Tag: Tiktok

  • 9 ಲಕ್ಷ ಹಿಂಬಾಲಕರನ್ನು ಹೊಂದಿದ್ದ ಟಿಕ್‍ಟಾಕ್ ಸ್ಟಾರ್ ಅರೆಸ್ಟ್

    9 ಲಕ್ಷ ಹಿಂಬಾಲಕರನ್ನು ಹೊಂದಿದ್ದ ಟಿಕ್‍ಟಾಕ್ ಸ್ಟಾರ್ ಅರೆಸ್ಟ್

    – 4.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಎಗರಿಸಿದ್ದ ಆರೋಪಿ

    ಮುಂಬೈ: ಟಿಕ್‍ಟಾಕ್ ಆಪ್‍ನಲ್ಲಿ 9 ಲಕ್ಷ ಹಿಂಬಾಲಕರನ್ನು ಹೊಂದಿದ್ದ ಟಿಕ್‍ಟಾಕ್ ಸ್ಟಾರ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಪೂರ್ವ ಮುಂಬೈನ ಕುರ್ಲಾ ನಿವಾಸಿ ಅಭಿಮನ್ಯು ಗುಪ್ತಾ ಬಂಧಿತ ಟಿಕ್‍ಟಾಕ್ ಸ್ಟಾರ್. ಆರೋಪಿ ಅಭಿಮನ್ಯು ಜುಹಾ ಪ್ರದೇಶ ಮನೆಯಲ್ಲಿ ಜನವರಿ ತಿಂಗಳು ಕಳ್ಳತನ ಮಾಡಿ, ಪರಾರಿಯಾಗಿದ್ದ.

    ದುಷ್ಕರ್ಮಿಗಳು ತಮ್ಮ ಮನೆ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣ, ಒಂದು ಮೊಬೈಲ್ ಸೇರಿದಂತೆ 4.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎಂದು ದಂಪತಿ, ಜುಹು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರಿಗೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಲಭ್ಯವಾಗಿದ್ದವು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಆರೋಪಿ ಗುಪ್ತಾನನ್ನು ಮೇ 8ರಂದು ಬಂಧಿಸಿದ್ದರು. ಆದರೆ ಗುಪ್ತಾ, ನಾನು ದರೋಡೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದ.

    ಪ್ರಕರಣದ ಕುರಿತು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಗುಪ್ತಾ ಸತ್ಯ ಒಪ್ಪಿಕೊಂಡಿದ್ದಾನೆ. ಇವು ನನ್ನ ಪತ್ನಿಯ ಚಿನ್ನಾಭರಣಗಳು. ಸದ್ಯಕ್ಕೆ ನಿನ್ನ ಹತ್ತಿರ ಇಟ್ಟುಕೊ ಎಂದು ಕಳ್ಳತನ ಮಾಡಿದ್ದ ಒಡವೆಗಳನ್ನು ಗೆಳೆಯನಿಗೆ ನೀಡಿದ್ದೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಆರೋಪಿ ಗೆಳೆಯನ ಬಳಿಯಿದ್ದ ಚಿನ್ನಾಭರಣ, ಮೊಬೈಲ್ ಸೇರಿದಂತೆ ದರೋಡೆ ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

    ಆರೋಪಿ ಗುಪ್ತಾ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಆತನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಅಧಿಕಾರಿ ಹರಿ ಬಿರಾದಾರ್ ತಿಳಿಸಿದ್ದಾರೆ.

  • ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತಿಯಿಂದ ಪತ್ನಿಯ ಕೊಲೆ

    ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತಿಯಿಂದ ಪತ್ನಿಯ ಕೊಲೆ

    ಚೆನ್ನೈ: ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ತಮಿಳು ನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

    ನಂದಿನಿ(28) ಕೊಲೆಯಾದ ದುರ್ದೈವಿ. ನಂದಿನಿ ಪ್ರೈವೇಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕಟ್ಟಡ ನಿರ್ಮಾಣ ಕಾರ್ಮಿಕ ಕನಕ ರಾಜುನನ್ನು ಮದುವೆ ಆಗಿದ್ದಳು. ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಕೂಡ ಇದ್ದಾರೆ. ನಂದಿನಿ ಹಾಗೂ ಕನಕ ರಾಜು ಎರಡು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

    ನಂದಿನಿ ತನ್ನ ಪತಿ ಕನಕ ರಾಜುನಿಂದ ದೂರ ಆಗಿ ಟಿಕ್‍ಟಾಕ್‍ಗೆ ಅಡಿಕ್ಟ್ ಆಗಿ ಅದನ್ನು ಅಪ್ಲೋಡ್ ಮಾಡುತ್ತಿದ್ದಳು. ಇದನ್ನು ನೋಡಿದ ಆಕೆಯ ಪತಿ ಕನಕ ರಾಜು, ಟಿಕ್‍ಟಾಕ್ ವಿಡಿಯೋ ಅಪ್ಲೋಡ್ ಮಾಡದಂತೆ ಎಚ್ಚರಿಸಿದ್ದನು. ಅಲ್ಲದೆ ತನ್ನ ಮನೆಗೆ ಹಿಂದಿರುಗಿ ಕುಟುಂಬದ ಜೊತೆ ವಾಸಿಸಲು ಹೇಳಿದ್ದನು.

    ಆದರೆ ನಂದಿನಿ ತನ್ನ ಪತಿಯ ಮಾತನ್ನು ಕೇಳಲಿಲ್ಲ. ನಂದಿನಿಗೆ ಕನಕ ರಾಜು ಸಾಕಷ್ಟು ಬಾರಿ ಕರೆ ಮಾಡಿದ್ದನು. ಆದರೆ ಆಕೆಯ ಮೊಬೈಲ್ ಬ್ಯುಸಿ ಬರುತ್ತಿತ್ತು. ಇದರಿಂದ ಕೋಪಗೊಂಡ ಕನಕ ರಾಜು ಕುಡಿದು ಪತ್ನಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಗಲಾಟೆ ಮಾಡಿದ್ದಾನೆ.

    ಈ ವೇಳೆ ನಂದಿನಿ ಹಾಗೂ ಕನಕ ರಾಜು ನಡುವಿನ ಜಗಳ ವಿಕೋಪಕ್ಕೆ ತಲುಪುತ್ತಿದ್ದಂತೆ ಕನಕ ರಾಜು ಪತ್ನಿ ನಂದಿನಿಯನ್ನು ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ನಂದಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ದೇಹದಿಂದ ತೀವ್ರ ರಕ್ತಸ್ತ್ರಾವ ಆಗುತ್ತಿತ್ತು.

    ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ ನಂದಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಅಲ್ಲದೆ ಆರೋಪಿ ಕನಕ ರಾಜುನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ಟಿಕ್‍ಟಾಕ್‍ನಲ್ಲಿ ವೈರಲ್ ಆಯ್ತು ಉ.ಕ ವಿದ್ಯಾರ್ಥಿಗಳ ಜನಪದ ಹಾಡು

    ಟಿಕ್‍ಟಾಕ್‍ನಲ್ಲಿ ವೈರಲ್ ಆಯ್ತು ಉ.ಕ ವಿದ್ಯಾರ್ಥಿಗಳ ಜನಪದ ಹಾಡು

    ಬಾಗಲಕೋಟೆ: ಸಾಮಾಜಿಕ ಜಾಲತಾಣದಲ್ಲಿ ದಿಢೀರನೆ ಜನಪ್ರಿಯರಾದವರು ಸಾಕಷ್ಟು ಜನರಿದ್ದಾರೆ. ಹಾಡಲ್ಲಾಗಿರಬಹುದು, ಡ್ಯಾನ್ಸ್, ಮಿಮಿಕ್ರಿ ಯಾವುದೇ ಮನರಂಜನೆ ಮೂಲಕ ದಿನ ಬೆಳಗಾಗೋದರೊಳಗೆ ಫೇಮಸ್ ಆಗುತ್ತಾರೆ. ಸದ್ಯ ಬಾಗಲಕೋಟೆ ನಗರದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಜನಪದ ಹಾಡಿನ ಮೂಲಕ ಫುಲ್ ಪಾಪ್ಯುಲರ್ ಆಗಿದ್ದಾರೆ.

    ವಿದ್ಯಾರ್ಥಿಗಳು ತಯಾರಿಸಿರುವ ಜಾನಪದ ಹಾಡೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈಗಾಗಲೇ ಫೇಮಸ್ ಆಗಿರುವ “ನನ್ನ ಗೆಳತಿ ನನ್ನ ಗೆಳತಿ” ಹಾಡಿನ ಫೀಮೆಲ್ ವರ್ಶನ್ ಹಾಡು “ನನ್ನ ಗೆಳೆಯಾ ನನ್ನ ಗೆಳೆಯಾ” ಹಾಡನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ರಚನೆ ಮಾಡಿದೆ.

    ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ರಶ್ಮಿ ಗುಡ್ಡದ ಹಾಡಿ ನೃತ್ಯ ಮಾಡಿದ್ದಾಳೆ. ಹಾಡನ್ನು ಯುಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದು, ಒಂದೇ ದಿನದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿ ಸಖತ್ ಮೆಚ್ಚುಗೆಗೆ ಪಾತ್ರವಾಗಿದೆ.

    ಸೌಭಾಗ್ಯ ಹಿರೇಮಠ ಎಂಬ ಇನ್ನೋರ್ವ ವಿದ್ಯಾರ್ಥಿನಿ ಈ ಹಾಡನ್ನು ಬರೆದಿದ್ದು, ಉಳಿದ ಎಂಜಿನಿಯರಿಂಗ್ ಗೆಳೆಯರು ಮ್ಯೂಸಿಕ್, ಕ್ಯಾಮರಾ ವರ್ಕ್ ಹಾಗೂ ಎಡಿಟಿಂಗ್ ವರ್ಕ್ ಮಾಡಿ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಉತ್ತರ ಕರ್ನಾಟಕದ ಇಳಕಲ್ ಸೀರೆ ಹಾಗೂ ಮಾಡರ್ನ್ ಡ್ರೆಸ್‍ನಲ್ಲಿ ರಶ್ಮಿ ಗುಡ್ಡದ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ.

    ಬಾಗಲಕೋಟೆ ನಗರದ ಶಿರೂರು ಅಗಸಿ, ಮುಚಖಂಡಿ ಕೆರೆಯ ಸೇತುವೆ, ಆಲಮಟ್ಟಿ ಹಿನ್ನೀರು ಬಳಿ ಚಿತ್ರೀಕರಣ ಮಾಡಿದ್ದು, ಪಕ್ಕಾ ಉತ್ತರ ಕರ್ನಾಟಕ ಜನಪದ ಹಾಡು ಈಗ ಫುಲ್ ಫೇಮಸ್ ಆಗಿದೆ. ಕೇವಲ ವಾಟ್ಸಾಪ್ ಫೇಸ್‍ಬುಕ್ ಅಲ್ಲದೆ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ನಾಡಿನ ಮೂಲೆ ಮೂಲೆಯಾದ್ಯಂತ ಟಿಕ್‍ಟಾಕ್‍ನಲ್ಲಿ ಈ ಹಾಡಿಗೆ ಯುವತಿಯರು ಅಭಿನಯಿಸಿ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ.

