Tag: Theif

  • 8 ಕೋಟಿ ರೂ. ಕದ್ದ ಕಳ್ಳರನ್ನು ಪತ್ತೆಹಚ್ಚಲು ಸಹಕಾರಿಯಾಯ್ತು 10 ರೂ. ಜ್ಯೂಸ್

    8 ಕೋಟಿ ರೂ. ಕದ್ದ ಕಳ್ಳರನ್ನು ಪತ್ತೆಹಚ್ಚಲು ಸಹಕಾರಿಯಾಯ್ತು 10 ರೂ. ಜ್ಯೂಸ್

    ಚಂಡೀಗಢ: ಕಳ್ಳರನ್ನು (Theif) ಪತ್ತೆಹಚ್ಚುವ ಸಲುವಾಗಿ ಪೊಲಿಸರು ಹಲವಾರು ಬಗೆಯ ಟ್ರಿಕ್ಸ್‌ಗಳನ್ನು ಬಳಸುವುದು ನೀವು ನೋಡಿರಬಹುದು. ಆದರೆ ಪಂಜಾಬ್‌ನಲ್ಲಿ (Punjab) 8 ಕೋಟಿ 49 ಲಕ್ಷ ರೂ. ಕದ್ದ ಕಳ್ಳರನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ 10 ರೂ. ಜ್ಯೂಸ್ (Juice) ಸಹಾಯ ಮಾಡಿದೆ.

    ಜೂನ್ 10ರಂದು ಪಂಜಾಬ್‌ನ ಲೂಧಿಯಾನದಲ್ಲಿ (Ludhiana) 8 ಕೋಟಿ 49 ಲಕ್ಷ ರೂ. ದರೋಡೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೂಸ್‌ನ ಸಹಾಯದಿಂದ ಪೊಲೀಸರು ‘ಡಾಕು ಹಸೀನ’ ಎಂದು ಕರೆಯಲ್ಪಡುವ ಮನ್ದೀಪ್ ಕೌರ್ ಎಂಬಾಕೆ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್‌ನನ್ನು ಉತ್ತರಾಖಂಡದ ಚಮೋಲಿಯ ಹೇಮಕುಂಡ್ ಸಾಹಿಬ್‌ನಲ್ಲಿ ಬಂಧಿಸಿದ್ದಾರೆ. ದಂಪತಿಯ ಹೊರತಾಗಿ ಪಂಜಾಬ್‌ನ ಗಿಡ್ಡರ್ ಬಾಹಾದಿಂದ ಗೌರವ್ ಎಂಬ ಆರೋಪಿಯನ್ನು ಸಹಾ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಕುರಿತು ಇದುವರೆಗೆ 12 ಮಂದಿ ಆರೋಪಿಗಳ ಪೈಕಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ ಆರೋಪಿ ದಂಪತಿ ತಮ್ಮ ಕೆಲಸ ಯಶಸ್ವಿಯಾಗಿ ನಡೆದುದ್ದಕ್ಕಾಗಿ ದೇವರಿಗೆ ಕೈಮುಗಿಯಲು ಸಿಖ್ ದೇಗುಲಕ್ಕೆ ತೆರಳಿದ್ದ ಸಂದರ್ಭ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಭಂಡ ಧೈರ್ಯದಿಂದ ಮೂರು ದಶಕದ ಹಿಂದಿನ ಕೊಲೆ ರಹಸ್ಯ ಬಾಯ್ಬಿಟ್ಟ!

    ಆರೋಪಿ ದಂಪತಿ ಕಳ್ಳತನ ಮಾಡಿದ ಬಳಿಕ ನೇಪಾಳಕ್ಕೆ (Nepal) ಹೋಗಲು ನಿರ್ಧರಿಸಿದ್ದು, ಅದಕ್ಕೂ ಮೊದಲು ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಯೋಚಿಸಿದ್ದಾರೆ. ಈ ಮಾಹಿತಿ ಪೊಲೀಸರಿಗೆ ದೊರತಿದ್ದು, ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಜನರನ್ನು ಲೆಕ್ಕಿಸದೇ ಗುಂಡು ಹಾರಿಸಿದ ದುಷ್ಕರ್ಮಿಗಳು – ಸಹೋದರನನ್ನು ಕಾಪಾಡಲು ಹೋಗಿ ಸಹೋದರಿಯರಿಬ್ಬರು ಬಲಿ

    ಉತ್ತರಾಖಂಡದ (Uttarakhand) ಸಿಖ್ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿದ್ದರು. ಅದರಲ್ಲಿ ಆರೋಪಿ ದಂಪತಿಯನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಹೀಗಾಗಿ ಪೊಲೀಸರು ಭಕ್ತಾದಿಗಳಿಗೆ ಪಾನೀಯ ವ್ಯವಸ್ಥೆಯನ್ನು ಮಾಡಿದ್ದರು. ಈ ಸಂದರ್ಭ ಎಲ್ಲರಂತೆ ಆರೋಪಿ ದಂಪತಿ ಮುಖ ಮುಚ್ಚಿಕೊಂಡು ಅಲ್ಲಿಗೆ ಬಂದಿದ್ದರು. ಆದರೆ ಪಾನೀಯ ಸೇವಿಸುವ ವೇಳೆ ತಮ್ಮ ಮುಖಕ್ಕೆ ಹಾಕಿಕೊಂಡಿದ್ದ ಬಟ್ಟೆಯನ್ನು ತೆಗೆಯಲೇ ಬೇಕಾಯಿತು. ಈ ಸಂದರ್ಭ ಪೊಲೀಸರು ಅವರನ್ನು ಗುರುತಿಸಿದ್ದಾರೆ. ಇದನ್ನೂ ಓದಿ: ತರಕಾರಿ ತರ್ತೀನಿ ಅಂತಾ ಮಾರ್ಕೆಟ್‌ಗೆ ಹೋದ ಮಹಿಳೆ ಪ್ರಿಯಕರನೊಂದಿಗೆ ಪರಾರಿ – ಗಂಡನ ಪಾಡು ಕೇಳೋರಿಲ್ಲ

    ಕೂತೂಹಲಕಾರಿ ವಿಷಯವೆಂದರೆ ಗುರುತಿಸಿದ ತಕ್ಷಣ ಪೊಲೀಸರು ಅವರನ್ನು ಬಂಧಿಸದೇ ಅವರಿಗೆ ಸಿಖ್ ದೇಗುಲದಲ್ಲಿ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟರು. ಬಳಿಕ ದಂಪತಿಯನ್ನು ಹಿಂಬಾಲಿಸಿದ ಪೊಲೀಸರು ಅವರನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಆರೋಪಿಗಳ ಸೆರೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ತಂಡಕ್ಕೆ ‘ರಾಣಿ ಜೇನುನೊಣ ಹಿಡಿಯೋಣ’ ಎಂಬ ಹೆಸರನ್ನು ಇಡಲಾಗಿತ್ತು. ಮನ್ದೀಪ್ ಕೌರ್ ದಂಪತಿ ದ್ವಿಚಕ್ರ ವಾಹನದಲ್ಲಿದ್ದ 12 ಲಕ್ಷ ರೂ. ಮತ್ತು ಮನೆಯಲ್ಲಿದ್ದ 9 ಲಕ್ಷ ರೂ ಸೇರಿ ಒಟ್ಟು 21 ಲಕ್ಷ ರೂ.ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಲೂಧಿಯಾನ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಅಪ್ರಾಪ್ತ ಸಹೋದರರಿಂದ ಸಾಮೂಹಿಕ ಅತ್ಯಾಚಾರ- ಇಬ್ಬರು ಅರೆಸ್ಟ್

  • ನಾನು ಬಹಳಷ್ಟು ಕಷ್ಟ ಅನುಭವಿಸಿದೆ – ದೇವಾಲಯದ ವಸ್ತು ವಾಪಸ್ ತಂದಿಟ್ಟ ಕಳ್ಳ

    ನಾನು ಬಹಳಷ್ಟು ಕಷ್ಟ ಅನುಭವಿಸಿದೆ – ದೇವಾಲಯದ ವಸ್ತು ವಾಪಸ್ ತಂದಿಟ್ಟ ಕಳ್ಳ

    ಭೋಪಾಲ್: ಕಳ್ಳನೊಬ್ಬ (Thief) ಜೈನ ದೇವಾಲಯದಿಂದ (Temple) ಕದ್ದ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿ, ಕ್ಷಮಾಪಣೆಯ ಚೀಟಿಯನ್ನು ಇಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

    ಅಕ್ಟೋಬರ್ 24 ರಂದು ಬಾಲಾಘಾಟ್ ಪಟ್ಟಣದ ಲಮ್ಟಾ ಪ್ರದೇಶದಲ್ಲಿ ಕಳ್ಳತನ ನಡೆದಿತ್ತು. ದೇವಾಲಯದ ಹಲವಾರು ಬೆಲೆಬಾಳುವ ವಸ್ತುಗಳು ಕಾಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ (Police) ಮಾಹಿತಿ ನೀಡಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    POLICE JEEP

    ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಆದರೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಆದರೆ ನಾಲ್ಕು ದಿನಗಳ ನಂತರ ದೇವಾಲಯದ ಬಳಿಯ ಹೊಂಡದಲ್ಲಿ ಬೆಲೆಬಾಳುವ ವಸ್ತುಗಳನ್ನು ಸುತ್ತಿಟ್ಟಿರುವ ಬ್ಯಾಗ್‍ವೊಂದು ಅಲ್ಲಿನ ಸ್ಥಳೀಯರಿಗೆ ಕಂಡಿದೆ.

    ಇದನ್ನು ತೆರೆದಾಗ ಬ್ಯಾಗ್‍ನಲ್ಲಿ ಒಂದು ಲೆಟರ್ ಇದ್ದು, ಅದರಲ್ಲಿ ನಾನು ಕಳ್ಳತನ ಮಾಡಿದ ನಂತರ ತುಂಬಾ ನೋವು ಅನುಭವಿಸಿದೆ. ಇದರಿಂದಾಗಿ ವಸ್ತುಗಳನ್ನು ಹಿಂದಿರುಗಿಸುತ್ತೇನೆ, ಜೊತೆಗೆ ಈ ವಸ್ತುಗಳನ್ನು ಕದ್ದಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಕಳ್ಳ ಬರೆದಿದ್ದಾನೆ. ಇದನ್ನೂ ಓದಿ: ಗುಜರಾತ್‍ನ ತೂಗು ಸೇತುವೆ ಕುಸಿತ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ

    ಘಟನೆಗೆ ಸಂಬಂಧಿಸಿ ಈ ಎಲ್ಲಾ ವಸ್ತುಗಳನ್ನು ದೇವಾಲಯದ ಅಧಿಕಾರಿಗಳಿಗೆ ವಾಪಸ್ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಚುಡಾಯಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ನೆರೆಮನೆಯವನಿಂದ ಪತಿ ಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಚಾರ್ಮಾಡಿ ಘಾಟ್‌ನ ದೇಗುಲದಲ್ಲಿ ಹುಂಡಿ ಹಣ ಕಳವು ಮಾಡುತ್ತಿದ್ದವನಿಗೆ ಸ್ಥಳೀಯರಿಂದ ಧರ್ಮದೇಟು

    ಚಾರ್ಮಾಡಿ ಘಾಟ್‌ನ ದೇಗುಲದಲ್ಲಿ ಹುಂಡಿ ಹಣ ಕಳವು ಮಾಡುತ್ತಿದ್ದವನಿಗೆ ಸ್ಥಳೀಯರಿಂದ ಧರ್ಮದೇಟು

    ಚಿಕ್ಕಮಗಳೂರು: ಕಾಣಿಕೆ ಹುಂಡಿಯಿಂದ ಹಣ ಕದಿಯುವ ವೇಳೆ ಸಿಕ್ಕಿಬಿದ್ದ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನ ದೇವಾಲಯದಲ್ಲಿ ನಡೆದಿದೆ.

    ದೇವರ ಹಣ ಕದಿಯುವ ವೇಳೆ ಸಿಕ್ಕಿ ಬಿದ್ದ ವ್ಯಕ್ತಿಯನ್ನು ಬೇಲೂರು ಮೂಲದವನು ಎಂದು ಗುರುತಿಸಲಾಗಿದೆ. ಈತ ಮೂಡಿಗೆರೆ ತಾಲೂಕಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮಂಗಳೂರಿಗೆ ಹೋಗುವಾಗ ಮಾರ್ಗ ಮಧ್ಯೆ ಸಿಗುವ ಇತಿಹಾಸ ಪ್ರಸಿದ್ಧ ಅಣ್ಣಪ್ಪ ಸ್ವಾಮಿ ದೇವಸ್ಥಾದಲ್ಲಿ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡುತ್ತಿದ್ದ. ಕಾಣಿಕೆ ಹುಂಡಿ ಹಣವನ್ನು ಜೇಬಿಗೆ ತುಂಬಿಕೊಂಡಿದ್ದ. ಆ ವೇಳೆಗೆ ಅಲ್ಲಿದ್ದ ಸ್ಥಳೀಯರು ಅದನ್ನು ಗಮನಿಸಿ ಆತನಿಗೆ ಧರ್ಮದೇಟು ನೀಡಿದ್ದಾರೆ.

    ಹಲ್ಲೆಗೊಳಗಾದ ವ್ಯಕ್ತಿಯೂ ಘಟನೆ ಕುರಿತಂತೆ ವೀಡಿಯೋ ಮಾಡಿದ್ದು, ವೀಡಿಯೋದಲ್ಲಿ ಹುಂಡಿಗೆ ಒಂದಿಷ್ಟು ಹಣವನ್ನು ಹಾಕಿದ್ದೆ. ನಂತರ ಮತ್ತೊಂದಿಷ್ಟು ಹಣವನ್ನು ಹಾಕಲೆಂದು ಕೈಯಲ್ಲಿ ಹಿಡಿದುಕೊಂಡಿದ್ದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಅಲ್ಲಿದ್ದ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆತ ಹುಂಡಿಯಿಂದ ಹಣವನ್ನು ಜೇಬಿಗೆ ಹಾಕಿಕೊಳ್ಳುತ್ತಿದ್ದ ದೃಶ್ಯವನ್ನು ಕಂಡಿದ್ದಾರೆ. ನಂತರ ಸುಳ್ಳು ಹೇಳಬೇಡ ಎಂದು ನಾಲ್ಕು ಬಾರಿಸಿದ್ದಾರೆ. ಕೊನೆಗೆ ಆತನ ಹೋಗಲಿ ಬಿಡಿ ನನ್ನದೆ ತಪ್ಪು ಎಂದು ಒಪ್ಪಿಕೊಂಡಿದ್ದಾನೆ. ಈ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ಹುಂಡಿ ಹಣ ಕದಿಯುತ್ತಿದ್ದ ವ್ಯಕ್ತಿಗೆ ಧರ್ಮದೇಟು ನೀಡಿದ ಯುವಕರು ಮತ್ತೊಮ್ಮೆ ಹೀಗೆ ಮಾಡಬೇಡ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇದನ್ನೂ ಓದಿ: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಕೇಸ್‌ – ಜಿಲ್ಲಾ ಪಂಚಾಯತ್‌ ಪತ್ರವೇ ನಕಲು

    ಅಣ್ಣಪ್ಪಸ್ವಾಮಿ ಅಂದರೆ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳು, ಲಕ್ಷಾಂತರ ಜನ ಭಯ-ಭಕ್ತಿಯಿಂದ ಪೂಜೆ ಮಾಡುತ್ತಾರೆ. ಕಾಣಿಕೆ ಹಾಕಿ ಮುಂದೆ ಹೋಗುತ್ತಾರೆ. ಈ ಮಾರ್ಗದಲ್ಲಿ ಸಂಚರಿಸುವಾಗ ಇಲ್ಲಿ ಪೂಜೆ ಮಾಡಿ ಹೋದರೆ ಸಂಚರಿಸುವ ಮಾರ್ಗದಲ್ಲಿ ಯಾವುದೇ ಅನಾಹುತ-ಅಪಾಯಗಳು ಸಂಭವಿಸುವುದಿಲ್ಲ ಎಂಬ ನಂಬಿಕೆ ಸ್ಥಳೀಯರದ್ದಾಗಿದೆ. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರು ಈ ಅಣ್ಣಪ್ಪ ಸ್ವಾಮಿಗೆ ಪೂಜೆ ಮಾಡಿ, ಕಾಣಿಕೆ ಹಾಕದೆ ಮುಂದೆ ಹೋಗಲ್ಲ. ಆದರೆ, ಇಂತಹ ಭಕ್ತರ ಹಾಗೂ ಕಾಣಿಕೆ ಹಣವನ್ನು ಕದಿಯುತ್ತಿದ್ದ ಕಾರಣ ಕಳ್ಳನಿಗೆ ಧರ್ಮದೇಟು ನೀಡಿದ್ದಾರೆ. ಇದನ್ನೂ ಓದಿ: ಯೋಗಿ ಸರ್ಕಾರವನ್ನು ಜನರೇ ಬಲ್ಡೋಜರ್‌ನಿಂದ ಕಿತ್ತೆಸೆಯುವ ದಿನ ಬರಲಿದೆ: ಅಖಿಲೇಶ್ ಯಾದವ್

  • ಮಾಲೀಕನ ಮೇಲಿದ್ದ ಸಿಟ್ಟಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡ್ಕೊಂಡು ಎಸ್ಕೇಪ್!

    ಮಾಲೀಕನ ಮೇಲಿದ್ದ ಸಿಟ್ಟಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡ್ಕೊಂಡು ಎಸ್ಕೇಪ್!

    ಬೆಂಗಳೂರು: ಮಾಲೀಕನ ಮೇಲಿನ ಸಿಟ್ಟಿಗೆ ಕಾರ್ಮಿಕನೊಬ್ಬ ವಿಮಾನದಲ್ಲಿ ಬಂದು ಕಳ್ಳತನ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಕಳ್ಳ ಕಾರ್ಮಿಕ 2 ಲಕ್ಷ ಹಣ ದೋಚಿ ಪರಾರಿ ಆಗಿದ್ದಾನೆ. ಬಸವನಗುಡಿ ಠಾಣಾ ವ್ಯಾಪ್ತಿಯ ರಾಮ್ ದೇವ್ ಬಟ್ಟೆ ಶಾಪ್‍ನಲ್ಲಿ ಈ ಘಟನೆ ನಡೆದಿದೆ. ಕಳ್ಳತನ ಆರೋಪಿ ಐದು ವರ್ಷಗಳ ಹಿಂದೆ ಇದೇ ಅಂಗಡಿಯಲ್ಲಿ ಕೆಲಸಗಾರನಾಗಿದ್ದ ಎನ್ನಲಾಗಿದೆ.

    ಕಳ್ಳತನ ಮಾಡಿ ಸಿಕ್ಕಾಕಿಕೊಂಡಿದ್ದ ಇವನನ್ನ ಕೆಲಸದಿಂದ ತೆಗೆಯಲಾಗಿತ್ತು. ಇದನ್ನೇ ದ್ವೇಷವಾಗಿಟ್ಟುಕೊಂಡಿದ್ದ ಆರೋಪಿ ಆಗಾಗ ಬಂದು ನೋಡಿ ಹೋಗ್ತಿದ್ದ. ಕಳೆದ ವಾರ ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಅಂಗಡಿ ಡ್ರಾಯರ್ ನಲ್ಲಿದ್ದ 2 ಲಕ್ಷ ನಗದು ಎತ್ತಿಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಕನ್ನಡಕ್ಕಾಗಿ ಪ್ರಾಣ ಕೊಡೋಕು ಸಿದ್ಧ: ಶಿವಣ್ಣ ಖಡಕ್‌ ಮಾತು

    ರಾಜಸ್ಥಾನದಿಂದ ಫ್ಲೈಟ್‍ನಲ್ಲಿ ಬಂದು ಕಳ್ಳತನ ಮಾಡಿಕೊಂಡು ಹೋಗಿದ್ದಾನೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್‍ನಲ್ಲಿ ಅಶ್ಲೀಲ ವೀಡಿಯೋ ಶೇರ್ ಮಾಡಿದ ಶಿಕ್ಷಕನ ಬಂಧನ

  • ವ್ಯಾಪಾರದ ಸೋಗಿನಲ್ಲಿ ಬಂದವನು ಮೊಬೈಲ್ ಕದ್ದು ಎಸ್ಕೇಪ್

    ವ್ಯಾಪಾರದ ಸೋಗಿನಲ್ಲಿ ಬಂದವನು ಮೊಬೈಲ್ ಕದ್ದು ಎಸ್ಕೇಪ್

    ಬೆಂಗಳೂರು: ಹೆಡ್ ಫೋನ್ ಕೊಂಡುಕೊಳ್ಳುವ ಸಲುವಾಗಿ ಮೊಬೈಲ್ ಅಂಗಡಿಗೆ ಬಂದಿದ್ದ ಯುವಕನೊಬ್ಬ ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದಾನೆ.

    ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲರುವ ಮೊಬೈಲ್ ಪ್ಯಾಲೇಸ್ ಅಂಗಡಿಯಲ್ಲಿ ಮಾಲೀಕನಿಗೆ ಅದು ತೋರಿಸಿ, ಇದು ಬೇಡ, ಮತ್ತೊಂದು ತೋರಿಸಿ ಎಂದು ಸತಾಯಿಸಿದ್ದಾನೆ. ಕೊನೆಗೆ ಮಾಲೀಕ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಳ್ಳುತ್ತಿದ್ದ ವೇಳೆ ಮೊಬೈಲ್ ಕದಿಯಲು ಯತ್ನಿಸಿದ್ದಾನೆ.

