Tag: thief

  • ಪೊಲೀಸರ ಎದುರಲ್ಲೇ ಜೈಲಿನಿಂದ ಕಳ್ಳ ಎಸ್ಕೇಪ್

    ಪೊಲೀಸರ ಎದುರಲ್ಲೇ ಜೈಲಿನಿಂದ ಕಳ್ಳ ಎಸ್ಕೇಪ್

    – ದೃಶ್ಯ ಸಿಸಿಟಿವಿಯಲ್ಲಿ ಸೆರೆ
    – 6 ಮಂದಿ ಸಿಬ್ಬಂದಿ ಅಮಾನತು

    ತುಮಕೂರು: ಕಳ್ಳತನ, ರಾಬರಿ, ಕೊಲೆ ಯತ್ನ, ಬೆದರಿಕೆ ಹೀಗೆ ನಾನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ವ್ಯಕ್ತಿಯೊಬ್ಬನ ಮೇಲೆ ಈ ಹಿಂದೆಯೂ ಅವನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಸುಲಿಗೆಯಂತ ಪ್ರಕರಣಗಳಿವೆ. ಹೀಗಿದ್ರೂ ಆತನಿಗೆ ಬುದ್ಧಿ ಬಂದೇ ಇರ್ಲಿಲ್ಲ. ಕಳೆದ 20 ದಿನಗಳ ಹಿಂದಷ್ಟೇ ತುಮಕೂರಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದ. ಪೊಲೀಸರು ಕೂಡ ಅವನನ್ನ ಎತ್ತಾಕ್ಕೊಂಡು ಬಂದು ಠಾಣೆಯಲ್ಲಿ ಕೂರಿಸಿದ್ದರು. ಆದರೆ ಪೊಲೀಸ್ ಕರ್ತವ್ಯ ಪ್ರಜ್ಞೆ ಜಾರಿದ್ದಕ್ಕೆ ಠಾಣೆಯಿಂದಲೇ ರಾಜಾರೋಷವಾಗಿ ಎಸ್ಕೇಪ್ ಆಗಿದ್ದಾನೆ.

    ಹೌದು. ಆಗಸ್ಟ್ 1 ರಂದು ತುಮಕೂರು ನಗರದ ಅಂತರಸನಹಳ್ಳಿ ರಂಗಪ್ಪ ಎಂಬಾತ ಇತ್ತೀಚೆಗೆ ತಾಲೂಕಿನ ಹಂಚಿಹಳ್ಳಿ ಗ್ರಾಮದ ಮನೆಗೆ ನುಗ್ಗಿ ಮಹಿಳೆಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದ. ಈ ಬಗ್ಗೆ ಲಕ್ಷ್ಮಿ ಕೋರಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ಆ. 6ರಂದು ಕೋರ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿಡಲಾಗಿತ್ತು. ಆದರೆ ಖತರ್ನಾಕ್ ಕಳ್ಳ ರಂಗಪ್ಪ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ರಾತ್ರೋ ರಾತ್ರಿ ಠಾಣೆಯಿಂದ ಎಸ್ಕೆಪ್ ಆಗಿದ್ದಾನೆ. ಕೈದಿಗಳ ಸೆಲ್ಲಲ್ಲಿ ರಂಗಪ್ಪನನ್ನು ಇಟ್ಟಿದ್ರು. ಆದರೆ ಲಾಕ್ ಮಾಡಿರಲಿಲ್ಲ, ಪೊಲೀಸರು ಮಧ್ಯರಾತ್ರಿ ಜಸ್ಟ್ ಮಂಪರಿನಲ್ಲಿ ಇದ್ರು. ಇದನ್ನು ಗಮನಸಿದ ರಂಗಪ್ಪ ಡೋರ್ ತೆಗೆದು ಎಸ್ಕೇಪ್ ಆಗಿದ್ದು, ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾ ಪೊಲೀಸ್ ಠಾಣೆಯ 6 ಜನ ಪೊಲೀಸ್ ಸಿಬ್ಬಂದಿಯನ್ನ ಕರ್ತವ್ಯಲೋಪದಡಿ ಎಸ್ಪಿ ಡಾ.ಕೆ ವಂಶಿಕೃಷ್ಣ ಸಸ್ಪೆಂಡ್ ಮಾಡಿದ್ದಾರೆ. ಬಳಿಕ ಎಸ್ಕೇಪ್ ಆಗಿದ್ದ ರಂಗಪ್ಪನ ಬಂಧನಕ್ಕಾಗಿ ಶಿರಾ ಠಾಣೆ ಪಿಎಸ್‍ಐ ಭಾರತಿ ಮತ್ತು ಸಿಬ್ಬಂದಿ ಶಿವಕುಮಾರ್, ನಾಗರಾಜು ನೇತೃತ್ವದ ತಂಡವನ್ನ ರಚಿಸಲಾಗಿತ್ತು. ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ಮಾಡಿದ ತಂಡ ಆರೋಪಿಯನ್ನು ಮಧುಗಿರಿ ತಾಲೂಕು ಮರುವೇಕೆರೆ ಗ್ರಾಮದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈವರೆಗೆ ಈತನ ವಿರುದ್ಧ ವಡ್ಡರಹಳ್ಳಿ, ಶಂಭೋನಹಳ್ಳಿ, ಮುದ್ದರಾಮಯ್ಯನ ಪಾಳ್ಯ, ಡಿ.ಕೊರಟಗೆರೆ, ಹಿರೇಗುಂಡಗಲ್, ಹಂಚಿಹಳ್ಳಿ ಗ್ರಾಮಗಳಲ್ಲಿ ಒಂಟಿ ಮನೆಗಳಲ್ಲಿ ಮಲಗಿದ್ದ ಹೆಂಗಸರ ಸರಗಳನ್ನು ಕಳವು ಮಾಡಿದ್ದ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 7, ಬೆಂಗಳೂರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ 11 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

    ಒಟ್ಟಾರೆ ಪೊಲೀಸರ ಕೈಯಿಂದ ಎಸ್ಕೇಪ್ ಆಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ರಂಗಪ್ಪ ಕೊನೆಗೂ ಕಂಬಿಹಿಂದೆ ಹೋಗಿದ್ದಾನೆ. ಇತ್ತ ಠಾಣೆಯ ತುಂಬಾ ಸಿಬ್ಬಂದಿ ಇದ್ರೂ ಕಳ್ಳನೊಬ್ಬನನ್ನ ನೋಡಿಕೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಕಪ್ಪುಚುಕ್ಕೆ ಮಾತ್ರ ಹಾಗೆಯೇ ಉಳ್ಕೊಂಡಿದೆ.

  • ಕಳ್ಳತನದ ಮೂಲಕ ಆತಂಕ ಸೃಷ್ಟಿಸಿದ್ದ ಫೈರೋಜ್ ಜಫ್ರಿ ಬಂಧನ

    ಕಳ್ಳತನದ ಮೂಲಕ ಆತಂಕ ಸೃಷ್ಟಿಸಿದ್ದ ಫೈರೋಜ್ ಜಫ್ರಿ ಬಂಧನ

    ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನದ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದ್ದ ಖತರ್ನಾಕ್ ಕಳ್ಳ ಫೈರೋಜ್ ಜಫ್ರಿ ಕಳ್ಳನನ್ನು ಬಂಧಿಸುವಲ್ಲಿ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಫೈರೋಜ್ ಜಫ್ರಿ ರಾಜೇಸಾಬ(38) ಬಂಧಿತ ಆರೋಪಿ. ರಾತ್ರಿ ವೇಳೆ ಮಾರುಕಟ್ಟೆಯಲ್ಲಿ ಶಟರ್ ಮುರಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸಿರುವ ಪೊಲೀಸರು, ಆತನಿಂದ 30,300 ರೂ ನಗದು, ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ.

    ಕ್ಲಬ್ ರಸ್ತೆ ವಿನಾಯಕ ಮೆಡಿಕಲ್ ಶಾಪ್ ಹಾಗೂ ಮಂತ್ರಾ ಹೊಟೇಲ್ ಬಳಿ ಇರುವ ಸಸ್ಯಹಾರಿ ಹೊಟೇಲ್ ಶಟರ್ ಮುರಿದು ಕಳ್ಳತನ ಮಾಡಿದ ಕುರಿತು ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೇಧಿಸುವಲ್ಲಿ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

  • ನಕಲಿ ಚೆಕ್ ಬಳಸಿ 1 ಕೋಟಿ ಮೌಲ್ಯದ ಕಾರು ಖರೀದಿಸಿದ ಹೈಟೆಕ್ ಕಳ್ಳ

    ನಕಲಿ ಚೆಕ್ ಬಳಸಿ 1 ಕೋಟಿ ಮೌಲ್ಯದ ಕಾರು ಖರೀದಿಸಿದ ಹೈಟೆಕ್ ಕಳ್ಳ

    – ವಾಚ್ ಖರೀದಿಗೆ ಹೋಗಿ ಸಿಕ್ಕಿಬಿದ್ದ

    ಫ್ಲೋರಿಡಾ: ನಕಲಿ ಚೆಕ್ ಬಳಸಿ 1 ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿ ಮಾಡಿದ್ದ ಹೈಟೆಕ್ ಕಳ್ಳನನ್ನು ಫ್ಲೋರಿಡಾದ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಕಳ್ಳನನ್ನು 42 ವರ್ಷದ ಕೇಸಿ ವಿಲಿಯಂ ಕೆಲ್ಲಿ ಎಂದು ಗುರುತಿಸಲಾಗಿದೆ. ಈತ ತಾನು ಮನೆಯಲ್ಲೇ ತನ್ನ ಕಂಪ್ಯೂಟರ್ ಬಳಸಿ ನಕಲಿ ಚೆಕ್‍ವೊಂದನ್ನು ಪ್ರಿಂಟ್ ಮಾಡಿ ಅದರಲ್ಲಿ ಒಂದು ಕೋಟಿ ಮೌಲ್ಯದ ಪೋರ್ಷೆ ಕಾರು ಖರೀದಿ ಮಾಡಿದ್ದಾನೆ. ನಂತರ ಇದೇ ರೀತಿ ರೋಲೆಕ್ಸ್ ವಾಚ್ ಖರೀದಿ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.

    https://www.facebook.com/WCSOFL/posts/10157121884506493

    ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕೆಲ್ಲಿ ಜುಲೈ 27ರಂದು ಫ್ಲೋರಿಡಾದ ಒಕಲೂಸಾ ಕೌಂಟಿ ನಗರಕ್ಕೆ ಹೋಗಿದ್ದಾನೆ. ಅಲ್ಲಿ ಪೋರ್ಷೆ ಡೆಸ್ಟಿನ್ ಶೋರೂಮ್‍ಗೆ ಹೋಗಿ, ಪೋರ್ಷೆ 911 ಟರ್ಬೋ ಎಂಬ ಕಾರನ್ನು ಖರೀದಿ ಮಾಡಿದ್ದಾನೆ. ಖರೀದಿ ವೇಳೆ 1 ಕೋಟಿ 30 ಲಕ್ಷ ಮೌಲ್ಯದ ಚೆಕ್ ನೀಡಿದ್ದಾನೆ. ಇದನ್ನು ನಕಲಿ ಎಂದು ತಿಳಿಯದ ಶೋರೂಮ್ ಸಿಬ್ಬಂದಿ ಆತನಿಗೆ ಕಾರು ಕೊಟ್ಟು ಕಳುಹಿಸಿದ್ದಾರೆ.

    ಇದಾದ ನಂತರ ಶೋರೂಮ್ ಸಿಬ್ಬಂದಿ ಚೆಕ್ ಅನ್ನು ತೆಗೆದುಕೊಂಡು ಬ್ಯಾಂಕ್‍ಗೆ ಹೋದಾಗ, ಇದು ನಕಲಿ ಚೆಕ್ ಎಂದು ತಿಳಿದು ಬಂದಿದೆ. ಆಗ ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಐಷಾರಾಮಿ ಕಾರು ಕೊಳ್ಳುವ ಆಸೆ ಹೊಂದಿದ್ದ, ಕೆಲ್ಲಿ ನಕಲಿ ಚೆಕ್ ಬಳಸಿ ಕಾರುಕೊಂಡು ಅದರ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

    ಈ ವೇಳೆ ಕೆಲ್ಲಿಯನ್ನು ಪೊಲೀಸರು ಹುಡುಕಲು ಶುರು ಮಾಡಿದ್ದಾರೆ. ಆದರೆ ಆತ ಸಿಕ್ಕಿಲ್ಲ. ಇದರ ಮಧ್ಯೆ ಮತ್ತೆ ಇದೇ ರೀತಿ ಚೆಕ್ ತಯಾರು ಮಾಡಿದ ಕೆಲ್ಲಿ, ಅದನ್ನು ಉಪಯೋಗಿಸಿ ದುಬಾರಿ ರೋಲೆಕ್ಸ್ ವಾಚ್ ಕೊಳ್ಳುಲು ಹೋಗಿದ್ದಾನೆ. ಈ ವೇಳೆ ಆತ ನೀಡಿದ ಚೆಕ್ ನೋಡಿ ಅನುಮಾನಗೊಂಡು ಅಲ್ಲಿನ ಸಿಬ್ಬಂದಿ ಆತನನ್ನು ಅಲ್ಲೇ ಕುರಿಸಿಕೊಂಡು ನಂತರ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಬಂದ ಪೊಲೀಸರು ಕೆಲ್ಲಿಯನ್ನು ಬಂಧಿಸಿದ್ದಾರೆ.

  • ಆಟೋದಲ್ಲಿ ಬಂದು ನಾಯಿಯನ್ನು ಕದ್ದೊಯ್ದ ಕಳ್ಳ

    ಆಟೋದಲ್ಲಿ ಬಂದು ನಾಯಿಯನ್ನು ಕದ್ದೊಯ್ದ ಕಳ್ಳ

    – ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಯಿಗಳ ಕಳ್ಳತನ ಜಾಸ್ತಿಯಾಗಿದ್ದು, ಬೆಲೆ ಬಾಳುವ ನಾಯಿಯನ್ನು ಕಳ್ಳರು ಕದ್ದುಕೊಂಡು ಹೋಗುತ್ತಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಬೆಲೆ ಬಾಳುವ ಶ್ವಾನವನ್ನು ಸಾಕುವ ಟ್ರೆಂಡ್ ಶುರುವಾಗಿದೆ. ಇದರ ಜೊತೆಗೆ ಇವುಗಳನ್ನು ಕದ್ದುಕೊಂಡು ಹೋಗುವವರು ಜಾಸ್ತಿಯಾಗಿದ್ದಾರೆ. ಅಂತೆಯೇ ಇಂದು ಬಸವನಗುಡಿ ಎನ್‍ಆರ್ ಕಾಲೋನಿ ನಿವಾಸಿ ಮೋನಿಕಾ ಅವರ ನಾಯಿಯನ್ನು ಕಳ್ಳತನ ಮಾಡಲಾಗಿದೆ.

    ಮೋನಿಕಾ ಅವರು ಮನೆಗೆಲಸದಲ್ಲಿ ನಿರತರಾಗಿದ್ದಾಗ ಅವರ ಕಪ್ಪು ಬಣ್ಣದ ನಾಯಿ ರಸ್ತೆಯತ್ತ ಹೋಗಿದೆ. ಈ ವೇಳೆ ಆಟೋದಲ್ಲಿ ಅಲ್ಲಿಗೆ ಬಂದ ಕಳ್ಳ ಅದನ್ನು ಹಿಡಿದುಕೊಂಡು ಆಟೋದಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾನೆ. ಇದು ಮಿಶ್ರತಳಿಯ ನಾಯಿ ಆಗಿದ್ದು, ಇದಕ್ಕೆ ‘ಲಿಯೋ’ ಎಂದು ಹೆಸರಿಡಲಾಗಿತ್ತು. ಜೊತೆಗೆ ಇದು ಸುಮಾರು 5 ಸಾವಿರ ರೂ. ಬೆಲೆ ಬಾಳುತ್ತೆ ಎಂದು ಮಾಲಕಿ ಮೋನಿಕಾ ಹೇಳಿದ್ದಾರೆ.

    ಸದ್ಯ ನಾಯಿಯನ್ನು ಆಟೋದಲ್ಲಿ ಬಂದು ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಾಯಿ ಕಳ್ಳನ ವಿರುದ್ಧ ದೂರು ದಾಖಲಾಗಿದೆ.

  • ಬಿಸ್ಕೆಟ್ ಖರೀದಿಗೆ ಬಂದು ಚಿನ್ನದ ಸರ ಎಗರಿಸಿದ

    ಬಿಸ್ಕೆಟ್ ಖರೀದಿಗೆ ಬಂದು ಚಿನ್ನದ ಸರ ಎಗರಿಸಿದ

    ಮಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳ ಚಿನ್ನ ಎಗರಿಸಿ ಪರಾರಿಯಾದ ಘಟನೆ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದೆ.

    ಮುಲ್ಕಿಯ ಚರಂತಿಪೇಟೆಯಲ್ಲಿ ಸೀತಾ ಅವರ ಅಂಗಡಿಗೆ ಬಿಸ್ಕೆಟ್ ಖರೀದಿಸಲು ವ್ಯಕ್ತಿಯೊಬ್ಬ ಬಂದಿದ್ದ. ಆದರೆ ಬಿಸ್ಕೆಟ್ ಖರೀದಿಸಲು ಬಂದವ ಸೀತಾ ಅವರ ಚಿನ್ನದ ಸರವನ್ನೇ ಎಗರಿಸಿ ಪರಾರಿಯಾಗಿದ್ದಾನೆ. ಖದೀಮನ ಕಳ್ಳತನ ಕೃತ್ಯದ ದೃಶ್ಯ ಸ್ಥಳೀಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಅಂಗಡಿಗಿಂತ ಸ್ವಲ್ಪ ದೂರದಲೇ ಸ್ಕೂಟರನ್ನು ಸ್ಟಾರ್ಟ್ ನಲ್ಲೇ ಇರಿಸಿ ಬಂದಿದ್ದ. ಅಂಗಡಿಯಲ್ಲಿದ್ದ ವೃದ್ಧೆ ಬಿಸ್ಕೆಟ್ ಕೊಡಲು ಮುಂದಾಗುತ್ತಿದ್ದಂತೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು ಪರಾರಿಯಾಗಿದ್ದಾನೆ. ಕಳ್ಳತನ ನಡೆಸಿ ತಕ್ಷಣವೇ ಆರೋಪಿ ಕಾಲ್ಕಿತ್ತಿದ್ದು, ಹೆದ್ದಾರಿ ಮೂಲಕ ಮಂಗಳೂರು ಕಡೆಗೆ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

  • ಕಿಮ್ಸ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಸೋಂಕಿತ ಕಳ್ಳ ಗದಗದಲ್ಲಿ ಪತ್ತೆ

    ಕಿಮ್ಸ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಸೋಂಕಿತ ಕಳ್ಳ ಗದಗದಲ್ಲಿ ಪತ್ತೆ

    ಹುಬ್ಬಳ್ಳಿ: ಕಿಮ್ಸ್‌ನಿಂದ ಶುಕ್ರವಾರ ಬೆಳಿಗ್ಗೆ ಪರಾರಿಯಾಗಿದ್ದ ಕೊರೊನಾ ಸೋಂಕಿತ ರಾತ್ರಿ ಗದಗದಲ್ಲಿ ಸಿಕ್ಕು ಬಿದ್ದಿದ್ದಾನೆ. ಇದರಿಂದಾಗಿ ಜಿಲ್ಲಾಡಳಿತ ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.

    ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ಕೊರೊನಾ ಸೋಂಕಿತ ಆರೋಪಿ ಶುಕ್ರವಾರ ಬೆಳಗ್ಗೆ 5.30ರ ಸುಮಾರಿಗೆ ಐಸೋಲೇಷನ್ ವಾರ್ಡ್‍ನಿಂದ ಹೊರಬಂದ 55 ವರ್ಷದ ಸೋಂಕಿತ ಆರೋಪಿ ಎಲ್ಲರ ಕಣ್ತಪ್ಪಿಸಿ ಪರಾರಿಯಾಗಿದ್ದ. ಬೆಳಗ್ಗೆ ವೈದ್ಯರು ಚಿಕಿತ್ಸೆ ನೀಡಲು ತೆರಳಿದ ವೇಳೆ ಇದು ಬೆಳಕಿಗೆ ಬಂದಿತ್ತು. ಈತನನ್ನು ಕಾಯ್ದುಕೊಳ್ಳಲು ಇಬ್ಬರು ಪೊಲೀಸರು ಕರ್ತವ್ಯದಲ್ಲಿದ್ದರು. ಇದರೊಂದಿಗೆ ಕಿಮ್ಸ್‌ನ ದ್ವಾರದ ಬಳಿ ಭದ್ರತಾ ಸಿಬ್ಬಂದಿಯೂ ಇತ್ತು. ಇವರೆಲ್ಲರ ಕಣ್ತಪ್ಪಿಸಿ ಪರಾರಿಯಾಗಿದ್ದ.

    ಸಂಜೆ ವೇಳೆ ಗದಗ ಮನೆಯಲ್ಲಿ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದು, ಇಂದು ನಸುಕಿನ ಜಾವ ಕಿಮ್ಸ್‌ನಿಂದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದ. ಕೂಡಲೇ ಎಚ್ಚೆತ್ತ ಪೊಲೀಸರು ಸೋಂಕಿತನ ಹುಡುಕಾಟಕ್ಕೆ ಬಲೆ ಬಿಸಿದ್ದರು. ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಎರಡು ದಿನದ ಹಿಂದೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

    ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಮುಷ್ಟಿಗೇರಿಯವನಾದ ಈತ ಸದ್ಯ ಗದಗದ ಬೆಟಗೇರಿಯ ಮಿಷನ್ ಕಾಂಪೌಂಡ್ ಚರ್ಚ್ ಬಳಿಯ ನಿವಾಸಿಯಾಗಿದ್ದು, ಶುಕ್ರವಾರ ಸಂಜೆ ಗದಗ ಪೊಲೀಸರ ನೆರವಿನೊಂದಿಗೆ ಈತನ ಮನೆಗೆ ತೆರಳಿ ಹುಬ್ಬಳ್ಳಿ ಪೊಲೀಸರು ಕರೆದುಕೊಂಡು ಬಂದು ಪುನಃ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಲಾರಿಯಲ್ಲಿ ತೆರಳಿದ್ದ: ಈತ ಕಿಮ್ಸ್‌ನಿಂದ ತಪ್ಪಿಸಿಕೊಂಡು, ಲಾರಿ ಮೂಲಕ ಗದಗಗೆ ತೆರಳಿ ತನ್ನ ಮನೆಯಲ್ಲಿದ್ದ. ಈತ ಹೋದ ಲಾರಿ ಚಾಲಕ ಹಾಗೂ ಕ್ಲೀನರ್ ಸಂಪರ್ಕ ಹೊಂದಿದ ಕಾರಣ ಅವರಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಅವರ ಹುಡುಕಾಟವನ್ನು ಪೊಲೀಸರು ನಡೆಸಿದ್ದಾರೆ.

    ನೀಲಿಜಿನ್ ರಸ್ತೆಯಲ್ಲಿ ಎರಡು ಹಾರ್ಡ್‍ವೇರ್ ಅಂಗಡಿಯಲ್ಲಿ ಪರಿಕರಗಳನ್ನು ಈತ ಕಳ್ಳತನ ಮಾಡಿದ್ದ. ಜೂ. 28ರಂದು ಈತನನ್ನು ಉಪನಗರ ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ತಪಾಸಣೆ ವೇಳೆ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈತನಿಂದಲೇ ಒಬ್ಬ ಪೇದೆಗೂ ಕೊರೊನಾ ದೃಢಪಟ್ಟಿದೆ. ಅಲ್ಲದೇ, 24 ಜನ ಪೊಲೀಸರು ಕ್ವಾರಂಟೈನ್ ಮಾಡಲಾಗಿದೆ. ಕಳ್ಳ ನಾಪತ್ತೆಯಾಗಿದ್ದರಿಂದ ನಗರದಲ್ಲಿ ಆತಂಕವುಂಟಾಗಿತ್ತು. ಇದೀಗ ಈತ ಸಿಕ್ಕಿಬಿದ್ದಿರುವುದು ಜಿಲ್ಲಾಡಳಿತ ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.

  • ಆಸ್ಪತ್ರೆಯಿಂದ ಫೋನ್ ಕದ್ದು ಎಸ್ಕೇಪ್ ಆಗಿ ಬಂಧಿಯಾಗಿದ್ದ ಸೋಂಕಿತ ಕಳ್ಳ ಮತ್ತೆ ಪರಾರಿ

    ಆಸ್ಪತ್ರೆಯಿಂದ ಫೋನ್ ಕದ್ದು ಎಸ್ಕೇಪ್ ಆಗಿ ಬಂಧಿಯಾಗಿದ್ದ ಸೋಂಕಿತ ಕಳ್ಳ ಮತ್ತೆ ಪರಾರಿ

    – ಆರೋಪಿಯ ಪುಂಡಾಟಕ್ಕೆ ಪೊಲೀಸರು ಹೈರಾಣ

    ಕಾರವಾರ: ಎರಡು ದಿನಗಳ ಹಿಂದೆ ಕೊರೊನಾ ವಾರ್ಡಿನಿಂದ ಫೋನ್ ಕದ್ದು ಪರಾರಿಯಾಗಿದ್ದ ಸೋಂಕಿತ ಕಳ್ಳ ಮತ್ತೊಮ್ಮೆ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

    ಶಿರಸಿಯಲ್ಲಿ ವಾಹನ ಕಳ್ಳತನ ಆರೋಪದಡಿ ಬಂಧಿಯಾಗಿದ್ದ ಕೊರೊನಾ ಸೋಂಕಿತ ಕಾರವಾರದ ಕಿಮ್ಸ್ ಕೋವಿಡ್ ವಾರ್ಡ್‍ನಿಂದ ತಪ್ಪಿಸಿಕೊಂಡು ಪರಾರಿಯಾಗಿ ಕಾರವಾರದ ಕದ್ರಾ ಗ್ರಾಮದಲ್ಲಿ ಪೊಲೀಸರ ಅಥಿತಿಯಾಗಿದ್ದ. ಆತನನ್ನ ಮತ್ತೆ ಕಾರವಾರದ ಕಿಮ್ಸ್ ಆಸ್ಪತ್ರೆಯ ವಿಶೇಷ ಕೊರೊನಾ ವಾರ್ಡಿಗೆ ತಂದು ಆಡ್ಮಿಟ್ ಮಾಡಲಾಗಿತ್ತು. ಈಗ ಮತ್ತೆ ಆಸ್ಪತ್ರೆಯಿಂದ ಆತ ಪರಾರಿಯಾಗಿದ್ದು, ಕಾರವಾರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಕಳ್ಳತನ ಕೇಸ್‍ನಲ್ಲಿ ಭಾಗಿಯಾಗಿದ್ದ ಧಾರವಾಡ ಮೂಲದ ಆರೋಪಿಗೆ ಜೂನ್ 28ರಂದು ಪಾಸಿಟಿವ್ ಬಂದಿತ್ತು. ಈ ಆರೋಪಿಯನ್ನು ಕಾರವಾರದ ಕಿಮ್ಸ್‍ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೇ ಆತ ಜೂನ್ 29ರ ರಾತ್ರಿ ವೇಳೆ ಕೋವಿಡ್ ವಾರ್ಡಿನ ಗಾಜನ್ನು ಒಡೆದು ಅಲ್ಲಿಂದ ಎರಡು ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದ. ಪೊಲೀಸರ ಹರಸಾಹಸದ ನಂತರ ಕಾರವಾರದ ಕದ್ರ ಗ್ರಾಮದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೆ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಜನರಿಗೆ ಆತಂಕ ಎದುರಾಗಿದೆ.

  • ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕ್ವಾರಂಟೈನ್ ಆದ ಕಳ್ಳ

    ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕ್ವಾರಂಟೈನ್ ಆದ ಕಳ್ಳ

    -ಐಸೋಲೇಷನ್ ವಾರ್ಡಿಗೆ ನುಗ್ಗಿ ಕಳ್ಳತನ

    ದಿಸ್ಪುರ್: ಆಸ್ಪತ್ರೆಯ ಐಸೋಲೇಷನ್‍ವಾರ್ಡ್‍ನಲ್ಲಿದ್ದ ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕಳ್ಳನೋರ್ವ ಕ್ವಾರಂಟೈನ್ ಆಗಿರುವ ಘಟನೆ ಅಸ್ಸಾಂನ ಚಿರಾಂಗ್ ಜಿಲ್ಲೆಯ ಕಾಜಲ್‍ಗಾಂವ್‍ನ ಜೆಎಸ್‍ಎಸ್‍ಬಿ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ.

    ಸೋಂಕಿತನ ಮೊಬೈಲ್ ಕದ್ದ ಕಳ್ಳನನ್ನು ಪಪ್ಪು ಬರ್ಮನ್ (22) ಎಂದು ಗುರುತಿಸಲಾಗಿದೆ. ಈತ ಆಸ್ಪತ್ರೆಯಲ್ಲಿ ಸೋಂಕಿತ ಮಲಗಿದ ನಂತರ ಸುಮಾರು ರಾತ್ರಿ ಒಂದು ಗಂಟೆಗೆ ಐಸೋಲೇಷನ್ ವಾರ್ಡಿಗೆ ನುಗ್ಗಿ ಫೋನ್ ಕದ್ದು ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತನನ್ನು ಅದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಪಪ್ಪು ಬರ್ಮನ್ ಫೋನ್ ಕದ್ದು ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿರುವ ತನ್ನ ಮನೆಯಲ್ಲಿ ಇದ್ದ. ಆಸ್ಪತ್ರೆಯಲ್ಲಿ ಸಿಕ್ಕ ಸಿಸಿಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ. ನಂತರ ವೈದ್ಯರ ಸಮೇತ ಆತನ ಮನೆಗೆ ಹೋಗಿ ಬಂಧಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

    ಐಸೋಲೇಷನ್ ವಾರ್ಡ್ ಒಳಗೆ ಹೋಗಲು ಈತ ಹೇಗೆ ಧೈರ್ಯ ಮಾಡಿದ ಎಂದು ನಮಗೆ ಈಗಲೂ ಗೊತ್ತಾಗುತ್ತಿಲ್ಲ. ಈತ ಮೊಬೈಲ್ ಕದ್ದ ವ್ಯಕ್ತಿ ಕೊರೊನಾ ಸೋಂಕಿತನಾಗಿದ್ದು, ಆತ ಇನ್ನೂ ಸಕ್ರಿಯ ಹಂತದಲ್ಲಿ ಇದ್ದಾನೆ. ಹೀಗಾಗಿ ಮೊಬೈಲ್‍ಗೆ ಕೂಡ ವೈರಸ್ ಅಂಟಿರಬಹುದು. ಹಾಗಾಗಿ ಪಪ್ಪು ಬರ್ಮನ್ ವರದಿ ಬರುವವರೆಗೂ ಆತನ ಮೇಲೆ ನಿಗಾವಹಿಸಿದ್ದೇವೆ ಎಂದು ವೈದ್ಯ ಮನೋಜ್ ದಾಸ್ ಹೇಳಿದ್ದಾರೆ.

    ನಾವು ಆರೋಪಿಯನ್ನು ಹಿಡಿದು ಕ್ವಾರಂಟೈನ್‍ಗೆ ಒಪ್ಪಿಸಿದ್ದೇವೆ. ಈ ವಿಚಾರವನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದ್ದೇವೆ. ಇನ್ನೂ ಮುಂದೆ ಅವರು ಆತನ ಪ್ರಾಥಮಿಕ ಮತ್ತು ದ್ವೀತಿಯ ಹಂತದ ಸಂಪರ್ಕಿತರನ್ನು ಗುರುತಿಸಬೇಕು ಎಂದು ಎಸ್‍ಪಿ ಸುಧಾಕರ್ ಸಿಂಗ್ ಅವರು ತಿಳಿಸಿದ್ದಾರೆ.

  • 1.16 ಕೆಜಿ ಚಿನ್ನಾಭರಣ ಕದ್ದು ಮಾರಲು ಯತ್ನಿಸಿ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ

    1.16 ಕೆಜಿ ಚಿನ್ನಾಭರಣ ಕದ್ದು ಮಾರಲು ಯತ್ನಿಸಿ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ

    ಬೆಂಗಳೂರು: 1.16 ಕೆಜಿ ಚಿನ್ನಾಭರಣ ಕದ್ದು ಮಾರಲು ಯತ್ನಿಸಿದ್ದ ಖತರ್ನಾಕ್ ಕಳ್ಳನೊಬ್ಬ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಉತ್ತಮ್ ದೋಲಾಯಿ ಬಂಧಿತ ಆರೋಪಿ. ನಂದಿನಿ ಲೇಔಟ್ ಪೊಲೀಸರ ಕಾರ್ಯಾಚರಣೆಯಲ್ಲಿ ಉತ್ತಮ್ ಸಿಕ್ಕಿಬಿದ್ದಿದ್ದು, ಬಂಧಿತನಿಂದ 45 ಲಕ್ಷ ರೂ. ಮೌಲ್ಯದ 1 ಕೆಜಿ 16 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

    ಆರೋಪಿ ಉತ್ತಮ್ ದೋಲಾಯಿ ನಂದಿನಿ ಲೇಔಟ್‍ನಲ್ಲಿ ಇದೇ ಜೂನ್ 8ರಂದು ರಾತ್ರಿ ಅನುಮಾನಸ್ಪದವಾಗಿ ಜ್ಯುವೆಲರಿ ಶಾಪ್ ಬಳಿ ಓಡಾಡುತ್ತಿದ್ದ. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಿದಾಗ ಆರೋಪಿಯ ಜೇಬಿನಲ್ಲಿ ಚಿನ್ನಾಭರಣಗಳು ಪತ್ತೆಯಾಗಿದ್ದವು. ಚಿನ್ನ ಸಿಕ್ಕ ಕೂಡಲೇ ಪೊಲೀಸರು ಪ್ರಶ್ನಿಸಿದಾಗ ಉತ್ತಮ್ ತಬ್ಬಿಬ್ಬಾಗಿದ್ದ. ತಕ್ಷಣವೇ ಆರೋಪಿಯನ್ನ ಠಾಣೆಗೆ ಕರೆತಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಠಾಣೆಯ ಪೊಲೀಸರು ಆರೋಪಿಯನ್ನ ಸದ್ಯ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತಮ್ ಬೆಂಗಳೂರಿನ ವಿವಿಧ ಕಡೆ ಕಳ್ಳತನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

  • ದೇವಸ್ಥಾನದ ಹುಂಡಿ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿತ

    ದೇವಸ್ಥಾನದ ಹುಂಡಿ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿತ

    ಚಿಕ್ಕಮಗಳೂರು: ದೇವಾಲಯದ ಹುಂಡಿ ಒಡೆಯಲು ಬಂದ ಕಳ್ಳನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಕಲ್ಲುಹೊಳೆ ಗ್ರಾಮದಲ್ಲಿ ನಡೆದಿದೆ.

    ಕಲ್ಲುಹೊಳೆ ಗ್ರಾಮದ ಹುಲ್ಲೇ ಕಲ್ಲೇಶ್ವರ ಸ್ವಾಮಿಯ ದೇವಾಲಯದ ಹುಂಡಿ ಒಡೆಯಲು ಕಳ್ಳ ಕಳೆದ ರಾತ್ರಿ ಬಂದಿದ್ದ. ಮಚ್ಚು ಹಾಗೂ ಸುತ್ತಿಗೆಯಲ್ಲಿ ಹುಡಿಯನ್ನ ಒಡೆಯುವ ವೇಳೆ ಶಬ್ಧ ಕೇಳಿ ಗ್ರಾಮಸ್ಥರು ಇಡೀ ದೇವಾಲಯವನ್ನ ಸುತ್ತುವರಿದಿದ್ದರು. ಯಾಕಂದರೆ ದೇವಾಲಯದಲ್ಲಿ ಹಿಂದೊಮ್ಮೆಯೂ ಕಳ್ಳತನವಾಗಿತ್ತು. ಹಾಗಾಗಿ ಊರಿನ ಜನ ಕೂಡ ಅಲರ್ಟ್ ಆಗಿದ್ದರು.

    ದೇವಾಲಯದಲ್ಲಿ ಹುಂಡಿ ಒಡೆಯುವ ಶಬ್ಧ ಕೇಳಿದ ಕೂಡಲೇ ಗ್ರಾಮಸ್ಥರು ದೇವಾಲಯವನ್ನ ಸುತ್ತುವರಿದು ಕಳ್ಳನನ್ನ ಹಿಡಿದಿದ್ದಾರೆ. ಎರಡನೇ ಬಾರಿ ದೇವಾಲಯದ ಹುಂಡಿ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳ ಸ್ಥಳೀಯರ ಅತಿಥಿಯಾಗಿ ಗೂಸಾ ತಿಂದಿದ್ದಾನೆ. ಹುಂಡಿ ಕಳ್ಳನನ್ನ ಹಿಡಿದ ಸ್ಥಳೀಯರು ಅವನನ್ನ ಊರಿನ ಹೆಬ್ಬಾಗಿಲ ಕಂಬಕ್ಕೆ ಕಟ್ಟಿ ಥಳಿಸಿ, ಕಡೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

    ಪೊಲೀಸರು ಸ್ಥಳಕ್ಕೆ ಬರುವವರೆಗೂ ಸ್ಥಳೀಯರು ಹುಂಡಿ ಕಳ್ಳನಿಗೆ ಭರ್ಜರಿ ಗೂಸಾ ಕೊಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನ ವಶಕ್ಕೆ ಪಡೆದಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.