Tag: Theory

  • ಬಿಜೆಪಿ ಸೇರಲೆಂದೇ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ರಾ – ಹಲವು ಪ್ರಶ್ನೆಗಳಿಗೆ ಅಣ್ಣಾಮಲೈ ಉತ್ತರ

    ಬಿಜೆಪಿ ಸೇರಲೆಂದೇ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ರಾ – ಹಲವು ಪ್ರಶ್ನೆಗಳಿಗೆ ಅಣ್ಣಾಮಲೈ ಉತ್ತರ

    ನವದೆಹಲಿ: ಬಿಜೆಪಿ ಮತ್ತು ನನ್ನ ಸಿದ್ಧಾಂತಗಳು ನೂರಕ್ಕೆ ನೂರರಷ್ಟು ಮ್ಯಾಚ್ ಆಗುತ್ತವೆ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಹೇಳಿದ್ದಾರೆ.

    ಇಂದು ಅಣ್ಣಾಮಲೈ ಅವರು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಅವರ ನೇತೃತ್ವದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

    ದ್ರಾವಿಡ ಸಂಸ್ಕೃತಿ ಇರುವ ತಮಿಳುನಾಡಿನಿಂದ ಸೈದ್ಧಾಂತಿಕ ಹಿನ್ನೆಲೆ ಇರುವ ಬಿಜೆಪಿ ಪಕ್ಷಕ್ಕೆ ಸೇರಲು ಕಾರಣ ಏನು?
    ತಮಿಳುನಾಡು ಒಂದು ದ್ರಾವಿಡ ಸಂಪ್ರದಾಯ ಇರುವ ರಾಜ್ಯ ಒಪ್ಪಿಕೊಳ್ಳುತ್ತೇನೆ. ಆದರೆ ತಮಿಳುನಾಡಿನ ರಾಜಕೀಯ ಇತ್ತೀಚೆಗೆ ಕುಟುಂಬ ರಾಜಕಾರಣದ ವ್ಯಾಪಾರವಾಗಿದೆ. ಆದರೆ ಬಿಜೆಪಿ ಪಕ್ಷ ಸಾಮಾನ್ಯ ಮನುಷ್ಯನಿಗೂ ಉತ್ತಮ ಅವಕಾಶ ನೀಡುತ್ತದೆ. ನಮ್ಮ ಬಳಿ ಹಣವಿಲ್ಲ. ನಮಗೆ ತಮಿಳುನಾಡಿನಲ್ಲಿ ಉತ್ತಮ ಸರ್ಕಾರವಿರಬೇಕೆಂಬ ಬಯಕೆಯನ್ನು ಹೊಂದಿದ್ದೇನೆ. ಈ ಕಾರಣದಿಂದ ಬಿಜೆಪಿ ಸೇರಿದ್ದೇನೆ.

    ನಿಮ್ಮದೇ ಆದ ತತ್ವ ಸಿದ್ಧಾಂತ ಇಟ್ಟುಕೊಂಡಿದ್ದ ನೀವು ಬಿಜೆಪಿಗಾಗಿ ಅದನ್ನು ಬದಲಿಸಿಕೊಳ್ಳುವಿರಾ?
    ಒಂದು ಪಕ್ಷವನ್ನು ಸೇರಿದ ಮೇಲೆ ಆ ಪಕ್ಷಕ್ಕೆ ನಾವು ವಿಧೇಯವಾಗಿರಬೇಕು. ಬಿಜೆಪಿ ಪಕ್ಷದ ಸಿದ್ಧಾಂತಗಳಿಗೂ ಮತ್ತು ನನ್ನ ವೈಯಕ್ತಿಕ ಸಿದ್ಧಾಂತಗಳಿಗೂ ಬಹಳ ಹೊಲಿಕೆ ಇದೆ. ಈ ಪಕ್ಷ ದೇಶದ ಭದ್ರತೆ, ರಾಷ್ಟ್ರೀಯತೆ ಮತ್ತು ರಾಷ್ಟ್ರದ ಕಾಮನ್ ಮ್ಯಾನ್ ಪರವಾಗಿದೆ. ಹೀಗಾಗಿ ಒಂದು ಪಕ್ಷವನ್ನು ಸೇರಿದ ಮೇಲೆ ಅದರ ಸಿದ್ಧಾಂತಗಳನ್ನು ಒಪ್ಪಿಕೊಳ್ಳಬೇಕು. ಎಲ್ಲದಕ್ಕಿಂತ ಪಕ್ಷ ದೊಡ್ಡದು.

    ನೀವು ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದಾಗ ಬಿಜೆಪಿ ಸೇರುವ ಉದ್ದೇಶವಿತ್ತೆ?
    ಇಲ್ಲ ನಾನು ರಾಜೀನಾಮೆ ನೀಡಿದ ಸಮಯದಲ್ಲಿ ಈ ರೀತಿಯ ಉದ್ದೇಶವಿರಿಲ್ಲ. ಈ ಕಾರಣಕ್ಕೆ ನಾನು ಒಂದು ವರ್ಷ ಸಮಯವನ್ನು ತೆಗೆದುಕೊಂಡೆ. ಇತ್ತೀಚೆಗೆ ಬಿಜೆಪಿಗೆ ಸೇರುವ ಚಿಂತನೆ ನನಗೆ ಬಂದಿತ್ತು. ಹೀಗಾಗಿ ಇಂದು ಪಕ್ಷವನ್ನು ಸೇರಿದ್ದೇನೆ.

    ನೀವು ಬಿಜೆಪಿ ಸೇರುವುದರಿಂದ ಕೆಲವೊಂದು ವರ್ಗದ ಜನರಿಗೆ ಬೇಸರವಾಗುದಿಲ್ಲವೇ?
    ನೀವು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಉಡುಪಿ, ಮಂಗಳೂರು ಎಲ್ಲ ಕಡೆಯಲ್ಲೂ ಕೆಲಸ ಮಾಡಿದ್ದೇನೆ. ನನಗೆ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಎಲ್ಲರೂ ಪರಿಚಯವಿದ್ದಾರೆ. ನನ್ನ ಪ್ರಕಾರ ಈ ಪಕ್ಷ ಪ್ರತಿಯೊಂದು ಸಮುದಾಯದ ಪರವಾಗಿದೆ. ನನಗೆ ಎಲ್ಲ ಸಮುದಾಯದಲ್ಲೂ ಸ್ನೇಹಿತರಿದ್ದಾರೆ. ಈ ಪಕ್ಷ ಎಲ್ಲರ ಪರವಾಗಿ ನಿಲ್ಲುತ್ತದೆ. ಅಂತೆಯೇ ನಾನು ಕೂಡ ಎಲ್ಲರ ಪರವಾಗಿ ನಿಲ್ಲುತ್ತೇನೆ. ಕೆಲವರು ತಪ್ಪು ಕಲ್ಪನೆಯನ್ನು ಹುಟ್ಟು ಹಾಕುತ್ತಾರೆ. ಅದು ಸುಳ್ಳು.

    ನೀವು ಐಪಿಎಸ್ ಆಗಿದ್ದಾಗ ಒಂದು ಕೋಮಿನ ಪರವಾಗಿ ಹೆಚ್ಚಿನ ಒಲವು ತೋರಿಸಿದ್ದೀರಾ ಎಂದು ಜನ ಈಗ ಮಾತನಾಡಿಕೊಂಡರೆ?
    ನೀವು ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಕೆಲಸ ಬಿಟ್ಟು ಒಂದು ವರ್ಷ ಸಾಮಾನ್ಯ ಮನುಷ್ಯನಂತೆ ಇದ್ದು, ಈಗ ಪಕ್ಷ ಸೇರಿದ್ದೇನೆ. ನಾನು ಕರ್ನಾಟಕದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದಕ್ಕೆ ಸಾಮಾನ್ಯ ಜನರೇ ಸಾಕ್ಷಿ. ಪೊಲೀಸ್ ಕೆಲಸದಲ್ಲಿ ಇರುವಾಗ ಸಮವಸ್ತ್ರಕ್ಕೆ ಬೆಲೆ ಕೊಟ್ಟು ಆ ಧರ್ಮದ ಪರವಾಗಿ ಕೆಲಸ ಮಾಡಿದ್ದೇವೆ. ಈಗ ಈ ಪಾರ್ಟಿಗೆ ಸೇರಿದ್ದೇನೆ. ಈಗ ಪಾರ್ಟಿಗಾಗಿ ಕೆಲಸ ಮಾಡುತ್ತೇನೆ.