    ಕಳ್ಳ ಮೊದಲಿಗೆ ಫೋನ್ ಬಾಕ್ಸ್ ತೆಗೆದುಕೊಂಡು ಪ್ಯಾಂಟ್‍ಂನ ಹಿಂಬದಿ ಜೇಬಿಗೆ ಇಟ್ಟುಕೊಳ್ಳುತ್ತಾನೆ. ಆದರೆ ಯಾರೋ ನೋಡಿದಂತಾಗಿ ಮತ್ತೆ ಟೇಬಲ್ ಮೇಲೆ ಇಟ್ಟು ನೋಡುತ್ತಾ ನಿಂತುಕೊಳ್ಳುತ್ತಾನೆ. ಬಳಿಕ ತಾನು ತಂದಿದ್ದ ಹ್ಯಾಂಡ್ ಬ್ಯಾಗ್ ಗೆ 18 ಸಾವಿರ ಬೆಲೆಯ ರೆಡ್‍ಮಿ ಫೋನ್ ಹಾಕಿಕೊಂಡು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗುತ್ತಾನೆ.

    ಚಾಲಕಿ ಮೊಬೈಲ್ ಕಳ್ಳ ಕಳ್ಳತನ ಮಾಡಿದ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಉಮಾಮಹೇಶ್ವರಿ ದೇವಾಲಯದಲ್ಲಿ ಕಳ್ಳತನ – ದೇವಸ್ಥಾನಗಳೇ ಗ್ಯಾಂಗ್‍ನ ಟಾರ್ಗೆಟ್

    ಉಮಾಮಹೇಶ್ವರಿ ದೇವಾಲಯದಲ್ಲಿ ಕಳ್ಳತನ – ದೇವಸ್ಥಾನಗಳೇ ಗ್ಯಾಂಗ್‍ನ ಟಾರ್ಗೆಟ್

    ಮಡಿಕೇರಿ: ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಸಮೀಪದ ಕೊಳಕೇರಿ ಗ್ರಾಮದ ಉಮಾಮಹೇಶ್ವರಿ ದೇವಾಲಯದ ಗಣಪತಿ ವಿಗ್ರಹ, ಹುಂಡಿ, ಬೆಳ್ಳಿ ಚೆಂಬು ಮತ್ತು ಎರಡು ಬೆಳ್ಳಿ ತಟ್ಟೆಗಳನ್ನು ಕಳ್ಳರು ದೋಚಿರುವ ಪ್ರಕರಣ ಕಳೆದ ರಾತ್ರಿ ನಡೆದಿದೆ.

    ಹುಂಡಿಯ ಬೀಗ ಮುರಿದು ಸುಮಾರು 40 ಸಾವಿರ ಹಣವನ್ನು ಕದ್ದಿರುವ ಕಳ್ಳರು, ಹೊರ ಭಾಗದಲ್ಲಿದ್ದ ಗಣಪತಿ ಗುಡಿಯ ಬೀಗ ಒಡೆದು ಒಳಗಿದ್ದ ಪಂಚಲೋಹದ ವಿಗ್ರಹವನ್ನು ಕದ್ದಿದ್ದಾರೆ.

    ಮುಖ್ಯ ಗರ್ಭಗುಡಿಯ ಬೀಗ ಒಡೆದಿದ್ದು, ಅಲ್ಲಿದ್ದ ಬೆಳ್ಳಿಯ ಒಂದು ಚೆಂಬು ಮತ್ತು ಎರಡು ಬೆಳ್ಳಿ ತಟ್ಟೆಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಆದರೆ ಗರ್ಭಗುಡಿಯಲ್ಲಿದ್ದ ಗಣಪತಿ ದೇವರ ಪಾಣಿಪೀಠ ಮತ್ತು ಪ್ರಭಾವಳಿಯನ್ನು ಅಲ್ಲಿಯೇ ಬಿಟ್ಟಿದ್ದು, ಮುಖ್ಯ ಗರ್ಭಗುಡಿಯಲ್ಲಿದ್ದ ಶಿವಲಿಂಗದ ಪ್ರಭಾವಳಿ ಮತ್ತು ಅಲ್ಲಿದ್ದ ಉತ್ಸವ ಮೂರ್ತಿಯ ಪ್ರಭಾವಳಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡು ಬಂದಿದೆ.

    ಇಂದು ಬೆಳಗ್ಗೆ 6 ಗಂಟೆಗೆ ಮುಕ್ಕಾಟಿರ ಅಣ್ಣಯ್ಯ ಅವರು ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸುದ್ದಿ ಹಬ್ಬುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ರೆಮ್ಮಿ ನಾಣಯ್ಯ ಸೇರಿದಂತೆ ಎಲ್ಲಾ ಗ್ರಾಮಸ್ಥರು ದೇವಾಲಯದಲ್ಲಿ ಸೇರಿದರು.

    ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ದಿವಾಕರ್, ಜಿಲ್ಲಾ ಅಪರಾಧ ಪತ್ತೆ ದಳದ ಎಎಸ್‍ಐ ಹಮೀದ್, ನಾಪೋಕ್ಲು ಠಾಣಾಧಿಕಾರಿ ಆರ್. ಮಂಚಯ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಕಳೆದ 15 ದಿನಗಳ ಹಿಂದೆ ಮಡಿಕೇರಿ ನಗರದ ಐತಿಹಾಸಿಕ ದೇವಾಲಯ ಕರವಲೆ ಭಗವತಿ ದೇವಸ್ಥಾನಲ್ಲೂ ಇದೇ ರೀತಿ ಕಳ್ಳತನವಾಗಿತ್ತು.

  • ಎಟಿಎಂನಲ್ಲಿ ಹಣ ಕದಿಯಲು ಯತ್ನ – ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಹಿಡಿದ ಪೊಲೀಸರು

    ಎಟಿಎಂನಲ್ಲಿ ಹಣ ಕದಿಯಲು ಯತ್ನ – ರೆಡ್ ಹ್ಯಾಂಡ್ ಆಗಿ ಕಳ್ಳನನ್ನು ಹಿಡಿದ ಪೊಲೀಸರು

    ಬೀದರ್: ಎಟಿಎಂ ಒಡೆದು ದರೋಡೆ ಮಾಡಲು ಯತ್ನಿಸಿದ ಕಳ್ಳನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಕಾರ್ಯಚರಣೆ ಯಶಸ್ವಿಗೊಳಿಸಿದ ಘಟನೆ ಇಂದು ನಸುಕಿನ ಜಾವ ನಡೆದಿದೆ.

    ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಶಹಾಪುರ ಮಸೀದಿ ಮುಖ್ಯ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್‍ನ ಎಟಿಎಂ ಒಡೆದು ದರೋಡೆ ಮಾಡಲು ಯತ್ನ ಮಾಡಿದ್ದಾನೆ. ಇಂದು ಬೆಳಗ್ಗಿನ ಜಾವ ಎಟಿಎಂಗೆ ನುಗ್ಗಿದ ಕಳ್ಳ ಯಂತ್ರ ಒಡೆಯಲು ತೊಡಿಗಿದ್ದನು. ಎಟಿಎಂ ಯಂತ್ರ ಒಡೆಯುವ ವೇಳೆ ಬ್ಯಾಂಕ್‍ನ ಮುಖ್ಯ ಕಚೇರಿಗೆ ಸಂದೇಶ ರವಾನೆಯಾಗಿದೆ.

    ಸಂದೇಶ ರವಾನೆ ಆಗುತ್ತಿದ್ದಂತೆ ತಕ್ಷಣ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿ ನಗರ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಬಂದ ಕೂಡಲೆ ಕಾರ್ಯಪ್ರವರ್ತರಾದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಪಿಎಸ್‍ಐ ಸುನಿಲಕುಮಾರ ನೇತೃತ್ವದ ಪೊಲೀಸರ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಸವಕಲ್ಯಾಣ ನಗರ ನಿವಾಸಿ ಶ್ರೀಕಾಂತ ಮಲ್ಲಿಕಾರ್ಜುನ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಲು ಯತ್ನಿಸಿದ ವ್ಯಕ್ತಿ ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.

  • ಬೆಳ್ಳುಳ್ಳಿಯನ್ನು ರಕ್ಷಿಸಲು ದೊಣ್ಣೆ ಹಿಡಿದುಕೊಂಡು ಕುಳಿತ ರೈತರು

    ಬೆಳ್ಳುಳ್ಳಿಯನ್ನು ರಕ್ಷಿಸಲು ದೊಣ್ಣೆ ಹಿಡಿದುಕೊಂಡು ಕುಳಿತ ರೈತರು

    ಹಾವೇರಿ: ತಾವು ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿಯನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ರೈತರು ದೊಣ್ಣೆ ಹಿಡಿದುಕೊಂಡು ಕುಳಿತ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ.

    ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ರೈತರು ತಾವು ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿಯನ್ನು ರಕ್ಷಿಸಿಕೊಳ್ಳಲು ದೊಣ್ಣೆ ಹಿಡಿದುಕೊಂಡು ಕುಳಿತಿದ್ದಾರೆ. ತಾಲೂಕಿನ ನೂರಾರು ಹೆಕ್ಟರ್ ಪ್ರದೇಶದಲ್ಲಿ ರೈತರು ಬೆಳ್ಳುಳ್ಳಿ ಬೆಳೆದಿದ್ದಾರೆ. ನಿರಂತರ ಮಳೆ, ಅಕಾಲಿಕ ಮಳೆ ಅದು ಇದು ಎಂದು ಎಲ್ಲ ಸಮಸ್ಯೆಗಳ ನಡುವೆಯೂ ರೈತರು ಬೆಳ್ಳುಳ್ಳಿ ಬೆಳೆದಿದ್ದಾರೆ.

    ಬೆಳ್ಳುಳ್ಳಿಗೆ ಈಗ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದೆ. ಪ್ರತಿ ಕ್ವಿಂಟಾಲ್ ಬೆಳ್ಳುಳ್ಳಿ ಕನಿಷ್ಟ 10 ಸಾವಿರದಿಂದ ಗರಿಷ್ಠ 18 ಸಾವಿರದವರೆಗೆ ಮಾರಾಟ ಆಗುತ್ತಿದೆ. ಹೀಗಾಗಿ ಬೆಳ್ಳುಳ್ಳಿ ಮೇಲೆ ಖದೀಮರ ಕಣ್ಣು ಬಿದ್ದಿದೆ. ರಾತ್ರೋರಾತ್ರಿ ರೈತರ ಜಮೀನುಗಳಿಗೆ ಎಂಟ್ರಿ ಕೊಟ್ಟು ಖದೀಮರು ಬೆಳ್ಳುಳ್ಳಿ ಕದ್ದುಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ರೈತರು ಈಗ ಬೆಳ್ಳುಳ್ಳಿ ಕಾಯುವ ಕೆಲಸದಲ್ಲಿ ನಿರತರಾಗಿದ್ದಾರೆ.

