Tag: Thermal Scanning

  • ಲ್ಯಾಂಡಿಂಗ್ ಆಗೋ 1 ಗಂಟೆ ಮೊದಲು ಮಾತ್ರೆ ಸೇವನೆ – ಪರೀಕ್ಷೆಯಿಂದ ಪಾಸ್

    ಲ್ಯಾಂಡಿಂಗ್ ಆಗೋ 1 ಗಂಟೆ ಮೊದಲು ಮಾತ್ರೆ ಸೇವನೆ – ಪರೀಕ್ಷೆಯಿಂದ ಪಾಸ್

    – ಕೆಲ ವಿದ್ಯಾವಂತ ವಿದ್ಯಾರ್ಥಿಗಳಿಂದಲೇ ದೇಶಕ್ಕೆ ಕಂಟಕ
    – ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಪಾಸ್

    ಹೈದರಾಬಾದ್: ವಿದೇಶದಿಂದ ಬರುತ್ತಿರುವ ಕೆಲ ಭಾರತೀಯರು ಕೊರೊನಾ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ಯಾರಾಸಿಟಮೋಲ್ ಮಾತ್ರೆ ಸೇವಿಸಿರುವ ಶಾಕಿಂಗ್ ವಿಚಾರ ಈಗ ಬೆಳಕಿಗೆ ಬಂದಿದೆ.

    ವಾರಂಗಲ್ ಮೂಲದ ವಕೀಲ ಕೊರೊನಾ ಶಂಕಿತ ಅಖಿಲ್ ಎಂಬವರು ಮಾರ್ಚ್ 11 ರಂದು ಲಂಡನ್‍ನಿಂದ ಮುಂಬೈಗೆ ಆಗಮಿಸಿದ್ದು, ಈ ಶಾಕಿಂಗ್ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಾನು ಭಾರತಕ್ಕೆ ಬರುತ್ತಿದ್ದ ವಿಮಾನದಲ್ಲಿದ್ದ ಹಲವು ವಿದ್ಯಾರ್ಥಿಗಳಿದ್ದರು. ಈ ವಿದ್ಯಾರ್ಥಿಗಳ ಪೈಕಿ ಕೆಲವರು ವಿಮಾನ ಲ್ಯಾಂಡಿಂಗ್ ಆಗುವ ಒಂದು ಗಂಟೆಗೂ ಮೊದಲು ಪ್ಯಾರಾಸಿಟಮೋಲ್ ಮಾತ್ರೆ ಸೇವಿಸಿದ್ದರು ಎಂಬುದಾಗಿ ಹೇಳಿದ್ದಾರೆ.

    ಇಂಗ್ಲೆಂಡಿನ ಹಲವು ವಿಶ್ವವಿದ್ಯಾಲಯದಲ್ಲಿ ಭಾರತದ ವಿದ್ಯಾರ್ಥಿಗಳು ಉನ್ನತ ಅಧ್ಯಯನ ಮಾಡುತ್ತಿದ್ದಾರೆ. ಪ್ಯಾರಸಿಟಮೋಲ್ ಮಾತ್ರೆ ಸೇವಿಸುವದರ ಪರಿಣಾಮ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಹೀಗಾಗಿ ಥರ್ಮಲ್ ಸ್ಕ್ಯಾನರ್ ನಲ್ಲಿ ಫಲಿತಾಂಶ ಸರಿಯಾಗಿ ಲಭ್ಯವಾಗದ ಪರಿಣಾಮ ಇವರೆಲ್ಲ ಪಾಸ್ ಆಗುತ್ತಿದ್ದಾರೆ. 10 ಮಂದಿ ಪ್ಯಾರಸಿಟಮೋಲ್ ಮಾತ್ರೆ ಸೇವಿಸಿದ್ದನ್ನು ನಾನೇ ಗಮನಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಭಾರತಕ್ಕೆ ಮರಳಿ 14 ದಿನಗಳ ಕಾಲ ಪ್ರತ್ಯೇಕ ನಿಗಾದಲ್ಲಿ ಇರಬೇಕಾಗುತ್ತದೆ ಎನ್ನುವ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳು ಸ್ವಯಂ ದೃಢೀಕರಣ ನೀಡುವಾಗ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಈ ವಿದ್ಯಾರ್ಥಿಗಳು ನಿಮ್ಮ ಮನೆಯ ಪಕ್ಕದಲ್ಲೇ ಸುತ್ತಾಡುತ್ತಿರಬಹುದು. ಈ ವಿದ್ಯಾರ್ಥಿಗಳ ತಪ್ಪಿನಿಂದಾಗಿ ಮುಂದೆ ದೇಶಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಅಖಿಲ್ ಈಗ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿದ್ದಾರೆ. ಲ್ಯಾಂಡ್ ಆದ ಬಳಿಕ ನಾನು ಯಾರನ್ನು ಸಂಪರ್ಕಿಸಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದರು.

    ಭಾರತಕ್ಕೆ ಅತಿ ಹೆಚ್ಚು ಕೊರೊನಾ ಪೀಡಿತರು ವಿದೇಶದಿಂದ ಮರಳಿದವರೇ ಆಗಿದ್ದಾರೆ. ಹೀಗಿರುವಾಗ ವಿಮಾನ ನಿಲ್ದಾಣಗಳಲ್ಲಿ ಕ್ರಮಗಳನ್ನು ಕೈಗೊಂಡರೂ ಪರೀಕ್ಷೆಯಿಂದ ಪಾರಾಗಲು ಈ ಅಪಾಯಕಾರಿ ತಂತ್ರ ಅನುಸರಿಸಿದ್ದು ಈಗ ಸರ್ಕಾರಗಳಿಗೆ ತಲೆನೋವು ತಂದಿದೆ.

    ಕೊರನಾ ಈಗ ವ್ಯಕ್ತಿಗೆ ಬಂದು, ಆ ವ್ಯಕ್ತಿಯಿಂದ ಮತ್ತೊಬ್ಬರಿಗೆ ಬರುವ ಎರಡನೇ ಹಂತ ದಾಟಿ ಆಗಿದ್ದು ಮೂರನೇ ಹಂತದಲ್ಲಿದೆ. ಎರಡನೇ ವ್ಯಕ್ತಿಯಿಂದ ಮೂರನೇ ವ್ಯಕ್ತಿಗೆ ಬರುವ ಮುನ್ನವೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ.

  • ಸಿದ್ದಗಂಗಾ ಮಠದಲ್ಲೂ ಥರ್ಮಲ್ ಸ್ಕ್ಯಾನಿಂಗ್- ಶ್ರೀಗಳಿಗೂ ತಪಾಸಣೆ

    ಸಿದ್ದಗಂಗಾ ಮಠದಲ್ಲೂ ಥರ್ಮಲ್ ಸ್ಕ್ಯಾನಿಂಗ್- ಶ್ರೀಗಳಿಗೂ ತಪಾಸಣೆ

    – ಭಕ್ತರ ಆಗಮನಕ್ಕೆ ನಿರ್ಬಂಧವಿಲ್ಲ

    ತುಮಕೂರು: ಮಹಾಮಾರಿ ಕೊರೊನಾ ಸೋಂಕು ಪ್ರಪಂಚವನ್ನೇ ಆವರಿಸಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಜನ ಭಯಭೀತರಾಗಿದ್ದಾರೆ. ಇದೀಗ ಸಿದ್ದಗಂಗಾ ಮಠದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಭಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ಮಾಡಲಾಗುತ್ತಿದೆ.

    ಶಿವಕುಮಾರ ಶ್ರೀಗಳು ಕೂರುತಿದ್ದ ಹೊಸ ಮಠದ ಗದ್ದುಗೆ ಮುಂದೆ ತಪಾಸೆ ನಡೆಸಲಾಗುತಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ತಪಾಸಣೆ ನಡೆಯುತ್ತಿದೆ. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿದ್ದು, ಯಾವುದೇ ಲಕ್ಷಣ ಕಂಡು ಬಂದಿಲ್ಲ. ಇದೀಗ ಮಠಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಲಾಗುತ್ತಿದೆ.

    ಮಠಕ್ಕೆ ಭಕ್ತಾದಿಗಳ ಆಗಮನಕ್ಕೆ ನಿರ್ಬಂಧ ಹಾಕಿಲ್ಲ. ಆದರೂ ಭಕ್ತಾಧಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸದಾ ಜನರಿಂದ ತುಂಬಿರುತ್ತಿದ್ದ ಮಠದ ಅಂಗಳ ಇದೀಗ ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ. ಕೇವಲ ಮಠದ ವಿದ್ಯಾರ್ಥಿಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.