  • ಹಾವಿನ ಜೊತೆ ಟಿಕ್‍ಟಾಕ್ – ಇಬ್ಬರು ಯುವಕರು ಅರೆಸ್ಟ್

    ಹಾವಿನ ಜೊತೆ ಟಿಕ್‍ಟಾಕ್ – ಇಬ್ಬರು ಯುವಕರು ಅರೆಸ್ಟ್

    ಮುಂಬೈ: ಹಾವಿನ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ಯುವಕರು ಕೈಯಲ್ಲಿ ಹಾವನ್ನು ಹಿಡಿದುಕೊಂಡು ಟಿಕ್‍ಟಾಕ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಯುವಕರು ಹಾವಿಗೆ ಮುತ್ತು ಕೊಟ್ಟಿದ್ದಾರೆ. ಅಲ್ಲದೆ ಕೈಯಲ್ಲಿ ಹಿಡಿದುಕೊಂಡು ಓಡಾಡಿದ್ದರು.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಅರಣ್ಯ ವಿಭಾಗಕ್ಕೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅರಣ್ಯ ವಿಭಾಗದ ಅಧಿಕಾರಿಗಳು ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ವಿಡಿಯೋದಲ್ಲಿದ್ದ ಹಾವು ತುಂಬಾ ವಿಷಪೂರಿತ ಹಾವಾಗಿದ್ದು, ಕಚ್ಚಿದರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಟಿಕ್‍ಟಾಕ್‍ನಲ್ಲಿ ಇಂತಹ ವಿಡಿಯೋ ಮಾಡುವವರ ಹೆಸರನ್ನು ನನಗೆ ಹೇಳಿ ಎಂದು ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಧಿಕಾರಿಗಳು ಇಬ್ಬರು ಯುವಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಈ ವಿಡಿಯೋ ಮಾಡುವುದಕ್ಕೆ ನಿಮಗೆ ಹಾವು ಸಿಕ್ಕಿದ್ದು ಎಲ್ಲಿ? ವಿಡಿಯೋ ಮಾಡಿದ ನಂತರ ಆ ಹಾವನ್ನು ಏನೂ ಮಾಡಿದ್ದೀರಿ ಪ್ರಶ್ನಿಸಿದ್ದಾರೆ.

    ಅಧಿಕಾರಿಗಳ ಪ್ರಶ್ನೆಗೆ ಯುವಕರು, ಭರತ್ ಕೇಣೆ ನಮಗೆ ಹಾವನ್ನು ಹಿಡಿಯಲು ಹೇಳಿಕೊಟ್ಟಿದ್ದನು ಎಂದು ಉತ್ತರಿಸಿದ್ದಾರೆ. ಕೆಲ ದಿನಗಳ ಹಿಂದೆ ಹಾವು ಕಡಿದು ಭರತ್ ಕೇಣೆ ಮೃತಪಟ್ಟಿದ್ದಾನೆ.

  • ಟಿಕ್‍ಟಾಕ್ ಸ್ಟಾರ್ ಹತ್ಯೆ – ಅಪ್ರಾಪ್ತ ಅರೆಸ್ಟ್

    ಟಿಕ್‍ಟಾಕ್ ಸ್ಟಾರ್ ಹತ್ಯೆ – ಅಪ್ರಾಪ್ತ ಅರೆಸ್ಟ್

    ನವದೆಹಲಿ: ಜಿಮ್ ಟ್ರೈನರ್ ಆಗಿರುವ ಟಿಕ್‍ಟಾಕ್ ಸ್ಟಾರ್ ನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಅಪ್ರಾಪ್ತ ಬಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಮೋಹಿತ್ ಮೋರ್(27) ಮೃತ ಜಿಮ್ ಟ್ರೈನರ್. ಮೋಹಿತ್ ನಾಜಫ್‍ಗರ್ ನ ಧರಂಪುರನ ನಿವಾಸಿಯಾಗಿದ್ದು, ಮನೆಯ ಹತ್ತಿರ ಇರುವ ಫೋಟೋಕಾಪಿ ಶಾಪ್‍ನಲ್ಲಿ ತನ್ನ ಗೆಳೆಯನನ್ನು ಭೇಟಿ ಮಾಡಲು ಹೋಗಿದ್ದನು. ಈ ವೇಳೆ ಆರೋಪಿಗಳು ಮೋಹಿತ್‍ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು.

    ಕೊಲೆ ಮಾಡಿದ್ದು ಯಾಕೆ?
    ಆರೋಪಿಗಳಾದ ಅಪ್ರಾಪ್ತ ಬಾಲಕ, ವಿಕಾಸ್ ಹಾಗೂ ರೋಹಿತ್, ಸಂದೀಪ್ ಫಾಲ್ವಾನ್ ಗ್ಯಾಂಗ್‍ನಲ್ಲಿ ಭಾಗಿಯಾಗಿದ್ದರು. ಬೇರೆಯೊಬ್ಬ ವ್ಯಕ್ತಿ ಜೊತೆಗೆ ಇದ್ದ ದ್ವೇಷವನ್ನು ತೀರಿಸಿಕೊಳ್ಳಲು ಒಂದು ತಿಂಗಳ ಹಿಂದೆ ಅಪ್ರಾಪ್ತ ಬಾಲಕ ಸಂದೀಪ್‍ನನ್ನು ಭೇಟಿಯಾಗಿದ್ದಾನೆ. ಅಲ್ಲದೆ ಸಂದೀಪ್‍ಗೆ ಗ್ಯಾಂಗ್‍ನಲ್ಲಿ ಸೇರಿಸಿಕೊಳ್ಳಲು ಹೇಳಿದ್ದಾನೆ. ಆಗ ಸಂದೀಪ್ ನೀನು ಟಿಕ್‍ಟಾಕ್ ಸ್ಟಾರ್ ಮೋಹಿತ್ ಮೋರ್ ನನ್ನು ಕೊಲೆ ಮಾಡಿದರೆ ಮಾತ್ರ ಸೇರಿಸಿಕೊಳ್ಳುವುದಾಗಿ ಷರತ್ತು ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಮಂಗಳವಾರ ಸಂದೀಪ್ ಬಾಲಕನನ್ನು ನಾಜಫ್‍ಗರ್ ಬಳಿ ಭೇಟಿ ಆಗಲು ಹೇಳಿದ್ದನು. ಅಲ್ಲಿ ಬಂದ ಮೂವರು ಆರೋಪಿಗಳಿಗೆ ಸಂದೀಪ್ ಪಿಸ್ತೂಲ್ ನೀಡಿ ಮೋಹಿತ್‍ನನ್ನು ಜಿಮ್ ಅಥವಾ ಫೋಟೋಶಾಪ್‍ನಲ್ಲಿ ಕೊಲೆ ಮಾಡಿ ಎಂದು ಹೇಳಿದ್ದನು. ಮೋಹಿತ್ ಫೋಟೋಶಾಪ್ ಒಳಗೆ ಕುಳಿತುಕೊಂಡು ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದನು. ಈ ವೇಳೆ ಮೂವರು ಆರೋಪಿಗಳು ಅಂಗಡಿಯೊಳಗೆ ಬಂದು ಬರೋಬ್ಬರಿ 13 ಗುಂಡು ಹೊಡೆದು ಮೋಹಿತ್‍ನನ್ನು ಕೊಲೆ ಮಾಡಿದ್ದರು.