    ಈಗಾಗಲೇ ತಾಲೂಕಿನ ಕೂನಬೇವು, ಎರೆಕುಪ್ಪಿ ಸೇರಿದಂತೆ ಕೆಲವು ಕಡೆಗಳಲ್ಲಿ ರೈತರ ಜಮೀನಿನಲ್ಲಿ ರಾಶಿ ಮಾಡಲು ಹಾಕಿದ್ದ ಬೆಳ್ಳುಳ್ಳಿಯನ್ನು ಖದೀಮರು ಕದ್ದುಕೊಂಡು ಹೋಗಿದ್ದಾರೆ. ಬೆಳ್ಳುಳ್ಳಿ ಕಳುವಾದ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ದಾಖಲಿಸಿದ್ದಾರೆ. ಆದರೆ ಕೆಲವು ರೈತರು ಪೊಲೀಸ್ ಠಾಣೆಗೆ ಅಲೆದಾಡೋದು ಬೇಡಪ್ಪಾ ಎಂದು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದೆರಡು ಬೆಳ್ಳುಳ್ಳಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದಂತೆಯೇ ರೈತರು ಸಹ ಫುಲ್ ಅಲರ್ಟ್ ಆಗಿದ್ದಾರೆ.

    ರಾಶಿ ಮಾಡಲು ಹಾಕಿರುವ ಬೆಳ್ಳುಳ್ಳಿ ಬಣವೆಗಳ ಬಳಿ ಗುಡಿಸಲು ಹಾಕಿಕೊಂಡು, ದೊಣ್ಣೆ ಹಿಡಿದುಕೊಂಡು ಕಾದು ಕುಳಿತಿದ್ದಾರೆ. ರೈತರ ಕುಟುಂಬದ ಸದಸ್ಯರು ಹಗಲು, ರಾತ್ರಿ, ಮಳೆ, ಚಳಿ ಎನ್ನದೇ ಕಳ್ಳರಿಗಾಗಿ ಕಾದು ಕುಳಿತಿದ್ದಾರೆ. ಐದಾರು ತಿಂಗಳು ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿ ಕಳ್ಳರ ಪಾಲಾಗದಂತೆ ಕಾಪಾಡಲು ರೈತರು ಟೆಂಟ್ ಹಾಕಿಕೊಂಡು ಬೆಳ್ಳುಳ್ಳಿ ಫಸಲು ಕಾಯುತ್ತಿದ್ದಾಎ. ಆದಷ್ಟು ಬೇಗ ರಾಶಿ ಮಾಡಿ ಮಾರಾಟ ಮಾಡಬೇಕು ಎಂದರೆ ಮಳೆರಾಯನೂ ರೈತರ ಬೆಳ್ಳುಳ್ಳಿ ಒಣಗಲು ಬಿಡುತ್ತಿಲ್ಲ. ಇದು ರೈತರಿಗೆ ದೊಡ್ಡ ತಲೆನೋವಾಗಿದ್ದು, ಬೆಳ್ಳುಳ್ಳಿ ಕಾಯುವುದೇ ರೈತರಿಗೆ ದೊಡ್ಡ ಸಾಹಸದ ಕೆಲಸವಾಗಿಬಿಟ್ಟಿದೆ.

  • ಕದ್ದ ಚಿನ್ನವನ್ನು ಪತ್ರದ ಜೊತೆಗೆ ವಾಪಸ್ ತಂದು ದೇವರ ಮುಂದಿಟ್ಟ ಖದೀಮ

    ಕದ್ದ ಚಿನ್ನವನ್ನು ಪತ್ರದ ಜೊತೆಗೆ ವಾಪಸ್ ತಂದು ದೇವರ ಮುಂದಿಟ್ಟ ಖದೀಮ

    ಹಾವೇರಿ: ಕದ್ದ ಚಿನ್ನವನ್ನು ಖದೀಮ ವಾಪಸ್ ದೇವರ ಮುಂದಿಟ್ಟು ಹೋದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ದಾನಮ್ಮದೇವಿ ದೇವಸ್ಥಾನದಲ್ಲಿ ನಡೆದಿದೆ.

    ಡಿಸೆಂಬರ್ 4ರಂದು ಈ ಕಳ್ಳತನದ ಪ್ರಕರಣ ನಡೆದಿತ್ತು. ದೇವಸ್ಥಾನದಲ್ಲಿ ನಡೆದಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಕಳ್ಳತನವಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಶಿಕ್ಷಕಿ ಶೋಭಾ ಯಳವಟ್ಟಿ ಎಂಬವರ 46 ಗ್ರಾಂ ತೂಕದ ಸರವನ್ನು ದೋಚಿ ಪರಾರಿಯಾಗಿದ್ದ. ಅಲ್ಲದೇ 46 ಗ್ರಾಂ ತೂಕದ ಚಿನ್ನದ ಸರ ಕರಗಿಸಿ ಅಪರಂಜಿ ಚಿನ್ನ ಮಾಡಿದ್ದ ಎನ್ನಲಾಗಿದೆ.

