Tag: thokkottu

  • ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆ ಶೀಘ್ರವೇ ಶಿಲಾನ್ಯಾಸ – ರಹೀಂ ಉಚ್ಚಿಲ್

    ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆ ಶೀಘ್ರವೇ ಶಿಲಾನ್ಯಾಸ – ರಹೀಂ ಉಚ್ಚಿಲ್

    ಮಂಗಳೂರು: ನೂತನ ಬ್ಯಾರಿ ಭವನಕ್ಕೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ಸ್ಟಾಂಡ್ ಬಳಿ ಅಂದಾಜು 3 ಕೋಟಿ ಮೌಲ್ಯದ 0.25 ಎಕ್ರೆ ಜಮೀನು ಸರಕಾರದಿಂದ ಅಧಿಕೃತವಾಗಿ ಬ್ಯಾರಿ ಭವನ ನಿರ್ಮಾಣಕ್ಕೆ ಮಂಜೂರಾಗಿದ್ದು ಜನಪ್ರತಿನಿಧಿಗಳು ಹಾಗೂ ಬ್ಯಾರಿ ಭಾಷಿಕ ಸಮುದಾಯದ ಪ್ರಮುಖರನ್ನು ಕರೆದು ಶೀಘ್ರದಲ್ಲಿಯೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರಹೀಂ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈಗಾಗಲೇ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಬ್ಯಾರಿ ಭವನಕ್ಕೆ ನೀರುಮಾರ್ಗದ ಬೈತುರ್ಲಿ ಗ್ರಾಮದಲ್ಲಿ 0.25 ಎಕರೆ ಜಾಗವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಖರೀದಿ ಮಾಡಲಾಗಿದ್ದು, ಇಲ್ಲಿ ಬ್ಯಾರಿ ಭವನಕ್ಕೆ ನೀಲನಕ್ಷೆ ತಯಾರಾಗಿತ್ತು. ಈ ನಿವೇಶನದ ಆಸುಪಾಸಿನಲ್ಲಿ ಬ್ಯಾರಿ ಭಾಷಿಕರ ಜನಸಂಖ್ಯೆ ತೀರಾ ವಿರಳವಾಗಿದ್ದು, ಭವನ ನಿರ್ಮಾಣಕ್ಕೆ ಉಪಯುಕ್ತವಾದ ನಿವೇಶನ ಅಲ್ಲ ಎಂದು ಮನಗಂಡ ಪ್ರಸಕ್ತ ಸಾಲಿನ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಕ್ಷಣ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಗಾಗಲೇ ತುಳು, ಕೊಂಕಣಿ ಸೇರಿದಂತೆ ಇತರ ಅಕಾಡೆಮಿಗಳಿಗೆ ಸರಕಾರದಿಂದ ಉಚಿತವಾಗಿ ಜಮೀನು ನೀಡಿದಂತೆ ಬ್ಯಾರಿ ಅಕಾಡೆಮಿಗೂ ನೀಡಬೇಕೆಂದು ಮನವಿ ಮಾಡಿದ್ದರು.

    ಅದರಂತೆ ಇದೀಗ ಅತೀ ಹೆಚ್ಚು ಬ್ಯಾರಿ ಭಾಷಿಕರನ್ನು ಒಳಗೊಂಡ ತೊಕ್ಕೊಟ್ಟು ಪರಿಸರದಲ್ಲಿಯೇ ನಿವೇಶವನವನ್ನು ಉಚಿತವಾಗಿ ಒದಗಿಸುವ ಮೂಲಕ ‘ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಎಂಬ ನೀತಿಯಂತೆ ನಡೆದುಕೊಂಡಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳು ಸೇರಿದಂತೆ ಕರ್ನಾಟಕ ಸರಕಾರಕ್ಕೆ ರಹೀಂ ಉಚ್ಚಿಲ್ ಅಭಿನಂದನೆ ಹಾಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    ಈಗಾಗಲೇ ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ನಿವೇಶನವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿರುಗಿಸಲಾಗುವುದು ಹಾಗೂ ಅಕಾಡೆಮಿಯಿಂದ ಮೂಡಾಕ್ಕೆ ಪಾವತಿಯಾದ ಮೊತ್ತವನ್ನು ಮೂಡಾದಿಂದ ಮರಳಿ ಪಡೆದು ಅಕಾಡೆಮಿಯ ವಿವಿಧ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಈಗಾಗಲೇ ಮಾಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ. ರವಿಯವರ ಸಹಕಾರದ ಪರಿಣಾಮ ಮುಖ್ಯಮಂತ್ರಿಗಳು ಬ್ಯಾರಿ ಭವನಕ್ಕೆ ಈಗಾಗಲೇ 6 ಕೋಟಿಯನ್ನು ಮಂಜೂರು ಮಾಡಿ 3 ಕೋಟಿ ರೂ ಬಿಡುಗಡೆ ಮಾಡಿದ್ದಾರೆ.  ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು ಸುಮಾರು 6 ರಿಂದ 12 ತಿಂಗಳ ಒಳಗಾಗಿ ಬ್ಯಾರಿ ಭವನ ಅಕಾಡೆಮಿ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.

    ಈ ಬ್ಯಾರಿ ಭವನ ವಿಶಾಲವಾದ ಸಭಾಂಗಣ, ಮಿನಿಹಾಲ್, ಅಕಾಡೆಮಿಯ ಕಛೇರಿ, ಸಾರ್ವಜನಿಕ ಗ್ರಂಥಾಲಯ, ವಸ್ತು ಸಂಗ್ರಹಾಲಯವನ್ನು ಹೊಂದಿರುತ್ತದೆ. ಈ ಭವನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನಕ್ಕೆ ಬರುವುದರಿಂದ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.

  • ಚಲಿಸುತ್ತಿದ್ದ ಲಾರಿಯಲ್ಲಿ ಗ್ಯಾಸ್ ಸೋರಿಕೆ‌ – ತೊಕ್ಕೊಟ್ಟು ಬಳಿ ತಪ್ಪಿದ ಅನಾಹುತ

    ಚಲಿಸುತ್ತಿದ್ದ ಲಾರಿಯಲ್ಲಿ ಗ್ಯಾಸ್ ಸೋರಿಕೆ‌ – ತೊಕ್ಕೊಟ್ಟು ಬಳಿ ತಪ್ಪಿದ ಅನಾಹುತ

    ಮಂಗಳೂರು: ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯಲ್ಲಿ ಗ್ಯಾಸ್ ಸೋರಿಕೆಯಾದ ಘಟನೆ ಮಂಗಳೂರಿನ ತೊಕ್ಕೊಟ್ಟು ಬಳಿ ನಡೆದಿದೆ. ನಗರದ ಬೈಕಂಪಾಡಿಯಿಂದ ಕೇರಳ ಕಡೆಗೆ ಅಡುಗೆ ಅನಿಲದ ಸಿಲಿಂಡರನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಗ್ಯಾಸ್ ಸೋರಿಕೆ ಕಾಣಿಸಿಕೊಂಡಿದೆ.

    ಈ ವಿಚಾರ ಗೊತ್ತಾದ ತಕ್ಷಣ ಚಾಲಕ ಪರಿಶೀಲಿಸಿದ್ದು, ಒಂದು ಸಿಲಿಂಡರ್ ಸೋರಿಕೆ ಆಗಿರೋದು ಬೆಳಕಿಗೆ ಬಂದಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸಿದ್ದಾರೆ‌. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಲ‌ಕಾಲ‌ ಸಂಚಾರ ಅಸ್ತವ್ಯಸ್ತವಾಗಿತ್ತು.

  • 5 ಸಾವಿರ ಕೊಡಿ ಅಂತಾ ಬಂದು ಬೆತ್ತಲೆಯಾಗಿ ಹನಿಟ್ರ್ಯಾಪ್ ಮಾಡಿದ್ಳು!

    5 ಸಾವಿರ ಕೊಡಿ ಅಂತಾ ಬಂದು ಬೆತ್ತಲೆಯಾಗಿ ಹನಿಟ್ರ್ಯಾಪ್ ಮಾಡಿದ್ಳು!

    ಮಂಗಳೂರು: ಯುವಕನೊಬ್ಬನನ್ನು ತಂಡವೊಂದು ಹನಿಟ್ರ್ಯಾಪ್ ಮಾಡಿ ದರೋಡೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ವಿಟ್ಲ ಸಮೀಪದ ಕುಡ್ತಮುಗೇರು ನಿವಾಸಿ ಮಹಮ್ಮದ್ ಹನೀಫ್ ಥಳಿತಕ್ಕೊಳಗಾಗಿ ದರೋಡೆಗೆ ಒಳಗಾದವನಾಗಿದ್ದು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿ ಸೇರಿ ಐವರನ್ನು ಬಂಧಿಸಿದ್ದಾರೆ.

    ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯ ಆಗಿದ್ದ ಪಜ್ಜು ಅಲಿಯಾಸ್ ಸುಮೈಯ್ಯಾ ಎಂಬಾಕೆ ಕಳೆದ ಶನಿವಾರ ರಾತ್ರಿ ಮಹಮ್ಮದ್ ಬಳಿ 5 ಸಾವಿರ ರೂಪಾಯಿ ಬೇಕೆಂದು ಹೇಳಿ ಕುಡ್ತಮುಗೇರಿನ ಫ್ಲಾಟ್ ಗೆ ಆಗಮಿಸಿದ್ದಳು. ಆದರೆ ಇವರನ್ನು ಫಾಲೋ ಮಾಡಿಕೊಂಡು ಟವೇರಾದಲ್ಲಿ ಬಂದಿದ್ದ ಐವರ ತಂಡ ಯುವತಿಯನ್ನು ಮಹಮ್ಮದ್ ಜೊತೆ ಬೆತ್ತಲೆಯಾಗಿ ನಿಲ್ಲಿಸಿ ಫೋಟೊ ತೆಗೆದಿದ್ದಾರೆ. ಆನಂತರ 5 ಲಕ್ಷ ರೂ. ಕೊಡುವಂತೆ ಪೀಡಿಸಿದ್ದಲ್ಲದೆ ರಾತ್ರಿ 2 ಗಂಟೆಯವರೆಗೂ ಥಳಿಸಿದ್ದಾರೆ.

    ಕೊನೆಗೆ ಮನೆಯ ಕಪಾಟು ಒಡೆದು 60 ಗ್ರಾಮ್ ಚಿನ್ನಾಭರಣ, 17 ಸಾವಿರ ರೂಪಾಯಿ ನಗದು ಹಾಗೂ ಮಹಮ್ಮದ್ ಬಳಸುತ್ತಿದ್ದ ಸ್ವಿಫ್ಟ್ ಕಾರನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ರೆ ಕೊಲ್ಲುವ ಬೆದರಿಕೆಯೊಡ್ಡಿ ತಂಡ ಅಲ್ಲಿಂದ ಪರಾರಿಯಾಗಿತ್ತು. ಆ ಬಳಿಕ ಮಹಮ್ಮದ್ ಸಂಬಂಧಿಕರಿಗೆ ವಿಷಯ ತಿಳಿಸಿದ್ದು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಫೌಜಿಯಾ ಮತ್ತು ಐವರ ತಂಡ ಈ ಕೃತ್ಯ ಎಸಗಿದ್ದಾಗಿ ದೂರು ದಾಖಲಾಗಿದ್ದು ವಿಟ್ಲ ಠಾಣೆಯಲ್ಲಿ ಹನಿಟ್ರ್ಯಾಪ್ ಮತ್ತು ದರೋಡೆ ಪ್ರಕರಣ ದಾಖಲಾಗಿದೆ.

    ಬಂಧಿತರು: ತೊಕ್ಕೊಟ್ಟು ಕೆಸಿ ರೋಡ್ ಕಾಲೋನಿ ನಿವಾಸಿ ಅಶ್ರಫ್ ಸಂಶೀರ್ (27), ಪರಂಗಿಪೇಟೆ ಅಮ್ಮೆಮ್ಮಾರ್ ನಿವಾಸಿ ಜೈನುದ್ದೀನ್, ತೊಕ್ಕೊಟ್ಟು ಉಳ್ಳಾಲ ಮಾರ್ಗತಳಿ ನಿವಾಸಿ ಮಹಮ್ಮದ್ ಇಕ್ಬಾಲ್ (27), ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಉಬೈದುಲ್ಲಾ (32) ಮತ್ತು ಸಕಲೇಶಪುರ ಅರೆಹಳ್ಳಿ ಸಂತೋಷ ನಗರ ನಿವಾಸಿ ಪಜ್ಜು ಯಾನೆ ಪರ್ಝಾನ ಅಲಿಯಾಸ್ ಸುಮೈಯ್ಯ (26) ಬಂಧಿತರು. ಇವರ ಕೈಯಲ್ಲಿದ್ದ ಪಾಸ್ ಪೋರ್ಟ್, 6 ಮೊಬೈಲ್, 2 ಕಾರು, 8 ಗ್ರಾಂ ಚಿನ್ನ, 7.50 ಲಕ್ಷ ರೂಪಾಯೊ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.