Tag: Tiktok video

  • ಟಿಕ್‍ಟಾಕ್ ಅವಾಂತರ- ಜೀವಂತ ಮೀನು ನುಂಗಿ ಯುವಕ ದುರ್ಮರಣ

    ಟಿಕ್‍ಟಾಕ್ ಅವಾಂತರ- ಜೀವಂತ ಮೀನು ನುಂಗಿ ಯುವಕ ದುರ್ಮರಣ

    – ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋದಾಗ ಘಟನೆ
    – ಉಸಿರಾಡಲು ಆಗದೇ ಯುವಕ ಒದ್ದಾಟ

    ಚೆನ್ನೈ: ಟಿಕ್‍ಟಾಕ್ ವಿಡಿಯೋ ಮಾಡಲು ಜೀವಂತ ಮೀನು ನುಂಗಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ನಡೆದಿದೆ.

    ಹೊಸೂರಿನ ಪಾರ್ವತಿ ನಗರದ ನಿವಾಸಿ ವೆಟ್ರಿವೆಲ್ (22) ಮೃತ ಯುವಕ. ಮೃತ ವೆಟ್ರಿವೆಲ್ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ವೆಟ್ರಿವೆಲ್ ತನ್ನ ಇಬ್ಬರು ಸ್ನೇಹಿತರ ಜೊತೆ ಥರ್ಪೆಟ್ಟೈ ಪ್ರದೇಶದ ಕೆರೆಗೆ ಮೀನು ಹಿಡಿಯಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ವೆಟ್ರಿವೆಲ್ ಮತ್ತು ಆತನ ಇಬ್ಬರು ಸ್ನೇಹಿತರು ಮದ್ಯಪಾನ ಮಾಡಿದ್ದರು. ಈ ವೇಳೆ ವೆಟ್ರಿವೆಲ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಟಿಕ್‍ಟಾಕ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದನು. ಆಗ ಜೀವಂತ ಮೀನನ್ನು ನುಂಗಿದ್ದಾನೆ. ಆದರೆ ಮೀನು ವೆಟ್ರಿವೆಲ್‍ನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಮೀನು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ವೆಟ್ರಿವೆಲ್ ಉಸಿರಾಡಲು ಸಾಧ್ಯವಾಗದೇ ಒದ್ದಾಡಿದ್ದಾನೆ ಎಂದು ಹೊಸೂರು ಪಟ್ಟಣ ಪೊಲೀಸ್ ಠಾಣಾ ಅಧಿಕಾರಿ ಹೇಳಿದ್ದಾರೆ.

    ಈ ವೇಳೆ ಸ್ನೇಹಿತರು ವೆಟ್ರಿವೆಲ್ ಗಂಟಲಿನಲ್ಲಿ ಸಿಲುಕಿದ್ದ ಮೀನು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ, ಕೊನೆಗೆ ಕೂಡಲೇ ಆತನನ್ನು ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಸತ್ತ ಮೀನನ್ನು ಆತನ ಗಂಟಲಿನಿಂದ ಹೊರತೆಗೆಯಲಾಗಿದೆ.

    ಟಿಕ್‍ಟಾಕ್ ವಿಡಿಯೋ ಮಾಡಲು ವೆಟ್ರಿವೆಲ್ ಜೀವಂತ ಮೀನು ನುಂಗಿದ್ದನು. ಹೀಗಾಗಿ ಈ ಬಗ್ಗೆ ಮೃತನ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ಟಿಕ್‍ಟಾಕ್ ವಿಡಿಯೋಗಾಗಿ ಪ್ರಯಾಣಿಕರ ಪ್ರಾಣದ ಜತೆ ಆಟವಾಡಿದ ಬಸ್ ಚಾಲಕ ಸಸ್ಪೆಂಡ್

    ಟಿಕ್‍ಟಾಕ್ ವಿಡಿಯೋಗಾಗಿ ಪ್ರಯಾಣಿಕರ ಪ್ರಾಣದ ಜತೆ ಆಟವಾಡಿದ ಬಸ್ ಚಾಲಕ ಸಸ್ಪೆಂಡ್

    ಚಂಡೀಗಢ: ಬಸ್ ಚಾಲನೆ ಮಾಡುತ್ತಲೇ ಟಿಕ್‍ಟಾಕ್ ವಿಡಿಯೋ ಮಾಡಿಕೊಂಡಿದ್ದ ಚಾಲಕನನ್ನು ಕೆಲಸದಿಂದ ಅಮಾನತುಗೊಳಿಸಿದ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಅಮನ್ ಜೋತ್ ಬ್ರಾರ್ ಅಮಾನತುಗೊಂಡ ಚಾಲಕ. ಅಮನ್ ಜೋತ್ ಬ್ರಾರ್ ಪಂಜಾಬ್ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜಲಂಧರ್ ನಿಂದ ದೆಹಲಿಗೆ ಜುಲೈ 7ರಂದು ತೆರಳುತ್ತಿದ್ದಾಗ ಟಿಕ್‍ಟಾಕ್ ವಿಡಿಯೋ ಹುಚ್ಚಿಗೆ ಬಿದ್ದು ಕೆಲಸ ಕಳೆದುಕೊಂಡಿದ್ದಾನೆ.

    ಆಗಿದ್ದೇನು?:
    ಚಾಲಕ ಅಮನ್ ಜೋತ್ ಬ್ರಾರ್ ಜಲಂಧರ್ ನಿಂದ ದೆಹಲಿಗೆ ಪ್ರಯಾಣಿಕರಿದ್ದ ಬಸ್ ಚಾಲನೆ ಮಾಡುತ್ತಿದ್ದ. ಈ ವೇಳೆ ನಿದ್ದೆ ಮಾಡದಂತೆ ಎಚ್ಚರವಹಿಸಲು ಪ್ಲೇಯರ್ ನಲ್ಲಿ ಹಾಡುಗಳನ್ನು ಹಾಕಿಕೊಂಡು ತಾನೂ ಹಾಡುತ್ತಾ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ. ಟಿಕ್‍ಟಾಕ್ ಸಾಮಾಜಿಕ ಜಾಲತಾಣದ ಬಗ್ಗೆ ನೆನಪಾಗಿ, ಬಸ್ ಚಾಲನೆ ಮಾಡುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಅದನ್ನು ಟಿಕ್‍ಟಾಕ್‍ನಲ್ಲಿ ಅಪ್ಲೋಡ್ ಮಾಡಿ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದ.

    ಅಮನ್ ಜೋತ್ ಬ್ರಾರ್ ವಿಡಿಯೋಗೆ ಅಷ್ಟಾಗಿ ಲೈಕ್, ಕಮೆಂಟ್ಸ್ ಸಿಕ್ಕಿಲ್ಲ. ಆದರೆ ದುರದೃಷ್ಟಕ್ಕೆ ವಿಡಿಯೋವನ್ನು ಪಂಜಾಬ್ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ನೋಡಿದ್ದಾರೆ. ಪರಿಣಾಮ ಚಾಲಕನ ಮೇಲೆ ಕಿಡಿಕಾರಿದ ಅಧಿಕಾರಿಗಳು, ಬಸ್ ಚಾಲನೆ ಮಾಡುತ್ತಲೇ ಅಮನ್ ಜೋತ್ ಬ್ರಾರ್ ಟಿಕ್‍ಟಾಕ್ ವಿಡಿಯೋ ಮಾಡಿಕೊಂಡಿದ್ದಾನೆ. ಈ ಮೂಲಕ ಪ್ರಯಾಣಿಕರ ಪ್ರಾಣದ ಜೊತೆಗೆ ಆಟವಾಡಿದ್ದಾನೆ ಎಂದು ಆರೋಪಿಸಿ ಕೆಲಸದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ಅಮನ್ ಜೋತ್ ಬ್ರಾರ್ ನನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.