Tag: thippareddy

  • ಪ್ರತಿಸ್ಪರ್ಧಿಗಳ ಕಾಲಿಗೆ ಬಿದ್ದು ಗೃಹಪ್ರವೇಶಕ್ಕೆ ಆಮಂತ್ರಣ ನೀಡಿದ ರಘು ಆಚಾರ್

    ಪ್ರತಿಸ್ಪರ್ಧಿಗಳ ಕಾಲಿಗೆ ಬಿದ್ದು ಗೃಹಪ್ರವೇಶಕ್ಕೆ ಆಮಂತ್ರಣ ನೀಡಿದ ರಘು ಆಚಾರ್

    ಚಿತ್ರದುರ್ಗ: ಕಾಂಗ್ರೆಸ್ (Congress) ಮಾಜಿ ಎಂಎಲ್‌ಸಿ ರಘು ಆಚಾರ್ (Raghu Achar) ನೂತನ ಗೃಹ ಪ್ರವೇಶದ ಹಿನ್ನೆಲೆಯಲ್ಲಿ ಚಿತ್ರದುರ್ಗದ (Chitradurga) ಜಿಜೆಪಿ (BJP) ಶಾಸಕ ಜಿಹೆಚ್ ತಿಪ್ಪಾರೆಡ್ಡಿಯವರ (GH Thippareddy) ಕಾಲು ಮುಗಿದು ಗೃಹಪ್ರವೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ ಕೈ ಕಾರ್ಯಕರ್ತರು ಆಚಾರ್ ನಡೆ ವಿರುದ್ಧ ಕಿಡಿ ಕಾರಿದ್ದಾರೆ.

    ಮುಂಬರುವ 2023ರ ವಿಧಾನಸಭಾ ಚುನಾವಣೆಯ ಪ್ರತಿಸ್ಪರ್ಧಿಗಳೆಂದು ಬಿಂಬಿತವಾಗಿರುವ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹಾಗೂ ರಘು ಆಚಾರ್ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿರುವ ಆಚಾರ್, ಆಹ್ವಾನ ಪತ್ರಿಕೆ ಕೊಟ್ಟು, ಶಾಸಕ ತಿಪ್ಪಾರೆಡ್ಡಿ ಕಾಲಿಗೆ ಬಿದ್ದಿರುವುದು ಹೊಸ ಚರ್ಚೆಗೆ ದಾರಿಯಾಗಿದೆ.

    ಬಿಜೆಪಿ ಶಾಸಕರಲ್ಲದೇ, ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಸ್.ಕೆ ಬಸವರಾಜನ್ ಮನೆಗೂ ಭೇಟಿ ನೀಡಿರುವ ಆಚಾರ್ ಅವರು, ಬಸವರಾಜನ್ ಪತ್ನಿ ಹಾಗೂ ಮಾಜಿ ಜಿ.ಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ (Soubhagya Basavarajan) ಕಾಲು ಮುಗಿದು ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ಜೆ.ಪಿ ನಡ್ಡಾ ಭೇಟಿಯಾದ ಸುಮಲತಾ- ಬಹುತೇಕ ಬಿಜೆಪಿ ಸೇರ್ಪಡೆ ಖಚಿತ

    ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಇಂತಹ ಸಂದರ್ಭದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರತಿಸ್ಪರ್ಧಿಗಳ ಕಾಲು ಮುಗಿದು ಆಹ್ವಾನಿಸಿರುವ ಮಾಜಿ ಎಂಎಲ್‌ಸಿ ರಘು ಆಚಾರ್ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಹೀಗಾಗಿ 2023ರ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಜ್ಜಾಗಿರುವ ಆಚಾರ್ ನಡೆ ಬಗ್ಗೆ ಭಾರೀ ಅನುಮಾನ ಮೂಡಿಸಿದೆ.

