Tag: Tiger Shark

  • ಒಂದು ಕ್ಷಣದಲ್ಲಿ ಜೀವವೇ ಹೋಯ್ತು – ತಂದೆ ಎದುರೇ ಮಗನನ್ನು ಕೊಂದು ತಿಂದ ಟೈಗರ್ ಶಾರ್ಕ್

    ಒಂದು ಕ್ಷಣದಲ್ಲಿ ಜೀವವೇ ಹೋಯ್ತು – ತಂದೆ ಎದುರೇ ಮಗನನ್ನು ಕೊಂದು ತಿಂದ ಟೈಗರ್ ಶಾರ್ಕ್

    ಕೈರೋ: ಸಮುದ್ರದಲ್ಲಿ ಈಜಾಡುತ್ತಿದ್ದ ರಷ್ಯಾ ಮೂಲದ ಪ್ರವಾಸಿಗನ (Russian Tourist) ಮೇಲೆ ಟೈಗರ್ ಶಾರ್ಕ್ ದಾಳಿ ನಡೆಸಿ, ತನ್ನ ತಂದೆ ಎದುರೇ ಕೊಂದು ತಿಂದಿರುವ ಘಟನೆ ಈಜಿಪ್ಟ್‌ನ (Egypt) ಹುರ್ಘಾಡ ನಗರದಲ್ಲಿರುವ ರೆಡ್ ಸೀ ರೆಸಾರ್ಟ್‌ನಲ್ಲಿ ನಡೆದಿದೆ.

    ಘಟನೆ ಸಂಬಂಧಿಸಿದ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಸದ್ದು ಮಾಡುತ್ತಿದೆ. ಪ್ರವಾಸಿಗ ವ್ಲಾಡಿಮಿರ್ ಪೊಪೊವ್ (23) ಎಂದು ಗುರುತಿಸಲಾದ ವ್ಯಕ್ತಿ ಮೇಲೆ ದಾಳಿ ಮಾಡಿದ್ದು ಟೈಗರ್ ಶಾರ್ಕ್ ಎಂದು ಈಜಿಪ್ಟ್ನ ಪರಿಸರ ಸಚಿವಾಲಯ ತಿಳಿಸಿದೆ.

    ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಕರಾವಳಿಯ 74 ಕಿಮೀ ವ್ಯಾಪ್ತಿಯನ್ನು ನಿಷೇಧಿಸಿದ್ದು, ಭಾನುವಾರದವರೆಗೆ ಜಲಕ್ರೀಡೆ ಹಾಗೂ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ರೆ ಮೃತನ ಬಗ್ಗೆ ಸರ್ಕಾರ ಹೆಚ್ಚಿನ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಪಾರ್ಕ್‌ನಲ್ಲಿ ಆಡುತ್ತಿದ್ದ ಶಾಲಾ ಮಕ್ಕಳ ಮೇಲೆ ಮನಬಂದಂತೆ ಚಾಕುವಿನಿಂದ ಇರಿತ – 3 ಮಕ್ಕಳ ಸ್ಥಿತಿ ಗಂಭೀರ

    ಏನಿದು ಘಟನೆ?
    ಶಾರ್ಕ್ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತನ್ನನ್ನು ಸುತ್ತುವರಿದ ಶಾರ್ಕ್ನಿಂದ ತಪ್ಪಿಸಿಕೊಳ್ಳಲು ಪ್ರವಾಸಿಗ ಭಯದಿಂದ ಸಮುದ್ರದಲ್ಲಿ ಈಜಲು ಪರದಾಡುತ್ತಿದ್ದಾನೆ. ಈ ವೇಳೆ ಶಾರ್ಕ್ ಎರಡ್ಮೂರು ಬಾರಿ ದಾಳಿ ಮಾಡಿ, ಅಂತಿಮವಾಗಿ ವ್ಯಕ್ತಿಯನ್ನ ನೀರಿನ ಒಳಕ್ಕೆ ಎಳೆದೊಯ್ದಿದೆ. ಲೈಫ್‌ಗಾರ್ಡ್ ಸಹಾಯಕ್ಕಾಗಿ ಕೂಗಿಕೊಂಡರೂ ಆತನನ್ನು ರಕ್ಷಿಸಲು ಸಮೀಪಕ್ಕೆ ರಕ್ಷಣಾ ಸಿಬ್ಬಂದಿ ಹೋಗುವಷ್ಟರಲ್ಲೇ ಶಾರ್ಕ್ ಆತನನ್ನು ಮತ್ತಷ್ಟು ನಿರೀನ ಆಳಕ್ಕೆ ಎಳೆದುಕೊಂಡು ಹೋಗಿತ್ತು.

    ರಷ್ಯಾದ ಪ್ರವಾಸಿಗರು ನೀರಿನಲ್ಲಿದ್ದಾಗ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಅಧಿಕಾರಿಗಳು ವಿಧಿಸಿರುವ ಯಾವುದೇ ಈಜು ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಷ್ಯಾ ರಾಯಭಾರ ಕಚೇರಿ (Embassy of Russia) ಎಚ್ಚರಿಸಿದೆ. ಇದನ್ನೂ ಓದಿ: ವರ್ಗೀಕೃತ ದಾಖಲೆಗಳ ಕೇಸ್ – ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

  • ಕಾರವಾರದ ಕಡಲ ತೀರದಲ್ಲಿ ಅಪರೂಪದ ಟೈಗರ್ ಶಾರ್ಕ್ ಕಳೇಬರ ಪತ್ತೆ

    ಕಾರವಾರದ ಕಡಲ ತೀರದಲ್ಲಿ ಅಪರೂಪದ ಟೈಗರ್ ಶಾರ್ಕ್ ಕಳೇಬರ ಪತ್ತೆ

    ಕಾರವಾರ: ಕಡಲ ತೀರದಲ್ಲಿ ಕಳೆದ ಒಂದು ತಿಂಗಳಿಂದ ಅಪರೂಪದ ಕಡಲ ಜೀವಿಗಳ ಕಳೇಬರ ಪತ್ತೆಯಾಗುತ್ತಿದೆ. ಈ ಹಿಂದೆ ಡಾಲ್ಫಿನ್, ಅಪರೂಪದ ಸಮುದ್ರ ಆಮೆಗಳ ಕಳೇಬರ ಪತ್ತೆಯಾಗಿದ್ದವು. ಇದೀಗ ಕಾರವಾರ ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಟೈಗರ್ ಶಾರ್ಕ್ ಹೆಣ್ಣು ಮೀನಿನ ಕಳೇಬರ ಕಂಡುಬಂದಿದೆ.

    ಈ ಶಾರ್ಕ್ ಮೀನಿನ ಕಳೇಬರವು ಒಂದೂವರೆ ಮೀಟರ್ ಉದ್ದವಿದ್ದು, ಮೂವತ್ತು ಕೆಜಿ ಭಾರವಿದೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಡಲ ಜೀವಶಾಸ್ತ್ರಜ್ಞರು ಇದರ ಕಳೇಬರವನ್ನು ಪರೀಕ್ಷಿಸಿದ್ದಾರೆ. ವಿಶ್ವದಾದ್ಯಂತ ಆಳಸಮುದ್ರದಲ್ಲಿ ಕಂಡುಬರುವ ಪ್ರಭೇದ ಇದಾಗಿದ್ದು, ಹುಲಿಯ ಚರ್ಮದಲ್ಲಿರುವಂಥ ಪಟ್ಟೆಗಳನ್ನು ಹೊಂದಿದೆ. ಹೀಗಾಗಿ ಈ ಮೀನಿಗೆ ಟೈಗರ್ ಶಾರ್ಕ್ ಎಂಬ ಹೆಸರು ಬಂದಿದೆ. ಇದನ್ನೂ ಓದಿ: ಕುಮಟಾದಲ್ಲಿ ಇಂಡೋ ಪೆಸಿಫಿಕ್ ಹಂಪ್‍ಬ್ಯಾಕ್ ಡಾಲ್ಫಿನ್ ಕಳೇಬರ ಪತ್ತೆ

    ವಿಶ್ವದಲ್ಲಿ ಇರುವ ಶಾರ್ಕ್‍ಗಳ ಜಾತಿಯಲ್ಲಿ ನಾಲ್ಕನೇ ಅತೀ ದೊಡ್ಡದು ಎಂದು ಗುರುತಿಸಲಾಗಿದೆ. ಸುಮಾರು 40 ವರ್ಷಗಳ ಜೀವಿತಾವಧಿ ಹೊಂದಿದ್ದು, ಐದು ಮೀಟರ್‍ ಗಳಷ್ಟು ಉದ್ದ ಬೆಳೆಯುತ್ತವೆ. 300ರಿಂದ 600 ಕೆ.ಜಿ.ಗಳಷ್ಟು ತೂಕವಿರುತ್ತವೆ. ಟೈಗರ್ ಶಾರ್ಕ್‍ಗಳ ಹಲ್ಲುಗಳು ಬಲಿಷ್ಠವಾಗಿದ್ದು ಕವಚ ಹೊಂದಿದ ಆಮೆಗಳ ಚಿಪ್ಪನ್ನೆ ತುಂಡರಿಸಿ ತಿನ್ನುತ್ತವೆ. ಇವುಗಳು ಬಹಳ ಆಕ್ರಮಣಕಾರಿ ಸ್ವಭಾವ ಹೊಂದಿರುತ್ತದೆ. ಹೆಚ್ಚಾಗಿ ತಿಮಿಂಗಿಲಗಳು, ಇತರ ಶಾರ್ಕ್‍ಗಳು, ಮಣಕಿ, ಬೊಂಡಾಸ್ ಮೀನುಗಳು, ಆಮೆಗಳು, ಮನುಷ್ಯರ ಮೇಲೂ ದಾಳಿ ಮಾಡುತ್ತವೆ.  ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ

    ಶಾರ್ಕ್ ಮೀನಿನ ಬಗ್ಗೆ ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಮಾಹಿತಿ ನೀಡಿದ್ದು, ನಮ್ಮ ದೇಶದಲ್ಲಿ ಇವುಗಳನ್ನು ಆಹಾರಕ್ಕಾಗಿ ಬಳಸುವುದಿಲ್ಲ. ಈ ಮೀನು ಮೀನುಗಾರರ ಬಲೆಗೆ ಬಿದ್ದಿದ್ದು, ಇವುಗಳನ್ನು ಇಲ್ಲಿ ಬಳಸದ ಕಾರಣ ಈ ಶಾರ್ಕ್‍ನ್ನು ಹಾಗೆಯೇ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟವು ಈ ಶಾರ್ಕ್‍ಗಳನ್ನು ಅಳಿವಿನ ಅಂಚಿನಲ್ಲಿದೆ ಎಂದು ಗುರುತಿಸಿದೆ. ಆದರೆ ನಮ್ಮ ದೇಶದ ಕಾನೂನಿನಲ್ಲಿ ಇವುಗಳ ಬೇಟೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಾಹಿತಿ ಹಂಚಿಕೊಂಡರು.