Tag: Thiruvanathapuram

  • ಶಬರಿಮಲೆ ಪ್ರತಿಭಟನೆಯಿಂದ ಹುಂಡಿ ಆದಾಯಕ್ಕೆ ಭಾರೀ ಹೊಡೆತ: ಕಳೆದ ವರ್ಷ ಎಷ್ಟು? ಈ ಬಾರಿ ಎಷ್ಟು ಸಂಗ್ರಹವಾಗಿದೆ?

    ಶಬರಿಮಲೆ ಪ್ರತಿಭಟನೆಯಿಂದ ಹುಂಡಿ ಆದಾಯಕ್ಕೆ ಭಾರೀ ಹೊಡೆತ: ಕಳೆದ ವರ್ಷ ಎಷ್ಟು? ಈ ಬಾರಿ ಎಷ್ಟು ಸಂಗ್ರಹವಾಗಿದೆ?

    ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆಸಿದ್ದ ಪ್ರತಿಭಟನೆ ಈಗ ದೇವಾಲಯದ ಆದಾಯದ ಮೇಲೆ ಪರಿಣಾಮ ಬೀರಿದೆ.

    ಹೌದು, ಶಬರಿಮಲೆ ದೇಗುಲಕ್ಕೆ ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಪ್ರವೇಶ ಕಲ್ಪಿಸಿತ್ತು. ಸುಪ್ರಿಂ ತೀರ್ಪಿನ ವಿರುದ್ಧ ರೊಚ್ಚಿಗೆದ್ದ ಭಕ್ತರು ಮಹಿಳೆಯರನ್ನು ಯಾವುದೇ ಕಾರಣಕ್ಕೂ ದೇವಾಲಯಕ್ಕೆ ಬಿಡುವುದಿಲ್ಲವೆಂದು ಉಗ್ರವಾಗಿಯೇ ಪ್ರತಿಭಟಿಸಿದ್ದರು. ಅಲ್ಲದೇ ದೇವಾಲಯದ ಹುಂಡಿಗೆ ಯಾವೊಬ್ಬ ಹಿಂದುವೂ ಹಣ ಹಾಕಬಾರದೆಂಬ ಚಳುವಳಿಯನ್ನು ಸಹ ಪ್ರಾರಂಭಿಸಿದ್ದರು.

    ಚಳುವಳಿ ಆರಂಭಿಸಿದ್ದರ ಪರಿಣಾಮ ಶಬರಿಮಲೆ ದೇವಾಲಯದ ಆದಾಯದಲ್ಲಿ ಭಾರೀ ಕುಸಿತ ಕಂಡಿದೆ. ದೇವಾಲಯದ ಹುಂಡಿಗಳಲ್ಲಿ ಭಕ್ತರು `ಶಬರಿಮಲೆ ರಕ್ಷಿಸಿ’ ಹಾಗೂ `ಸ್ವಾಮಿಯೇ ಶರಣಂ ಅಯ್ಯಪ್ಪ’ ಎನ್ನುವ ಚೀಟಿಗಳನ್ನು ಹುಂಡಿಗಳಲ್ಲಿ ತುಂಬಿಸಿದ್ದರಿಂದ ಸಂಗ್ರಹವಾಗಬೇಕಾಗಿದ್ದ ಹಣದ ಮೊತ್ತ ಕುಸಿತಗೊಂಡಿದೆ.

    ಯಾವ ದಿನ ಎಷ್ಟು ಆದಾಯ?
    ಕಳೆದ ಬಾರಿಗೆ ಹೋಲಿಸಿದರೆ ಒಟ್ಟು 44.5 ಲಕ್ಷ ರೂಪಾಯಿಗಳಷ್ಟು ಆದಾಯ ಕಡಿಮೆಯಾಗಿದೆ. ಕಳೆದ ವರ್ಷ ಮೊದಲ ದಿನವೇ ಬರೊಬ್ಬರಿ 8.42 ಲಕ್ಷ ರೂ. ಸಂಗ್ರಹವಾಗಿದ್ದರೆ, ಈ ಬಾರಿ 4.83 ಲಕ್ಷ ರೂ. ಸಂಗ್ರಹವಾಗಿದೆ. ಈ ಬಾರಿ ಎರಡನೇ ದಿನ 19.30 ಲಕ್ಷ ರೂ. ಸಂಗ್ರಹವಾಗಿದ್ದರೆ, ಕಳೆದ ಬಾರಿ ಈ ದಿನ 45.59 ಲಕ್ಷ ರೂ. ಸಂಗ್ರವಾಗಿತ್ತು. 2017ರಲ್ಲಿ ಮೂರನೇ ದಿನ 32.3 ಲಕ್ಷ ರೂ. ಸಂಗ್ರಹವಾಗಿದ್ದರೆ, ಈ ವರ್ಷ ಕೇವಲ 17.51 ಲಕ್ಷ ರೂ. ಮಾತ್ರ ಸಂಗ್ರಹವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಿಂಸಾರೂಪಕ್ಕೆ ತಿರುಗಿದ ಶಬರಿಮಲೆ ಪ್ರತಿಭಟನೆ: ಗುಂಡಾಗಿರಿ ಪ್ರದರ್ಶಿಸಿದ ಪೊಲೀಸರು!

    ಹಿಂಸಾರೂಪಕ್ಕೆ ತಿರುಗಿದ ಶಬರಿಮಲೆ ಪ್ರತಿಭಟನೆ: ಗುಂಡಾಗಿರಿ ಪ್ರದರ್ಶಿಸಿದ ಪೊಲೀಸರು!

    ತಿರುವನಂತಪುರಂ: ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆಗೆ ಮಹಿಳೆಯ ಪ್ರವೇಶ ವಿಚಾರವಾಗಿ ಶಬರಿಮಲದ ನಿಳಕ್ಕಲ್ ಬಳಿ ನಡೆಯುತ್ತಿದ್ದ ಪ್ರತಿಭಟನೆ ಉಗ್ರ ರೂಪ ಪಡೆದುಕೊಂಡಿದೆ.

    ಹೌದು, ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಮಹಿಳೆಯರು ಇಂದು ಶಬರಿಮಲೆಯ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ಮಹಿಳೆಯರಿಗೆ ಮಾತ್ರ ಯಾವುದೇ ಕಾರಣಕ್ಕೂ ಮಣಿಕಂಠನ ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಪ್ರಭಾವಿ ನಾಯರ್ ಸಮಾಜ, ಹಿಂದೂಪರ ಸಂಘಟನೆಗಳು, ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದಿದೆ.

    ಶಬರಿಗಿರಿ ತಲುಪುವ ಮುಖ್ಯ ದ್ವಾರವಾದ ನಿಳಕ್ಕಲ್‍ನಲ್ಲಿ ಬೆಳಗ್ಗೆಯಿಂದಲೂ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿಂದ 20 ಕಿ.ಮೀ. ಭಕ್ತರು ಕಾಲು ದಾರಿಯಲ್ಲೇ ಅಯ್ಯಪ್ಪನ ದೇಗುಲ ತಲುಪಬೇಕಿದೆ. ಇದರ ಜೊತೆ ಅಯ್ಯಪ್ಪನ ದೇಗುಲದ ದ್ವಾರ ತೆರೆಯಲು ಸಮಯ ಸಮೀಸುತ್ತಿದ್ದಂತೆಯೇ ಉದ್ರಿಕ್ತರು ಪ್ರತಿಭಟನೆಯನ್ನು ಹಿಂಸಾರೂಪಕ್ಕೆ ಬದಲಾಯಿಸಿದರು. ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಮಾರ್ಗಮಧ್ಯದಲ್ಲೇ ತಡೆದರು.

    ಇಂದು ಏನಾಯ್ತು?
    ಇಂದು ಬೆಳಗ್ಗೆ ಸ್ವತಃ ಮಹಿಳೆಯರಿಂದಲೇ ನಿಳಕ್ಕಲ್ ಹಾಗೂ ಪಂಪಾದಲ್ಲಿ ಪ್ರತಿಭಟನೆ ನಡೆಯಿತು. ಅಯ್ಯಪ್ಪನ ಸನ್ನಿಧಿಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದು ಸರಿಯಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು. ಅಯ್ಯಪ್ಪನ ದರ್ಶನ ಪಡೆಯಲು ಮಕ್ಕಳೊಂದಿಗೆ ತೆರಳಿದ್ದ ಮಹಿಳೆಗೆ ಪ್ರತಿಭಟನಾಕಾರರು ದಾರಿಯಲ್ಲೇ ದಿಗ್ಬಂಧನ ಹಾಕಿದರು. ಇದರಿಂದ ಆತಂಕಕ್ಕೀಡಾದ ಮಹಿಳೆ ಮಗುವಿನೊಂದಿಗೆ ಹಿಂತಿರುಗಿದರು.

    ಮಧ್ಯಾಹ್ನ 2 ಗಂಟೆ ವೇಳೆಗೆ ಪ್ರತಿಭಟನೆ ಹಿಂಸಾರೂಪ ಪಡೀತು. ವರದಿಗೆ ತೆರಳಿದ್ದ ಇಂಗ್ಲೀಷ್ ನ್ಯೂಸ್ ಚಾನೆಲ್‍ಗಳ ವರದಿಗಾರ್ತಿಯರ ಮೇಲೆ ಹಲ್ಲೆ ನಡೆಸಲಾಯಿತು. ಪತ್ರಕರ್ತೆಯರು ಕಾರು ಹಾಗೂ ಪೊಲೀಸ್ ವ್ಯಾನ್‍ನಲ್ಲಿ ಭದ್ರತೆ ಪಡೆದರೂ, ಉದ್ರಿಕ್ತರು ದಾಳಿ ನಡೆಸಿದರು. ಮಧ್ಯಾಹ್ನ 3.45ರ ವೇಳೆಗೆ ಅಯ್ಯಪ್ಪನ ಸನ್ನಿಧಾನ ರಣಾಂಗಣವಾಗಿ ಮಾರ್ಪಟ್ಟಿತ್ತು. ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಕಲ್ಲುತೂರಿದರು. ಪರಿಸ್ಥಿತಿ ಮತ್ತಷ್ಟು ವಿಷಮಿಸಿ ಹಿಂಸಾಚಾರ ಭುಗಿಲೆದ್ದಿತ್ತು. ಬೆಳಗ್ಗಿನಿಂದಲೂ ಎಲ್ಲವನ್ನೂ ಸಮಚಿತ್ತದಿಂದಲೇ ನಿಭಾಯಿಸಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಬೀಸಿದರು.

    ಪೊಲೀಸರ ಲಾಠಿ ಚಾರ್ಜ್ ನಿಂದ ಮತ್ತಷ್ಟು ರೊಚ್ಚಿಗೆದ್ದ ಪ್ರತಿಭಟನಾಕಾರರು ಬೈಕ್‍ವೊಂದನ್ನ ಜಖಂಗೊಳಿಸಿ, ಕೇರಳ ಸಾರಿಗೆ ಬಸ್ ಮೇಲೆ ಕಲ್ಲು ತೂರಿ ಗ್ಲಾಸ್‍ಗಳನ್ನ ಹೊಡೆದು ಹಾಕಿದರು. ಪೊಲೀಸರ ಸರ್ಪಗಾವಲನ್ನೂ ಲೆಕ್ಕಿಸದೇ, ಸುಪ್ರೀಂಕೋರ್ಟ್ ತೀರ್ಪಲ್ಲ. ಸಂಪ್ರದಾಯವೇ ಮುಖ್ಯ ಎಂದು ರೊಚ್ಚಿಗೆದ್ದರು. ಈ ಮಧ್ಯೆ ಸ್ವಾಮಿ ಅಯ್ಯಪ್ಪ ಶಬರಿಮಲೆ ಸುತ್ತಲಿನ ಬುಡಕಟ್ಟು ಜನರ ಆರಾಧ್ಯ ದೈವವಾಗಿದ್ದು, ಶತಮಾನಗಳಿಂದ ಆಚರಿಸಿಕೊಂಡು ಬಂದ ಸಂಪ್ರದಾಯಗಳನ್ನು ಸರ್ಕಾರ ನಾಶಮಾಡಲು ಹೊರಟಿದೆ ಎಂದು ಬುಡಕಟ್ಟು ಸಮುದಾಯದ ಮುಖಂಡರು ಸಹ ಕಿಡಿಕಾರಿದರು.

    ಪೊಲೀಸರಿಂದ ಗುಂಡಾ ವರ್ತನೆ:
    ಸಂಜೆ ವೇಳೆಗೆ ಪ್ರತಿಭಟನೆ ಹಿಂಸಾರೂಪ ಪಡೆದ ಬೆನ್ನಲ್ಲೇ, ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ್ದರು. ಇದಾದ ಬಳಿಕ ಪಂಪಾದ ಬಳಿ ಪ್ರತಿಭಟನಾಕಾರರು ನಿಲ್ಲಿಸಿದ್ದ ವಾಹನಗಳ ಮೇಲೆ ಪೊಲೀಸರು ಗುಂಡಾ ವರ್ತನೆ ತೋರಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ನಿಲ್ಲಿಸಿದ್ದ ಬೈಕುಗಳನ್ನು ಜಂಖಗೊಳಿಸಿದ್ದಾರೆ. ಅಲ್ಲದೇ ಅನೇಕ ವಾಹನಗಳನ್ನು ಮನಸೋ ಇಚ್ಛೆ ನಾಶಮಾಡಿದ್ದಾರೆ. ಪೊಲೀಸರ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಪ್ರತಿಭಟನೆ ಮತ್ತಷ್ಟು ಕಾವು ಪಡೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಳೆಯ ಆರ್ಭಟಕ್ಕೆ ಕೇರಳದಲ್ಲಿ 20 ಬಲಿ- ಕೊಚ್ಚಿ ವಿಮಾನ ನಿಲ್ದಾಣ ಬಂದ್

    ಮಳೆಯ ಆರ್ಭಟಕ್ಕೆ ಕೇರಳದಲ್ಲಿ 20 ಬಲಿ- ಕೊಚ್ಚಿ ವಿಮಾನ ನಿಲ್ದಾಣ ಬಂದ್

    ತಿರುವನಂತಪುರಂ: ಕೇರಳ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 20 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವುಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಪೆರಿಯಾರ್ ನದಿಯು 2013ರ ನಂತರ ಇದೇ ಮೊದಲ ಬಾರಿಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಅವಾಂತರಗಳಿಗೆ ಎಡೆಮಾಡಿಕೊಟ್ಟಿದೆ. ಮಾಹಿತಿಗಳ ಪ್ರಕಾರ ಇಡುಕ್ಕಿ ಜಿಲ್ಲೆಯ 11 ಮಂದಿ, ಮಲಪ್ಪುರಂನ 6 ಮಂದಿ, ಕೋಜಿಕೋಡು 2 ಹಾಗೂ ವಯನಾಡ್ ಜಿಲ್ಲೆಯಲ್ಲಿ 1 ಮಂದಿ ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಅಲ್ಲದೇ ಪಲಕ್ಕಾಡ್, ವಯನಾಡ್ ಹಾಗೂ ಕೋಜಿಕೋಡು ಜಿಲ್ಲೆಗಳಲ್ಲಿ 7 ಮಂದಿ ನಾಪತ್ತೆಯಾಗಿದ್ದರೆಂದು ತಿಳಿದು ಬಂದಿದೆ.

    ನಾಪತ್ತೆಯಾದವರ ಶೋಧಕ್ಕೆ ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆ  ನಡೆಸುತ್ತಿದೆ. ರಾಜ್ಯ ಸರ್ಕಾರವು ತುರ್ತು ಪರಿಸ್ಥಿತಿ ನಿಯಂತ್ರಣಕ್ಕಾಗಿ ಸೇನಾ ಹಾಗೂ ಎನ್.ಡಿ.ಆರ್.ಎಫ್ ಮೊರೆಹೋಗಿದ್ದು, ಸಾಕಷ್ಟು ರಕ್ಷಣಾ ತಂಡಗಳು ಈಗಾಗಲೇ ಕಾರ್ಯಚರಣೆ ನಡೆಸುತ್ತಿವೆ.

    ಇಡುಕ್ಕಿ ಡ್ಯಾಂ ನಿಂದ ನೀರನ್ನು ಹೊರಬಿಟ್ಟ ಪರಿಣಾಮ ಪೆರಿಯಾರ್ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ನೀರು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದೊಳಗೂ ನುಗ್ಗಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ವಿಮಾನ ನಿಲ್ದಾಣವನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಕೊಚ್ಚಿಯಿಂದ ತೆರಳಬೇಕಿದ್ದ ಹಾಗೂ ಆಗಮಿಸುವ ವಿಮಾನಗಳನ್ನು ಮಾರ್ಗಮಧ್ಯೆ ಬದಲಾವಣೆಗೊಳ್ಳುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಸುರಿಯುತ್ತಿರುವ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದು, ಇಂದಿನಿಂದ ಎರ್ನಾಕುಲಂನ ಇಡಮಳಯಾರ್ ಜಲಾಶಯ ಹಾಗೂ ಕೋಜಿಕೋಡುವಿನ ಕಕ್ಕಾಯಂ ಜಲಾಶಯಗಳ ನೀರನ್ನು ಹೊರಬಿಡಲಾಗಿದೆ.

    ರಾಜ್ಯದ ಒಟ್ಟು 22 ಜಲಾಶಯಗಳು ತುಂಬಿದ್ದರ ಪರಿಣಾಮ ಜಲಾಶಯಗಳಿಂದ ಹೆಚ್ಚುವರಿ ಪ್ರಮಾಣದ ನೀರನ್ನು ನೀರನ್ನು ಹೊರಬಿಟ್ಟಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಇಡುಕ್ಕಿ ಜಲಾಶಯವು ಬರೊಬ್ಬರಿ 26 ವರ್ಷಗಳ ಬಳಿಕ ತುಂಬಿದ್ದರ ಪರಿಣಾಮ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿದು ಬಿಡಲಾಗಿದೆ.

    ಕೇರಳ ಸರ್ಕಾರವು ಮುಂಜಾಗ್ರತ ಕ್ರಮವಾಗಿ ಕೋಜಿಕೋಡು, ವಯನಾಡ್, ಪಲಕ್ಕಾಡ್, ಇಡುಕ್ಕಿ, ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಯ ಶಾಲಾ-ಕಾಲೇಜುಗಳಿ ರಜೆ ಘೋಷಿಸಿದೆ. ಅಲ್ಲದೇ ಅಲಪುಜಾದಲ್ಲಿ ನಡೆಯಲಿರುವ ಪ್ರಸಿದ್ಧ ದೋಣಿ ಸ್ಪರ್ಧೆಯನ್ನು ಸಹ ಮುಂದೂಡಲಾಗಿದೆ.

    https://twitter.com/pranavkichu10/status/1027470911111229440

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬಿಂದಿ ಧರಿಸಿದ್ದಕ್ಕೆ ಮದರಸಾದಿಂದ್ಲೇ ಹೊರಹಾಕಿದ ಆಡಳಿತ ಮಂಡಳಿ!

    ಬಿಂದಿ ಧರಿಸಿದ್ದಕ್ಕೆ ಮದರಸಾದಿಂದ್ಲೇ ಹೊರಹಾಕಿದ ಆಡಳಿತ ಮಂಡಳಿ!

    ತಿರುವನಂತಪುರಂ: 5ನೇ ತರಗತಿ ಓದುತ್ತಿದ್ದ ಬಾಲಕಿ ಬಿಂದಿ ಧರಿಸಿದ್ದಕ್ಕೆ ಮದರಸಾದಿಂದಲೇ ಹೊರ ಹಾಕಿದ ಘಟನೆ ಉತ್ತರ ಕೇರಾಳ ರಾಜ್ಯದಲ್ಲಿ ನಡೆದಿದೆ.

    ಕಿರು ಚಲನಚಿತ್ರದಲ್ಲಿ 10 ವರ್ಷದ ಬಾಲಕಿ ಬಿಂದಿ ಧರಿಸಿ ಅಭಿನಯಿಸಿದ್ದಕ್ಕಾಗಿ, 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಮದರಾಸದ ಆಡಳಿತ ಮಂಡಳಿ ಶಾಲೆಯಿಂದಲೇ ಹೊರಹಾಕಿದೆ.

    ಬಾಲಕಿಯನ್ನು ಮದರಸಾದಿಂದ ಹೊರಹಾಕಿದ ಹಿನ್ನೆಲೆಯಲ್ಲಿ ಆಕೆಯ ತಂದೆ ಉಮ್ಮರ್ ಮಲಾಯಿಲ್ ರವರು ಘಟನೆ ಕುರಿತು ತಮ್ಮ ಫೇಸ್ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದವರು ಬಾಲಕಿಯ ತಂದೆಗೆ ಬೆಂಬಲ ಸೂಚಿಸಿ, ಮದರಾಸ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಫೇಸ್ಬುಕ್ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅವರು ಹಾಕಿದ್ದ ಪೋಸ್ಟನ್ನು ಸುಮಾರು 7,500 ಮಂದಿ ಲೈಕ್ ಮಾಡಿ 2,700 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದರು.

    https://www.facebook.com/permalink.php?story_fbid=2009935685987809&id=100009141911364

    ಉಮ್ಮರ್ ರವರು ತಮ್ಮ ಫೇಸ್ಬುಕ್‍ನಲ್ಲಿ `ನನ್ನ ಮಗಳು ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಕೌಶಲ್ಯತೆಯನ್ನು ಹೊಂದಿದ್ದಾಳೆ. ಆಕೆ ನೃತ್ಯ, ಹಾಡುಗಾರಿಕೆ ಹಾಗೂ ಅಭಿನಯದಲ್ಲಿ ಆಸಕ್ತಿ ಹೊಂದಿದ್ದು, ಅನೇಕ ಸ್ಪರ್ಧೆಗಳಲ್ಲಿ ಸಹ ಸ್ಪರ್ಧಿಸಿ ಮದರಸಾಗೆ ಹೆಸರು ತಂದಿದ್ದಾಳೆ. ಅವಳ ನಿಷ್ಕಲ್ಮಶ ಪ್ರತಿಭೆಗೆ ಮದರಾಸವು ಅವಮಾನ ಮಾಡಿದೆ. ಆಕೆ ಮಾಡಿದ ತಪ್ಪಾದರೂ ಏನು?’ ಕೇವಲ ಗಂಧದ ಬಿಂದಿ ಧರಿಸಿದ್ದಕ್ಕೆ ಆಡಳಿತ ಮಂಡಳಿ ಮದರಾಸದಿಂದಲೇ ಹೊರಹಾಕಿದೆ ಎಂದು ಮಲಿಯಾಳಂ ಭಾಷೆಯಲ್ಲಿ ಪೋಸ್ಟ್ ಮಾಡಿದ್ದರು.

    ಘಟನೆ ಸಂಬಂಧ ಪ್ರತಿಕ್ರಿಯಿಸಿ ಮದರಸಾ ಆಡಳಿತ ಮಂಡಳಿಯು ಬಿಂದಿ ಧರಿಸಿವುದು ಇಸ್ಲಾಂನಲ್ಲಿ ನಿಷಿದ್ಧವಾಗಿದೆ. ಆದ್ದರಿಂದ ಬಾಲಕಿಯನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ.