Tag: thiruvanantapura

  • ದೈವದ ಮಡಿಲಲ್ಲಿ ಬೆಚ್ಚಗೆ ಕುಳಿತ ಕಂದಮ್ಮನ ಫೋಟೋ ವೈರಲ್

    ದೈವದ ಮಡಿಲಲ್ಲಿ ಬೆಚ್ಚಗೆ ಕುಳಿತ ಕಂದಮ್ಮನ ಫೋಟೋ ವೈರಲ್

    – ಮಗುವಿನ ಮುಗ್ಧತೆಗೆ ಮೂಕವಿಸ್ಮಿತರಾದ ನೆಟ್ಟಿಗರು

    ಕಣ್ಣೂರು: ಕಳೆದ ಎರಡು ದಿನಗಳಿಂದ ದೈವದ ಮಡಿಲಲ್ಲಿ ಹೆಣ್ಣು ಮಗುವೊಂದು ಹೋಗಿ ಕುಳಿತುಕೊಳ್ಳುವ ದೃಶ್ಯ ಹಾಗೂ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವರು ವಾಟ್ಸಪ್ ಸ್ಟೇಟಸ್‍ಗೆ ಹಾಕಿ ಸಂಭ್ರಮಿಸುತ್ತಿದ್ದಾರೆ.

    ಹೌದು. ಕಣ್ಣೂರು ಜಿಲ್ಲೆಯ ಅಂಜಾರಕ್ಕಂಡಿಯಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಈ ಫೋಟೋಗಳನ್ನು ಸೆರೆ ಹಿಡಿದಿರೋದು ಅಭಿಜಿತ್ ಕಾನುಮಾರತ್ತ ಎಂಬ ಛಾಯಾಗ್ರಾಹಕ. ಭಗವತಿ ತೈಯ್ಯಂ ಮಡಿಲಲ್ಲಿ ಸ್ವಲ್ಪವೂ ಅಂಜಿಕೆಯಿಲ್ಲದೆ ಹೆಣ್ಣು ಮಗು ಕುಳಿತಿರುವುದು ನೆರೆದವರ ಹುಬ್ಬೇರಿಸುವಂತೆ ಮಾಡಿದೆ. ಇದರ ಕೆಲ ಫೋಟೋ ಹಾಗೂ ವೀಡಿಯೋಗಳನ್ನು ಸ್ಥಳದಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಸದ್ಯ ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಗುವಿನ ಮುಗ್ಧತೆಗೆ ಮಾರುಹೋಗಿರುವ ಜನ ಫೋಟೋ, ವೀಡಿಯೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಹೆಣ್ಣು ಮಗು ಭಗವತಿ ತೈಯಂ ಮಡಿಲಲ್ಲಿ ಬೆಚ್ಚಗೆ ಕುಳಿತಿರುವುದನ್ನು ಕಾಣಬಹುದಾಗಿದೆ.

    ವೀಡಿಯೋದಲ್ಲಿ ಏನಿದೆ..?: ದೈವ ಮಗುವನ್ನು ಕರೆಯುತ್ತಿದ್ದಂತೆಯೇ ಅದರ ಬಳಿಗೆ ಹೋಗುತ್ತಾಳೆ. ಅಲ್ಲದೆ ದೈವ ಎತ್ತಿಕೊಳ್ಳಲೆಂದು ಕೈ ಮುಂದೆ ಮಾಡಿದಾಗ ಹೆಣ್ಣು ಮಗು ಯಾವುದೇ ಅಂಜಿಕೆ-ಅಳುಕು ಇಲ್ಲದೆ ಕೈ ಮುಂದೆ ಮಾಡಿ ಎತ್ತಿಕೊಳ್ಳುವಂತೆ ಸೂಚನೆ ನೀಡುತ್ತಾಳೆ. ಈ ವೇಳೆ ದೈವ ಆಕೆಯನ್ನು ಎತ್ತಿಕೊಂಡು ತನ್ನ ಮಡಿಲಲ್ಲಿ ಕುಳ್ಳಿರಿಸುತ್ತದೆ. ಬಳಿಕ ತಲೆ ಸವರಿ ಬಿಗಿಯಾಗಿ ಅಪ್ಪಿಕೊಳ್ಳುತ್ತದೆ. ಅಂತೆಯೇ ಮಗು ಕೂಡ ದೈವದ ಎದೆಯಲ್ಲಿ ತಲೆಯಿಟ್ಟು ತನ್ನ ಮುಗ್ಧತೆ ಮೆರೆದಿದೆ.

    ಒಟ್ಟಿನಲ್ಲಿ ಈ ಚಿತ್ರ ನೋಡಿದರೆ ನೋ ವರ್ಡ್ಸ್ ಟು ಸೇ ಅಂತಾರಲ್ಲ ಹಂಗೆ ವರ್ಣಿಸಲು ಪದಗಳೇ ಇಲ್ಲ. ಇನ್ನೊಂದೆಡೆ ದೈವದ ಮುಖದಲ್ಲಿ ಇರುವ ಸಾಂತ್ವನದ ಭಾವವನ್ನು ಕೂಡ ಇಲ್ಲಿ ನಾವು ಗಮನಿಸಬಹುದು. ಮಗುವಿನ ಮುಖದಲ್ಲಿರುವ ಆ ಮುಗ್ಧತೆ, ನಿರ್ಲಿಪ್ತತೆ, ಬೆಚ್ಚನೆಯ ಭದ್ರತೆಯ ಭಾವನೆ ಪುಟ್ಟ ಕಂದಮ್ಮನ ಕಣ್ಣಲ್ಲಿ ಕಾಣಿಸುತ್ತಿದೆ. ದೈವವನ್ನು ಎರಡು ಪುಟ್ಟ ತೋಳುಗಳಿಂದ ತನ್ನೆಡೆಗೆ ಸೆಳೆದು ದೈವ ವೇಷಧಾರಿಯ ಜೊತೆ ಹೆಜ್ಜೆ ಹಾಕುತ್ತಿರಬೇಕಾದರೆ ಕಾಣಿಸುವ ದೃಶ್ಯ ನೋಡುಗರ ಮನಸೂರೆಗೊಳ್ಳುವುದಂತೂ ಸುಳ್ಳಲ್ಲ.

  • ಮಗನನ್ನ ನೋಡಲು 2,700 ಕಿ.ಮೀ ಕಾರಿನಲ್ಲಿ ಪ್ರಯಾಣ

    ಮಗನನ್ನ ನೋಡಲು 2,700 ಕಿ.ಮೀ ಕಾರಿನಲ್ಲಿ ಪ್ರಯಾಣ

    – ಅನಾರೋಗ್ಯದ ಪುತ್ರನಿಗಾಗಿ 6 ರಾಜ್ಯ ದಾಟಿದ ಅಮ್ಮ

    ತಿರುವನಂತಪುರಂ: ಇತ್ತೀಚೆಗೆ ಲಾಕ್‍ಡೌನ್ ಮಧ್ಯೆ ಮನೆಗೆ ಬರಲು ಪರದಾಡುತ್ತಿದ್ದ ಮಗನಿಗಾಗಿ ಒಬ್ಬರೇ ಸ್ಕೂಟಿಯಲ್ಲಿ 1,400 ಕಿಮೀ ಪ್ರಯಾಣಿಸಿ ಆತನನ್ನು ಕರೆತಂದಿದ್ದರು. ಇದೀಗ ಕೇಳರದಲ್ಲಿ ಲಾಕ್‍ಡೌನ್ ನಿರ್ಬಂಧಗಳ ನಡುವೆಯೂ ಅನಾರೋಗ್ಯದ ಮಗನನ್ನು ಭೇಟಿಯಾಗಲು ತಾಯಿಯೊಬ್ಬರು 6 ರಾಜ್ಯಗಳನ್ನು ದಾಟಿ 2,700 ಕಿ.ಮೀ. ಪ್ರಯಾಣ ಮಾಡಿದ್ದಾರೆ.

    50 ವರ್ಷದ ಶೀಲಮ್ಮ ವಾಸನ್ ರಾಜಸ್ಥಾನದ ಜೋಧ್‍ಪುರದಲ್ಲಿದ್ದ ತನ್ನ ಮಗನಿಗಾಗಿ 2,700 ಕಿಲೋ ಮೀಟರ್ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಶೀಲಮ್ಮ ಅವರ ಮಗ ಅರುಣ್ ಕುಮಾರ್ (29) ಬಿಎಸ್‍ಎಫ್ ಸೈನಿಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ಕಾರಿನಲ್ಲಿ ಮಹಿಳೆಯ ಸೊಸೆ ಮತ್ತು ಇನ್ನೊಬ್ಬ ಸಂಬಂಧಿಕರೊಂದಿಗೆ ಇದ್ದರು. ಮೂರು ದಿನಗಳ ನಂತರ ತನ್ನ ಅನಾರೋಗ್ಯದ ಮಗನನ್ನು ಭೇಟಿ ಮಾಡಿದ್ದಾರೆ.

    ಅರುಣ್ ಕುಮಾರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಜೋಧ್‍ಪುರದ ಏಮ್ಸ್ ನ ವೈದ್ಯರೊಬ್ಬರು ಫೋನ್ ಮಾಡಿ ಕುಟುಂಬಕ್ಕೆ ಮಾಹಿತಿ ತಿಳಿಸಿದ್ದರು. ನಂತರ ಅವರು ಕೇರಳದಿಂದ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮೂಲಕ ರಾಜಸ್ಥಾನ ತಲುಪಲು ನಿರ್ಧರಿಸಿದ್ದರು.

    ಅದರಂತೆಯೇ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದು, ರಾಜ್ಯಗಳಾದ್ಯಂತ ಪ್ರಯಾಣ ಮಾಡಲು ಅಗತ್ಯವಾದ ಪಾಸ್‍ಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ಕೇಂದ್ರ ಸಚಿವ ವಿ ಮುರಳೀಧರನ್, ಸಿಎಂ ಪಿಣರಾಯಿ ವಿಜಯನ್ ಕಚೇರಿ ಮತ್ತು ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ಅವರ ಸಹಾಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮಗನನ್ನು ಕರೆತರಲು 1,400 ಕಿಮೀ ದೂರ ಒಬ್ಬರೇ ಸ್ಕೂಟಿಯಲ್ಲಿ ಹೋದ ತಾಯಿ

    ಈ ಬಗ್ಗೆ ಮಾತನಾಡಿದ ಶೀಲಮ್ಮ ವಾಸನ್, ಸ್ನಾಯುಗಳ ಉರಿಯೂತನಿಂದ ಬಳಲುತ್ತಿದ್ದ ನನ್ನ ಮಗನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ದೇವರ ಅನುಗ್ರಹದಿಂದಾಗಿ ನಾವು ಬರುವ ಮಾರ್ಗದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಇಲ್ಲಿಗೆ ತಲುಪಿದ್ದೇವೆ ಎಂದು ಹೇಳಿದರು.

    ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಸಂಘಟನೆಯ ಹಿಂದೂ ಸಹಾಯವಾಣಿಯ ಸ್ವಯಂಸೇವಕರು ಜೋಧ್‍ಪುರಕ್ಕೆ ಕರೆದುಕೊಂಡು ಹೋಗಲು ಕ್ಯಾಬ್ ಮತ್ತು ಇಬ್ಬರು ಟ್ಯಾಕ್ಸಿ ಚಾಲಕರನ್ನು ಉಚಿತವಾಗಿ ವ್ಯವಸ್ಥೆ ಮಾಡುವ ಮೂಲಕ ಸಹಾಯ ಮಾಡಿದ್ದಾರೆ. ಇದನ್ನೂ ಓದಿವಿಡಿಯೋ: ರಸ್ತೆ ಮಧ್ಯೆಯೇ ಆಟೋ ತಡೆದ ಪೊಲೀಸ್ರು- ತಂದೆಯನ್ನು ಎತ್ತಿಕೊಂಡೇ ನಡೆದ ಮಗ

    ಅರುಣ್ ಕುಮಾರ್ ಫೆಬ್ರವರಿಯಲ್ಲಿ ರಜೆಯ ಮೇಲೆ ತನ್ನ ಗ್ರಾಮಕ್ಕೆ ಬಂದಿದ್ದರು. ಆದರೆ ವಾಪಸ್ ಹೋಗಿದ್ದ ಕೆಲವು ದಿನಗಳ ನಂತರ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರು ತನ್ನ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗಬೇಕೆಂದು ಇಷ್ಟಪಟ್ಟಿದ್ದರು.

