Tag: Thermal Screening

  • ಪಿಯುಸಿ ಪರೀಕ್ಷೆ- ಗದಗನಲ್ಲಿ ವಿದ್ಯಾರ್ಥಿ ದೇಹದಲ್ಲಿ ಹೆಚ್ಚು ಉಷ್ಣಾಂಶ

    ಪಿಯುಸಿ ಪರೀಕ್ಷೆ- ಗದಗನಲ್ಲಿ ವಿದ್ಯಾರ್ಥಿ ದೇಹದಲ್ಲಿ ಹೆಚ್ಚು ಉಷ್ಣಾಂಶ

    – ಕಂಟೈನ್ಮೆಂಟ್ ಝೋನ್‍ನ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ

    ಗದಗ: ರಾಜ್ಯದೆಲ್ಲೆಡೆ ದ್ವಿತೀಯ ಪಿಯು ಪರೀಕ್ಷೆ ನಡೆದಿದ್ದು, ಹಲವೆಡೆ ವಿದ್ಯಾರ್ಥಿಗಳು ಗುಂಪಾಗಿ ಸೇರಿ ಅವಾಂತರ ಸೃಷ್ಟಿಸಿದ್ದರು. ಇನ್ನೂ ಹಲವೆಡೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಗದಗನಲ್ಲಿ ಒರ್ವ ವಿದ್ಯಾರ್ಥಿಯ ದೇಹದಲ್ಲಿ ಹೆಚ್ಚು ಉಷ್ಣಾಂಶ ಕಂಡು ಬಂದು ಆತಂಕಕ್ಕೀಡು ಮಾಡಿದೆ.

    ನಗರದ ಜೆ.ಟಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಓರ್ವ ವಿದ್ಯಾರ್ಥಿ ದೇಹದಲ್ಲಿ ಹೆಚ್ಚು ಉಷ್ಣಾಂಶ ಕಂಡು ಬಂದಿದ್ದು, ಥರ್ಮಲ್ ಸ್ಕ್ರೀನಿಂಗ್ ಮಾಡುವ ವೇಳೆ ಹೆಚ್ಚು ಉಷ್ಣಾಂಶ ಇರುವುದು ಪತ್ತೆಯಾಗಿದೆ. ಪರೀಕ್ಷೆಗೆ ತಡವಾಗುತ್ತದೆ ಎಂಬ ತವಕದಿಂದ ಓಡಿಬಂದಿದ್ದಾನೆ. ಈ ವೇಳೆ ಹೈಟೆಂಪ್ರೆಚರ್ ತೋರಿಸಿದೆ ಎನ್ನಲಾಗುತ್ತಿದೆ. ಇನ್ನು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಕಂಟೈನ್ಮೆಂಟ್ ಪ್ರದೇಶದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ 3 ಜನರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಈ ಮೂವರು ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣಗಳಿಲ್ಲ ಎನ್ನಲಾಗಿದೆ.

    ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ್ದಾರೆ. ಜಿಲ್ಲೆಯ ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮಾಯವಾಗಿತ್ತು. ವಿದ್ಯಾರ್ಥಿಗಳು ಗುಂಪು ಗುಂಪಾಗಿ ಚರ್ಚೆಯಲ್ಲಿ ತೊಡಗಿದ್ದರು. ಮುನ್ಸಿಪಲ್ ಕಾಲೇಜ್ ಆವರಣದಲ್ಲಿ ಸೆಕ್ಷನ್ 144 ನಿಯಮ ಉಲ್ಲಂಘನೆ ಮಾಡಲಾಗಿದೆ. ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜಾರಾಗಿದ್ದರೂ ಮೈದಾನದಲ್ಲಿ ಯುವಕರು ಕ್ರಿಕೆಟ್ ಆಡುವ ದೃಶ್ಯಗಳು ಕಂಡುಬಂತು.

    ಪರೀಕ್ಷಾ ಕೇಂದ್ರದ ಬಳಿ ಹೇಳೋರು, ಕೆಳೋರು ಯಾರೂ ಇಲ್ಲದಂತಾಗಿತ್ತು. ಜಿಲ್ಲೆಯ ಗದಗ ರೋಣ, ಗಜೇಂದ್ರಗಡ, ಮುಂಡರಗಿ ಪಟ್ಟಣದಲ್ಲೂ ಇದೇ ರೀತಿಯ ಪರಿಸ್ಥಿತಿ ಇತ್ತು. ಜಿಲ್ಲೆಯ 19 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 11,081 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಬೇರೆ ಜಿಲ್ಲೆಗಳಿಂದ ಬಂದ 541 ವಿದ್ಯಾರ್ಥಿಗಳು ಹಾಗೂ ಹೊರ ರಾಜ್ಯದಿಂದ ಬಂದ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದಾರೆ.

  • ಹಾವೇರಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಮರೀಚಿಕೆ

    ಹಾವೇರಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಮರೀಚಿಕೆ

    ಹಾವೇರಿ: ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆ ಹಾವೇರಿಯಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಪ್ರಯಾಣಿಕರು ನಿರ್ಲಕ್ಷ್ಯ ತೋರುತ್ತಿದ್ದಾರೆ.

    ಬೆಳಗ್ಗೆ ಏಳೂವರೆಗೆ ಬಸ್ ಸಂಚಾರ ಆರಂಭವಾಗಿದೆ. ಆದರೆ ನಸುಕಿನಿಂದಲೇ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದ್ದು, ಬೇರೆ ಜಿಲ್ಲೆಗಳ ಊರುಗಳಿಗೆ ತೆರಳಲು ನೂರಾರು ಜನ ಬಸ್ ನಿಲ್ದಾಣದಲ್ಲಿ ಜಮಾಯಿಸಿ, ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿಲ್ಲ. ಅಲ್ಲದೆ ಬಸ್ ಬರುತ್ತಿದ್ದಂತೆ ಪ್ರಯಾಣಿಕರು ಸಾಮಾಜಿಕ ಅಂತರ ಮರೆತು ಗುಂಪಾಗಿ ಹತ್ತಿದ್ದಾರೆ.

    ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದನ್ನೂ ಅಧಿಕಾರಿಗಳು ಮರೆತಿದ್ದು, ಹಾಗೆಯೇ ಬಸ್ ಹತ್ತಿಸಿಕೊಳ್ಳುವ ಮೂಲಕ ಸಾರಿಗೆ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಬೆಳಗ್ಗೆ ಪ್ರಯಾಣಿಕರು ಬಸ್ ಹತ್ತುವ ವೇಳೆ ಥರ್ಮಲ್ ಸ್ಕ್ರೀನಿಂಗ್ ಮಾಡಿಲ್ಲ. ಪ್ರಯಾಣಿಕರು ಗುಂಪು ಗುಂಪಾಗಿ ನಿಂತು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಬಸ್ ಬರುತ್ತಿದ್ದಂತೆ ಓಡೋಡಿ ಬಸ್ ಹತ್ತಿದ್ದಾರೆ. ಈ ವೇಳೆ ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ.

  • ಕಾಟಾಚಾರಕ್ಕೆ ಥರ್ಮಲ್ ಸ್ಕ್ರೀನಿಂಗ್ – ತಪಾಸಣೆ ಮಾಡುವ ಸಿಬ್ಬಂದಿಗೆ ಇಲ್ಲ ಮಾಸ್ಕ್

    ಕಾಟಾಚಾರಕ್ಕೆ ಥರ್ಮಲ್ ಸ್ಕ್ರೀನಿಂಗ್ – ತಪಾಸಣೆ ಮಾಡುವ ಸಿಬ್ಬಂದಿಗೆ ಇಲ್ಲ ಮಾಸ್ಕ್

    – ಕ್ಯಾಮೆರಾ ಕಂಡು ತಪಾಸಣೆಗೆ ಮುಂದಾದ ಆರೋಗ್ಯ ಇಲಾಖೆ ಸಿಬ್ಬಂದಿ

    ಮಡಿಕೇರಿ: ಕೊರೊನಾ ವೈರಸ್ ಹೆಸರು ಕೇಳಿದೆ ಜನರ ಎದೆ ನಡುಗಲಾರಂಭಿಸುತ್ತೆ. ಈಗಾಗಲೇ ರಾಜ್ಯದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಹಿನ್ನೆಲೆ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಸಾರ್ವಜನಿಕರಿಗೆ ವೈರಸ್ ತಗುಲಿದೆಯೋ ಇಲ್ಲವೋ ಎಂದು ಥರ್ಮಲ್ ಪರಿಶೀಲನೆ ಮಾಡುವ ಸಿಬ್ಬಂದಿಗೆ ಸುರಕ್ಷತೆ ಇಲ್ಲ.

    ಕರ್ನಾಟಕ ಕೇರಳ ಗಡಿಭಾಗವಾದ ಕೊಡಗಿನ ವಿರಾಜಪೇಟೆ ತಾಲೂಕಿನ ಪೆರಂಬಾಡಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇದೆ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ಇಲ್ಲಿ ನಾಮಕಾವಸ್ಥೆಗೆ ಇರುವ ಹಾಗೆ ಇದ್ದಾರೆ. ಪೆರಂಬಾಡಿ ಚೆಕ್ ಪೋಸ್ಟ್ ಆದರೂ ಕೂಡ ಒಂದೇ ಒಂದು ವಾಹನ ನಿಂತಿಲ್ಲ. ಯಾವಾಗ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ಗೆ ಇಳಿಯಿತೋ ಪೊಲೀಸರು ವಾಹನ ನಿಲ್ಲಿಸಿದರು, ಆಶಾ ಕಾರ್ಯಕರ್ತೆಯರು ಕೇರಳದಿಂದ ಬರುವವರನ್ನು ಸ್ಕ್ರೀನಿಂಗ್ ಮಾಡೋದಕ್ಕೆ ಮುಂದಾದರು. ಆದರೆ ತಪಾಸಣೆ ಮಾಡುವ ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಹಾಕದೇ ಕಾರ್ಯನಿರ್ವಹಿಸುತ್ತಿದ್ದಾರೆ.

    ಈಗಾಗಲೇ ಕೇರಳದಲ್ಲಿ 27 ಜನರಿಗೆ ಕೊರೊನಾ ಸೋಂಕು ತಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ ಗಡಿಭಾಗದಲ್ಲಿ ತಪಾಸಣೆ ಮಾಡುವವರಿಗೆ ಯಾವುದೇ ಅಗತ್ಯ ಸಲಕರಣೆಗಳು ಇಲ್ಲದೇ ಮಾಸ್ಕ್ ಧರಿಸದೇ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನಾದರೂ ಗಡಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡಬೇಕಿದೆ. ಅಲ್ಲದೇ ಜಿಲ್ಲಾಡಳಿತ ಇತ್ತ ಕಡೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಾಹಿಸಿದ್ದಾರೆ.

    ಇಂದು ಕೊಡಗಿನಲ್ಲಿ ಮೊದಲ ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ. ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ ಕೊರೊನಾ ಸೋಂಕಿತ ಪ್ರಕರಣವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

    ಏನಿದು ಥರ್ಮಲ್ ಸ್ಕ್ಯಾನರ್?
    ಥರ್ಮಲ್ ಸ್ಕ್ಯಾನರ್ ಮನುಷ್ಯನ ದೇಹದ ತಾಪಮಾನವನ್ನು ಅಳೆಯುವ ಸಾಧನ. ಮನುಷ್ಯನ ದೇಹದ ತಾಪಮಾನ ತುಸು ಹೆಚ್ಚುಕಡಿಮೆ 98.6 ಡಿಗ್ರಿ ಫ್ಯಾರನ್‍ಹೀಟ್ ಅಥವಾ 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಥರ್ಮಲ್ ಸ್ಕ್ಯಾನರ್ ನಿಂದ ತಪಾಸಣೆಗೆ ಒಳಪಟ್ಟ ವ್ಯಕ್ತಿಯ ದೇಹದ ತಾಪಮಾನ 98.6 ಡಿಗ್ರಿ ಫ್ಯಾರನ್‍ಹೀಟ್‍ಗಿಂತ ಅಧಿಕವಾಗಿದ್ದರೆ ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತದೆ.

    ಥರ್ಮಲ್ ಸ್ಕ್ಯಾನರ್ ಯಾಕೆ?
    ಕೊರೊನಾ ವೈರಸ್ ಇರುವವರಿಗೆ ಜ್ವರ, ಕೆಮ್ಮು ಪ್ರಮುಖ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ಹಲವರು ತಮಗೆ ಜ್ವರ ಇರುವ ಕುರಿತು ಮಾಹಿತಿ ಕೊಡಲು ಹಿಂಜರಿಯುತ್ತಾರೆ. ಇದಲ್ಲದೇ ಈಗಿರುವ ಹಳೆಯ ತಂತ್ರಜ್ಞಾನ ಬಳಸಿ ಸಾವಿರಾರು ಜನರನ್ನು ಪರೀಕ್ಷೆ ಮಾಡಲು ವೈದ್ಯರಿಗೆ ಕಷ್ಟಸಾಧ್ಯ. ಹೀಗಾಗಿ ತಕ್ಷಣ ಪರೀಕ್ಷಿಸಲು ಜ್ವರದ ತೀವ್ರತೆ ತಿಳಿದುಕೊಳ್ಳಲು ಥರ್ಮಲ್ ಸ್ಕ್ಯಾನರ್ ತಕ್ಷಣದಲ್ಲಿ ಉಪಯೋಗಕ್ಕೆ ಬರುತ್ತದೆ. ಈ ಕಾರಣದಿಂದ ಇದರ ಬಳಕೆ ವೈದ್ಯರಿಗೆ ರೋಗಿಯ ದೇಹಸ್ಥಿತಿ ಅರಿಯಲು ಸಹಕಾರಿಯಾಗುತ್ತದೆ.