Tag: tirumala temple

  • ಪರಿಸರ ಸ್ನೇಹಿ ಬ್ಯಾಗ್‍ನಲ್ಲಿ ತಿರುಪತಿ ಲಡ್ಡು

    ಪರಿಸರ ಸ್ನೇಹಿ ಬ್ಯಾಗ್‍ನಲ್ಲಿ ತಿರುಪತಿ ಲಡ್ಡು

    ಹೈದರಾಬಾದ್: ಜಗತ್‍ ಪ್ರಸಿದ್ಧ ತಿರುಮಲ ತಿರುಪತಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದ ವಿಲೇವಾರಿಗಾಗಿ ಪರಿಸರ ಸ್ನೇಹಿ ಬ್ಯಾಗ್‍ಗಳನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದೆ.

    ಹೊಸ ಬ್ಯಾಗ್‍ಗಳಲ್ಲಿ ಲಡ್ಡು ವಿತರಿಸುವ ಕೌಂಟರ್‌ಅನ್ನು ನಿನ್ನೆ ಡಿಆರ್‌ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ಹಾಗೂ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಸ್ ಜವಾಹರ್ ರೆಡ್ಡಿ ಉದ್ಘಾಟಿಸಿದ್ದಾರೆ.

    ಸಾಂಪ್ರದಾಯಿಕವಾಗಿ ಬಳಸಲಾಗುವ ಪ್ಲಾಸ್ಟಿಕ್ ಬ್ಯಾಗ್‍ಗಳು, ಪೆಟ್ರೋಕೆಮಿಕಲ್ಸ್‌ನಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಆರೋಗ್ಯಕ್ಕೆ ಹಾನಿಕಾರಕ. ಅಂಥ ಬ್ಯಾಗ್‍ಗಳು ಮಣ್ಣಿನಲ್ಲಿ ಕೊಳೆಯಲು 200ಕ್ಕೂ ಹೆಚ್ಚು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಆದರೆ ಡಿಆರ್‌ಡಿಒ ತಯಾರಿಸಿರುವ ಬ್ಯಾಗ್‍ಗಳು, ಆರೋಗ್ಯಕ್ಕೆ ಹಾನಿಕಾರವಲ್ಲ. ಮಣ್ಣಿನಲ್ಲಿ ಬೇಗನೇ ಕೊಳೆಯುತ್ತವೆ. ಅಲ್ಲದೆ ಇವುಗಳ ತಯಾರಿಕಾ ವೆಚ್ಚವೂ ಕಡಿಮೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಆ. 31ರೊಳಗೆ ನಿಮ್ಮ ಸೇನೆ ಇಲ್ಲಿಂದ ಕಾಲ್ಕಿತ್ತಬೇಕು- ಅಮೆರಿಕಾಗೆ ತಾಲಿಬಾನಿಗಳ ಬೆದರಿಕೆ

    ಮನುಕುಲದ ಉಳಿವಿಗೆ ಈ ರೀತಿಯ ಉತ್ಪನ್ನಗಳು ಅತ್ಯಗತ್ಯ. ಕೆಲವು ದಿನಗಳ ಕಾಲ ಯಾತ್ರಾರ್ಥಿಗಳ ಪ್ರತಿಕ್ರಿಯೆಯನ್ನು ಗಮನಿಸಿದ ನಂತರ ನಾವು ಅದರ ಮಾರಾಟವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಆ.5ರವರೆಗೂ ತಿರುಪತಿ ಲಾಕ್‍ಡೌನ್- ತಿಮ್ಮಪ್ಪನ ದರ್ಶನಕ್ಕೆ ಅಡ್ಡಿ ಇಲ್ಲ ಎಂದ ಜಿಲ್ಲಾಡಳಿತ

