Tag: Tiktok Star

  • ಬೆಂಕಿ ನಂದಿಸುವುದು ಬಿಟ್ಟು ಪೋಸ್ ನೀಡಿದ ಟಿಕ್‍ಟಾಕ್ ಸ್ಟಾರ್- ನೆಟ್ಟಿಗರಿಂದ ಟೀಕೆ

    ಬೆಂಕಿ ನಂದಿಸುವುದು ಬಿಟ್ಟು ಪೋಸ್ ನೀಡಿದ ಟಿಕ್‍ಟಾಕ್ ಸ್ಟಾರ್- ನೆಟ್ಟಿಗರಿಂದ ಟೀಕೆ

    ಇಸ್ಲಾಮಾಬಾದ್: ಕಾಡ್ಗಿಚ್ಚಿಗೆ ಪಾಕಿಸ್ತಾನದ ಟಿಕ್‍ಟಾಕ್ ಸ್ಟಾರ್ ಪೋಸ್ ನೀಡಿ ವೀಡಿಯೋ ಮಾಡಿದ್ದಾರೆ. ಆದರೆ ಇದೀಗ ಈ ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

    ಹುಮೈರಾ ಅಸ್ಗರ್ ಪಾಕಿಸ್ತಾನದ ಟಿಕ್‍ಟಾಕ್ ಸ್ಟಾರ್. ಅವರು ಪೋಸ್ಟ್ ಮಾಡಿದ ವೀಡಿಯೋದಲ್ಲಿ ನಾನು ಎಲ್ಲಿದ್ದರೂ ಬೆಂಕಿ ಸ್ಫೋಟಗೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಬೆಂಕಿಯಿಂದ ಉರಿಯುತ್ತಿರುವ ಬೆಟ್ಟದ ಮುಂದೆ ಬಿಳಿ ಬಣ್ಣದ ಗೌನ್‍ನಲ್ಲಿ ನಡೆದುಕೊಂಡು ಬರುತ್ತಿದ್ದಾರೆ.

    ಈ ವೀಡಿಯೋ ಇದೀಗ ಭಾರೀ ಟೀಕೆ ವ್ಯಕ್ತವಾಗಿದ್ದರಿಂದ ಹುಮೈರಾ ತನ್ನ ತಂಡವು ಬಿಡುಗಡೆ ಮಾಡಿದ ವೀಡಿಯೋದಲ್ಲಿರುವ ಬೆಂಕಿಯಲ್ಲಿ ತಾವು ಹಚ್ಚಿಲ್ಲ. ಜೊತೆಗೆ ವೀಡಿಯೋ ಮಾಡುವುದರಿಂದ ಯಾವುದೇ ಹಾನಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರು ಪೊಲೀಸರ ವಶಕ್ಕೆ

    ಆದರೂ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಇವರು ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆ ವೀಡಿಯೋವನ್ನು ತೆಗೆದು ಹಾಕಿದ್ದಾರೆ. ಈ ವೀಡಿಯೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದ್ದು, ಇದು ಕ್ರಿಮಿನಲ್ ನಡುವಳಿಕೆ ಎಂದು ಬರೆದಿದ್ದಾರೆ.

    ಮತ್ತೊಬ್ಬರು ಕಾಮೆಂಟ್ ಮಾಡಿ, ಅಧಿಕಾರಿಗಳು ಏನನ್ನೂ ಮಾಡದಿದ್ದರೆ, ಅವರನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್‍ಗಳಲ್ಲಿ ನಿಬರ್ಂಧಿಸಬಹುದು ಎಂದು ಹಲವಾರು ಬಳಕೆದಾರರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಪ್ಪಿನ ಕಾರ್ಖಾನೆಯಲ್ಲಿ ಗೋಡೆ ಕುಸಿತ- 12 ಕಾರ್ಮಿಕರ ದುರ್ಮರಣ

    ಬೆಂಕಿಯನ್ನು ನಂದಿಸಲು ಪ್ರಯತ್ನಿಸಬೇಕೆ ಹೊರತು, ಗ್ಲಾಮರ್ ಆಗಿ ನಡೆದುಕೊಂಡು ಬರುವುದಲ್ಲ ಎಂದು ಪರಿಸರ ಕಾರ್ಯಕರ್ತೆ ಮತ್ತು ಇಸ್ಲಾಮಾಬಾದ್ ವನ್ಯಜೀವಿ ನಿರ್ವಹಣಾ ಮಂಡಳಿಯ ಅಧ್ಯಕ್ಷೆ ರಿನಾ ಸಯೀದ್ ಖಾನ್ ಸತ್ತಿ ಕಿಡಿಕಾರಿದರು.

  • ಕಾರು ಅಪಘಾತದಲ್ಲಿ ಜನಪ್ರಿಯ ಟಿಕ್‍ಟಾಕ್ ಸ್ಟಾರ್ ದುರ್ಮರಣ

    ಕಾರು ಅಪಘಾತದಲ್ಲಿ ಜನಪ್ರಿಯ ಟಿಕ್‍ಟಾಕ್ ಸ್ಟಾರ್ ದುರ್ಮರಣ

    – ಇನ್‍ಸ್ಟಾಗ್ರಾಂನಲ್ಲಿ 4.32 ಲಕ್ಷ ಫಾಲೋವರ್ಸ್
    – ಸಂತಾಪ ಸೂಚಿಸಿದ ಸ್ನೇಹಿತರು

    ನವದೆಹಲಿ: ಜನಪ್ರಿಯ ಟಿಕ್‍ಟಾಕ್ ಸ್ಟಾರ್ ಪ್ರತೀಕ್ ಖಾತ್ರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಪ್ರತೀಕ್ ಖಾತ್ರಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೃತ ಪ್ರತೀಕ್ ಟಿಕ್‍ಟಾಕ್ ಮತ್ತು ಇತರ ಹಲವಾರು ಪ್ಲಾಟ್‍ಫಾರ್ಮ್ ಗಳಲ್ಲಿ ತಮ್ಮ ವೀಡಿಯೋಗಳ  ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ. ಹೀಗಾಗಿ ಪ್ರತೀಕ್ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ್ದರು. ತಮ್ಮ ಇನ್ಸ್ಟಾಗ್ರಾಮ್‍ನಲ್ಲಿ ಸುಮಾರು 4,32,000 ಪಾಲೋವರ್ಸ್ ಹೊಂದಿದ್ದರು.

    ಪ್ರತೀಕ್ ಸಾವಿಗೆ ಅನೇಕ ಟಿಕ್‍ಟಾಕ್ ಸ್ಟಾರ್‌ಗಳು ಸಂತಾಪ ಸೂಚಿಸಿದ್ದಾರೆ. ಪ್ರತೀಕ್ ಖಾತ್ರಿ ಸ್ನೇಹಿತೆ ಆಶಿಕಾ ಭಾಟಿಯಾ ಮತ್ತು ಭಾವಿಕಾ ಕೂಡ ವಿಡಿಯೋಗಳು ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇವರಿಬ್ಬರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅವರೊಂದಿಗಿರುವ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.

    ಆಶಿಕಾ ಭಾಟಿಯಾ, “ಪ್ರತೀಕ್ ಸಾವಿನ ಸುದ್ದಿಯನ್ನು ನಂಬುವುದು ಕಷ್ಟವಾಗಿದೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಟಿಕ್‍ಟಾಕ್ ಖ್ಯಾತಿಯ ಅಮೀರ್ ಸಿದ್ದಿಕಿ ಕೂಡ ಪ್ರತೀಕ್ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