    ವಿಚಾರಣೆಯಲ್ಲಿ ಹೇಳಿದ್ದೇನು?
    ಸಂದೀಪ್ ಸಹಚರನಾಗಿದ್ದ ಮಾಂಗು ಈ ಹಿಂದೆ ಕೊಲೆ ಆಗಿದ್ದನು. ಕೊಲೆ ಆಗುವ ಮೊದಲು ಮೋಹಿತ್ ಮೂಲಕ ಮೋಹನ್ ಗಾರ್ಡನ್‍ನಲ್ಲಿ ಆಸ್ತಿಗಾಗಿ 30 ಲಕ್ಷ ರೂ. ಇನ್‍ವೆಸ್ಟ್ ಮಾಡಿದ್ದನು. ಮಾಂಗು ಕೊಲೆ ಆದ ನಂತರ ಸಂದೀಪ್ ಹಣ ಕೇಳಿದ್ದಾಗ ಮೋಹಿತ್ ಕೊಡಲು ನಿರಾಕರಿಸಿದ್ದನು. ಬಳಿಕ ಸಂದೀಪ್ ಬಾಲಕನ ಮೂಲಕ ಮೋಹಿತ್ ಬಳಿ ಹಣ ಕೇಳಿದ್ದನು. ಆಗ ಮೋಹಿತ್ ಬಾಲಕನ ಮೇಲೆ ಹಲ್ಲೆ ಮಾಡಿದ್ದನು. ಆಗ ಸಂದೀಪ್ ಹಾಗೂ ಮೂವರು ಆರೋಪಿಗಳು ಮೋಹಿತ್‍ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು.

    ಕೊಲೆ ಮಾಡುವ ಮೊದಲು ಬಾಲಕ ಮೋಹಿತ್‍ನನ್ನು ಕರೆ ಮಾಡಿ ಎಲ್ಲಿದ್ದೀಯಾ ಎಂದು ಕೇಳಿದ್ದಾನೆ. ಆಗ ಮೋಹಿತ್ ಫೋಟೋಶಾಪ್‍ನಲ್ಲಿ ಇದ್ದೇನೆ ಎಂದು ಹೇಳಿದ್ದಾನೆ. ಬಳಿಕ ಆರೋಪಿಗಳು ಶಾಪ್‍ಗೆ ಹೋಗಿ ಮೋಹಿತ್‍ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ಸದ್ಯ ಪೊಲೀಸರು ಬಾಲಕನ ಬಳಿ ಇದ್ದ ಪಿಸ್ತೂಲ್ ಹಾಗೂ ಎರಡು ಜೀವಂತ ಕಾಟ್ರಿಡ್ಜ್ ವಶಕ್ಕೆ ಪಡೆದುಕೊಂಡಿದ್ದಾರೆ.

    ಮೃತ ಮೋಹಿತ್ ಮೋರ್ ಗೆ ಟಿಕ್‍ಟಾಕ್‍ನಲ್ಲಿ 5 ಲಕ್ಷ ಸಬ್‍ಸ್ಕ್ರೈಬರ್ ಇದ್ದು, ಇನ್‍ಸ್ಟಾಗ್ರಾಂನಲ್ಲಿ 3 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಮೋಹಿತ್ ತನ್ನ ಇನ್‍ಸ್ಟಾಗ್ರಾಂನಲ್ಲಿ ತನ್ನ ಫಿಟ್ನೆಸ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದನು.

  • ಟಿಕ್ ಟಾಕ್ ಮಾಡ್ತಿದ್ದಂತೆ ಮೆಟ್ಟಿಲಿನಿಂದ ಜಾರಿದ ಮಹಿಳೆ- ವಿಡಿಯೋ ನೋಡಿ

    ಟಿಕ್ ಟಾಕ್ ಮಾಡ್ತಿದ್ದಂತೆ ಮೆಟ್ಟಿಲಿನಿಂದ ಜಾರಿದ ಮಹಿಳೆ- ವಿಡಿಯೋ ನೋಡಿ

    ಹೈದರಾಬಾದ್: ಮಹಿಳೆಯೊಬ್ಬರು ತೆಲುಗು ಹಾಡಿಗೆ ಟಿಕ್‍ಟಾಕ್ ಮಾಡುತ್ತಿದ್ದಂತೆ ಮೆಟ್ಟಿಲಿನಿಂದ ಜಾರಿ ಬಿದ್ದ ಘಟನೆಯೊಂದು ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಮಹಳೆ ತೆಲುಗಿನ ‘ಡಿಕೆ ಬೋಸ್’ ಚಿತ್ರದ ‘ಪಡಿಪೋಯಾ’ ಹಾಡಿಗೆ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದಳು. ಮಹಿಳೆ ಹಾಡನ್ನು ಹಾಡುತ್ತಾ ಮೆಟ್ಟಿಲು ಹತ್ತಿಕೊಂಡು ಬಂದಳು. ಬಳಿಕ ಕೂರಲು ಹೋದಾಗ ಅಲ್ಲಿಂದ ಕೆಳಗೆ ಬಿದಿದ್ದಾಳೆ.

    ಮಹಿಳೆ ಟಿಕ್‍ಟಾಕ್ ವಿಡಿಯೋ ಮಾಡುವಾಗ ಮೆಟ್ಟಿಲು ನೋಡದೇ ಕ್ಯಾಮೆರಾಗೆ ಪೋಸ್ ನೀಡುತ್ತಾ ಬಂದಿದ್ದಾಳೆ. ಕೊನೆ ಮೆಟ್ಟಲು ಹತ್ತಿದ್ದ ನಂತರ ಆಕೆ ಅಲ್ಲಿ ಕೂರಲು ಹೋದಾಗ ಆಯತಪ್ಪಿ ತಪ್ಪಿ ಕೆಳಗೆ ಬಿದಿದ್ದಾಳೆ.

    ಇತ್ತೀಚೆಗೆ ಮುಂಬೈನಲ್ಲಿ ಓರ್ವ ಅಪ್ರಾಪ್ತ ಸೇರಿದಂತೆ ಇಬ್ಬರು ಯುವಕರು ಕೈಯಲ್ಲಿ ಲಾಂಗ್ ಹಿಡಿದು ನಟ ಸಂಜಯ್ ದತ್ ಸಿನಿಮಾದ `ಅಪುನ ಕೋ ಕೋಯಿ ಟಚ್ ನಹಿ ಕರ್ ಸಕತಾ’ (ನಮ್ಮನ್ನು ಯಾರು ಟಚ್ ಮಾಡಲು ಸಾಧ್ಯವಿಲ್ಲ) ಡೈಲಾಗ್‍ಗೆ ಟಿಕ್ ಟಾಕ್ ಮಾಡಿಕೊಂಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಟಿಕ್ ಟಾಕ್ ಮೇಲಿನ ಬ್ಯಾನ್ ತೆರವು – ಕೋರ್ಟ್ ವಿಚಾರಣೆಯಲ್ಲಿ ಇಂದು ಏನಾಯ್ತು?

    ಟಿಕ್ ಟಾಕ್ ಮೇಲಿನ ಬ್ಯಾನ್ ತೆರವು – ಕೋರ್ಟ್ ವಿಚಾರಣೆಯಲ್ಲಿ ಇಂದು ಏನಾಯ್ತು?

    ಚೆನ್ನೈ: ಚೀನಾ ಮೂಲದ ಬೈಟ್ ಡಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ಮೇಲೆ ಈ ಹಿಂದೆ ವಿಧಿಸಿದ್ದ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ತೆರವುಗೊಳಿಸಿದೆ.

    ಕಳೆದ ಏಪ್ರಿಲ್ 18 ರಿಂದ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್ ನಲ್ಲಿ ಟಿಕ್ ಟಾಕನ್ನು ತೆಗೆದು ಹಾಕಲಾಗಿತ್ತು. ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ಸೂಚನೆ ಮೇರೆಗೆ ಇಂದು ಮದ್ರಾಸ್ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ನ್ಯಾ.ಎಸ್‍ಎಸ್ ಸುಂದರ್ ಹಾಗೂ ನ್ಯಾ. ಎನ್ ಕಿರುಬಕರನ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಿತು.

    ಟಿಕ್‍ಟಾಕ್ ಪರವಾಗಿ ಹಿರಿಯ ವಕೀಲ ಐಸಾಕ್ ಮೋಹನ್‍ಲಾಲ್ ವಿಚಾರಣೆಗೆ ಹಾಜರಾಗಿ, ಅಶ್ಲೀಲ/ ನಗ್ನ ವಿಡಿಯೋಗಳನ್ನು ಅಪ್ಲೋಡ್ ಮಾಡದಂತೆ ಆಪ್‍ನಲ್ಲಿ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಈ ಹಿಂದಿನ ವಿಚಾರಣೆಯ ಸಮಯದಲ್ಲಿ ಕೋರ್ಟ್ ಎತ್ತಿದ ಆಕ್ಷೇಪಗಳಿಗೆ ಸಂಬಂಧಿಸಿದಂತೆ ನಾವು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

    ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದ ಅರವಿಂದ್ ದತಾರ್ ಅವರು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಆನ್‍ಲೈನ್ ಭಾಷಣಕ್ಕೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಸಂವಿಧಾನ ವಾಕ್ ಸ್ವಾತಂತ್ರ್ಯಕ್ಕೆ ಅನುಮತಿ ನೀಡಿದೆ. ನ್ಯಾಯಾಂಗದ ಮೂಲಕ ಬಳಕೆದಾರರ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಅಪ್ಲಿಕೇಶನ್ ನಿಷೇಧ ಮಾಡದೇ ಬಳಕೆದಾರರ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಉತ್ತಮ ಎಂದು ತನ್ನ ಅಭಿಪ್ರಾಯವನ್ನು ಮಂಡಿಸಿದರು.

    ಈ ವೇಳೆ ಅರ್ಜಿದಾರರು ಚೀನಾ ದೇಶದ ಅಪ್ಲಿಕೇಶನ್ ಇದಾಗಿದ್ದು, ಇದರಿಂದಾಗಿ ದೇಶದ ಭದ್ರತೆಗೆ ಅಪಾಯವಿದೆ ಎಂದು ಮತ್ತೊಂದು ಅಂಶವನ್ನು ಉಲ್ಲೇಖಿಸಿ ನಿಷೇಧವನ್ನು ತೆರವುಗೊಳಿಸಬಾರದು ಎಂದು ಮನವಿ ಮಾಡಿದರು.

    ಎರಡು ಕಡೆಯ ವಾದಗಳನ್ನು ಅಲಿಸಿದ ಕೋರ್ಟ್ ಗ್ರಾಹಕರಿಗೆ ರಕ್ಷಣೆ ನೀಡಬೇಕೆಂದು ಟಿಕ್ ಟಾಕ್ ಕಂಪನಿಗೆ ಸೂಚಿಸಿತು. ಅದರಲ್ಲೂ ಮಕ್ಕಳ ರಕ್ಷಣೆಗೆ ವಿಶೇಷ ಗಮನಹರಿಸಬೇಕೆಂದು ಹೇಳಿ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಇದನ್ನು ಓದಿ: ಟಿಕ್ ಟಾಕ್ ಬ್ಯಾನ್‍ನಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ನಷ್ಟ!

    ಏನಿದು ಪ್ರಕರಣ?
    ಟಿಕ್ ಟಾಕ್ ಆ್ಯಪ್ ಪೊರ್ನೋಗ್ರಫಿಗೆ ಕಾರಣವಾಗುತ್ತಿದೆ, ಮಕ್ಕಳನ್ನು ದುರುಪಯೋಗ ಪಡಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿ ಅರ್ಜಿದಾರರು ಆ್ಯಪ್ ನಿಷೇಧಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆಪ್ ನಿಷೇಧಿಸುವಂತೆ ಮಧ್ಯಂತರ ಆದೇಶ ಹೊರಡಿಸಿತ್ತು.

    ಈ ಆದೇಶಕ್ಕೆ ತಡೆ ನೀಡಬೇಕೆಂದು ಟಿಕ್‍ಟಾಕ್ ಕಂಪನಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆ ನೀಡದ ಕಾರಣ ಸರ್ಕಾರ ಈ ಆಪ್ ನಿಷೇಧಿಸುವಂತೆ ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಸೂಚಿಸಿತ್ತು.

    ಏ.22ರಂದು ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟಿಗೆ ಒಪ್ಪಿಸಿತ್ತು. ಈ ವೇಳೆ ಟಿಕ್ ಟಾಕ್ ಆ್ಯಪ್ ನಿಷೇಧ ಮಾಡುವಂತೆ ಸಲ್ಲಿಸಲಾಗಿರುವ ಅರ್ಜಿಯಲ್ಲಿರುವ ತಕಾರಾರುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಬೈಟ್ ಡ್ಯಾನ್ಸ್ ಸಂಸ್ಥೆ ಕೂಡ ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದು ವೇಳೆ ಏ.24ರಂದು ಈ ಕುರಿತು ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ವಿಫಲವಾದರೆ, ಆಗ ಆ್ಯಪ್ ಬ್ಯಾನ್ ಕುರಿತಂತೆ ನೀಡಿದ್ದ ಆದೇಶ ರದ್ದುಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.

  • ಟಿಕ್ ಟಾಕ್ ಬ್ಯಾನ್‍ನಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ನಷ್ಟ!

    ಟಿಕ್ ಟಾಕ್ ಬ್ಯಾನ್‍ನಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ನಷ್ಟ!

    ನವದೆಹಲಿ: ಭಾರತದಲ್ಲಿ ಚೀನಾ ಮೂಲದ ಬೈಟ್‍ಡ್ಯಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ನಿಷೇಧಿಸಲಾಗಿದ್ದು, ಇದರಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ರೂ. ನಷ್ಟವಾಗುತ್ತಿದೆ.

    ಟಿಕ್ ಟಾಕ್ ನಿಷೇಧ ಸಂಬಂಧ ಸುಪ್ರಿಂ ಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಈ ಕುರಿತು ವಾದ ಮಂಡಿಸಿರುವ ಬೈಟ್ ಡ್ಯಾನ್ಸ್ ಕಂಪನಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಆ್ಯಪ್ ನಿಷೇಧದ ಬಳಿಕ ಕೇವಲ ಬೈಟ್ ಡ್ಯಾನ್ಸ್ ಗೆ ಮಾತ್ರವಲ್ಲ, ಈ ಆ್ಯಪ್ ಬಳಕೆ ಮಾಡುತ್ತಿದ್ದ ಸುಮಾರು 20 ಲಕ್ಷ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಅಲ್ಲದೆ ಕಂಪನಿಯ 250ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಟಿಕ್‍ಟಾಕ್ ನಿಷೇಧ ಕುರಿತಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟಿಗೆ ಒಪ್ಪಿಸಿತ್ತು. ಈ ವೇಳೆ ಟಿಕ್ ಟಾಕ್ ಆ್ಯಪ್ ನಿಷೇಧ ಮಾಡುವಂತೆ ಸಲ್ಲಿಸಲಾಗಿರುವ ಅರ್ಜಿಯಲ್ಲಿರುವ ತಕಾರಾರುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಬೈಟ್ ಡ್ಯಾನ್ಸ್ ಸಂಸ್ಥೆ ಕೂಡ ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದು ವೇಳೆ ಏ.24ರಂದು ಈ ಕುರಿತು ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ವಿಫಲವಾದರೆ, ಆಗ ಆ್ಯಪ್ ಬ್ಯಾನ್ ಕುರಿತಂತೆ ನೀಡಿದ್ದ ಆದೇಶ ರದ್ದುಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

    ಭಾರತದಲ್ಲಿ 3 ಕೋಟಿ ಜನರು ಟಿಕ್‍ಟಾಕ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿದ್ದರೆ, ವಿಶ್ವದಲ್ಲಿ 100 ಕೋಟಿ ಮಂದಿ ಈ ಆ್ಯಪ್ ಡೌನ್‍ಲೋಡ್ ಮಾಡಿದ್ದಾರೆ. ವಿಡಿಯೋ ಪೇಜ್‍ನಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಟಿಕ್‍ಟಾಕ್ ಆದಾಯಗಳಿಸುತ್ತಿದೆ.

    ನಿಷೇಧ ಯಾಕೆ?
    ಈ ಅಪ್ಲಿಕೇಶನ್ ನಲ್ಲಿ ಜನ ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ ಈ ಆ್ಯಪನ್ನು ನಿಷೇಧಿಸಬೇಕೆಂದು ಅರ್ಜಿದಾರರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಮದ್ರಾಸ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆ್ಯಪ್ ನಿಷೇಧಿಸುವಂತೆ ಏ.3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಟಿಕ್ ಟಾಕ್ ಆ್ಯಪನ್ನು ಅಭಿವೃದ್ಧಿಪಡಿಸಿದ ಬೈಟ್‍ಡಾನ್ಸ್ ಟೆಕ್ನಾಲಜಿ ಈ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

    ಮದ್ರಾಸ್ ಹೈ ಕೋರ್ಟ್  ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಪ್ಲಿಕೇಶನ್ ಕಿತ್ತು ಹಾಕುವಂತೆ ಆಪಲ್ ಮತ್ತು ಗೂಗಲ್ ಕಂಪನಿಗಳಿಗೆ ಸೂಚಿಸಿತ್ತು. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಗೂಗಲ್ ಮತ್ತು ಆಪಲ್ ಕಂಪನಿ ಆ್ಯಪ್ ಸ್ಟೋರ್ ನಿಂದ ಟಿಕ್ ಟಾಕ್ ಕಿತ್ತು ಹಾಕಿತ್ತು.

  • ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ – ಗೂಗಲ್, ಆಪಲ್ ಕಂಪನಿಗಳಿಗೆ ಕೇಂದ್ರ ಸೂಚನೆ

    ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ – ಗೂಗಲ್, ಆಪಲ್ ಕಂಪನಿಗಳಿಗೆ ಕೇಂದ್ರ ಸೂಚನೆ

    ನವದೆಹಲಿ: ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಚೀನಾ ಮೂಲದ ಟಿಕ್ ಟಾಕ್ ಅನ್ನು ಆಪ್‍ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿ ಎಂದು ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದೆ.

    ಮದ್ರಾಸ್ ಹೈ ಕೋರ್ಟ್ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಸೂಚನೆ ನೀಡಿದೆ.

    ಈ ಅಪ್ಲಿಕೇಶನ್ ನಲ್ಲಿ ಜನ ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ ಈ ಆ್ಯಪನ್ನು ನಿಷೇಧಿಸಬೇಕೆಂದು ಅರ್ಜಿದಾರರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಮದ್ರಾಸ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆ್ಯಪ್ ನಿಷೇಧಿಸುವಂತೆ ಏ.3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು.

    ಟಿಕ್ ಟಾಕ್ ಆ್ಯಪನ್ನು ಅಭಿವೃದ್ಧಿಪಡಿಸಿದ ಬೈಟ್‍ಡಾನ್ಸ್ ಟೆಕ್ನಾಲಜಿ ಈ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ರಂಜನ್ ಗೊಗೋಯ್ ಮತ್ತು ನ್ಯಾ. ಸಂಜೀವ್ ಖನ್ನಾ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶಕ್ಕೆ ತಡೆ ನೀಡುವುದಿಲ್ಲ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು.

    ಸುಪ್ರೀಂ ಕೋರ್ಟ್ ಮದ್ರಾಸ್ ಹೈ ಕೋರ್ಟ್ ಆದೇಶಕ್ಕೆ ತಡೆ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಆ್ಯಪನ್ನು ಕಿತ್ತು ಹಾಕುವಂತೆ ಆಪಲ್ ಮತ್ತು ಗೂಗಲ್ ಕಂಪನಿಗಳಿಗೆ ಸೂಚಿಸಿದೆ. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಗೂಗಲ್ ಮತ್ತು ಆಪಲ್ ಕಂಪನಿ ಆ್ಯಪ್ ಸ್ಟೋರ್ ನಿಂದ ಟಿಕ್ ಟಾಕ್ ಕಿತ್ತು ಹಾಕಿದೆ.

    ಕಂಪನಿ ಸ್ಪಷ್ಟನೆ:
    ವಿವಾದ ಸಂಬಂಧ ಸ್ಪಷ್ಟನೆ ನೀಡಿರುವ ಬೈಟ್‍ಡಾನ್ಸ್ ಟೆಕ್ನಾಲಜಿ, ಟಿಕ್ ಟಾಕ್ ನಲ್ಲಿ ಶೇರ್ ಮಾಡಲಾಗುತ್ತಿರುವ ಜನರ ವಿಡಿಯೋಗಳಿಗೆ ಕಂಪನಿಯನ್ನು ಜವಾಬ್ದಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಭಾರತದ ಕಾನೂನಿನ ಮೇಲೆ ನಂಬಿಕೆ ಗೌರವವಿದ್ದು ಇಲ್ಲಿಯವರೆಗೆ ಸುಮಾರು 60 ಲಕ್ಷ ಆಕ್ಷೇಪಾರ್ಹ ವಿಡಿಯೋಗಳನ್ನು ಡಿಲೀಟ್ ಮಾಡಿದ್ದೇವೆ. ಈ ಸಂಬಂಧ ವಿಡಿಯೋಗಳ ಮೇಲೆ ಮತ್ತಷ್ಟು ನಿಗಾ ವಹಿಸುತ್ತೇವೆ ಎಂದು ತಿಳಿಸಿದೆ.

    ಆ್ಯಪ್ ವಿಶ್ಲೇಷಣಾ ಸಂಸ್ಥೆ ಸೆನ್ಸರ್ ಟವರ್ ಪ್ರಕಾರ ಭಾರತದಲ್ಲಿ 24 ಕೋಟಿಗೂ ಹೆಚ್ಚು ಟಿಕ್ ಟಾಕ್ ಅಪ್ಲಿಕೇಶನ್ ಡೌನ್‍ಲೋಡ್ ಆಗಿದೆ. 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಟಿಕ್ ಟಾಕ್ ಬಿಡುಗಡೆಯಾಗಿತ್ತು.

    ಟಿಕ್ ಟಾಕ್‍ನಂತಹ ಆ್ಯಪ್ ಯುವಜನತೆಯ ಭವಿಷ್ಯ ಹಾಗೂ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ. ಈ ಕುರಿತು ಮದ್ರಾಸ್ ಹೈ ಕೋರ್ಟ್ ನ  ನ್ಯಾ. ಎನ್ ಕಿರುಬಕರನ್ ಹಾಗೂ ನ್ಯಾ. ಎಸ್ ಸುಂದರ್ ಅವರಿದ್ದ ದ್ವಿಸದಸ್ಯ ಪೀಠ ಟಿಕ್ ಟಾಕ್ ವಿಡಿಯೋಗಳನ್ನು ಪ್ರಸಾರ ಮಾಡುವ ಮಾಧ್ಯಮಗಳನ್ನು ನಿಷೇಧಿಸುವಂತೆ ಆದೇಶಿಸಿದ್ದರು. ಮಕ್ಕಳು ಸೈಬರ್ ಸಂತ್ರಸ್ತ್ರರಾಗುವುದನ್ನು ತಪ್ಪಿಸಲು ಅಮೆರಿಕ ಸರ್ಕಾರ ಮಕ್ಕಳ ಆನ್‍ಲೈನ್ ಗೌಪ್ಯತೆ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಇದೇ ರೀತಿಯಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿತ್ತು.