    ಬಿಜೆಪಿಯಿಂದ ಸ್ಪರ್ಧಿಸಲಿರುವ ಶಾಸಕ ತಿಪ್ಪಾರೆಡ್ಡಿ ಹಾಗೂ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಬಸವರಾಜನ್ ಪತ್ನಿ ಕಾಲಿಗೆ ಬಿದ್ದಿರುವ ಆಚಾರ್ ನಡೆ ಬಗ್ಗೆ ಕೋಟೆನಾಡಲ್ಲಿ ಹೊಸ ಚರ್ಚೆ ಶುರುವಾಗಿದೆ. ಇದು ರಾಜಿ ಸಂಧಾನದ ಯತ್ನವೋ ಅಥವಾ ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಸಂಬಂಧದ ಬಾವವೇ ಬೇರೆ ಎಂದು ಸಂದೇಶ ನೀಡುವ ಯತ್ನವೋ ಎಂಬ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಏಕವಚನದಲ್ಲಿಯೇ ವಾಗ್ದಾಳಿ ನಡೆಸಿ ಹೆಚ್‍ಡಿಕೆಗೆ ಶಿವನಗೌಡ ಸವಾಲ್

  • ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರಲ್ಲಿ ನಾನು ಮೊದಲಿಗ: ತಿಪ್ಪಾರೆಡ್ಡಿ

    ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರಲ್ಲಿ ನಾನು ಮೊದಲಿಗ: ತಿಪ್ಪಾರೆಡ್ಡಿ

    ಚಿತ್ರದುರ್ಗ: ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರಲ್ಲಿ ನಾನು ಮೊದಲಿಗ ಎಂದು ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.

    ಸಿಎಂ ಬೊಮ್ಮಾಯಿ ದೆಹಲಿಗೆ ತೆರಳುವ ಬೆನ್ನಲ್ಲೆ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಉತ್ಸಾಹಗರಿಗೆದರಿದೆ. ಅದರಲ್ಲೂ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಿ.ಹೆಚ್ ತಿಪ್ಪಾರೆಡ್ಡಿ ಅವರು, ಚುನಾವಣಾ ದೃಷ್ಟಿಯಿಂದ ಸಂಪುಟ ಪುನರ್ ರಚನೆಯಾಗುವ ನಿರೀಕ್ಷೆಯಿದೆ. ರಾಜ್ಯಕ್ಕೆ ಗೃಹಸಚಿವ ಅಮಿತ್ ಶಾ ಬಂದು ಹೋದ ಮೇಲೆ ಇವೆಲ್ಲಾ ಚರ್ಚೆಗಳಾಗಿರುವ ಮಾಹಿತಿಯಿದೆ. ಹಾಗೆಯೇ ಹೊಸಪೇಟೆಯಲ್ಲಿ ನಡೆಯುವ ಕಾರ್ಯಕಾರಣಿ ಸಭೆ ಬಳಿಕ ಚರ್ಚೆಯಾಗಲಿದೆ ಎಂದಿದ್ದಾರೆ.

    ಏಪ್ರಿಲ್ 16-17 ರಂದು ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದ್ದು, ನಿಮಗೆ ಸಚಿವ ಸ್ಥಾನ ಗ್ಯಾರಂಟಿ ಅಂತ ನಮ್ಮ ಶಾಸಕ ಮಿತ್ರರು ಹೇಳುತ್ತಿದ್ದಾರೆ. ಆದರೆ ನಮಗೆ ಸಚಿವ ಸ್ಥಾನ ನೀಡುವುದು ಸಿಎಂ ಹಾಗೂ ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರವಾಗಿದೆ. ಬಹಳ ಜನ ನೀವು ಸಚಿವರಾಗುತ್ತೀರಾ ಅಂತ ಅಪೇಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಬಿರ್ಭೂಮ್ ಹಿಂಸಾಚಾರ – ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಟ್ಟ ಮಮತಾ ಬ್ಯಾನರ್ಜಿ

