Tag: thief

  • ಕಬ್ಬಿಣ ಕಳ್ಳನಿಗೆ ಕೊರೊನಾ ಪಾಸಿಟಿವ್- ಬೆಂಗ್ಳೂರಿನ 15 ಪೊಲೀಸರು ಕ್ವಾರಂಟೈನ್

    ಕಬ್ಬಿಣ ಕಳ್ಳನಿಗೆ ಕೊರೊನಾ ಪಾಸಿಟಿವ್- ಬೆಂಗ್ಳೂರಿನ 15 ಪೊಲೀಸರು ಕ್ವಾರಂಟೈನ್

    ಬೆಂಗಳೂರು: ಕಬ್ಬಿಣ ಕಳ್ಳನಿಗೆ ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದ್ದು ಬೆಂಗಳೂರಿನ ಪೊಲೀಸರಿಗೆ ಆತಂಕ ಶುರುವಾಗಿದೆ.

    ಆರೋಪಿಯು ಪಾದರಾಯನಪುರ ನಿವಾಸಿಯಾಗಿದ್ದು, ಕೊರೊನಾ ದೃಢಪಡುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಹೆಬ್ಬಗೋಡಿ ಠಾಣೆಯ 15 ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.

    ಆರೋಪಿಯು ಬಿಬಿಎಂಪಿಯ ಓರ್ವ ಕಾರ್ಪೋರೇಟರ್ ಸಂಬಂಧಿ ಎನ್ನಲಾಗಿದ್ದು, ಮೇ 17ರಂದು ಕಬ್ಬಿಣ ಕಳ್ಳತನ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಆತನನ್ನು ಹಿಡಿದು ಸ್ಥಳೀಯರು ಥಳಿಸಿದ್ದರು. ಬಳಿಕ ಹೆಬ್ಬಗೋಡಿ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಕಳ್ಳನನ್ನ ಸೋಮವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ಬಳಿಕ ಆತ ಪಾದರಾಯನಪುರದ ನಿವಾಸಿ ಎನ್ನುವುದು ತಿಳಿಯುತ್ತಿದ್ದಂತೆ ಜೈಲಿಗಟ್ಟುವ ಮುನ್ನ ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು.

    ಕಳ್ಳನ ಕೊರೊನಾ ಟೆಸ್ಟ್ ರಿಪೋರ್ಟ್ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಆರೋಗ್ಯಾಧಿಕಾರಿಗಳು ಹೆಬ್ಬಗೋಡಿ ಠಾಣೆಯ 15 ಪೊಲೀಸರನ್ನು ಕ್ವಾರಂಟೈನ್‍ನಲ್ಲಿ ಇರಿಸಿದ್ದಾರೆ. ಜೊತೆಗೆ ಠಾಣೆಯಲ್ಲಿ ಸ್ಯಾನಿಟೈಜರ್ ಸಿಂಪಡಿಸಲಾಗುತ್ತಿದೆ.

    ಇತ್ತ ಆತನನ್ನು ಥಳಿಸಿದ ಜನರನ್ನು ಕೂಡ ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಿಗೂ ಕಳ್ಳನಿಂದ ಆತಂಕ ಶುರುವಾಗಿದೆ.

  • ಕೋಲಾರದಲ್ಲಿ ಕಳ್ಳನಿಗೆ ಕೊರೊನಾ – ಪೊಲೀಸ್ ಇಲಾಖೆಯಿಂದ ತಪ್ಪಿತು ಅನಾಹುತ

    ಕೋಲಾರದಲ್ಲಿ ಕಳ್ಳನಿಗೆ ಕೊರೊನಾ – ಪೊಲೀಸ್ ಇಲಾಖೆಯಿಂದ ತಪ್ಪಿತು ಅನಾಹುತ

    – ಜಿಲ್ಲಾಡಳಿತಕ್ಕೆ ತಲೆ ನೋವಾದ ಖದೀಮನ ಟ್ರಾವಲ್ ಹಿಸ್ಟರಿ

    ಕೋಲಾರ: ಕೋಲಾರದಲ್ಲಿ ಕಳ್ಳನಿಂದ ಪೊಲೀಸರಿಗೂ ಕೂಡ ಕೊರೊನಾ ಅತಂಕ ಶುರುವಾಗಿದೆ. ರೋಗಿ ಸಂಖ್ಯೆ 1128 ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಇದೀಗ ಕೆಜಿಎಫ್ ಪೊಲೀಸರನ್ನು ಬೆಚ್ಚಿ ಬೀಳಿಸಿದೆ.

    ಮೇ 14ರಂದು ಕೋಲಾರ ಜಿಲ್ಲೆಯ ಕೆಜಿಎಫ್‍ನ ಮಾರಿಕುಪ್ಪಂನಲ್ಲಿರುವ ಚಿನ್ನದ ಗಣಿಯಲ್ಲಿ ಐದು ಜನ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ನೂರಾರು ಅಡಿಯಲ್ಲಿರುವ ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದರು. ಇನ್ನು ಐದು ಜನ ಕಳ್ಳರಲ್ಲಿ ಇಬ್ಬರು ಬಚಾವ್ ಅಗಿ ಪೊಲೀಸರ ಅತಿಥಿಯಾಗಿದ್ದರು.

    ಜೊತೆಗೆ ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಓರ್ವನ ಮೃತ ದೇಹಕ್ಕೆ ಇಂದೂ ಸಹ ಕಾರ್ಯಾಚರಣೆ ನಡೆಯುತ್ತಲೇ ಇದೆ. ಸೆರೆ ಸಿಕ್ಕ ಇಬ್ಬರು ಕಳ್ಳರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ, ನ್ಯಾಯಾಧೀಶರ ಆದೇಶದ ಮೇರೆಗೆ ಓರ್ವನಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಸದ್ಯ ಆತನಲ್ಲಿ ಸೋಂಕು ದೃಢವಾಗಿದ್ದು, ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

    ಅದೃಷ್ಟವಶಾತ್ ಅಂದು ಕೆಜಿಎಫ್ ಪೊಲೀಸರು ತೆಗೆದುಕೊಂಡಿದ್ದ ಮುನ್ನೆಚ್ಚರಿಕೆ ಕ್ರಮದಿಂದ ಸಾಕಷ್ಟು ಪೊಲೀಸ್ ಅಧಿಕಾರಿಗಳು ಬಚಾವ್ ಆಗಿದ್ದಾರೆ. ಸೋಂಕು ಇರುವ ಲಕ್ಷಣ ಕಂಡ ಕೂಡಲೇ ಕಳ್ಳನನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಿದ್ದಾರೆ. ಜೊತೆಗೆ ಜಾಸ್ತಿ ಜನ ಪೊಲೀಸರು ಅವನ ವಿಚಾರಣೆಗೆ ಹೋಗಿಲ್ಲ. ಹೋದವರು ಸುರಕ್ಷಿತ ಕ್ರಮವನ್ನು ಅನುಸರಿಸಿದ್ದಾರೆ. ಇಲ್ಲವಾದಲ್ಲಿ ಕೆಜಿಎಫ್‍ನ ಅರ್ಧ ಪೊಲೀಸರು ಕ್ವಾರಂಟೈನ್ ಆಗುವ ಸಾಧ್ಯತೆ ಇತ್ತು.

    ಒಟ್ಟಾರೆ ಕಳ್ಳರಿಗೆ ಭಯ ಹುಟ್ಟಿಸುತ್ತಿದ್ದ ಪೊಲೀಸರು, ಇದೀಗ ಕೊರೊನಾ ಸೋಂಕಿತ ಕಳ್ಳನನ್ನ ಕಂಡು ಭಯ ಬೀಳುವಂತಾಗಿದೆ. ಈತ ಕೆಜಿಎಫ್ ನಗರದಲ್ಲೇ ಅಟೋ ಚಾಲಕನಾಗಿದ್ದ, ಈತನ ಟ್ರಾವಲ್ ಹಿಸ್ಟರಿ ಕೂಡ ತಲೆನೋವಾಗಿದೆ. ಈತನ ಮೂಲ ಪತ್ತೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

  • ಮನೆಗೆ ನುಗ್ಗಿದ ಕಳ್ಳನನ್ನು ನಿದ್ದೆ ಮಾಡುವಂತೆ ಮಾಡಿದ ತುಳುನಾಡ ದೈವ!

    ಮನೆಗೆ ನುಗ್ಗಿದ ಕಳ್ಳನನ್ನು ನಿದ್ದೆ ಮಾಡುವಂತೆ ಮಾಡಿದ ತುಳುನಾಡ ದೈವ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಕಳ್ಳನೊಬ್ಬ ಮನೆಗೆ ನುಗ್ಗಿ ಅಲ್ಲಿಯೇ ಮಲಗಿ ನಿದ್ರಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಹಾರ ಮೂಲದ ಕಳ್ಳ ಅನಿಲ್ ಸಹಾನಿ, ಕಪಾಟಿನ ಬೀಗದ ಕೈಯನ್ನು ತೆಗೆದುಕೊಂಡಿದ್ದರೂ ಕಳ್ಳತನ ಮಾಡದೇ, ಅದೇ ಮನೆಯ ಸೋಫಾದಲ್ಲಿ ಮಲಗಿದ್ದನು. ಇದಕ್ಕೆ ಕಾರಣ ಆ ಮನೆಯಲ್ಲಿದ್ದ ದೈವದ ಶಕ್ತಿ ಎಂಬ ಮಾತುಗಳು ಕೇಳಿಬಂದಿದೆ.

    ಕಳ್ಳ ಕಪಾಟಿನಲ್ಲಿದ್ದ ಚಿನ್ನದ ಒಡವೆಗಳನ್ನು ಕದ್ದು ನಿರಾಯಾಸವಾಗಿ ಪರಾರಿ ಆಗಬಹುದಿತ್ತು. ಆದರೆ ಬೀಗದ ಕೈಯನ್ನು ಜೊತೆಗಿರಿಸಿಕೊಂಡೇ ಮಲಗಿದ್ದಲ್ಲದೆ, ಬೆಳಗ್ಗೆವರೆಗೂ ನಿದ್ರಿಸಿ ಮನೆ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದ. ಹೀಗೆ ಕಳ್ಳತನಕ್ಕೆಂದು ಬಂದು ಕಳ್ಳ ಮನೆಯಲ್ಲೇ ಮಲಗಿ ನಿದ್ದೆಗೆ ಜಾರಲು ಮನೆಯಲ್ಲಿದ್ದ ದೈವ ಶಕ್ತಿಯೇ ಕಾರಣ ಎನ್ನಲಾಗುತ್ತಿದೆ.

    ಮನೆಯ ಮಾಲೀಕ ಸುದರ್ಶನ್ ಪೂರ್ವಜರ ಕಾಲದಿಂದಲೂ ಮನೆಯಲ್ಲಿ ಕಲ್ಲುರ್ಟಿ ಮತ್ತು ಗುಳಿಗ ದೈವದ ಆರಾಧನೆ ಮಾಡುತ್ತಾ ಬಂದಿದ್ದರು. ಇದೇ ದೈವದ ಶಕ್ತಿ ಕಳ್ಳನನ್ನು ತಡೆದಿದ್ದು, ಆತ ಮನೆಯಲ್ಲೇ ಮಲಗಿ ಸಿಕ್ಕಿಬೀಳುವಂತೆ ಮಾಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಈ ಬಿಹಾರದ ಕಳ್ಳ ಸಿಕ್ಕಿಬೀಳುವ ಹತ್ತು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಮನೆಯ ಹೊರಗಿನ ದೈವದ ಗುಡಿಗೆ ನುಗ್ಗಿದ ಕಳ್ಳನೊಬ್ಬ ಕಾಣಿಗೆ ಡಬ್ಬಿ ಎಗರಿಸಲು ಯತ್ನಿಸಿದ್ದ. ಆದರೆ ಗುಡಿಗೆ ನುಗ್ಗಿದ್ದ ಕಳ್ಳ ಹೊರಗೆ ಬರಲಾಗದೇ ಸಿಕ್ಕಿಬಿದ್ದಿದ್ದ. ಇದು ಕೂಡ ದೈವದ ಪವಾಡ ಎನ್ನುವ ಮಾತು ಕೇಳಿಬಂದಿತ್ತು. ಅಂದು ಕೂಡ ಕಳ್ಳನನ್ನು ಮನೆಯವರೇ ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದರು.

    ಈಗ ಮತ್ತೊಬ್ಬ ಕಳ್ಳ ಮನೆಗೆ ನುಗ್ಗಿ ಮನೆಯಲ್ಲೇ ನಿದ್ರಿಸಿ ಸಿಕ್ಕಿಬಿದ್ದಿದ್ದಾನೆ. ಮನೆಯ ಹಂಚು ತೆಗೆದು ಒಳನುಗ್ಗಿ, ಬೀಗದ ಕೈಯನ್ನು ಎಗರಿಸಿದ್ದರೂ ಕಳವು ಮಾಡದೇ ಸುಮ್ಮನೆ ಮಲಗಿದ್ದು ದೈವಿ ಶಕ್ತಿಯ ಪವಾಡ ಎನ್ನುವ ಮಾತು ಕೇಳಿಬಂದಿದೆ. ಮನೆಯ ಯಜಮಾನ ಸುದರ್ಶನ್ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ.

  • ಕಳ್ಳತನಕ್ಕೆಂದು ಮನೆ ಹೊಕ್ಕು ನಿದ್ದೆಗೆ ಜಾರಿ ಸಿಕ್ಕಿಬಿದ್ದ ಯುವಕ

    ಕಳ್ಳತನಕ್ಕೆಂದು ಮನೆ ಹೊಕ್ಕು ನಿದ್ದೆಗೆ ಜಾರಿ ಸಿಕ್ಕಿಬಿದ್ದ ಯುವಕ

    ಮಂಗಳೂರು: ಹೊಟ್ಟೆ ತುಂಬಾ ತಿಂದು ಕುಳಿತಲ್ಲೇ ನಿದ್ದೆಗೆ ಜಾರಿದವರನ್ನು ನೋಡಿರಬಹುದು. ಆದರೆ ಇನ್ನೊಬ್ಬರ ಮನೆಯಲ್ಲಿ ಕಳ್ಳತನ ಮಾಡುಲು ಹೋಗಿ ನಿದ್ದೆಗೆ ಜಾರಿದ್ದನ್ನು ಕೇಳಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇಂಥದ್ದೊಂದು ಅಪರೂಪದ ಘಟನೆ ನಡೆದಿದ್ದು, ಆರೋಪಿ ಮನೆ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಬಿಹಾರದ ಮಜೀಪುರ್ ಜಿಲ್ಲೆಯ ಅನಿಲ್ ಸಹಾನಿ (34) ಕಳ್ಳತನಕ್ಕೆ ಯತ್ನಿಸಿ, ಸಿಕ್ಕಿಬಿದ್ದ ಆರೋಪಿ. ಉಪ್ಪಿನಂಗಡಿಯ ಸುದರ್ಶನ್ ಎಂಬವರ ಮನೆಗೆ ಅನಿಲ್ ಸಹಾನಿ ಮಂಗಳವಾರ ಮಧ್ಯರಾತ್ರಿ ನುಗ್ಗಿದ್ದ. ಮನೆಯ ಹಂಚು ತೆಗೆದು ಒಳನುಗ್ಗಿದ್ದ ಅನಿಲ್ ಮನೆ ಛಾವಣಿಯ ದಿವಾನದಲ್ಲಿ ಮಲಗಿ ನಿದ್ದೆಗೆ ಜಾರಿದ್ದ.

    ಬುಧವಾರ ಬೆಳಗ್ಗೆ ಎದ್ದ ಸುದರ್ಶನ್ ಅವರು ದಿವಾನದಲ್ಲಿ ಮಲಗಿದ್ದ ಅನಿಲ್‍ನನ್ನು ಕಂಡು ಗಾಬರಿಗೊಂಡಿದ್ದರು. ಬಳಿಕ ಎರಡೇಟು ಬಿಗಿದಾಗ ನಿಜ ಬಾಯಿಬಿಟ್ಟ ಆರೋಪಿಯನ್ನು ಸುದರ್ಶನ್ ಅವರು ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಅನಿಲ್ ಸಹಾನಿ ಬೀಗದ ಕೀಲಿಕೈ ಹಿಡಿದುಕೊಂಡೇ ಮಲಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

  • ಶ್ರೀಮಂತರ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಕಲ್ಕೆರೆ ಮಂಜ ಅರೆಸ್ಟ್

    ಶ್ರೀಮಂತರ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಕಲ್ಕೆರೆ ಮಂಜ ಅರೆಸ್ಟ್

    ಬೆಂಗಳೂರು: ಶ್ರೀಮಂತರ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕಲ್ಕೆರೆ ಮಂಜ ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಮತ್ತೆ ಸಿಕ್ಕಿ ಬಿದ್ದಿದ್ದಾನೆ. ಬಾಗಲೂರು ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಯ ಬಂಧನವಾಗಿದೆ.

    ಹಲವು ಪ್ರಕರಣಗಳಲ್ಲಿ ಜೈಲು ಸೇರಿ ಬಿಡುಗಡೆಯಾದರೂ ಕೃತ್ಯ ಬಿಡದ ಆಸಾಮಿ, ಕಳೆದ ಎರಡು ತಿಂಗಳ ಹಿಂದಷ್ಟೇ ಬಾಗಲೂರಿನ ಏರಿಯಾವೊಂದರಲ್ಲಿ ಮನೆಕಳ್ಳತನ ಮಾಡಿದ್ದ. ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಯಾಕಂದರೆ ಆರೋಪಿ ಬಂಧನದಿಂದ ಮತ್ತೆ ಮೂರು ಪ್ರಕರಣಗಳು ಪತ್ತೆಯಾಗಿವೆ.

    ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದಿದ್ದ ಮೂರು ಮನೆಗಳ ಕಳ್ಳತನ ಪ್ರಕರಣಗಳು ಹೊರಬಂದಿವೆ. ಬಂಧಿತನಿಂದ 10 ಲಕ್ಷಕ್ಕೂ ಹೆಚ್ಚು ಮೌಲ್ಯದ 900 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಾಗಿದೆ. ತಡರಾತ್ರಿ ಎಂಟ್ರಿ ಕೊಟ್ಟು ಕೃತ್ಯ ಎಸಗುತ್ತಿದ್ದ ಕಲ್ಕರೆ ಮಂಜ, ಶ್ರೀಮಂತರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ನಂತರ ಬೀಗ ಹಾಕಿದ ಮನೆಯನ್ನು ದೋಚಿ ಎಸ್ಕೇಪ್ ಅಗುತ್ತಿದ್ದ.

    ಬೀಗ ಮುರಿದು ಎಂಟ್ರಿ ಕೊಟ್ಟು ಕೈಗೆ ಸಿಕ್ಕ ಚಿನ್ನಾಭರಣ ದೋಚುತ್ತಿದ್ದ. ಬಂಧಿತನ ವಿರುದ್ಧ 15 ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ ಹಲವು ಬಾರಿ ಜೈಲು ಸೇರಿದ್ದರೂ ಸಹ ಜೈಲಿನಿಂದ ಬಿಡುಗಡೆ ಬಳಿಕವು ಕೃತ್ಯ ಮುಂದುವರಿಸಿ ಲಾಕ್ ಆಗಿದ್ದಾನೆ.

  • ಉದ್ಯೋಗದಲ್ಲಿ ಆಟೋ ಚಾಲಕ, ರಾತ್ರಿಯಾದ್ರೆ ಕಳ್ಳತನ- ಖತರ್ನಾಕ್ ಕಳ್ಳ ಅರೆಸ್ಟ್

    ಉದ್ಯೋಗದಲ್ಲಿ ಆಟೋ ಚಾಲಕ, ರಾತ್ರಿಯಾದ್ರೆ ಕಳ್ಳತನ- ಖತರ್ನಾಕ್ ಕಳ್ಳ ಅರೆಸ್ಟ್

    – 750 ಗ್ರಾಂ ಬಂಗಾರ ವಶ

    ರಾಯಚೂರು: ಆಟೋ ಚಾಲಕರು ಅಂದ್ರೆ ಎಷ್ಟೋ ಪ್ರಕರಣಗಳಲ್ಲಿ ಪ್ರಾಮಾಣಿಕತೆಯನ್ನು ಮೆರೆದು ಮಾದರಿಯಾದವರಿದ್ದಾರೆ. ಆದರೆ ರಾಯಚೂರಿನ ಖದೀಮನೊಬ್ಬ ವೃತ್ತಿಯಲ್ಲಿ ಆಟೋಚಾಲಕನಾಗಿದ್ದರೂ ರಾತ್ರಿ ವೇಳೆ ಮನೆಬೀಗ ಹೊಡೆದು ಕಳ್ಳತನ ಮಾಡುತ್ತಿದ್ದ.

    ಎರಡು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಸುರೇಶ್‍ನನ್ನು ಪೊಲೀರು ಬಂಧಿಸಿದ್ದಾರೆ. ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ ಒಟ್ಟು 750 ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ.

    ಸುರೇಶ್ ವಿರುದ್ಧ ಹೋಟೆಲ್‍ವೊಂದರಲ್ಲಿ ಬ್ಯಾಗ್ ಕದ್ದಿರುವ ಹಾಗೂ ರಾತ್ರಿ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವ ಪ್ರಕರಣವು ರಾಯಚೂರಿನ ನೇತಾಜಿ ಠಾಣೆ ದಾಖಲಾಗಿದ್ದವು. ಈ ಕುರಿತು ವಿಚಾರಣೆ ಆರಂಭಿಸಿದ ಪೊಲೀಸರು ಗುರುವಾರ ಆರೋಪಿಯನ್ನು ಬಂಧಿಸಿದ್ದಾರೆ.

  • ಕಾರಿನಲ್ಲಿಟ್ಟಿದ್ದ 40 ಲಕ್ಷ ರೂ. ಎಗರಿಸಿ ಪರಾರಿಯಾದ ಖದೀಮರು

    ಕಾರಿನಲ್ಲಿಟ್ಟಿದ್ದ 40 ಲಕ್ಷ ರೂ. ಎಗರಿಸಿ ಪರಾರಿಯಾದ ಖದೀಮರು

    ತುಮಕೂರು: ಕಾರಿನಲ್ಲಿಟ್ಟಿದ್ದ 40 ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿನ ಎದುರೇ ಕಳ್ಳರು ಎಗಿರಿಸಿ ಪರಾರಿಯಾದ ಘಟನೆ ಶಿರಾ ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಬಳಿ ನಡೆದಿದೆ.

    ಆಂಧ್ರ ಪ್ರಗತಿ ಬ್ಯಾಂಕ್‍ನ ರೊಳ್ಳೆ ಮತ್ತು ಪೆದ್ದಮಂತೂರಿನ ಶಾಖೆಯ ವ್ಯವಸ್ಥಾಪಕರು ಶಿರಾ ಎಸ್‍ಬಿಐ ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೋಗಲು ಇಂದು ಬಂದಿದ್ದರು. ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮೂರು ಬ್ಯಾಗಲ್ಲಿ ತುಂಬಿಸಿಕೊಂಡು ಬ್ಯಾಂಕಿನಿಂದ ಹೊರ ಬಂದು ಕಾರಿನಲ್ಲಿಟ್ಟಿದ್ದರು.

    ಈ ಹಂತದಲ್ಲಿ ವ್ಯವಸ್ಥಾಪಕರು ಬಂದಿದ್ದ ಕಾರು ಪಂಚರ್ ಆಗಿರುವುದು ಕಂಡು ಬಂದಿತ್ತು. ಟಯರ್ ಬದಲಾಯಿಸಿಕೊಳ್ಳುತಿದ್ದಾಗ ಗಮನ ಬೇರೆಡೆ ಇದ್ದ ಸಂದರ್ಭದಲ್ಲಿ ಹಣ ಇಟ್ಟಿದ್ದ ಮೂರು ಬ್ಯಾಗ್‍ಗಳಲ್ಲಿ ಒಂದನ್ನು ತೆಗೆದುಕೊಂಡು ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಳೆದು ಹೋದ ಬ್ಯಾಗ್‍ನಲ್ಲಿ 40 ಲಕ್ಷ ರೂಪಾಯಿ ಇತ್ತು ಎಂಬ ಮಾಹಿತಿ ಲಭಿಸಿದ್ದು, ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರೀಶಲನೆ ನಡೆಸಿದ್ದು, ಬ್ಯಾಗ್ ಎಗರಿಸಿದ ಕಳ್ಳರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

  • ತೆಲಂಗಾಣ ಅಧಿಕಾರಿಗಳ ಸಹಾಯದಿಂದ ಕುಖ್ಯಾತ ಮನೆಗಳ್ಳನ ಬಂಧಿಸಿದ ಹುಬ್ಳಿ ಪೊಲೀಸ್

    ತೆಲಂಗಾಣ ಅಧಿಕಾರಿಗಳ ಸಹಾಯದಿಂದ ಕುಖ್ಯಾತ ಮನೆಗಳ್ಳನ ಬಂಧಿಸಿದ ಹುಬ್ಳಿ ಪೊಲೀಸ್

    ಹುಬ್ಬಳ್ಳಿ: ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಕುಖ್ಯಾತ ಅಂತರರಾಜ್ಯ ಮನೆಗಳ್ಳನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಗೋಕುಲ್ ರೋಡ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ತೆಲಂಗಾಣ ರಾಜ್ಯದ ದ್ವಾರಂಪುಡಿ ವೆಂಕಟೇಶ್ವರ ರೆಡ್ಡಿ (28) ಬಂಧಿತ ಆರೋಪಿ. ಬಂಧಿತನಿಂದ ಸುಮಾರು 900 ಗ್ರಾಂ ಬಂಗಾರದ ಆಭರಣಗಳು ಹಾಗೂ 7 ಕೆ.ಜಿ ತೂಕದ ಬೆಳ್ಳಿಯ ಸಾಮಾನುಗಳು ಸೇರಿದಂತೆ ಸುಮಾರು 26,13,634 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

    2019 ರಲ್ಲಿ ಹುಬ್ಬಳ್ಳಿ ಗೋಕುಲರೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ವಿನಾಯಕನಗರದಲ್ಲಿ ಮನೆಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿ ತೆಲಂಗಾಣ ರಾಜ್ಯದ ಖಮ್ಮಂ 1 ಟೌನ್ ಪೊಲೀಸ್ ಠಾಣೆಯ ಪೊಲೀಸರ ಸಹಾಯದಿಂದ ಆರೋಪಿತರನ್ನು ಬಂಧಿಸಿದ್ದಾರೆ. ಈ ಕಳ್ಳತನ ಪ್ರಕರಣದಲ್ಲಿ ಇನ್ನೋರ್ವ ಪ್ರಮುಖ ಆರೋಪಿ ನದೀಂಪಲ್ಲಿ ವೆಂಕಟವಿನಯಗಾಗಿ ಶೋಧ ಮುಂದುವರಿಸಿದ್ದಾರೆ.

  • 9 ಮನೆ ಕಳ್ಳತನಗೈದಿದ್ದ ಚಾಲಾಕಿ ಕಳ್ಳ ಅರೆಸ್ಟ್- 266 ಗ್ರಾಂ ಚಿನ್ನಾಭರಣ, ಬೈಕ್ ವಶ

    9 ಮನೆ ಕಳ್ಳತನಗೈದಿದ್ದ ಚಾಲಾಕಿ ಕಳ್ಳ ಅರೆಸ್ಟ್- 266 ಗ್ರಾಂ ಚಿನ್ನಾಭರಣ, ಬೈಕ್ ವಶ

    ರಾಮನಗರ: 9 ಮನೆಯಲ್ಲಿ ಚಿನ್ನಾಭರಣ, ನಗದು ಕಳ್ಳತ ಮಾಡಿದ್ದ ಚಾಲಾಕಿ ಕಳ್ಳನನ್ನು ಜಿಲ್ಲೆಯ ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟಗೆರೆ ಗ್ರಾಮದ ಮೋಹನ್ ಕುಮಾರ್ ಅಲಿಯಾಸ್ ಚಿಕ್ಕತಮ್ಮಯ್ಯ, ಅಲಿಯಾಸ್ ನವೀನ್ ಬಂಧಿತ ಕಳ್ಳ. ಆರೋಪಿ ಮೋಹನ್ ಕುಮಾರ್‌ನಿಂದ 266 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯ ಬಳಸುತ್ತಿದ್ದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆರೋಪಿ ಮೋಹನ್ ಕುಮಾರ್ ನಿರ್ಜನ ಪ್ರದೇಶದ ಬಡಾವಣೆಗಳಲ್ಲಿ ಸುತ್ತಾಡುತ್ತಿದ್ದ. ಸುಮಾರು ಎರಡ್ಮೂರು ದಿನಗಳಿಂದ ಬೀಗ ಜಡಿದಿರುತ್ತಿದ್ದ ಮನೆಗಳನ್ನು ಗುರುತಿಸಿ, ಯಾರು ಇಲ್ಲದೆ ಇರುವ ವೇಳೆ ಮನೆಯ ಹಿಂಬಾಗಿಲನ್ನು ಮುರಿದು ಮನೆಗೆ ನುಗುತ್ತಿದ್ದ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತದ್ದ.

    ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಸಮೀಪದ ಪಟ್ಟರೆಡ್ಡಿ ಪಾಳ್ಯದ ರಾಧಾ ಎಂಬವರು ಇತ್ತೀಚೆಗೆ ಎರಡು ದಿನಗಳ ಕಾಲ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಗೆ ಬೀಗ ಹಾಕಿದ್ದನ್ನು ನೋಡಿದ್ದ ಮೋಹನ್ ಮನೆಗೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ರಾಧಾ ಅವರು ಪೊಲೀಸರಿಗೆ ದೂರು ನೀಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಗ್ಗಲೀಪುರ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ಮೋಹನ್ ಕೃತ್ಯ ಪೊಲೀಸರ ಗಮನಕ್ಕೆ ಬಂದಿತ್ತು. ಬಳಿಕ ಆರೋಪಿಗೆ ಬಲೆ ಬೀಸಿ ಬಂಧಿಸಿದ್ದಾರೆ. ಬಂಧಿತ ಕಳ್ಳ ಮೋಹನ್ ಕುಮಾರ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ 266 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಬೈಕ್ ಅನ್ನು ವಶಪಡಿಸಿಕೊಂಡು ಜೈಲಿಗಟ್ಟಿದ್ದಾರೆ.

    ಬಂಧಿತ ಕಳ್ಳ ಮೋಹನ್ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3, ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ಕುಂಬಳಗೂಡು ಪೊಲೀಸ್ ಠಾಣೆ ಹಾಗೂ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಸೇರಿ ಒಟ್ಟು 9 ಕಡೆಗಳಲ್ಲಿ ಮನೆಗಳವು ಮಾಡಿದ್ದ.

  • ಕೆಲಸ ಮಾಡುವ ಮನೆಯಲ್ಲಿ ಕಳ್ಳತನ ಮಾಡಿ ಖಾಕಿ ಬಲೆಗೆ ಬಿದ್ದ ಐನಾತಿ ಕಳ್ಳಿ

    ಕೆಲಸ ಮಾಡುವ ಮನೆಯಲ್ಲಿ ಕಳ್ಳತನ ಮಾಡಿ ಖಾಕಿ ಬಲೆಗೆ ಬಿದ್ದ ಐನಾತಿ ಕಳ್ಳಿ

    ಬೆಂಗಳೂರು: ಮನೆ ಗುಡಿಸುವ ಕೆಲಸದ ಜೊತೆಗೆ ಮನೆಯಲ್ಲಿದ್ದ ಚಿನ್ನಾಭರಣವನ್ನ ದೋಚಿಕೊಂಡು ಹೋಗುತ್ತಿದ್ದ ಐನಾತಿ ಕಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

    ಆಂಧ್ರ ಮೂಲದ ಲಕ್ಷ್ಮಿ ಬಂಧಿತ ಐನಾತಿ ಕಳ್ಳಿ. ಬಂಧಿತ ಕಳ್ಳಿಯಿಂದ 12 ಲಕ್ಷ ಮೌಲ್ಯದ 310 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಯಲಹಂಕದಲ್ಲಿ ವಾಸವಾಗಿದ್ದ ಲಕ್ಷ್ಮೀ ಸಂಪಗಿಹಳ್ಳಿಯಲ್ಲಿರುವ ಬ್ರಿಗೇಡ್ ಅಪಾರ್ಟ್‍ಮೆಂಟ್‍ನಲ್ಲಿ ಮನೆ ಕೆಲಸ ಮಾಡಿಕೊಂಡಿದ್ದಳು.

    ಬ್ರಿಗೇಡ್ ಅಪಾರ್ಟ್‍ಮೆಂಟ್ ನಲ್ಲಿರುವ ನಾಲ್ಕು ಮನೆಗಳಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದ ಲಕ್ಷ್ಮೀ, ರಘುವೀರ್, ಗೋಪಾಲ್, ಅವಿನಾಶ್ ಸೇರಿದಂತೆ ಒಟ್ಟು ಅಪಾರ್ಟ್‍ಮೆಂಟ್ ನಾಲ್ಕು ಮನೆಗಳಲ್ಲಿ ಕೈಚಳಕ ತೋರಿದ್ದಾಳೆ. ಬ್ಯಾಕ್ ಟೂ ಬ್ಯಾಕ್ ಲಕ್ಷ್ಮಿ ಕೆಲಸ ಮಾಡುತ್ತಿದ್ದ ನಾಲ್ಕು ಮನೆಗಳಲ್ಲಿ ಕಳ್ಳತನವಾಗಿದೆ. ಲಕ್ಷ್ಮಿಯ ಮೇಲೆ ಅನುಮಾನ ಬಂದು ಕಳ್ಳತನ ವಿಚಾರವಾಗಿ ಮಾಲೀಕರು ವಿಚಾರಿಸಿದ್ದಾರೆ.

    ಲಕ್ಷ್ಮಿ ನಾನು ಕಳ್ಳತನ ಮಾಡೇ ಇಲ್ಲ ಎಂದು ವಾದಿಸಿದ್ದಾಳೆ. ಆಗ ಮಾಲೀಕ ರಘುವೀರ್ ಕಳ್ಳತನವಾಗಿರುವ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾಲೀಕರಿಗೆ ಮನೆ ಕೆಲಸದವಳ ಮೇಲೆ ಅನುಮಾನ ಇದ್ದ ಕಾರಣ ಲಕ್ಷ್ಮಿಯ ಹೆಸರು ನಮೂದಿಸಿ ಪೊಲೀಸರಿಗೆ ದೂರು ನೀಡಿದ್ದರು. ಲಕ್ಷ್ಮಿಯನ್ನು ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ಮಾಡಿದಾಗ ಮನೆಯಲ್ಲಿ ಕಷ್ಟ ಇದ್ದ ಕಾರಣ ನಾಲ್ಕು ಮನೆಯಲ್ಲಿ ತಾನೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.