Tag: therapy

  • ಸತತ ಏಳೂವರೆ ಗಂಟೆ ಸರ್ಜರಿ – ಪಂಜಾಬ್ ಎಎಸ್‍ಐ ಕೈ ಜೋಡಿಸಿದ ವೈದ್ಯರು

    ಸತತ ಏಳೂವರೆ ಗಂಟೆ ಸರ್ಜರಿ – ಪಂಜಾಬ್ ಎಎಸ್‍ಐ ಕೈ ಜೋಡಿಸಿದ ವೈದ್ಯರು

    – ವೈದ್ಯರಿಗೆ ಮುಖ್ಯಮಂತ್ರಿ ಧನ್ಯವಾದ

    ಪಟಿಯಾಲ: ಕರ್ಫ್ಯೂ ಪಾಸ್ ತೋರಿಸುವಂತೆ ಒತ್ತಾಯಿಸಿದ್ದಕ್ಕೆ ನಿಹಾಂಗ್ ಸಿಖ್ಖರ ಗುಂಪೊಂದು ಪೊಲೀಸ್ ಅಧಿಕಾರಿಯೊಬ್ಬರ ಕೈ ಕತ್ತರಿಸಿತ್ತು. ಇದೀಗ ಅಧಿಕಾರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮರಳಿ ಕೈಯನ್ನು ಜೋಡಿಸಲಾಗಿದೆ.

    ನಿಹಾಂಗ್‍ನ ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈಯನ್ನು ವ್ಯಕ್ತಿಯೊಬ್ಬ ಕತ್ತರಿಸಿದ್ದನು. ತಕ್ಷಣ ಅವರನ್ನು ಪಟಿಯಾಲದಿಂದ ಚಂಡೀಗಢ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ ಏಳೂವರೆ ಗಂಟೆ ಶಸ್ತ್ರ ಚಿಕಿತ್ಸೆ ಮಾಡಿ ಕತ್ತರಿಸಿದ್ದ ಪೊಲೀಸ್ ಅಧಿಕಾರಿಯ ಕೈಯನ್ನು ಯಶಸ್ವಿಯಾಗಿ ಮರಳಿ ಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ಪಾಸ್ ತೋರಿಸು ಎಂದಿದ್ದಕ್ಕೆ ಎಎಸ್‍ಐ ಕೈ ಕತ್ತರಿಸಿದ ಗುಂಪು

    ಈ ಬಗ್ಗೆ ಟ್ವೀಟ್ ಮಾಡಿರುವ ಅಮರಿಂದರ್ ಸಿಂಗ್ ಅವರು, “ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳುತ್ತೇನೆ. ಎಎಸ್‍ಐ ಹರ್ಜೀತ್ ಸಿಂಗ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    ಇದೇ ವಿಚಾರವಾಗಿ ಪಂಜಾಬ್ ಪೊಲೀಸ್ ಮುಖ್ಯಸ್ಥ ದಿನಕರ್ ಗುಪ್ತಾ ಕೂಡ ಟ್ವೀಟ್ ಮಾಡಿದ್ದು, ಹಂಜೀತ್ ಸಿಂಗ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, “ನಮ್ಮ ಕೆಚ್ಚೆದೆಯ ಕೊರೊನಾ ಯೋಧ ಎಎಸ್‍ಐ ಹರ್ಜೀತ್ ಸಿಂಗ್ ಅವರಿಗೆ ಯುಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಪ್ರಮುಖ ಪ್ಲಾಸ್ಟಿಕ್ ಸರ್ಜನ್ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲದೇ ಹರ್ಜೀತ್ ಅವರೊಂದಿಗೆ ಮಾತನಾಡಿದೆ. ಸದ್ಯಕ್ಕೆ 5 ದಿನಗಳವರೆಗೂ ಅವರು ಆಸ್ಪತ್ರೆಯಲ್ಲಿಯೇ ಇರುಬೇಕು” ಎಂದು ಗುಪ್ತಾ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮಂಡಿ ಬೋರ್ಡ್ ಠಾಣೆಯ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆಯ ಬಳಿ ನಿಯೋಜನೆಗೊಂಡಿದ್ದರು. ಈ ವೇಳೆ ಭಾನುವಾರ ಬೆಳಗ್ಗೆ 6 ಗಂಟೆಗೆ ಐವರಿಂದ ಆರು ಜನರಿದ್ದ ವಾಹನವನ್ನು ಅವರು ತಡೆದು ಲಾಕ್‍ಡೌನ್ ಪಾಸ್ ತೋರಿಸುವಂತೆ ಒತ್ತಾಯಿಸಿದ್ದರು. ಆಗ ಗುಂಪು ತರಕಾರಿ ಮಾರುಕಟ್ಟೆಯ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿತ್ತು. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬ್ಯಾರಿಕೇಡ್ ಅನ್ನು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ವೇಳೆ ಅಲ್ಲಿ ನಿಂತಿದ್ದ ಪೊಲೀಸರು ವಾಹವನ್ನು ಸುತ್ತುವರಿದರು. ಪೊಲೀಸರು ವಾಹನವನ್ನು ನಿಲ್ಲಿಸಿದ ಕೂಡಲೇ ಕತ್ತಿ, ಮಾರಕಾಸ್ತ್ರಗಳನ್ನು ಎತ್ತಿಕೊಂಡ ಗುಂಪು ದಾಳಿ ನಡೆಸಿ, ಎಎಸ್‍ಐ ಹರ್ಜಿತ್ ಸಿಂಗ್ ಅವರ ಕೈ ಕತ್ತರಿಸಿ ಪರಾರಿಯಾಗಿತ್ತು.

    ನಿಹಾಂಗ್ ಸಿಖ್ಖರು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಬಿಕರ್ ಸಿಂಗ್ ಮತ್ತು ಓರ್ವ ಪೇದೆ ಸಹ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ 9 ಜನರನ್ನು ಬಂಧಿಸಲಾಗಿದೆ.

  • ಕೊರೊನಾ ವೈರಸ್ ಭೀತಿ – ಹಾಸನದಲ್ಲಿ ಓರ್ವ ಆಸ್ಪತ್ರೆಗೆ ದಾಖಲು

    ಕೊರೊನಾ ವೈರಸ್ ಭೀತಿ – ಹಾಸನದಲ್ಲಿ ಓರ್ವ ಆಸ್ಪತ್ರೆಗೆ ದಾಖಲು

    ಹಾಸನ: ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ಇತ್ತೀಚೆಗಷ್ಟೇ ಫ್ರಾನ್ಸ್ ನಿಂದ ಹಾಸನಕ್ಕೆ ಹಿಂದಿರುಗಿದ ವ್ಯಕ್ತಿಯೊಬ್ಬರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದ್ದು ವೈದ್ಯರು ತೀವ್ರ ತಪಾಸಣೆ ನಡೆಸಿದ್ದಾರೆ.

    ಹಾಸನ ಹಿಮ್ಸ್ ನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಫ್ರಾನ್ಸ್ ಗೆ ಪ್ರವಾಸಕ್ಕೆ ಹೋಗಿದ್ದ ಯುವಕ ಕೆಲ ದಿನಗಳ ಹಿಂದೆ ಹಾಸನಕ್ಕೆ ಮರಳಿದ್ದ. ಆತನಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು.

    ಈ ಹಿನ್ನೆಲೆಯಲ್ಲಿ ಹಾಸನದ ಹಿಮ್ಸ್ ನಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಾಸನದ ಪ್ರಮುಖ ಪ್ರವಾಸಿ ತಾಣಗಳಲ್ಲಿ ತಪಾಸಣಾ ಕೇಂದ್ರ ತೆರೆದಿರುವ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ವೈದ್ಯಕೀಯ ನೆರವು ಮುಂದುವರಿಸಿದೆ.

  • ಜಗ್ಗೇಶ್ ಕರೆ ಮಾಡಿದ ಗಂಟೆಯಲ್ಲೇ ಕಿಲ್ಲರ್ ವೆಂಕಟೇಶ್​ಗೆ 1 ಲಕ್ಷ ನೀಡಿದ ದಚ್ಚು

    ಜಗ್ಗೇಶ್ ಕರೆ ಮಾಡಿದ ಗಂಟೆಯಲ್ಲೇ ಕಿಲ್ಲರ್ ವೆಂಕಟೇಶ್​ಗೆ 1 ಲಕ್ಷ ನೀಡಿದ ದಚ್ಚು

    – ಅಭಿಮಾನಿಗಳಲ್ಲಿ ಜಗ್ಗೇಶ್ ಮನವಿ

    ಬೆಂಗಳೂರು: ಕಿಲ್ಲರ್ ವೆಂಕಟೇಶ್ ವಿಷಯವಾಗಿ ಫೋನ್ ಮಾಡಿದ ಒಂದು ಗಂಟೆಯಲ್ಲಿ ಹಣದ ಸಹಾಯ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನವರಸ ನಾಯಕ ಜಗ್ಗೇಶ್ ಅಭಿನಂದನೆ ಸಲ್ಲಿಸಿದ್ದಾರೆ.

    ಸ್ಯಾಂಡಲ್‍ವುಡ್‍ನ ಖ್ಯಾತ ಖಳ ನಟ ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಕ್ಷಣ ಅವರ ಕುಟುಂಬದವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದು ಜಗ್ಗೇಶ್ ಸಹಾಯ ಮಾಡಿದ್ದರು. ಅಲ್ಲದೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಇದೀಗ ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ದರ್ಶನ್ ಕೂಡ ಮುಂದಾಗಿದ್ದಾರೆ. ಇದನ್ನೂ ಓದಿ: 250 ಚಿತ್ರಗಳಲ್ಲಿ ನಟಿಸಿದ ಹಿರಿಯ ಕಲಾವಿದನಿಗೆ ಲಿವರ್ ವೈಫಲ್ಯ- ಉಳಿಸಿಕೊಳ್ಳಲು ಜಗ್ಗೇಶ್ ಪ್ರಯತ್ನ

    ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಬಗ್ಗೆ ಜಗ್ಗೇಶ್ ಅವರು ದರ್ಶನ್ ಅವರಿಗೆ ತಿಳಿಸಿದ್ದಾರೆ. ಜಗ್ಗೇಶ್ ಫೋನ್‍ಗೆ ತಕ್ಷಣ ಪ್ರತಿಕ್ರಿಯಿಸಿದ ದರ್ಶನ್, ಒಂದು ಲಕ್ಷ ಹಣ ಕಳುಹಿಸಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    “ಕಿಲ್ಲರ್ ವೆಂಕಟೇಶ್ ವಿಷಯವಾಗಿ ನಾನು ಕರೆ ಮಾಡಿದ 1 ಗಂಟೆಯಲ್ಲಿ ಅವನ ಚಿಕಿತ್ಸೆಗೆ 1ಲಕ್ಷ ರೂ ಕಳಿಸಿದ ಕಲಾಬಂಧು. ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು. ನಿನ್ನ ಶ್ರೇಷ್ಠಗುಣ ನನ್ನ ಹೃದಯದಲ್ಲಿ ಅಚ್ಚಾಯಿತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ. dasadarshan god bless”  ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೇ “ವಿಕ್ಟೋರಿಯಾ ಆಸ್ಪತ್ರೆಯ ಡಾ.ಗಿರೀಶ್ ಮತ್ತು ಅವರ ವಿಶೇಷ ತಂಡ ಅದ್ಭುತವಾಗಿ ಸ್ಪಂದಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಧನ್ಯವಾದಗಳು. ನನ್ನ ಕರೆಗೆ ಸ್ಪಂಧಿಸಿದ ಕಲಾಬಂಧು ದರ್ಶನ ಅವರಿಗೆ, ಸಾ.ರಾ,ಬಾಮಾ ಹರೀಶ್ ಮಾಧ್ಯಮ ಮಿತ್ರರಿಗೆ” ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.

    ಜೊತೆಗೆ “ಮಾಧ್ಯಮಮಿತ್ರರೆ, ಕಲಾಭಿಮಾನಿಗಳೇ, ಸಹೃದಯರೇ 35 ವರ್ಷ ಕಲಾಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು. ಬಲವಂತವಿಲ್ಲ, ಯಕೃತ್ ಕಸಿಗೆ ತುಂಬಾ ದೊಡ್ಡ ಮೊತ್ತ ಆಗುತ್ತದೆ ಹಾಗಾಗಿ ವಿನಂತಿ” ಎಂದು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಜೊತೆಗೆ ಚಿಕಿತ್ಸೆಗೆ ಹಣದ ಅವಶ್ಯಕತೆ ಕೂಡ ಇದೆ. ಹೀಗಾಗಿ ಕುಟುಂಬದವರು ಆಸ್ಪತ್ರೆಗೆ ಹಣ ಕಟ್ಟಲು ಪರಾಡುತ್ತಿದ್ದಾರೆ.

  • 250 ಚಿತ್ರಗಳಲ್ಲಿ ನಟಿಸಿದ ಹಿರಿಯ ಕಲಾವಿದನಿಗೆ ಲಿವರ್ ವೈಫಲ್ಯ- ಉಳಿಸಿಕೊಳ್ಳಲು ಜಗ್ಗೇಶ್ ಪ್ರಯತ್ನ

    250 ಚಿತ್ರಗಳಲ್ಲಿ ನಟಿಸಿದ ಹಿರಿಯ ಕಲಾವಿದನಿಗೆ ಲಿವರ್ ವೈಫಲ್ಯ- ಉಳಿಸಿಕೊಳ್ಳಲು ಜಗ್ಗೇಶ್ ಪ್ರಯತ್ನ

    ಬೆಂಗಳೂರು: ನವರಸನಾಯಕ ಜಗ್ಗೇಶ್ ಇತ್ತೀಚೆಗಷ್ಟೇ ಒಂದು ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಕಲಾವಿದನ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಇದೀಗ ಆ ಕಲಾವಿದ ಯಾರು ಎಂಬುದನ್ನು ತಿಳಿಸಿದ್ದಾರೆ.

    ಜಗ್ಗೇಶ್ ಅಂದು ಕನ್ನಡ ಚಿತ್ರರಂಗದ ಪೋಷಕ ನಟ ಕಿಲ್ಲರ್ ವೆಂಕಟೇಶ್ ಬಗ್ಗೆ ಮಾತನಾಡಿದ್ದು. ಇವರು ಒಂದು ಕಾಲದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದರು. ಆದರೆ ಇಂದು ವೆಂಕಟೇಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಬೇಸರವ್ಯಕ್ತಪಡಿಸಿದ್ದಾರೆ.

    “250 ಕನ್ನಡ ಚಿತ್ರ ನಟಿಸಿದ ಮಿತ್ರ ಕಿಲ್ಲರ್ ವೆಂಕಟೇಶ್. ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ ಮಾಡುತ್ತಿದ್ದಾನೆ. ಇವನ ವಿಷಯವೇ ನಾನು ಚಂದನವನ ಅವಾರ್ಡ್ ವೇದಿಕೆಯಲ್ಲಿ ಮಾತಾಡಿದ್ದು. ನನ್ನ ಕೈಲಾದ ಸಹಾಯ ಮಾಡಿ ಇವನ ಉಳಿಸಿಕೊಳ್ಳಲು ಯತ್ನಿಸುತಿರುವೆ. ತುಂಬಾ ದುಃಖವಾಯಿತು ಹಿರಿಯ ಕಲಾವಿದರ ಸ್ಥಿತಿ ಕಂಡು. ರಾಯರೆ ಕಾಪಾಡಬೇಕು ಇಂಥ ಕಲಾವಿದರ..ಹರಿ ಓಂ” ಎಂದು ಜಗ್ಗೇಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೆ ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸುಮಾರು 200ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದ ನನಗೆ ಫೋನ್ ಮಾಡಿ ಭೇಟಿ ಮಾಡಿದ್ದನು. ಅವನು ನನ್ನ ಬಳಿ ಬಂದು ಮಗು ತರ ಕಣ್ಣೀರು ಹಾಕಿದ. ಯಾಕೆಂದರೆ ಅವನ ಬಳಿ ಒಂದು ಕೆ.ಜಿ ಅಕ್ಕಿ ತರಲು ಹಣವಿರಲಿಲ್ಲ. ಇದು ನಮ್ಮ ಚಿತ್ರರಂಗ ಎಂದು ಕಲಾವಿದನ ಇಂದಿನ ಬದುಕನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದರು.

    ಜಗ್ಗೇಶ್, ಕಿಲ್ಲರ್ ವೆಂಕಟೇಶ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಕಿಲ್ಲರ್ ವೆಂಕಟೇಶ್ ಒಂದು ಕಾಲದಲ್ಲಿ ಬೇಡಿಕೆಯ ಖಳನಟ ಹಾಗೂ ಪೋಷಕನಟರಾಗಿದ್ದರು. ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಜಗ್ಗೇಶ್ ಹಾಗೂ ಕಿಲ್ಲರ್ ವೆಂಕಟೇಶ್ ಜೊತೆಯಾಗಿ ‘ರಣಧೀರ’ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಂದಿನಿಂದಲೂ ವೆಂಕಟೇಶ್ ಪೋಷಕ ಪಾತ್ರಗಳಲ್ಲಿಯೇ ಅಭಿನಯಿಸುತ್ತಿದ್ದರು. ಆದರೆ ಬರುಬರುತ್ತಾ ಇವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದೆ. ಹೀಗಾಗಿ ವೆಂಕಟೇಶ್ ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ.

    ಸದ್ಯಕ್ಕೆ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಜೊತೆಗೆ ಚಿಕಿತ್ಸೆಗೆ ಹಣದ ಅವಶ್ಯಕತೆ ಕೂಡ ಇದೆ. ಹೀಗಾಗಿ ಕುಟುಂಬದವರು ಆಸ್ಪತ್ರೆಗೆ ಹಣ ಕಟ್ಟಲು ಪರಾಡುತ್ತಿದ್ದಾರೆ.

  • ಕ್ಯಾನ್ಸರ್‌ಗೆ ಹೆದರಬೇಕಿಲ್ಲ, ಸೂಕ್ತ ಚಿಕಿತ್ಸೆಯಿದೆ: ಡಾ. ರಾಮಚಂದ್ರ

    ಕ್ಯಾನ್ಸರ್‌ಗೆ ಹೆದರಬೇಕಿಲ್ಲ, ಸೂಕ್ತ ಚಿಕಿತ್ಸೆಯಿದೆ: ಡಾ. ರಾಮಚಂದ್ರ

    – 40 ವರ್ಷ ಮೇಲ್ಪಟ್ಟ ಹೆಣ್ಮಕ್ಕಳು ವಾರ್ಷಿಕ ಚೆಕಪ್ ಮಾಡಿಸಬೇಕು

    ಬೆಂಗಳೂರು: ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆಗೆ ಯಾರು ಹೆದರಬೇಕಿಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆಯಿದೆ. ಕ್ಯಾನ್ಸರ್ ಅನ್ನೋದು ಒಂದು ಕಾಯಿಲೆ. ಅದರಿಂದ ಭಯಪಡುವ ಅಗತ್ಯವಿಲ್ಲ. ಕ್ಯಾನ್ಸರ್ ಖಾಯಿಲೆಯ ಸೊಂಕು ಬಗ್ಗೆ ತಿಳಿದ ಕೂಡಲೇ ತುರ್ತಾಗಿ ಚಿಕಿತ್ಸೆಗೆ ಬರಬೇಕು. ಆಗ ಮಾತ್ರ  ಕ್ಯಾನ್ಸರ್‌ಗೆ ಕಡಿವಾಣ ಹಾಕಬಹುದು ಎಂದು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ರಾಮಚಂದ್ರ ಹೇಳಿದ್ದಾರೆ.

    ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಪ್ರಸ್ತುತ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗರ್ಭಕೋಶದ ಕಂಟಕದ ಕ್ಯಾನ್ಸರ್ ಕಡಿಮೆಯಾಗುತ್ತಿದೆ. ತಂಬಾಕು, ಪಾನ್ ಪರಾಗ್ ತಿನ್ನುವುದರಿಂದ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಸರ್ಕಾರ ಇವುಗಳನ್ನ ನಿಷೇಧಿಸಿದ್ದರೂ ಜನ ಇವುಗಳ ಮೇಲೆಯೇ ಅವಲಂಬನೆಯಾಗಿದ್ದಾರೆ. ಕ್ಯಾನ್ಸರ್ ಸೊಂಕು ತಗುಲಿದಾಗ ಶೇ. 60ರಷ್ಟು ತಡೆಗಟ್ಟಬಹುದು ಎಂದು ತಿಳಿಸಿದರು.

    ನಮ್ಮ ಜನ ಕ್ಯಾನ್ಸರ್ ಬಗ್ಗೆ ಗೊತ್ತಿದ್ದರೂ ಬೇಗ ಚಿಕಿತ್ಸೆಗೆ ಬರುವುದಿಲ್ಲ. ಕೊನೆಯ ಹಂತದಲ್ಲಿದ್ದಾಗ ಮಾತ್ರ ಆಸ್ಪತ್ರೆಗಳಿಗೆ ಬರುತ್ತಾರೆ. ಆ ಸಮಯದಲ್ಲಿ ಪರಸ್ಥಿತಿ ಕೈ ಮೀರಿ ಹೋಗಿರುತ್ತೆ. ಹೀಗಾಗಿ ಕ್ಯಾನ್ಸರ್ ಬಗ್ಗೆ ಸಾಕಷ್ಟು ಜನರಲ್ಲಿ ಆತಂಕವಿದೆ ಎಂದರು.

    ಇಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿಸಿಎಂ ಅಶ್ವತ್ ನಾರಾಯಣ್ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಕ್ಯಾನ್ಸರ್ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ರಾಮಚಂದ್ರ, 40 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು, ವರ್ಷಕ್ಕೊಮ್ಮೆ ಮ್ಯಾಮೋಗ್ರಾಮ್, ಅನ್ಯೂವಲ್ ಚೆಕಪ್ ಮಾಡಿಸಬೇಕು. ಕ್ಯಾನ್ಸರ್ ಖಾಯಿಲೆಯ ಬಗ್ಗೆ ಹೆದರುವಂತ ಅವಶ್ಯಕತೆಯಿಲ್ಲ ಎಂದು ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು.

  • ಬಿಗ್ ಮನೆಯಲ್ಲಿ ಪ್ರಿಯಾಂಕಾಗೆ ತುರ್ತು ಚಿಕಿತ್ಸೆ

    ಬಿಗ್ ಮನೆಯಲ್ಲಿ ಪ್ರಿಯಾಂಕಾಗೆ ತುರ್ತು ಚಿಕಿತ್ಸೆ

    ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿ ಪ್ರಿಯಾಂಕಾಗೆ ಟಾಸ್ಕ್ ಮಾಡುವಾಗ ಉಸಿರುಗಟ್ಟಿದೆ. ತಕ್ಷಣ ಅವರಿಗೆ ಬಿಗ್‍ಬಾಸ್ ಮನೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.

    ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ಸ್ಪರ್ಧಿಗಳು ಎದ್ದೇಳಿದ ತಕ್ಷಣ ಬಿಗ್‍ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದೇನೆಂದರೆ ಬಿಗ್‍ಬಾಸ್ ನೀಡಿದ್ದ ಗೊಂಬೆಯನ್ನು ಕೋಲಿನ ಒಂದು ತುದಿಯಲ್ಲಿ ಇಟ್ಟುಕೊಂಡು, ಬ್ಯಾಲೆನ್ಸ್ ಮಾಡಿಕೊಂಡು ಸ್ಪರ್ಧಿಗಳು ತಮ್ಮ ತಲೆ ಮೇಲೆ ಇಟ್ಟುಕೊಳ್ಳಬೇಕಿತ್ತು. ನಂತರ ಬಿಗ್‍ಬಾಸ್ ಸ್ಪರ್ಧಿಗಳಿಗೆ ನೀಡಲಾಗಿದ್ದ ಪ್ಲ್ಯಾಟ್ ಫಾರ್ಮ್ ಮೇಲೆ ನಿಂತುಕೊಂಡು ಮುಂದಿನ ಹಂತಕ್ಕೆ ತಲುಪಬೇಕಿತ್ತು.

    ಬಿಗ್‍ಬಾಸ್ ನೀಡಿದ್ದ ಟಾಸ್ಕ್ ನಂತೆ ಎಲ್ಲಾ ಸ್ಪರ್ಧಿಗಳು ಗೊಂಬೆಯನ್ನು ಕೋಲಿನ ಮೇಲೆ ಇಟ್ಟುಕೊಂಡು ಬ್ಯಾಲೆನ್ಸ್ ಮಾಡುತ್ತಿದ್ದರು. ಮೊದಲಿಗೆ ವಾಸುಕಿ ತಮ್ಮ ಗೊಂಬೆ ಬೀಳಿಸಿಕೊಂಡು ಔಟಾದರು. ನಂತರ ದೀಪಿಕಾ, ಹರೀಶ್ ರಾಜ್, ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಔಟಾದರು. ಕೊನೆಗೆ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಗೊಂಬೆ ಬ್ಯಾಲೆನ್ಸ್ ಮಾಡುತ್ತಾ ನಿಂತುಕೊಂಡಿದ್ದರು.

    ಪ್ರಿಯಾಂಕಾ ಕೊನೆಯ ಹಂತದವರೆಗೂ ತಲುಪಿದ್ದರು. ಆದರೆ ಇನ್ನೇನು ಗೆಲುವಿಗೆ ಒಂದೇ ಹೆಜ್ಜೆ ಬಾಕಿ ಇದೆ ಎನ್ನುವಾಗ ಗೊಂಬೆ ಕೆಳಗೆ ಬಿದ್ದಿದೆ. ಹಾಗಾಗಿ ಈ ಟಾಸ್ಕ್ ನಲ್ಲಿ ಭೂಮಿ ಶೆಟ್ಟಿ ಗೆದ್ದರು. ಆದರೆ ಟಾಸ್ಕ್ ನಿಂದ ಸುಸ್ತಾಗಿ ಪ್ರಿಯಾಂಕಾ ಕುಸಿದು ಬಿದ್ದಿದ್ದಾರೆ. ಆಗ ಅವರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ತಕ್ಷಣ ಬಿಗ್‍ಬಾಸ್ ಪ್ರಿಯಾಂಕಾರನ್ನು ಕನ್ಫೆಷನ್  ರೂಮಿಗೆ ಕರೆದುಕೊಂಡು ಬನ್ನಿ ಎಂದು ಹೇಳಿದರು.

    ಆಗ ಶೈನ್ ಪ್ರಿಯಾಂಕಾರನ್ನು ಎತ್ತಿಕೊಂಡು ಕನ್ಫೆಷನ್ ರೂಮಿಗೆ ಕರೆದುಕೊಂಡು ಹೋಗಿದ್ದಾರೆ. ಅವರ ಪರಿಸ್ಥಿತಿ ಏನಾಯಿತೋ ಏನೋ ಎಂದು ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ತುಂಬಾ ಹೊತ್ತಿನ ಬಳಿಕ ಪ್ರಿಯಾಂಕಾ ವಾಪಸ್ ಬಂದರು. ಈ ವೇಳೆ ಎಲ್ಲರೂ ಏನಾಯಿತು ಎಂದಾಗ, ಉಸಿರು ಕಟ್ಟಿದಂತಾಯಿತು, ಮಾಸ್ಕ್ ಮೂಲಕ ಆಕ್ಸಿಜನ್ ನೀಡಿದ್ದಾಗಿ ಹೇಳಿದ್ದಾರೆ.

  • ಮಠಕ್ಕೆ ಯಾರೂ ಬರ್ಬೇಡಿ, ಅಜ್ಜರಕಾಡು ಮೈದಾನಕ್ಕೆ ಬನ್ನಿ: ಭಕ್ತರಲ್ಲಿ ಕಿರಿಯ ಶ್ರೀ ಮನವಿ

    ಮಠಕ್ಕೆ ಯಾರೂ ಬರ್ಬೇಡಿ, ಅಜ್ಜರಕಾಡು ಮೈದಾನಕ್ಕೆ ಬನ್ನಿ: ಭಕ್ತರಲ್ಲಿ ಕಿರಿಯ ಶ್ರೀ ಮನವಿ

    ಉಡುಪಿ: ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಸದ್ಯಕ್ಕೆ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಪೇಜಾವರ ಶ್ರೀಗಳ ದರ್ಶನ ಮಾಡಲು ಅಪಾರ ಭಕ್ತರು ಮಠಕ್ಕೆ ಬರುತ್ತಿದ್ದಾರೆ. ಆದ್ದರಿಂದ ಭಕ್ತರೇ ಪೇಜಾವರ ಶ್ರೀಗಳನ್ನು ನೋಡಲು ಮಠಕ್ಕೆ ಬರಬೇಡಿ ಎಂದು ಕಿರಿಯ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀಗಳ ಪೂಜಾ ಸಾಮಾಗ್ರಿಗಳು ಬೆಂಗ್ಳೂರಿಗೆ ಶಿಫ್ಟ್

    ಚಿಕಿತ್ಸೆ ನಡುವೆಯೇ ಭಕ್ತರಿಗೆ ಪೇಜಾವರ ಶ್ರೀಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಗಿತ್ತು. ಆದರೆ ಶ್ರೀಗಳ ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರೇ ಶ್ರೀಗಳನ್ನು ನೋಡಲು ಮಠಕ್ಕೆ ಬರಬೇಡಿ. ನಿಮಗಾಗಿ ಒಂದು ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಅಜ್ಜರಕಾಡು ಕ್ರೀಡಾಂಗಣಕ್ಕೆ ಬನ್ನಿ. ಅಲ್ಲಿ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಭಕ್ತರಲ್ಲಿ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಮಠದಿಂದ ಸುಮಾರು 2 ಕಿ.ಮೀ ದೂರದಲ್ಲಿ ಅಜ್ಜರಕಾಡು ಕ್ರೀಡಾಂಗಣ ಇದೆ. ಈಗಾಗಲೇ ಮೈದಾನದಲ್ಲಿ ಪೊಲೀಸರು ತರಾತುರಿಯಲ್ಲಿ ಪೂರ್ವ ಸಿದ್ಧತೆ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ಪೇಜಾವರ ಶ್ರೀ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಸಾರ್ವಜನಿಕರು ಕೂಡ ಮೈದಾನಕ್ಕೆ ದೌಡಾಯಿಸುತ್ತಿದ್ದಾರೆ. ಇನ್ನೂ ಕೆಲವೇ ಗಂಟೆಯಲ್ಲಿ ಪೇಜಾವರ ಶ್ರೀಗಳನ್ನು ಮೈದಾನಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

  • ನ್ಯುಮೋನಿಯಾಕ್ಕೆ ಹಲವು ದಿನದ ಚಿಕಿತ್ಸೆ ಅವಶ್ಯಕ: ನೀರಾ ರಾಡಿಯಾ

    ನ್ಯುಮೋನಿಯಾಕ್ಕೆ ಹಲವು ದಿನದ ಚಿಕಿತ್ಸೆ ಅವಶ್ಯಕ: ನೀರಾ ರಾಡಿಯಾ

    ಉಡುಪಿ: ನ್ಯುಮೋನಿಯಾಕ್ಕೆ ಹಲವು ದಿನ ಚಿಕಿತ್ಸೆ ಬೇಕು. ಪೇಜಾವರ ಶ್ರೀಗಳ ಆರೋಗ್ಯ ಸದ್ಯ ಸ್ಥಿರವಾಗಿದೆ. ಸಂಪೂರ್ಣ ಸುಧಾರಿಸಲು ಸಮಯಾವಕಾಶ ಬೇಕಾಗಬಹುದು ಎಂದು ಪೇಜಾವರ ಶ್ರೀ ಶಿಷ್ಯೆ, ಕಾರ್ಪೊರೇಟ್ ಜಗತ್ತಿನ ಪ್ರಭಾವಿ ನೀರಾ ರಾಡಿಯಾ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ನ್ಯುಮೋನಿಯಾಗೆ ಕೆಲ ದಿನ ಟ್ರೀಟ್‍ಮೆಂಟ್ ಕೊಡಬೇಕಾಗುತ್ತದೆ. ಸಾಮಾನ್ಯವಾಗಿ ನ್ಯುಮೋನಿಯಾ ಸಮಸ್ಯೆಗೆ ಹೆಚ್ಚು ದಿನ ಟ್ರೀಟ್ಮೆಂಟ್ ಬೇಕಾಗುತ್ತದೆ. ಶ್ರೀಗಳು ದಾಖಲಾದ ಸ್ಥಿತಿಗಿಂತ ಆರೋಗ್ಯ ಈಗ ಬಹಳ ಸುಧಾರಿಸಿದೆ ಎಂದರು. ಇದನ್ನೂ ಓದಿ: ಎದೆಯಲ್ಲಿದ್ದ ಕಫ ನೀರಾಗುತ್ತಿದೆ- ಚಿಕಿತ್ಸೆಗೆ ಪೇಜಾವರ ಶ್ರೀಗಳು ಸ್ಪಂದನೆ

    ತನ್ನ ನಿಯತಿ ಹೆಲ್ತ್ ಕೇರ್ ಮಥುರಾ, ಡೆಲ್ಲಿಯ ಆಸ್ಪತ್ರೆಯ ಉತ್ಪಲ್ ಶರ್ಮಾ ಮತ್ತು ಅಜಯ್ ಅಗರವಾಲ್ ಇಬ್ಬರು ತಜ್ಞರು ನನ್ನ ಜೊತೆಗಿದ್ದಾರೆ. ಅವರು ಕೆಎಂಸಿ ವೈದ್ಯರ ತಂಡದ ಜೊತೆ ಚರ್ಚೆ ಮಾಡಿದ್ದಾರೆ ಎಂದು ನೀರಾ ಹೇಳಿದರು.

    ಡಾ. ಉತ್ಪಲ್ ಶರ್ಮಾ ಮಾತನಾಡಿ, ಡಾಕ್ಟರ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಒಬ್ಬ ರೋಗಿಯನ್ನು ಮೂರು ದಿನ ಮಾನಿಟರ್ ಮಾಡಬೇಕು. ಗುರುಗಳ ಆರೋಗ್ಯದಲ್ಲಿ ಸುಧಾರಣೆ ಇದೆ. ಕೆಎಂಸಿ ವೈದ್ಯರ ತಂಡ ಬಹಳ ಶ್ರಮ ವಹಿಸುತ್ತಿದೆ ಎಂದರು.

  • ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು

    ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು

    ನವದೆಹಲಿ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಮಂಗಳವಾರ ರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ.

    ಡಿ.ಕೆ.ಶಿವಕುಮಾರ್ ಎದೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಕೂಡ ಡಿ.ಕೆ.ಶಿವಕುಮಾರ್ ಅವರಿಗೆ ಬಿಪಿ ಮತ್ತು ಶುಗರ್ ನಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದೆ. ಜೊತೆಗೆ ರಕ್ತದೊತ್ತಡ ಕೂಡ ಹೆಚ್ಚಳವಾಗಿದೆ. ತಕ್ಷಣ ವೈದ್ಯರು ಚಿಕಿತ್ಸೆ ನೀಡಿ ವಿಶ್ರಾಂತಿಗೆ ಅವಕಾಶ ನೀಡಿದ್ದರು.

    ಅವರನ್ನು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಿ ವಿಶ್ರಾಂತಿ ಕಲ್ಪಿಸಿದ್ದರು. ವಿಶ್ರಾಂತಿ ಪಡೆದ ನಂತರ ಡಿಕೆಶಿ ಅವರು ಆರೋಗ್ಯ ಹತೋಟಿಗೆ ಬಂದಿದೆ. ಹೀಗಾಗಿ ಸ್ವಲ್ಪ ಸಮಯದ ನಂತರ ವೈದ್ಯರು ಮತ್ತೊಂದು ರೊಟಿನ್ ಚೆಕಪ್ ನಡೆಸಲಿದ್ದಾರೆ. ಜೊತೆಗೆ ಇನ್ನೂ 24 ಗಂಟೆಗಳ ಕಾಲ ಅವರನ್ನು ನಿಗಾ ಘಟಕದಲ್ಲಿ ಇರಿಸಬೇಕು ಎಂದು ವೈದ್ಯರು ಇಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಇಡಿ ಅಧಿಕಾರಿಗಳು ಇಂದೇ ಅವರನ್ನು ನಮ್ಮ ಕಸ್ಟಡಿಗೆ ತೆಗೆದುಕೊಳ್ಳಬೇಕು ಎಂದು ಕೇಳುವ ಸಾಧ್ಯತೆ ಇದೆ.

  • 1975 ರಿಂದ ಇಲ್ಲಿವರೆಗೂ 10ರೂ. ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಇನ್ನಿಲ್ಲ

    1975 ರಿಂದ ಇಲ್ಲಿವರೆಗೂ 10ರೂ. ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಇನ್ನಿಲ್ಲ

    -ಮರೆಯಾಯ್ತು ಬಡವರ ಪಾಲಿನ ಆಶಾಕಿರಣ

    ಕೊಪ್ಪಳ: ರೋಗಿಗಳನ್ನು ಎಂತಹ ಸಂಧರ್ಭದಲ್ಲೂ ಅವರಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡುತ್ತಿದ್ದ ಕೊಪ್ಪಳದ ಹಿರಿಯ ವೈದ್ಯರೊಬ್ಬರು ಶನಿವಾರ ಕೊನೆಯುಸಿರೆಳೆದಿದ್ದಾರೆ.

    ಡಾ.ಬಾಬುರಾವ್ ಮೃತ ವೈದ್ಯರು. ಇವರು ಕೊಪ್ಪಳದ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿದ್ದು, ಹೈದರಾಬಾದ್ ಕರ್ನಾಟಕದಲ್ಲಿ ಖ್ಯಾತಿ ಪಡೆದಿದ್ದರು. ಯಾರಿಗೆ ಹಾವು, ಚೇಳು ಕಚ್ಚಿದರೆ ಥಟ್ ಅಂತ ನೆನಪಾಗುವ ಹೆಸರೇ ಬಾಬುರಾವ್ ಅವರದ್ದು. ಎಂತಹ ಸಂದರ್ಭದಲ್ಲೂ ವ್ಯಕ್ತಿಯ ಪ್ರಾಣವನ್ನು ಬದುಕಿಸುತ್ತಿದ್ದರು. ಈ ಕಾರಣದಿಂದಲೇ ಬಾಬುರಾವ್ ಇಲ್ಲಿ ಮನೆ ಮನೆಗೂ ಚಿರಪರಿಚಿತರು.

    ಈ ಭಾಗದಲ್ಲಿ ಗದ್ದೆಗೆ ಬಳಸುವ ಎಣ್ಣೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಿವೆ. ಯಾರು ಎಲ್ಲೆ ರಾಸಾಯನಿಕ ಎಣ್ಣೆ ಕುಡಿದಿದ್ದಾರೆ ಅಂದರೆ ಅವರು ಎಲ್ಲೆ ಇರಲಿ ಮೊದಲು ಬಾಬುರಾವ್ ಹತ್ತಿರ ಬರುತ್ತಿದ್ದರು. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಮೂಲೆ ಮೂಲೆಯಿಂದ ಈ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯಲು ಜನ ಆಗಮಿಸುತ್ತಿದ್ದರು. ಬಡವರ ಪಾಲಿನ ಆಶಾಕಿರಣ ಅಂದರೆ ತಪ್ಪಾಗಲಾರದು. ಅವರ ಹತ್ತಿರ ದುಡ್ಡು ಇಲ್ಲದಿದ್ದರೂ ಉಚಿತವಾಗಿ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದರು.

    1975ರಲ್ಲಿ ಶ್ರೀರಾಮನಗರಕ್ಕೆ ಆಗಮಿಸಿದ ಬಾಬುರಾವ್ ಅವರು ಅಂದಿನಿಂದ ಇಂದಿನವರೆಗೆ ಕೇವಲ 10 ರೂಪಾಯಿ ಮಾತ್ರ ಪಡೆದು ಚಿಕಿತ್ಸೆ ನೀಡುತ್ತಿದ್ದರು. ಹುಬ್ಬಳ್ಳಿ ಧಾರವಾಡ, ರಾಯಚೂರಿನಿಂದ ಬಂದು ಇಲ್ಲಿ ಚಿಕಿತ್ಸೆ ಪಡೆದುಕೊಂಡು ಹೋಗಿದ್ದರು. ಇದೀಗ ಬಾಬುರಾವ್ ಅವರ ಅಕಾಲಿಕ ಅಗಲಿಕೆಯಿಂದ ಇಡೀ ಶ್ರೀರಾಮನಗರವೇ ಕಂಬನಿ ಮಿಡಿಯುತ್ತಿದೆ.

    ಇಂದು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಾಬುರಾವ್ ಅವರ ಅಂತಿಮ ಯಾತ್ರೆಯಲ್ಲಿ ಸ್ಥಳೀಯರು ಪಾಲ್ಗೊಳುತ್ತಿದ್ದಾರೆ. ನಮ್ಮ ಶ್ರೀರಾಮನಗರಕ್ಕೆ ಇಂತಹ ಮತ್ತೊಬ್ಬ ವೈದ್ಯರು ಬರಲಿ ಬಾಬುರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಮತ್ತೆ ಹುಟ್ಟಿಬರಲಿ ಎಂದು ಎಲ್ಲರು ಆಶಿಸುತ್ತಿದ್ದಾರೆ.