    ಚುನಾವಣಾ ದೃಷ್ಟಿಯಿಂದ ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಬೇಕಾಗಿದೆ. ಆದರೂ ಅದರ ಬಗ್ಗೆ ನಾನು ಈವಾಗ ಕಾಮೆಂಟ್ ಮಾಡುವುದು ಸರಿಯಲ್ಲ. ಜೊತೆಗೆ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮತದಾರರಿಗೆ ಪಕ್ಷದ ಸಂದೇಶ ಹೋಗಬೇಕು. ಆ ದೃಷ್ಟಿಯಿಂದ ಪಕ್ಷದ ಹಿರಿಯರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

  • ಸಿದ್ದರಾಮಯ್ಯ ಬಿಜೆಪಿಗೆ ಬಂದ್ರೆ ನನ್ನ ಸ್ಥಾನವನ್ನೇ ಬಿಟ್ಟು ಕೊಡ್ತೇನೆ- ತಿಪ್ಪಾರೆಡ್ಡಿ

    ಸಿದ್ದರಾಮಯ್ಯ ಬಿಜೆಪಿಗೆ ಬಂದ್ರೆ ನನ್ನ ಸ್ಥಾನವನ್ನೇ ಬಿಟ್ಟು ಕೊಡ್ತೇನೆ- ತಿಪ್ಪಾರೆಡ್ಡಿ

    ಚಿತ್ರದುರ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಸ್ವಾಗತಿಸಿ, ನನ್ನ ಸ್ಥಾನವನ್ನೇ ಬಿಟ್ಟುಕೊಡುತ್ತೇನೆ ಎಂದು ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹೇಳಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರೂ ಶತ್ರುವಲ್ಲ, ಯಾರೂ ಮಿತ್ರರಲ್ಲ. ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯನವರನ್ನು ಹೊರಗಿಡುವ ಯತ್ನ ನಡೆಯುತ್ತಿದೆ. ಹೀಗಾಗಿ ಒಂದು ವೇಳೆ ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಅವರನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ಅಲ್ಲದೆ ಅವರು ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸುವುದಾದರೆ ನನ್ನ ಸ್ಥಾನವನ್ನೇ ಬಿಟ್ಟು ಕೊಡುತ್ತೇನೆ. ಅವರು ಚಿತ್ರದುರ್ಗದಿಂದಲೇ ಸ್ಪರ್ಧಿಸಲಿ ಎಂದರು.

    ಪ್ರಧಾನಿ ಮೋದಿಯವರನ್ನು ಒದ್ದೋಡಿಸಿ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆ ನನಗೂ ಅಚ್ಚರಿ ಮೂಡಿಸಿದೆ. ರಮೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಂವಿಧಾನದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಆದರೆ ಪ್ರಧಾನಿ ಮೋದಿ ಬಗ್ಗೆ ಈ ರೀತಿ ಮಾತನಾಡಿದ್ದನ್ನು ನೋಡಿದರೆ ಅವರ ನಡೆ ನುಡಿ ಈ ನಡುವೆ ಸ್ವಲ್ಪ ವ್ಯತ್ಯಾಸವಾದಂತೆ ಕಾಣುತ್ತದೆ ಎಂದು ತಿಳಿಸಿದರು.

    ರಮೇಶ್ ಕುಮಾರ್ ಅವರು ಪ್ರಧಾನಿ ಮೋದಿಯವರಿಗೆ ಮತ ಹಾಕದೇ ಇರಬಹುದು. ಆದರೆ ದೇಶದ ಜನ ಮತ ಹಾಕಿ ಮೋದಿ ಅವರನ್ನು ಪ್ರಧಾನಿ ಯಾಗಿಸಿದ್ದಾರೆ. ಈ ನಡುವೆ ರಮೇಶ್ ಕುಮಾರ್ ಹೆಚ್ಚು ಕಮ್ಮಿ ಮಾತಾಡುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ ಅನ್ನಿಸುತ್ತದೆ. ಬಾಡಿಗೆಗೆ ಬಂದ ಜನರಂತೆ ಮಾತಾಡುವುದು ಅವರ ಘನತೆಗೆ ತಕ್ಕುದಲ್ಲ ಎಂದು ತಿಪ್ಪಾರೆಡ್ಡಿ ವಾಗ್ದಾಳಿ ನಡೆಸಿದರು.