  • ಕೇಕ್ ಕದ್ದನೆಂದು ಬಾಲಕನ ಕಿವಿಯಲ್ಲಿ ರಕ್ತ ಬರುವಂತೆ ಥಳಿಸಿದ ಅಂಗಡಿ ಮಾಲೀಕ!

    ಕೇಕ್ ಕದ್ದನೆಂದು ಬಾಲಕನ ಕಿವಿಯಲ್ಲಿ ರಕ್ತ ಬರುವಂತೆ ಥಳಿಸಿದ ಅಂಗಡಿ ಮಾಲೀಕ!

    ತಿರುವನಂತಪುರ: ಕೇಕ್ ಪೀಸ್ ಕದ್ದ ಅಂತ ಆರೋಪಿಸಿ 14 ವರ್ಷದ ಬಾಲಕನಿಗೆ ಅಂಗಡಿ ಮಾಲೀಕನೊಬ್ಬ ಹಿಗ್ಗಾಮುಗ್ಗವಾಗಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ.

    ಈ ಘಟನೆ ಕೇರಳದ ಕೊಲ್ಲಂನ ಕೊಟ್ಟಾರಕ್ಕರ ಎಂಬಲ್ಲಿ ಗುರುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಥಳಿತಕ್ಕೊಳಗಾದ ಬಾಲಕನನ್ನು ಅರ್ಜುನ್(ಹೆಸರು ಬದಲಾಯಿಸಲಾಗಿದೆ) ಎಂದುದು ಗುರುತಿಸಲಾಗಿದೆ.

    ಏನಿದು ಘಟನೆ?: ಕುಲಕ್ಕಡ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರೋ ಅರ್ಜುನ್ ಮತ್ತು ಆತನ ಗೆಳೆಯರು ತಂಪು ಪಾನೀಯ ಕುಡಿಯಲೆಂದು ಶಾಲೆಯ ಹತ್ತಿರವಿರೋ ಶಶಿಧರನ್ ಎಂಬಾತನ ಅಂಗಡಿಗೆ ಸಂಜೆ ಸುಮಾರು 4.30ರ ವೇಳೆ ಬಂದಿದ್ದರುನೀ ವೇಳೆ ಬಾಲಕ ಕೇಕ್ ಕದ್ದ ಅಂತ ಅಂಗಡಿ ಮಾಲೀಕ ಬಲಕನನ್ನು ಥಳಿಸಿದ್ದಾನೆ. ಸದ್ಯ ಬಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಘಟನೆ ಕುರಿತು ಅರ್ಜುನ್ ತಾಯಿ ಸಾವಿತ್ರಿ ಮಾಧ್ಯಮದೊಂದಿಗೆ ಮಾತನಾಡಿ, ನಾನು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ತಾಯಿ ಕರೆ ಮಾಡಿ ಅರ್ಜುನ್ ಶಾಲೆಯಿಂದ ಇನ್ನೂ ಬಂದಿಲ್ಲ. ಅಲ್ಲದೇ ಅಂಗಡಿ ಮಾಲೀಕ ಅರ್ಜುನ್ ಜೊತೆ ಅಮಾನುಷವಾಗಿ ನಡೆದುಕೊಂಡಿರುವ ಬಗ್ಗೆ ಆತನ ಗೆಳೆಯರು ಹೇಳಿರುವುದಾಗಿ ತಿಳಿಸಿದ್ರು. ಇದರಿಂದ ಗಾಬರಿಗೊಂಡ ನಾನು ಕೂಡಲೇ ಸ್ಥಳೀಯ ಅಂಗಡಿಗಳಿಗೆ ತೆರಳಿ ಹುಡುಕಾಡಿದೆ. ಆದ್ರೆ ಅರ್ಜುನ್ ಎಲ್ಲೂ ಕಾಣಿಸಿಲ್ಲ. ತಕ್ಷಣವೇ ಮಗನನ್ನು ವಿಚಾರಿಸಿಕೊಂಡು ಬರಲೆಂದು ಅಲ್ಲಿಂದ ಶಾಲೆಗೆ ತೆರಳಿದೆ. ಸುಮಾರು 1 ಗಂಟೆಗೂ ಅಧಿಕ ಸಮಯ ಅರ್ಜುನ್ ಅಂಗಡಿಯಲ್ಲಿರುವುದನ್ನು ಗಮನಿಸಿದ್ದ ಶಿಕ್ಷಕಿ ಮತ್ತು ನಾನು ಅರ್ಜುನ್ ನನ್ನು ಕರೆದು ಮಾತನಾಡಿಸಿದಾಗ ಈ ವಿಚಾರ ಬೆಳಕಿಗೆ ಬಂತು ಅಂದ್ರು.

    ಅರ್ಜುನ್ ಕೈ ತಾಗಿ ಅಂಗಡಿಯಲ್ಲಿ ಕೇಕ್ ಪೀಸ್ ಒಂದು ಕೆಳಗೆ ಬಿದ್ದಿದೆ. ಅಂತೆಯೇ ಆತನ ಗೆಳೆಯರು ತಂಪು ಪಾನೀಯ ಕುಡಿದು ಅಲ್ಲಿಂದ ತೆರಳಿದ್ದಾರೆ. ಗೆಳೆಯರು ಹಿಂದಿರುಗುತ್ತಿದ್ದಾರೆ ಅಂತ ತಿಳಿದ ಅರ್ಜುನ್ ಕೆಳಗೆ ಬಿದ್ದ ಕೇಕ್ ಪೀಸ್ ಅನ್ನು ಕೌಂಟರ್ ಮೇಲಿಟ್ಟು ಅಲ್ಲಿಂದ ಗೆಳೆಯರ ಹಿಂದೆ ಓಡಿದ್ದಾನೆ. ತನ್ನ ಮಗ ಓಡಿದ್ದನ್ನು ಗಮನಿಸಿದ ಅಂಗಡಿ ಮಾಲೀಕ ಆತನನ್ನು ಮತ್ತೆ ಹಿಂದಕ್ಕೆ ಕರೆದು ಮನಬಂದಂತೆ ಥಳಿಸಿದ್ದಾನೆ. ಪರಿಣಾಮ ಮಗನ ಎರಡೂ ಕಿವಿಗಳಲ್ಲೂ ರಕ್ತ ಬರುತ್ತಿರುವುದನ್ನು ಕಂಡು ದಂಗಾದೆ. ಅಲ್ಲದೇ ಅರ್ಜುನ್ ಕುತ್ತಿಗೆಯ ಸುತ್ತ ಗಾಯದ ಬರೆಗಳಿದ್ದು, ತಲೆಗೆ ಕೂಡ ಗಾಯಗಳಾಗಿತ್ತು. ಆತನ ಬ್ಯಾಗನ್ನು ಕೂಡ ಅಂಗಡಿಯವನು ಬಿಸಾಡಿದ್ದಾನೆ. ಅಲ್ಲದೇ ಆತನ ಶರ್ಟ್ ಕಾಲರ್ ಹಿಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ಅಂಗಡಿ ಮಾಲೀಕ ಶಶಿಧರನನ್ನು ಶುಕ್ರವಾರ ಬಂಧಿಸಿ, ಆತನ ವಿರುದ್ಧ ಐಪಿಸಿ ಸೆಕ್ಷನ್ 341, 323 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಆರೋಪಿ ಅದೇ ದಿನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ ಎಂಬುದಾಗಿ ವರದಿಯಾಗಿದೆ.