Tag: tipu jayanthi

  • ಟಿಪ್ಪು ಜಯಂತಿ ಹೆಸರಿನಲ್ಲಿ ಇನ್ನು ಎಷ್ಟು ಹೆಣ ಬೀಳಬೇಕಿತ್ತು- ಈಶ್ವರಪ್ಪ ಪ್ರಶ್ನೆ

    ಟಿಪ್ಪು ಜಯಂತಿ ಹೆಸರಿನಲ್ಲಿ ಇನ್ನು ಎಷ್ಟು ಹೆಣ ಬೀಳಬೇಕಿತ್ತು- ಈಶ್ವರಪ್ಪ ಪ್ರಶ್ನೆ

    ಶಿವಮೊಗ್ಗ: ಟಿಪ್ಪು ಜಯಂತಿ ಆಚರಣೆ ಹೆಸರಲ್ಲಿ ಇನ್ನು ಎಷ್ಟು ಹೆಣಗಳು ಬೀಳಬೇಕಿತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದು ದ್ವೇಷದ ರಾಜಕಾರಣದಿಂದಲ್ಲ. ಮುಖ್ಯಮಂತ್ರಿಗಳು ದ್ವೇಷದ ರಾಜಕಾರಣ ಮಾಡದೇ, ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಇಲ್ಲವಾದಲ್ಲಿ ಟಿಪ್ಪು ಜಯಂತಿ ಆಚರಣೆ ಹೆಸರಿನಲ್ಲಿ ಇನ್ನಷ್ಟು ಹೆಣಗಳು ಉರುಳುತ್ತಿದ್ದವು ಎಂದು ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ಸಿಎಂ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಕೇಂದ್ರ ನಾಯಕರ ನಿರ್ದೇಶನದಂತೆ, ಸಂಪುಟ ವಿಸ್ತರಣೆಯಾಗಲಿದೆ. ತೀರ್ಮಾನ ನನ್ನದಲ್ಲ, ಪಕ್ಷದ ತೀರ್ಮಾನದಂತೆ, ನಾನು ಮುನ್ನಡೆಯುತ್ತೇನೆ. ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖಂಡರು ದೆಹಲಿಗೆ ತೆರಳಿ ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಬಳಿ ಚರ್ಚೆ ನಡೆಸಲಿದ್ದಾರೆ. ನಂತರ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

    ಅನರ್ಹ ಶಾಸಕರ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ ರಮೇಶ್ ಕುಮಾರ್ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ. ತಾವೊಬ್ಬ ಸಂವಿಧಾನ ತಜ್ಞರು ಎಂದು ಭಾವಿಸಿಕೊಂಡು ರಮೇಶ್ ಕುಮಾರ್ ಸಂವಿಧಾನಕ್ಕೆ ದ್ರೋಹ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಸಾಮಾನ್ಯ ಜ್ಞಾನ ಇರುವವರಿಗೂ ಅರ್ಥವಾಗುತ್ತದೆ. ಅತೃಪ್ತ ಶಾಸಕರನ್ನು ಅನರ್ಹ ಮಾಡಿ ರಮೇಶ್ ಕುಮಾರ್ ಸಂವಿಧಾನ ಉಳಿಸಿಬಿಟ್ಟರು. ಸಂವಿಧಾನ ಬಲ್ಲವರು ಎಂದು ಸಿದ್ದರಾಮಯ್ಯ ಮತ್ತು ಕೃಷ್ಣ ಬೈರೇಗೌಡ ಅವರು ರಮೇಶ್ ಕುಮಾರ್ ಅವರನ್ನು ವೈಭವಿಕರಿಸುತ್ತಿದ್ದಾರೆ ಎಂದು ಹರಿಹಾಯ್ದರು.

    ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಪಾಯಿಂಟ್ ಆಫ್ ಆರ್ಡರ್ ಮಾಡಿ ಸದನದ ಸಮಯವನ್ನು ಹಾಳು ಮಾಡಿದರು. ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಸಭಾಧ್ಯಕ್ಷ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡರು. ಇವರಿಗೆ ಯಾವುದು ಸರಿಯಾಗುವುದಿಲ್ಲವೋ ಅದು ಸಂವಿಧಾನ ವಿರೋಧಿಯಾಗುತ್ತದೆ. ಯಾವುದು ಇವರ ಪರವಾಗಿರುತ್ತೋ ಅದು ಸಂವಿಧಾನಕ್ಕೂ ಸರಿಯಾಗಿರುತ್ತೆ ಎಂದು ಮೈತ್ರಿ ನಾಯಕರ ವಿರುದ್ಧ ಆರೋಪ ವ್ಯಕ್ತಪಡಿಸಿದರು.