    ಆ.5ರವರೆಗೂ ತಿರುಪತಿ ಲಾಕ್‍ಡೌನ್- ತಿಮ್ಮಪ್ಪನ ದರ್ಶನಕ್ಕೆ ಅಡ್ಡಿ ಇಲ್ಲ ಎಂದ ಜಿಲ್ಲಾಡಳಿತ

    ತಿರುಪತಿ: ಕೊರೊನಾ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯನ್ನು ಆಗಸ್ಟ್ 5ರವರೆಗೂ ಲಾಕ್‍ಡೌನ್ ಮಾಡುತ್ತಿರುವುದಾಗಿ ಸ್ಥಳೀಯ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    ಲಾಕ್‍ಡೌನ್ ಜಾರಿಯಾದರೂ ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈಗಾಗಲೇ ಭಕ್ತರು ಬೇರೆ ಬೇರೆ ಸ್ಥಳಗಳಿಂದ ತಮ್ಮ ಸ್ವತಃ ವಾಹನದಲ್ಲಿ ಹೊರಟಿರುವ ಸಾಧ್ಯತೆ ಇದೆ. ಇಂತಹವರಿಗೆ ಸಮಸ್ಯೆಯಾಗದಂತೆ ಅವರಿಗೆ ತಿರುಪತಿಗೆ ಪ್ರವೇಶ ನೀಡದೆ ಬೈ-ಪಾಸ್ ರಸ್ತೆ ಮೂಲಕ ನೇರ ತಿರುಮಲಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ಚಿತ್ತೂರು ಜಿಲ್ಲಾಧಿಕಾರಿ ನಾರಾಯಣ ಭರತ್ ಗುಪ್ತಾ ಹೇಳಿದ್ದಾರೆ.

    ಜೂನ್ 1 ಆನ್‍ಲಾಕ್ ಬಳಿಕ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಪರಿಣಾಮ ಜಿಲ್ಲಾಡಳಿತ ಸಭೆ ನಡೆಸಿ ಕಟ್ಟು ನಿಟ್ಟಿನ ಲಾಕ್‍ಡೌನ್ ಕ್ರಮಕ್ಕೆ ಮುಂದಾಗಿದೆ. ಉಳಿದಂತೆ ಲಾಕ್‍ಡೌನ್ ದಿನಗಳಲ್ಲಿ ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಲಾಗಿದೆ. ಯಾವುದೇ ಕಮರ್ಷಿಯಲ್ ವ್ಯವಹಾರಕ್ಕೆ ಅನುಮತಿ ನೀಡುವುದಿಲ್ಲ. ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಮಾಹಿತಿ ಅನ್ವಯ ಜಿಲ್ಲೆಯಲ್ಲಿ 5,400 ಪ್ರಕರಣಗಳು ಇದುವರೆಗೂ ದೃಢ ಆಗಿದೆ. 1,700 ಪ್ರಕರಣಗಳು ತಿರುಪತಿ ನಗರವೊಂದರಲ್ಲೇ ಕಂಡು ಬಂದಿದೆ. ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಲಾಕ್‍ಡೌನ್ ಜಾರಿ ಮಾಡಲು ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

    ಕೊರೊನಾ ಆತಂಕದ ನಡುವೆಯೂ ತಿರುಮಲದಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದುವರೆಗೂ 140 ಮಂದಿ ಟಿಟಿಡಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಉಳಿದಂತೆ ಲಡ್ಡು ಮಾಡುವ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ಮಂದಿ ಸಹಾಯಕ ಅರ್ಚಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 140 ಮಂದಿ ಸೋಂಕಿತರಲ್ಲಿ ಇದುವರೆಗೂ ಕೊರೊನಾಗೆ ಚಿಕಿತ್ಸೆ ಪಡೆದುಕೊಂಡು 70 ಮಂದಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿದಿನ ಸುಮಾರು 12 ಸಾವಿರ ಮಂದಿ ದೇವರ ದರ್ಶನ ಪಡೆಯುತ್ತಿದ್ದಾರೆ.

  • ಜೂ.11ರಿಂದ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವ ದರ್ಶನ ಆರಂಭ

    ಜೂ.11ರಿಂದ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವ ದರ್ಶನ ಆರಂಭ

    – ಗಂಟೆಗೆ 500 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ

    ಹೈದರಾಬಾದ್: ಲಾಕ್‍ಡೌನ್ ಕಾರಣದಿಂದ ಬಂದ್ ಆಗಿದ್ದ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11 ರಿಂದ ಭಕ್ತರಿಗೆ ದರ್ಶನ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಮಾರ್ಗದರ್ಶನ ಬಿಡುಗಡೆ ಮಾಡಿದ ಒಂದು ದಿನದ ಬಳಿಕ ಟಿಟಿಡಿ ಈ ಕುರಿತು ಸ್ಪಷ್ಟನೆ ನೀಡಿದೆ.

    ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11ರಿಂದ ಸರ್ವ ದರ್ಶನ ಆರಂಭವಾಗಲಿದೆ. ತಿಮ್ಮಪ್ಪನ ದರ್ಶನ ಪಡೆಯಲು ಗಂಟೆಗೆ 500 ಭಕ್ತರಿಗೆ ಅವಕಾಶ ಸಿಗಲಿದೆ. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ಮಾತ್ರ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ದಿನಕ್ಕೆ 6 ಸಾವಿರ ಮಂದಿಗೆ ಮಾತ್ರ ದೇವರ ದರ್ಶನ ಭಾಗ್ಯ ಸಿಗಲಿದೆ.

    ಜೂನ್ 8ರಿಂದ ತಿರುಮಲದಲ್ಲಿ ಪ್ರಾರಂಭಿಕ ದರ್ಶನ ಕಾರ್ಯವನ್ನು ಆರಂಭಿಸಲಿದ್ದು, ಮೊದಲು ಸ್ಥಳೀಯರಿಗೆ ಹಾಗೂ ಟಿಟಿಡಿ ಸಿಬ್ಬಂದಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಆ ಬಳಿಕವೇ ಟಿಟಿಡಿ ಸಮಿತಿ ಸರ್ವ ದರ್ಶನ ಸೇವೆಯನ್ನು ಆರಂಭಿಸಲಿದೆ. ಆನ್‍ಲೈನ್‍ನಲ್ಲಿ ದರ್ಶನದ ಟಿಕೆಟ್ ಸೇವೆಗಳು ಬುಕ್ ಮಾಡಿಕೊಳ್ಳಲು ಈಗಾಗಲೇ ಅವಕಾಶ ನೀಡಲಾಗಿದೆ.

    ಕೇಂದ್ರ ಸರ್ಕಾರ ನೀಡಿರುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಪ್ರಯೋಗಿಕ ದರ್ಶನದ ಸೇವೆ ವೇಳೆ ಈ ಕುರಿತು ಸಿಬ್ಬಂದಿಗೂ ತರಬೇತಿ ನೀಡಲಾಗುವುದು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಬಳಕೆ ಮಾಡಲಾಗುತ್ತದೆ. ಕೇಂದ್ರ ಸೂಚನೆ ಅನ್ವಯ 10 ವರ್ಷಕ್ಕಿಂತ ಕೆಳಗಿನ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ವಿವರಿಸಿದ್ದಾರೆ.

  • ತಿರುಪತಿ ಲಡ್ಡು ಟಿಟಿಡಿಗೆ ಕಹಿ – 140 ಕೋಟಿ ರೂ. ನಷ್ಟ

    ತಿರುಪತಿ ಲಡ್ಡು ಟಿಟಿಡಿಗೆ ಕಹಿ – 140 ಕೋಟಿ ರೂ. ನಷ್ಟ

    ತಿರುಪತಿ: ತಿರುಪತಿ ತಿಮ್ಮಪ್ಪನ ಲಡ್ಡು ಸೇವೆಯಿಂದಾಗಿ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ವಾರ್ಷಿಕ 140 ಕೋಟಿ ರೂ. ನಷ್ಟವಾಗುತ್ತಿದೆ. ತಿರುಪತಿ ಲಡ್ಡನ್ನು ಕಳೆದ ಮೂರು ವರ್ಷಗಳಿಂದ ಸಬ್ಸಿಡಿ ದರ ಹಾಗೂ ಕೆಲವು ಭಕ್ತರಿಗೆ ಉಚಿತವಾಗಿ ಹಂಚಿಕೆ ಮಾಡುತ್ತಿರುವುದರಿಂದ ಈ ನಷ್ಟವಾಗುತ್ತಿದೆ ಎಂದು ಟಿಟಿಡಿ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.

    ಭಕ್ತರ ಬಾಯಲ್ಲಿ ನೀರೂರಿಸುವ ಲಡ್ಡು ಪ್ರಸಾದವನ್ನು ಕಳೆದ 11 ವರ್ಷಗಳಿಂದ 25 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದೆ. ಆದರೆ ಒಂದು ಲಡ್ಡುವಿನ ಉತ್ಪಾದನಾ ವೆಚ್ಚವೇ 32.50 ರೂಪಾಯಿ ಆಗುತ್ತದೆ.

    2016ರಲ್ಲಿ ಸುಮಾರು 10 ಕೋಟಿ ಲಡ್ಡು ತಯಾರಾಗಿ ಮಾರಾಟವಾಗಿವೆ. ಸಬ್ಸಿಡಿ ದರವಲ್ಲದೆ ಉಚಿತ ದರ್ಶನ ಹಾಗೂ ಸರತಿ ಸಾಲಲ್ಲಿ ನಿಂತು ದರ್ಶನ ಪಡೆದವರಿಗೆ ಕೇವಲ 10 ರೂ.ಗೆ ಲಡ್ಡು ಪ್ರಸಾದ ನೀಡಲಾಗುತ್ತದೆ. ಇದರಿಂದಾಗಿಯೇ ವರ್ಷಕ್ಕೆ 23 ಕೋಟಿ ರೂಪಾಯಿ ನಷ್ಟವಾಗುತ್ತದೆ ಎನ್ನಲಾಗಿದೆ.

    ತಿರುಮಲ ಬೆಟ್ಟವನ್ನು 11 ಕಿ.ಮೀ. ನಡೆದುಕೊಂಡು ಬರುವವರಿಗೆ 1 ಲಡ್ಡುವಿನಂತೆ ವಿತರಣೆ ಮಾಡುತ್ತಿದ್ದು ಇದರಿಂದಾಗಿ 22.7 ಕೋಟಿ ನಷ್ಟವಾಗುತ್ತದೆ. ಅಕ್ಟೋಬರ್ 2013ರಲ್ಲಿ ಈ ಯೋಜನೆ ಆರಂಭವಾಗಿತ್ತು. ಇದು ಆರಂಭವಾದ ಬಳಿಕ ವಾರ್ಷಿಕ ಸುಮಾರು 70 ಲಕ್ಷ ಭಕ್ತರು ಬೆಟ್ಟವನ್ನು ಹತ್ತಿ ಬರುತ್ತಾರೆ.

    70 ಲಕ್ಷಕ್ಕೂ ಹೆಚ್ಚು ಭಕ್ತರು 300 ರೂ.ಗಳ ವಿಶೇಷ ದರ್ಶನ ಹಾಗೂ 500 ರೂ.ಗಳ ವಿಐಪಿ ದರ್ಶನ ಪಡೆದುಕೊಂಡು ಬರುವವರಿಗೆ ತಲಾ 2 ಲಡ್ಡುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದು ಕೂಡಾ ಟಿಟಿಡಿಯ ನಷ್ಟದ ಲೆಕ್ಕಕ್ಕೆ ಸೇರ್ಪಡೆಯಾಗುತ್ತಿದೆ.