Tag: tiffin

  • ಟೀ ಜೊತೆಗೆ ಟಿಫನ್ ಕೊಡದಿದ್ದಕ್ಕೆ ಸೊಸೆಗೆ ಗುಂಡಿಟ್ಟ ಮಾವ

    ಟೀ ಜೊತೆಗೆ ಟಿಫನ್ ಕೊಡದಿದ್ದಕ್ಕೆ ಸೊಸೆಗೆ ಗುಂಡಿಟ್ಟ ಮಾವ

    ಮುಂಬೈ: ಟಿಫನ್ ಜೊತೆಗೆ ಟೀ ನೀಡಲಿಲ್ಲ ಎಂದು ಮಾವನೇ ತನ್ನ ರಿವಾಲ್ವರ್‌ನಿಂದ ಸೊಸೆಗೆ ಗುಂಡು ಹಾರಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    crime

    42 ವರ್ಷದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿದ್ದು, ಇದೀಗ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು 76 ವರ್ಷದ ಕಾಶಿನಾಥ ಪಾಂಡುರಂಗ ಪಾಟೀಲ್ ಎಂದು ಗುರುತಿಸಲಾಗಿದ್ದು, ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಯ ಮತ್ತೋರ್ವ ಸೊಸೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇದೀಗ ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ

    crime

    ಬೆಳಗಿನ ಚಹಾದ ಜೊತೆಗೆ ಸೊಸೆ ತನಗೆ ಉಪಹಾರವನ್ನು ನೀಡದೇ ಇದ್ದುದರಿಂದ ಆರೋಪಿ ಕೋಪಗೊಂಡಿದ್ದನು. ನಂತರ ತನ್ನ ರಿವಾಲ್ವರ್ ಹೊರ ತೆಗೆದು ತನ್ನ ಸೊಸೆಯ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಇತರ ಕುಟುಂಬಸ್ಥರು ಆಕೆಯನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಈ ಘಟನೆಗೆ ಬೇರೆ ಏನಾದರೂ ಕಾರಣವಿದೆಯೇ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಸಂತೋಷ್ ಘಾಟೇಕರ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನದೊಳಗೆ ಪ್ರಯಾಣಿಕನ ಮೊಬೈಲ್ ಸ್ಫೋಟ – ಬೆಂಕಿ ನಂದಿಸಲು ಸಿಬ್ಬಂದಿ ಹರಸಹಾಸ

  • 1,000 ಕಿ.ಮೀ ಸೈಕಲ್ ಪ್ರಯಾಣ- ತಿಂಡಿ ತಿನ್ನಲು ಕುಳಿತಾಗ ಕಾರು ಡಿಕ್ಕಿಯಾಗಿ ಸಾವು

    1,000 ಕಿ.ಮೀ ಸೈಕಲ್ ಪ್ರಯಾಣ- ತಿಂಡಿ ತಿನ್ನಲು ಕುಳಿತಾಗ ಕಾರು ಡಿಕ್ಕಿಯಾಗಿ ಸಾವು

    – ಕಾರು ಚಾಲಕ ನೀಡಿದ ಹಣ ನಿರಾಕರಿಸಿದ ಸ್ನೇಹಿತರು

    ಲಕ್ನೋ: ಕೊರೊನಾ ಲಾಕ್‍ಡೌನ್ ಪರಿಣಾಮ ಸಾವಿರಾರು ಕಾರ್ಮಿಕರು ನಡೆದುಕೊಂಡು, ಸೈಕಲ್ ಮೂಲಕ ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಇದೇ ರೀತಿ ಕಾರ್ಮಿಕನೊಬ್ಬ ಸೈಕಲ್ ಮೂಲಕ ತನ್ನೂರಿಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

    ಸಘೀರ್ ಅನ್ಸಾರಿ (26). ದೆಹಲಿಯಿಂದ ಬಿಹಾರದ ತನ್ನ ಚಂಪಾರನ್ ಗ್ರಾಮಕ್ಕೆ ಅನ್ಸಾರಿ ಹೋಗುತ್ತಿದ್ದರು. ಆದರೆ ಲಕ್ನೋದಲ್ಲಿ ತಿಂಡಿ ಮಾಡುತ್ತಿದ್ದಾಗ ಕಾರು ಬಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಅನ್ಸಾರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ.

    ಏನಿದು ಪ್ರಕರಣ?
    ಕೊರೊನಾ ಲಾಕ್‍ಡೌನ್‍ನಿಂದ ಕೆಲಸ ಇಲ್ಲದೆ ತನ್ನ ಏಳು ಸ್ನೇಹಿತರೊಂದಿಗೆ ಸೈಕಲ್ ಮೂಲಕ ತನ್ನೂರಿಗೆ ಹೋಗಲು ಅನ್ಸಾರಿ ನಿರ್ಧರಿಸಿದ್ದರು. ಅದರಂತೆಯೇ ಎಲ್ಲರೂ ದೆಹಲಿಯಿಂದ ಮೇ 5 ರಂದು ತಮ್ಮ ಊರಿಗೆ ಸೈಕಲ್ ಮೂಲಕ ಹೊರಟಿದ್ದರು. ಐದು ದಿನಗಳ ನಂತರ ಕಾರ್ಮಿಕರು ಲಕ್ನೋ ತಲುಪಿದ್ದಾರೆ. ಐದು ದಿನಗಳಲ್ಲಿ 1,000 ಕಿಲೋ ಮೀಟರ್ ದೂರ ಸೈಕಲ್ ಮೂಲಕ ಬಂದಿದ್ದರು.

    ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಬೆಳಗ್ಗಿನ ತಿಂಡಿ ತಿನ್ನಲು ಎಲ್ಲರೂ ಸೈಕಲ್ ನಿಲ್ಲಿಸಿ ರಸ್ತೆ ಬದಿಯ ಡಿವೈಡರ್ ಮೇಲೆ ಕುಳಿತಿದ್ದರು. ಈ ವೇಳೆ ಲಕ್ನೋ ಸಂಖ್ಯೆ ಹೊಂದಿರುವ ಕಾರು ನಿಯಂತ್ರಣ ಕಳೆದುಕೊಂಡು ವೇಗವಾಗಿ ಬಂದು ಮೊದಲಿಗೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಅನ್ಸಾರಿಗೆ ಡಿಕ್ಕಿ ಹೊಡೆದಿದೆ.

    ತಕ್ಷಣ ಕಾರು ಚಾಲಕನು ಕಾರಿನಿಂದ ಇಳಿದು ಅವರಿಗೆ ಪರಿಹಾರವಾಗಿ ಹಣವನ್ನು ನೀಡಲು ಮುಂದಾಗಿದ್ದಾನೆ. ಆದರೆ ಅನ್ಸಾರಿ ಸ್ನೇಹಿತರು ಹಣ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ನಂತರ ಅನ್ಸಾರಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನ್ಸಾರಿ ಮೃತಪಟ್ಟಿದ್ದಾರೆ. ಸದ್ಯಕ್ಕೆ ಪೊಲೀಸರು ಚಾಲಕನ ಅಜಾಗರುಕತೆಯಿಂದ ಅಪಘಾತ ಸಂಭವಿಸಿದೆ ಎಂದು ಅಪರಿಚಿತ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಮತ್ತು ಹಣವಿಲ್ಲದೆ ಪರದಾಡುತ್ತಿದ್ದರು. ಕೊನೆಗೆ ನಡೆದುಕೊಂಡು, ಸೈಕಲ್ ಮೂಲಕ ತಮ್ಮ ತಮ್ಮ ಊರಿಗೆ ಹೋಗುತ್ತಿದ್ದಾರೆ. ಇತ್ತೀಚೆಗೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

  • ಶೆಡ್ ಹೊಟೇಲಿನಲ್ಲಿ ಸ್ನೇಹಿತರೊಂದಿಗೆ ತಿಂಡಿ ಸವಿದ ಶಿವಣ್ಣ

    ಶೆಡ್ ಹೊಟೇಲಿನಲ್ಲಿ ಸ್ನೇಹಿತರೊಂದಿಗೆ ತಿಂಡಿ ಸವಿದ ಶಿವಣ್ಣ

    ಮಂಡ್ಯ: ಸ್ಟಾರ್ ನಟರು ಎಂದರೆ ಕೇವಲ ಫೈಸ್ಟಾರ್ ಹಾಗೂ ಐಷಾರಾಮಿ ಹೊಟೇಲ್‍ಗಳಲ್ಲಿ ಮಾತ್ರ ಊಟ-ತಿಂಡಿ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಇದಕ್ಕೆ ವಿಭಿನ್ನ ಎಂಬಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಶೆಡ್ ಹೊಟೇಲ್‍ವೊಂದರಲ್ಲಿ ತಿಂಡಿ ತಿನ್ನುವ ಮೂಲಕ ನನಗೂ ಸಾಮಾನ್ಯ ಜನರಂತೆ ಬದುಕಲು ಇಷ್ಟ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

    ಶಿವರಾಜ್ ಕುಮಾರ್ ಅವರು ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮುತ್ತತ್ತಿಗೆ ಹೋಗುತ್ತಿದ್ದರು. ಆಗ ಮಂಡ್ಯ ಜಿಲ್ಲೆಯ ಮಳವಳ್ಳಿ- ಮದ್ದೂರು ರಸ್ತೆಯಲ್ಲಿ ಕಾರು ನಿಲ್ಲಿಸಿ ಬಾಬು ಶೆಡ್ ಹೊಟೇಲಿನಲ್ಲಿ ಇಡ್ಲಿ, ದೋಸೆ ಹಾಗೂ ಚಿತ್ರಾನ್ನ ತಿಂದಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್‌ಗೆ ನಟ ಗುರುದತ್ ಸೇರಿದಂತೆ ಇನ್ನಿತರ ಸ್ನೇಹಿತರು ಕೂಡ ಸಾಥ್ ನೀಡಿದರು.

    ಈ ವೇಳೆ ಅಭಿಮಾನಿಗಳು ಶಿವರಾಜ್‍ಕುಮಾರ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. 40 ವರ್ಷಗಳಿಂದ ಬಾಬು ಅವರು ಈ ಶೆಡ್ ಹೊಟೇಲ್ ನಡೆಸುತ್ತಿದ್ದು, ಮಳವಳ್ಳಿ ಭಾಗದಲ್ಲಿ ಈ ಹೊಟೇಲ್ ಫುಲ್ ಫೇಮಸ್ ಆಗಿದೆ.

    ಬಳಿಕ ಮಾತನಾಡಿದ ಶಿವಣ್ಣ, ಈ ಭಾಗದಲ್ಲಿ ನಾನು ಹೋಗುವಾಗ ಇಲ್ಲಿಗೆ ಬಂದು ಊಟ-ತಿಂಡಿ ಮಾಡುತ್ತೇನೆ. ಇಲ್ಲಿ ಇಡ್ಲಿ, ದೋಸೆ ಹಾಗೂ ಚಿತ್ರಾನ್ನ ಸೂಪರ್ ಆಗಿ ಇರುತ್ತದೆ. ಹಲಗೂರಿನ ಭಾಗದಲ್ಲಿ ನಮಗೆ ಸಂಬಂಧಿಕರು ಇದ್ದಾರೆ. ಇದರಿಂದ ಈ ಹೊಟೇಲ್ ನನಗೆ ಹಳೆಯ ಪರಿಚಯ ಎಂದು ಹೇಳಿದರು.

    ಈ ಹಿಂದೆಯೂ ಕೂಡ ಶಿವಣ್ಣ ಸಾಕಷ್ಟು ಬಾರಿ ಮಂಡ್ಯ ಹಾಗೂ ಚಾಮರಾಜನಗರ ಭಾಗದಲ್ಲಿ ಹಲವು ಶೆಡ್ ಹೊಟೇಲ್‍ಗಳಿಗೆ ಹೋಗಿ ಊಟ, ತಿಂಡಿ ಸವಿದಿದ್ದಾರೆ.