Tag: tipper

  • ಹಣ ಕೊಡ್ಲಿಲ್ಲ ಅಂತ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ

    ಹಣ ಕೊಡ್ಲಿಲ್ಲ ಅಂತ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ

    – ‘ನಿನ್ನೆಯಿಂದ ಟೈಟಾಗಿದ್ದೀನಿ, ಇವತ್ತು 2 ಕ್ವಾಟ್ರು ಕುಡ್ದಿದ್ದೀನಿ’

    ಚಿಕ್ಕಮಗಳೂರು: ಹೆಂಡತಿ-ಮಕ್ಕಳಿಗೆ ಹಣ ಬೇಕು. ನಿಮ್ಮ ಕಾಲಿಗೆ ಬೀಳ್ತೀನಿ ಅಂದ್ರು ಮಾಲೀಕ ಹಣ ಕೊಡಲಿಲ್ಲ ಅಂತ ಹೇಳದೆ-ಕೇಳದೆ ಎಣ್ಣೆ ಏಟಲ್ಲಿ 14 ಚಕ್ರದ ಟಿಪ್ಪರ್ ಲಾರಿಯನ್ನ ತೆಗೆದುಕೊಂಡು ಊರಿಗೆ ಹೋಗಲು ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

    ಮಂಗಳೂರು ಮೂಲದ ರಂಗಪ್ಪ ಎಂಬವನು ಕಡೂರು ತಾಲೂಕಿನಲ್ಲಿ ಪ್ರಭಾಕರ್ ಅವರ ಬಳಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದಮೇಲೆ ಡ್ರೈವರ್ ರಂಗಪ್ಪ ಒಂದೂವರೆ ತಿಂಗಳು ಊರಿಗೆ ಹೋಗಿಲ್ಲ. ಹೀಗಾಗಿ ಮಾಲೀಕನಿಗೆ ಹೆಂಡತಿ-ಮಕ್ಕಳಿಗೆ ಜೀವನಕ್ಕೆ ದುಡ್ಡು ಬೇಕು, ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಕೇಳಿಕೊಂಡಿದ್ದರೂ ಮಾಲೀಕ ಹಣ ಹಾಕಿರಲಿಲ್ಲ. ಇದರಿಂದಾಗಿ ಎಣ್ಣೆ ಮತ್ತಲ್ಲಿದ್ದ ರಂಗಪ್ಪ ಟಿಪ್ಪರ್ ನಲ್ಲಿ ಅರ್ಧ ಟ್ಯಾಂಕರ್ ಡಿಸೇಲ್ ಇದ್ದರಿಂದ ಊರಿಗೆ ಮುಟ್ತಿನಿ ಎನ್ನುವ ನಂಬಿಕೆ ಬಂದಿತ್ತು. ಆದರೆ ಮಾಲೀಕನಿಗೆ ಹೇಳದೆ ಲಾರಿ ತಂದು ಕೊಟ್ಟಿಗೆಹಾರ ಚೆಕ್‍ಪೋಸ್ಟ್‍ನಲ್ಲಿ ಸಿಕ್ಕಿಬಿದ್ದಿದ್ದಾನೆ.

    ಮದ್ಯದ ಮತ್ತಿನಲ್ಲಿದ್ದ ರಂಗಪ್ಪ, “ಊಟಕ್ಕೆ ದುಡ್ ಇರಲಿಲ್ಲ, ಊಟವೂ ಇಲ್ಲ. ಹಣ ಯಾರ್ ಕೊಡ್ತಾರೆ. ಒಂದು ಹೊಟೇಲ್ ಇಲ್ಲ. ಅದಕ್ಕೆ ಲಾರಿಯಲ್ಲಿ ಡಿಸೇಲ್ ಇತ್ತು ಕೀ ನನ್ನ ಬಳಿಯೇ ಇತ್ತು. ಊರಿಗೆ ಹೊರಟಿದ್ದೇನೆ. ಬಿಟ್ಟರೇ ಊರಿಗೆ ಹೋಗ್ತೀನಿ. ಬಿಡಲಿಲ್ಲ ಅಂದ್ರೆ ಲಾರಿಯನ್ನ ಇಲ್ಲೇ ನಿಲ್ಲಿಸ್ತೀನಿ. ಸಾಕು ನನಗೆ ಊಟ ಕೊಡಿ” ಎಂದು ಪೊಲೀಸರಿಗೆ ಕೇಳಿದ್ದಾನೆ. ಸ್ಥಳೀಯರು ಕೇಳಿದ ಪ್ರಶ್ನೆಗೆಲ್ಲಾ ಹರಳು ಹುರಿದಂತೆ ಉತ್ತರಿಸಿದ ರಂಗಪ್ಪ, “ರೆಕಾರ್ಡ್ ಮಾಡ್ಕಳಿ, ನಿನ್ನೆಯಿಂದ ಟೈಟಾಗಿದ್ದೀನಿ, ಇವತ್ತು ಎರಡು ಕ್ವಾಟ್ರು ಕುಡಿದಿದ್ದೀನೆ. ಹೆಂಡತಿ-ಮಕ್ಕಳ ನೋಡ್ಬೇಕು ಹೋಗ್ತೀನಿ” ಎಂದಿದ್ದಾನೆ.

  • ಬೈಕ್‍ಗೆ ಟಿಪ್ಪರ್ ಡಿಕ್ಕಿ- ಟಿಪ್ಪರ್ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಅಪ್ಪಚ್ಚಿ

    ಬೈಕ್‍ಗೆ ಟಿಪ್ಪರ್ ಡಿಕ್ಕಿ- ಟಿಪ್ಪರ್ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ಅಪ್ಪಚ್ಚಿ

    – ಪವಾಡ ರೀತಿ ಬದುಕುಳಿದ ಬಾಲಕ, ಬೈಕ್ ಸವಾರ
    – ಸವಾರನ ಕೈ ಮೇಲೆ ಹರಿದ ಟಿಪ್ಪರ್

    ಗದಗ: ಬೈಕ್‍ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್‍ನಲ್ಲಿ ಕುಳಿತಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ.

    ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ರತ್ನಾ ಮಹೇಂದ್ರಕರ್ (14) ಮೃತ ದುರ್ದೈವಿ. ಬೈಕ್ ಸವಾರ ಫಕ್ಕೀರಯ್ಯ ಹಿರೇಮಠ ಹಾಗೂ ಸಚಿನ್ (2) ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

    ಕೆಲಸದ ನಿಮಿತ್ತ ಫಕ್ಕೀರಯ್ಯ ಹಿರೇಮಠ ಅವರು ಲಕ್ಷ್ಮೇಶ್ವರಕ್ಕೆ ಬಂದಿದ್ದರು. ಅವರೊಂದಿಗೆ ಅದೇ ಗ್ರಾಮದ ರತ್ನಾ ಹಾಗೂ ಸಚಿನ್ ಕೂಡ ಬಂದಿದ್ದರು. ಕೆಲಸ ಮುಗಿಸಿಕೊಂಡು ಶಿಗ್ಲಿಗೆ ಮರಳುತ್ತಿದ್ದಾಗ ವೇಗವಾಗಿ ಬಂದ ಟಿಪ್ಪರ್ ಚಾಲಕ ಬೈಕ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಚಾಲನ ನಿಯಂತ್ರಣ ತಪ್ಪಿ ಬೈಕ್ ಬಿದ್ದಿದ್ದು, ಹಿಂಬದಿಯಲ್ಲಿ ಕುಳಿತಿದ್ದ ರತ್ನಾ ಟಿಪ್ಪರ್ ಹಿಂಬದಿಯ ಚಕ್ರದಲ್ಲಿ ಸಿಲುಕಿ ಮೃತಪಟ್ಟಿದ್ದಾಳೆ.

    ಅದೃಷ್ಟವಶಾತ್ ಫಕ್ಕೀರಯ್ಯ ಹಾಗೂ ಬಾಲಕ ಸಚಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಫಕ್ಕೀರಯ್ಯ ಅವರ ಕೈ ಮೇಲೆ ಟಿಪ್ಪರ್ ಹರಿದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಟಿಪ್ಪರ್ ಚಾಲಕನ ಅತಿಯಾದ ವೇಗವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಘಟನೆ ನಡೆದ ಕೂಡಲೆ ಚಾಲಕ ಸ್ಥಳದಲ್ಲೇ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಟಿಪ್ಪರ್ ಚಾಲಕನಿಗೆ ಪೊಲೀಸರು ಬಲೆ ಬಿಸಿದ್ದಾರೆ.

  • ಪೊಲೀಸ್ರ ಲಾಠಿಯಿಂದ ತಪ್ಪಿಸಿಕೊಳ್ಳಲು ಹೋಗಿ ಟಿಪ್ಪರ್‌ಗೆ ಬೈಕ್ ಡಿಕ್ಕಿ- ಇಬ್ಬರ ಸಾವು

    ಪೊಲೀಸ್ರ ಲಾಠಿಯಿಂದ ತಪ್ಪಿಸಿಕೊಳ್ಳಲು ಹೋಗಿ ಟಿಪ್ಪರ್‌ಗೆ ಬೈಕ್ ಡಿಕ್ಕಿ- ಇಬ್ಬರ ಸಾವು

    – ಓರ್ವನ ದೇಹ ಛಿದ್ರ ಛಿದ್ರ, ಸ್ಥಳದಲ್ಲೇ ಮೃತದೇಹವಿಟ್ಟು ಪ್ರತಿಭಟನೆ
    – ಪೊಲೀಸರಿಂದ ಲಘು ಲಾಠಿಜಾರ್ಜ್

    ಚಿಕ್ಕಮಗಳೂರು: ಪೊಲೀಸರ ಲಾಠಿಯಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಎದುರಿಗೆ ಬರುತ್ತಿದ್ದ ಟಿಪ್ಪರ್‍ಗೆ ಬೈಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಹುಣಸಹಳ್ಳಿ ಗ್ರಾಮದ ಶನಿದೇವರ ದೇವಾಲಯದ ಬಳಿ ನಡೆದಿದೆ.

    ಮೃತರನ್ನ 35 ವರ್ಷದ ಮೋಹನ್ ಹಾಗೂ 25 ವರ್ಷದ ಕುಮಾರ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಕೂಡ ಶಿವಮೊಗ್ಗದ ನವಿಲೆ ಗ್ರಾಮದವರಾಗಿದ್ದಾರೆ. ಶಿವಮೊಗ್ಗದ ಪ್ರತಿಷ್ಠಿತ ಮಾರಿ ಜಾತ್ರೆಗೆ ಸಂಬಂಧಿಗಳನ್ನು ಆಹ್ವಾನಿಸಲು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಶಿವಮೊಗ್ಗದಿಂದ ಬೈಕಿನಲ್ಲಿ ಲಕ್ಕವಳ್ಳಿಗೆ ಬರುತ್ತಿದ್ದ ಯುವಕರು ತಲೆಗೆ ಹೆಲ್ಮೆಟ್ ಹಾಕಿರಲಿಲ್ಲ. ಲಕ್ಕವಳ್ಳಿಯ ಭದ್ರಾ ಜಲಾಶಯದ ಬಳಿಕ ಪೊಲೀಸರು ಗಾಡಿಗಳನ್ನು ತಪಾಸಣೆ ಮಾಡುತ್ತಿದ್ದರು. ಆಗ ಪೊಲೀಸರ ಜೊತೆ ಇದ್ದ ಹೋಂ ಗಾರ್ಡ್ ಬೈಕ್ ನಿಲ್ಲಿಸುವಂತೆ ಇವರ ಮೇಲೆ ಲಾಠಿ ಬೀಸಿದ್ದಾರೆ. ಲಾಠಿಯಿಂದ ತಪ್ಪಿಸಿಕೊಲ್ಳುವ ಆತುರದಲ್ಲಿ ಮುನ್ನುಗಿದಾಗ ಎದುರಿಗೆ ಬಂದ ಟಿಪ್ಪರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ದೇಹ ಛಿದ್ರ ಛಿದ್ರವಾಗಿದೆ.

    ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲೇ ಮೃತದೇಹ ತೆಗೆಯದಂತೆ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದಿಂದ ಬಂದ ನೂರಕ್ಕೂ ಹೆಚ್ಚು ಜನ ಪೊಲೀಸರ ವಿರುದ್ಧ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಎಸ್‍ಪಿ ಬರುವಂತೆ ಆಗ್ರಹಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಮೃತದೇಹವನ್ನು ಮೇಲೆತ್ತಲು ಬಿಡದೆ ಆಕ್ರೋಶ ಹೊರಹಾಕಿದ್ದಾರೆ.

    ಜನ ಪ್ರತಿಭಟನೆಯಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆದ ಪರಿಣಾಮ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಪ್ರತಿಭಟನಾನಿರತರನ್ನು ಚದುರಿಸಿದ್ದಾರೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಲಾರಿ ಟಿಪ್ಪರ್ ಮುಖಾಮುಖಿ ಡಿಕ್ಕಿ – ಚಾಲಕ ಸಜೀವ ದಹನ

    ಲಾರಿ ಟಿಪ್ಪರ್ ಮುಖಾಮುಖಿ ಡಿಕ್ಕಿ – ಚಾಲಕ ಸಜೀವ ದಹನ

    ಹುಬ್ಬಳ್ಳಿ: ಲಾರಿ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಹೊತ್ತಿ ಉರಿದ ಘಟನೆ ತಾಲೂಕಿನ ದೇವಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ರಾತ್ರಿ 9.30 ರ ಸುಮಾರಿಗೆ ನಡೆದಿದೆ.

    ಲಾರಿ ಹಾಗೂ ಟಿಪ್ಪರ್ ಗೆ ಮುಖಾಮುಖಿ ಡಿಕ್ಕಿ ಸಂಭವಿಸುತ್ತಿದ್ದಂತೆ ಡಿಸೇಲ್ ಟ್ಯಾಂಕ್ ಗೆ ಬೆಂಕಿ ಹೊತ್ತಿದ ಪರಿಣಾಮ ಟಿಪ್ಪರ್ ನಲ್ಲಿ ಇದ್ದ ಚಾಲಕ ವಾಹನದಲ್ಲೇ ಸಜೀವ ದಹನವಾಗಿದ್ದಾನೆ. ಚಾಲಕನ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಲಾರಿಯಲ್ಲಿನ ಚಾಲಕ ಮತ್ತು ಕ್ಲೀನರ್ ಅಪಘಾತ ಸಂಭವಿಸುತ್ತಿದ್ದಂತೆ ಇಳಿದು ಓಡಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಚರಣೆ ಮಾಡಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಸ್ಥಳದಲ್ಲೇ ಬಿಡು ಬಿಟ್ಟಿದ್ದಾರೆ. ಲಾರಿ ಹಾಗೂ ಟಿಪ್ಪರ್ ನಲ್ಲಿ ಏನಿದ್ದವು ಎಂಬುದು ಗೊತ್ತಾಗಿಲ್ಲ. ಎಲ್ಲಿಯ ವಾಹನಗಳಿವು ಎಲ್ಲಿಗೆ ಹೋಗುತ್ತಿದ್ದವು ಎಂಬ ಮಾಹಿತಿಯು ತಿಳಿದಿಲ್ಲ.

    ಈ ಸಂಬಂಧ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಸ ವಿಲೇವಾರಿಯ ಹೊಸ ಆಟೋ ಟಿಪ್ಪರ್ ಪರಿಶೀಲನೆ

    ಕಸ ವಿಲೇವಾರಿಯ ಹೊಸ ಆಟೋ ಟಿಪ್ಪರ್ ಪರಿಶೀಲನೆ

    ಬೆಂಗಳೂರು: ಹಲಸೂರು ಕೆರೆ ಅಂಗಳದಲ್ಲಿ ಸಸಿ ನೆಡುವ ಮೂಲಕ 8,000ಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಮೇಯರ್ ಚಾಲನೆ ನೀಡಿದರು. ಈ ವೇಳೆ ಸಂಸದ ಪಿ.ಸಿ.ಮೋಹನ್, ಸ್ಥಳೀಯ ಶಾಸಕ ರಿಜ್ವಾನ್ ಹರ್ಷದ್, ಸ್ಥಳೀಯ ಪಾಲಿಕೆ ಸದಸ್ಯರು ಮಮತಾ ಶರವಣ, ಪಾಲಿಕೆ ಆಯುಕ್ತರು ಬಿ.ಹೆಚ್.ಅನಿಲ್ ಕುಮಾರ್, ವಲಯ ಜಂಟಿ ಆಯುಕ್ತರು ಶ್ರೀಮತಿ ಪಲ್ಲವಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಕೆರೆಯ ಅಂಗಳ ಹಾಗೂ ಉದ್ಯಾನದಲ್ಲಿ ಪಾಲಿಕೆ ಮತ್ತು ಕೋಟಿ ವೃಕ್ಷ ಸೈನ್ಯ ಸಹಯೋಗದಲ್ಲಿ 8,000ಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ನೆಡಲಾಗುತ್ತಿದ್ದು, ಕೋಟಿ ವೃಕ್ಷ ಸೈನ್ಯವೇ ಎರಡು ವರ್ಷಗಳ ಕಾಲ ಸಸಿಗಳನ್ನು ಪೋಷಣೆ ಮಾಡಲಿದೆ. ನಗರದ ಸೆಟ್ರೀಸ್ ಮತ್ತಿ ಬಯೋಟಾ ಸಾಯಿಲ್ ಸಂಸ್ಥೆಗಳು ಈ ಸಸಿಗಳನ್ನು ವಿತರಿಸಿದ್ದು, ವಿವಿಧ ಖಾಸಗಿ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಪರಿಸರ ತಜ್ಞರು, ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ನೆಡಲಾಯಿತು.

    ನಗರದಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಪ್ರತಿ ವರ್ಷವೂ ಸಸಿಗಳನ್ನು ನೆಡಲಾಗುತ್ತದೆ. ನಗರದ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಉದ್ಯಾನ ನಗರಿಯನ್ನಾಗಿಸುವುದು ಪಾಲಿಕೆಯ ಗುರಿಯಾಗಿರುತ್ತದೆ.ನಂತರ ಮೇಯರ್ ಹಾಗೂ ಪಾಲಿಕೆ ಆಯುಕ್ತರು ಇಂದೋರನಲ್ಲಿ ಕಸ ವಿಲೇವಾರಿ ಮಾಡಲು ಬಳಸುವ ಮಾದರಿಯ ಆಟೋ ಟಿಪ್ಪರ್ ಅನ್ನು ಪರಿಶೀಲಿಸಿದರು.

    ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಇಂದೋರ್ ಮಾದರಿಯ ಕಸ ವಿಲೇವಾರಿಯನ್ನು ಪ್ರಾಯೋಗಿಕವಾಗಿ ನಾಲ್ಕು ವಾರ್ಡ್ ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

    ಒಂದೇ ಆಟೋ ಟಿಪ್ಪರ್ ನಲ್ಲಿ ಹಸಿ ಮತ್ತು ಒಣ ಕಸ ಸಂಗ್ರಹಿಸಬಹುದಾಗಿದ್ದು, ಹಸಿ ಕಸ ಸಂಗ್ರಹಕ್ಕೆ ಹಸಿರು ಬಣ್ಣ ಹಾಗೂ ಒಣ ಕಸ ಸಂಗ್ರಹಕ್ಕೆ ನೀಲಿ ಬಣ್ಣ ಬಳಿಯಲಾಗಿದೆ. ಇದರಿಂದ ಸಾರ್ವಜನಿಕರು ಮತ್ತು ಪೌರಕಾರ್ಮಿಕರಿಗೆ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ. ಸಾರ್ವಜನಿಕರು ವಿಂಗಡಿಸಿಕೊಟ್ಟ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಯೋಜಿಸಿದೆ.

  • ಟಿಪ್ಪರ್, ಟಾಟಾಏಸ್ ಮುಖಾಮುಖಿ ಡಿಕ್ಕಿ – ದಿನಪತ್ರಿಕೆ ಏಜೆಂಟ್ ಸ್ಥಳದಲ್ಲೇ ಸಾವು

    ಟಿಪ್ಪರ್, ಟಾಟಾಏಸ್ ಮುಖಾಮುಖಿ ಡಿಕ್ಕಿ – ದಿನಪತ್ರಿಕೆ ಏಜೆಂಟ್ ಸ್ಥಳದಲ್ಲೇ ಸಾವು

    ಆನೇಕಲ್: ದಿನ ಪತ್ರಿಕೆ ಸರಬರಾಜು ಮಾಡುತ್ತಿದ್ದ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಖಾಸಗಿ ದಿನ ಪತ್ರಿಕೆಯ ಏಜೆಂಟ್ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕೊಪ್ಪ ಗೇಟ್ ಬಳಿ ನಡೆದಿದೆ.

    ಕೃಷ್ಣ (26) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೃಷ್ಣ ಅವರು ರಾಜ್ಯದ ಖಾಸಗಿ ದಿನಪತ್ರಿಕೆಯೊಂದರ ಏಜೆಂಟ್ ಆಗಿದ್ದು, ಪ್ರತಿನಿತ್ಯ ಬೆಂಗಳೂರಿನಿಂದ ಆನೇಕಲ್ ಪಟ್ಟಣಕ್ಕೆ ಟಾಟಾ ಏಸ್ ವಾಹನದ ಮೂಲಕ ದಿನಪತ್ರಿಕೆ ಸರಬರಾಜು ಮಾಡುತ್ತಿದ್ದರು.

    ಎಂದಿನಂತೆ ಇಂದು ಸಹ ದಿನಪತ್ರಿಕೆ ಸರಬರಾಜು ಮಾಡಲು ಬನ್ನೇರುಘಟ್ಟ ಕಡೆಯಿಂದ ಆನೇಕಲ್ ಪಟ್ಟಣಕ್ಕೆ ಬರುವ ಮಾರ್ಗ ಮಧ್ಯೆ ಕೊಪ್ಪ ಗೇಟ್ ಬಳಿ ಟಿಪ್ಪರ್ ಲಾರಿ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಕೃಷ್ಣ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಕೃಷ್ಣ ಅವರಿಗೆ ಒಂದು ತಿಂಗಳ ಹಿಂದಷ್ಟೇ ಮದುವೆ ನಿಶ್ಚಯವಾಗಿತ್ತು.

    ಈ ಸಂಬಂಧ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಟಿಪ್ಪರ್ ವಶಕ್ಕೆ ಪಡೆದಿದ್ದು, ಟಿಪ್ಪರ್ ಚಾಲಕ ಪರಾರಿಯಾಗಿದ್ದು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

  • ಟಿಪ್ಪರ್‌ಗೆ ಕಾರು ಡಿಕ್ಕಿ- ಒಂದೇ ಕುಟುಂಬದ ನಾಲ್ವರ ದುರ್ಮರಣ

    ಟಿಪ್ಪರ್‌ಗೆ ಕಾರು ಡಿಕ್ಕಿ- ಒಂದೇ ಕುಟುಂಬದ ನಾಲ್ವರ ದುರ್ಮರಣ

    ಬೆಂಗಳೂರು: ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಮತ್ತು ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.

    ಸರ್ಜಾಪುರ ರಸ್ತೆಯ ಕಾನ್ಪಿಡೆಂಟ್ ಅಪಾಟ್‌ರ್ಮೆಂಟ್‌ ಬಳಿ ಅಪಘತ ನಡೆದಿದೆ. ಅಂಜನಿ ಯಾದವ್(31), ನೇಹಾಯಾದವ್(28), ದ್ರುವ(2), ಶುಭ್ರ ಸಂತೋಷ್(29) ಮೃತ ದುರ್ದೈವಿಗಳು. ಸಂತೋಷ್(29), ಮಗಳು ಸಾನ್ವಿ(2) ಗಂಭೀರ ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಜನಿ ಯಾದವ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಅವರೇ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ. ತಡರಾತ್ರಿ ಸ್ನೇಹಿತರೊಂದಿಗೆ ಊಟ ಮುಗಿಸಿ ಮನೆಗೆ ಬರುತ್ತಿದ್ದಾಗ ಎದುರುಗಡೆ ಬರುತ್ತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

    ಕಾರಿನ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಟಿಪ್ಪರ್‌ಗೆ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ

    ಟಿಪ್ಪರ್‌ಗೆ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ

    ಬಾಗಲಕೋಟೆ: ನಿಯಂತ್ರಣ ತಪ್ಪಿ ಟಿಪ್ಪರ್‌ಗೆ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಕೆಎಸ್‌ಆರ್‌ಟಿಸಿ ಬಸ್ ಬೆನಕಟ್ಟಿ ಗ್ರಾಮದಿಂದ ಬಾಗಲಕೋಟೆ ಕಡೆ ಹೋಗುತ್ತಿತ್ತು. ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‍ನ ಮುಂಭಾಗದ ಗಾಜು ಜಖಂಗೊಂಡು ಪುಡಿ ಪುಡಿ ಆಗಿದೆ.

    ಘಟನೆಯಲ್ಲಿ ಭಾರೀ ಅನಾಹುತ ತಪ್ಪಿದಂತಾಗಿದೆ. ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ವಿಷಯ ತಿಳಿದು ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಟಿಪ್ಪರ್ ಚಾಲಕನ ಅಜಾಗರೂಕತೆ- ಧರೆಗುರುಳಿತು 10 ವಿದ್ಯುತ್ ಕಂಬಗಳು!

    ಟಿಪ್ಪರ್ ಚಾಲಕನ ಅಜಾಗರೂಕತೆ- ಧರೆಗುರುಳಿತು 10 ವಿದ್ಯುತ್ ಕಂಬಗಳು!

    ಮೈಸೂರು: ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಒಂದು ಟ್ರಾನ್ಸ್ ಫಾರ್ಮರ್ ಮತ್ತು 10 ವಿದ್ಯುತ್ ಕಂಬಗಳು ಧರೆಗುರುಳಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿರೋ ಘಟನೆ ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದೆ.

    ಟಿಪ್ಪರ್ ಚಾಲಕ ಡೀಸೆಲ್ ತುಂಬಿಸಿ ಟ್ರ್ಯಾಲಿಯನ್ನು ಕೆಳಗಿಳಿಸದ ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾಗುವಾಗ ವಿದ್ಯುತ್ ತಂತಿಗೆ ಸಿಲುಕಿ ಈ ಅನಾಹುತವಾಗಿದೆ. ಟಿಪ್ಪರ್‍ಗೆ ವಿದ್ಯುತ್ ತಂತಿ ತಗುಲಿದ ತಕ್ಷಣ ವಿದ್ಯುತ್ ಕಡಿತಗೊಂಡಿದ್ದು, ಅದೃಷ್ಟವಶಾತ್ ಭಾರೀ ಅವಘಡ ತಪ್ಪಿದೆ. ಸ್ಥಳಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಾರ್ಪೊರೇಷನ್ ಲಿಮಿಟೆಡ್(ಸಿಇಎಸ್‍ಸಿ) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಅವಘಡದಿಂದ ವಿದ್ಯುತ್ ಕಂಬಗಳು ರಸ್ತೆ ಬದಿಯಲ್ಲಿ ಧರೆಗುರುಳಿದೆ. ಕೆಲವು ಕಂಬಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೂ ಬಿದ್ದಿದೆ. ಸದ್ಯ ಟಿಪ್ಪರ್ ಚಾಲಕ ನಾಗನನ್ನು ಹುಣಸೂರು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಹರಿದ ಟಿಪ್ಪರ್

    ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಹರಿದ ಟಿಪ್ಪರ್

    ಚಿಕ್ಕಮಗಳೂರು: ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಟಿಪ್ಪರ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಚಿಕ್ಕಮಗಳೂರು ನಗರದ ಶೃಂಗಾರ ಸರ್ಕಲ್‍ನಲ್ಲಿ ನಡೆದಿದೆ.

    ಲಕ್ಷ್ಮೀ(48) ಸ್ಥಳದಲ್ಲೇ ಮೃತಪಟ್ಟ ಮಹಿಳೆ. ಲಕ್ಷ್ಮೀ ತನ್ನ ಪತಿ ಜೊತೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಕೂಟಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ನೋಡ ನೋಡ್ತಿದ್ದಂತೆ ಮಹಿಳೆ ಲಾರಿ ಅಡಿ ಸಿಲುಕಿ ಕೊನೆಯುಸಿರು ಎಳೆದಿದ್ದಾರೆ.

    ಈ ಘಟನೆಯಲ್ಲಿ ಸ್ಕೂಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಭೀಕರ ಅಪಘಾತದ ದೃಶ್ಯ ಪಕ್ಕದ ಪೆಟ್ರೋಲ್ ಬಂಕ್‍ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳಿಯರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಬಗ್ಗೆ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv