ನೇ ಸಿನಿಮಾಗೆ ಟೈಟಲ್ (Title) ಫಿಕ್ಸ್ ಆಗಿದೆ. ಹೊಸ ವರ್ಷದ ದಿನದಂದು ಈ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿದ್ದು, ಚಿತ್ರಕ್ಕೆ ದ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಎಂದು ಹೆಸರಿಡಲಾಗಿದೆ. ಇಷ್ಟುದ್ದದ ಟೈಟಲ್ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಕಾಲಿವುಡ್‌ನಲ್ಲಿ (Kollywood) ವಿಜಯ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಅವರ ಸಿನಿಮಾಗಾಗಿಯೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ಈ ಹಿಂದೆ ‘ಲಿಯೋ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಸಮಯದಲ್ಲೇ ಹೊಸ ಸಿನಿಮಾದತ್ತ ವಿಜಯ್ ಮುಖ ಮಾಡಿದ್ದರು.
ವಿಜಯ್ ನಟನೆಯ ದ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಚಿತ್ರಕ್ಕೆ ವೆಂಕಟ್ ಪ್ರಭು (Venkat Prabhu) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದಸರಾ ಹಬ್ಬದ (ಅ.24) ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಚಿತ್ರದ ದೊಡ್ಡ ತಾರಾ ಬಳಗ ಈ ಸಮಾರಂಭದಲ್ಲಿ ಭಾಗಿಯಾಗಿತ್ತು.
ದಳಪತಿ ವಿಜಯ್ ಜೊತೆ ಬಹುಭಾಷಾ ನಟ ಕನ್ನಡಿಗ ಪ್ರಭುದೇವ (Prabhudeva), ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು (Yogi Babu) ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿಯೂ ಅವರೆಲ್ಲ ಭಾಗಿಯಾಗಿದ್ದರು.