Tag: thippagondanahalli

  • ಮಾಸ್ತಿಗುಡಿ ದುರಂತ: ಐವರು ಆರೋಪಿಗಳ ಅರ್ಜಿ ವಜಾಗೊಳಿಸಿದ ಕೋರ್ಟ್

    ಮಾಸ್ತಿಗುಡಿ ದುರಂತ: ಐವರು ಆರೋಪಿಗಳ ಅರ್ಜಿ ವಜಾಗೊಳಿಸಿದ ಕೋರ್ಟ್

    ರಾಮನಗರ: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ದುರಂತ ಅಂತ್ಯ ಕಂಡಿದ್ದ ಖಳನಟರ ಸಾವಿನ ಪ್ರಕರಣದಿಂದ ಕೈಬಿಡುವಂತೆ ಕೋರಿ ಆರು ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಐವರು ಆರೋಪಿಗಳ ಅರ್ಜಿಯನ್ನು ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದೆ.

    ಈ ಪ್ರಕರಣದ ಕುರಿತು ರಾಮನಗರದ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಶನಿವಾರ ನಡೆದ ವಿಚಾರಣೆ ನಡೆಯಿತು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಅವರು, ಐವರು ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದ್ದು, ಆರನೇ ಆರೋಪಿ ಹೆಲಿಕಾಪ್ಟರ್ ಪೈಲೆಟ್ ಪ್ರಕಾಶ್ ಬಿರದಾರ್ ಅವರನ್ನ ಪ್ರಕರಣದಿಂದ ಕೈಬಿಡುವಂತೆ ಆದೇಶ ನೀಡಿದ್ದಾರೆ.

    ಆರೋಪಿ ಪ್ರಕಾಶ್ ಬಿರಾದರ್ ವಿರುದ್ಧ ಸ್ಯಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ. ಶೂಟಿಂಗ್ ವೇಳೆ ಪ್ರಕಾಶ್ ಬಿರಾದರ್ ಅವರು ಹೆಲಿಕಾಪ್ಟರ್ ಚಾಲನೆ ಮಾಡಿದ್ದರು. ಪ್ರಕಾಶ್ ಅವರ ಪರ ಹಿರಿಯ ವಕೀಲ ಐ.ಎಸ್. ದಿಲೀಪ್‍ಕುಮಾರ್ ಅವರು ಪ್ರಬಲವಾಗಿ ವಾದ ಮಂಡಿಸಿದರು.

    ಮಾಸ್ತಿಗುಡಿ ದುರಂತ ಪ್ರಕರಣದ ಪ್ರಮುಖ ಆರೋಪಿಗಳಾದ ನಿರ್ಮಾಪಕ ಸುಂದರ್ ಪಿ.ಗೌಡ(ಎ1), ನಿರ್ದೇಶಕ ರಾಜಶೇಖರ್(ಎ2), ಸಿದ್ದಾರ್ಥ್ ಅಲಿಯಾಸ್ ಸಿದ್ದು(ಎ3), ಸಾಹಸ ನಿರ್ದೇಶಕ ರವಿವರ್ಮಾ(ಎ4) ಮತ್ತು ಎ.ಪಿ.ಭರತ್ ರಾವ್(ಎ5) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಹೀಗಾಗಿ ಈ ಐವರು ಆರೋಪಿಗಳಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಈ ಮೂಲಕ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಅವರು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದ್ದಾರೆ.

    ಏನಿದು ಪ್ರಕರಣ?:
    ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ 2016ರ ನವೆಂಬರ್ 7ರಂದು ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ನಡೆದಿತ್ತು. ಈ ವೇಳೆ ಹೆಲಿಕಾಪ್ಟರ್ ನಿಂದ 100 ಅಡಿ ಎತ್ತರದಿಂದ ಖಳನಟ ಅನಿಲ್, ಉದಯ್ ಹಾಗೂ ನಾಯಕ ನಟ ದುನಿಯಾ ವಿಜಯ್ ಜಲಾಶಯಕ್ಕೆ ಜಿಗಿದಿದ್ದರು. ಆದರೆ ಮೂವರಿಗೂ ಈಜು ಬರುತ್ತಿರಲಿಲ್ಲ, ಜೊತೆಗೆ ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಹೆಲಿಕಾಪ್ಟರ್ ಮೂಲಕ ಜಿಗಿದಿದ್ದರು. ತಕ್ಷಣವೇ ನಟ ದುನಿಯಾ ವಿಜಯ್ ಅವರನ್ನು ತೆಪ್ಪದ ಮೂಲಕ ರಕ್ಷಣೆ ಮಾಡಲಾಗಿತ್ತು. ಆದರೆ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಅವರಿಬ್ಬರ ಮೃತದೇಹಗಳು 48 ಗಂಟೆಯ ಬಳಿಕ ಪತ್ತೆಯಾಗಿದ್ದವು. ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

  • ಪ್ರವಾಸದ ಬಯಕೆ ತೀರಿಸಲೆಂದು ಕರೆದೊಯ್ದು ಪತಿಯಿಂದಲೇ ಗರ್ಭಿಣಿಯ ಕೊಲೆ!

    ಪ್ರವಾಸದ ಬಯಕೆ ತೀರಿಸಲೆಂದು ಕರೆದೊಯ್ದು ಪತಿಯಿಂದಲೇ ಗರ್ಭಿಣಿಯ ಕೊಲೆ!

    ಬೆಂಗಳೂರು: ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಯ ಬಯಕೆ ತೀರಿಸುವುದಾಗಿ ಕರೆದೊಯ್ದು ಕೊಲೆ ಮಾಡಿದ ಘಟನೆ ಎರಡು ತಿಂಗಳ ನಂತರ ಬೆಳಕಿಗೆ ಬಂದಿದೆ.

    ಶಶಿಕಲಾ ಕೊಲೆಯಾದ ಗರ್ಭಿಣಿ. ಆರೋಪಿ ಪತಿ ಸತ್ಯರಾಜ್ ಶಶಿಕಲಾ ಅವರನ್ನು ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.

    ನಡೆದದ್ದು ಏನು?
    ಗರ್ಭಿಣಿಯಾಗಿದ್ದ ಶಶಿಕಲಾ ತಾನು ಪ್ರವಾಸ ಮಾಡಬೇಕೆಂಬ ಬಯಕೆಯನ್ನು ಪತಿ ಸತ್ಯರಾಜ್ ಮುಂದಿಟ್ಟಿದ್ದರು. ಹೀಗಾಗಿ ಸತ್ಯರಾಜ್ ಎರಡು ತಿಂಗಳ ಹಿಂದೆ ಶಶಿಕಲಾ ಅವರನ್ನು ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿಯ ಹಿನ್ನೀರಿನ ಜಾಗಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲದೇ ಅಲ್ಲಿಯೇ ಆಕೆಯನ್ನು ನೀರಿಗೆ ನೂಕಿ ಕೊಲೆ ಮಾಡಿದ್ದನು.

    ಕೊಲೆ ಮಾಡಿ ಮನೆಗೆ ಬಂದ ಸತ್ಯರಾಜ್, ‘ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ’ ಎಂದು ಶಶಿಕಲಾ ಫೋನ್‍ನಿಂದ ಆಕೆಯ ಸಂಬಂಧಿಕರಿಗೆ ಮೆಸೇಜ್ ಮಾಡಿದ್ದನು. ಅಷ್ಟಕ್ಕೆ ಬಿಡದೇ ಪುಟ್ಟೇನಹಳ್ಳಿ ಠಾಣೆಯಲ್ಲಿ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಇಷ್ಟು ಮಾತ್ರವಲ್ಲದೇ ಪೊಲೀಸರಿಗೆ ತನಿಖೆಯಲ್ಲಿ ಸಹಾಯ ಮಾಡುವವನಂತೆ ಕೂಡ ನಟಿಸಿದ್ದನು.

    ಸತ್ಯರಾಜ್ ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು, ಆತನನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಸತ್ಯರಾಜ್‍ನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸತ್ಯರಾಜ್ ಹಾಗೂ ಶಶಿಕಲಾ ಮಧ್ಯೆ ಜಗಳವಾಗಿತ್ತು. ಆತ ಸಾಲ ಮಾಡಿಕೊಂಡಿದ್ದನು. ಹೀಗಾಗಿಯೇ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಮಾಸ್ತಿಗುಡಿ ದುರಂತದ ಬಳಿಕ ಭಯದ ವಾತಾವರಣ- ತಿಪ್ಪಗೊಂಡನಹಳ್ಳಿಯಲ್ಲಿ ಜನರ ವಿಚಿತ್ರ ಆತಂಕ

    ಮಾಸ್ತಿಗುಡಿ ದುರಂತದ ಬಳಿಕ ಭಯದ ವಾತಾವರಣ- ತಿಪ್ಪಗೊಂಡನಹಳ್ಳಿಯಲ್ಲಿ ಜನರ ವಿಚಿತ್ರ ಆತಂಕ

    ಬೆಂಗಳೂರು: ಮಾಸ್ತಿಗುಡಿ ದುರಂತದ ತಿಪ್ಪಗೊಂಡನಹಳ್ಳಿ ಈಗ ಭಯದ ಸ್ಥಳವಾಗಿ ಮಾರ್ಪಡಾಗಿದೆ. ಅನಿಲ್ ಹಾಗೂ ಉದಯ್ ಸಾವಿನ ಕ್ಷಣವನ್ನು ಕಣ್ಣಾರೆ ಕಂಡ ಊರಿನವರು ತಿಪ್ಪಗೊಂಡನಹಳ್ಳಿಯತ್ತ ಸುಳಿಯೋದಕ್ಕೂ ಭಯಪಡುತ್ತಿದ್ದಾರೆ.

    ಮಾಸ್ತಿಗುಡಿ ದುರಂತದ ಕಹಿ ನೆನಪು ಇನ್ನೂ ಕಣ್ಣಮುಂದಿದೆ. ಸಾವಿನ ಕೊನೆ ಕ್ಷಣವನ್ನು ಟಿವಿಯಲ್ಲಿ ಕಣ್ತುಂಬಿಕೊಂಡ ಜನ ಕೂಡ ಕಣ್ಣೀರು ಹಾಕಿದ್ರು. ಈ ಘೋರ ಘಟನೆಗೆ ಕಾರಣವಾದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಈಗ ಅಕ್ಷರಶಃ ಸ್ಮಶಾನ ಮೌನ. ವಿಚಿತ್ರ ಅಂದ್ರೆ ಊರಿನ ಜನ ಅನಿಲ್ ಉದಯ್ ದೆವ್ವವಾಗಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಆಗಾಗ ಸದ್ದು ಕೇಳುತ್ತದೆ ಅಂತಾ ಭಯ ಬಿದ್ದಿದ್ದಾರೆ. ತಿಪ್ಪಗೊಂಡನಹಳ್ಳಿ ಸುತ್ತಮುತ್ತದ ಊರಿನ ಜನ ಯಾರೂ ಜಲಾಶಯದತ್ತ ಸುಳಿಯುತ್ತಿಲ್ಲ. ಅಲ್ಲದೇ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದ್ದ ಪಾರ್ಟಿಗಳು ಕೂಡ ಸಂಪೂರ್ಣ ಬಂದ್ ಆಗಿದೆ.

    ಈ ಹಿಂದೆ ಕುರಿ ಕಾಯುವವರು ಹಾಗೂ ದನ ಮೇಯಿಸೋಕೆ ಅಂತ ಜಲಾಶಯದ ಸುತ್ತಮುತ್ತ ಬರುತ್ತಿದ್ದ ಜನ ಈ ದುರ್ಘಟನೆಯ ಬಳಿಕ ಜಲಾಶಯದ ಬಳಿ ಬರೋದು ನಿಲ್ಲಿಸಿದ್ದಾರೆ ಅಂತಾರೆ ಮೀನುಗಾರರು. ತಿಪ್ಪಗೊಂಡನಹಳ್ಳಿ ಸುತ್ತಮುತ್ತಲಿನ ಊರಿನ ಜನ ಈ ದೆವ್ವದ ಕಥೆಗೆ ಭಯ ಬಿದ್ದು ಜಲಾಶಯದ ಬಳಿ ಸುಳಿಯೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದ್ರೆ ನಮಗೆ ಅಂತಹ ಅನುಭವವಾಗಿಲ್ಲ ಅನ್ನೋದು ಮೀನುಗಾರರ ಮಾತು.