    ಫೆಬ್ರವರಿಯಲ್ಲಿ ತಮಿಳುನಾಡು ವಿಧಾನಸಭಾ ಅಧಿವೇಶನದಲ್ಲಿ ನಾಗಪಟ್ಟಣದ ಶಾಸಕ ತಮೀಮ್ ಅನ್ಸಾರಿ ಈ ಅಪ್ಲಿಕೇಶನ್ ಅನ್ನು ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಅಪ್ಲಿಕೇಶನ್ ನಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸದನಕ್ಕೆ ತಿಳಿಸಿದ್ದರು.

  • ಟಿಕ್‍ಟಾಕ್ ಮಾಡಲು ಹೋಗಿ ಗೆಳೆಯನಿಗೆ ಶೂಟ್

    ಟಿಕ್‍ಟಾಕ್ ಮಾಡಲು ಹೋಗಿ ಗೆಳೆಯನಿಗೆ ಶೂಟ್

    ಸಲ್ಮಾನ್

    ನವದೆಹಲಿ: ಟಿಕ್‍ಟಾಕ್ ಮಾಡಲು ಹೋಗಿ ಸ್ನೇಹಿತನೊಬ್ಬ ತನ್ನ 19 ವರ್ಷದ ಗೆಳೆಯನಿಗೆ ಶೂಟ್ ಮಾಡಿದ್ದು, ಪರಿಣಾಮ ಯುವಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

    ಸಲ್ಮಾನ್(19) ಮೃತ ದುರ್ದೈವಿ. ಕೇಂದ್ರ ದೆಹಲಿಯ ಬಾರಾಖಂಬಾ ರಸ್ತೆಯಲ್ಲಿರುವ ರಂಜಿತ್ ಸಿಂಗ್ ಫ್ಲೈಓವರ್ ಬಳಿ ಈ ಘಟನೆ ಸಂಭವಿಸಿದೆ. ಟಿಕ್‍ಟಾಕ್ ವಿಡಿಯೋ ಮಾಡಲು ಪಿಸ್ತೂಲ್‍ನಿಂದ ಶೂಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ವಿವರ?
    ಭಾನುವಾರ ರಾತ್ರಿ ಸಲ್ಮಾನ್ ತಮ್ಮ ಸ್ನೇಹಿತರಾದ ಸೊಹೈಲ್ ಮತ್ತು ಅಮೀರ್ ಅವರೊಂದಿಗೆ ಭಾರತ ಗೇಟ್ ಬಳಿ ಕಾರಿನಲ್ಲಿ ಹೋಗಿದ್ದಾರೆ. ಅಲ್ಲಿಂದ ಹಿಂದಿರುಗುತ್ತಿದ್ದಾಗ ಸೊಹೈಲ್, ಸಲ್ಮಾನ್ ಪಕ್ಕ ಕುಳಿತುಕೊಂಡಿದ್ದನು. ಸಲ್ಮಾನ್ ಕಾರು ಓಡಿಸುತ್ತಿದ್ದನು. ನಂತರ ಸೊಹೈಲ್ ಪಿಸ್ತೂಲ್ ಹೊರತೆಗೆದು ಮೊಬೈಲ್‍ನಲ್ಲಿ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದನು. ಆಗ ಸೊಹೈಲ್ ಪಿಸ್ತೂಲ್‍ನನ್ನು ಸಲ್ಮಾನ್‍ಗೆ ಗುರಿಯಾಗಿಟ್ಟುಕೊಂಡಿದ್ದನು. ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಸಲ್ಮಾನ್ ಎಡ ಕೆನ್ನೆಯ ಮೇಲೆ ಗುಂಡು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯ ನಂತರ ಇಬ್ಬರು ಸ್ನೇಹಿತರು ಭಯಭೀತರಾಗಿದ್ದು, ಡ್ಯಾರಿಯಾಗನ್ಜ್ ನಲ್ಲಿದ್ದ ಸೊಹೈಲ್ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಅಲ್ಲಿ ತಮ್ಮ ರಕ್ತಮಯವಾದ ಬಟ್ಟೆಗಳನ್ನು ಬದಲಾಯಿಸಿಕೊಂಡಿದ್ದಾರೆ. ನಂತರ ಸಂಬಂಧಿಯ ಜೊತೆಗೆ ಸಲ್ಮಾನ್‍ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಸಲ್ಮಾನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

    ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಬಂದು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಅಮೀರ್, ಸೊಹೈಲ್ ಮತ್ತು ಇನ್ನೊಬ್ಬ ಶರೀಫ್ ಮೂವರನ್ನು ಬಂಧಿಸಲಾಗಿದೆ. ಸದ್ಯಕ್ಕೆ ಸಲ್ಮಾನ್ ದೇಹವನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಗುಂಡು ಆಕಸ್ಮಿಕವಾಗಿ ಹಾರಿತೆ ಅಥವಾ ಕೊಲ್ಲುವ ಉದ್ದೇಶದಿಂದ ಶೂಟ್ ಮಾಡಲಾಗಿದೆಯೇ ಎಂದು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಲ್ಮಾನ್ ಜೊತೆ ಇಬ್ಬರು ಸ್ನೇಹಿತರು ಭಾನುವಾರ ರಾತ್ರಿ ಇಂಡಿಯಾ ಗೇಟ್‍ಗೆ ಹೋಗಬೇಕೆಂದು ಕಾರನ್ನು ತೆಗೆದುಕೊಂಡು ಹೋಗಿದ್ದರು ಎಂದು ಸಲ್ಮಾನ್ ಸಂಬಂಧಿ ತಿಳಿಸಿದ್ದಾರೆ. ಮೃತ ಸಲ್ಮಾನ್ ಒಬ್ಬ ಪದವಿ ವಿದ್ಯಾರ್ಥಿಯಾಗಿದ್ದು, ಈತನಿಗೆ ಸೋದರ ಮತ್ತು ಸಹೋದರಿ ಇದ್ದಾರೆ. ನ್ಯೂ ಜಾಫ್ರಾಬಾದ್ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಈತನ ತಂದೆ ವ್ಯವಹಾರ ನಡೆಸುತ್ತಿದ್ದು, ತಂದೆಗೆ ಸಹಾಯ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.