Tag: thief

  • ಬೈಕ್, ಸರ ನಂತ್ರ ಈಗ ಪೆಟ್ರೋಲ್, ಹೆಲ್ಮೆಟ್ ಕಳ್ಳರ ಹಾವಳಿ ಶುರು

    ಬೈಕ್, ಸರ ನಂತ್ರ ಈಗ ಪೆಟ್ರೋಲ್, ಹೆಲ್ಮೆಟ್ ಕಳ್ಳರ ಹಾವಳಿ ಶುರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಷ್ಟು ದಿನ ಬೈಕ್, ಸರ ಹಾಗು ಮನೆಗಳ್ಳರ ಹಾವಳಿ ಹೆಚ್ಚಾಗಿತ್ತು. ಆದರೆ ಈಗ ಪೆಟ್ರೋಲ್ ಹಾಗೂ ಹೆಲ್ಮೆಟ್ ಕಳ್ಳರ ಹಾವಳಿ ಶುರುವಾಗಿದೆ.

    ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿಯಲ್ಲಿರುವ ನಂದಗೋಕುಲ ಬಡವಣೆಯಲ್ಲಿ ರಜೆ ದಿನಗಳಲ್ಲಿ ಇಲ್ಲಿ ಜನ ಸಂಚಾರ ಕಡಿಮೆ ಇರುತ್ತೆ. ಸಂಚಾರ ಕಡಿಮೆ ಇರುವ ಕಾರಣ ಮೂವರು ಯುವಕರು ಅಲ್ಲಿಯೇ ದೂರದಲ್ಲಿದ್ದ ಬಾಡಿಗೆ ಟೂ ವಿಲ್ಲರ್ ಗಾಡಿಯನ್ನು ತಳ್ಳಿಕೊಂಡು ಬರುತ್ತಾರೆ. ಇದನ್ನೂ ಓದಿ: ತುಮಕೂರಲ್ಲಿ ಹೆಲ್ಮೆಟ್ ಮಾಫಿಯಾ- ಬೆಲೆ ಬಾಳುವ ಹೆಲ್ಮೆಟ್‌ಗಳೇ ಇವರ ಟಾರ್ಗೆಟ್

    ಅಲ್ಲಿಗೆ ಬಂದ ನಂತರ ಎರಡು ಲೀಟರ್ ವಾಟರ್ ಬಾಟಲ್‌ಗೆ ಗಾಡಿಯಲ್ಲಿದ್ದ ಪೆಟ್ರೋಲ್ ಅನ್ನು ಕದ್ದಿದ್ದಾರೆ. ಸ್ಕೂಟರ್ ಇಂಜಿನ್ ಕೆಳಗೆ ಪೆಟ್ರೋಲ್ ಪೈಪ್ ಕಿತ್ತು ಇವರು ತಂದಿರುವ ಪೈಪ್ ಹಾಕಿ ಪೆಟ್ರೋಲ್ ಕದಿಯುತ್ತಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇತ್ತ ಕೋರಮಂಗಲದ ಫೋರಂ ಮಾಲ್‌ನ ಪಾರ್ಕಿಂಗ್‌ನಲ್ಲಿ ಹೆಲ್ಮೆಟ್ ಕಳ್ಳತನ ನಡೆದಿದೆ. ಪತಿ-ಪತ್ನಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನಗಳಲ್ಲಿ ಹೆಲ್ಮೆಟ್ ಇದ್ದರೆ ಸೈಲೆಂಟ್ ಆಗಿ ಅದನ್ನು ಬ್ಯಾಗಿನಲ್ಲಿ ಹಾಕಿಕೊಂಡು ಎಸ್ಕೇಪ್ ಆಗುತ್ತಾರೆ.

    ಮಾಲ್, ಸಿನಿಮಾ ಥಿಯೇಟರ್‌ಗಳನ್ನೇ ಟಾರ್ಗೆಟ್ ಮಾಡುವ ಇವರು ಕ್ಷಣಮಾತ್ರದಲ್ಲಿ ಹೆಲ್ಮೆಟ್ ಕದ್ದು ಎಸ್ಕೇಪ್ ಆಗುತ್ತಾರೆ. ಇಬ್ಬರು ಹೆಲ್ಮೆಟ್ ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಇವರಿಗಾಗಿ ಆಡುಗೋಡಿ ಪೊಲೀಸರು ಹುಡುಕಾಡುತ್ತಿದ್ದಾರೆ.

  • ಮಗುವನ್ನ ಕದ್ದು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್

    ಮಗುವನ್ನ ಕದ್ದು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್

    –  ಕೃತ್ಯಕ್ಕೆ ಸಹಕರಿಸಿದ್ದ ತಂಗಿ, ಆಕೆಯ ಪತಿ ವಶಕ್ಕೆ
    – ಕೂಲಿ ಕಾರ್ಮಿಕರ ಮಕ್ಕಳೇ ಟಾರ್ಗೆಟ್

    ಬೆಂಗಳೂರು: ಮೂರುವರೆ ವರ್ಷದ ಮಗುವನ್ನು ಕದ್ದು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಲೋಕೇಶ್ (40) ಬಂಧಿತ ಆರೋಪಿ. ಡಿಸೋಜಾನಗರದ ನಿವಾಸಿ, ಕೂಲಿ ಕಾರ್ಮಿಕ ದಂಪತಿ ಚೆನ್ನಪ್ಪ ಹಾಗೂ ದೇವಮ್ಮ ಅವರ ಮೂರುವರೆ ವರ್ಷದ ಮಗುವನ್ನು ಆರೋಪಿ ಲೋಕೇಶ್ 2019ರ ಮಾರ್ಚ್ 14ರಂದು ಮಗುವನ್ನು ಕದ್ದೊಯ್ದಿದ್ದ. ಆರೋಪಿಯನ್ನು ಭಾನುವಾರ ಪೊಲೀಸರು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.

    ಆರೋಪಿ ಲೋಕೇಶ್ ಕೂಲಿ ಕಾರ್ಮಿಕರ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಅಪಹರಣಕ್ಕೂ ನಾಲ್ಕು ದಿನ ಮೊದಲೇ ಏರಿಯಾಗೆ ಬಂದು ಮಕ್ಕಳಿಗೆ ತಿಂಡಿ ತಿನಿಸು ಕೊಡಿಸುತ್ತಿದ್ದ. ಈ ವೇಳೆ ಮಕ್ಕಳ ಫೋಟೋವನ್ನು ಕ್ಲಿಕ್ಕಿಸಿಕೊಂಡು, ಅದನ್ನು ಕೊಳ್ಳುವವರಿಗೆ ತೋರಿಸಿ ಯಾವ ಮಗು ಬೇಕು ಎಂದು ನಿಗದಿಪಡಿಸುತ್ತಿದ್ದ. ಮೊದಲೇ ಹಣ ಪಡೆದು ಬಳಿಕ ಮಗುವನ್ನ ಆಟೋದಲ್ಲಿ ಕರೆದುಕೊಂಡ ಹೋಗುತ್ತಿದ್ದ. ಇದೇ ರೀತಿ 2019ರ ಮಾರ್ಚ್ 14ರಂದು ಚೆನ್ನಪ್ಪ ಹಾಗೂ ದೇವಮ್ಮ ದಂಪತಿಯ ಮಗುವನ್ನು ಲೋಕೇಶ್ ಅಪಹರಿಸಿದ್ದ. ಆ ಮಗುವನ್ನು ರೇಣುಕಾ ಎಂಬಾಕೆಗೆ ಮಾರಾಟ ಮಾಡಲು ಸಿದ್ಧತೆ ನೆಡೆಸಿದ್ದ.

    ಮಗು ಕಾಣೆಯಾದ ಸಂಬಂಧ ಚೆನ್ನಪ್ಪ ಹಾಗೂ ದೇವಮ್ಮ ದಂಪತಿಯ ಗಿರಿನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಡಿಸೋಜಾನಗರದಿಂದ ಲೋಕೇಶ್ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಟೋ ನಂಬರ್ ಆಧರಿಸಿ ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು.

    ಲೋಕೇಶ್ ಅಪಹರಿಸಿದ್ದ ಮಗುವನ್ನು ತಂಗಿಯ ಮನೆಯಲ್ಲಿ ಇರಿಸಿದ್ದ. ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಆತನನ್ನು ಬಂಧಿಸಿ ವಿಚಾರಣೆಗೆ ಒಳಪಿಡಿಸಿದ್ದರು. ಈ ವೇಳೆ ಮಗು ತಂಗಿಯ ಮನೆಯಲ್ಲಿ ಇರುವುದಾಗಿ ಬಾಯಿಬಿಟ್ಟಿದ್ದಾನೆ. ತಕ್ಷಣವೇ ಪೊಲೀಸರು ಕೃತ್ಯಕ್ಕೆ ಸಹಕರಿಸಿದ್ದ ಲೋಕೇಶ್ ತಂಗಿ ಹಾಗೂ ಆಕೆಯ ಪತಿಯನ್ನು ವಶಕ್ಕೆ ಪಡೆದು, ಮಗುವನ್ನು ರಕ್ಷಿಸಿದ್ದಾರೆ.

    ಆರೋಪಿ ಲೊಕೇಶ್ ವಿರುದ್ಧ ಮದ್ದೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಬೆಂಗಳೂರಿನ ರಾಜಗೋಪಾಲನಗರ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳುವು ಪ್ರಕರಣ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಸರಗಳ್ಳತನ ಪ್ರಕರಣಗಳಿವೆ.

  • 2 ವರ್ಷದಲ್ಲಿ 60 ಕಾರ್ ಕದ್ದ 2 ಅಡಿಯ ಕಳ್ಳ

    2 ವರ್ಷದಲ್ಲಿ 60 ಕಾರ್ ಕದ್ದ 2 ಅಡಿಯ ಕಳ್ಳ

    ಲಕ್ನೋ: 2 ವರ್ಷದಲ್ಲಿ 60 ಕಾರುಗಳನ್ನು ಕದ್ದ 2 ಅಡಿ ಕಳ್ಳನನ್ನು ಸೇರಿ ನಾಲ್ವರನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ರೌನಕ್ ಅಲಿ ಅಲಿಯಾಸ್ ಬಬ್ಲು, ಜಮ್‍ಶೇದ್ ಅಲಿಯಾಸ್ ಬೌನಾ, ತಾಜ್ ಮೊಹಮ್ಮದ್ ಅಲಿಯಾಸ್ ಚಂದ್ ಹಾಗೂ ಯಾಕುಬ್ ಅರೆಸ್ಟ್ ಆದ ಕಳ್ಳರು. ನಾಲ್ವರು ಆರೋಪಿಗಳಲ್ಲಿ ಒಬ್ಬನ ಹೆಸರು ಬೌನಾ ಎಂದಾಗಿದ್ದು, ಆತ ಕೇವಲ 2 ಅಡಿ ಎತ್ತರವಿದ್ದಾನೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಡಿಎಸ್‍ಪಿ ರಾಜಕುಮಾರ್ ಪಾಂಡೆ, ಈ ಗ್ಯಾಂಗ್‍ಗೆ ಬೌನಾ ಎರಡು ವರ್ಷಗಳ ಹಿಂದೆ ಸೇರಿಕೊಂಡಿದ್ದನು. ಬೌನಾ ಮೊದಲು ಕಾರಿನ ಗ್ಲಾಸ್ ಒಡೆದು ಹಾಕಿ ಒಳಗೆ ನುಗ್ಗುತ್ತಾನೆ. ಬಳಿಕ ಆತನ ಸ್ನೇಹಿತರು ಕಾರು ಕದಿಯಲು ಸಹಾಯ ಮಾಡುತ್ತಿದ್ದರು. ಬೌನಾಗೆ ಗ್ಯಾಂಗ್‍ನ ಸದಸ್ಯರು ಮಾಸ್ಟರ್ ಮೈಂಡ್ ಎಂದೇ ಕರೆಯುತ್ತಾರೆ. ಅಲ್ಲದೆ ತಮ್ಮ ಗ್ಯಾಂಗ್‍ಗೆ ಬೌನಾ ಗ್ಯಾಂಗ್ ಎಂದೇ ಕರೆಯುತ್ತಾರೆ.

    ಬಬ್ಲು ಹಾಗೂ ಬೌನಾ ಸಂಬಂಧದಲ್ಲಿ ಮಾವ-ಅಳಿಯ. ಪೊಲೀಸರು ಆರೋಪಿ ಬಬ್ಲುನನ್ನು ವಿಚಾರಣೆ ನಡೆಸಿದಾಗ ಆತ, ನಾನು ಹಾಗೂ ನನ್ನ ಅಳಿಯ ಕಾರು ಕದಿಯುವುದರಲ್ಲಿ ಎತ್ತಿದ ಕೈ. ಆತ ಕಳೆದ 2 ವರ್ಷಗಳ ಹಿಂದೆ ಗ್ಯಾಂಗ್‍ಗೆ ಎಂಟ್ರಿ ಕೊಟ್ಟಿದ್ದನು. ಗ್ಯಾಂಗ್‍ನಲ್ಲಿ ಸೋನು ಎಂಬವನು ಇದ್ದು, ಆತ ಆರ್ಡರ್ ಪಡೆದು ಯಾವ ಕಾರು ಕದಿಯಬೇಕು ಎಂದು ನಮಗೆ ಹೇಳುತ್ತಿದ್ದನು. ಇದಾದ ಬಳಿಕ ನಾವು ಗಾಜು ಒಡೆದು ಕಾರಿನೊಳಗೆ ಹೋಗಿ ಇಗ್ನಿಶಿಯನ್‍ನನ್ನು ಮುರಿದು ಹಾಕುತ್ತಿದ್ದೆವು. ನಂತರ ಕಾರಿನ ಮಾಸ್ಟರ್ ಕೀ ಅಥವಾ ಕಾರಿನ ವೈರನ್ನು ಜೋಡಿಸಿ ಸ್ಟಾರ್ಟ್ ಮಾಡಿ ಪರಾರಿ ಆಗುತ್ತಿದ್ದೆವು. ಬೌನಾ ಈವರೆಗೂ 60 ಕಾರುಗಳನ್ನು ಕದಿದ್ದಾನೆ ಎಂದು ಹೇಳಿದ್ದಾನೆ.

    ಕಾರು ಕದ್ದ ನಂತರ ಅದನ್ನು ತಮ್ಮ ಸ್ನೇಹಿತ ಚಂದ್‍ನ ಗ್ಯಾರೇಜ್‍ನಲ್ಲಿ ಪಾರ್ಕ್ ಮಾಡುತ್ತಿದ್ದೆವು. ಅಲ್ಲಿ ಪ್ಲೇಟ್ ಹಾಗೂ ಕಾರಿಗೆ ಚಿಕ್ಕಪುಟ್ಟ ಬದಲಾವಣೆ ಮಾಡಿ ಖಾಲಿಯಿರುವ ಫ್ಲ್ಯಾಟ್‍ಗಳಲ್ಲಿ ಪಾರ್ಕ್ ಮಾಡುತ್ತಿದ್ದೆವು. ಇದೆಲ್ಲಾ ಆದ ಬಳಿಕ ಸೋನು ಈ ಕಾರುಗಳನ್ನು ಗ್ರಾಹಕರಿಗೆ ಮಾರುತ್ತಿದ್ದನು. ಕಾರು ಏನಾದರೂ ಮಾರಾಟವಾಗಲಿಲ್ಲ ಎಂದರೆ ಅದರ ಭಾಗಗಳನ್ನು ತೆಗೆದು ಯಾಕುಬ್ ಅದನ್ನು ದೆಹಲಿಯಲ್ಲಿ ಮಾರುತ್ತಿದ್ದನು ಎಂದು ಬಬ್ಲು ಪೊಲೀಸರಿಗೆ ತಿಳಿಸಿದ್ದಾನೆ.

    ಸಿಕ್ಕಿಬಿದ್ದಿದ್ದು ಹೇಗೆ?
    ಮಂಗಳವಾರ ಬಿಜೇಂದ್ರ ಸಿಂಗ್ ಎಂಬವರು ಇಬ್ಬರು ಕಳ್ಳರು ನಂಬರ್ ಪ್ಲೇಟ್ ಇಲ್ಲದಿರುವ ಕಾರಿನಲ್ಲಿ ಬರುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಳ್ಳರ ಕಾರನ್ನು ತಡೆಯಲು ಪ್ರಯತ್ನಿಸಿದಾಗ ಚಾಲಕ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಇಬ್ಬರನ್ನು ಹಿಂಬಾಲಿಸಿ ಬಂಧಿಸಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳರು ತಮ್ಮ ತಪ್ಪನ್ನು ಒಪ್ಪಿಕೊಂಡು ಕದ್ದಿರುವ ಕಾರುಗಳನ್ನು ನಿಠೋರಾ ರೋಡಿನಲ್ಲಿ ಪಾರ್ಕ್ ಮಾಡಿರುವುದಾಗಿ ಹೇಳಿದ್ದಾರೆ. ಆರೋಪಿಗಳ ಮಾತು ಕೇಳಿ ಪೊಲೀಸರು ಸ್ಥಳಕ್ಕೆ ತಲುಪಿ 8 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಅಲ್ಲಿದ್ದ ಮೂವರನ್ನು ಪೊಲೀಸರು ಬಂಧಿಸಲು ಪ್ರಯತ್ನಿದಾಗ ಒಬ್ಬ ಪರಾರಿಯಾಗಿದ್ದಾನೆ.

    ವರದಿಗಳ ಪ್ರಕಾರ, ಕಾರು ಕದಿಯುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಬೌನಾ ಕಾಣಿಸಿಕೊಂಡಿದ್ದು, ಆತನ ಎತ್ತರ ನೋಡಿ ಪೊಲೀಸರು ಚಿಕ್ಕ ಹುಡುಗ ಎಂದು ಬಿಡುತ್ತಿದ್ದರು ಎಂದು ಹೇಳಲಾಗುತ್ತಿದೆ.

  • ಕಳ್ಳತನಕ್ಕೆಂದು ಹೋಗಿ ಯುವತಿಯನ್ನು ಕೊಚ್ಚಿ ಕೊಂದ

    ಕಳ್ಳತನಕ್ಕೆಂದು ಹೋಗಿ ಯುವತಿಯನ್ನು ಕೊಚ್ಚಿ ಕೊಂದ

    ಡೆಹ್ರಾಡೂನ್: ಕಳ್ಳತನಕ್ಕೆಂದು ಹೋದ ಕಳ್ಳನೊಬ್ಬ ಯುವತಿಯನ್ನು ಕೊಚ್ಚಿ ಕೊಂದ ಘಟನೆಯೊಂದು ಶುಕ್ರವಾರ ಉತ್ತರಾಖಂಡದ ಉದಮ್‍ಸಿಂಗ್ ನಗರದಲ್ಲಿ ನಡೆದಿದೆ.

    ಪಿಂಕಿ ರಾವತ್(22) ಕೊಲೆಯಾದ ಯುವತಿ. ಮೂಲತಃ ಪೌರಿ ಗರ್ವಾಲ್ ಜಿಲ್ಲೆಯವಳಾಗಿರುವ ಪಿಂಕಿ, ತನ್ನ ಅಣ್ಣನ ಜೊತೆ ಕಾಶಿಪುರದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದಳು. ಪಿಂಕಿ ಮೊಬೈಲ್ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು.

    ಶುಕ್ರವಾರ ಮಧ್ಯಾಹ್ನ ಸುಮಾರು 12.30ಕ್ಕೆ ಪಿಂಕಿ ಮೊಬೈಲ್ ಅಂಡಗಿಯಲ್ಲಿ ಒಂಟಿ ಆಗಿದ್ದಳು. ಸ್ವಲ್ಪ ಹೊತ್ತಿನಲ್ಲೇ ಅಂಗಡಿ ಮಾಲೀಕ ಬರಬೇಕಾಗಿತ್ತು. ಈ ವೇಳೆ ಕಳ್ಳತನಕ್ಕೆಂದು ಅಂಗಡಿಗೆ ಬಂದ ಕಳ್ಳ ಯುವತಿಯನ್ನು ನೋಡಿದ್ದಾನೆ. ಬಳಿಕ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಕಳ್ಳ ಅಂಗಡಿಗೆ ಬಂದು ಮೊಬೈಲ್ ಬೆಲೆ ಕೇಳುವ ರೀತಿ ನಾಟಕವಾಡಿದ್ದಾನೆ. ಆದರೆ ಪಿಂಕಿಗೆ ಮೊಬೈಲ್ ಬೆಲೆ ಗೊತ್ತಿರಲಿಲ್ಲ. ಹಾಗಾಗಿ ಆಕೆ ತನ್ನ ಮಾಲೀಕನಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾಳೆ ಎಂದು ಕಾಶಿಪುರದ ಎಸ್‍ಎಚ್‍ಒ ಅಧಿಕಾರಿ ಚಂದ್ರ ಮೋಹನ್ ಸಿಂಗ್ ತಿಳಿಸಿದ್ದಾರೆ.

    ಪಿಂಕಿ ಮಾಲೀಕನಿಗೆ ಕರೆ ಮಾಡಿದಾಗ ಆತ ಐದು ನಿಮಿಷದಲ್ಲಿ ಅಂಗಡಿಗೆ ಬರುವುದಾಗಿ ಹೇಳಿದ್ದರು. ಬಳಿಕ ಅಂಗಡಿಗೆ ಬಂದು ನೋಡಿದಾಗ ಪಿಂಕಿ ಕುತ್ತಿಗೆಯನ್ನು ಚಾಕುವಿನಿಂದ ಇರಿಯಲಾಗಿತ್ತು. ಪರಿಣಾಮ ಆಕೆ ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದ್ದು ನರಳಾಡುತ್ತಿದ್ದಳು.

    ಈ ಬಗ್ಗೆ ಮಾಲೀಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಆರೋಪಿ ಒಂದೂವರೆ ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲಿ ಪಿಂಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

    ಪೊಲೀಸರು ಆರೋಪಿಯನ್ನು ಕಂಡು ಹಿಡಿಯಲು ಸ್ಥಳದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಪೊಲೀಸರು ತಂಡವನ್ನು ರಚಿಸಿ ಪರಾರಿಯಾಗಿರುವ ಆರೋಪಿಯನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

  • ಕಳ್ಳತನಕ್ಕೆ ಬಂದು ವೃದ್ಧೆಯ ಹಣ ಪಡೆಯದೆ ತಲೆಗೆ ಮುತ್ತಿಟ್ಟ

    ಕಳ್ಳತನಕ್ಕೆ ಬಂದು ವೃದ್ಧೆಯ ಹಣ ಪಡೆಯದೆ ತಲೆಗೆ ಮುತ್ತಿಟ್ಟ

    ಬ್ರೆಸಿಲಿಯಾ: ಕಳ್ಳತನಕ್ಕೆ ಎಂದು ಔಷಧಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಗ್ರಾಹಕಿ ವೃದ್ಧೆಯ ಬಳಿ ಹಣ ಪಡೆಯದೆ ಆಕೆಯ ತಲೆಗೆ ಮುತ್ತಿಟ್ಟು ಹೋಗಿರುವ ಘಟನೆ ಈಶಾನ್ಯ ಬ್ರೆಜಿಲ್‍ನಲ್ಲಿ ನಡೆದಿದೆ.

    ಕಳ್ಳತನ ಮಾಡಲು ಈಶಾನ್ಯ ಬ್ರೆಜಿಲ್‍ನಲ್ಲಿ ಇರುವ ಔಷಧಿ ಅಂಗಡಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಈ ವೇಳೆ ಅಂಗಡಿಯಲ್ಲಿ ಶಾಪ್ ಮಾಲೀಕ ಮತ್ತು ಕೆಲಸಗಾರ ಜೊತೆಗೆ ಅಂಗಡಿಗೆ ಬಂದಿದ್ದ ವೃದ್ಧೆಯೂ ಕೂಡ ಇರುತ್ತಾರೆ. ಈ ವೇಳೆ ಅಂಗಡಿಯನ್ನು ದೋಚಿದ ಕಳ್ಳರು ವೃದ್ಧೆಯೊಬ್ಬರು ತಾವೇ ತಮ್ಮ ಬಳಿ ಇದ್ದ ಹಣ ನೀಡಲು ಹೋದರೆ ಪಡೆಯದೇ ತಲೆಗೆ ಮುತ್ತು ಕೊಟ್ಟು ಹೋಗಿದ್ದಾರೆ.

    ಕಳ್ಳತನ ನಡೆದಿರುವ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋದಲ್ಲಿ, ಗನ್ ಹಿಡಿದು ಅಂಗಡಿಯೊಳಗೆ ಬಂದ ಇಬ್ಬರು ಕಳ್ಳರು ಅಂಗಡಿ ಮಾಲೀಕ ಮತ್ತು ಕೆಲಸಗಾರನ್ನು ಹೆದರಿಸಿ ಕ್ಯಾಶ್ ಬೋರ್ಡಿನಲ್ಲಿದ್ದ ಹಣವನ್ನು ದೋಚಿಕೊಳ್ಳುತ್ತಿರುತ್ತಾರೆ. ಈ ವೇಳೆ ಸ್ಥಳದಲ್ಲಿದ್ದ ವೃದ್ಧೆಯೊಬ್ಬರು ತಮ್ಮ ಬಳಿ ಇದ್ದ ಹಣವನ್ನು ಕಳ್ಳನಿಗೆ ನೀಡಲು ಹೋಗುತ್ತಾರೆ. ಆಗ ಕಳ್ಳ ಹಣವನ್ನು ಪಡೆಯದೇ ವೃದ್ಧೆಯ ತಲೆಗೆ ಮುತ್ತಿಟ್ಟು ಮುಂದೆ ಹೋಗುತ್ತಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಂಗಡಿಯ ಮಾಲೀಕ ಸ್ಯಾಮ್ಯುಯೆಲ್ ಅಲ್ಮೀಡಿಯಾ, ಸಂಜೆ ಸುಮಾರು 5 ಗಂಟೆಗೆ ಇಬ್ಬರು ಕಳ್ಳರು ನಮ್ಮ ಅಂಗಡಿಗೆ ನುಗ್ಗಿದರು. ಆಗ ಅಂಗಡಿಯೊಳಗೆ ನಾನು ನಮ್ಮ ಅಂಗಗಡಿಯ ಕೆಲಸಗಾರ ಮತ್ತು ವೃದ್ಧ ಮಹಿಳೆ ಸೇರಿ ಮೂವರು ಇದ್ದೇವು. ತಕ್ಷಣ ಒಳ ಬಂದ ಇಬ್ಬರು ಯುವಕರು ನಿಮ್ಮ ಅಂಗಡಿಯಲ್ಲಿರುವ ಹಣವನ್ನು ಕೊಡಲು ಹೇಳಿದರು.

    ಈ ವೇಳೆ ಒಬ್ಬ ಒಳಗೆ ಬಂದು ಹಣವನ್ನು ತುಂಬಿಕೊಳ್ಳುತ್ತಿದ್ದ ಮತ್ತು ಇನ್ನೊಬ್ಬ ಹೊರಗೆ ನಿಂತಿದ್ದ. ಆಗ ನಮ್ಮ ಅಂಗಡಿಯಲ್ಲಿದ್ದ ವೃದ್ಧ ಮಹಿಳೆ ಕಳ್ಳನಿಗೆ ತಮ್ಮ ಬಳಿ ಇದ್ದ ಹಣವನ್ನು ಕೊಡಲು ಹೋದರು ಆಗ ಆತ ‘ಇಲ್ಲ ಅಮ್ಮ ನಿಮ್ಮ ಹಣ ನಮಗೆ ಬೇಡ ನೀವು ಸುಮ್ಮನೆ ಇರಬಹುದು ನಾವು ನಿಮಗೆ ಏನೂ ಮಾಡುವುದಿಲ್ಲ’ ಎಂದು ಹೇಳಿ ತಲೆಗೆ ಮುತ್ತಿಟ್ಟು ನಮ್ಮ ಅಂಗಡಿಯಲ್ಲಿದ್ದ 71 ಸಾವಿರ ಹಣವನ್ನು ದೋಚಿಕೊಂಡು ಹೋದರು ಎಂದು ಹೇಳಿದ್ದಾರೆ.

    ಕಳ್ಳ ವೃದ್ಧೆಯ ತಲೆಗೆ ಮುತ್ತಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋವನ್ನು ಆಧಾರವಾಗಿ ಇಟ್ಟಿಕೊಂಡು ಬ್ರೆಜಿಲ್ ಪೊಲೀಸರು ಕಳ್ಳರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಶಂಕಿತನನ್ನು ಬಂಧಿಸಿಲ್ಲ.

  • ಕದ್ದಿದ್ದು ತಮಿಳುನಾಡಲ್ಲಿ, ಸರೆಂಡರ್ ಆಗಿದ್ದು ಬೆಂಗಳೂರಲ್ಲಿ..!

    ಕದ್ದಿದ್ದು ತಮಿಳುನಾಡಲ್ಲಿ, ಸರೆಂಡರ್ ಆಗಿದ್ದು ಬೆಂಗಳೂರಲ್ಲಿ..!

    ಬೆಂಗಳೂರು: ಕಳ್ಳನೊಬ್ಬ ತಮಿಳುನಾಡಿನಲ್ಲಿ 30 ಕೆಜಿ ಚಿನ್ನಾಭರಣ ಕದ್ದು ಬೆಂಗಳೂರಿನಲ್ಲಿ ಕೋರ್ಟಿಗೆ ಶರಣಾಗಿದ್ದಾನೆ.

    ಮುರುಗ ಕೋರ್ಟಿಗೆ ಶರಣಾದ ಖತರ್ನಾಕ್ ಕಳ್ಳ. ಆರೋಪಿ ಮುರುಗ ತಿರುಚ್ಚಿಯ ಲಲಿತಾ ಜ್ಯುವೆಲರ್ಸ್ ನಲ್ಲಿ ಕಳ್ಳತನ ಮಾಡಿ, ತಲೆಮರಿಸಿಕೊಂಡಿದ್ದ. ಇತನ ಬಂಧನಕ್ಕಾಗಿ ತಮಿಳುನಾಡು ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಶುಕ್ರವಾರ ಏಕಾಏಕಿ ನಗರದ ಮೆಯೋಹಾಲ್ ಕೋರ್ಟಿಗೆ ಬಂದು ಶರಣಾಗಿದ್ದಾನೆ.

    ಆರೋಪಿ ಮುರುಗ ಕಳ್ಳತನ ಪ್ರಕರಣದಲ್ಲಿ ಈ ಹಿಂದೆ ಬಾಣಸವಾಡಿ ಪೊಲೀಸರು ಬಂಧಿಸಿದ್ದರು. ಆಗ ಆತನ ತನ್ನ ಬಳಿ ಇದ್ದ 10 ಕೆಜಿ ಚಿನ್ನಾಭರಣವನ್ನು ಪೊಲೀಸರಿಗೆ ಒಪ್ಪಿಸಿದ್ದ. ಅಷ್ಟೇ ಅಲ್ಲದೆ ಮಡಿವಾಳ ಪೊಲೀಸರು ಈ ಹಿಂದೆ ಮುರಿಗನನ್ನ ಹಿಡಿದು 10 ಕೆಜಿ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದರು.

    ಹಳೆಯ ಚಾಳಿಯನ್ನು ಮುಂದುವರಿಸಿದ್ದ ಮುರುಗ, ತನ್ನ ಟೀಂ ಜೊತೆಗೆ ಸೇರಿ ತಿರುಚ್ಚಿ ನಗರದ ಲಲಿತಾ ಜ್ಯುವೆಲರ್ಸ್ ನಲ್ಲಿ ಅಕ್ಟೋಬರ್ 2ರಂದು ರಾತ್ರಿ ಚಿನ್ನಾಭರಣ ಎಗರಿಸಿದ್ದ. ಗೊಡೆಗಳನ್ನು ಕೊರೆದು ಅಂಗಡಿಯೊಳಗೆ ಪ್ರವೇಶಿಸಿದ್ದ ಮುರುಗ ಅಂಡ್ ಟೀಂ ಸುಮಾರು 30 ಕೆ.ಜಿ ತೂಕದ 13 ಕೋಟಿ ಮೌಲ್ಯದ 800ಕ್ಕೂ ಅಧಿಕ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿತ್ತು.

    ಬಹುಮಹಡಿ ಕಟ್ಟಡವಾದ ಲಲಿತಾ ಜ್ಯವೆಲರ್ಸ್ ನಲ್ಲಿ ಎಲ್ಲಾ ಕಡೆಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಹೀಗಾಗಿ ಯಾರಿಗೂ ತಮ್ಮ ಗುರುತು ಪತ್ತೆಯಾಗದಿರಲಿ ಎಂಬ ಕಾರಣಕ್ಕೆ ಮುರುಗ ಹಾಗೂ ಆತನ ತಂಡವು ಮುಖಕ್ಕೆ ಮಾಸ್ಕ್ ಧರಿಸಿಕೊಂಡಿತ್ತು. ಇದರಿಂದಾಗಿ ಕಳ್ಳರ ಗುರುತು ಪತ್ತೆಯಾಗಿರಲಿಲ್ಲ. ಮುರುಗನ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲಿಸರು ಆತನಿಗಾಗಿ ಬಲೆ ಬೀಸಿದ್ದರು.

    ಆರೋಪಿ ಮುರುಗ ಮಾರಕ ಖಾಯಿಲೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಪೊಲೀಸರ ಲಾಠಿ ಏಟಿಗೆ ಬೆದರಿ ಕೋರ್ಟ್ ಗೆ ಶರಣಾಗಿದ್ದಾನೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಬಿಡುಗಡೆಯಾದ ದಿನವೇ ಕಳ್ಳತನ ಮಾಡಿ ಮತ್ತೆ ಪೊಲೀಸರ ಅತಿಥಿಯಾದ

    ಬಿಡುಗಡೆಯಾದ ದಿನವೇ ಕಳ್ಳತನ ಮಾಡಿ ಮತ್ತೆ ಪೊಲೀಸರ ಅತಿಥಿಯಾದ

    ಬೆಂಗಳೂರು: ಜೈಲಿನಿಂದ ಬಿಡುಡೆಯಾದ ದಿನವೇ ಮತ್ತೆ ಕಳ್ಳತನ ಮಾಡಿ ಕಳ್ಳನೋರ್ವ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಪ್ರತಾಪ್ ಅಲಿಯಾಸ್ ಗೊಣ್ಣೆ ಸಿಕ್ಕಿ ಹಾಕಿಕೊಂಡ ಆರೋಪಿ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಆರೋಪಿ ಪ್ರತಾಪ್, ಏಳು ವರ್ಷ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದನು.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಏಳು ವರ್ಷ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ. ಆದರೆ ಬಂದ ದಿನ ಸಂಜೆಯೇ ಸಿಕೆ ಅಚ್ಚುಕಟ್ಟು ವ್ಯಾಪ್ತಿಯ ತ್ಯಾಗರಾಜ ನಗರದಲ್ಲಿ ಕಳ್ಳತನಕ್ಕೆ ಹೋಗಿದ್ದ ಪ್ರತಾಪ್ 400 ಗ್ರಾಂ ಒಡವೆ ನಗದು ದೋಚಿದ್ದ. ಪ್ರಕರಣವನ್ನು ಆ ದಿನವೇ ಭೇದಿಸಿದ ಸಿಕೆ ಅಚ್ಚುಕಟ್ಟು ಪೊಲೀಸರು ಅದೇ ದಿನ ರಾತ್ರಿ ಪ್ರತಾಪ್‍ನನ್ನು ಬಂಧಿಸಿ ಮತ್ತೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

  • ಆಶೀರ್ವಾದ ಪಡೆದು ವೃದ್ಧೆಯ ಸರಗಳ್ಳತನ ಮಾಡಿದ ಖತರ್ನಾಕ್ ಕಳ್ಳ

    ಆಶೀರ್ವಾದ ಪಡೆದು ವೃದ್ಧೆಯ ಸರಗಳ್ಳತನ ಮಾಡಿದ ಖತರ್ನಾಕ್ ಕಳ್ಳ

    ನವದೆಹಲಿ: ಆಶೀರ್ವಾದ ಪಡೆಯುವ ನೆಪದಲ್ಲಿ ಕಳ್ಳನೋರ್ವ 60 ವರ್ಷದ ವೃದ್ಧೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಈಶಾನ್ಯ ದೆಹಲಿಯ ಜ್ಯೋತಿನಗರದಲ್ಲಿ ನಡೆದಿದೆ.

    ಈ ಘಟನೆ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 60 ವರ್ಷದ ವೃದ್ಧೆ ಎಂ.ಎಸ್ ಪ್ರಕಾಶಿ ತನ್ನ ಸೋದರ ಸಂಬಂಧಿಯ ಜೊತೆ ಮನೆಯ ಮುಂದೆ ಕುಳಿತು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಮನೆಯ ಬಳಿ ಬಂದ ಇಬ್ಬರು ವ್ಯಕ್ತಿಗಳು ಸರಗಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ವೃದ್ಧೆ ಎಂ.ಎಸ್ ಪ್ರಕಾಶಿ, ನಾನು ಮತ್ತು ನನ್ನ ಸಂಬಂಧಿ ಮನೆಯ ಮುಂದೆ ಕುಳಿತು ಮಾತನಾಡುತ್ತಿದ್ದೇವು. ಆ ಸಮಯದಲ್ಲಿ ಅಲ್ಲಿಗೆ ಇಬ್ಬರು ಯುವಕರು ಬೈಕಿನಲ್ಲಿ ಬಂದರು ನಂತರ ಅವರು ನಮ್ಮ ಮನೆಯ ಮುಂದೆ ಬೈಕ್ ಪಾರ್ಕ್ ಮಾಡಿ ನಮಗೆ ಅಪಘಾತವಾಗಿದೆ. ಕೈಯಲ್ಲಿ ರಕ್ತ ಬರುತ್ತಿದೆ ಸ್ವಲ್ಪ ಅರಿಶಿನ ಕೊಡಿ ಎಂದು ಕೇಳಿದರು. ನಾನು ಅರಿಶಿನ ತರಲು ಮನೆಯೊಳಗೆ ಹೋದೆ.

    ನಾನು ಅರಿಶಿನ ತೆಗೆದುಕೊಂಡು ಬಂದಾಗ ಒಬ್ಬ ಮನೆಯ ಗೇಟಿನ ಒಳಗೆ ಬಂದಿದ್ದರೆ ಇನ್ನೊಬ್ಬ ಬೈಕಿನ ಮೇಲೆ ಕುಳಿತ್ತಿದ್ದ. ನಾನು ಅವನಿಗೆ ಅರಿಶಿನ ಕೊಟ್ಟೆ ಆತ ಅದನ್ನು ಕೈಗೆ ಹಾಕಿಕೊಂಡು, ನಿಮ್ಮಿಂದ ತುಂಬಾ ಉಪಕರವಾಯಿತು ಆಶೀರ್ವಾದ ಮಾಡಿ ಎಂದು ನನ್ನ ಕಾಲಿಗೆ ಬಿದ್ದ. ಆಗ ನಾನು ಸ್ವಲ್ಪ ಮುಂದೆ ಬಗ್ಗಿ ಅಶೀರ್ವಾದ ಮಾಡುತ್ತಿದ್ದಾಗ ಆತ ಸರವನ್ನು ಕಿತ್ತುಕೊಂಡು ನನ್ನನ್ನು ತಳ್ಳಿ ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ವೃದ್ಧೆ ಹೇಳಿದ್ದಾರೆ.

    ಈ ಸಂಬಂಧ ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ರಾತ್ರೋರಾತ್ರಿ ಅರೆ ಬೆತ್ತಲೆಯಾಗಿ ಎಸ್‍ಬಿಐ ಬ್ಯಾಂಕ್‍ಗೆ ಕನ್ನ ಹಾಕಿದ ಕಳ್ಳ

    ರಾತ್ರೋರಾತ್ರಿ ಅರೆ ಬೆತ್ತಲೆಯಾಗಿ ಎಸ್‍ಬಿಐ ಬ್ಯಾಂಕ್‍ಗೆ ಕನ್ನ ಹಾಕಿದ ಕಳ್ಳ

    ಬೀದರ್: ತಡರಾತ್ರಿ ಎಸ್‍ಬಿಐ ಬ್ಯಾಂಕ್‍ಗೆ ನುಗ್ಗಿ ಕಂಪ್ಯೂಟರ್ ಹಾಗೂ ಕೆಲವು ಸಲಕರಣೆಗಳನ್ನು ಕದ್ದು ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಬೀದರ್‍ ನಲ್ಲಿ ನಡೆದಿದೆ.

    ಬೀದರ್ ತಾಲೂಕಿನ ಖೇಣಿ ರಜೋಳ ಗ್ರಾಮದ ಎಸ್‍ಬಿಐ ಬ್ಯಾಂಕ್ ಕಿಟಕಿ ಒಡೆದು ಅರೆ ಬೆತ್ತಲೆಯಾಗಿ ಒಳ್ಳ ನುಗ್ಗಿದ ದರೋಡೆಕೋರ ತನ್ನ ಕೈಚಳಕ ತೋರಿಸಿ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳು ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ನೈಸ್ ಖ್ಯಾತಿಯ ಅಶೋಕ್ ಖೇಣಿ ಸ್ವಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದಿಂದ ತೀವ್ರ ಪರಿಶೀಲನೆ ನಡೆಸಲಾಗಿದೆ. ಬಗದಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪರಾರಿಯಾಗಿರುವ ಆರೋಪಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

  • ಕಳ್ಳ, ಕಳ್ಳನನ್ನು ಹಿಡಿಯಲು ಹೋದವನೂ ಪರಸ್ಪರ ಚಾಕು ಇರಿದುಕೊಂಡ್ರು

    ಕಳ್ಳ, ಕಳ್ಳನನ್ನು ಹಿಡಿಯಲು ಹೋದವನೂ ಪರಸ್ಪರ ಚಾಕು ಇರಿದುಕೊಂಡ್ರು

    ಬೆಂಗಳೂರು: ಕಳ್ಳ ಮತ್ತು ಕಳ್ಳನನ್ನು ಹಿಡಿಯಲು ಹೋದ ವ್ಯಕ್ತಿ ಪರಸ್ಪರ ಚಾಕುವಿನಿಂದ ಇರಿದುಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ಅನ್ನಪೂರ್ಣೇಶ್ವರಿ ನಗರದ ನಿವಾಸಿ ವಾಟರ್ ಬಸವರಾಜ್ ಎಂಬವರ ಮನೆಯಲ್ಲಿ 500 ಗ್ರಾಂ ಚಿನ್ನ, 50 ಸಾವಿರ ರೂ. ನಗದು ಕಳವುಗೈದು ಕಳ್ಳ ಎಸ್ಕೇಪ್ ಆಗುತ್ತಿದ್ದನು. ಇದನ್ನು ಗಮನಿಸಿದ ಮುನಿರಾಜ್ ಎಂಬವರು ಕಳ್ಳನನ್ನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಮುನಿರಾಜ್ ಮತ್ತು ಕಳ್ಳ ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ.

    ಕಳ್ಳತನ ಮಾಡಿ ಮನೆಯ ಹಿಂಭಾಗದ ನೀಲಗಿರಿ ತೋಪಿನಲ್ಲಿ ಓಡುತ್ತಿದ್ದ ಕಳ್ಳನನ್ನು ಗಮನಿಸಿದ ಮುನಿರಾಜ್, ಮನೆಯಲ್ಲಿದ್ದ ಚಾಕುವಿನೊಂದಿಗೆ ಕಳ್ಳನನ್ನು ಹಿಂಬಾಲಿಸಿ ಹಿಡಿದುಕೊಂಡಿದ್ದಾರೆ. ಈ ವೇಳೆ ಕಳ್ಳನೇ ಮುನಿರಾಜ್‍ಗೆ ಇರಿದಿದ್ದಾನೆ. ಆಗ ತನ್ನ ಬಳಿಯಿದ್ದ ಚಾಕುವಿನಿಂದ ಮುನಿರಾಜ್ ಕೂಡ ಕಳ್ಳನಿಗೆ ಇರಿದಿದ್ದಾರೆ.

    ಈ ಘಟನೆಯಲ್ಲಿ ಇಬ್ಬರಿಗೂ ತೀವ್ರವಾಗಿ ಗಾಯವಾಗಿ ರಕ್ತಸ್ರಾವ ಆದ ಕಾರಣ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳು ಹತ್ತಿರದ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.