Tag: Thriller Movie

  • ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    – ಕೊರೊನಾ ಕಂಟಕವನ್ನೂ ಛಿದ್ರಗೊಳಿಸೋ ಲಕ್ಷಣ!

    ಒಂದೊಳ್ಳೆ ಸಿನಿಮಾ ಎಂಟ್ರಿ ಕೊಟ್ರೆ ತಿಂಗಳಿಂದೀಚೆಗೆ ಕವುಚಿಕೊಂಡಿರೋ ಕೊರೊನಾ ಗ್ರಹಣ ತಂತಾನೇ ಕಳಚಿಕೊಳ್ಳುತ್ತೆ. ಇದು ಸಿನಿಮಾ ಪ್ರೇಮಿಗಳ ಒಕ್ಕೊರಲಿನ ಅಭಿಪ್ರಾಯ. ಅದರಲ್ಲಿಯೇ ಮತ್ತೆ ಸಿನಿಮಾ ಮಂದಿರಗಳು ಗಿಜಿಗುಡುತ್ತಾ ಕಳೆಗಟ್ಟಿಕೊಳ್ಳಲೆಂಬ ಹಾರೈಕೆಯೂ ಇದೆ. ಅದೆಷ್ಟೋ ಸಿನಿಮಾ ಪ್ರೇಮಿಗಳ ಈ ಮನದಿಂಗಿತವನ್ನು ನಿಜವಾಗಿಸುವಂಥಾ ಗಾಢ ಭರವಸೆ ಹೊತ್ತು ಆಕ್ಟ್-1978 ಚಿತ್ರದ ಟ್ರೇಲರ್ ಲಾಂಚ್ ಆಗಿದೆ.

    ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಅದಕ್ಕೆ ದಕ್ಕಿರೋ ವೀಕ್ಷಣೆ, ನಾನಾ ದಿಕ್ಕುಗಳಿಂದ ಹರಿದು ಬರುತ್ತಿರೋ ಸದಭಿಪ್ರಾಯಗಳೆಲ್ಲವೂ ಒಂದು ಮಹಾ ಗೆಲುವಿನ ಮುನ್ಸೂಚನೆಯಂತೆಯೂ, ಚಿತ್ರರಂಗದ ಪಾಲಿಗೆ ಸುಗ್ಗಿ ಸಂಭ್ರಮ ಪಡಿಮೂಡಿಕೊಳ್ಳುವ ಶುಭ ಸೂಚನೆಯಂತೆಯೂ ಕಾಣಿಸಲಾರಂಭಿಸಿದೆ.

    ಇದು ಹರಿವು ಮತ್ತು ನಾತಿಚರಾಮಿಯಂಥ ಸದಭಿರುಚಿಯ ಸಿನಿಮಾಗಳನ್ನು ಕೊಡಮಾಡಿರುವ ಮಂಸೋರೆ ನಿರ್ದೇಶನದ ಚಿತ್ರ. ಈ ಹಿಂದೆ ಒಂದೇ ಒಂದು ಪೋಸ್ಟರ್ ಮೂಲಕ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಎಂಥಾದ್ದೆಂಬುದನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಆ ದೆಸೆಯಿಂದಲೇ ಆಕ್ಟ್-1978  ಬಗ್ಗೆ ವಿಶೇಷವಾದ ಕುತೂಹಲ ಮೂಡಿಕೊಂಡಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಿರೋ ಟ್ರೇಲರ್ ಎಲ್ಲ ನಿರೀಕ್ಷೆಗಳನ್ನೂ ಮತ್ತಷ್ಟು ಉದ್ದೀಪಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಮಂಸೋರೆ ಈ ಬಾರಿ ಎಲ್ಲರ ಮನಸುಗಳಿಗೂ ಕೌತುಕದ ಬಾಂಬಿಟ್ಟು ಬಿಟ್ಟಿದ್ದಾರೆ.

    ಮಂಸೋರೆ ಭಿನ್ನ ಪಥದಲ್ಲಿಯೇ ಸದ್ದು ಮಾಡುತ್ತಾ, ಪ್ರತಿ ಹೆಜ್ಜೆಯಲ್ಲಿಯೂ ಹೊಸಾ ಸಾಧ್ಯತೆಗಳತ್ತ ಕೈ ಚಾಚುತ್ತಾ ಈ ನೆಲದ ಕಥೆಗಳಿಗೆ ದೃಶ್ಯ ರೂಪ ನೀಡೋ ಅಪರೂಪದ ನಿರ್ದೇಶಕ. ಅವರು ಈ ಬಾರಿ ಪಕ್ಕಾ ಥ್ರಿಲ್ಲರ್ ಕಥಾನಕದೊಂದಿಗೆ ಅಡಿಯಿರಿಸುತ್ತಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಒಂದು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡೋ ದೃಶ್ಯಾವಳಿಗಳೊಂದಿಗೆ ಈ ಟ್ರೇಲರ್ ಎಲ್ಲರನ್ನೂ ಸೆಳೆದುಕೊಂಡಿದೆ. ಮೈಗೆ ಬಾಂಬು ಕಟ್ಟಿಕೊಂಡಿರೋ ಬಸುರಿ ಹೆಂಗಸಿನ ರೆಬೆಲ್ ಪಾತ್ರದಲ್ಲಿ ಯಜ್ಞ ಶೆಟ್ಟಿ ಅಕ್ಷರಶಃ ಮಿಂಚಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಕೂಡಾ ಅಷ್ಟೇ ಮಜವಾಗಿ ಮೂಡಿ ಬಂದಿರೋದರ ಸೂಚನೆಗಳೂ ಈ ಟ್ರೇಲರ್‌ನಲ್ಲಿ ಕಾಣಿಸಿವೆ.

    ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರೂ ಕೂಡಾ ಕುದಿತವೊಂದನ್ನು ಒಳಗಿಟ್ಟುಕೊಂಡಿರುತ್ತಾರೆ. ಆದರೆ, ಅದರ ವಿರುದ್ಧದ ಹೋರಾಟ, ಕ್ರಾಂತಿಗೆ ಮತ್ಯಾವುದೋ ಮಹಾ ಶಕ್ತಿಯೇ ಧರೆಗಿಳಿದು ಬರಬೇಕೆಂಬಂತೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡಿರುತ್ತಾರೆ. ಆದರೆ ಮನಸು ಮಾಡಿದರೆ ಸಾಮಾನ್ಯರ ಕುದಿತ, ಬೇಗುದಿಗಳೂ ಅಸಾಧಾರಣ ರೀತಿಯಲ್ಲಿ ಆಸ್ಫೋಟಗೊಳ್ಳಬಹುದೆಂಬ ಕಥಾ ಹೂರಣ ಈ ಟ್ರೇಲರ್‍ನಲ್ಲಿ ಧ್ವನಿಸಿದೆ. ಅಂತೂ ಪ್ರತಿ ಕ್ಷಣವೂ ಉಸಿರು ಬಿಗಿಹಿಡಿದು ಕಾಯುವಂಥಾ ಬಿಗುವಿನೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.

    ಈ ಹಿಂದಿನ ಸಿನಿಮಾಗಳನ್ನು ನೋಡಿದ ಬಹುತೇಕರು ನಿರ್ದೇಶಕ ಮಂಸೋರೆಯ ಅಗಾಧ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಅವರೀಗ ಪರಭಾಷಾ ಚಿತ್ರರಂಗಗಳ ಮಂದಿಯೇ ನಿಬ್ಬೆರಗಾಗೋ ಕಥಾ ವಸ್ತುವಿನೊಂದಿಗೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಯಜ್ಞ ಶೆಟ್ಟಿಯನ್ನಂತೂ ಈ ಬಸುರಿ ಹೆಂಗಸಿನ ಪಾತ್ರ ಮತ್ತೊಂದು ಎತ್ತರಕ್ಕೇರಿಸೋದರಲ್ಲಿ, ಈ ಸಿನಿಮಾ ಮೂಲಕವೇ ಅವರ ವೃತ್ತಿ ಬದುಕಿನ ದಿಕ್ಕು ಬದಲಾಗೋದು ಗ್ಯಾರೆಂಟಿ ಅಂತ ನೋಡುಗರೇ ಭವಿಷ್ಯ ನುಡಿಯುತ್ತಿದ್ದಾರೆ. ಒಂದು ಟ್ರೇಲರ್ ಇಂಥಾ ಅಭಿಪ್ರಾಯಗಳನ್ನು ಹೊಮ್ಮಿಸುವಂತೆ ಮಾಡೋದು ಆರಂಭಿಕ ಗೆಲುವು. ಅದು ಆಕ್ಟ್-1978  ಚಿತ್ರಕ್ಕೆ ದಕ್ಕಿದೆ. ಮುಂದೆ ಮಹಾ ಗೆಲುವೊಂದು ಬಾಚಿ ತಬ್ಬಿಕೊಳ್ಳಲು ಕಾದು ನಿಂತಿರುವಂತಿದೆ!

  • ಥ್ರಿಲ್ಲರ್ ಉದ್ದಿಶ್ಯಕ್ಕೆ ಹಾರರ್ ನಂಟು!

    ಥ್ರಿಲ್ಲರ್ ಉದ್ದಿಶ್ಯಕ್ಕೆ ಹಾರರ್ ನಂಟು!

    ಬೆಂಗಳೂರು: ಸದ್ಯ ಹೊಸಾ ಅಲೆಯ ಚಿತ್ರವಾಗಿ ಭಾರೀ ಕ್ಯೂರಿಯಾಸಿಟಿಗೆ ಕಾರಣವಾಗಿರೋ ಚಿತ್ರ ಉದ್ದಿಶ್ಯ. ಹೇಮಂತ್ ಕೃಷ್ಣಪ್ಪ ನಿರ್ದೇಶನ ಮಾಡಿ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡು, ಮುಖ್ಯ ಪಾತ್ರವನ್ನೂ ನಿರ್ವಹಿಸಿರೋ ಈ ಚಿತ್ರದ ಕಥೆಯ ಸುತ್ತಾ ನಾನಾ ಕಥೆಗಳೇ ಹರಿದಾಡುತ್ತಿವೆ!

    ಇದು ಹಾಲಿವುಡ್ ಕಥೆಗಾರ ಬರೆದಿರೋ ಕಥೆಯಾದ್ದರಿಂದ ಉಳಿದೆಲ್ಲದಕ್ಕಿಂತಲೂ ಆ ಬಗೆಗೇ ಪ್ರೇಕ್ಷಕರು ಹೆಚ್ಚಾಗಿ ತಲೆ ಕೆಡಿಸಿಕೊಂಡಿದ್ದಾರೆ. ಅದನ್ನು ಚೂರು ತಣಿಸುತ್ತಲೇ ಮತ್ತಷ್ಟು ಕುತೂಹಲ ಹೆಚ್ಚಿಸುವಂಥಾ ಇಷ್ಟಿಷ್ಟೇ ವಿಚಾರಗಳು ಚಿತ್ರ ತಂಡದ ಕಡೆಯಿಂದ ಹೊರ ಬೀಳುತ್ತಿದೆ!

    ಇದೊಂದು ಥ್ರಿಲ್ಲರ್ ಕಥಾನಕ. ಕ್ಷಣ ಕ್ಷಣವೂ ರೋಚಕ ತಿರುವು ಪಡೆದುಕೊಳ್ಳುತ್ತಾ ಸಾಗುವ ಕಥೆಗೆ ಒಂದೊಂದು ಹಂತದಲ್ಲಿ ಹಾರರ್ ತಿರುವುಗಳೂ ಇರಲಿವೆಯಂತೆ. ಒಬ್ಬ ದುಷ್ಟ ತನ್ನ ಸ್ವಾರ್ಥಕ್ಕಾಗಿ ಹೇಗೆ ಬ್ಲಾಕ್ ಮ್ಯಾಜಿಕ್ಕನ್ನು ಬಳಸಿಕೊಳ್ಳುತ್ತಾನೆಂಬುದರ ಸುತ್ತ ಉಸಿರು ಬಿಗಿ ಹಿಡಿದು ನೋಡುವಂಥಾ ಸನ್ನಿವೇಶಗಳೂ ಇವೆಯಂತೆ. ಇದರನ್ವಯ ಹೇಳೋದಾದರೆ ಬ್ಲಾಕ್ ಮ್ಯಾಜಿಕ್ ಎಂಬುದು ಕೂಡಾ ಈ ಚಿತ್ರದಲ್ಲಿ ಪ್ರಧಾನ ಪಾತ್ರ ವಹಿಸಿದೆ.

    ನಮ್ಮಲ್ಲಿ ಇಂಥಾ ಬ್ಲಾಕ್ ಮ್ಯಾಜಿಕ್ಕನ್ನು ಹಲವಾರು ಬಾರಿ ಚಿತ್ರಗಳ ಮೂಲಕ ತೋರಿಸಲಾಗಿದೆ. ಆದರೆ ಈ ವಿಚಾರವನ್ನು ಹಾಲಿವುಡ್ ಕಥೆಗಾರ ಹೇಗೆ ನಿರೂಪಿಸಿದ್ದಾನೆಂಬ ಬಗ್ಗೆ ಒಂದು ಕುತೂಹಲ ಇದ್ದೇ ಇದೆ. ಈ ಚಿತ್ರದ ಹೊಸತನದ ಗುಟ್ಟೂ ಕೂಡಾ ಅದರಲ್ಲಿಯೇ ಅಡಗಿದೆ. ಅದೇನು ಎಂಬುದು ಈ ವಾರವೇ ಬಯಲಾಗಲಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv