Tag: ticktok

  • ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ವಿದ್ಯಾರ್ಥಿನಿ ಸಾವು

    ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ವಿದ್ಯಾರ್ಥಿನಿ ಸಾವು

    ಕೋಲಾರ: ಇತ್ತೀಚೆಗಷ್ಟೇ ಯುವಕನೊಬ್ಬ ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮೂಳೆ ಮುರಿದುಕೊಂಡು ಮೃತಪಟ್ಟಿದ್ದನು. ಇದೀಗ ವಿದ್ಯಾರ್ಥಿನಿಯೊಬ್ಬಳು ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ಮೃತಪಟ್ಟಿರುವ ಘಟನೆ ಕೋಲಾರ ತಾಲೂಕಿನ ವಡಗೇರಿ ಗ್ರಾಮದಲ್ಲಿ ನಡೆದಿದೆ.

    ಮಾಲಾ ಮೃತ ವಿದ್ಯಾರ್ಥಿನಿ. ಮಾಲಾ ಬಿ.ಎ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೋಲಾರ ಮಹಿಳಾ ಕಾಲೇಜಿನಲ್ಲಿ ಓದುತ್ತಿದ್ದಳು. ಆದರೆ ಶುಕ್ರವಾರ ಸಂಜೆ ಮಾಲಾ, ಕೃಷಿ ಹೊಂಡದ ಬಳಿ ಟಿಕ್‍ಟಾಕ್ ವಿಡಿಯೋ ಮಾಡುವಾಗ ಸಾವನ್ನಪ್ಪಿದ್ದಾಳೆ.

    ಮಾಲಾ ಶುಕ್ರವಾರ ಸಂಜೆ ಹೊಲದ ಬಳಿ ಹೋಗಿ ಅಲ್ಲಿದ್ದ ಕೃಷಿಹೊಂಡದ ಬಳಿ ತನ್ನ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಒಬ್ಬಳೇ ಟಿಕ್‍ಟಾಕ್ ಮಾಡುತ್ತಿದ್ದಳು. ಈ ವೇಳೆ ಮಾಲಾ ಮೊಬೈಲ್ ಸಮೇತ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಆಕೆಯನ್ನು ಕಾಪಾಡಲು ಸಾಧ್ಯವಾಗಿಲ್ಲ.

    ಕೊನೆಗೆ ಹೊಲಕ್ಕೆ ಹೋಗಿ ತುಂಬಾ ಸಮಯವಾಗಿದೆ. ಇನ್ನೂ ಯಾಕೆ ಮಾಲಾ ಮನೆಗೆ ಬಂದಿಲ್ಲ ಎಂದು ಪೋಷಕರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಈಗಾಗಲೇ ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮೊದಲ ಬಲಿಯಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಮೃತ ಯುವಕ. ಕುಮಾರ್ ಟಿಕ್‍ಟಾಕ್ ವಿಡಿಯೋ ಮಾಡುವಾಗ ಆಯ ತಪ್ಪಿ ತಲೆ ನೆಲಕ್ಕೆ ಬಿದ್ದಿದ್ದನು. ಪರಿಣಾಮ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್ ಸಾವನ್ನಪ್ಪಿದ್ದನು. ಆದರೆ ಈ ಬಗ್ಗೆ ಕುಮಾರ್ ಮಾವ ಮಂಜುನಾಥ್ ಅವರು, ಕುಮಾರ್ ಟಿಕ್‍ಟಾಕ್ ಮಾಡಲು ಹೋಗಿ ಸಾವನ್ನಪ್ಪಿಲ್ಲ. ಕುಮಾರ್ ತುಮಕೂರಿನ ರಾಮು ಮೆಲೋಡೀಸ್ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದನು. ಬಿಡುವಿನ ವೇಳೆ ಸರ್ಕಾರಿ ಮತ್ತು ಬಡ ಶಾಲೆಗಳಲ್ಲಿ ನೃತ್ಯ ಹೇಳಿಕೊಡುತ್ತಿದ್ದ. ಹೊಸ ಹೊಸ ಸ್ಟಂಟ್‍ಗಳನ್ನು ಕಲಿತರೆ ಸಿನಿಮಾ ಹಾಗೂ ಕಾರ್ಯಕ್ರಮಗಳಿಗೆ ಅವಕಾಶ ಸಿಗುತ್ತವೆ ಎಂದು ತಿಳಿಸಿದ್ದನು ಎಂದು ಪ್ರತಿಕ್ರಿಯಿಸಿದ್ದರು.

  • ಟಿಕ್‍ಟಾಕ್ ಬ್ಯಾನ್‍ಗೆ ರಾಜ್ಯ ಮಹಿಳಾ ಆಯೋಗ ಆಗ್ರಹ

    ಟಿಕ್‍ಟಾಕ್ ಬ್ಯಾನ್‍ಗೆ ರಾಜ್ಯ ಮಹಿಳಾ ಆಯೋಗ ಆಗ್ರಹ

    ಬೆಂಗಳೂರು: ತಮಿಳುನಾಡಾಯ್ತು ಇನ್ಮುಂದೆ ಕರ್ನಾಟಕದಲ್ಲಿಯೂ ಟಿಕ್‍ಟಾಕ್ ಬ್ಯಾನ್ ಆಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

    ಹೌದು. ಟಿಕ್‍ಟಾಕ್ ವಿರುದ್ಧ ಮಹಿಳಾ ಆಯೋಗ ಕಾನೂನು ಸಮರ ಸಾರಿದ್ದು, ಇಲ್ಲಿ ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಟಿಕ್‍ಟಾಕ್ ಬ್ಯಾನ್ ಮಾಡುವಂತೆ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಹೇಳಿದ್ದಾರೆ.

    ನಾಗಲಕ್ಷ್ಮಿ ಹೇಳಿದ್ದೇನು?
    ಟಿಕ್ ಟಾಕ್ ಫೋನೋಗ್ರಫಿ ವಿಡಿಯೋವಾಗಿದ್ದು, ಚೈನೀಸ್ ವಿಡಿಯೋ ಆ್ಯಪ್ ಆಗಿದೆ. ಯುವಕ- ಯುವತಿಯರ ಮನಸೆಳೆದಿರುವ ಈ ವಿಡಿಯೋದಲ್ಲಿ ಯುವಕ-ಯುವತಿಯರ ಜೊತೆ ಬೇರೆಯದ್ದೇ ಒಂದು ಆಡಿಯೋವನ್ನು ಸೇರಿಸಿ, ಹೆಣ್ಣು ಮಕ್ಕಳ ಮಾನ ಹಾಗೂ ತೇಜೋವಧೆ ಮಾಡುವಂತಹ ಕೆಟ್ಟ ಆ್ಯಪ್ ಇದಾಗಿದೆ.

    ಇದನ್ನು ಬಹಳ ಬೇಗನೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದು ನಮ್ಮ ಸಂಸ್ಕೃತಿ ಹಾಗೂ ನಾಗರಿಕತೆಯನ್ನು ಹಾಳು ಮಾಡುತ್ತದೆ. ಇಂತಹ ವಿಡಿಯೋಗಳಿಂದ ಹೆಣ್ಣು ಮಕ್ಕಳ ಮೇಲೆ ಇನ್ನಷ್ಟು ದೌರ್ಜನ್ಯ ಪ್ರಕರಣಗಳು ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ರಾಜ್ಯ ಮಹಿಳಾ ಆಯೋಗ ಈ ವಿಡಿಯೋವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದೆ.

    ಈ ಕುರಿತು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಸಲ್ಲಿಸುವುದಾಗಿ ತಿಳಿಸಿದ ಅವರು, ಮಾಹಿತಿ ತಂತ್ರಜ್ಞಾನ ಸಚಿವರಿಗೂ ಪತ್ರ ಬರೆಯುತ್ತೇನೆ. ಒಟ್ಟಿನಲ್ಲಿ ಈ ಆ್ಯಪ್ ಕರ್ನಾಟದಲ್ಲಿ ರದ್ದಾಗಬೇಕು ಎಂದು ಅವರು ಹೇಳಿದ್ದಾರೆ.

    ತಮಿಳುನಾಡಿನಲ್ಲಿ ಬ್ಯಾನ್:
    ಚೀನಾ ಮೂಲದ ಟಿಕ್ ಟಾಕ್ ಮೊಬೈಲ್ ಆ್ಯಪ್ ನಿಷೇಧಿಸುವಂತೆ ಮಣಿತನೇಯ ಜನನಾಯಕ ಕಚ್ಚಿ ಪಕ್ಷದ ನಾಯಕ ತಮೀಮುನ್ ಅನ್ಸಾರಿ ಅವರು ಒತ್ತಾಯಿಸಿದ್ದರು. ಟಿಕ್ ಟಾಕ್ ನಿಂದ ಸಂಸ್ಕೃತಿ ಅವನತಿಗೆ ದಾರಿ ಮಾಡಿಕೊಟ್ಟಿದೆ. ಇನ್ನು ಕೆಲವರು ಅಮಾಯಕ ಮಹಿಳೆಯರ ಮುಖವನ್ನು ಕೆಟ್ಟದಾಗಿ ಎಡಿಟ್ ಮಾಡಿ ವಿಕೃತಿ ಮರೆಯುತ್ತಿದ್ದಾರೆ. ಅಲ್ಲದೆ, ಲೈಂಗಿಕ ವಿಷಯಗಳನ್ನು ಹರಡುವ ಮೂಲಕ ಮತ್ತೊಬ್ಬರ ಗಮನವನ್ನು ಸೆಳೆಯುವಷ್ಟು ಕೆಳಮಟ್ಟಿಗೆ ಕೆಲವು ಆ್ಯಪ್ ಬಳಕೆದಾರರು ಇಳಿದಿದ್ದಾರೆ. ಹೀಗಾಗಿ ಆ್ಯಪ್ ಬ್ಯಾನ್ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದರು.