Tag: Tipu Jayanti

  • ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ

    ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ

    ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ (Idga Maidan) ಟಿಪ್ಪು ಜಯಂತಿಯನ್ನು (Tipu Jayanti) ಆಚರಿಸಲು ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿ (Kanakadasa Jayanthi) ಆಚರಣೆಗೂ ಮನವಿ ಸಲ್ಲಿಕೆಯಾಗಿದೆ.

    ಭಾನುವಾರ ಹುಬ್ಬಳ್ಳಿಯ (Hubballi) ವಿವಿಧ ಸಂಘಟನೆಗಳ ಹೋರಾಟಗಾರರು, ಇದೇ 10ರಂದು ನಡೆಯಲಿರುವ ಟಿಪ್ಪು ಜಯಂತಿಯನ್ನು ಹುಬ್ಬಳ್ಳಿಯ ಈದ್ಗಾ ಮೈದಾನಲ್ಲಿ ಆಚರಿಸಲು ಅವಕಾಶವನ್ನು ನೀಡಬೇಕು ಎಂದು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದರು.

    tippu

    ಈ ಹೋರಾಟವನ್ನು ಎಐಎಂಐಎಂ (AIMIM) ಸಂಘಟನೆ ಹಾಗೂ ಸಮತಾ ಸೈನಿಕ ದಳ ಸಂಘಟನೆಗಳ ಕಾರ್ಯಕರ್ತರು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ಒಂದು ವೇಳೆ ಅನುಮತಿ ನೀಡದಿದ್ದಲ್ಲಿ ಬಲವಂತವಾಗಿ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ಪಾಲಿಕೆ ಹಾಗೂ ಸರ್ಕಾರಕ್ಕೆ ಸಂಘಟನೆಗಳ ಹೋರಾಟಗಾರರು ಎಚ್ಚರಿಕೆ ನೀಡಿದ್ದರು.

    ಇದಕ್ಕೆ ಶ್ರೀರಾಮ ಸೇನೆ (Sri Rama Sene) ಕಾರ್ಯಕರ್ತರು ಠಕ್ಕರ್ ನೀಡಿದ್ದು, ಇದೇ ತಿಂಗಳ 11 ರಂದು ನಡೆಯುವ ಕನಕದಾಸರ ಜಯಂತಿಯನ್ನು ಈದ್ಗಾ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಲು ಅನುಮತಿ ನೀಡಿ ಎಂದು ಹುಬ್ಬಳ್ಳಿ, ಧಾರವಾಡ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರಿಂದ ರಾಷ್ಟ್ರಪತಿಯವರ ಪದಕ ಪ್ರದಾನ

    ಗಣೇಶೋತ್ಸವ ಆಚರಣೆಗೆ ಈದ್ಗಾ ಮೈದಾನ ನೀಡಿದ ಹಿನ್ನಲೆಯಲ್ಲಿ ಟಿಪ್ಪು ಜಯಂತಿಗೂ ಅವಕಾಶ ಕೇಳಿದ್ದು, ಇದೀಗ ಕನಕದಾಸ ಜಯಂತಿಗೂ ಈದ್ಗಾ ಮೈದಾನ ನೀಡಿ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನ ಪ್ರತಿಷ್ಠೆಯ ಕಣವಾಗಿದ್ದು, ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಗೊಂದಲಕ್ಕೆ ಸಿಲುಕಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ : ಶ್ರೀರಾಮಸೇನೆ

    Live Tv
    [brid partner=56869869 player=32851 video=960834 autoplay=true]

  • ಮೋದಿ, ಬಿಎಸ್‍ವೈ ದೇಶ ವಿರೋಧಿಗಳು: ಕಾಶಪ್ಪನವರ್

    ಮೋದಿ, ಬಿಎಸ್‍ವೈ ದೇಶ ವಿರೋಧಿಗಳು: ಕಾಶಪ್ಪನವರ್

    ಬಾಗಲಕೋಟೆ: ಟಿಪ್ಪು ಸುಲ್ತಾನ್ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರೇ ದೇಶದ ವಿರೋಧಿಗಳು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನೋಡಲು ತಾಜ್‍ಮಹಲ್, ಗೋಳಗುಮ್ಮಟ, ಚಾರ್‍ಮಿನಾರ್ ಬೇಕು. ಟಿಪ್ಪು ಏಕೆ ಬೇಡ ಎಂದು ಪ್ರಶ್ನಿಸಿದರು. ಟಿಪ್ಪು ಸೋಲ್ ಆಫ್ ಮೈಸೂರು, ಕಿಂಗ್ ಆಫ್ ಕರ್ನಾಟಕ ಎಂದು ಹೊಗಳಿದರು.

    ಗಣರಾಜ್ಯೋತ್ಸವದ ದಿನ ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಮತ್ತೆ ಭಾಷಣ ಮಾಡುತ್ತಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಎಲ್ಲಿದೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎಂದು ವ್ಯಂಗ್ಯವಾಡಿದರು. ಟಿಪ್ಪು ಸುಲ್ತಾನ್ ಜಯಂತಿ ಸಂದರ್ಭದಲ್ಲಿ ಈ ಹಿಂದೆ ಬಿಎಸ್‍ವೈ ಟಿಪ್ಪು ಸುಲ್ತಾನ್ ಉಡುಗೆ ತೊಟ್ಟಿದ್ದರು. ಅಲ್ಲದೆ ಅವರ ಖಡ್ಗ ಹಿಡಿದು ಪೋಸ್ ಕೊಟ್ಟಿದ್ದರು. ಆದರೆ ಬಿಎಸ್‍ವೈ ಎರಡೇ ವರ್ಷಕ್ಕೆ ಬದಲಾದರು. ಟಿಪ್ಪು ಸುಲ್ತಾನ್ ಜಯಂತಿ ಬೇಡ ಎಂದು ಟೀಕಿಸಿದರು ಎಂದು ಹರಿಹಾಯ್ದರು.

    ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡುತ್ತೀರಿ, ಆದರೆ ಟಿಪ್ಪು ಸುಲ್ತಾನ್ ಜಯಂತಿ ಬೇಡ ಎನ್ನುತ್ತೀರಿ. ಟಿಪ್ಪು ದೇಶಕ್ಕಾಗಿ ಅಪಾರ ಕೊಡುಗೆ ನೀಡಿದ್ದಾನೆ. ದೇಶ ರಕ್ಷಣೆಗಾಗಿ ತಮ್ಮ ಮಕ್ಕಳನ್ನೇ ತ್ಯಾಗ ಮಾಡಿದ್ದ. ದೇಶ ರಕ್ಷಣೆಗಾಗಿ ಮಕ್ಕಳನ್ನ ತ್ಯಾಗ ಮಾಡಿದವರು ಯಾರಾದರೂ ಇದ್ದರೆ ಅದು ಟಿಪ್ಪು ಸುಲ್ತಾನ್ ಮಾತ್ರ ಎಂದು ಹೆಮ್ಮೆಯಿಂದ ಹೇಳುತ್ತೇನೆ. ರಾಷ್ಟ ಧ್ವಜದ ಬಣ್ಣ ಕೆಸರಿ, ಬಿಳಿ, ಹಸಿರಿನಿಂದ ಕೂಡಿದೆ. ಕೇಸರಿ ಸಂಕೇತ ತ್ಯಾಗ. ಆದರೆ ಮೋದಿ ದೇಶವನ್ನು ಕೇಸರೀಕರಣ ಮಾಡಲು ಹೊರಟಿದ್ದು, ಇದು ಎಂದೆಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.

  • ತಲ್ವಾರ್‌ನಿಂದ ಕೇಕ್ ಕತ್ತರಿಸಿ ಮಾಜಿ ಸಚಿವರ ಆಪ್ತನ ದರ್ಬಾರ್

    ತಲ್ವಾರ್‌ನಿಂದ ಕೇಕ್ ಕತ್ತರಿಸಿ ಮಾಜಿ ಸಚಿವರ ಆಪ್ತನ ದರ್ಬಾರ್

    ಬೆಂಗಳೂರು: ಮುಸಲ್ಮಾನರ ಪವಿತ್ರ ಈದ್ ಮಿಲಾದ್ ಹಬ್ಬದ ದಿನ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತನೊಬ್ಬ ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಮೂಲಕ ಕೇಕ್ ಕತ್ತರಿಸಿ ದರ್ಪ ಮೆರೆದಿದ್ದಾನೆ.

    ಭಾನುವಾರ ಮುಸ್ಲಿಮರ ಪವಿತ್ರ ಈದ್ ಮಿಲಾದ್ ಹಬ್ಬವಿತ್ತು, ಜೊತೆಗೆ ಟಿಪ್ಪು ಜಯಂತಿಯನ್ನು ಕೂಡ ಮುಸಲ್ಮಾನರು ಅದ್ಧೂರಿ ಮೆರವಣಿಗೆ ಮೂಲಕ ಆಚರಿಸಿದರು. ಹಾಗೆಯೇ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂದು ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿತ್ತು. ಆದರೆ ಈ ನಡುವೆ ಜಮೀರ್ ಅವರ ಆಪ್ತ ವಾಸಿಂ ಬೆಂಬಲಿಗರೊಂದಿಗೆ ಸೇರಿ ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದಾನೆ. ಇದನ್ನೂ ಓದಿ:ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿ ಮೆರೆದವನನ್ನ ಜೈಲಿಗಟ್ಟಿದ್ರು

    ಗೋರಿ ಪಾಳ್ಯದ ಮುಖ್ಯರಸ್ತೆಯಲ್ಲಿ ವಾಸೀಂ ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದಲ್ಲದೇ ತನ್ನ ಶೌರ್ಯ ಜನರಿಗೆಲ್ಲ ತಿಳಿಯಲಿ ಎಂದು ತನ್ನ ವಾಟ್ಸಾಪ್ ಸ್ಟೇಟಸ್‍ಗೆ ಫೋಟೋ ಹಾಕಿಕೊಂಡು ಬಿಲ್ಡಪ್ ಕೊಟ್ಟಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರವನ್ನ ಬಳಸೋದು ಕಾನೂನು ರೀತಿಯಲ್ಲಿ ಅಪರಾಧ. ಇಷ್ಟೆಲ್ಲಾ ಆದರೂ ಪೊಲೀಸರು ಮಾತ್ರ ಆತನ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ.

  • ಟಿಪ್ಪು ಜಯಂತಿ ರದ್ದು ಆದೇಶವನ್ನು ಪುನರ್ ಪರಿಶೀಲಿಸಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

    ಟಿಪ್ಪು ಜಯಂತಿ ರದ್ದು ಆದೇಶವನ್ನು ಪುನರ್ ಪರಿಶೀಲಿಸಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

    – ಕಾನೂನು ಸುವ್ಯವಸ್ಥೆ ಕಾರಣ ಕೊಟ್ಟು ಜಯಂತಿ ರದ್ದು ಸಾಧ್ಯವೇ?
    – ಜನವರಿ 3ಕ್ಕೆ ವಿಚಾರಣೆ ಮುಂದೂಡಿಕೆ

    ಬೆಂಗಳೂರು: ಟಿಪ್ಪು ಜಯಂತಿ ಸರ್ಕಾರಿ ಆಚರಣೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

    ರಾಜ್ಯ ಸರಕಾರ ಆದೇಶ ರದ್ದುಪಡಿಸಲು ಕೋರಿ ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್ ಆಲಿ ಷಾ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಾಧೀಶ ಎ. ಎಸ್.ಓಕ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.

    ಈ ವೇಳೆ ಈ ಹಿಂದೆ ಪ್ರಕಟಿಸಿದ ಆದೇಶವನ್ನು ಸರ್ಕಾರ ಪುನರ್ ಪರಿಶೀಲಿಸಬಹುದು. ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂಬಹುದು. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಕೆಲಸ ಎಂದು ಮುಖ್ಯ ನ್ಯಾಯಾಧೀಶರು ಅಭಿಪ್ರಾಯಪಟ್ಟು ಜನವರಿ 3ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದರು. ಈ ವೇಳೆ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ನಿರ್ಬಂಧವಿಲ್ಲ. ನವೆಂಬರ್ 10 ರಂದು ರಾಜ್ಯ ಸರ್ಕಾರ ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

    ಅರ್ಜಿದಾರರ ವಾದ ಏನಿತ್ತು?
    ಜುಲೈ 7 ರಂದು ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ಮಂತ್ರಿಮಂಡಲದಲ್ಲಿ ಬೇರೆ ಯಾವುದೇ ಸಚಿವರು ಇರಲಿಲ್ಲ. ಹೀಗಿದ್ದರೂ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಲಾಗಿದೆ. ಯಾವುದೇ ಸಚಿವರ ಅಭಿಪ್ರಾಯ ಪಡೆಯದೇ, ರಾಜ್ಯಪಾಲರ ಅಭಿಪ್ರಾಯ ಪಡೆಯದೇ, ಯಾರೊಬ್ಬರ ಅಭಿಪ್ರಾಯವನ್ನೂ ಪರಿಗಣಿಸದೆ ರದ್ದು ಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟೂ 28 ಜಯಂತಿಗಳನ್ನು ಆಚರಿಸಲಾಗುತ್ತಿದೆ. ಈ ಜಯಂತಿಯನ್ನು ಸರ್ಕಾರವೇ ಅಚರಿಸುತ್ತದೆ. ಟಿಪ್ಪು ಜಯಂತಿ ರದ್ದುಪಡಿಸಿರುವುದು ದುರಂತವಾಗಿದ್ದು, ಸರ್ಕಾರದ ಈ ನಡೆಯಿಂದ ಜಾತಿ ತಾರತಮ್ಯ ನಡೆಸುತ್ತಿರುವುದು ಖಾತ್ರಿಯಾಗಿದೆ. ಇದು ಮುಸಲ್ಮಾನರ ವಿರುದ್ಧದ ತಾರತಮ್ಯ ನೀತಿಯನ್ನು ತೋರಿಸುತ್ತದೆ. ಸರ್ಕಾರ ಯಾವಾಗ ಬೇಕಾದರೂ ತನ್ನ ಕಾಯ್ದೆಗಳನ್ನು ಬದಲಿಸಿಕೊಳ್ಳಬಹುದಾದರೂ ಅದಕ್ಕೆ ಒಂದು ನೀತಿ ನಿಯಮವಿದೆ. ಆದರೆ ಏಕಾಏಕಿ ಟಿಪ್ಪು ಜಯಂತಿಯನ್ನು ರದ್ದು ಮಾಡಿರುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.

    ವಿಚಾರಣೆ ಸಮಯದಲ್ಲಿ ರಾಜ್ಯದಲ್ಲಿ ಇಷ್ಟು ಜಯಂತಿಗಳನ್ನು ಆಚರಿಸಲು ಕಾರಣ ಏನು ಎಂದು ಸಿಜೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಲ್ಲಿ ಪ್ರಶ್ನಿಸಿದರು. ರಾಜ್ಯದಲ್ಲಿ ಸ್ನೇಹತಾ ಮನೋಭಾವ, ಒಗ್ಗೂಡುವಿಕೆ, ಒಬ್ಬರನೊಬ್ಬರು ಅರಿತು ಬಾಳಲು ಆಚರಿಸಲಾಗುತ್ತಿದೆ ಎಂದು ಉತ್ತರ ನೀಡಿದರು. ಈ ಉತ್ತರ ಬಂದ ಕೂಡಲೇ ಹಾಗಾದ್ರೆ ಟಿಪ್ಪು ಜಯಂತಿ ವಿಚಾರದಲ್ಲಿ ಎಂದು ಮರು ಪ್ರಶ್ನೆ ಹಾಕಿದಾಗ ಕೊಡಗಿನ ಒಂದು ಭಾಗದಲ್ಲಿ ತೀವ್ರ ಸಮಸ್ಯೆಯಾಯಿತು. ಗುಂಪು ಘರ್ಷಣೆ ನಡೆಯಿತು, ಓರ್ವನ ಹತ್ಯೆಯಾಯಿತು ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಟಿಪ್ಪು ಜಯಂತಿ ಹಿಂಪಡೆದ ಕಾರಣದಿಂದಾಗಿ ಅರ್ಜಿದಾರರ ಯಾವ ಹಕ್ಕು ಮೊಟುಕುಗೊಂಡಂತಾಗಿದೆ ಅಡ್ವೊಕೇಟ್ ಜನರಲ್ ಪ್ರಶ್ನೆ ಕೇಳಿದರು.

    ರಾಜ್ಯೋತ್ಸವ ವಿಚಾರದಲ್ಲೂ ಗಲಭೆಗಳಾಗಿವೆ. ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ಕಾಪಾಡಬೇಕು. ಕಾನೂನು ಸುವ್ಯವಸ್ಥೆ ಕಾರಣಗಳಿಂದ ರದ್ದುಪಡಿಸಲು ಸಾಧ್ಯವೇ ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನೆ ಕೇಳಿದರು. ಈ ಪ್ರಕರಣ ಸಾರ್ವಜನಿಕ ಹಿತಾಸಕ್ತಿ ವಿಚಾರವಾಗಿದೆ. ಅಡ್ವೊಕೇಟ್ ಜನರಲ್ ಹೇಳಿದನ್ನು ನಾವು ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಕೊನೆಯಲ್ಲಿ ಈ ಹಂತದಲ್ಲಿ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೂಡಲೇ ಕ್ರಮವಹಿಸಬೇಕು. ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸವನ್ನು ಸರ್ಕಾರ ಮಾಡಬೇಕು. ನಿಯಮ ಬದಲಾವಣೆಯನ್ನು ಸರ್ಕಾರ ಕ್ರಮೇಣವಾಗಿ ಮಾಡಬೇಕು. ಸುಪ್ರೀಂ ಕೋರ್ಟ್ ಪ್ರಕರಣವೊಂದರ ತೀರ್ಪು ನೀಡುವಾಗ ಇದನ್ನು ಪರಿಗಣಿಸಲು ಸೂಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ತನ್ನ ಆದೇಶವನ್ನು ಸರ್ಕಾರ ಪುನರ್ ಪರಿಶೀಲಿಸಬಹುದು ಅಥವಾ ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂಬಹುದು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಜ.3ಕ್ಕೆ ಮುಂದೂಡಿತು.

  • ನಾನು ಮಾತನಾಡೋ ತನಕ ಹೋಗ್ಬೇಡಿ – ಸಿಎಂರನ್ನು ಕರೆದು ಕೂರಿಸಿದ ಸಿದ್ದರಾಮಯ್ಯ

    ನಾನು ಮಾತನಾಡೋ ತನಕ ಹೋಗ್ಬೇಡಿ – ಸಿಎಂರನ್ನು ಕರೆದು ಕೂರಿಸಿದ ಸಿದ್ದರಾಮಯ್ಯ

    ಬೆಂಗಳೂರು: ಟಿಪ್ಪು ಜಯಂತಿ ರದ್ದು ವಿರೋಧಿಸಿ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೇರಿ ಅವರು ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.

    ಕಲಾಪ ಆರಂಭಗೊಂಡ ಬಳಿಕ ಸಿಎಂ ಯಡಿಯೂರಪ್ಪ ಅವರು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರ ಚುನಾವಣೆಗೆ ಪ್ರಸ್ತಾವ ಮಂಡಿಸಿದರು. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಆದರೆ ಅದನ್ನು ಲೆಕ್ಕಿಸದೇ ಬಿ.ಎಸ್.ಯಡಿಯೂರಪ್ಪ ಪ್ರಸ್ತಾವನೆ ಓದಿದರು. ಬಳಿಕ ನಾನು ಸಿದ್ಧಾರ್ಥ್ ಅವರ ಅಂತ್ಯಕ್ರಿಯೆಗೆ ಹೋಗಬೇಕಿದೆ. ಸದನದಿಂದ ಹೊರಡುತ್ತೇನೆ ಎಂದು ಸಿಎಂ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಕೇಳಿಕೊಂಡರು.

    ಬಿಎಸ್ ಯಡಿಯೂರಪ್ಪ ಅವರನ್ನು ಎದ್ದು ಹೋಗಲು ಬಿಡದ ಮಾಜಿ ಸಿಎಂ, ನಾನು ಮಾತನಾಡೋ ತನಕ ಹೋಗಬೇಡಿ. ಐದು ನಿಮಿಷ ಕುಳಿತುಕೊಳ್ಳಿ ಆಮೇಲೆ ಎದ್ದು ಹೋಗಿ ಎಂದು ಪಟ್ಟು ಹಿಡಿದರು. ಈ ವೇಳೆ ಬಿಜೆಪಿ ಸರ್ಕಾರದಿಂದ ಟಿಪ್ಪು ಜಯಂತಿ ರದ್ದು ವಿಚಾರವಾಗಿ ಸದನದಲ್ಲಿ ಗಲಾಟೆ ಆರಂಭವಾಯಿತು. ಮಾಜಿ ಸಿಎಂ ಮಾತು ಆರಂಭಿಸುತ್ತಿದ್ದಂತೆ ಸಿಎಂ ಯಡಿಯೂರಪ್ಪ ಅವರು ಸದನದಿಂದ ಹೊರ ನಡೆದರು.

    ಟಿಪ್ಪು ಜಯಂತಿ ರದ್ದು ವಿಚಾರವಾಗಿ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ಹಾಗೂ ವಿರೋಧದ ಮಧ್ಯೆಯೇ ಸಿಎಂ ಕಲಾಪದಿಂದ ಹೊರ ನಡೆದರು. ಈ ಮೂಲಕ ಉದ್ಯಮಿ ಸಿದ್ಧಾರ್ಥ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಚಿಕ್ಕಮಗಳೂರಿಗೆ ಹೊರಟರು. ಸಿಎಂ ಏಕಾಏಕಿ ಹೊರ ನಡೆದಿದ್ದರಿಂದ ಸದನದಲ್ಲಿ ಗದ್ದಲ ಆರಂಭವಾಯಿತು. ಆಗ ಸ್ಪೀಕರ್ ಅವರು ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದರು.

  • ಕೊಟ್ಟ ಭರವಸೆಯಂತೆ ಟಿಪ್ಪು ಜಯಂತಿ ರದ್ದು ಮಾಡಿದ್ದೇವೆ: ಶೋಭಾ ಕರಂದ್ಲಾಜೆ

    ಕೊಟ್ಟ ಭರವಸೆಯಂತೆ ಟಿಪ್ಪು ಜಯಂತಿ ರದ್ದು ಮಾಡಿದ್ದೇವೆ: ಶೋಭಾ ಕರಂದ್ಲಾಜೆ

    ನವದೆಹಲಿ: ಟಿಪ್ಪು ಜಯಂತಿಯನ್ನು ಆಚರಣೆ ಮಾಡುವ ಪದ್ಧತಿಗೆ ಸಿದ್ದರಾಮಯ್ಯ ಅವರು ನಾಂದಿ ಹಾಕಿದ್ದರು. ಆದರೆ ಮೊದಲ ಜಯಂತಿಯಂದೇ ನಾವು ಮಡಿಕೇರಿಯಲ್ಲಿ ಕುಟ್ಟಪ್ಪರನ್ನು ಕಳೆದುಕೊಂಡಿದ್ದೆವು. ರಾಜ್ಯ ಹಲವು ಕಡೆ ಇಂತಹದ್ದೆ ಸಂಘರ್ಷ ನಿರ್ಮಾಣ ಆಗಿತ್ತು. ಈ ಹಿನ್ನೆಲೆಯಲ್ಲಿ ನಾವು ಕೊಟ್ಟ ಭರವಸೆಯನ್ನು ನಡೆಸಿಕೊಂಡಿದ್ದೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಎಲ್ಲರೂ ಒಪ್ಪುವಂತಹ ವ್ಯಕ್ತಿಯಲ್ಲ. ಯಾವುದೇ ಮುಸ್ಲಿಂ ನಾಯಕ, ಮೌಲ್ವಿ ಟಿಪ್ಪು ಆಚರಣೆಗೆ ಕೇಳಿರಲಿಲ್ಲ. ಕೇವಲ ವೋಟ್ ಬ್ಯಾಂಕಿಗಾಗಿ ಇದನ್ನು ಸಿದ್ದರಾಮಯ್ಯ ಅವರು ಆಚರಣೆ ತಂದರು. ಪ್ರತಿ ವರ್ಷ ನಾವು ವಿರೋಧ ಮಾಡಿದ್ದೆವು. ಅಲ್ಲದೇ ಕಾನೂನು ನಿಯಂತ್ರಣ ಕಷ್ಟ ಎನ್ನುವ ವರದಿಗಳನ್ನು ಅಧಿಕಾರಿಗಳು ಕೊಟ್ಟಿದ್ದರು. ಇದನ್ನೆಲ್ಲ ಪರಿಗಣಿಸದೇ ಮೈತ್ರಿ ಸರ್ಕಾರ ಆಚರಣೆಯನ್ನು ಮುಂದುವರಿಸಿತ್ತು. ಆದರೆ ನಾವು ಭರವಸೆ ಕೊಟ್ಟಂತೆ ಟಿಪ್ಪು ಜಯಂತಿ ರದ್ದು ಮಾಡಿದ್ದೇವೆ ಎಂದರು.