    https://www.instagram.com/p/CGCDCLrnjlV/?utm_source=ig_embed

    “ಪ್ರತಿದಿನ ಎಚ್ಚರಗೊಳ್ಳುವುದು ಮತ್ತು ಕೆಲವು ದುಃಖದ ಸುದ್ದಿಗಳನ್ನು ನೋಡುವುದು ನಿಜಕ್ಕೂ ನೋವಾಗುತ್ತದೆ. ನನ್ನ ಸ್ನೇಹಿತ ಪ್ರತೀಕ್ ಖಾತ್ರಿ ನಿಧನದ ಸುದ್ದಿಯಿಂದ ನನಗೆ ಆಘಾತವಾಯಿತು. ಅಲ್ಲದೇ ಈ ಜೀವನದಲ್ಲಿ ಅನಿರೀಕ್ಷಿತವಾಗಿ ಏನೆಲ್ಲಾ ನಡೆಯುತ್ತದೆ. ಹೀಗಾಗಿ ಯಾವಾಗಲೂ ಎಚ್ಚರಿಕೆಯಿಂದ ಚಾಲನೆ ಮಾಡಿ. ಯಾಕೆಂದರೆ ನಿಮ್ಮವರಿಗಾಗಿ ನೀವು ಸುರಕ್ಷಿತವಾಗಿರಿ” ಎಂದು ನೋವಿನಿಂದ ಮನವಿ ಮಾಡಿಕೊಂಡಿದ್ದಾರೆ.

    https://www.instagram.com/p/CGB_kEeFR9A/?utm_source=ig_embed

  • ರಕ್ಷಾ ಬಂಧನದ ಹಾಡಿನ ಮೂಲಕ ಖ್ಯಾತಿ – ರಾಖಿ ಹಬ್ಬಕ್ಕೂ ಮುನ್ನ ಟಿಕ್‍ಟಾಕ್ ಸಿಂಗರ್ ಆತ್ಮಹತ್ಯೆ

    ರಕ್ಷಾ ಬಂಧನದ ಹಾಡಿನ ಮೂಲಕ ಖ್ಯಾತಿ – ರಾಖಿ ಹಬ್ಬಕ್ಕೂ ಮುನ್ನ ಟಿಕ್‍ಟಾಕ್ ಸಿಂಗರ್ ಆತ್ಮಹತ್ಯೆ

    ಹೈದರಾಬಾದ್: ಟಿಕ್‍ಟಾಕ್ ಮೂಲಕ ಖ್ಯಾತಿ ಪಡೆದುಕೊಂಡಿದ್ದ ಗಾಯಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಗಂಗಾಪುರ ಗ್ರಾಮದ ನಿವಾಸಿ ರಾಜು ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಯುವಕ ಗಡ್ಡಮ್ ರಾಜು ಎಂದೇ ಖ್ಯಾತಿ ಪಡೆದುಕೊಂಡಿದ್ದನು. ಆದರೆ ಇಂದು ಬೆಳಗ್ಗೆ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

    ಮೃತ ರಾಜು ಟಿಕ್‍ಟಾಕ್‍ನಲ್ಲಿ ರಕ್ಷಾ ಬಂಧನದ ಹಬ್ಬಕ್ಕೆ ಸಂಬಂಧಿಸಿದ ಹಾಡಿನ ಮೂಲಕ ಗುರುತಿಸಿಕೊಂಡಿದ್ದನು. ನಂತರ ಟಿಕ್‍ಟಾಕ್‍ನಲ್ಲಿ ಅನೇಕ ಹಾಡುಗಳನ್ನು ಹಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದುಕೊಂಡಿದ್ದನು. ಆದರೆ ದುರದೃಷ್ಟಕರ ಸಂಗತಿ ಎಂದರೆ ರಾಜು ರಕ್ಷಾ ಬಂಧನದ ಹಬ್ಬಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಳೆ ಅಂದರೆ ಸೋಮವಾರ ರಾಖಿ ಹಬ್ಬವಿದೆ.

    ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ರಾಜು ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಮಗನನ್ನು ಕಳೆದುಕೊಂಡು ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.

    ಸದ್ಯಕ್ಕೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ರಾಜು ಕುಟುಂವದವರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಖಿನ್ನತೆಯಿಂದ 18 ವರ್ಷದ ಟಿಕ್‍ಟಾಕ್ ಸ್ಟಾರ್ ಆತ್ಮಹತ್ಯೆ

    ಖಿನ್ನತೆಯಿಂದ 18 ವರ್ಷದ ಟಿಕ್‍ಟಾಕ್ ಸ್ಟಾರ್ ಆತ್ಮಹತ್ಯೆ

    ನವದೆಹಲಿ: ಇತ್ತೀಚೆಗಷ್ಟೇ ಟಿಕ್‍ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆ ಮಾಡಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಟಿಕ್‍ಟಾಕ್ ಸ್ಟಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಎರಡು ದಿನಗಳ ಹಿಂದೆ ದೆಹಲಿಯಲ್ಲಿ 18 ವರ್ಷದ ಟಿಕ್‍ಟಾಕ್ ಸ್ಟಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ದೆಹಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು, ಟಿಕ್‍ಟಾಕ್ ಮೂಲಕ ಖ್ಯಾತಿ ಪಡೆದುಕೊಂಡಿದ್ದಳು. 18 ವರ್ಷದ ಹುಡುಗಿ ಟಿಕ್‍ಟಾಕ್ ವಿಡಿಯೋ ಮೂಲಕ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಳು.

    ಕೆಲವು ದಿನಗಳಿಂದ ಹುಡುಗಿ ಖಿನ್ನತೆಗೆ ಒಳಗಾಗಿದ್ದಳು ಎಂದು ವರದಿಯಾಗಿದೆ. ಆದರೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಕೆಲವು ತಿಂಗಳುಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಳು. ಟಿಕ್‍ಟಾಕ್ ಬ್ಯಾನ್ ಆಗಿರುವುದರಿಂದ ಮತ್ತಷ್ಟು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹುಡುಗಿಯ ಕುಟುಂಬವದರು ಮತ್ತು ಸ್ನೇಹಿತರು ತಿಳಿಸಿದ್ದಾರೆ.

    ಇತ್ತೀಚೆಗೆ ಟಿಕ್‍ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 16 ವರ್ಷದ ಸಿಯಾ ಟಿಕ್‍ಟಾಕ್ ವಿಡಿಯೋಗಳ ಮೂಲಕವೇ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದರು. ತಮ್ಮ ಡ್ಯಾನ್ಸ್, ಡಬ್ಬಿಂಗ್ ಮೂಲಕವೇ ಜನರಿಗೆ ಚಿರಪರಿಚಿತರಾಗಿದ್ದರು.

    ಕಳೆದ ತಿಂಗಳು ಟಿಕ್‍ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾದ ಒಟ್ಟು 59 ಮೊಬೈಲ್ ಆ್ಯಪ್ ಗಳನ್ನು ಸರ್ಕಾರ ಬ್ಯಾನ್ ಮಾಡಿದೆ.

  • ಟಿಕ್‍ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆಗೆ ಶರಣು

    ಟಿಕ್‍ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆಗೆ ಶರಣು

    ಮುಂಬೈ: ಟಿಕ್‍ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 16 ವರ್ಷದ ಸಿಯಾ ಟಿಕ್‍ಟಾಕ್ ವಿಡಿಯೋಗಳ ಮೂಲಕವೇ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದರು. ತಮ್ಮ ಡ್ಯಾನ್ಸ್, ಡಬ್ಬಿಂಗ್ ಮೂಲಕವೇ ಜನರಿಗೆ ಚಿರಪರಿಚಿತರಾಗಿದ್ದರು.

    ಈ ಕುರಿತು ಪೋಸ್ಟ್ ಮಾಡಿರುವ ವಿರಲ್ ಬಯಾನಿ, ಬುಧವಾರ ಸಂಜೆಯವರೆಗೂ ಆಕೆ ಚೆನ್ನಾಗಿದ್ದಳು. ಸಿಯಾ ಮ್ಯಾನೇಜರ್ ಅರ್ಜುನ್ ಸರಿನ್ ಜೊತೆ ಹಾಡಿನ ಬಗ್ಗೆ ಮಾತುಕತೆ ಆಗಿತ್ತು. ಆದ್ರೆ ಸಿಯಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೊತೆಯಲ್ಲಿಯೇ ಇರುತ್ತಿದ್ದ ಮ್ಯಾನೇಜರ್ ಅರ್ಜುನ್ ಗೂ ಈ ಬಗ್ಗೆ ಸುಳಿವು ಸಿಕ್ಕಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CBnKWPnpBe3/

    ಏಪ್ರಿಲ್ ನಿಂದ ಸಿನಿಮಾ ಇಂಡಸ್ಟ್ರಿ ಸಾಲು ಸಾಲು ಪ್ರತಿಭೆಗಳನ್ನು ಕಳೆದುಕೊಳ್ಳುತ್ತಿದೆ. ಇರ್ಫಾನ್ ಖಾನ್, ರಿಷಿ ಕಪೂರ್, ವಾಜಿದ್ ಖಾನ್, ಮೆಬಿನಾ ಮೈಕಲ್, ಸುಶಾಂತ್ ಸಿಂಗ್ ರಜಪೂತ್, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ಕಲಾವಿದರನ್ನು ಸಿನಿಮಾ ರಂಗ ಕಳೆದುಕೊಂಡಿದೆ.

    https://www.instagram.com/p/CAF5UcAJHGn/

  • ಟಿಕ್-ಟಾಕ್ ಸ್ಟಾರ್‌ಗೆ ಸಿಕ್ತು ಬಿಜೆಪಿ ಟಿಕೆಟ್

    ಟಿಕ್-ಟಾಕ್ ಸ್ಟಾರ್‌ಗೆ ಸಿಕ್ತು ಬಿಜೆಪಿ ಟಿಕೆಟ್

    ಚಂಡೀಗಢ: ಜನಪ್ರಿಯ ಟಿಕ್-ಟಾಕ್ ಸ್ಟಾರ್ ಸೋನಾಲಿ ಪೋಗಟ್ ಅವರಿಗೆ ಬಿಜೆಪಿಯು ಹರ್ಯಾಣ ವಿಧಾನಸಭಾ ಚುನಾವಣೆ ಟಿಕೆಟ್ ನೀಡಿದೆ.

    ಈ ಮೂಲಕ ಸೋನಾಲಿ ಪೋಗಟ್ ಕಾಂಗ್ರೆಸ್ ಪ್ರಾಬಲ್ಯದ ಆದಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಸೋನಾಲಿ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ, ವಿಡಿಯೋವನ್ನು ಟಿಕ್-ಟಾಕ್‍ನಲ್ಲಿ ಪೋಸ್ಟ್ ಮಾಡುತ್ತಾ ಬಂದಿದ್ದಾರೆ. ಈ ಮೂಲಕ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಸೋನಾಲಿ ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    https://twitter.com/jyotiyadaav/status/1179684177609777153

    ಕಾಂಗ್ರೆಸ್ ಭದ್ರಕೋಟೆ ಭೇದಿಸಲು ಬಿಜೆಪಿಯು ಸೋನಾಲಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದೆ. ಇದನ್ನು ಎದುರಿಸಲು ‘ಕೈ’ ಪಡೆ ಭರ್ಜರಿ ಪ್ರಚಾರಕ್ಕೆ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

    ಆದಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ 1969ರಿಂದಲೂ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. 1969 ರಿಂದ ಕಾಂಗ್ರೆಸ್ ಮುಖಂಡ ಭಜನ್ ಲಾಲ್ ಎಂಟು ಬಾರಿ ಗೆಲುಸು ಸಾಧಿಸಿದ್ದರು. ನಂತರ ಭಜನ್ ಲಾಲ್ ಪತ್ನಿ ಜಸ್ಮಾ ದೇವಿ ಹಾಗೂ ಪುತ್ರ ಕುಲ್ದೀಪ್ ಬಿಶ್ನೋಯ್ ಕ್ರಮವಾಗಿ 1987 ಹಾಗೂ 1998ರಲ್ಲಿ ಗೆಲುವು ಕಂಡಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಹರ್ಯಾಣ ಜನಹಿತ ಪಕ್ಷವು (ಎಚ್‍ಜೆಪಿ) ಗೆಲುವು ಸಾಧಿಸಿತ್ತು. ಆದರೆ 2019ರಲ್ಲಿ ಎಚ್‍ಜೆಪಿ ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಂಡಿತು.

    ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಹೊರ ಬೀಳಲಿದೆ.

  • ಗುಂಡಿಕ್ಕಿ ಟಿಕ್‍ಟಾಕ್ ಸ್ಟಾರ್‌ನ ಬರ್ಬರ ಹತ್ಯೆ

    ಗುಂಡಿಕ್ಕಿ ಟಿಕ್‍ಟಾಕ್ ಸ್ಟಾರ್‌ನ ಬರ್ಬರ ಹತ್ಯೆ

    ನವದೆಹಲಿ: ಜಿಮ್ ಟ್ರೈನರ್ ಆಗಿರುವ ಟಿಕ್‍ಟಾಕ್ ಸ್ಟಾರ್‌ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ರಾಷ್ಟ್ರರಾಜಧಾನಿ ನವದೆಹಲಿಯ ನಾಜಫ್‍ಗರ್ ನಲ್ಲಿ ನಡೆದಿದೆ.

    ಮೋಹಿತ್ ಮೋರ್(27) ಮೃತ ಜಿಮ್ ಟ್ರೈನರ್. ಮೋಹಿತ್ ನಾಜಫ್‍ಗರ್ ನ ಧರಂಪುರನ ನಿವಾಸಿಯಾಗಿದ್ದು, ಮನೆಯ ಹತ್ತಿರ ಇರುವ ಫೋಟೋಕಾಪಿ ಶಾಪ್‍ನಲ್ಲಿ ತನ್ನ ಗೆಳೆಯನನ್ನು ಭೇಟಿ ಮಾಡಲು ಹೋಗಿದ್ದನು. ಈ ವೇಳೆ ದುಷ್ಕರ್ಮಿಗಳು ಮೋಹಿತ್‍ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

    ಮೋಹಿತ್ ಫೋಟೋಶಾಪ್ ಒಳಗೆ ಕುಳಿತುಕೊಂಡು ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದನು. ಈ ವೇಳೆ ಮೂವರು ದುಷ್ಕರ್ಮಿಗಳು ಅಂಗಡಿಯೊಳಗೆ ಬಂದು ಬರೋಬ್ಬರಿ 13 ಗುಂಡು ಹೊಡೆದು ಮೋಹಿತ್‍ನನ್ನು ಕೊಲೆ ಮಾಡಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಮೋಹಿತ್ ಶಾಪ್‍ನಲ್ಲಿದ್ದ ಸೋಫಾ ಮೇಲೆ ಬಿದ್ದನು. ಈ ವೇಳೆ ಅಲ್ಲಿದ್ದ ಜನರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ಮೋಹಿತ್ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿದ್ದಾರೆ.

    ಕೊಲೆ ಮಾಡಿದ ನಂತರ ಆರೋಪಿಗಳು ತಪ್ಪಿಸಿಕೊಂಡು ಹೋದ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂವರು ಆರೋಪಿಗಳಲ್ಲಿ ಒಬ್ಬ ಬ್ಲ್ಯಾಕ್ ಹೆಲ್ಮೆಟ್ ಧರಿಸಿ ಸ್ಕೂಟಿಯಲ್ಲಿ ಬಂದಿದ್ದನು. ಕೊಲೆ ಮಾಡಿದ ನಂತರ ಮೂವರು ಆರೋಪಿಗಳು ಜನಸಂದನಿ ಇರುವ ರಸ್ತೆಯಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೋಹಿತ್ ಮೋರ್ ಗೆ ಟಿಕ್‍ಟಾಕ್‍ನಲ್ಲಿ 5 ಲಕ್ಷ ಸಬ್‍ಸ್ಕ್ರೈಬರ್ ಇದ್ದು, ಇನ್‍ಸ್ಟಾಗ್ರಾಂನಲ್ಲಿ 3 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಮೋಹಿತ್ ತನ್ನ ಇನ್‍ಸ್ಟಾಗ್ರಾಂನಲ್ಲಿ ತನ್ನ ಫಿಟ್ನೆಸ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದನು.

    ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ. ಹಣದ ವಿಷಯ ಅಥವಾ ಹಳೆ ದ್ವೇಷದಿಂದ ಈ ಕೊಲೆ ನಡೆದಿರಬಹುದು. ಮೋಹಿತ್ ಸಾಮಾಜಿಕ ಜಾಲತಾಣದಲ್ಲಿ ಯಾರೊಂದಿಗಾದರೂ ದ್ವೇಷ ಮಾಡಿಕೊಂಡಿದ್ದನಾ ಎಂದು ಆತನ ಟಿಕ್‍ಟಾಕ್, ಇನ್‍ಸ್ಟಾಗ್ರಾಂ ಹಾಗೂ ಕಾಲ್ ರೆಕಾರ್ಡ್ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.