    ಮೈತ್ರಿ ಸರ್ಕಾರದ ಆಯಸ್ಸಿನ ಕುರಿತು ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾದಗಲೇ ಹೇಳಿದ್ದೆವು. ಅಲ್ಲದೆ, ಸರ್ಕಾರ ಆರಂಭವಾಗುತ್ತಲೇ, ಕುಮಾರಸ್ವಾಮಿಯವರು, ಬೇರೆ ರೀತಿ ಅಳಲು ಪ್ರಾರಂಭಿಸಿದರು. ಅವರೊಳಗೆ ಯಾವುದೂ ಸರಿ ಇರಲಿಲ್ಲ. ಹೀಗಾಗಿ ಅವರ ಬಣ್ಣ ಲೋಕಸಭೆ ಚುನಾವಣೆ ವೇಳೆ ಬಯಲಾಯಿತು. ಇದೀಗ ಎರಡೂ ಮೈತ್ರಿ ಪಕ್ಷದ ನಾಯಕರು ಪರಸ್ಪರ ಚಾಕು ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು.

    ಅತೃಪ್ತರು ಶಾಸಕರು ಬಿಜೆಪಿಯವರೇ ಮುಂಬೈಗೆ ಕಳುಹಿಸಿದ್ದು ಎಂದು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರೇ ಬಂದು ಹೇಳುತ್ತಾರೆ ಆಗ ತಿಳಿಯಲಿದೆ. ನಮಗೆ ಆಪರೇಷನ್ ಅಗತ್ಯವಿಲ್ಲ. ಆದರೆ, ಬಿಜೆಪಿಗೆ ಸೇರ್ಪಡೆಯಾಗಬೇಕೆಂಬ ಅಭಿಲಾಷೆ ಹಲವರು ಜನರು ಹೊಂದಿದ್ದಾರೆ ಎಂದು ತಿಳಿಸಿದರು.

  • ಸರ್ಕಾರ ರದ್ದು ಪಡಿಸಿದ್ರೂ ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸುತ್ತೇವೆ: ಎಚ್‍ಡಿಡಿ

    ಸರ್ಕಾರ ರದ್ದು ಪಡಿಸಿದ್ರೂ ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸುತ್ತೇವೆ: ಎಚ್‍ಡಿಡಿ

    ಬೆಂಗಳೂರು: ಟಿಪ್ಪು ಜಯಂತಿಯನ್ನು ಬಿಜೆಪಿ ರದ್ದು ಮಾಡಿದ್ದು, ನಾವು ನಮ್ಮ ಕಚೇರಿಯಲ್ಲೇ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಜಯಂತಿಯನ್ನು ಬಿಜೆಪಿ ರದ್ದು ಮಾಡಿದೆ. ಆದರೆ, ನಾವು ನಮ್ಮ ಕಚೇರಿಯಲ್ಲೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತೇವೆ. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಟಿಪ್ಪು ಜಯಂತಿಯನ್ನು ಜಾರಿಗೆ ತಂದಿತ್ತು. ಮೈತ್ರಿ ಸರ್ಕರದ ನಂತರವೂ ಸಹ ಇದನ್ನು ಮುಂದುವರಿಸಲಾಗಿತ್ತು. ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅವರು ರದ್ದು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾವು ಟಿಪ್ಪು ಜಯಂತಿಯನ್ನು ಹಳೆಯ ಜೆಡಿಎಸ್ ಕಚೇರಿಯಲ್ಲಿದ್ದಾಗಿನಿಂದಲೂ ಆಚರಿಸುತ್ತಾ ಬಂದಿದ್ದೇವೆ. ಸಿದ್ದರಾಮಯ್ಯನವರು ಅಧ್ಯಕ್ಷರಾಗಿದ್ದಾಗಲೂ ಆಚರಣೆ ಮಾಡಿದ್ದೇವೆ. ರಾಜಕೀಯಕ್ಕಾಗಿ ಇಂತಹ ನಿರ್ಧಾರ ಕೈಗೊಳ್ಳಬಾರದು. ನಾನು ಮುಖ್ಯಮಂತ್ರಿಯಗಿದ್ದಾಗ ಮತೀಯ ಅಲ್ಪ ಸಂಖ್ಯಾತರಿಗೆ 5 ರೆಶಿಡೆನ್ಸಿಯಲ್ ಶಾಲೆ ಪ್ರಾರಂಭಿಸಿ ಟಿಪ್ಪು ಹೆಸರನ್ನೇ ಇಟ್ಟಿದ್ದೆ. ಹೀಗಾಗಿ ಇನ್ನು ಮುಂದೆಯೂ ಸಹ ನಮ್ಮ ಜೆಡಿಎಸ್ ಕಚೇರಿಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುತ್ತೇವೆ ಎಂದು ತಿಳಿಸಿದ್ದಾರೆ.

    ದ್ವೇಷದ ರಾಜಕಾರಣ ಮಾಡುವುದಿಲ್ಲ, ಎಂದು ಹೇಳುತ್ತಾರೆ. ಆದರೆ, ಇಂತಹ ನಿರ್ಧಾರ ಕೈಗೊಳ್ಳುತ್ತಾರೆ. ಮೂರೇ ದಿನದಲ್ಲಿ ಅವರ ಬಗ್ಗೆ ಏಕೆ ಮಾತನಾಡಬೇಕು. ಇನ್ನೂ ಸಮಯವಿದೆ ಈಗಲೇ ಏಕೆ ವಿರೋಧ ವ್ಯಕ್ತಪಡಿಸಬೇಕು. ಇನ್ನೂ ಮೂರು ವರ್ಷ ಎಂಟು ತಿಂಗಳುಗಳ ಕಾಲ ಆಡಳಿತ ನಡೆಸುತ್ತಾರೆ. ಹೇಗೆ ನಡೆಸುತ್ತಾರೋ ಕಾದು ನೋಡುತ್ತೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದರು.

    2016 ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿತ್ತು. ಮೊದಲು ಟಿಪ್ಪು ಜಯಂತಿಯನ್ನ ಅಲ್ಪಸಂಖ್ಯಾತ ಇಲಾಖೆಯಿಂದ ಆಚರಣೆ ಮಾಡಲಾಗುತ್ತಿದ್ದು, ಆ ಬಳಿಕ ಕನ್ನಡ ಸಂಸ್ಕೃತಿ ಇಲಾಖೆಯಿಂದ ಜಯಂತಿ ಆಚರಿಸಲಾಗುತ್ತಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರವೂ ಆಚರಣೆಯನ್ನು ಮುಂದುವರಿಸಿತ್ತು.

    2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ಅಷ್ಟೇ ಅಲ್ಲದೇ ಸರ್ಕಾರದ ವತಿಯಿಂದಲೇ ನಡೆಯುತ್ತಿದ್ದ ಟಿಪ್ಪು ಜಯಂತಿ ಆಚರಿಸುತ್ತಿರುವ ಬಗ್ಗೆ ಬಿಜೆಪಿ ನಾಯಕರು ಪ್ರತಿಭಟಿಸಿದ್ದರು.

  • ಟಿಪ್ಪು ಜಯಂತಿಗಿದ್ದ ಕಡ್ಡಾಯ ಹಾಜರಿ ಕನಕ ಜಯಂತಿಗೆ ಯಾಕಿಲ್ಲ: ಇಬ್ಬಗೆಯ ಧೋರಣೆಗೆ ಜನರ ಕಿಡಿ

    ಟಿಪ್ಪು ಜಯಂತಿಗಿದ್ದ ಕಡ್ಡಾಯ ಹಾಜರಿ ಕನಕ ಜಯಂತಿಗೆ ಯಾಕಿಲ್ಲ: ಇಬ್ಬಗೆಯ ಧೋರಣೆಗೆ ಜನರ ಕಿಡಿ

    ಮಂಗಳೂರು: ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರ, ಕನಕ ಜಯಂತಿಗೆ ಮಾತ್ರ ಕಡ್ಡಾಯ ಪದವನ್ನು ತೆಗೆದುಹಾಕಿದೆ. ಸರ್ಕರದ ಈ ಧೋರಣೆ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಕನಕ ಜಯಂತಿ ಕಾರ್ಯಕ್ರಮವನ್ನು ನವೆಂಬರ್ 26ರಂದು ಆಯೋಜಿಸಲಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಕನಕದಾಸರನ್ನು ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸುತ್ತೋಲೆ ಕಳಿಸಲಾಗಿದೆ. ಆದರೆ ಸುತ್ತೋಲೆಯಿಂದ ಕಡ್ಡಾಯ ಎನ್ನುವ ಪದವನ್ನು ಸರ್ಕಾರ ಕೈ ಬಿಟ್ಟಿದೆ.

    ಸರ್ಕಾರಿ ಕಾರ್ಯಕ್ರಮ ಹಾಗೂ ಜಯಂತಿಗಳಲ್ಲಿ ಭಾಗವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಸುತ್ತೋಲೆ ಕಳುಹಿಸುವುದು ಶಿಷ್ಟಾಚಾರ. ಆದರೆ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ಇತ್ತೀಚೆಗೆ ನಡೆದ ಟಿಪ್ಪು ಜಯಂತಿಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಆದೇಶ ಹೊರಡಿಸಿದ್ದರು. ಅದರಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸುತ್ತೋಲೆ ನೀಡಲಾಗಿತ್ತು.

    ಒಂದೇ ತಿಂಗಳಿನಲ್ಲಿ ಟಿಪ್ಪು ಹಾಗೂ ಕನಕ ಜಯಂತಿ ಬಂದಿವೆ. ಆದರೆ ಟಿಪ್ಪು ಜಯಂತಿಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಸರ್ಕಾರ ಕನಕ ಜಯಂತಿಗೆ ನೀಡುತ್ತಿಲ್ಲ. ಅಧಿಕಾರಿಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ಕಡ್ಡಾಯ ತೆಗೆದುಹಾಕಿದ್ದು ಯಾವ ನ್ಯಾಯ ಎನ್ನುವ ಪ್ರಶ್ನೆ ಎದ್ದಿದೆ. ಟಿಪ್ಪು ಒಬ್ಬ ಮತಾಂಧ ಎನ್ನುವ ಆರೋಪ ಇದ್ದರೂ, ಆತನ ಜಯಂತಿಯನ್ನು ಜನರ ಮೇಲೆ ಹೇರಲಾಗಿತ್ತು. ಸೆಕ್ಷನ್ ವಿಧಿಸಿದ್ದರಿಂದ ಜನ ಬರುವುದಿಲ್ಲವೆಂದು ಕೊನೆಗೆ ಅಧಿಕಾರಿ ವರ್ಗವನ್ನೇ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿತ್ತು. ಹೀಗಾಗಿ ಕನಕ ಮತ್ತು ಟಿಪ್ಪು ಜಯಂತಿ ಹೆಸರಲ್ಲಿ ರಾಜ್ಯ ಸರ್ಕಾರ ಇಬ್ಬಗೆ ನೀತಿ ತೋರಿದ್ದು ಎಷ್ಟು ಸರಿ ಎನ್ನುವ ಚರ್ಚೆ ಈಗ ಆರಂಭವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟಿಪ್ಪು ಜಯಂತಿಗೆ ಸಚಿವ ಮಧ್ವರಾಜ್ ಗೈರು- ನನ್ನ ಗೈರನ್ನು ನೀವು ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳಿ ಎಂದ್ರು

    ಟಿಪ್ಪು ಜಯಂತಿಗೆ ಸಚಿವ ಮಧ್ವರಾಜ್ ಗೈರು- ನನ್ನ ಗೈರನ್ನು ನೀವು ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳಿ ಎಂದ್ರು

    ಉಡುಪಿ: ವಿವಾದಿತ ಮತ್ತು ರಾಜ್ಯ ಸರ್ಕಾರದ ಪ್ರತಿಷ್ಟೆಯ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಿಂದ ಸಚಿವ ಪ್ರಮೋದ್ ಮಧ್ವರಾಜ್ ದೂರ ಉಳಿದು ಚರ್ಚೆಗೆ ಕಾರಣವಾಗಿದ್ದಾರೆ.

    ಉಡುಪಿಯಲ್ಲಿ ಇದ್ದುಕೊಂಡೇ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿಲ್ಲ. ಟಿಪ್ಪು ಜಯಂತಿ ಮುಗಿದು ಹತ್ತೇ ನಿಮಿಷಕ್ಕೆ ಪ್ರಮೋದ್ ಮಧ್ವರಾಜ್ ಜಿಲ್ಲಾಧಿಕಾರಿ ಕಚೇರಿಗೆ ಅಗಮಿಸಿ ಚುನಾವಣಾ ರಾಜಕೀಯದ ದೃಷ್ಟಿಕೋನವನ್ನು ತೆರೆದಿಟ್ಟರು.

    ಮೂರನೇ ವರ್ಷವೂ ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದೇ ದೂರ ಉಳಿಯುವ ಮೂಲಕ ಸೈಲೆಂಟಾಗಿ ಸಂದೇಶವನ್ನು ರವಾನೆ ಮಾಡಿದ್ದಾರೆ. ಹಿಂದೂಗಳ ಮತಗಳನ್ನು, ಕ್ರೈಸ್ತ ಸಮುದಾಯದ ಮತಗಳನ್ನು ಕಳೆದುಕೊಳ್ಳಲು ಇಚ್ಛಿಸದ ಮಧ್ವರಾಜ್ ವಿವಾದಿತ ಟಿಪ್ಪು ಜಯಂತಿಯಿಂದ ದೂರ ನಿಂತಿದ್ದಾರೆ. ಗೈರಾಗುವುದರ ಮೂಲಕ ಕರಾವಳಿಯ ಪ್ರಭಲ ಮೀನುಗಾರ ಸಮುದಾಯದ ಕಣ್ಣಲ್ಲೂ ಹೀರೋ ಎನಿಸಿಕೊಂಡಿದ್ದಾರೆ.

    ಟಿಪ್ಪು ಜಯಂತಿ ಮುಗಿದು ಹತ್ತೇ ನಿಮಿಷಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಅನಿಲಭಾಗ್ಯ ಯೋಜನೆಯ ಅನುಷ್ಟಾನದ ಪೂರ್ವಭಾವಿ ಸಭೆಯಲ್ಲಿ, ಸಿಎಂ ಉಡುಪಿ ಪ್ರವಾಸದ ಕಾರ್ಯಕ್ರಮದ ಮೀಟಿಂಗ್‍ನಲ್ಲಿ ಮಧ್ವರಾಜ್ ಪಾಲ್ಗೊಂಡರು. ಟಿಪ್ಪು ಜಯಂತಿಯಲ್ಲಿ ತನ್ನ ಗೈರನ್ನು ಸಮರ್ಥನೆ ಮಾಡಿಕೊಂಡ ಮಧ್ವರಾಜ್, ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಬೇಕೆಂಬ ಕಡ್ಡಾಯವೇನಿಲ್ಲ ಎಂದರು.

    ನಾನು ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ, ಹೇಮರೆಡ್ಡಿ ಮಲ್ಲಪ್ಪ ಜಯಂತಿಯಲ್ಲೂ ಪಾಲ್ಗೊಂಡಿಲ್ಲ. ಆಗ ಯಾಕೆ ನೀವು ಪ್ರಶ್ನೆ ಮಾಡಿಲ್ಲ? ಅವರವರಿಗೆ ಅವರವರ ಅಭಿಪ್ರಾಯ ಸ್ವಾತಂತ್ರ್ಯವಿದೆ ಎಂದು ತನ್ನ ಗೈರನ್ನು ಸಮರ್ಥನೆ ಮಾಡಿಕೊಂಡರು. ನನ್ನ ಗೈರಿನ ಬಗ್ಗೆ ಮಾಧ್ಯಮದವರು ವಿಮರ್ಶೆ ಮಾಡುವುದಾದದರೆ ನನ್ನ ಅಭ್ಯಂತರವಿಲ್ಲ ಎಂದರು.

    ಜಿಲ್ಲಾಡಳಿತದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ಸುಮಾರು 50 ಮಂದಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯ್ತು. ಸುಮಾರು 2000 ಪೊಲೀಸರನ್ನು ಉಡುಪಿ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಿದರು.

    ಅಧಿಕಾರಿಗಳು, ಮಕ್ಕಳ ಜಮಾವಣೆ: ಡಿ.ಸಿ ಕೋರ್ಟ್ ಹಾಲ್ ನಲ್ಲಿ ಟಿಪ್ಪು ಜಯಂತಿ ಆಚರಿಸುವ ನಿರ್ಧಾರವಾಗಿತ್ತು. ಆದ್ರೆ ಪ್ರತಿಷ್ಟೆಯಾಗಿ ತೆಗೆದುಕೊಂಡ ಉಡುಪಿ ಜಿಲ್ಲಾಡಳಿತ ವಾಜಪೇಯಿ ಸಭಾಂಗಣಕ್ಕೆ ಶಿಫ್ಟ್ ಮಾಡಿತು. ಜಿಲ್ಲಾಧಿಕರಿ ಕಚೇರಿ, ಜಿಲ್ಲಾ ಪಂಚಾಯತ್‍ನ ಎಲ್ಲಾ ಅಧಿಕಾರಿ ವರ್ಗ, ಸಿಬ್ಬಂದಿಗಳನ್ನು ಸಭಾಂಗಣದಲ್ಲಿ ಕಡ್ಡಾಯವಾಗಿ ಇರುವಂತೆ ನೋಡಿಕೊಂಡಿತು. ಶಾಲೆಯ ಮಕ್ಕಳನ್ನು ಕರೆದುಕೊಂಡು ಬಂದು ಖಾಲಿ ಕುರ್ಚಿಗಳನ್ನು ತುಂಬಿಸಲಾಯ್ತು. ಜನ ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪೊಲೀಸ್ ಫೋರ್ಸನ್ನೂ ಉಪಯೋಗಿಸಿಕೊಳ್ಳಲಾಯ್ತು ಅನ್ನೋ ಮಾಹಿತಿಯಿದೆ.

  • ಟಿಪ್ಪು ಜಯಂತಿಗೆ ಮಡಿಕೇರಿಯಲ್ಲಿ ತೀವ್ರ ವಿರೋಧ – ಅಂಗಡಿಗಳು ಬಂದ್, ಮುಖ್ಯರಸ್ತೆಗೆ ಮರ ಕಡಿದು ಆಕ್ರೋಶ

    ಟಿಪ್ಪು ಜಯಂತಿಗೆ ಮಡಿಕೇರಿಯಲ್ಲಿ ತೀವ್ರ ವಿರೋಧ – ಅಂಗಡಿಗಳು ಬಂದ್, ಮುಖ್ಯರಸ್ತೆಗೆ ಮರ ಕಡಿದು ಆಕ್ರೋಶ

    ಮಡಿಕೇರಿ: ರಾಜ್ಯ ಸರ್ಕಾರ ನಿರ್ಧರಿಸಿರುವ ಟಿಪ್ಪು ಜಯಂತಿ ಆಚರಣೆಗೆ ಕೊಡಗು ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

    ಟಿಪ್ಪು ಜಯಂತಿ ಆಚರಣೆಗೆ ಕೊಡಗಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಇಂದು ಕೊಡಗು ಬಂದ್‍ಗೆ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಮಂಜಿನ ನಗರಿ ಮಡಿಕೇರಿಯ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ. ಅಲ್ಲದೆ ಖಾಸಗಿ ಬಸ್‍ನವರು ಪ್ರಯಾಣಿಕರ ಹಿತದೃಷ್ಠಿಯಿಂದ ಬಸ್ ಸಂಚಾರ ಮಾಡುವುದಿಲ್ಲವೆಂದು ತಿಳಿಸಿದ್ದಾರೆ. ಇನ್ನು ಅಟೋ ಚಾಲಕರು, ಟ್ಯಾಕ್ಸಿ ಚಾಲಕರು ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಮಡಿಕೇರಿ ತಾಲೂಕಿನ ಕಡಗದಳು ಗ್ರಾಮದಲ್ಲಿ ಕಳೆದ ರಾತ್ರಿ ಮುಖ್ಯ ರಸ್ತೆಗಳಿಗೆ ಮರಗಳನ್ನು ಕಡಿದು ಹಾಕುವ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಲಾಗಿತ್ತು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದ್ದಾರೆ.

    ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಪೋಲಿಸರೇ ಹೆಚ್ಚಾಗಿ ಕಂಡು ಬರುತ್ತಿದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ಕರಾಳ ದಿನ ಹಾಗೂ ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆ ವೇಳೆ ಮೃತಪಟ್ಟ ಕುಟ್ಟಪ್ಪ ಹುತಾತ್ಮ ದಿನವನ್ನು ಆಚರಿಸಲು ನಿರ್ಧರಿಸಿದೆ.

    ವಿವಾದದ ಮಧ್ಯೆ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡ್ತಿದ್ದು, ಮಡಿಕೇರಿಯ ಕೋಟೆ ಸಭಾಂಗಣದಲ್ಲಿ ಟಿಪ್ಪು ಜಯಂತಿಗೆ ಸಿದ್ಧತೆ ಪೂರ್ಣಗೊಂಡಿದೆ. ಸಭಾಂಗಣದ ಸುತ್ತ ಪೊಲೀಸ್ ಭದ್ರತೆ ಮಾಡಲಾಗಿದೆ. ಅದರ ಜೊತೆಗೆ ಕಾರ್ಯಕ್ರಮ ನಡೆಯುವ ಟಿಪ್ಪು ಸಭಾಂಗಣದ ಸುತ್ತ 3 ಡ್ರೋನ್ ಕ್ಯಾಮೆರಾಗಳ ಬಳಕೆ ಮಾಡಲಾಗಿದೆ.

  • ಟಿಪ್ಪು ಜಯಂತಿ- ಸಿಎಂ ಕಾರ್ಯಕ್ರಮದ ಆಹ್ವಾನಪತ್ರಿಕೆಯಲ್ಲಿ ಶೆಟ್ಟರ್, ಈಶ್ವರಪ್ಪ ಹೆಸರು

    ಟಿಪ್ಪು ಜಯಂತಿ- ಸಿಎಂ ಕಾರ್ಯಕ್ರಮದ ಆಹ್ವಾನಪತ್ರಿಕೆಯಲ್ಲಿ ಶೆಟ್ಟರ್, ಈಶ್ವರಪ್ಪ ಹೆಸರು

    ಬೆಂಗಳೂರು: ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದು, ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ನಾಯಕರ ಹೆಸರು ಸೇರ್ಪಡೆ ಮಾಡಿ ಸರ್ಕಾರ ಆಮಂತ್ರಣ ಕೊಟ್ಟಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆ ಮುದ್ರಣ ಮಾಡಿಸಲಾಗಿದೆ. ಬೆಂಗಳೂರು ನಗರ ಅಹ್ವಾನ ಪತ್ರಿಕೆಯಲ್ಲಿ ಬಿಜೆಪಿ ನಾಯಕರ ಹೆಸರು ಸೇರ್ಪಡೆ ಮಾಡಲಾಗಿದೆ.

    ಅಧಿಕೃತವಾಗಿ ಪತ್ರ ಕೊಟ್ಟವರ ಹೆಸರು ಸೇರ್ಪಡೆ ಮಾಡದಂತೆ ಸಿಎಂ ಸೂಚನೆ ನೀಡಿದ್ದಾರೆ. ಆದ್ರೆ ವಿಧಾನಸಭೆ ವಿಪಕ್ಷ ನಾಯಕರಾದ ಶೆಟ್ಟರ್, ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಅಧಿಕೃತವಾಗಿ ಸರ್ಕಾರಕ್ಕೆ ಪತ್ರ ರವಾನಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಶಿಷ್ಟಾಚಾರ ಪಾಲಿಸಿ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದೆ.

    ಬೆಂಗಳೂರು ಸೆಂಟ್ರಲ್ ಲೋಕಸಭೆ ಸದಸ್ಯ ಪಿ.ಸಿ.ಮೋಹನ್ ಹೆಸರು ಕೂಡ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣ ಮಾಡಲಾಗಿದೆ. ನವೆಂಬರ್ 10ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

    ಅತ್ತ ಧಾರವಾಡದಲ್ಲಿ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಿಂದ ಸಂಸದ ಪ್ರಹ್ಲಾದ್ ಜೋಶಿ ಹೆಸರನ್ನು ಜಿಲ್ಲಾಡಳಿತ ಕೈ ಬಿಟ್ಟಿದೆ. ಟಿಪ್ಪು ಜಯಂತಿ ಆಮಂತ್ರಣದಲ್ಲಿ ತಮ್ಮ ಹೆಸರು ಮುದ್ರಿಸದಂತೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮೊದಲೇ ಕೋರಿದ್ರು. ಸಂಸದರ ಕೋರಿಕೆ ಹಿನ್ನೆಲೆ ಅವರ ಹೆಸರು ಕೈ ಬಿಟ್ಟಿದೆ. ಜೋಶಿ ಹೊರತು ಪಡಿಸಿ ಬಿಜೆಪಿಯ ಇತರೆ ಜನಪ್ರತಿನಿಧಿಗಳ ಹೆಸರು ಮುದ್ರಿತವಾಗಿದೆ.

     

     

  • ನಾಳೆಯ ಟಿಪ್ಪು ಜಯಂತಿಗೆ ಇಂದಿನಿಂದ್ಲೇ ನಿಷೇಧಾಜ್ಞೆ – ಮಡಿಕೇರಿಯಲ್ಲಿ ಎಲ್ಲಿ ನೋಡಿದ್ರೂ ಪೊಲೀಸರು

    ನಾಳೆಯ ಟಿಪ್ಪು ಜಯಂತಿಗೆ ಇಂದಿನಿಂದ್ಲೇ ನಿಷೇಧಾಜ್ಞೆ – ಮಡಿಕೇರಿಯಲ್ಲಿ ಎಲ್ಲಿ ನೋಡಿದ್ರೂ ಪೊಲೀಸರು

    ಮಡಿಕೇರಿ: ನ10 ಕೊಡಗಿನ ಪಾಲಿನ ಸವಾಲಿನ ದಿನವಾಗಲಿದೆ. ಒಂದೆಡೆ ನ.10ರ ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಬಂದ್ ಹಾಗೂ ಕುಟ್ಟಪ್ಪ ಹುತಾತ್ಮ ದಿನವನ್ನು ಹಮ್ಮಿಕೊಂಡಿರುವುದಾಗಿ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಘೋಷಿಸಿದ್ದರೆ, ಇತ್ತ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

    ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಜ್ಜಾಗಿದ್ದು, ಹೆಚ್ಚಿನ ಪೊಲೀಸ್ ಫೋರ್ಸ್ ಮೂಲಕ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಜಿಲ್ಲಾಡಳಿತ ಮುಂದಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಜಿಲ್ಲೆಯ 10 ಗಡಿ ಚೆಕ್ ಪೋಸ್ಟ್ ಗಳಲ್ಲಿ ತಲಾ 4 ಸಿಸಿ ಕ್ಯಾಮೆರಾ ಅಳವಡಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

    ಜಿಲ್ಲೆಯ ಒಳಭಾಗದ 31 ಕಡೆಗಳಲ್ಲಿ ನಾಕಾಬಂಧಿ ಹಾಕಿ ವಾಹನ ತಪಾಸಣೆ, ವಾಹನ ನೋಂದಣಿ ಹಾಗೂ ಚಾಲಕರ ಮಾಹಿತಿ ಕಲೆಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 8 ಡಿವೈಎಸ್‍ಪಿ, 23 ಪೊಲೀಸ್ ಇನ್ಸ್ ಪೆಕ್ಟರ್, 68 ಸಬ್ ಇನ್ಸ್ ಪೆಕ್ಟರ್, 113 ಎಎಸ್‍ಐ, 1500 ಹೆಚ್‍ಸಿ/ಪಿಸಿ, 27 ಡಿಎಆರ್ ತುಕಡಿಗಳು, 15 ಕೆಎಸ್‍ಆರ್‍ಪಿ ತುಕಡಿಗಳು ಹಾಗೂ ಕ್ಷಿಪ್ರ ಕಾರ್ಯಚರಣೆ ಪಡೆಯನ್ನ ನಿಯೋಜಿಸಲಾಗಿದೆ.

    ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ವಿವಾದ ಕಾವೇರತೊಡಗುತ್ತಿರುವಂತೆಯೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನವೆಂಬರ್ 9 ರಂದು ಬೆಳಗ್ಗೆ 6 ಗಂಟೆಯಿಂದ ನವೆಂಬರ್ 11 ರ ಬೆಳಿಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಅದೇಶಿಸಿದೆ. ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಪರ-ವಿರೋಧ ಹೇಳಿಕೆ ಮತ್ತು ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಅದೇಶವನ್ನು ಜಾರಿಗೊಳಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮ, ಮದುವೆ ಸಮಾರಂಭಗಳು ಹಾಗೂ ಕುಶಾಲನಗರದ ಗೂಂಡುರಾವ್ ಬಡಾವಣೆಯಲ್ಲಿ ನಡೆಯುವ ಜಾತ್ರೆಯನ್ನು ಹೊರತುಪಡಿಸಿದಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

    ಟಿಪ್ಪು ಜಯಂತಿ ಹಿನ್ನಲೆ ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಷ್ಟ್ಟು ಖಾಕಿ ಕಣ್ಗಾವಲಿನ ವ್ಯವಸ್ಥೆ ಮಾಡಲಾಗಿದ್ದು, ಬಂದೋಬಸ್ತಿನ ಉಸ್ತುವಾರಿಯನ್ನು ಐಜಿಪಿ ದರ್ಜೆಯ ಅಧಿಕಾರಿ ನೋಡಿಕೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಜಿಲ್ಲಾಡಳಿತ, ಕಾನೂನು ಸುವ್ಯವಸ್ಥೆ ಕಾಪಾಡಲು ಟೊಂಕ ಕಟ್ಟಿ ನಿಂತಿದೆ.