Tag: thief

  • ಮಹಿಳೆಯ ಚೈನ್ ಕಸಿದು ಓಡುವಾಗ ಕೆಸರಲ್ಲಿ ಜಾರಿಬಿದ್ದ- ಕಳ್ಳನಿಗೆ ಸಾರ್ವಜನಿಕರಿಂದ ಸಖತ್ ಗೂಸಾ

    ಮಹಿಳೆಯ ಚೈನ್ ಕಸಿದು ಓಡುವಾಗ ಕೆಸರಲ್ಲಿ ಜಾರಿಬಿದ್ದ- ಕಳ್ಳನಿಗೆ ಸಾರ್ವಜನಿಕರಿಂದ ಸಖತ್ ಗೂಸಾ

    ದಾವಣೆಗೆರೆ: ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳನಿಗೆ ಸಾರ್ವಜನಿಕರು ಬೆಳ್ಳಂಬೆಳಗ್ಗೆ ಬಿಸಿಬಿಸಿ ಕಜ್ಜಾಯ ಕೊಟ್ಟಿದ್ದಾರೆ.

    ದಾವಣಗೆರೆಯ ವಿದ್ಯಾನಗರ ಬಡಾವಣೆಯ ಪಾರ್ಕ್‍ವೊಂದರ ಬಳಿ ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿ ಆಗುತ್ತಿದ್ದ ಧಾರವಾಡ ಮೂಲದ ಹೈದರ್ ಕೆಸರಿನಲ್ಲಿ ಜಾರಿಬಿದ್ದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಇತ್ತೀಚೆಗೆ ವಿದ್ಯಾನಗರ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗಿದ್ದು, ಆಕ್ರೋಶಗೊಂಡಿದ್ದ ಸಾರ್ವಜನಿಕರು ಕಳ್ಳ ಕೈಗೆ ಸಿಕ್ಕ ಅಂತ ತಲೆಗೊಂದು ಏಟು ಹಾಕಿದ್ದಾರೆ.

    ಗೂಸ ತಿಂದ ಹೈದರ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಪಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗ್ಯಾಸ್ ಕಟರ್‍ನಿಂದ ಬ್ಯಾಂಕ್ ಕಿಟಕಿ ಸರಳುಗಳನ್ನ ಕಟ್ ಮಾಡಿ ದರೋಡೆಗೆ ಯತ್ನ

    ಗ್ಯಾಸ್ ಕಟರ್‍ನಿಂದ ಬ್ಯಾಂಕ್ ಕಿಟಕಿ ಸರಳುಗಳನ್ನ ಕಟ್ ಮಾಡಿ ದರೋಡೆಗೆ ಯತ್ನ

    ಬೆಂಗಳೂರು: ಬ್ಯಾಂಕ್ ಕಿಟಕಿಯ ಸರಳುಗಳನ್ನ ಗ್ಯಾಸ್ ಕಟರ್ ಮೂಲಕ ಕಟ್ ಮಾಡಿ ಕಳ್ಳರು ದರೋಡೆಗೆ ಯತ್ನಿಸಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ನಡೆದಿದೆ.

    ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನಲ್ಲಿ ತಡರಾತ್ರಿ ಈ ಕೃತ್ಯ ನಡೆದಿದೆ. ಟಿ.ಬೇಗೂರು ಪೊಲೀಸ್ ಚೌಕಿ ಪಕ್ಕದಲ್ಲಿರುವ ಈ ಬ್ಯಾಂಕ್ ನಲ್ಲಿ ಸುಮಾರು ಐದಾರು ಮಂದಿ ಕಳ್ಳರು ಬಂದು ಕಳ್ಳತನಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.

    ಕಳ್ಳರು ಬ್ಯಾಂಕ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಮಾಡಿ ಹಣವಿದ್ದ ಸ್ಟ್ರಾಂಗ್ ರೂಮ್ ಕಟ್ ಮಾಡಲು ಸಾಧ್ಯವಾಗದ ಕಾರಣ ಹಣ ದೋಚಲು ಆಗಲಿಲ್ಲ. ಸಿನಿಮೀಯ ರೀತಿಯಲ್ಲಿ ರೂಪರೇಶಗಳನ್ನ ಸಿದ್ದಪಡಿಸಸಿ ಬ್ಯಾಂಕ್ ಹಿಂಬದಿಯ ಕಿಟಕಿಯನ್ನ ಚೌಕಾರವಾಗಿ ಕಟ್ ಮಾಡಿ ದರೋಡೆಗೆ ಸಂಚು ಮಾಡಿದ್ದಾರೆ.

    ಈ ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟರ್, ಇನ್ನಿತರ ಸಲಕರಣೆಗಳನ್ನ ಕಳ್ಳರು ಹೊಸದಾಗಿ ಖರೀದಿಸಿರುವ ಬಗ್ಗೆ ಪೊಲೀಸರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಕಳ್ಳರು ಎಲ್ಲಾ ಸಲಕರಣೆಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

    ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ನಿಮಿಷಾಂಬ ದೇವಸ್ಥಾನದ ಬಳಿ ಮಾಂಗಲ್ಯ ಸರ ಕದಿಯಲೆತ್ನಿಸಿದ ಕಳ್ಳನನ್ನು ಹಿಡಿದ ಮಹಿಳೆ

    ನಿಮಿಷಾಂಬ ದೇವಸ್ಥಾನದ ಬಳಿ ಮಾಂಗಲ್ಯ ಸರ ಕದಿಯಲೆತ್ನಿಸಿದ ಕಳ್ಳನನ್ನು ಹಿಡಿದ ಮಹಿಳೆ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಬಳಿ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಮುಂದಾದ ಸರಗಳ್ಳನನ್ನ ಆ ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬೆಂಗಳೂರಿನ ರಾಜಾಜಿನಗರದ ನಿವಾಸಿ ನವ್ಯಾ ಎಂಬವರು ಕಳ್ಳನನ್ನು ಹಿಡಿದ ದಿಟ್ಟ ಮಹಿಳೆ. ಪಾಂಡವಪುರ ತಾಲೂಕಿನ ಸಣಬ ಗ್ರಾಮದ ರಾಜು ಎಂಬಾತ ಬಂಧಿತ ಆರೋಪಿ. ಇಂದು ನವ್ಯಾ ಅವರು ನಿಮಿಷಾಂಬ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ರಾಜು ಅವರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಮುಂದಾಗಿದ್ದನು. ಈ ವೇಳೆ ಎಚ್ಚೆತ್ತ ನವ್ಯಾ ಕಳ್ಳ ರಾಜುನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ರಾಜುನನ್ನು ಹಿಡಿಯಲು ಸಹಕರಿಸಿದ್ದಾರೆ.

    ನಂತರ ಆರೋಪಿ ರಾಜುನನ್ನು ಶ್ರೀರಂಗಪಟ್ಟಣ ಪೊಲೀಸರ ವಶಕ್ಕೆ ನೀಡಲಾಗಿದೆ.

     

  • ಚಿನ್ನದಂಗಡಿ ದೋಚಲು ಬಾಡಿಗೆ ಮನೆಯಲ್ಲಿ ವಾಸ- ಮನೆಯಿಂದಲೇ ಸುರಂಗ ಕೊರೆದು ಲೂಟಿ

    ಚಿನ್ನದಂಗಡಿ ದೋಚಲು ಬಾಡಿಗೆ ಮನೆಯಲ್ಲಿ ವಾಸ- ಮನೆಯಿಂದಲೇ ಸುರಂಗ ಕೊರೆದು ಲೂಟಿ

    ಬೆಂಗಳೂರು: ಚಿನ್ನದಂಗಡಿಯ ಪಕ್ಕದ ಮನೆಯನ್ನು ಬಾಡಿಗೆ ಪಡೆದ ಯುವಕರು ಚಿನ್ನದ ಅಂಗಡಿಗೆ ಸುರಂಗ ಕೊರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿನ ಪವನ್ ಜ್ಯುವೆಲ್ಲರ್ಸ್ ನಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯ ಪಕ್ಕದ ಮನೆಯಿಂದ ಸುರಂಗ ಕೊರೆದು ಲೂಟಿ ಮಾಡಿದ್ದಾರೆ. ಹದಿನೈದು ದಿನಗಳ ಹಿಂದೆ ಬಾಡಿಗೆ ಪಡೆದಿದ್ದ ಉತ್ತರ ಪ್ರದೇಶ ಮೂಲದ ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ.

    ಹದಿನೈದು ದಿನದಿಂದ ಸುರಂಗ ಕೊರೆದು ಗುರುವಾರ ರಾತ್ರಿ ಚಿನ್ನದಂಗಡಿಯಲ್ಲಿನ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಅಂಗಡಿ ಮಾಲೀಕ ಅಂಗಡಿ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿದು ಬೊಮ್ಮನಹಳ್ಳಿ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    https://www.youtube.com/watch?v=O5k_wbWqmko

  • ಸ್ಕ್ರೂಡ್ರೈವರ್‍ನಿಂದ ಔಷಧಿ ಅಂಗಡಿ ಬೀಗ ಮುರಿದು ಕಳ್ಳತನ

    ಸ್ಕ್ರೂಡ್ರೈವರ್‍ನಿಂದ ಔಷಧಿ ಅಂಗಡಿ ಬೀಗ ಮುರಿದು ಕಳ್ಳತನ

    ರಾಯಚೂರು: ಕಳ್ಳನೊಬ್ಬ ಔಷಧಿ ಅಂಗಡಿ ಬೀಗ ಮುರಿದು ಕಳ್ಳತನ ಮಾಡಿ ಪರಾರಿಯಾದ ಘಟನೆ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಬಸ್ ನಿಲ್ದಾಣದ ಬಳಿಯ ಸಂತೋಷ ಕುಮಾರ್ ಎಂಬವರ ಬನದೇಶ್ವರ ಔಷಧಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಸ್ಕ್ರೂಡ್ರೈವರ್‍ನಿಂದ ದುಡ್ಡಿನ ಪೆಟ್ಟಿಗೆಯನ್ನ ಮುರಿದು 23 ಸಾವಿರ ರೂ. ನಗದು ಸೇರಿ 45 ಸಾವಿರ ರೂ. ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಿದ್ದಾನೆ.

    ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಕರಾಮತ್ತು ಬಯಲಾಗಿದೆ. ರಾತ್ರಿ ವೇಳೆ ಅಂಗಡಿ ಬೀಗ ಮುರಿದಿದ್ದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕರಾದ ಸಂತೋಷ ಕುಮಾರ್ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

    ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಕಳ್ಳನ ಪತ್ತೆಗೆ ಮುಂದಾಗಿದ್ದಾರೆ.

  • ಬೆಂಗ್ಳೂರಿಗರೇ ಎಚ್ಚರ: ಮನೆಗೆ ನುಗ್ಗಿ ಮಾಲೀಕನ ಬರ್ಬರ ಹತ್ಯೆ – ಬಾಲಕನ ತಲೆಗೆ ಹೊಡೆದ ಕಳ್ಳ

    ಬೆಂಗ್ಳೂರಿಗರೇ ಎಚ್ಚರ: ಮನೆಗೆ ನುಗ್ಗಿ ಮಾಲೀಕನ ಬರ್ಬರ ಹತ್ಯೆ – ಬಾಲಕನ ತಲೆಗೆ ಹೊಡೆದ ಕಳ್ಳ

    ಬೆಂಗಳೂರು: ಕಳ್ಳತನ ಮಾಡಲು ಮನೆಗೆ ನುಗ್ಗಿದ್ದ ಕಳ್ಳ ಮನೆ ಮಾಲೀಕನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಅನಂತರಾಮ್ ಕೊಲೆಯಾದ ದುರ್ದೈವಿ. ಯಲಹಂಕ ನ್ಯೂ ಟೌನ್‍ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕಳ್ಳ ರಾಡ್‍ನಿಂದ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅನಂತರಾಮ್ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ.

    ಐದು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಒಂದು ಮನೆಗೆ ನುಗ್ಗಿ ಬಾಲಕನ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಬಾಲಕನ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆಂದು ಹೇಳಲಾಗಿದೆ.

    ಘಟನೆಯಿಂದ ಯುಲಹಂಕ ನ್ಯೂ ಟೌನ್ ನಿವಾಸಿಗಳು ಭಯಭೀತರಾಗಿದ್ದಾರೆ. ಈ ಬಗ್ಗೆ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ವಿಡಿಯೋ: ಗಾಹಕರ ಸೋಗಿನಲ್ಲಿ ಬಂದ ಕಳ್ಳ ದುಬಾರಿ ಬೆಲೆಯ ಫೋನ್ ಕದ್ದು ಪರಾರಿ

    ವಿಡಿಯೋ: ಗಾಹಕರ ಸೋಗಿನಲ್ಲಿ ಬಂದ ಕಳ್ಳ ದುಬಾರಿ ಬೆಲೆಯ ಫೋನ್ ಕದ್ದು ಪರಾರಿ

    ಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಬರುವ ಕಳ್ಳರು ಕ್ಷಣಾರ್ಧದಲ್ಲಿ ಅಂಗಡಿಯಲ್ಲಿರುವ ವಸ್ತುಗಳನ್ನ ಎಗರಿಸಿ ಬಿಡುತ್ತಾರೆ. ಅದನ್ನು ತೋರಿಸಿ ಇದನ್ನು ತೋರಿಸಿ ಎಂದು ಕೇಳುತ್ತಾ ರೆಪ್ಪೆ ಮಿಟಕಿಸುವಷ್ಟರಲ್ಲಿ ತಮ್ಮ ಕೈಚಳಕ ತೋರಿಸುತ್ತಾರೆ. ಇಂಥದೊಂದು ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಮೂರು ಸಾವಿರ ಮಠದ ಬಳಿ ಇರುವ ಶ್ರೀಸಾಯಿ ಪ್ಲೈವುಡ್ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಪ್ಲೈವುಡ್‍ಗಳನ್ನು ವಿಚಾರಿಸಿ ಮತ್ತೆ ಬೇರೆ ಕ್ವಾಲಿಟಿ ತೋರಿಸುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ಅಂಗಡಿ ಮಾಲೀಕ ಸುರೇಶ್ ಇನ್ನಷ್ಟು ಬೇರೆ ಪ್ಲೈವುಡ್‍ಗಳನ್ನು ತರಲು ಒಳಗಡೆ ಹೋಗಿದ್ದಾರೆ. ಈ ಸಮಯವನ್ನೇ ಕಾಯುತ್ತಿದ್ದ ವ್ಯಾಪಾರದ ಸೋಗಿನಲ್ಲಿ ಬಂದಿದ್ದ ಕಳ್ಳ ಕೌಂಟರ್‍ನಲ್ಲಿದ್ದ ದುಬಾರಿ ಬೆಲೆಯ ಮೊಬೈಲ್ ಫೋನನ್ನು ಕದ್ದು ಪರಾರಿಯಾಗಿದ್ದಾನೆ.

    ಅಷ್ಟರಲ್ಲಿ ಅಂಗಡಿ ಮಲೀಕ ಸುರೇಶ ಬೇರೆ ಕ್ವಾಲಿಟಿ ಪ್ಲೈವುಡ್ ತಂದಿದ್ದರು. ಆತ ಇಲ್ಲದಿರುವುದನ್ನು ನೋಡಿ, ಬೇರೆ ಗ್ರಾಹಕರತ್ತ ಗಮನ ಹರಿಸಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಕೆಲ ಸಮಯದ ನಂತರ ಮೊಬೈಲ್ ಫೋನ್ ನೋಡಿದಾಗ ಫೋನ್ ಇಲ್ಲದಿರುವುದು ಕಂಡುಬಂದಿದೆ. ಕೂಡಲೇ ಸಿಸಿಟಿವಿ ನೋಡಿದಾಗ ಕೆಲ ನಿಮಿಷದ ಹಿಂದೆ ಬಂದ ಯುವಕ ಕಳ್ಳತನ ಮಾಡಿಕೊಂಡು ಹೋಗಿದ್ದು ಗೊತ್ತಾಗಿದೆ. ಕೂಡಲೇ ಉಪನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

    https://youtu.be/L_A0e7ANQs4

  • 10 ರೂ. ಸ್ಕೇಲ್ ಬಳಸಿ ಕಾರುಗಳ ಕಳವು – ನಂತ್ರ ಅದೇ ಕಾರಲ್ಲಿ ಕುರಿ ಕಳ್ಳತನ ಮಾಡ್ತಿದ್ದ!

    10 ರೂ. ಸ್ಕೇಲ್ ಬಳಸಿ ಕಾರುಗಳ ಕಳವು – ನಂತ್ರ ಅದೇ ಕಾರಲ್ಲಿ ಕುರಿ ಕಳ್ಳತನ ಮಾಡ್ತಿದ್ದ!

    ನೆಲಮಂಗಲ: ಚಾಣಾಕ್ಷ ಕಳ್ಳನೊಬ್ಬ 10 ರೂಪಾಯಿ ಸ್ಕೇಲ್ ಖರೀದಿಸಿ, ಲಕ್ಷಾಂತರ ಮೌಲ್ಯದ ಕಾರನ್ನೇ ಕಳ್ಳತನ ಮಾಡುತ್ತಿದ್ದ ಎಂದರೆ ನೀವು ನಂಬುತ್ತೀರಾ..?

    ಹೌದು, ಚಾಣಾಕ್ಷತೆಯಿಂದ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳನ್ನು ಕಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸರು ಆರೋಪಿ ಮಂಜ ಅಲಿಯಾಸ್ ಕ್ವಾಲಿಸ್ ಮಂಜ, ಕುರಿ ಮಂಜನನ್ನು ವಶಕ್ಕೆ ಪಡೆದಿದ್ದಾರೆ.

    ಮೂಲತಃ ಹಾಸನ ಜಿಲ್ಲೆಯ ಮಟ್ಟನವಿಲೆ ಗ್ರಾಮದ ನಿವಾಸಿಯಾಗಿರುವ ಮಂಜ, ಕೆಲ ದಿನದ ಹಿಂದೆ ನೆಲಮಂಗಲದ ದಾಸನಪುರ ತೋಟದಗುಡ್ಡದಹಳ್ಳಿಯಲ್ಲಿ ಕಾರುಗಳನ್ನ ಕದ್ದು ಪರಾರಿಯಾಗಿದ್ದ. ಆದರೆ ಈತ ಕಾರುಗಳನ್ನು ಚಾಣಾಕ್ಷತೆಯಿಂದ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ತನ್ನ ಬುದ್ಧಿ ಉಪಯೋಗಿಸಿ ಕೇವಲ 10 ರೂಪಾಯಿ ಸ್ಕೇಲ್ ಸಹಾಯದಿಂದ, ಮನೆ ಮುಂದೆ ನಿಂತಿರುವ ಲಕ್ಷಾಂತರ ರೂಪಾಯಿ ಕಾರುಗಳನ್ನ ಕಳ್ಳತನ ಮಾಡುತ್ತಿದ್ದ. ಅಲ್ಲದೆ ಈ ಕದ್ದ ಕಾರಿನಲ್ಲಿ ಕುರಿಗಳನ್ನ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

    ಕಳ್ಳತನ ಹೇಗೆ?
    10 ರೂ. ಸ್ಕೇಲ್ ಮೂಲಕ ಕಾರಿನ ಡೋರನ್ನು ಓಪನ್ ಮಾಡುತ್ತಿದ್ದ. ಡೋರ್ ಓಪನ್ ಆದ ಬಳಿಕ ಮೆಕಾನಿಕ್ ಬುದ್ಧಿಯಿಂದ ಸ್ಟೇರಿಂಗ್ ಲಾಕನ್ನು ಒಡೆದು, ವಯರ್‍ಗಳನ್ನು ಜೋಡಿಸಿ ಆನ್ ಮಾಡಿ ಗೇರ್ ಬದಲಾಯಿಸಿ ಕಾರನ್ನು ಚಲಾಯಿಸಿ ಕಳ್ಳತನ ಎಸಗುತ್ತಿದ್ದ.

    ಮಾದನಾಯಕನಹಳ್ಳಿ ಪೊಲೀಸರು ಈತನನ್ನು ಬಂಧಿಸಿದ್ದು, ಎರಡು ಕ್ವಾಲಿಸ್ ಹಾಗೂ ಒಂದು ಟಾಟಾ ಇಂಡಿಕಾ ಕಾರನ್ನ ವಶಪಡಿಸಿಕೊಂಡಿದ್ದಾರೆ.

    https://www.youtube.com/watch?v=eI-KypOKPF8

  • ನಾನು ಕಳ್ಳಿಯಲ್ಲ, ಕ್ರಿಮಿನಲ್‍ಗಳಂತೆ ಜೀಪ್‍ನಲ್ಲಿ ಕರೆದುಕೊಂಡು ಹೋಗ್ತೀರಾ: ಪೊಲೀಸರ ಮುಂದೆ ಶಶಿಕಲಾ ಡೈಲಾಗ್

    ನಾನು ಕಳ್ಳಿಯಲ್ಲ, ಕ್ರಿಮಿನಲ್‍ಗಳಂತೆ ಜೀಪ್‍ನಲ್ಲಿ ಕರೆದುಕೊಂಡು ಹೋಗ್ತೀರಾ: ಪೊಲೀಸರ ಮುಂದೆ ಶಶಿಕಲಾ ಡೈಲಾಗ್

    ಬೆಂಗಳೂರು: ನಾನೇನು ಕಳ್ಳಿಯಲ್ಲ. ಕ್ರಿಮಿನಲ್‍ಗಳ ಥರ ನನ್ನ ಜೀಪಲ್ಲಿ ಕರೆದುಕೊಂಡು ಹೋಗ್ತೀರಾ.. ನಾನು ಜೀಪು ಹತ್ತಲ್ಲ. ಜೈಲಿಗೆ ಎಷ್ಟು ದೂರು ಇದ್ರೂ ನಡೆದುಕೊಂಡೇ ಹೋಗ್ತೇನೆ.. ಹೀಗಂತ, ಪೊಲೀಸರ ಮುಂದೆ ಶಶಿಕಲಾ ನಟರಾಜನ್ ಹೇಳಿದ್ದಾರೆ.

    ಬುಧವಾರ ಪರಪ್ಪನ ಅಗ್ರಹಾರಕ್ಕೆ ಬಂದಾಗ ಶಶಿಕಲಾರನ್ನ ಪೊಲೀಸರು ಜೈಲಿನ ಆವರಣದಿಂದ ಬಂಧಿಖಾನೆಗೆ ಕರೆದುಕೊಂಡು ಹೋಗಲು ಜೀಪು ಹತ್ತುವಂತೆ ಹೇಳಿದ್ರು. ಆದ್ರೆ, ಜೀಪಲ್ಲಿ ಹೋಗೋಕೆ ನಾನೇನು ಜುಜುಬಿ ಕಳ್ಳಿಯಲ್ಲ ಎಂದು ಹೇಳಿರುವ ವಿಚಾರವನ್ನು ಪೊಲೀಸ್ ಮೂಲಗಳು ತಿಳಿಸಿವೆ.

    ಶುಕ್ರವಾರ ಬೆಳಗ್ಗೆ ಜೈಲಿನಲ್ಲಿ ವ್ಯಾಯಾಮ ಮಾಡಿದ ಬಳಿಕ ಚಿನ್ನಮ್ಮ, ಟೊಮೆಟೋ ಬಾತ್ ಸೇವಿಸಿದ್ದಾರೆ. ಅಲ್ಲದೆ, ಸಿಎಂ ಪಳನಿಸ್ವಾಮಿ ಜೈಲಿಗೆ ಭೇಟಿ ನೀಡಿದಾಗ ಸೂಕ್ಷ್ಮ ವಿಚಾರಗಳನ್ನ ಮಾತಾಡಲು ಪ್ರತ್ಯೇಕ ಕೋಣೆ ಕಲ್ಪಿಸುವಂತೆ ಜೈಲಾಧಿಕಾರಿಗೆ ಮನವಿ ಮಾಡಿದ್ದಾರೆ.

    ಶನಿವಾರ ಪಳನಿಸ್ವಾಮಿ ವಿಶ್ವಾಸ ಮತ ಗೆದ್ದರೆ ಭಾನುವಾರ ಅಥವಾ ಸೋಮವಾರ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡೋ ಸಾಧ್ಯತೆಯಿದೆ ಅಂತ ಎಐಎಡಿಎಂಕೆ ರಾಜ್ಯ ಘಟಕದ ಅಧ್ಯಕ್ಷ ಪುಗಳೇಂದಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.