    ಟಿಪ್ಪು ಜಯಂತಿ ಆಚರಣೆ ವೇಳೆ ಆಗುತ್ತಿದ್ದ ಘರ್ಷಣೆಯನ್ನು ತಡೆಯಲು ಈ ನಿರ್ಧಾರ ಮಾಡಿದ್ದೇವೆ. ಕುರಾನ್ ನಲ್ಲೂ ಕೂಡ ವ್ಯಕ್ತಿ ಪೂಜೆಯನ್ನು ಒಪ್ಪುವುದಿಲ್ಲ. ರಾಜ್ಯ ಜನರಿಗೆ ಈ ಬಗ್ಗೆ ಭರವಸೆ ನೀಡಿದ್ದಂತೆ ಮಾಡಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

  • ಅಲ್ಪಸಂಖ್ಯಾತರ ದ್ವೇಷದಿಂದ ಬಿಜೆಪಿ ಟಿಪ್ಪು ಜಯಂತಿ ರದ್ದುಗೊಳಿಸಿದೆ: ಸಿದ್ದರಾಮಯ್ಯ

    ಅಲ್ಪಸಂಖ್ಯಾತರ ದ್ವೇಷದಿಂದ ಬಿಜೆಪಿ ಟಿಪ್ಪು ಜಯಂತಿ ರದ್ದುಗೊಳಿಸಿದೆ: ಸಿದ್ದರಾಮಯ್ಯ

    ಬೆಂಗಳೂರು: ಬಿಜೆಪಿಯವರು ದುರುದ್ದೇಶದಿಂದ, ಅಲ್ಪಸಂಖ್ಯಾತರ ಮೇಲಿನ ದ್ವೇಷದಿಂದ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ಟಿಪ್ಪು ದಿನಾಚರಣೆ ರದ್ದು ಮಾಡಿದ್ದು ದೊಡ್ಡ ಅಪರಾಧ. ಟಿಪ್ಪು ಅಲ್ಪಸಂಖ್ಯಾತರಿಗೆ ಸಿಮಿತವಾದ ರಾಜನಲ್ಲ. ಮೈಸೂರಿನ ರಾಜನಾಗಿ ಬ್ರಿಟಿಷರ ಜೊತೆಗೆ ಹೋರಾಡಿದ ಅಪ್ರತಿಮ ದೇಶಪ್ರೇಮಿ. ಕೆಆರ್‍ಎಸ್ ನಿರ್ಮಾಣಕ್ಕೆ ಬುನಾದಿ ಹಾಕಿದ್ದೆ ಟಿಪ್ಪು ಎಂದು ಹೇಳಿದರು.

    ಮೈಸೂರು ಭಾಗದಲ್ಲಿ ಕೈಗಾರಿಕೆಗೆ, ಕೃಷಿ, ವಾಣಿಜ್ಯಕ್ಕೆ ಟಿಪ್ಪು ಅನೇಕ ಕೊಡುಗೆ ನೀಡಿದ್ದಾರೆ. ಹೀಗಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಅವರ ಜಯಂತಿ ಆರಂಭಿಸಿದೇವು. ಇದರ ಹೊರತಾಗಿ ಬೇರೆ ಉದ್ದೇಶವನ್ನು ನಾವು ಹೊಂದಿರಲಿಲ್ಲ ಎಂದು ತಿಳಿಸಿದರು.

    ಟಿಪ್ಪು ಜಯಂತಿ ರದ್ದುಗೊಳಿಸಿದ್ದು ಅತ್ಯಂತ ದೊಡ್ಡ ಅಪರಾಧ. ಇದು ಅಲ್ಪಸಂಖ್ಯಾತರ ವಿರೋಧಿ ನೀತಿ. ಇದಕ್ಕೆ ನಾನು ವಿರೋಧ ಮಾಡುತ್ತೇನೆ ಎಂದು ಹೇಳಿದರು.

    2016 ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿತ್ತು. ಮೊದಲು ಟಿಪ್ಪು ಜಯಂತಿಯನ್ನ ಅಲ್ಪಸಂಖ್ಯಾತ ಇಲಾಖೆಯಿಂದ ಆಚರಣೆ ಮಾಡಲಾಗುತ್ತಿದ್ದು, ಆ ಬಳಿಕ ಕನ್ನಡ ಸಂಸ್ಕøತಿ ಇಲಾಖೆಯಿಂದ ಜಯಂತಿ ಆಚರಿಸಲಾಗುತ್ತಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರವೂ ಆಚರಣೆಯನ್ನು ಮುಂದುವರಿಸಿತ್ತು.

    2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ಅಷ್ಟೇ ಅಲ್ಲದೇ ಸರ್ಕಾರದ ವತಿಯಿಂದಲೇ ನಡೆಯುತ್ತಿದ್ದ ಟಿಪ್ಪು ಜಯಂತಿ ಆಚರಿಸುತ್ತಿರುವ ಬಗ್ಗೆ ಬಿಜೆಪಿ ನಾಯಕರು ಪ್ರತಿಭಟಿಸಿದ್ದರು.

  • ಬಿಎಸ್‍ವೈ ಸರ್ಕಾರದಿಂದ ಟಿಪ್ಪು ಜಯಂತಿ ರದ್ದು

    ಬಿಎಸ್‍ವೈ ಸರ್ಕಾರದಿಂದ ಟಿಪ್ಪು ಜಯಂತಿ ರದ್ದು

    ಬೆಂಗಳೂರು: 2016ರಿಂದ ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ರದ್ದುಗೊಳಿಸಿದೆ.

    2016 ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿತ್ತು. ಮೊದಲು ಟಿಪ್ಪು ಜಯಂತಿಯನ್ನ ಅಲ್ಪಸಂಖ್ಯಾತ ಇಲಾಖೆಯಿಂದ ಆಚರಣೆ ಮಾಡಲಾಗುತ್ತಿದ್ದು, ಆ ಬಳಿಕ ಕನ್ನಡ ಸಂಸ್ಕøತಿ ಇಲಾಖೆಯಿಂದ ಜಯಂತಿ ಆಚರಿಸಲಾಗುತ್ತಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರವೂ ಆಚರಣೆಯನ್ನು ಮುಂದುವರಿಸಿತ್ತು.

    2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ಅಷ್ಟೇ ಅಲ್ಲದೇ ಸರ್ಕಾರದ ವತಿಯಿಂದಲೇ ಟಿಪ್ಪು ಜಯಂತಿ ಆಚರಿಸುತ್ತಿರುವ ಬಗ್ಗೆ ಬಿಜೆಪಿ ನಾಯಕರು ಪ್ರತಿಭಟಿಸಿದ್ದರು.

    ಬೋಪಯ್ಯ ಮನವಿ: ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವೇಳೆ ಘರ್ಷಣೆ ನಡೆದಿತ್ತು ಈ ಹಿನ್ನೆಲೆಯಲ್ಲಿ ಕೆ.ಜಿ.ಬೋಪಯ್ಯ ಅವರು ಜಯಂತಿ ರದ್ದತಿಗೆ ಮನವಿ ಮಾಡಿದ್ದರು. ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಚರಣೆ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಕಾರ್ಯಕ್ರಮ ಆಚರಣೆ ವೇಳೆ ಸಾವು ಕೂಡ ಸಂಭವಿಸಿತ್ತು. ಸಾರ್ವಜನಿಕ ಆಸ್ತಿ ಪಾಸ್ತಿಗೂ ಕೂಡ ಅಪಾರ ಹಾನಿಯಾಗಿತ್ತು. ಇಂದಿಗೂ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಇದ್ದು, ಜನರ ನಡುವಿನ ಸಾಮರಸ್ಯ ಹದಗೆಟ್ಟಿದೆ. ಆದ್ದರಿಂದ ಟಿಪ್ಪು ಜಯಂತಿಯನ್ನ ಸರ್ಕಾರದಿಂದ ಆಚರಣೆ ಮಾಡುವ ಆದೇಶವನ್ನು ಕೂಡಲೇ ರದ್ದುಪಡಿಸಲು ಅಗತ್ಯ ಆದೇಶ ನೀಡಲು ಮನವಿ ಮಾಡಿದ್ದರು.

    ಬೋಪಯ್ಯ ಅವರ ಮನವಿಯನ್ನು ಜುಲೈ 29ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿತ್ತು. ಸಚಿವ ಸಂಪುಟ ರಾಜ್ಯಾದ್ಯಂತ ಆಚರಿಸುತ್ತಿರುವ ಟಿಪ್ಪು ಜಯಂತಿಯನ್ನ ರದ್ದುಗೊಳಿಸಲು ಆದೇಶ ಮಾಡಿದೆ. ಈ ಕುರಿತು ಜುಲೈ 30 ರಂದು ಅಧಿಕೃತ ಆದೇಶ ನೀಡಲಾಗಿದೆ.

  • ಟಿಪ್ಪು ಜಯಂತಿಗೆ ಗೈರಾಗಿದ್ದು ಸಮುದಾಯಕ್ಕೆ ಮಾಡಿದ ಅಪಮಾನ : ತನ್ವೀರ್ ಸೇಠ್

    ಟಿಪ್ಪು ಜಯಂತಿಗೆ ಗೈರಾಗಿದ್ದು ಸಮುದಾಯಕ್ಕೆ ಮಾಡಿದ ಅಪಮಾನ : ತನ್ವೀರ್ ಸೇಠ್

    ಮೈಸೂರು: ಸರ್ಕಾರ ಆಚರಿಸುವ ಜಯಂತಿಗಳಿಗೆ ತೋರಿರುವ ಉತ್ಸಾಹ ಟಿಪ್ಪು ಜಯಂತಿಯಲ್ಲೂ ತೋರಬೇಕು ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಏರ್ಪಡಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅನಾರೋಗ್ಯದ ಕಾರಣ ನೀಡಿ ಟಿಪ್ಪು ಜಯಂತಿ ಕಾರ್ಯಕ್ರಮದಿಂದ ಗೈರಾಗಿದ್ದಾರೆ. ಉಪಮುಖ್ಯ ಮಂತ್ರಿಗಳು ವಿದೇಶ ಪ್ರವಾಸದಲ್ಲಿದ್ದಾರೆ. ಬಿಗಿ ಪೊಲೀಸ್ ಭದ್ರತೆಯ ನಡುವೆ ಜಯಂತಿ ಆಚರಣೆ ಮಾಡಲಾಗುತ್ತಿದೆ. ಇದು ನಮ್ಮ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

    ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಟಿಪ್ಪು ಜಯಂತಿಯ ವಿಚಾರವಾಗಿ ಇಷ್ಟೊಂದು ನಿರ್ಬಂಧ ವಿಧಿಸುವ ಅಗತ್ಯ ಇರಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಮ್ಮ ಸಮುದಾಯದ ಬಗ್ಗೆ ಗೌರವ ಇದ್ದಿದ್ದರೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸಬೇಕಿತ್ತು. ಸರ್ಕಾರಕ್ಕೆ ನಾನು ಸವಾಲು ಹಾಕುತ್ತೇನೆ. ಸರ್ಕಾರ ಟಿಪ್ಪು ಜಯಂತಿ ಮಾಡದೇ ಇದ್ದರೆ ನಮಗೆ ಮಾಡಲು ಯೋಗ್ಯತೆ ಇಲ್ಲ ಎಂದು ಅಲ್ಲ. ಸರ್ಕಾರ ಮಾಡದೇ ಇದ್ದರೂ ನಾವು ಮಾಡುತ್ತೇವೆ ಎಂದರು. ಇದೇ ವೇಳೆ ಕೇವಲ ರಾಜಕೀಯ ಕಾರಣಕ್ಕೆ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಮಹಾತ್ಮ ಗಾಂಧಿಯ ಪ್ರಾಣವನ್ನೇ ತೆಗೆದ ಜನ ರಾಷ್ಟ್ರ ಪ್ರೇಮದ ವಿಚಾರ ಮಾತನಾಡುತ್ತಾರೆ. ಟಿಪ್ಪು ಕುರಿತ ಚರ್ಚೆಗೆ ನಾನು ಸಿದ್ಧನಿದ್ದೇನೆ, ಯಾರು ಬೇಕಾದರೂ ಚರ್ಚೆಗೆ ಬರಲಿ ಎಂದು ಸವಾಲು ಎಸೆದರು.

    ಟಿಪ್ಪು ಜಯಂತಿಯನ್ನು ಪೊಲೀಸ್ ಭದ್ರತೆಯಲ್ಲಿ ಮಾಡುತ್ತಿರುವುದು ನಮಗೆ ಅಪಮಾನ ಮಾಡಿದಂತೆ ಆಗಿದೆ. ಮೈಸೂರು ನಗರದಲ್ಲೂ ಕೂಡ ಇಂತಹದ್ದೇ ಘಟನೆ ನಡೆದಿದೆ. ಪೊಲೀಸರನ್ನು ನೇಮಕ ಮಾಡಿದರೆ ಎಲ್ಲವೂ ಸರಿಯಾಗುತ್ತದೆ ಎಂಬ ಅರ್ಥವಲ್ಲ. ನಮ್ಮ ಜನಾಂಗಕ್ಕೆ ಟಿಪ್ಪು ಜಯಂತಿ ಆಚರಣೆ ಮಾಡಿಕೊಳ್ಳುವ ಸಾಮಥ್ರ್ಯ ಇದೆ. ಆದರೆ ಟಿಪ್ಪು ಜಯಂತಿ ಮುಕ್ತ ವಾತಾವರಣದಲ್ಲಿ ಆಚರಣೆ ಮಾಡಬೇಕಿದೆ. ನಾವೇನೂ ಟಿಪ್ಪು ಜಯಂತಿ ಮಾಡಿ ಎಂದು ಅರ್ಜಿ ಹಾಕಿಲ್ಲ. ಆದರೆ ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರತಿನಿಧಿಗಳು ಹಾಜರಿ ಆಗಬೇಕಿತ್ತು. ಸಿಎಂ ಅವರು ಅನಾರೋಗ್ಯದ ಕಾರಣ ಗೈರಾದ ಸಂದರ್ಭದಲ್ಲಿ ಅವರ ಸಂದೇಶವನ್ನಾದರು ನೀಡಬೇಕಿತ್ತು. ಈ ಕುರಿತು ಸಿಎಂ ಹಾಗೂ ಡಿಸಿಎಂ ಅವರಿಗೆ ಪತ್ರ ಬರೆದು ಉತ್ತರ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews