Tag: Tippu Jayanti

  • ಶಾಲಾ ಪುಸ್ತಕಗಳಲ್ಲಿ ಟಿಪ್ಪು ಪಠ್ಯ ತೆಗೆಯಲು ಚಿಂತನೆ – ಸಿಎಂ

    ಶಾಲಾ ಪುಸ್ತಕಗಳಲ್ಲಿ ಟಿಪ್ಪು ಪಠ್ಯ ತೆಗೆಯಲು ಚಿಂತನೆ – ಸಿಎಂ

    – ಮುಂದಿನ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಇಲ್ಲ
    – ಮೂರು ಡಿಸಿಎಂ ಕೇಂದ್ರ ನಾಯಕರ ನಿರ್ಧಾರ

    ಬೆಂಗಳೂರು: ಶಾಲಾ ಪಠ್ಯ ಪುಸ್ತಕಗಳಿಂದ ಟಿಪ್ಪು ಕುರಿತ ಪಠ್ಯಗಳನ್ನು ತೆಗೆಯಲು ಚಿಂತನೆ ನಡೆಸಿದ್ದೇವೆ, ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿದ್ದಾರೆ.

    ಪ್ರಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದ ವೇಳೆ ಟಿಪ್ಪು ಜಯಂತಿ ಬಗ್ಗೆ ಕೇಳಲಾದ ಪ್ರಶ್ನೆಗೆ, ಸರ್ಕಾರ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ ಎಂದು ಉತ್ತರಿಸಿದರು.

    ಈ ಸಂದರ್ಭದಲ್ಲಿ ಶಾಲಾ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆಯಲಾಗುತ್ತಾ ಎನ್ನುವ ಪ್ರಶ್ನೆಗೆ, ಶಾಲಾ ಪುಸ್ತಕಗಳಲ್ಲಿನ ಟಿಪ್ಪು ಕುರಿತ ಪಠ್ಯಗಳನ್ನು ತೆಗೆಯಲು ಚರ್ಚಿಸಿದ್ದೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹ ಯಾವುದೇ ವಿಚಾರ ಪಠ್ಯ ಪುಸ್ತಕಗಳಲ್ಲಿ ಇರಬಾರದು. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಈ ಕುರಿತು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ಅಭಿವೃದ್ಧಿಯೇ ಆಡಳಿತದ ಮಂತ್ರದೊಂದಿಗೆ ಸರ್ಕಾರ ಕಾರ್ಯಾರಂಭ ಮಾಡಿದೆ. ಸರ್ಕಾರ ಬಂದ ಆರಂಭದಲ್ಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಕೈ ಜೋಡಿಸಿತು. ಕೇಂದ್ರದ ಈ ಯೋಜನೆಯ ನೆರವಿನ ಜೊತೆಗೆ ರಾಜ್ಯದಿಂದ ಹೆಚ್ಚುವರಿ ನೆರವು ಕೊಡಲಾಗುತ್ತಿದೆ. ಮೀನುಗಾರರ, ನೇಕಾರರ ಸಾಲಮನ್ನಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಿರಿಯ ಅಧಿಕಾರಿಗಳ ಜತೆಗೂ ಆರಂಭದಲ್ಲೇ ಸರ್ಕಾರದ ಧ್ಯೇಯೋದ್ದೇಶ ತಿಳಿಸಲಾಗಿದೆ. ಎಲ್ಲ ಜಿಲ್ಲೆಗಳ ಡಿಸಿಗಳ ಜತೆಗೆ ಸಭೆ ಮಾಡಿ ಅಗತ್ಯ ಸೂಚನೆಗಳನ್ನು ನೀಡಲಾಯಿತು. ದುರಾದೃಷ್ಟವಶಾತ್ ರಾಜ್ಯದಲ್ಲಿ ನೆರೆ, ಅತಿವೃಷ್ಟಿ ಬಂತು. ನೆರೆ ಅತಿವೃಷ್ಟಿ ಎದುರಿಸಲು ಅಧಿಕಾರಿಗಳು ಹಗಲು, ರಾತ್ರಿ ದುಡಿಯುತ್ತಿದ್ದಾರೆ. ನೆರೆ, ಬರ ಎರಡನ್ನೂ ರಾಜ್ಯ ಎದುರಿಸುತ್ತಿದೆ. 22 ಜಿಲ್ಲೆಗಳಲ್ಲಿ ನೆರೆ, 5 ಜಿಲ್ಲೆಗಳಲ್ಲಿ ಬರ ಇದೆ ಎಂದು ತಿಳಿಸಿದರು.

    ಎನ್‍ಡಿಆರ್‍ಎಫ್ ನಿಯಮದಡಿ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಪರಿಹಾರ ಕೊಡುತ್ತಿದ್ದೇವೆ. ಸ್ವಾತಂತ್ರ್ಯ ನಂತರ ಯಾವುದೇ ಸರ್ಕಾರ ಎನ್‍ಡಿಆರ್‍ಎಫ್ ನಿಯಮ ಮೀರಿ ಪರಿಹಾರ ಘೋಷಣೆ ಮಾಡಿರಲಿಲ್ಲ. ಪ್ರವಾಹಕ್ಕೆ ಕೇಂದ್ರದಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಮಧ್ಯಂತರ ಪರಿಹಾರವಾಗಿ ಕೇಂದ್ರ 1,200 ಕೋಟಿ, ರಾಜ್ಯದಿಂದ 2,969 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಪ್ರವಾಹ ಪರಿಹಾರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ. ತೆರಿಗೆ ಸಂಗ್ರಹದಲ್ಲಿ ಸರ್ಕಾರ ನಿಗದಿತ ಗುರಿ ಸಾಧಿಸಿದೆ. ನಿರುದ್ಯೋಗ ಪ್ರಮಾಣ ರಾಜ್ಯದಲ್ಲಿ ಶೇ.0.7ರಷ್ಟು ಇದೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು.

    ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು 5 ಲಕ್ಷ ರೂ. ಪರಿಹಾರ ಕೊಡುತ್ತಿದ್ದೇವೆ. ಈ ವರೆಗೆ ಪೂರ್ಣ ಹಾನಿಯಾದ 7,481 ಮನೆಗಳಿಗೆ 5 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ನೆರೆ ಸಂಬಂಧ ಜನರಲ್ಲಿ ಪ್ರತಿಪಕ್ಷಗಳು ಗೊಂದಲ ಹುಟ್ಟಿಸುತ್ತಿವೆ. ನಮ್ಮ ಪರಿಹಾರ ಕಾರ್ಯಗಳಲ್ಲಿ ಚ್ಯುತಿ ಆಗಿಲ್ಲ. ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಗೊಂದಲ ಹುಟ್ಟಿಸುತ್ತಿರುವುದು ಸರಿಯಲ್ಲ. ನೆರೆ, ಬರ ಸನ್ನಿವೇಶದಲ್ಲೂ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿಲ್ಲ ಎಂದು ವಿವರಿಸಿದರು.

    ವಿಧಾನಸಭೆಯಲ್ಲಿ ಮಾಧ್ಯಮಗಳ ಚಿತ್ರೀಕರಣಕ್ಕೆ ನಿರ್ಬಂಧ ಹೇರಿದ ಕುರಿತು ಮಾತನಾಡಿದ ಅವರು, ಈ ಕುರಿತು ನಾನು ಸ್ಪೀಕರ್ ಜತೆ ಮಾತನಾಡಿ, ಮನವರಿಕೆ ಮಾಡಿದ್ದೇನೆ. ಮುಂದಿನ ಅಧಿವೇಶನದಿಂದ ಮಾಧ್ಯಮ ನಿರ್ಬಂಧ ಇರುವುದಿಲ್ಲ. ಮುಂದಿನ ಅಧಿವೇಶನದಿಂದ ಮೊದಲಿದ್ದ ವ್ಯವಸ್ಥೆಯೇ ಬರಲಿದೆ. ಮಾಧ್ಯಮಗಳಿಗೆ ಮೊದಲಿನ ಹಾಗೆ ಅವಕಾಶ ಮಾಡಿಕೊಡಲಾಗುತ್ತದೆ. ಯಡಿಯೂರಪ್ಪ ಹೇಳಿದ ಮಾತಿನಂತೆ ನಡ್ಕೋಳ್ತಾನೆ ಎಂದು ಭರವಸೆ ನೀಡಿದರು.

    ಮೂರು ಜನ ಉಪಮುಖ್ಯಮಂತ್ರಿಗಳ ಸೃಷ್ಟಿ ಕೇಂದ್ರದ ವರಿಷ್ಟರ ನಿರ್ಧಾರ. ಇದು ಕೇಂದ್ರದ ಸಹಜ ನಿರ್ಧಾರ. ಇದರಲ್ಲಿ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ನೂರು ದಿನದಲ್ಲಿ ನಾನು ಯಾವ ರೀತಿ ಆಡಳಿತ ಮಾಡಿದ್ದೇನೆ ಎಂದು ಜನತೆಗೆ ಗೊತ್ತು. ಉಳಿದ ಅವಧಿಯಲ್ಲೂ ಲೋಪದೋಷ ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ. ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡುತ್ತೇವೆ. ಕೇಂದ್ರ ಸರ್ಕಾರ ನನ್ನ ಕೈಕಟ್ಟಿ ಹಾಕಿಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನನಗೆ ವರಿಷ್ಠರು ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ ಎಂದರು.

    ಮೂರು ತಿಂಗಳಲ್ಲಿ ಐಎಎಸ್ ಅಧಿಕಾರಿಗಳ ಬದಲಾವಣೆ ಕುರಿತು ಮಾತನಾಡಿದ ಅವರು, ಆಡಳಿತಾತ್ಮಕ ದೃಷ್ಟಿಯಿಂದ ಕೆಲವು ತೀರ್ಮಾನ ಅನಿವಾರ್ಯ. ಹೀಗಾಗಿ ವರ್ಗಾವಣೆ ಮಾಡಲಾಗಿದೆ. ಆಡಳಿತದ ಹಿತದೃಷ್ಟಿಯಿಂದ ಕೆಲವೊಂದು ತೀರ್ಮಾನ ಮಾಡಬೇಕು. ನನ್ನ ಯಾವುದೇ ತೀರ್ಮಾನಗಳಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿಲ್ಲ. ಸಂಪುಟ ರಚನೆಯಲ್ಲೂ ಅಡ್ಡಿ ಬಂದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

  • ಟಿಪ್ಪು ಮತಾಂಧ, ಅಮಾಯಕರನ್ನ ಕೊಂದ ಕ್ರೂರಿ: ಅಶ್ವತ್ಥನಾರಾಯಣ

    ಟಿಪ್ಪು ಮತಾಂಧ, ಅಮಾಯಕರನ್ನ ಕೊಂದ ಕ್ರೂರಿ: ಅಶ್ವತ್ಥನಾರಾಯಣ

    ಚಿಕ್ಕಬಳ್ಳಾಪುರ: ಟಿಪ್ಪು ಸುಲ್ತಾನ ಓರ್ವ ಮತಾಂಧ ಹಾಗೂ ಅಮಾಯಕರನ್ನು ಕೊಂದ ಕ್ರೂರಿ ಹೀಗಾಗಿ ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಟಿಪ್ಪು ಜಯಂತಿ ಆಚರಣೆ ಮಾಡಬಾರದು ಅನ್ನೋದು ಬಿಜೆಪಿ ನಿಲುವು ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ನಂತರ ಮಾತನಾಡಿದ ಡಿಸಿಎಂ, 200 ವರ್ಷಗಳ ಹಿಂದೆ ನರಕಚರ್ತುದಶಿಯಂದು ಮೇಲುಕೋಟೆಯಲ್ಲಿ 800 ಕ್ಕೂ ಹೆಚ್ಚು ಮಂದಿ ಅಮಾಯಕರನ್ನು ಟಿಪ್ಪು ಸುಲ್ತಾನ್ ಕೊಂದು ನರಹೋಮ ಮಾಡಿದ್ದ. ಇಂತಹ ಮತಾಂಧ ಹಾಗೂ ಅಮಾಯಕರನ್ನು ಕೊಂದ ಟಿಪ್ಪು ಸುಲ್ತಾನನ ಜಯಂತಿ ಆಚರಣೆ ಮಾಡಬಾರದು ಅನ್ನೋದು ನಮ್ಮ ನಿಲುವು ಎಂದರು.

    ಇಂದಿಗೂ ಮೇಲುಕೋಟೆಯ ಜನರ ಮೇಲೆ ಟಿಪ್ಪು ಸುಲ್ತಾನ್ ನಡೆಸಿದ ಕ್ರೌರ್ಯದ ಗಾಯ ಮಾಸಿಲ್ಲ. ಅಲ್ಲಿನ ಜನ ಇಂದು ಸಹ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿಲ್ಲ. ಇಡೀ ದೇಶವೇ ದೀಪಾವಳಿ ಹಬ್ಬ ಆಚರಣೆ ಮಾಡಿದ್ರೇ ಮೇಲುಕೋಟೆ ಕತ್ತಲಲ್ಲಿರುತ್ತೆ. ಹೀಗಾಗಿ ಮೇಲುಕೋಟೆ ಜನರಿಗೆ ಸಮಾಧಾನ ಹಾಗೂ ಅವರಿಗಾದ ಅನ್ಯಾಯವನ್ನು ಎತ್ತಹಿಡಿಯಬೇಕಿದೆ ಎಂದು ತಿಳಿಸಿದರು.

    ನಾನು ಎಲ್ಲಿ ಹೋದರೂ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತೇನೆ ಅದೇ ರೀತಿ ಇಲ್ಲಿಯೂ ಸಭೆ ನಡೆಸಿದ್ದೇನೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಪ್ರಕ್ರಿಯೆಗಳೂ ನಡೆದಿಲ್ಲ. ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಅಥವಾ ಯಾರಿಗೆ ಟಿಕೆಟ್ ನೀಡಬೇಕು ಅನ್ನೋದನ್ನು ಪಕ್ಷ ಹಾಗೂ ರಾಜ್ಯಾಧ್ಯಕ್ಷರು ತೀರ್ಮಾನ ಮಾಡ್ತಾರೆ ಎಂದರು.

  • ಟಿಪ್ಪು ಜಯಂತಿ ಆಚರಿಸುವವರು ಬಿಜೆಪಿಯವರೇ ಅಲ್ಲ: ಶರತ್ ಬಚ್ಚೇಗೌಡಗೆ ಡಿಸಿಎಂ ಟಾಂಗ್

    ಟಿಪ್ಪು ಜಯಂತಿ ಆಚರಿಸುವವರು ಬಿಜೆಪಿಯವರೇ ಅಲ್ಲ: ಶರತ್ ಬಚ್ಚೇಗೌಡಗೆ ಡಿಸಿಎಂ ಟಾಂಗ್

    -ಯಾವುದೇ ಕಾರಣಕ್ಕೂ ಬಿಜೆಪಿ ಟಿಪ್ಪು ಜಯಂತಿ ಮಾಡಲ್ಲ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸದ್ಯ ಟಿಪ್ಪು ಜಯಂತಿ ವಿಚಾರ ಭಾರೀ ಸುದ್ದಿಯಲ್ಲಿದೆ. ಬಿಜೆಪಿ ಹಾಗೂ ವಿಪಕ್ಷ ನಾಯಕರು ಈ ಬಗ್ಗೆ ಪರ- ವಿರೋಧ ಪ್ರತಿಕ್ರಿಯೆ ನೀಡುತ್ತಲೇ ಬರುತ್ತಿದ್ದಾರೆ. ಇದೇ ಬೆನ್ನಲ್ಲೆ ಡಿಸಿಎಂ ಅಶ್ವಥ್ ನಾರಾಯಣ್ ಅವರು ಟಿಪ್ಪು ಜಯಂತಿ ಆಚರಿಸುವವರು ಬಿಜೆಪಿಯವರೇ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಟಿಪ್ಪು ಜಯಂತಿ ಮಾಡುವುದನ್ನು ನಮ್ಮ ಸರ್ಕಾರ ಸಂಪೂರ್ಣವಾಗಿ ವಿರೋಧಿಸುತ್ತದೆ. ಟಿಪ್ಪು ಜಯಂತಿ ಆಚರಿಸಲು ಇಚ್ಛಿಸುವವರು ವೈಯಕ್ತಿಕವಾಗಿ ಮಾಡಿಕೊಳ್ಳಲಿ, ಆದರೆ ಯಾವುದೇ ಕಾರಣಕ್ಕೂ ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸಲ್ಲ. ಈ ವೇಳೆ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಟಿಪ್ಪು ಜಯಂತಿ ಮಾಡುತ್ತೇವೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಯಾರಾದರೂ ಟಿಪ್ಪು ಜಯಂತಿ ಆಚರಿಸಿದರೇ ಅವರು ನಮ್ಮವರೇ ಅಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

    ಇತ್ತ ಶಿವಮೊಗ್ಗದಲ್ಲಿ ಟಿಪ್ಪು ಜಯಂತಿ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೂಡ ವಾಗ್ದಾಳಿ ನಡೆಸಿದ್ದಾರೆ. ಟಿಪ್ಪು ಜಯಂತಿಯನ್ನು ಕಾಂಗ್ರೆಸ್ಸಿನವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಟಿಪ್ಪು ಜಯಂತಿ ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಮೊದಲು ಬಿಡಲಿ. ಯಾರಿಗೆ ಬೇಕೋ ಅವರು ಅವರವರ ಮನೆಯಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಟಿಪ್ಪು ಹೆಸರಿನಲ್ಲಿ ಮುಸಲ್ಮಾನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಗುಡುಗಿದ್ದಾರೆ.

    ಹಾಗೆಯೇ ಈ ಬಗ್ಗೆ ವಿಜಯಪುರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕೂಡ ಪ್ರತಿಕ್ರಿಯಿಸಿ, ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮ ಸಂಪ್ರದಾಯದಲ್ಲಿ ಮೂರ್ತಿ ಪೂಜೆಯೂ ಇಲ್ಲ. ಈ ಹಿಂದೆ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ ಈ ಸಂಪ್ರದಾಯವೇ ಇಲ್ಲ ಎಂದು ಹೇಳಿದ್ದಾರೆ.

  • ಯಾವ ಮುಸಲ್ಮಾನರು ಟಿಪ್ಪು ಜಯಂತಿ ಮಾಡಿ ಅಂತ ಹೇಳಿರಲಿಲ್ಲ: ಕೆ.ಎಸ್.ಈಶ್ವರಪ್ಪ

    ಯಾವ ಮುಸಲ್ಮಾನರು ಟಿಪ್ಪು ಜಯಂತಿ ಮಾಡಿ ಅಂತ ಹೇಳಿರಲಿಲ್ಲ: ಕೆ.ಎಸ್.ಈಶ್ವರಪ್ಪ

    – ಡಿಕೆಶಿ ಕ್ರೀಡೆಯಲ್ಲಿ ಪದಕ ಗೆದ್ದು ಬಂದಿದ್ದರಾ?

    ಶಿವಮೊಗ್ಗ: ಯಾವ ಮುಸಲ್ಮಾನರು ಟಿಪ್ಪು ಜಯಂತಿ ಮಾಡಿ ಎಂದು ಹೇಳಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ನವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಟಿಪ್ಪು ಜಯಂತಿ ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಮೊದಲು ಬಿಡಲಿ. ಯಾರಿಗೆ ಬೇಕೋ ಅವರು ಅವರವರ ಮನೆಯಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಟಿಪ್ಪು ಹೆಸರಿನಲ್ಲಿ ಮುಸಲ್ಮಾನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಗುಡುಗಿದು.

    ಇದೇ ವೇಳೆ ಅನರ್ಹ ಶಾಸಕರ ಬಗ್ಗೆ ಮಾತನಾಡಿದ ಅವರು, ಅನರ್ಹ ಶಾಸಕರ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುವುದು ಅವಶ್ಯಕತೆ ಇಲ್ಲ. ರೇಣುಕಾಚಾರ್ಯ ಒಂದು ಹೇಳುವುದು, ಸವದಿ ಮತ್ತೊಂದು ಹೇಳುವುದು ಸರಿಯಲ್ಲ. ಇದನ್ನು ನಮ್ಮ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಅನರ್ಹ ಶಾಸಕರ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಅನರ್ಹ ಶಾಸಕರು ರಾಜೀನಾಮೆ ಕೊಟ್ಟು ಬರಲಿಲ್ಲ ಅಂದ್ರೆ ನಮ್ಮ ಸರ್ಕಾರನೇ ಇರುತ್ತಿರಲಿಲ್ಲ. ಅವರು ಏನು ಅಪೇಕ್ಷೆ ಪಡುತ್ತಾರೋ ಅದನ್ನು ಬೆಂಬಲ ಮಾಡೋದು ನಮ್ಮ ಕರ್ತವ್ಯ ಎಂದರು.

    ಕಾಂಗ್ರೆಸ್‍ನಲ್ಲಿ ಡಿಕೆಶಿ ಒಂದು ಕಡೆ, ಸಿದ್ದರಾಮಯ್ಯ ಒಂದು ಕಡೆ ಇದ್ದಾರೆ. ಡಿಕೆಶಿ ಬಿಡುಗಡೆ ನಂತರ ನಡೆಯುತ್ತಿರುವ ಮೆರವಣಿಗೆ ನೋಡಿ ರಾಜ್ಯದ ಜನರಿಗೆ ಅಸಹ್ಯ ಆಗುತ್ತಿದೆ. ಡಿಕೆಶಿ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ತಾಯಿ, ಪತ್ನಿ, ಮಗಳು ನೋಡಿ ನನಗು ನೋವು ಆಯ್ತು. ಡಿಕೆಶಿ ಏನಾದರು ಕ್ರೀಡೆಯಲ್ಲಿ ಪದಕ ಗೆದ್ದು ಬಂದಿದ್ದರಾ. ಪಾಕಿಸ್ತಾನದ ಯುದ್ಧ ಗೆದ್ದು ಬಂದರ ಮೆರವಣಿಗೆ ಮಾಡೋದಕ್ಕೆ. ಜೈಲಿನಲ್ಲಿ ಇದ್ದು ಹೊರಗೆ ಬಂದ ವ್ಯಕ್ತಿಗೆ ಮೆರವಣಿಗೆ, ವಿಜಯೋತ್ಸವ ಮಾಡುತ್ತಿರುವುದು ನಾಚಿಕೆಗೇಡು ಎಂದು ವಾಗ್ದಾಳಿ ಮಾಡಿದ್ದಾರೆ.

  • ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    – ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ನವಾಬರು
    – ಶಾರದಾ ಪೀಠವನ್ನು ಮರಸ್ಥಾಪನೆ ಮಾಡಿದ್ದು ಟಿಪ್ಪು

    ವಿಜಯಪುರ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮ ಸಂಪ್ರದಾಯದಲ್ಲಿ ಮೂರ್ತಿ ಪೂಜೆಯೂ ಇಲ್ಲ. ಈ ಹಿಂದೆ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ ಈ ಸಂಪ್ರದಾಯವೇ ಇಲ್ಲ ಎಂದು ಹೇಳಿದರು.

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಟಿಪ್ಪು ಜನ್ಮದಿನ ಆಚರಣೆಯನ್ನು ಮುಸ್ಲಿಮರಿಗೆ ಬಿಟ್ಟು ಬಿಡಿ. ನಾವು ಟಿಪ್ಪು ಜಯಂತಿಯನ್ನು ಆಚರಣೆ ಮಾಡಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಟಿಪ್ಪು ಜಯಂತಿಯ ಆಚರಣೆಯನ್ನು ಮಾಡಲಾಯಿತು. ಆದರೆ ಈಗ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದು ಬೇಡ ಎಂದು ಹೇಳಿದೆ ಎಂದರು.

    ಟಿಪ್ಪು ಸುಲ್ತಾನ್ ಒಬ್ಬ ಹುತಾತ್ಮ ರಾಜ, ಮಹಾರಾಷ್ಟ್ರದ ಪೇಶ್ವೆಗಳು ಬಂದು ಶೃಂಗೇರಿಯ ಶಾರದಾ ಮಠವನ್ನು ನಾಶ ಮಾಡಿದಾಗ ಅದರ ವಿರುದ್ಧ ಹೋರಾಡಿ ಕಾರ್ಕಳದಲ್ಲಿ ಇದ್ದ ಸ್ವಾಮೀಜಿಯನ್ನು ವಾಪಾಸ್ ಕರೆದುಕೊಂಡು ಬಂದು ಮತ್ತೆ ಶಾರದಾ ಪೀಠವನ್ನು ಮರು ಸ್ಥಾಪನೆ ಮಾಡಿದರು. ಪತ್ರಿ ದಿನ ಆ ಜಾಗದಲ್ಲಿ ಟಿಪ್ಪು ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರಿಗೆ ಅನ್ನ ದಾಸೋಹ ಮಾಡುತ್ತಿದ್ದರು. ಈ ಚರಿತ್ರೆ ಶೃಂಗೇರಿ ಮಠದಲ್ಲಿ ಇನ್ನೂ ಇದೆ ಎಂದು ಹೇಳಿದರು. ಇದನ್ನು ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ

    ಇದರ ಜೊತೆಗೆ ಗುರುರಾಘವೇಂದ್ರ ಸ್ವಾಮಿ ಅವರಿಗೆ ಮಂತ್ರಾಲಯ ಮಠ ಸ್ಥಾಪಿಸಲು ಜಾಗ ಕೊಟ್ಟಿದ್ದು, ಅದೋನಿ ನವಾಬರು. ಆ ಜಾಗವನ್ನು ಆ ಊರಿನ ಖಾಜಿ ಸಾಹೇಬರಿಗೆ ಕೊಟ್ಟಿದ್ದರು. ಆದರೆ ಅಂದು ನವಾಬರು ಗುರುರಾಘವೇಂದ್ರ ಸ್ವಾಮಿ ಅವರು ದೈವ ಮಾನವರು ಅವರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ ಎಂದು ಹೇಳಿ ಖಾಜಿ ಸಾಹೇಬರಿಗೆ ಕೊಟ್ಟಿದ್ದ ಭೂಮಿಯನ್ನು ವಾಪಾಸ್ ಪಡೆದುಕೊಂಡರು. ನಂತರ ಆ ಭೂಮಿಯನ್ನು ಗುರುರಾಘವೇಂದ್ರ ಸ್ವಾಮಿ ಅವರಿಗೆ ನೀಡಿದರು. ಇದರ ಚರಿತ್ರೆಯೂ ಕೂಡ ಮಂತ್ರಾಲಯದಲ್ಲಿದೆ. ಈ ಸಂಬಂಧ ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಕೆಲವರು ಈಗ ಬಂದ ಹಾಳು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

  • ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ

    ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ

    ಬೆಂಗಳೂರು: ಟಿಪ್ಪು ಜಯಂತಿಯ ವಿಚಾರದಲ್ಲಿ ಬಿಜೆಪಿ ಪಕ್ಷದಲ್ಲೇ ಭಿನ್ನಮತ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಬಾರಿಯ ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ ಎಂದು ಬಿಜೆಪಿ ಸಂಸದ ಬಚ್ಚೇಗೌಡ ಅವರ ಮಗ ಮತ್ತು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಶರತ್ ಬಚ್ಚೇಗೌಡ ಹೇಳಿದ್ದಾರೆ.

    ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಆಚರಣೆ ಮಾಡಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ಬಿಜೆಪಿ ಸರ್ಕಾರ ಮಾಡಬಾರದು ಎಂದು ತಡೆ ಹಿಡಿದಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಸ್ವಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಇಂದು ಹೊಸಕೋಟೆಯಲ್ಲಿ ಆಯೋಜಿಸಿದ್ದ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಶರತ್ ಬಚ್ಚೇಗೌಡ ನಾವು ಈ ಬಾರಿ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಹೇಳಿದ್ದಾರೆ.

    ಹಲವು ಬಾರಿ ನನಗೆ ಟಿಪ್ಪು ಜಯಂತಿ ಆಚರಣೆ ಮಾಡದಂತೆ ಸಾಕಷ್ಟು ಜನ ಹೇಳಿದ್ದರು. ಆದರೆ ಈ ಬಾರಿಯ ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡುತ್ತೇವೆ. ನಮ್ಮೂರಿನ ಪಕ್ಕದಲ್ಲಿರುವ ತಮ್ಮರಸನಹಳ್ಳಿಯಲ್ಲಿ ಈ ಬಾರಿ ಟಿಪ್ಪು ಜಯಂತಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಹೇಳಿಕೆ ನೀಡುತ್ತಿದ್ದಂತೆ ಮುಸ್ಲಿಂ ಯುಕನೋರ್ವ ಶರತ್ ಅವರ ಮೇಲೆ ಹಣವನ್ನು ಸುರಿದಿದ್ದಾನೆ.

    ಈಗ ಶರತ್ ಬಚ್ಚೇಗೌಡ ಅವರ ಹೇಳಿಕೆ ಸಾಕಷ್ಟು ಸುದ್ದಿಯಾಗಿದ್ದು, ಟಿಪ್ಪು ಜಯಂತಿ ಮಾಡುತ್ತೇವೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಟಿಪ್ಪು ಬದಲು ಶಿಶುನಾಳ ಶರೀಫರ ಜಯಂತಿ ಆಚರಿಸಲು ಚಿಂತನೆ- ಸಿ.ಟಿ.ರವಿ