  • ಸಚಿವ ಸಂಪುಟ ಬೆಳಗಾವಿ-ಬೆಂಗ್ಳೂರಿಗೆ ಸೀಮಿತ, ಮಧ್ಯಕರ್ನಾಟಕಕ್ಕೆ ಅನ್ಯಾಯ: ತಿಪ್ಪಾರೆಡ್ಡಿ ಕಿಡಿ

    ಸಚಿವ ಸಂಪುಟ ಬೆಳಗಾವಿ-ಬೆಂಗ್ಳೂರಿಗೆ ಸೀಮಿತ, ಮಧ್ಯಕರ್ನಾಟಕಕ್ಕೆ ಅನ್ಯಾಯ: ತಿಪ್ಪಾರೆಡ್ಡಿ ಕಿಡಿ

    ಚಿತ್ರದುರ್ಗ: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಈ ಸಚಿವ ಸಂಪುಟ ಬೆಳಗಾವಿ ಹಾಗೂ ಬೆಂಗಳೂರಿಗೆ ಸೀಮಿತವಾಗಿದೆ, ಮಧ್ಯಕರ್ನಾಟಕ್ಕೆ ಅನ್ಯಾಯ ಆಗಿದೆ ಎಂದು ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ರಾಜಕೀಯದಲ್ಲಿದ್ದರೂ ನಾನು ಎಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅಲ್ಲದೇ ಪಕ್ಷದ ವಿರುದ್ಧ ರೆಬೆಲ್ ಆಗಿ ವರ್ತಿಸಿಲ್ಲ. ಆದರೆ ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿದ್ದು ಚಿತ್ರದುರ್ಗದಲ್ಲಿ ಶೂನ್ಯ ಸ್ಥಿತಿಯಲ್ಲಿದ್ದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಗ್ರಾಮ ಪಂಚಾಯ್ತಿ ಹಾಗೂ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೆರವಾಗಿದ್ದೇನೆ ಎಂದು ತಾವು ಪಕ್ಷಕ್ಕಾಗಿ ಶ್ರಮ ಪಟ್ಟ ಬಗ್ಗೆ ತಿಪ್ಪಾರೆಡ್ಡಿ ತಿಳಿಸಿದರು.

    6 ಬಾರಿ ಶಾಸಕರಾಗಿರುವ ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ ಸೋತವರಿಗೆ ಹಾಗೂ ಆಕಾಂಕ್ಷೆ ಇಲ್ಲದವರಿಗೆ ಸಚಿವ ಸ್ಥಾನ ಕಲ್ಪಿಸಲಾಗಿದ್ದು, ಹಿರಿಯ ಸಚಿವರಿಗೆ ಮತ್ತೆ ಮುಂದುವರಿಸಿದ್ದಾರೆ. ಅದರ ಬದಲು ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ನಮ್ಮಂತಹ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕಿತ್ತು ಎಂದು ಹೇಳಿದರು.

    ಈ ನಿಟ್ಟಿನಲ್ಲಿ ಹೈಕಮಾಂಡ್ ಹಾಗೂ ಸಿಎಂ ಬಿಎಸ್‍ವೈ ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ಕಲ್ಪಿಸುವ ಭರವಸೆ ಇದೆ. ಹೀಗಾಗಿ ಕಾದು ನೋಡುತ್ತೇನೆ ಹೊರತು ಯಾವುದೇ ಕಾರಣಕ್ಕೂ ನಾನು ಪಕ್ಷಕ್ಕೆ ದ್ರೋಹ ಮಾಡಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲವೆಂದು ಸ್ಪಷ್ಟಪಸಿದರು.

  • 6 ಬಾರಿ ಗೆದ್ರೂ ಸಚಿವ ಸ್ಥಾನ ನೀಡದಿರುವುದು ಆಘಾತವಾಗಿದೆ: ತಿಪ್ಪಾರೆಡ್ಡಿ

    6 ಬಾರಿ ಗೆದ್ರೂ ಸಚಿವ ಸ್ಥಾನ ನೀಡದಿರುವುದು ಆಘಾತವಾಗಿದೆ: ತಿಪ್ಪಾರೆಡ್ಡಿ

    – ಬೈಕಿಗೆ ಬೆಂಕಿ ಹಚ್ಚಿ ತಿಪ್ಪಾರೆಡ್ಡಿ ಬೆಂಬಲಿಗರ ಆಕ್ರೋಶ

    ಚಿತ್ರದುರ್ಗ: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ತಿಪ್ಪಾರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದವರೆಗೆ ಬೇರೂರಲು ಶಕ್ತಿಯಾಗಿದ್ದ ತಿಪ್ಪಾರೆಡ್ಡಿ ಬಿಜೆಪಿ ಹೈಕಮಾಂಡ್ ಹಾಗು ಯಡಿಯೂರಪ್ಪನವರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪದೇ ಪದೇ ಈ ಜಿಲ್ಲೆಗೆ ವಲಸಿಗರೇ ಉಸ್ತುವಾರಿ ಸಚಿವರಾಗ್ತಿರೋದು ಚಿತ್ರದುರ್ಗದ ದೌರ್ಭಾಗ್ಯ ಎಂದಿದ್ದಾರೆ. ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದ ಅವರು ಇಂದು ಮಧ್ಯಾಹ್ನ ಬೆಂಗಳೂರಿನ ಶಾಸಕರ ಭವನದಲ್ಲಿ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

    ನಾನು ಸುಮಾರು 50 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. 6 ಬಾರಿ ಶಾಸಕನಾಗಿದ್ದೇನೆ. ಕಳೆದ 16-17 ವರ್ಷದಿಂದ ಹೊರಗಿನವರೇ ನಮ್ಮ ಜಿಲ್ಲೆಯ ಉಸ್ತವಾರಿ ಸಚಿವರಾಗುತ್ತಿರೋದು ದುರಂತ. ನಮ್ಮಲ್ಲಿ ಒಂದು ಅಭಿವೃದ್ಧಿ ಕೆಲಸ ಕೂಡ ಆಗಿರುವ ಉದಾಹರಣೆ ಇಲ್ಲ. ನನ್ನ ರಾಜಕೀಯ ಇತಿಹಾಸದಲ್ಲಿ ಯಾವುದೇ ಮೈನಸ್ ಪಾಯಿಂಟ್ ಇಲ್ಲ. ಯಾರೊಬ್ಬರು ಬೆರಳು ಮಾಡಿ ತೋರಿಸುವಂತ ಕೆಲಸ ಕೂಡ ನಾನು ಮಾಡಿಲ್ಲ. ನಿಷ್ಪಕ್ಷಪಾತವಾಗಿ ಪಕ್ಷದ ಸಂಘಟನೆಗೆ ನಾವು ದುಡಿದಿದ್ದೇವೆ. ಪಕ್ಷ ಸೋತಾಗಲೂ ಜಿಲ್ಲೆಯಲ್ಲಿ ನಾವು ಲೀಡ್ ಪಡೆದು ಗೆದ್ದಿದ್ದೇವೆ. ನಾವು ಆರು ಬಾರಿ ಗೆದ್ದು, ಜನರ ವಿಸ್ವಾಸ ಗಳಿಸಿ, ಜಿಲ್ಲೆಯ ಎಲ್ಲಾ ಜನಾಂಗಕ್ಕೆ ಭೇದ ಭಾವ ಮಾಡದೇ ಕೆಲಸ ಮಾಡಿದ್ದೇವೆ. ನಮಗೆ ಯಾವಾಗ ಅವಕಾಶ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಬೇರೆಯವರ ಹಾಗೆ ಜನ ಕಟ್ಟಿಕೊಂಡು ಲಾಬಿ ಮಾಡುವ ಅವಶ್ಯಕತೆ ನನಗಿಲ್ಲ. ಯಾಕೆಂದರೆ ನಾನು ವಯಸ್ಸಿನಲ್ಲಿ ಹಾಗೂ ಶಾಸಕರಲ್ಲಿ ಅತ್ಯಂತ ಹಿರಿಯ ನಾಯಕ. ಈ ರೀತಿ ಇರುವಾಗ ನಮಗೆ ಅವಕಾಶ ಕೊಡದಿರುವುದು ಬಹಳ ನೋವಿನ ಸಂಗತಿ. ಈ ವಿಚಾರದಲ್ಲಿ ನಮ್ಮ ಸಿಎಂ ಹಾಗೂ ಕೇಂದ್ರದ ನಾಯಕರಿಗೆ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಸದ್ಯದಲ್ಲೇ ಹಿರಿಯ ನಾಯಕರೆಲ್ಲ ಸೇರಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಇಂದು ಪ್ರಮಾಣ ವಚನ ಸಮಾರಂಭಕ್ಕೆ ಹೋಗಬಾರದೆಂದು ನಾನು ನಿರ್ಧರಿಸಿದ್ದೆ. ಆದರೆ ನಮ್ಮ ಸ್ನೇಹಿತರು ಹಾಗೂ ಶಾಸಕರು ಕರೆ ಮಾಡಿ ಬರಲು ಹೇಳಿದ್ದಾರೆ, ಹೀಗಾಗಿ ಬೆಂಗಳೂರಿಗೆ ತೆರೆಳುತ್ತೇನೆ. ಅಲ್ಲಿ ರಾಜ್ಯದ ಅಭಿವೃದ್ಧಿಗೆ, ಪಕ್ಷಕ್ಕೆ ಅನುಕೂಲವಾಗುವ ರೀತಿ ಹೇಗೆ ನಮ್ಮ ನೋವನ್ನು ಹಿರಿಯ ನಾಯಕರಿಗೆ ತಿಳಿಸಬೇಕು ಎನ್ನುವುದನ್ನು ಚರ್ಚೆ ಮಾಡುತ್ತೇವೆ ಎಂದರು.

    ಜಿಲ್ಲೆಯಲ್ಲಿ ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಆದರೆ ಕೆಲ ಜನಾಂಗಕ್ಕೆ ಮಾನ್ಯತೆ ಕೊಡುತ್ತಿಲ್ಲ. ಹಿಂದಿನ ಕ್ಯಾಬಿನೆಟ್‍ನಲ್ಲಿ ಹಿಂದುಳಿದ ಜನಾಂಗದವರು ಕೆಲಸ ಮಾಡಿದ್ದಾರೆ. ಆದರೆ ಈಗ ಯಾವ ದೃಷ್ಟಿಯಿಂದ ನಮಗೆ ಅವಕಾಶ ಕೊಡುತ್ತಿಲ್ಲ ಎಂದು ಗೊತ್ತಿಲ್ಲ. ನಾನು ಬೇರೆಯವರಿಗೆ ಸಚಿವ ಸ್ಥಾನ ಕೊಟ್ಟಿರುವ ಬಗ್ಗೆ ಟೀಕೆ ಮಾಡಲ್ಲ. ಆದರೆ ನನಗೆ ಸಚಿವ ಸ್ಥಾನ ಕೊಡದಿದ್ದಕ್ಕೆ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು.

    ಸಿಎಂ ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಯಾವುದೇ ಮುನಿಸು, ದ್ವೇಷವಿಲ್ಲ. ಹಾಗೆಯೇ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಯಾರಾದರೂ ಕುತಂತ್ರ ನಡೆಸಿದ್ದಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಪಡೆಯುತ್ತೇವೆ. ಕಳೆದ 4-5 ಸರ್ಕಾರದ ಬಂದ ಅವಧಿಯಲ್ಲೂ ನಮ್ಮ ಜಿಲ್ಲೆಯವರು ಸಚಿವರಾಗದಿರುವುದು ದುರಂತ. ಹೊಸ ಸರ್ಕಾರ ರಚನೆಯಾದಗಲೆಲ್ಲಾ 4ರಿಂದ 5 ಮಂದಿ ಸಚಿವರಾಗುತ್ತಾರೆ ಆದರೆ ಎಲ್ಲರೂ ಹೊರ ಜಿಲ್ಲೆಯವರು. ಹೀಗಾಗಿ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.

    ಯಾವೆಲ್ಲ ಹಿರಿಯ ಶಾಸಕರು ಸೇರಿ ಸಭೆ ನಡೆಸುತ್ತೇವೆ ಎಂದು ಮುಂದಿನ ದಿನಗಳಲ್ಲಿ ನಿಮಗೆ ತಿಳಿಯುತ್ತೆ. ಈಗಲೇ ಅದರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಎಬಿವಿಪಿ, ಭಜರಂಗದಳ, ಹಿಂದೂ ಸಂಘಟನೆ, ಆರ್‍ಎಸ್‍ಎಸ್ ಹೀಗೆ ಹಲವು ಸಂಘಟನೆ ಜೊತೆ ಸಕ್ರಿಯವಾಗಿದ್ದೇನೆ. ಬಿಜೆಪಿಯ ಯಾವುದೇ ಕಾರ್ಯಾಕ್ರವಿದ್ದರೂ ಕ್ರಿಯಾಶೀಲವಾಗಿ ಭಾಗಿಯಾಗಿದ್ದೇನೆ. ಆದರೂ ಸಚಿವ ಸ್ಥಾನ ಸಿಗದೇ ಇರುವುದು ಅಘಾತವಾಗಿದೆ ಎಂದು ನೋವನ್ನು ಹಂಚಿಕೊಂಡರು.

    ಇತ್ತ ಶಾಸಕ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ. ಚಿತ್ರದುರ್ಗದ ಗಾಂಧಿಸರ್ಕಲ್‍ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ನಗರಸಭೆ ಸದಸ್ಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹೀರೋ ಸ್ಕೂಟಿ ಬೈಕಿಗೆ ಬೆಂಕಿ ಹಚ್ಚಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಸ್ಥಳಕ್ಕೆ ಚಿತ್ರದುರ್ಗ ಎಸ್‍ಪಿ ಡಾ.ಕೆ.ಅರುಣ್ ಹಾಗೂ ಇತರೆ ಪೊಲೀಸರು ಭೇಟಿ ನೀಡಿ, ಪ್ರತಿಭಟನಾ ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಪರಿಣಾಮ ದಿಕ್ಕಾಪಾಲಾಗಿ ಪ್ರತಿಭಟನಾಕಾರರು ಓಡಿಹೋಗಿದ್ದಾರೆ. ಅಲ್ಲದೆ ಮುಂಜಾಗೃತ ಕ್ರಮವಾಗಿ 10ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕರಕಲಾದ ಸ್ಕೂಟಿಯನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ.

  • 6 ಬಾರಿ ಶಾಸಕನಾಗಿರೋ ನನ್ನ ಹಿರಿತನವನ್ನ ಬಿಎಸ್‍ವೈ ಗುರುತಿಸಲಿದ್ದಾರೆ- ಶಾಸಕ ತಿಪ್ಪಾರೆಡ್ಡಿ

    6 ಬಾರಿ ಶಾಸಕನಾಗಿರೋ ನನ್ನ ಹಿರಿತನವನ್ನ ಬಿಎಸ್‍ವೈ ಗುರುತಿಸಲಿದ್ದಾರೆ- ಶಾಸಕ ತಿಪ್ಪಾರೆಡ್ಡಿ

    -ಸರ್ಕಾರ ರಚನೆಗೂ ಮುನ್ನವೇ ಮಂತ್ರಿಗಿರಿ ಕುರ್ಚಿಗೆ ಟವೆಲ್

    ಚಿತ್ರದುರ್ಗ: ಬಿಎಸ್ ಯಡಿಯೂರಪ್ಪ ಅವರು ಇನ್ನೂ ಸಿಎಂ ಆಗಿಲ್ಲ. ಅದಾಗಲೇ ಮಂತ್ರಿಗಿರಿ ಜಪ ಮಾಡಲು ಆರಂಭವಾಗಿದೆ. ನಾನು 6 ಬಾರಿ ಶಾಸಕನಾಗಿದ್ದೇನೆ. ಹೀಗಾಗಿ ನನ್ನ ಹಿರಿತನವನ್ನ ಬಿಎಸ್‍ವೈ ಗುರುತಿಸಲಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಮಂತ್ರಿ ಸ್ಥಾನದ ಲಾಭಿ ಆರಂಭಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ನೀರಾವರಿ, ಅಭಿವೃದ್ಧಿ ದೃಷ್ಟಿಯಿಂದ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ. ಯಡಿಯೂರಪ್ಪ ಮತ್ತು ರಾಷ್ಟ್ರ, ರಾಜ್ಯದ ನಾಯಕರು ನನ್ನ ಹಿರಿತನವನ್ನು ಗಮನಕ್ಕೆ ತೆಗೆದುಕೊಂಡು ನನಗೂ ಒಂದು ಅವಕಾಶ ಮಾಡಿಕೊಡುತ್ತಾರೆ ಎಂಬ ನಂಬಿಕೆಯಿಂದೆ ಎಂದು ಹೇಳಿದ್ದಾರೆ.

    ನಮ್ಮ ಜಿಲ್ಲೆಗೆ ಪ್ರತಿ ಬಾರಿಯೂ ಹೊರಗಿನವರನ್ನೇ ಮಂತ್ರಿಗಳನ್ನಾಗಿ ಮಾಡಲಾಗುತ್ತಿದೆ. ಹೀಗಾಗಿ ಅವರು ನಮ್ಮ ಜಿಲ್ಲೆಯತ್ತ ಒಂಚೂರು ಕಾಳಜಿ ವಹಿಸುತ್ತಿಲ್ಲ. ಸುಮಾರು 15 ವರ್ಷಗಳಿಂದ ನಮ್ಮ ಜಿಲ್ಲೆಯವರೇ ಮಂತ್ರಿಗಳಾಗದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯದ ಹಾಗೂ ನಮ್ಮ ಜಿಲ್ಲೆಯ ಅನೇಕ ಸಮಸ್ಯೆಗಳು ಅಂದರೆ ತುಂಗಾಭದ್ರಾ, ಹಿನ್ನೀರಿನ ಸಮಸ್ಯೆ, ಮೆಡಿಕಲ್ ಕಾಲೇಜು, ರೈಲ್ವೇ, ರೈತರಿಗೆ ನೀರಾವರಿ ಯೋಜನೆ ಹೀಗೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸಲು ನನಗೂ ಒಂದು ಅವಕಾಶ ಕೊಡಬೇಕು ಎಂದು ತಿಪ್ಪಾರೆಡ್ಡಿ ಕೇಳಿಕೊಂಡಿದ್ದಾರೆ.

    ನಾಳೆ ಸಮ್ಮಿಶ್ರ ಸರ್ಕಾರದ ಆಡಳಿತ ಅಂತ್ಯವಾಗಲಿದೆ. ರಾಜ್ಯದಲ್ಲಿ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರ ಬರುವ ವಿಶ್ವಾಸವಿದೆ. ಬಿಜೆಪಿ ಸರ್ಕಾರದಲ್ಲಿ ಈ ಬಾರಿ ನಾನು ಮಂತ್ರಿಯಾಗುವ ನಂಬಿಕೆ ಇದೆ. ಜಿಲ್ಲೆಯ ನೀರಾವರಿ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.