Tag: Thunderbolt

  • ಸಿಡಿಲಿಗೆ ಗೋಪುರ, ಗೋಡೆ ಮುರಿದು ಹೋದರೂ ಭಕ್ತರಿಗೆ ಏನು ಆಗಿಲ್ಲ

    ಸಿಡಿಲಿಗೆ ಗೋಪುರ, ಗೋಡೆ ಮುರಿದು ಹೋದರೂ ಭಕ್ತರಿಗೆ ಏನು ಆಗಿಲ್ಲ

    ಬೀದರ್: ಸಿಡಿಲು ಬಡಿದರೂ ಭಕ್ತರು ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಉಪ್ಪಳ ಗ್ರಾಮದ ಬಳಿ ಇರುವ ಗುತ್ತಿ ಭವಾನಿ ಮಾತಾ ದೇವಸ್ಥಾನದಲ್ಲಿ ನಡೆದಿದೆ.

    ವಿಜಯದಶಮಿ ಹಿನ್ನೆಲೆಯಲ್ಲಿ ತಡರಾತ್ರಿಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಇಂದು ಬೆಳಗ್ಗೆ ದೇವಾಲಯಕ್ಕೆ ಸಿಡಿಲು ಬಡಿದಿದೆ. ಸಿಡಿಲ ಬಡಿತಕ್ಕೆ ದೇವಸ್ಥಾನದ ಗೋಪುರ, ಗೋಡೆ ಮುರಿದು ಹೋದರೂ ದೇವಸ್ಥಾನದ ಒಳಗಡೆ ಇದ್ದ ಭಕ್ತರು ಪವಾಡ ಎಂಬಂತೆ ಅಪಾಯದಿಂದ ಪಾರಾಗಿದ್ದಾರೆ.

    ಭಕ್ತರೊಬ್ಬರು ಪ್ರತಿಕ್ರಿಯಿಸಿ, ಬಡಿದ ಸಿಡಿಲು ದೇವಾಲಯ ಒಳಗಡೆ ಹೋದ ಅನುಭವವಾಗಿದೆ. ನಂತರ ಈ ಸಿಡಿಲು ಕಾಣೆ ಆಗಿದ್ದು ಹೇಗೆ ಎನ್ನುವುದೇ ಆಶ್ಚರ್ಯ ಎಂದು ಹೇಳಿದ್ದಾರೆ.

    ಈಗ ಸಿಡಿಲನ್ನೇ ತಡೆದು ಭಕ್ತರನ್ನು ಕಾಪಾಡಿದ ಭಾವಾನಿ ಮಾತಾ ದೇವಸ್ಥಾನ ನೋಡಲು ಸುತ್ತಮುತ್ತಲಿನ ಗ್ರಾಮಗಳ ಭಕ್ತರ ದಂಡು ಹರಿದು ಬರುತ್ತಿದೆ.

  • ಕಾರ್ಕಳದಲ್ಲಿ ಎದ್ದ ಸುಂಟರಗಾಳಿಗೆ ಸಿಕ್ತು ಕಾರಣ

    ಕಾರ್ಕಳದಲ್ಲಿ ಎದ್ದ ಸುಂಟರಗಾಳಿಗೆ ಸಿಕ್ತು ಕಾರಣ

    ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ರಾದ್ಧಾಂತ ಎಬ್ಬಿಸಿದ್ದ ಸುಂಟರಗಾಳಿ ಏಳು ಮನೆಗಳನ್ನು ಹಾರಿಸಿತ್ತು. ನೂರಾರು ಎಕ್ರೆ ಕೃಷಿಯನ್ನು ಹಿಚುಕಿ ಹಾಕಿತ್ತು. ಕೆರೆ ಗದ್ದೆಯ ನೀರನ್ನು ಇನ್ನೂರು ಮೀಟರ್ ಎತ್ತರಕ್ಕೆ ಹಾರಿಸಿತ್ತು. ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಕಾರಣ ಏನು ಎಂದು ಹುಡುಕಿದ ಪಬ್ಲಿಕ್ ಟಿವಿಗೆ ಇದೀಗ ಕಾರಣ ಸಿಕ್ಕಿದೆ.

    ಆಗಸ್ಟ್ 1 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪೆರ್ವಾಜೆ ಗ್ರಾಮದಲ್ಲಿ ಸಿಡಿಲು ಬಡಿದಂತೆ, ಭೂಮಿ ಕಂಪಿಸಿದಂತೆ ಅನುಭವವಾಗಿತ್ತು. ಆ ಮಧ್ಯಾಹ್ನ ಬೀಸಿದ್ದ ಸುಂಟರಗಾಳಿಗೆ ಇದೀಗ ಕಾರಣ ಸಿಕ್ಕಿದೆ. ಉಡುಪಿಯ ಭೌತ ಶಾಸ್ತ್ರಜ್ಞ ಡಾ. ಎ.ಪಿ ಭಟ್ ಸಂಶೋಧನೆ ನಡೆಸಿ, ಸ್ಥಳ ವಿಮರ್ಶೆ ಮಾಡಿದ್ದಾರೆ. ಭೂಮಿಯ ಮೇಲೆ ನಿರ್ವಾತ ಪ್ರದೇಶ ಸೃಷ್ಟಿಯಾಗುವುದೇ ಸುಂಟರಗಾಳಿಯ ಜನ್ಮಕ್ಕೆ ಕಾರಣ ಎಂದು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಾ. ಎ.ಪಿ ಭಟ್, ಕಾರ್ಕಳ ಎನ್ನುವ ತಾಲೂಕಿನ ಹೆಸರಿನ ಅರ್ಥ ಕಪ್ಪು ಕಲ್ಲುಗಳ ಊರು ಎಂದು. ಕಾರ್ಕಳದಲ್ಲಿ ಯಾವ ಭಾಗಕ್ಕೆ ಹೋದರೂ ಅಲ್ಲಿ ಕರಿ ಕಲ್ಲುಗಳೇ ಕಾಣಸಿಗುತ್ತವೆ. ಕಳೆದ ಐದಾರು ದಿನದಿಂದ ಕಾರ್ಕಳದಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಮಳೆ ನಿಂತು ಎರಡು ದಿನ ವಿಪರೀತ ಬಿಸಿಲು. ಬಿಸಿಲಿಗೆ ಬಂಡೆಗಳೆಲ್ಲಾ ಕಾದು ಕೆಂಡವಾಗಿದೆ. ಸುತ್ತಮುತ್ತ ಕಾಡಿನ ವಾತಾವರಣ ತಂಪಿತ್ತು. ಅದ್ದರಿಂದ ಬಿಸಿಗಾಳಿಯ ಜೊತೆ ತಂಗಾಳಿ ಸೇರಿ ಖಾಲಿ ಜಾಗ ಅಂದ್ರೆ ನಿರ್ವಾತ ಪ್ರದೇಶ ಸೃಷ್ಟಿಯಾಗಿತ್ತು. ಈ ಸಂದರ್ಭ ಸುಂಟರಗಾಳಿ ಹುಟ್ಟಿ ಸುರುಳಿಯಾಗುತ್ತದೆ. ಗಾಳಿ ಶಕ್ತಿ ಪಡೆದು ಸುತ್ತೆಲ್ಲಾ ಬೀಸುತ್ತದೆ. ಸಿಕ್ಕ ಸಿಕ್ಕ ವಸ್ತುಗಳನ್ನು ಸುತ್ತಿ ಬಿಸಾಕುತ್ತದೆ. ಕಾರ್ಕಳ ನಕ್ರೆಕಲ್ಲು ಎಂಬಲ್ಲಿ ಸುಂಟರಗಾಳಿ ಹುಟ್ಟಿದೆ. ಮುಂದೆ ಅದು ಕಾರ್ಕಳ, ಪೆರ್ವಾಜೆಯಾಗಿ ಮಾಳ ಗ್ರಾಮದ ಕಡೆ ಹಾರಿದೆ. ಗದ್ದೆ, ನದಿ, ಕೆರೆಯ ನೀರನ್ನು ಬಾನಿಗೆ ಚಿಮ್ಮಿಸಿದೆ ಎಂದು ಹೇಳಿದ್ದಾರೆ.

    ಸಮುದ್ರದಲ್ಲಿ ಸುಂಟರಗಾಳಿ ಸಾಮಾನ್ಯ. ಮೈದಾನಗಳಲ್ಲಿ ಬೇಸಿಗೆ ಸುಳಿಗಾಳಿ ನೋಡಿದ್ದೇವೆ. ಆದರೆ ಇಲ್ಲಿ ಮಳೆಗಾಲದ ಸುಂಟರಗಾಳಿ ಅಲ್ಲೋಲ ಕಲ್ಲೋಲ ಮಾಡಿದೆ. ಕಾಡು ನಾಶದಿಂದ ಇಷ್ಟೆಲ್ಲಾ ಅವಾಂತರ ಆಗಿರೋದು ಸತ್ಯ. ಗಿಡ ನೆಟ್ಟು ಕಾಡನ್ನು ವೃದ್ಧಿಮಾಡದಿದ್ದರೆ. ಈಗ ಕಾರ್ಕಳಕ್ಕಾದ ಗತಿ ಮುಂದೊಂದು ದಿನ ನಮ್ಮ ನಿಮ್ಮ ಊರಿಗೆ ಬಂದರೂ ಆಶ್ಚರ್ಯವಿಲ್ಲ ಎಂದು ಎ.ಪಿ. ಭಟ್ ಹೇಳಿದ್ದಾರೆ.

  • ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ, ಸಿಡಿಲು ಬಡಿದು ಮೂವರ ಸಾವು

    ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ, ಸಿಡಿಲು ಬಡಿದು ಮೂವರ ಸಾವು

    ಯಾದಗಿರಿ: ಬಿರುಗಾಳಿ ಸಹಿತ ಮಳೆ ವೇಳೆ ಸಿಡಿಲು ಬಡಿದು ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ನಡೆದಿದೆ.

    ಸುರಪುರ ತಾಲೂಕಿನ ಪೀರಗಾರದೊಡ್ಡಿ ಗ್ರಾಮದ 12 ವರ್ಷದ ಮೌನೇಶ್ ಸಿಡಿಲು ಬಡಿದ ಸಾವನ್ನಪ್ಪಿದ ಬಾಲಕ. ಗ್ರಾಮ ಹೊರ ವಲಯದಲ್ಲಿ ದನ ಮೇಯಿಸುತ್ತಿದ್ದ ಸಮಯದಲ್ಲಿ ಮಳೆ ಬಂದ ಕಾರಣ ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದ ವೇಳೆ ಸಿಡಿಲು ತಾಗಿದೆ.

    ಮತ್ತೊಂದು ಘಟನೆಯಲ್ಲಿ ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಕುಮಾರ್ (30) ಎಂಬ ಯುವಕ ಮೃತ ಪಟ್ಟಿದ್ದಾರೆ. ದೇವಾಲಯಕ್ಕೆ ತೆರಳಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ 5 ಜನರು ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಿಡಿದು ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿದೆ. ಅಲ್ಲದೇ ಜಿಲ್ಲೆಯ ರಾಮಸಮುದ್ರ ಬಳಿ ಸಿಡಿಲಿಗೆ ಚಂದ್ರಪ್ಪ, ಸಿದ್ದರಾಮಪ್ಪ ಎಂಬವರಿಗೆ ಸೇರಿದ 12 ಮೇಕೆಗಳು ಸಾವನ್ನಪ್ಪಿವೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸಾಲಗುಂದ ಬಳಿ ಸಿಡಿಲು ಬಡಿದು ಒಬ್ಬ ಯುವಕ ಹಾಗೂ ನಾಲ್ಕು ಮೇಕೆಗಳು ಸಾವನ್ನಪ್ಪಿವೆ. ಸಾಲಗುಂದ ಗ್ರಾಮದ 34 ವರ್ಷದ ಮಹಿಬೂಬ ರಾಜಾ ನಾಯ್ಕ್ ಮೃತ ದುರ್ದೈವಿ. ಮೇಕೆ ಕಾಯಲು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ಸಿಡಿದು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಜೊತೆಗಿದ್ದ ನಾಲ್ಕು ಮೇಕೆಗಳು ಸಾವಿಗೀಡಾಗಿವೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ನಗರದಲ್ಲೂ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಭಾಗದಲ್ಲಿ ಭತ್ತ ಸೇರಿ ವಿವಿಧ ಬೆಳೆ ಹಾನಿಯಾಗಿವೆ.