    ಟಿಪ್ಪು ಬದಲು ಶಿಶುನಾಳ ಶರೀಫರ ಜಯಂತಿ ಆಚರಿಸಲು ಚಿಂತನೆ- ಸಿ.ಟಿ.ರವಿ

    ಉಡುಪಿ: ಟಿಪ್ಪು ಜಯಂತಿ ಕೈಬಿಟ್ಟಿರುವ ಯಡಿಯೂರಪ್ಪ ಸರ್ಕಾರ ಸಂತ ಶಿಶುನಾಳ ಶರೀಫರ ಜಯಂತಿ ಆಚರಿಸಲು ಚಿಂತನೆ ನಡೆಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಮಾಹಿತಿ ನೀಡಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಿಶುನಾಳ ಶರೀಫರ ಜಯಂತಿ ಆಚರಣೆ ಮಾಡುವ ಬಗ್ಗೆ ನನಗೆ ಅಪೇಕ್ಷೆ ಇದೆ. ಶಿಶುನಾಳ ಶರೀಫರು ಹಿಂದೂ ಮುಸಲ್ಮಾನರು ಒಪ್ಪಿಕೊಂಡ ವ್ಯಕ್ತಿ. ಎರಡೂ ಧರ್ಮ ಖುಷಿ ಪಡುವ ಆಚರಣೆ ಇದಾಗಬಹುದು. ಡಾ.ಎಪಿಜೆ ಅಬ್ದುಲ್ ಕಲಾಂ ಜಯಂತಿಯನ್ನೂ ಮಾಡಬಹುದು. ಕಲಾಂ ದೇಶದ ವಿದ್ಯಾರ್ಥಿಗಳಿಗೆ ಪ್ರೇರಣೆ ಕೊಟ್ಟ ವ್ಯಕ್ತಿ. ಮೊದಲು ರಾಜ್ಯಾದ್ಯಂತ ಎಲ್ಲ ಜಯಂತಿ ಆಚರಣೆಗಳ ಸ್ವರೂಪ ಸಂಗ್ರಹ ಮಾಡುತ್ತೇವೆ ಬಳಿಕ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.

    ನಮ್ಮ ದೇಶದಲ್ಲಿ ಎಲ್ಲ ಜಯಂತಿಗಳು ರಾಜಕೀಯಕರಣಗೊಳ್ಳುವುದರಿಂದ ಎಲ್ಲ ಪಕ್ಷಗಳ ನಾಯಕರ ಅಭಿಪ್ರಾಯ ಪಡೆಯುತ್ತೇನೆ. ನಂತರ ಕ್ಯಾಬಿನೆಟ್‍ನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಮಾಲೋಚನೆ ನಡೆಸಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

    ಸಾಹಿತಿ ಎಸ್.ಎಲ್.ಭೈರಪ್ಪ ದಸರಾ ಉದ್ಘಾಟನಾ ಭಾಷಣಕ್ಕೆ ಪ್ರಗತಿಪರರ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿಟಿ ರವಿ, ನಾನೂ ಭೈರಪ್ಪ ಅವರ ಪಕ್ಕದಲ್ಲೇ ಇದ್ದೆ. ಅವರು ತಪ್ಪೇನೂ ಮಾತನಾಡಿಲ್ಲ. ನಾಡದೇವಿಗೆ ಕೈ ಮುಗಿಯದ ನಾಸ್ತಿಕರಿಗಿಂತ ತಮ್ಮ ಶ್ರದ್ಧೆ ತೋರ್ಪಡಿಸಿದ ಭೈರಪ್ಪ ಕೋಟಿ ಪಾಲು ಮೇಲಿದ್ದಾರೆ. ನಾಸ್ತಿಕರನ್ನು ಕರೆದು ಹಿಂದಿನ ಸರ್ಕಾರ ಅಪಮಾನ ಮಾಡಿತ್ತು. ಭೈರಪ್ಪ ಶಬರಿಮಲೆ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದ್ದಾರೆ ಅಷ್ಟೇ. ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದೇನೂ ಹೇಳಿಲ್ಲ. ನಮ್ಮ ದೇಶದಲ್ಲಿ ಗಂಡು ದೇವತೆಗಳಿಗಿಂತ ಹೆಣ್ಣು ದೇವತೆಗಳೇ ಹೆಚ್ಚಿದ್ದಾರೆ. ಹೆಣ್ಣು ದೇವತೆಯೇ ಇಲ್ಲದಂತಹಾ ಮತದವರು ಅವರ ಬಗ್ಗೆ ಯೋಚನೆ ಮಾಡಲಿ ಸಾಕು ಎಂದು ತಿರುಗೇಟು ನೀಡಿದ್ದಾರೆ.

    ಧ್ವನಿ ಎತ್ತುತ್ತೇವೆ
    ಹತ್ತು ರಾಜ್ಯಗಳಲ್ಲಿ ಮಳೆಯಿಂದ ಹಾನಿಯಾಗಿದೆ, ಹತ್ತೂ ರಾಜ್ಯಕ್ಕೆ ಮಧ್ಯಂತರ ಪರಿಹಾರ ಕೊಟ್ಟಿದ್ದಾರೆ, ಪೂರ್ಣ ಪರಿಹಾರ ಕೊಟ್ಟಿಲ್ಲ. ಚುನಾವಣೆಗೆ ಹೋಗುವ ಮಹಾರಾಷ್ಟ್ರಕ್ಕೂ ಪರಿಹಾರ ಕೊಟ್ಟಿಲ್ಲ. ಪ್ರಧಾನಿಯ ದೃಷ್ಟಿಯಲ್ಲಿ ಎಲ್ಲಾ ರಾಜ್ಯಗಳೂ ಸಮಾನ. ದೇಶದ 132 ಕೊಟಿ ಜನರೂ ಅವರಿಗೆ ಸಮಾನ. ಈ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ರಾಜಕಾರಣ ಮಾಡುತ್ತಿದ್ದಾರೆ. ಒಂದೂ ಸೀಟು ಗೆಲ್ಲದ ಕೇರಳ, ಒಂದೇ ಸೀಟು ಗೆದ್ದ ತಮಿಳುನಾಡಿಗೂ ಪರಿಹಾರ ಕೊಟ್ಟಿದ್ದಾರೆ ಎಂದು ಸಿ.ಟಿ.ರವಿ ಮಾಹಿತಿ ನೀಡಿದರು.

    ಕರ್ನಾಟಕಕ್ಕೆ ಪರಿಹಾರ ಮೊತ್ತ ಬರಲಿದೆ. ಒಂದು ರಾಜ್ಯಕ್ಕೆ ಕೊಟ್ಟು ಇನ್ನೊಬ್ಬರಿಗೆ ಕೊಡದೇ ಇದ್ರೆ ರಾಜಕಾರಣ ಅನ್ನಬಹುದು. ಹಾಗೇನಾದರೂ ಆಗಿದ್ದರೆ ನಾವೇ ಧ್ವನಿ ಎತ್ತುತ್ತೇವೆ ಸಂಶಯ ಬೇಡ. ಅವಶ್ಯಕತೆ ಬಿದ್ದರೆ ನಮ್ಮ ಸಂಸದರು ಹಾಗೂ ಮುಖ್ಯಮಂತ್ರಿಗಳು ದೆಹಲಿಗೆ ಹೋಗುತ್ತಾರೆ. ಕರ್ನಾಟಕದ ಹಿತಾಸಕ್ತಿ ಬಿಟ್ಟು ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಚಕ್ರವರ್ತಿ ಸೂಲಿಬೆಲೆ ಅವರು ಕೇಂದ್ರ ಸರ್ಕಾರ ಹಾಗೂ ಸಂಸದರ ವಿರುದ್ಧ ಹರಿಹಾಯ್ದ ಕುರಿತು ಪ್ರತಿಕ್ರಿಯಿಸಿದ ಅವರು, ಸೂಲಿಬೆಲೆ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿಲ್ಲ. ರಾಷ್ಟ್ರೀಯ ಹಿತಾಸಕ್ತಿಗೆ ಪೂರಕ ಕೆಲಸ ಮಾಡಿರುವುದನ್ನು ಮೊದಲು ಪ್ರಶಂಸೆ ಮಾಡಿದ್ದಾರೆ. ತಮ್ಮ ಅಪೇಕ್ಷೆಯನ್ನು ವ್ತಕ್ಯಪಡಿಸಿದ್ದಾರೆ ಅಷ್ಟೇ, ಅದು ಟೀಕೆ ಅಲ್ಲ. ಪ್ರಧಾನಿ ಕರ್ನಾಟಕ್ಕೆ ಬರಬೇಕು, ಪರಿಹಾರ ಘೋಷಿಸಬೇಕು ಎನ್ನುವುದು ಅವರ ಅಪೇಕ್ಷೆ. ಇದುವೇ ಬ್ಯೂಟಿ ಆಫ್ ಡೆಮಾಕ್ರಸಿ. ನಮಗೂ ಅವರಂತೆ ಸಮಾನ ಅಪೇಕ್ಷೆ ಇದೆ ಎಂದು ರವಿ ತಿಳಿಸಿದರು.

  • ಟಿಪ್ಪು ಜಯಂತಿ ರದ್ದಿಗೆ ಬಿಜೆಪಿಯಲ್ಲೇ ಅಪಸ್ವರ

    ಟಿಪ್ಪು ಜಯಂತಿ ರದ್ದಿಗೆ ಬಿಜೆಪಿಯಲ್ಲೇ ಅಪಸ್ವರ

    ಬೆಂಗಳೂರು: ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿವಾದ ಮತ್ತೆ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದ ನಿರ್ಧಾರಕ್ಕೆ ಬಿಜೆಪಿಯಲ್ಲೇ ಅಸಮಾಧಾನ ವ್ಯಕ್ತವಾಗಿದೆ.

    ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬಾರದು ಎಂದು ಸರ್ಕಾರ ರದ್ದು ಮಾಡಿದೆ. ಆದರೆ ಇತ್ತ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ ಸಹ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.

    ಟಿಪ್ಪು ಸುಲ್ತಾನ್ ಒಬ್ಬ ರಾಜ, ಬ್ರಿಟಿಷ್ ವಿರುದ್ಧ ಹೋರಾಡಿದ ರಾಜ ಎಂದು ಅಭಿಪ್ರಾಯಿಸಿ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಿಸೋದು ಸ್ವಾಗತ. ಆದರೆ ಶಾಂತಿ ಕದಡುತ್ತೆ ಎಂದು ಸರ್ಕಾರ ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿದೆ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

    ಇತ್ತ ಸರ್ಕಾರದ ನಿರ್ಧಾರಕ್ಕೆ ಸೆಡ್ಡು ಹೊಡೆಯಲು ಮುಸ್ಲಿಂ ಕಾರ್ಪೋರೇಟರ್‍ ಗಳು ಸಜ್ಜಾಗಿದ್ದು, ಖಾಸಗಿಯಾಗಿ ಟಿಪ್ಪು ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವುದಾಗಿ ತಿಳಿಸಿದ್ದಾರೆ.

  • ಟಿಪ್ಪು ದೇಶಪ್ರೇಮಿ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದ: ವಾಟಾಳ್ ನಾಗರಾಜ್

    ಟಿಪ್ಪು ದೇಶಪ್ರೇಮಿ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದ: ವಾಟಾಳ್ ನಾಗರಾಜ್

    ರಾಮನಗರ: ರಾಜ್ಯ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ರಾಮನಗರದಲ್ಲಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

    ನಗರದ ಐಜೂರು ವೃತ್ತದ ಬಳಿಯ ಕೆ.ಎಸ್‍.ಆರ್‍.ಟಿ.ಸಿ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಭಾವುಟವನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಟಿಪ್ಪು ಸುಲ್ತಾನ್ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕನಲ್ಲ. ಆತ ದೇಶಪ್ರೇಮಿ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟು ಹೋರಾಟ ನಡೆಸಿದವನು ಎಂದು ಹೇಳಿದರು.

    ಇದೀಗ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿಯಿಂದ ಕೋಮುಗಲಭೆ ಉಂಟಾಗುತ್ತೆ ಎಂದು ರದ್ದು ಮಾಡಿದೆ. ಇದು ಸರಿಯಲ್ಲ ಕೂಡಲೇ ಟಿಪ್ಪು ಜಯಂತಿ ರದ್ದತಿ ಆದೇಶವನ್ನು ವಾಪಸ್ ಪಡೆದು, ಸರ್ಕಾರದಿಂದ ಆಚರಣೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಅಲ್ಲದೇ ಭಾನುವಾರ ಟಿಪ್ಪು ಸಮಾಧಿ ಬಳಿ ವಿಶೇಷ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.

    ಇದರ ಜೊತೆಗೆ ರೈತರು, ಹೋರಾಟಗಾರರ ಮೇಲಿನ ಪ್ರಕರಣಗಳನ್ನು ರದ್ದುಗೊಳಿಸಬೇಕು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು. ರಾಜ್ಯದ ರೈತರಿಗೆ ನೀರಿಲ್ಲ ಅಂತಹದರಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಸರಿಯಿಲ್ಲ. ರಾಜ್ಯದಲ್ಲಿ ಮೂರು ಮೂರು ತಿಂಗಳಿಗೆ ಒಬ್ಬೊಬ್ಬ ಸಿಎಂ ಬರುತ್ತಿದ್ದಾರೆ. ಒಂದೊಂದು ಜಯಂತಿಗಳು ಬರುತ್ತವೆ ಹೋಗುತ್ತದೆ. ಅಧಿಕಾರಿಗಳ ವರ್ಗಾವಣೆ ಜೋರಾಗಿ ನಡೆಯುತ್ತಿದ್ದು ಆಡಳಿತ ಕುಸಿಯುತ್ತಿದೆ ಎಂದು ಕಿಡಿಕಾರಿದರು.

    ಸರ್ಕಾರದ ಜಂಜಾಟದಿಂದ ಮೇಕೆದಾಟು ಅಣೆಕಟ್ಟೆ ನಿರ್ಮಿಸುವ ಕಾರ್ಯ ನೆನೆಗುದಿಗೆ ಬಿದ್ದಿದೆ. ಮುಂದಿನ ವಾರ ಮೇಕೆದಾಟಿನಲ್ಲಿ ತಮ್ಮ ಚಳುವಳಿ ವೇದಿಕೆ ಮೂಲಕ ಶಂಕುಸ್ಥಾಪನೆ ನೆರವೇರಿಸುವುದಾಗಿ ಹೇಳಿದರು.

  • ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಷರತ್ತುಬದ್ಧ ಜಾಮೀನು

    ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಷರತ್ತುಬದ್ಧ ಜಾಮೀನು

    ಮಡಿಕೇರಿ: ಅವಹೇಳನಕಾರಿ ಭಾಷಣ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಪೊನ್ನಂಪೇಟೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

    ಅರ್ಧ ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಎರಡು ಬಾರಿ ತೀರ್ಪನ್ನು ಕಾಯ್ದಿರಿಸಿದ್ದರು. ನ್ಯಾಯಾಧೀಶರಾದ ಮೋಹನ್ ಗೌಡ, ಬಂಧನಕ್ಕೊಳಗಾಗಿದ್ದ ಸಂತೋಷ್ ತಮ್ಮಯ್ಯರಿಗೆ ಷರತ್ತು ಬದ್ಧ ಜಾಮೀನು ನೀಡಿ ಅದೇಶಿಸಿದ್ದಾರೆ.

    ಏನಿದು ಪ್ರಕರಣ?
    ಪ್ರವಾದಿ ಹಾಗೂ ಟಿಪ್ಪು ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೊಟ್ಟ ಆರೋಪದ ಮೇಲೆ ಪತ್ರಕರ್ತ ಸಂತೋಷ ತಮ್ಮಯ್ಯ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜವನಯ್ಯನ ಪಾಳ್ಯದಲ್ಲಿನ ಮಾವನ ಮನೆಯಲ್ಲಿ ಸೋಮವಾರ ರಾತ್ರಿ 11 ಗಂಟೆ ಹೊತ್ತಿಗೆ ಕೊಡಗಿನ ಗೋಣಿಕೊಪ್ಪ ಪೊಲೀಸರು ಬಂಧಿಸಿ, ಇವತ್ತು ಕೋರ್ಟ್‍ಗೆ ಹಾಜರು ಪಡಿಸಿದ್ದರು.

    ನವೆಂಬರ್ 5ರಂದು ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ “ಟಿಪ್ಪು ಕರಾಳ ಮುಖಗಳು” ಅನ್ನೋ ವಿಚಾರ ಸಂಕೀರಣದಲ್ಲಿ ಸಂತೋಷ್ ತಮ್ಮಯ್ಯ ಮಾತನಾಡಿ, ಪ್ರವಾದಿಗಳನ್ನು ಅವಹೇಳನ ಮಾಡಿದ್ದರು ಅಂತ ಕೊಡಗಿನ ಸಿದ್ದಾಪುರದ ಆಸಿಫ್ ಎಂಬಾತ ದೂರು ನೀಡಿದ್ದರು. ಇದರ ಮೇರೆಗೆ ಎಫ್‍ಐಆರ್ ದಾಖಲಿಸಿದ ಪೊಲೀಸರು ಸಂತೋಷ್ ತಮ್ಮಯ್ಯನನ್ನು ಬಂಧಿಸಿದ್ದರು.

    ಸಂತೋಷ್ ಬಂಧನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡೋವರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಲ್ಲ. ಆದ್ರೆ, ಟಿಪ್ಪು, ಪ್ರವಾದಿ ಅಂತ ಮಾತನಾಡಿದ್ರೆ ಹಿಂದೂಗಳನ್ನು ಹತ್ತಿಕ್ಕುವ ಹುನ್ನಾರ ಮಾಡ್ತಾರೆ ಅಂತ ಹಿಂದೂಪರ ಸಂಘಟನೆಗಳು ಇವತ್ತು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ನಾಳೆ ಮಧ್ಯಾಹ್ನ 1 ಗಂಟೆ ಬಂದ್‍ಗೆ ಕರೆ ನೀಡಿದ್ದಾರೆ. ಈ ಮಧ್ಯೆ ಪ್ರಕರಣದಲ್ಲಿ ಬಾಚರಣಿಯಂಡ ಪಿ.ಅಪ್ಪಣ್ಣ, ಅಡ್ಡಂಡ ಕಾರ್ಯಪ್ಪ, ಸುಧಾಕರ್ ಹೊಸಳ್ಳಿ, ರಾಬರ್ಟ್ ರೊಜಾರಿಯೋ ಎಂಬವರಿಗೆ ಬಂಧನ ಭೀತಿ ಎದುರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews