Tag: Thirthodbhava

  • ಅಧಿಕಾರ ಮೊದಲೇ ನಿಶ್ಚಯವಾಗಿರುತ್ತೆ, ತಲಕಾವೇರಿಗೆ ಬಂದ್ರೆ ಹೋಗಲ್ಲ: ಸಿಎಂ ಎಚ್‍ಡಿಕೆ

    ಅಧಿಕಾರ ಮೊದಲೇ ನಿಶ್ಚಯವಾಗಿರುತ್ತೆ, ತಲಕಾವೇರಿಗೆ ಬಂದ್ರೆ ಹೋಗಲ್ಲ: ಸಿಎಂ ಎಚ್‍ಡಿಕೆ

    ಮಡಿಕೇರಿ: ಅಧಿಕಾರಕ್ಕೆ ಬರುವುದು ಮೊದಲೇ ನಿಶ್ಚಯವಾಗಿರುತ್ತೆ, ತಲಕಾವೇರಿಗೆ ಬಂದ ಕೂಡಲೇ ಅಧಿಕಾರ ಹೋಗುವುದಿಲ್ಲವೆಂದು ಸಿಎಂ ಕುಮಾರಸ್ವಾಮಿಯವರು ಹೇಳಿದ್ದಾರೆ.

    ಕಾವೇರಿ ತಾಯಿಯ ತೀರ್ಥೋದ್ಭವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ಅಧಿಕಾರಕ್ಕೆ ಬರುವುದು ಮೊದಲೇ ನಿಶ್ಚಯವಾಗಿರುತ್ತದೆ. ಕೇವಲ ತಲಕಾವೇರಿಗೆ ಬಂದ ಮಾತ್ರಕ್ಕೆ ಅಧಿಕಾರ ಹೋಗುತ್ತದೆ ಎನ್ನುವುದು ಅವರವರ ವಿಚಾರಕ್ಕೆ ಬಿಟ್ಟಿದ್ದು, ತಲಕಾವೇರಿಗೆ ಬಂದರೆ ಅಧಿಕಾರ ಹೋಗಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಅಧಿಕಾರ ಜನತೆಯ ಅನುಗ್ರಹ, ದೇವಿಯ ವರ. ನಮ್ಮ ಸರ್ಕಾರ ಸದೃಢವಾಗಿಯೇ ಇರಲಿದೆ. ಪ್ರವಾಹದಿಂದ ಉಂಟಾಗಿರುವ ಕೊಡಗಿನ ಸಮಸ್ಯೆಯ ಪರಿಹಾರಕ್ಕೆ ಕಾವೇರಿ ತಾಯಿಯ ಶಕ್ತಿ ಬೇಕಿದೆ. ಸರ್ಕಾರ, ಮುಖ್ಯಮಂತ್ರಿಗಿರಿ ಶಾಶ್ವತವಲ್ಲ. ಇದಲ್ಲದೇ ಚಾಮರಾಜನಗರದ ದೇವಾಲಯಕ್ಕೂ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

    ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಿಎಂ ಕುಮಾರಸ್ವಾಮಿ ಸಂಪ್ರದಾಯಕ್ಕೆ ಸೆಡ್ಡು ಹೊಡೆದು, ಕಾವೇರಿ ತಾಯಿಯ ತೀರ್ಥೋದ್ಭವದಲ್ಲಿ ಭಾಗವಹಿಸಿದ್ದರು. ಸಚಿವರಾದ ಸಾ.ರಾ.ಮಹೇಶ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಶಾಸಕರಾದ ಅಪ್ಪಚ್ಚು ರಂಜನ್, ಬೋಪಯ್ಯ ಅವರು ಭಾಗವಹಿಸಿದ್ದರು.

    ಬುಧವಾರ ಸಂಜೆ 6.43ರ ಮೇಷ ಲಗ್ನದಲ್ಲಿ ಮಹಾಮಂಗಳಾರತಿಯ ನಂತರ ಕಾವೇರಿ ತಾಯಿಯು ತೀರ್ಥ ರೂಪದಲ್ಲಿ ಬ್ರಹ್ಮ ಕುಂಡಿಕೆಯಿಂದ ಉಕ್ಕಿ ಹರಿದಳು. ಉಗಮದ ನಂತರ ಭಕ್ತರ ದಂಡು ಕಾವೇರಿ ತೀರ್ಥವನ್ನು ಪಡೆಯಲು ಮುಗಿಬಿದ್ದರು. ವರ್ಷಕ್ಕೊಮ್ಮೆ ನಡೆಯುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Xorj0NG_ABk

  • ಮೇಷ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ಉಕ್ಕಿದ ಕಾವೇರಿ ಮಾತೆ

    ಮೇಷ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ಉಕ್ಕಿದ ಕಾವೇರಿ ಮಾತೆ

    ಮಡಿಕೇರಿ: ನಾಡಿನ ಜೀವನದಿಯಾಗಿರುವ ಕಾವೇರಿ ತಾಯಿಯ ಉಗಮಸ್ಥಾನವಾಗಿರುವ ತಲಕಾವೇರಿಯಲ್ಲಿ ಸಂಜೆ ಸರಿಯಾಗಿ 6.43ರ ಮೇಷ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ಉಕ್ಕಿ ಬಂದಿದ್ದಾಳೆ.

    ಇಂದು ಸಂಜೆ ಮಹಾಮಂಗಳಾರತಿಯ ನಂತರ ಕಾವೇರಿ ತಾಯಿಯು ತೀರ್ಥ ರೂಪದಲ್ಲಿ ಕಾವೇರಿ ಬ್ರಹ್ಮ ಕುಂಡಿಕೆಯಿಂದ ಹರಿದಿದ್ದಾಳೆ. ಉಗಮದ ನಂತರ ಭಕ್ತರ ದಂಡು ಕಾವೇರಿ ತೀರ್ಥವನ್ನು ಪಡೆಯಲು ಮುಗಿಬಿದ್ದಿದ್ದರು. ವರ್ಷಕ್ಕೊಮ್ಮೆ ನಡೆಯುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು. ಅಲ್ಲದೇ ಈ ಬಾರಿ ಸಿಎಂ ಕುಮಾರಸ್ವಾಮಿಯವರು ಆಗಮಿಸಿದ್ದು ವಿಶೇಷವಾಗಿತ್ತು.

    ಸಿಎಂ ಕುಮಾರಸ್ವಾಮಿಯವರಿಗೆ, ಸಚಿವರಾದ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಶಾಸಕರಾದ ಅಪ್ಪಚ್ಚು ರಂಜನ್, ಬೋಪಯ್ಯ ಸಾಥ್ ನೀಡಿದ್ದರು. ಇವರಲ್ಲದೇ ಸಂಸದ ಪ್ರತಾಪ್ ಸಿಂಹ ಕೂಡ ಕಾವೇರಿ ತಾಯಿಯ ದರ್ಶನ ಪಡೆದುಕೊಂಡಿದ್ದಾರೆ.

    ಬ್ರಹ್ಮಗಿರಿಯ ಮಡಿಲಿನಲ್ಲಿ ಹುಟ್ಟುವ ಕಾವೇರಿ ಮಾತೆ ರಾಜ್ಯದಲ್ಲಿ ಹರಿದು ರೈತರ ಹೊಲಗದ್ದೆಗಳನ್ನು ಹಸಿರಾಗಿಸಿ, ಅನ್ನದಾತೆಯಾಗಿ ಹರಿಯುತ್ತಾಳೆ. ಹಾಗಾಗಿ ಕಾವೇರಿ ನೀರನ್ನು ಬಳಸುವ ಮಂಡ್ಯ, ಮೈಸೂರು, ಬೆಂಗಳೂರು, ಹಾಸನ ಜಿಲ್ಲೆಗಳಿಂದ ಸೇರಿದಂತೆ ದೇಶದ ಹಲವೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

    ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅಲ್ಲಿ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಕಾವೇರಿ ಮಾತೆಯ ದರ್ಶನ ಪಡೆಯುತ್ತಾರೆ. ತೀರ್ಥೋದ್ಭವವಾಗುತ್ತಿದ್ದಂತೆ ತೀರ್ಥ ಸಂಗ್ರಹಿಸಲು ಮುಗಿಬೀಳುವ ಜನರು ತೀರ್ಥವನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಾರೆ.

    ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ 12 ಕಿಲೋಮೀಟರ್ ದೂರದಿಂದಲೇ ಬೆಳಕಿನ ವ್ಯವಸ್ಥೆಗಾಗಿ 1,500 ಕ್ಕೂ ಹೆಚ್ಚು ಟ್ಯೂಬ್ ಲೈಟ್ ಗಳು, ತಾತ್ಕಾಲಿಕ ಶೌಚಾಲಯ, ಅನ್ನದಾನಕ್ಕೆ ವ್ಯವಸ್ಥೆ, ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ ಸೇರಿದಂತೆ 400 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ರೀತಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಏಕಮುಖ ಸಂಚಾರದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು.

    ಸಂಪ್ರದಾಯಕ್ಕೆ ಸೆಡ್ಡು ಹೊಡೆದ ಸಿಎಂ ಎಚ್‍ಡಿಕೆ?
    ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಿಎಂ ಕುಮಾರಸ್ವಾಮಿ ಸಂಪ್ರದಾಯಕ್ಕೆ ಸೆಡ್ಡು ಹೊಡೆದು, ಕಾವೇರಿ ತಾಯಿಯ ತೀರ್ಥೋದ್ಭವದಲ್ಲಿ ಭಾಗವಹಿಸಿದ್ದಾರೆ. ವಾಡಿಕೆಯ ಪ್ರಕಾರ ಉನ್ನತ ಸ್ಥಾನದಲ್ಲಿರುವವರು, ಕಾವೇರಿ ತಾಯಿಯ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಭಾಗಿಯಾದರೆ, ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎನ್ನುವ ಸಂಪ್ರದಾಯ ರೂಢಿಯಲ್ಲಿದೆ. ಹೀಗಾಗಿ ಇದುವರೆಗೂ ಯಾವೊಬ್ಬ ಮುಖ್ಯಮಂತ್ರಿಯೂ ಸಹ ತೀರ್ಥೋದ್ಭವ ಕಾರ್ಯದಲ್ಲಿ ಪಾಲ್ಗೊಂಡಿರಲಿಲ್ಲ.

    ಸಿಎಂ ಕುಮಾರಸ್ವಾಮಿ ತೀರ್ಥೋದ್ಭವಕ್ಕೆ ಆಗಮಿಸುತ್ತಾರೆ ಎನ್ನುವ ಬೆನ್ನಲ್ಲೇ, 3 ಕೆಎಸ್‍ಆರ್ ಪಿ ತುಕಡಿ, 8 ಡಿಎಆರ್, 2 ಎಎಎನ್‍ಎಫ್, 5 ಡಿವೈಎಸ್‍ಪಿ, 15 ಸಿಸಿಐ, 25 ಪಿಎಸ್‍ಐ, 80 ಎಎಸ್‍ಐ, 600 ಪಿಸಿ, 100 ಮಹಿಳಾ ಪಿಸಿ, 200 ಜನ ಗೃಹರಕ್ಷ ಕದಳ ಸಿಬ್ಬಂದಿ ಹಾಗೂ ಸುಮಾರು 20ಕ್ಕೂ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Xorj0NG_ABk