Tag: therapy

  • ಹುಬ್ಬಳ್ಳಿಯಲ್ಲಿ ಕೊರೊನಾಗೆ ಎಎಸ್‍ಐ ಬಲಿ

    ಹುಬ್ಬಳ್ಳಿಯಲ್ಲಿ ಕೊರೊನಾಗೆ ಎಎಸ್‍ಐ ಬಲಿ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೊನಾಗೆ ಹುಬ್ಬಳ್ಳಿಯಲ್ಲಿ ಕೊರೊನಾ ವಾರಿಯರ್ ಬಲಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಎಎಸ್‍ಐಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಸೇವೆ ಸಲ್ಲಿಸುತ್ತಿದ್ದ ಎಎಸ್‌ಐ ಕಳೆದ ಒಂದು ವಾರದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಜುಲೈ 1ರಿಂದ 7ರವರೆಗೆ ಹೋಂ ಕ್ವಾರಂಟೈನ್‍ನಲ್ಲಿ ಇದ್ದ ಎಎಸ್‍ಐಗೆ 7ರಂದು ಕೊರೊನಾ ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಹಾವೇರಿ ಮೂಲದ 58ವರ್ಷ ವಯಸ್ಸಿನ ಎಎಸ್‍ಐ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೇ ಪೊಲೀಸ್ ಠಾಣೆಯ ಚಾಲಕರೊಬ್ಬರಿಗೂ ಕೊರೊನಾ ದೃಢಪಟ್ಟಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಎಸ್‍ಐ ಸಾವಿನ ನಂತರ ಹುಬ್ಬಳ್ಳಿ ಪೊಲೀಸರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.

    ಹುಬ್ಬಳ್ಳಿಯ ವಿದ್ಯಾನಗರ, ಘಂಟಿಕೇರಿ, ಬೆಂಡಿಗೇರಿ, ಅಶೋಕ್ ನಗರ, ಸಬರಬನ್ ಮತ್ತು ಶಹರ ಠಾಣೆಯ ಹಲವು ಸಿಬ್ಬಂದಿಗಳಿಗೂ ಸಹ ಈಗಾಗಲೇ ಕೊರೊನಾ ವೈರಸ್ ದೃಢಪಟ್ಟ ಪರಿಣಾಮ ಹುಬ್ಬಳ್ಳಿ ಪೊಲೀಸರಿಗೆ ಕೊರೊನಾ ವೈರಸ್ ಭೀತಿ ಶುರುವಾಗಿದೆ.

  • ಸಚಿವ ಸಿ.ಟಿ.ರವಿಗೆ ಕೊರೊನಾ- ಪತ್ನಿ, ಆಫೀಸ್ ಸಿಬ್ಬಂದಿಗೆ ನೆಗೆಟಿವ್

    ಸಚಿವ ಸಿ.ಟಿ.ರವಿಗೆ ಕೊರೊನಾ- ಪತ್ನಿ, ಆಫೀಸ್ ಸಿಬ್ಬಂದಿಗೆ ನೆಗೆಟಿವ್

    – ಗನ್ ಮ್ಯಾನ್, ಕಾರ್ ಚಾಲಕನಿಗೂ ನೆಗೆಟಿವ್

    ಬೆಂಗಳೂರು: ಸಚಿವ ಸಿ.ಟಿ.ರವಿ ಅವರು ಕೋವಿಡ್ 19 ಟೆಸ್ಟ್ ಮಾಡಿಸಿದ್ದು, ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

    ಶನಿವಾರ ಸಿ.ಟಿ.ರವಿ, ಅವರ ಪತ್ನಿ ಪಲ್ಲವಿ, ಗನ್ ಮ್ಯಾನ್ ಮತ್ತು ಕಾರಿನ ಚಾಲಕ ಸೇರಿ ಕಚೇರಿ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಭಾನುವಾರ ಸಂಜೆ ವರದಿ ಬಂದಿದ್ದು, ಪತ್ನಿ ಪಲ್ಲವಿ, ಗನ್ ಮ್ಯಾನ್ ಮತ್ತು ಕಾರಿನ ಚಾಲಕ ಸೇರಿ ಕಚೇರಿ ಸಿಬ್ಬಂದಿಗೆ ನೆಗೆಟಿವ್ ಬಂದಿದೆ. ಆದರೆ ಸಿ.ಟಿ.ರವಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಸಿ.ಟಿ.ರವಿ ಈ ಬಗ್ಗೆ ಟ್ವೀಟ್ ಮಾಡಿದ್ದು, “ನಿನ್ನೆ ನಾನು, ಮಡದಿ ಪಲ್ಲವಿ, ನನ್ನ ಸಿಬ್ಬಂದಿ ವರ್ಗ ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿದ್ದೆವು. ಪಲ್ಲವಿ ಹಾಗೂ ನನ್ನ ಗನ್-ಮ್ಯಾನ್, ಚಾಲಕ ಸೇರಿ ಆಫೀಸ್ ಸಿಬ್ಬಂದಿ ಎಲ್ಲರದ್ದು ನೆಗೆಟಿವ್ ಬಂದಿದೆ” ಎಂದು ತಿಳಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ. “ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಕೋವಿಡ್ ಪಾಸಿಟಿವ್ ಇದೆ ಎಂಬುದು ದೃಢವಾಗಿದೆ. ಆದರೆ ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾ ನಾನು ಇಲ್ಲಿಂದಲೇ ಕೆಲಸ ಮುಂದುವರಿಸಲಿದ್ದು, ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ” ಎಂದು ತಮಗೆ ಕೊರೊನಾ ಇರುವುದನ್ನ ದೃಢಪಡಿಸಿದ್ದಾರೆ.

  • ಕೊರೊನಾ ಸೋಂಕು ಏರಿಕೆ ನಡುವೆ ಗುಡ್ ನ್ಯೂಸ್ – ದೇಶದಲ್ಲಿ ಶೇ.51 ಮಂದಿ ಗುಣಮುಖ

    ಕೊರೊನಾ ಸೋಂಕು ಏರಿಕೆ ನಡುವೆ ಗುಡ್ ನ್ಯೂಸ್ – ದೇಶದಲ್ಲಿ ಶೇ.51 ಮಂದಿ ಗುಣಮುಖ

    ನವದೆಹಲಿ: ಪ್ರತಿ ನಿತ್ಯ ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಕೊರೊನಾ ಗಣನೀಯ ಏರಿಕೆಯ ನಡುವೆ ಒಳ್ಳೆ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ಕೊರೊನಾದಿಂದ ಗುಣಮುಖವಾಗುತ್ತಿರುವ ಪ್ರಮಾಣ ಶೇ.51 ಏರಿಕೆಯಾಗಿದೆ.

    ಕೇಂದ್ರ ಆರೋಗ್ಯ ಇಲಾಖೆ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ ಭಾರತದಲ್ಲಿ 3,32,424 ಮಂದಿಯಲ್ಲಿ ಈವರೆಗೂ ಸೋಂಕು ಕಂಡು ಬಂದಿದೆ. ಈ ಪೈಕಿ 1,69,797 ಮಂದಿ ಚೇತರಿಸಿಕೊಂಡು ಗುಣಮುಖವಾಗಿದ್ದಾರೆ. ಸದ್ಯ 1,53,106 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಸರ್ಕಾರದ ಈ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳು ಹೆಚ್ಚಿದ್ದು, ಈ ಪ್ರಮಾಣ ಶೇ. 51 ಆಗಿದೆ. ಗುಣಮುಖವಾಗುವವರ ಸಂಖ್ಯೆ ಹಂತ ಹಂತವಾಗಿ ಏರಿಕೆ ಕಾಣುತ್ತಿದ್ದು ಭಾರತದ ಮಟ್ಟಿಗೆ ಉತ್ತಮ ಬೆಳವಣಿಗೆಯಾಗಿದೆ.

  • ಕೊರೊನಾ ನಂತ್ರ ಗ್ಯಾಂಗ್ರೀನ್ ಕಾಣಿಸಿಕೊಂಡ ವ್ಯಕ್ತಿಗೆ ಕಿಮ್ಸ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

    ಕೊರೊನಾ ನಂತ್ರ ಗ್ಯಾಂಗ್ರೀನ್ ಕಾಣಿಸಿಕೊಂಡ ವ್ಯಕ್ತಿಗೆ ಕಿಮ್ಸ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

    ಹುಬ್ಬಳ್ಳಿ: ಕೊರೊನಾ ಸೋಂಕು ತಗುಲಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ ಬಳಿಕ ಗ್ಯಾಂಗ್ರೀನ್ ಕಾಣಿಸಿಕೊಂಡಿದ್ದ ರೋಗಿಯೊಬ್ಬರಿಗೆ ಕಿಮ್ಸ್ ನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

    ಕೊರೊನಾ ಕಾರಣದಿಂದ 69 ವರ್ಷದ ವ್ಯಕ್ತಿಯನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನದ ಹಿಂದೆ ಕಾಲು ನೋವು ಕಾಣಿಸಿಕೊಂಡಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಕಳೆದ ಗುರುವಾರ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಈ ವೇಳೆ ತಪಾಸಣೆ ಮಾಡಿದಾಗ ಗ್ಯಾಂಗ್ರೀನ್ ಆಗಿರುವುದು ಪತ್ತೆಯಾಗಿತ್ತು. ಹೀಗಾಗಿ ಇಲ್ಲಿನ ವೈದ್ಯರು ಅಗತ್ಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ರೋಗಿ ಗುಣಮುಖರಾಗಿದ್ದಾರೆ. ಡಾ.ಎಸ್ ವೈ ಮುಲ್ಕಿಪಾಟೀಲ್, ಡಾ.ಸಂಜಯ್ ಜಿ. ಡಾ.ರಾಕೇಶ್ ಪಾಟೀಲ್ ಹಾಗೂ ಡಾ.ಅಭಿಚಂದ್ರನ್ ಶಸ್ತ್ರಚಿಕಿತ್ಸೆ ನಡೆಸಿದ್ದರು.

    ಗ್ಯಾಂಗ್ರೀನ್:
    ಗ್ಯಾಂಗ್ರೀನ್ ಎಂದರೆ ನಮ್ಮ ದೇಹದ ಒಂದು ಅಂಗಕ್ಕೆ ರಕ್ತ ಸಂಚಾರದ ಕೊರತೆಯಾಗುತ್ತಿದೆ. ಅಂಗಕ್ಕೆ ರಕ್ತ ಸಂಚಾರ ಆಗಿಲ್ಲ ಎಂದರೆ ಪೋಷಕಾಂಶ ಕೊರತೆ ಆಗುತ್ತದೆ. ಪೋಷಕಾಂಶ, ಆಕ್ಸಿಜನ್, ನ್ಯೂಟ್ರಿಶನ್ಸ್ ಕೊರತೆ ಆಗುತ್ತದೆಯೋ ಅಲ್ಲಿ ಅಂದರೆ ಆ ಭಾಗದಲ್ಲಿ ಆ ಅಂಗ ಕೊಳೆಯುತ್ತ ಹೋಗುತ್ತದೆ. ಇದನ್ನೇ ಗ್ಯಾಂಗ್ರೀನ್ ಎಂದು ಕರೆಯುತ್ತಾರೆ.

  • ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರ

    ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರ

    ಬೆಂಗಳೂರು: ಮಾಜಿ ಭೂಗತ ಪಾತಕಿ ಮತ್ತು ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಮುತ್ತಪ್ಪ ರೈ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಜೊತೆಗೆ ದೈಹಿಕವಾಗಿ ಕುಗ್ಗಿ ಹೋಗಿದ್ದರು. ಈಗ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲೆ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮುತ್ತಪ್ಪ ರೈ ಸಾವಿನ ಬಗ್ಗೆ ಉಹಾಪೋಹಗಳು ಹರಿದಾಡುತ್ತಿದ್ದು, ಕೆಲವರು ಮುತ್ತಪ್ಪ ರೈ ಅವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಮುತ್ತಪ್ಪ ರೈ ಅವರು ಚೆನ್ನಾಗಿ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾರೋ ಸಾಮಾಜಿಕ ಜಾಲತಾಣದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

    ಕೆಲ ವರ್ಷಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಮುತ್ತಪ್ಪ ರೈ ಅದಕ್ಕಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈ ನಡುವೆ ಬಹಳ ಕುಗ್ಗಿ ಹೋಗಿದ್ದ ಮುತ್ತಪ್ಪ ರೈ ಅವರು, ಕಳೆದ ಕೆಲ ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸದ್ಯ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಅವರು ಬದುಕಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಮುತ್ತಪ್ಪ ರೈ, ನನಗೆ ಹುಷಾರಿಲ್ಲದಿರುವುದು ನಿಜ. ನನಗೆ ಕ್ಯಾನ್ಸರ್ ಇರುವುದು ನಿಜ. ಮಿರಾಕಲ್ ನಡೆಯುತ್ತಿರುವುದು ನಿಜವಾಗಿದ್ದು, ವಿಲ್ ಪವರ್ ನಿಂದ ಆರೋಗ್ಯವಾಗಿದ್ದೇನೆ. ಅಲ್ಲದೇ ಟಿಕೆಟ್ ಯಾವಾಗಲೋ ಕನ್ಫರ್ಮ್ ಆಗಿದ್ದು, ಓಕೆ ಆದ್ಮೇಲೆ ಫ್ಲೈಟ್ ಹತ್ತಬೇಕು ಅಷ್ಟೇ ಎಂದು ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದರು.

  • ಕೊರೊನಾ ರೋಗಿಗಳಿಗೆ ಸೇವೆ ಸಲ್ಲಿಸ್ತಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ

    ಕೊರೊನಾ ರೋಗಿಗಳಿಗೆ ಸೇವೆ ಸಲ್ಲಿಸ್ತಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ

    – ಸಾಯುವ ಹಿಂದಿನ ದಿನ ಪೋಷಕರ ಜೊತೆ ಮಾತು
    – ಹಾಸ್ಟೆಲ್ ರೂಮಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

    ಚೆನ್ನೈ: ಕಿಲ್ಪಾಕ್ ವೈದ್ಯಕೀಯ ಕಾಲೇಜು ಹಾಸ್ಟೆಲಿನಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾಳೆ.

    ಪೆರಂಬೂರು ನಿವಾಸಿ ಆರ್. ಪ್ರತಿಭಾ ಮೃತ ವಿದ್ಯಾರ್ಥಿನಿ. ಮೃತ ವಿದ್ಯಾರ್ಥಿನಿ ಏಪ್ರಿಲ್ 16 ರಿಂದ ಕೊರೊನಾ ವೈರಸ್ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದು, ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದಳು.

    ಶುಕ್ರವಾರ ಪ್ರತಿಭಾ ತುಂಬಾ ಸಮಯವಾದರೂ ಹಾಸ್ಟೆಲ್ ರೂಮಿನಿಂದ ಹೊರಗೆ ಬಂದಿರಲಿಲ್ಲ. ಕೊನೆಗೆ ಇತರೆ ವಿದ್ಯಾರ್ಥಿಗಳು ಹೋಗಿ ರೂಮಿನ ಬಾಗಿಲು ಬಡಿದಿದ್ದಾರೆ. ಆದರೆ ಪ್ರತಿಭಾ ಯಾವುದೇ ರೀತಿ ಪ್ರತಿಕ್ರಿಯಿಸಿಲ್ಲ. ನಂತರ ವಿದ್ಯಾರ್ಥಿಗಳು ಅನುಮಾನಗೊಂಡು ವಾರ್ಡನ್‍ಗೆ ಮಾಹಿತಿ ನೀಡಿದ್ದಾರೆ. ವಾರ್ಡನ್‍ ಬಂದು ರೂಮಿನ ಬಾಗಿಲು ತೆರೆದು ನೋಡಿದಾಗ ಪ್ರತಿಭಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿ ಪ್ರತಿಭಾ ಮೃತಪಟ್ಟಿದ್ದಳು.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಾವಿನ ಹಿಂದಿನ ದಿನ ಪ್ರತಿಭಾ ವಾಟ್ಸಪ್ ಮೂಲಕ ಪೋಷಕರ ಜೊತೆ ಮಾತನಾಡಿದ್ದಳು. ಅಲ್ಲದೇ ಆಕೆ ದೇಹದ ಮೇಲೆ ಯಾವುದೇ ಗಾಯದ ಗುರುತು ಕೂಡ ಕಂಡುಬಂದಿಲ್ಲ. ಆಕೆ ನಿದ್ದೆ ಮಾಡುತ್ತಿದ್ದಾಗ ಮೃತಪಟ್ಟಿದ್ದಾಳೆ. ಹೀಗಾಗಿ ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೃತ ಪ್ರತಿಭಾ ಕೆಲಸ ಮಾಡುತ್ತಿದ್ದ ವಾರ್ಡಿನಲ್ಲಿ ಯಾವುದೇ ಕೋವಿಡ್ ಪ್ರಕರಣ ದಾಖಲಾಗಿರಲಿಲ್ಲ. ಆಕೆಗೂ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

  • ಉತ್ತರ ಕನ್ನಡ ಕೊರೊನಾ ಮುಕ್ತವಾದ ಕಥೆ ತಿಳಿಸಿದ ವೈದ್ಯಾಧಿಕಾರಿ ಶರತ್

    ಉತ್ತರ ಕನ್ನಡ ಕೊರೊನಾ ಮುಕ್ತವಾದ ಕಥೆ ತಿಳಿಸಿದ ವೈದ್ಯಾಧಿಕಾರಿ ಶರತ್

    ಕಾರವಾರ: ರೆಡ್ ಝೋನ್‍ನಲ್ಲಿ ಇದ್ದ ಉತ್ತರ ಕನ್ನಡ ಜಿಲ್ಲೆ ವೈದ್ಯಾಧಿಕಾರಿಗಳ ಹಾಗೂ ಜಿಲ್ಲಾಡಳಿತದ ಕಠಿಣ ಶ್ರಮದಿಂದ ಹಳದಿ ವಲಯಕ್ಕೆ ಬಂದಿದೆ.

    ಜೊತೆಗೆ ಸೋಂಕಿತ 11 ಜನರೂ ಗುಣಮುಖರಾಗುವಂತೆ ಶ್ರಮವಹಿಸಿ ಕಾರ್ಯನಿರ್ವಹಿದ ಕೊರೊನಾ ವಾರಿಯರ್ಸ್ ಉತ್ತರ ಕನ್ನಡ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಹಗಲಿರುಳೂ ಈ ಕಾಯಕದಲ್ಲಿ ಇರುವ ವೈದ್ಯಕೀಯ ಸಿಬ್ಬಂದಿಗಳು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಮತ್ತು ಕೊರೊನಾ ಸೋಂಕಿತರ ಚಿಕಿತ್ಸೆ ಕುರಿತು ಕಾರವಾರದ ಕೊರೊನಾ ವಿಶೇಷ ವಾರ್ಡ್ ನಲ್ಲಿ ಕಾರ್ಯ ನಿರ್ವಹಿಸುವ ವೈದ್ಯಾಧಿಕಾರಿ ಶರತ್ ಅವರು ಪಬ್ಲಿಕ್ ಟಿ.ವಿಗೆ ವಿವರ ನೀಡಿದರು.

    ಶರತ್ ಅವರು ಹೇಳುವಂತೆ ಸೋಂಕಿತರನ್ನು ಮೂರು ವಿಭಾಗ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ತುಂಬ ಕ್ರಿಟಿಕಲ್ ಇರುವವರಿಗೆ ವೆಂಟಿಲೇಷನ್ ವ್ಯವಸ್ಥೆ ಕಲ್ಪಿಸಿ ತೀರ್ವ ನಿಗಾ ವಹಿಸಲಾಗುತ್ತದೆ. ಇಲ್ಲಿಗೆ ಬರುವ ಸೋಂಕಿತರ ಬಟ್ಟೆ ಸಹಿತ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಚಿಕಿತ್ಸೆ ನೀಡುವ ವೈದ್ಯಕೀಯ ತಂಡ ಪಿಪಿಇ ಕಿಟ್ ಹಾಕಿಕೊಂಡು ಹೋಗುವುದು ಕಡ್ಡಾಯವಾಗಿದ್ದು, ಬರುವಾಗ ಪಿ.ಪಿ.ಇ ಕಿಟ್ ಅನ್ನು ಅಲ್ಲಿಯೇ ಬಿಟ್ಟು ಪ್ರತ್ಯೇಕ ಕೊಠಡಿಯಲ್ಲಿ ಸ್ನಾನ ಮಾಡಿ ಹೊರಬರಬೇಕು ಎಂದು ತಿಳಿಸಿದ್ದಾರೆ.

    ಪಿಪಿಇ ಕಿಟ್ ಇಲ್ಲದೇ ಯಾರೊಬ್ಬರಿಗೂ ಒಳ ಪ್ರವೇಶವಿರುವುದಿಲ್ಲ ಹಾಗೂ ವೈದ್ಯರನ್ನು ಸಹ ತಪಾಸಣೆ ಮಾಡಲಾಗುತ್ತದೆ ಎಂದು ತಮ್ಮ ಕಾರ್ಯದ ಬಗ್ಗೆ ಕೆಲವು ವಿಚಾರಗಳನ್ನು ಶರತ್ ಅವರು ಹಂಚಿಕೊಂಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿ.ವಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ರವರು ಲಾಕ್ ಡೌನ್ ನಂತರ ವಿದೇಶದಿಂದ ಜಿಲ್ಲೆಗೆ ಬರುವ ಜನರನ್ನು ಕೊರಂಟೈನ್ ಮಾಡುವ ಜೊತೆ ಇವರ ಮೇಲೆ ನಿಗಾ ಇಡಲು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಮುದಾಯ ಕಾರ್ಯಪಡೆ ಸ್ಥಾಪನೆ ಮಾಡಲಾಗುವುದು. ಇನ್ನು ಜಿಲ್ಲೆಯಲ್ಲಿ ಕೊರೊಟಿಂ ವಾರ್ಡ್ ಸಹ ನಿರ್ಮಿಸಲಾಗಿದ್ದು ಪ್ರಯೋಗಾಲಯ ಸಹ ಇನ್ನು 15 ದಿನದಲ್ಲಿ ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಹ ಕೊರೊನಾ ವಿರುದ್ಧ ಹೋರಾಟಲು ಜಿಲ್ಲೆ ಸಮರ್ಥವಾಗಿದ್ದು ನುರಿತ ವೈದ್ಯರ ತಂಡ, ಪ್ರತ್ಯೇಕ ಆಸ್ಪತ್ರೆ, ಹೆಚ್ಚಿನ ಮೆಡಿಸಿನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಮಾತನಾಡಿ, ಮೇ4 ರ ನಂತರ ಭಟ್ಕಳ ಹೊರತುಪಡಿಸಿ ಎಲ್ಲೆಡೆ ಲಾಕ್ ಡೌನ್ ಸಡಿಲಿಕೆ ಮಾಡಲಿದ್ದು ಭಟ್ಕಳದಲ್ಲಿ ಮೇ.15 ರ ವರೆಗೂ ಲಾಕ್‍ಡೌನ್ ಮುಂದುವರಿಯಲಿದ್ದು ಹಂತ ಹಂತವಾಗಿ ಸಡಿಲಿಕೆ ಮಾಡಲಾಗುವುದು. ಜಿಲ್ಲೆಯ ಗಡಿಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ಯಾರೂ ಹೊರ ಹೋಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

  • ಊಟಕ್ಕೆ ಇಲ್ಲದಿದ್ರೂ ಪರವಾಗಿಲ್ಲ, ನನ್ನ ಪತ್ನಿಯ ಔಷಧಿಗೆ ಸಹಾಯ ಮಾಡಿ

    ಊಟಕ್ಕೆ ಇಲ್ಲದಿದ್ರೂ ಪರವಾಗಿಲ್ಲ, ನನ್ನ ಪತ್ನಿಯ ಔಷಧಿಗೆ ಸಹಾಯ ಮಾಡಿ

    – ಪತ್ನಿ ಉಳಿಸಿಕೊಳ್ಳಲು ಸಹಾಯಕ್ಕಾಗಿ ಅಂಗಲಾಚುತ್ತಿರೋ ಪತಿ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಕೇಂದ್ರ ಸರ್ಕಾರ ರಾಷ್ಟ್ರದಾದ್ಯಂತ ಲಾಕ್‍ಡೌನ್ ನಿಷೇಧ ಹೇರಿದೆ. ಆದರೆ ಈ ಕೊರೊನಾದಿಂದಾಗಿ ಬಡವರು, ಕೂಲಿ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಇದೀಗ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಔಷಧಿಗೆ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ.

    ಶಿವಮೊಗ್ಗದ ಕೃಷಿನಗರದ ಚಾನಲ್ ಬಳಿ ಇರುವ ಕುಟುಂಬವೊಂದು ಲಾಕ್‍ಡೌನ್ ವೇಳೆ ಕಷ್ಟ ಅನುಭವಿಸುತ್ತಿದ್ದಾರೆ. ಗಾರೆ ಕೆಲಸ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದ ಮಂಜುನಾಥ್ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಮಂಜುನಾಥ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ತಾವು ಸಂಪಾದಿಸುವ ಹಣದಲ್ಲಿಯೇ ಜೀವನ ಸಾಗಿಸುತ್ತಿದ್ದರು.

    ಮಂಜುನಾಥ್ ಪತ್ನಿ ದ್ಯಾಮವ್ವಗೆ ಕಳೆದ ಮೂರು ತಿಂಗಳಿನಿಂದ ಎರಡು ಕಿಡ್ನಿ, ಲಿವರ್ ಸಮಸ್ಯೆ ಹಾಗೂ ಜಾಂಡೀಸ್ ಕಾಯಿಲೆ ಕಾಣಿಸಿಕೊಂಡಿದೆ. ಇದಕ್ಕಾಗಿ ಶಿವಮೊಗ್ಗದ ಎನ್‍ಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಕೊಡಿಸಿದ್ದಾರೆ. ಚಿಕಿತ್ಸೆ ಪಡೆಯಲು ಹಾಗೂ ಔಷಧೋಪಚಾರಕ್ಕಾಗಿ ತಿಂಗಳಿಗೆ 10 ಸಾವಿರ ಹಣ ಖರ್ಚಾಗುತ್ತಿದೆ. ಮೊದಲೇ ಕೂಲಿ ಮಾಡಿ ಬದುಕುತ್ತಿದ್ದ ಕುಟುಂಬಕ್ಕೆ ಇದು ಮತ್ತಷ್ಟು ಬರೆ ಎಳೆದಂತಾಗಿದೆ.

    ಈಗಾಗಲೇ ಸಾಲಸೋಲಾ ಮಾಡಿ, ತನ್ನ ಬಳಿಯಿದ್ದ ಚಿನ್ನ ಅಡವಿಟ್ಟು ಮಂಜುನಾಥ್ ತನ್ನ ಪತ್ನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಕಳೆದೊಂದು ತಿಂಗಳಿನಿಂದ ಲಾಕ್‍ಡೌನ್ ಇರುವ ಕಾರಣ ಒಂದೆಡೆ ಕೆಲಸವೂ ಇಲ್ಲದೆ ಮತ್ತೊಂದೆಡೆ ಪತ್ನಿಗೆ ಚಿಕಿತ್ಸೆ ಕೊಡಿಸಲು ಹಣವು ಇಲ್ಲದೆ, ಮನೆಯಲ್ಲಿಯೇ ಕೂರುವಂತೆ ಆಗಿರುವುದು ಮತ್ತಷ್ಟು ಆಘಾತ ಉಂಟು ಮಾಡಿದೆ.

    ಸಹಾಯ ಮಾಡಲು ಇಚ್ಛಿಸುವವರು:
    ಹೆಸರು: ದ್ಯಾಮವ್ವ ( DYAMAVVA)
    ಬ್ಯಾಂಕ್: ವಿಜಯ ಬ್ಯಾಂಕ್, ಎಲ್‍ಬಿಎಸ್ ನಗರ, ಶಿವಮೊಗ್ಗ
    ಅಕೌಂಟ್ ನಂಬರ್ : 143301011004142
    IFSC CODE : VIJB0001433

    ಲಾಕ್‍ಡೌನ್ ನಡುವೆ ನಾವು ಜೀವನ ಮಾಡುವುದೇ ಕಷ್ಟವಾಗಿದೆ. ನಮಗೆ ಊಟಕ್ಕೆ ಇಲ್ಲದಿದ್ದರೂ ಪರವಾಗಿಲ್ಲ, ಹೇಗೋ ನೀರು ಗಾಳಿ ಸೇವಿಸಿ ಬದುಕುತ್ತೀವಿ. ಆದರೆ ನನ್ನ ಮಕ್ಕಳನ್ನು ನೋಡಿಕೊಳ್ಳಲು ತಾಯಿ ಬೇಕು. ಅದಕ್ಕಾದರೂ ನನ್ನ ಪತ್ನಿಯನ್ನು ಬದುಕಿಸಿಕೊಡಿ. ಯಾರಾದರೂ ದಾನಿಗಳು ಸಹಾಯ ಮಾಡಿ ಎಂದು ಮಂಜುನಾಥ್ ಮನವಿ ಮಾಡಿಕೊಂಡಿದ್ದಾರೆ. ಸಹೃದಯ ದಾನಿಗಳು ಈ ಕುಟುಂಬಕ್ಕೆ ನೆರವು ನೀಡುವ ಮೂಲಕ ಸಹಾಯ ಮಾಡಬೇಕಿದೆ.

  • ಕರ್ನಾಟಕದಲ್ಲಿ ಇಂದು ಮೊದಲ ಪ್ಲಾಸ್ಮಾ ಥೆರಪಿ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ

    ಕರ್ನಾಟಕದಲ್ಲಿ ಇಂದು ಮೊದಲ ಪ್ಲಾಸ್ಮಾ ಥೆರಪಿ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ

    ಬೆಂಗಳೂರು: ಇವತ್ತಿನಿಂದ ಕೊರೊನಾ ರೋಗಕ್ಕೆ ಕರ್ನಾಟಕದಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಪ್ರಾಯೋಗಿಕ ಪರೀಕ್ಷೆ ಆರಂಭವಾಗಲಿದೆ. ಕೇಂದ್ರ ಸರ್ಕಾರದ ಸಂಸ್ಥೆ ಆಗಿರುವ ಐಸಿಎಂಆರ್ ಕೊಟ್ಟಿರುವ ಅನುಮತಿ ಮೇರೆಗೆ ಬೆಂಗಳೂರಲ್ಲಿ ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆ ಹೆಚ್‍ಸಿಜಿ ಪ್ಲಾಸ್ಮಾ ಥೆರಪಿಯ ಪ್ರಯೋಗ ಕೈಗೊಳ್ಳಲಿದೆ.

    ರಾಜ್ಯದಲ್ಲಿ ಇಂದು ಮೊದಲ ಪ್ಲಾಸ್ಮಾ ಥೆರಪಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ. ಕೊರೊನಾದಿಂದ ಗುಣಮುಖರಾದವರೊಬ್ಬರು ತಮ್ಮ ರಕ್ತದ ಪ್ರತಿರೋಧಕ ಕಣಗಳನ್ನು ದಾನ ಮಾಡುತ್ತಾರೆ. ಅವರಿಂದ ಪ್ರತಿರೋಧಕ ಕಣಗಳನ್ನು ಪಡೆದು ಕೊರೊನಾ ಸೋಂಕಿತ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಈ ಚಿಕಿತ್ಸೆಯೇ ಪ್ಲಾಸ್ಮಾ ಥೆರಪಿಯಾಗಿದೆ.

    ಇಂದು ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಮಾಡಲಾಗುತ್ತಿದೆ. ಇದರ ಸಫಲತೆ ಆಧರಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ಲಾಸ್ಮಾ ಥೆರಪಿಗೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತಿಯಲ್ಲಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸಾ ಕ್ರಮವನ್ನು ಸಚಿವರಾದ ಸುಧಾಕರ್ ಮತ್ತು ಶ್ರೀರಾಮುಲು ವೀಕ್ಷಿಸಿದರು.

    ಏನಿದು ಪ್ಲಾಸ್ಮಾ ಥೆರಪಿ?
    * ಪ್ಲಾಸ್ಮಾ ಎಂದರೆ ರಕ್ತದ ಕಣ (ಹಳದಿ ದ್ರವಾಂಶ). ರಕ್ತದಲ್ಲಿರುವ ರೋಗ ನಿರೋಧಕ ಅಂಶ ಇರುವುದು ಪ್ಲಾಸ್ಮಾದಲ್ಲಿ
    * ಪ್ಲಾಸ್ಮಾ ಥೆರಪಿ ಎಂದರೆ ಗುಣಮುಖರಾಗಿರುವ ವ್ಯಕ್ತಿಯ ರಕ್ತದಲ್ಲಿರುವ ಪ್ಲಾಸ್ಮಾವನ್ನು ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯ ರಕ್ತಕ್ಕೆ ಇಂಜೆಕ್ಟ್ ಮಾಡುವುದು.
    * ಗುಣಮುಖರಾದವರ ರಕ್ತದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತೆ. ಇದೇ ರಕ್ತದಲ್ಲಿರುವ ಪ್ಲಾಸ್ಮಾವನ್ನು ರೋಗಿಗೆ ನೀಡಿದರೆ ಆಗ ಆ ರೋಗಿಯ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿ ಶೀಘ್ರ ಗುಣಮುಖರಾಗುತ್ತಾರೆ.
    * ಕೊರೊನಾದಿಂದ ಗುಣಮುಖರಾಗಿರುವ ವ್ಯಕ್ತಿಯ ಪ್ಲಾಸ್ಮಾವನ್ನು ಕೊರೊನಾದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗೆ ಇಂಜೆಕ್ಟ್ ಮಾಡಿದರೆ ಆ ರೋಗಿಯ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಶೀಘ್ರ ಗುಣಮುಖರಾಗುತ್ತಾರೆ.
    * ಪ್ಲಾಸ್ಮಾ ಚಿಕಿತ್ಸೆಯಿಂದ ರೋಗಿಗಳು 3 ರಿಂದ 7 ದಿನದೊಳಗೆ ಗುಣಮುಖರಾಗುವ ನಿರೀಕ್ಷೆ

    ಯಾರು ಪ್ಲಾಸ್ಮಾ ದಾನ ಮಾಡಬಹುದು?
    * ಕೊರೊನಾದಿಂದ ಗುಣಮುಖರಾಗಿರುವ ವ್ಯಕ್ತಿ ಪ್ಲಾಸ್ಮಾ ದಾನ ಮಾಡಬಹುದು
    * ಕೊರೊನಾದಿಂದ ಗುಣಮುಖರಾದ ವ್ಯಕ್ತಿ 28 ದಿನಗಳ ಬಳಿಕ ಪ್ಲಾಸ್ಮಾ ದಾನ ಮಾಡಬಹುದು
    * ಒಬ್ಬ ರೋಗಿಯನ್ನ ಗುಣಪಡಿಸಲು 200-250 ಮಿಲಿ ಲೀಟರ್ ಪ್ಲಾಸ್ಮಾ ಅಗತ್ಯ
    * ಒಬ್ಬ ದಾನಿಯಿಂದ ಇಬ್ಬರಿಂದ ಐವರು ರೋಗಿಗಳನ್ನು ಗುಣಪಡಿಸಬಹುದು
    * ರಕ್ತದಾನಕ್ಕಿಂತ ಪ್ಲಾಸ್ಮಾ ದಾನ ಭಿನ್ನ
    * ರಕ್ತದಲ್ಲಿರುವ ಪ್ಲಾಸ್ಮಾವನ್ನಷ್ಟೇ ಸಂಗ್ರಹಿಸಿ ರಕ್ತವನ್ನು ಮತ್ತೆ ದಾನಿಗಳ ದೇಹಕ್ಕೆ ಬಿಡಲಾಗುತ್ತದೆ
    * ಒಬ್ಬ ದಾನಿ ವಾರದಲ್ಲಿ ಎರಡು ಬಾರಿ ಪ್ಲಾಸ್ಮಾ ದಾನ ಮಾಡಬಹುದು

    ಈ ಹಿಂದೆ ದೆಹಲಿಯಲ್ಲಿ 49 ವರ್ಷದ ಕೊರೊನಾ ರೋಗಿಯನ್ನು ಪ್ಲಾಸ್ಮಾ ಚಿಕಿತ್ಸೆ ಮೂಲಕ ಗುಣಪಡಿಸಲಾಗಿದೆ. ಅಮೆರಿಕ, ಚೀನಾದಲ್ಲಿ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗಿದ್ದು, ಸಮಾಧಾನಕಾರಿ ಫಲಿತಾಂಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕೇರಳ, ಗುಜರಾತ್, ಪಂಜಾಬ್‍ನಲ್ಲೂ ಪ್ಲಾಸ್ಮಾ ಥೆರಪಿಗೆ ಅನುಮತಿ ಸಿಕ್ಕಿದೆ.

  • ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಯುವತಿಯ ಪರದಾಟ- ಶಾಸಕ ಭೀಮಾ ನಾಯಕ್ ಸಹಾಯ

    ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಯುವತಿಯ ಪರದಾಟ- ಶಾಸಕ ಭೀಮಾ ನಾಯಕ್ ಸಹಾಯ

    ಬಳ್ಳಾರಿ: ಲಾಕ್‍ಡೌನ್‍ನಿಂದಾಗಿ ಬಹುತೇಕ ಬಡ ಕುಟುಂಬಗಳು ದಿಕ್ಕು ಕಾಣದೆ ಶೋಚನೀಯ ಸ್ಥಿತಿಗೆ ಬಂದು ತಲುಪಿವೆ. ಇದೀಗ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗದ ಪರಿಸ್ಥಿತಿಯಲ್ಲಿ ಟಿಕ್‍ಟಾಕ್ ವಿಡಿಯೋ ಮೊರೆಹೋಗಿದ್ದಾಳೆ. ತಕ್ಷಣ ಯುವತಿಗೆ ಸ್ಪಂದಿಸಿದ ಶಾಸಕರೊಬ್ಬರು ಸಹಾಯ ಮಾಡಿದ್ದಾರೆ.

    ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಪಟ್ಟಣದ ನಿವಾಸಿ ಜೋತಿ ಕಟ್ಟಿಮನಿ ತಾಯಿಗೆ ಕಳೆದ ಎರಡು ವರ್ಷಗಳಿಂದ ಪಾರ್ಶ್ವವಾಯು ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಅಲ್ಲದೇ ಕಳೆದ 15 ದಿನಗಳ ಹಿಂದೆ ತಂದೆಯೂ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವಿಗೀಡಾದ್ದಾರೆ. ಹೀಗಾಗಿ ತನ್ನ ತಾಯಿಯನ್ನು ಉಳಿಸಿಕೊಳ್ಳುವ ಹಂಬಲದಿಂದ ಟಿಕ್‍ಟಾಕ್ ವಿಡಿಯೋ ಮೂಲಕ ತನ್ನ ಅಸಹಾಯಕತೆ ತೋಡಿಕೊಂಡಿದ್ದಳು.

    ಯುವತಿಯ ಅಸಹಾಯಕತೆಯ ವಿಡಿಯೋ ಸ್ಥಳೀಯ ಶಾಸಕರಾದ ಭೀಮಾ ನಾಯಕ್ ಗಮನಕ್ಕೆ ಬಂದಿದೆ. ತಕ್ಷಣ ಭೀಮಾ ನಾಯಕ್ ತಹಶೀಲ್ದಾರ್ ಆಶಪ್ಪ ಪೂಜಾರಿಗೆ ಯುವತಿಯ ಮನೆಗೆ ಭೇಟಿ ನೀಡುವಂತೆ ಆದೇಶ ಮಾಡಿದ್ದಾರೆ. ಶಾಸಕರು ಮಾತಿನಂತೆ ತಹಶೀಲ್ದಾರ್ ಯುವತಿಯ ಸಹಾಯಕ್ಕೆ ಬಂದಿದ್ದು, ಯುವತಿಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಅಷ್ಟೇ ಅಲ್ಲದೇ ಒಂದು ತಿಂಗಳಿಗೆ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಶಾಸಕರು ನೀಡಿದ್ದಾರೆ. ಇತ್ತೀಚೆಗಷ್ಟೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಪವಿತ್ರ ಅರಭಾವಿ ಕೂಡ ತಾಯಿ ಔಷಧಿಗಾಗಿ ಟಿಕ್‍ಟಾಕ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಳು. ಈ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದು, ಪವಿತ್ರ ತಾಯಿಗೆ ಔಷಧಿ ತಲುಪಿಸಿದ್ದರು.