    ಇದೀಗ ಖದೀಮ ಕ್ಷಮಾಪಣೆ ಪತ್ರದೊಂದಿಗೆ ಚಿನ್ನವನ್ನು ದೇವಸ್ಥಾನದ ಮುಂದಿನ ಕಾಣಿಕೆ ಡಬ್ಬಿ ಪಕ್ಕದಲ್ಲಿಟ್ಟು ಹೋಗಿದ್ದಾನೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಪತ್ರದಲ್ಲಿ ಏನಿದೆ?
    ದಾನಮ್ಮ ದೇವಿ ಸದಸ್ಯರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ದಾನಮ್ಮನ ಜಾತ್ರೆಯಲ್ಲಿ ನನಗೆ ಸರ ಸಿಕ್ಕಿತ್ತು. ದೇವಿನೇ ನಮ್ಮ ಕಷ್ಟಕಾಲದಲ್ಲಿ ಕಣ್ಣು ತೆರೆದು ಪ್ರಸಾದ ಕೊಟ್ಟಿದ್ದಾಳೆಂದು ನಂಬಿ ಅದನ್ನು ನಾನು ಮನೆಗೆ ತೆಗೆದುಕೊಂಡು ಹೋಗಿದ್ದೆ. ಅಂದಿನಿಂದ ನನಗೆ ಏಕೋ ತಪ್ಪಿನ ಅರಿವಾಗತೊಡಗಿ ಅದನ್ನು ವಾಪಸ್ ಕೊಡಬೇಕೆಂದು ಅನ್ನಿಸ ತೊಡಗಿತು. ಅದಕ್ಕೆ ಅದನ್ನು ಕರಗಿಸಿದರೂ ಉಪಯೋಗಿಸುವ ಮನಸಾಗದ್ದಕ್ಕೆ ತಂದು ಇಟ್ಟಿದ್ದೇನೆ. ಅದನ್ನು ಅದರ ಯಜಮಾನರಿಗೆ ಮುಟ್ಟಿಸುವ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಇಂತಿ ದಾನಮ್ಮನ ಭಕ್ತರು ಎಂದು ಪತ್ರದಲ್ಲಿ ಬರೆದಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

    ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

    ಬೆಳಗಾವಿ/ಚಿಕ್ಕೋಡಿ: ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತಾಗ ಕೈಯಲ್ಲಿ ನಿಮ್ಮ ಎಟಿಎಂ ಕಾರ್ಡ್ ಹಿಡಿದುಕೊಳ್ಳುವಾಗ ಎಚ್ಚರವಾಗಿರಿ. ಯಾಕಂದ್ರೆ ನಿಮ್ಮ ಎಟಿಎಂ ಮೇಲೆ ಇರುವ ನಂಬರ್ ನೋಡಿ ಹಾಗೂ ನಿಮ್ಮ ಜೊತೆಗೆ ಬಂದು ನಿಮ್ಮ ಪಿನ್ ಸಂಖ್ಯೆ ಕದ್ದು ನೋಡಿ ನಿಮ್ಮ ಹಣ ಕದಿಯುತ್ತಾರೆ.

    ಇಬ್ಬರು ಯೋಧರು ಸೇರಿ 8 ಜನರ ಬ್ಯಾಂಕ್ ಅಕೌಂಟಿಗೆ ಕನ್ನ ಹಾಕಿ 3 ಲಕ್ಷಕ್ಕೂ ಅಧಿಕ ಹಣವನ್ನು ವಿವಿಧ ಎಟಿಎಂಗಳಿಂದ ಹಣ ವಿಥ್ ಡ್ರಾ ಮಾಡಿದ್ದ ಖತರ್ನಾಕ್ ಖದೀಮನನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಬಿಹಾರ ರಾಜ್ಯದ ಗಯಾ ಜಿಲ್ಲೆಯ ಡುಮರಿ ಗ್ರಾಮದ ರೋಹಿತೇಶ್ ಕುಮಾರ್ ಬಂಧಿತ ಆರೋಪಿ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ 8 ಗ್ರಾಹಕರ ಬ್ಯಾಂಕ್ ಅಕೌಂಟ್ ಹಣ ಹ್ಯಾಕ್ ಮಾಡಿ ಬೆಳಗಾವಿ, ಕೊಲ್ಲಾಪುರ, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ ಎಟಿಎಂ ಕೇಂದ್ರಗಳಿಂದ ಈ ಖದೀಮ ಹಣ ಡ್ರಾ ಮಾಡಿಕೊಂಡಿದ್ದನು. ಈ ಖತರ್ನಾಕ್ ರೋಹಿತೇಶ್ ಎಟಿಎಂ ಕೇಂದ್ರಗಳ ಎದುರು ಸರತಿ ಸಾಲಿನಲ್ಲಿ ನಿಂತು ಎಟಿಎಂ ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಬಳಿಕ ಎಟಿಎಂ ಡ್ರಾ ಮಾಡುವ ಸಂದರ್ಭದಲ್ಲಿ ಕದ್ದು ಪಾಸ್‍ವರ್ಡ್ ನೋಡಿ ನಮೂದಿಸಿಕೊಳ್ಳುತ್ತಿದ್ದನು. ಬಳಿಕ ಅಲ್ಲಿಂದ ತೆರಳಿ ಆನ್ಲೈನ್ ಅಪ್ಲಿಕೇಶನ್ ಮೂಲಕ ಗ್ರಾಹಕರ ಕೊನೆಯ 4 ಎಟಿಎಂ ಸಂಖ್ಯೆ ಹಾಗೂ ಪಾಸ್ವರ್ಡ್ ಬಳಿಸಿ ಹಣ ಎಗಿರಿಸುತ್ತಿದ್ದನು.

    ಹುಕ್ಕೇರಿ ತಾಲೂಕಿನ ಯೋಧರಾದ ಶಿವಾನಂದ ಮುರಗಿ ಅವರ 2 ತಿಂಗಳು ವೇತನ 80 ಸಾವಿರ ಹಾಗೂ ಮಾರುತಿ ನಾಶಿಪುಡಿ ಅವರ 34 ಸಾವಿರ ರೂ.ಗಳು ಸೇರಿದಂತೆ ಒಟ್ಟು 8 ಜನರ 3 ಲಕ್ಷಕ್ಕೂ ಅಧಿಕ ಹಣಕ್ಕೆ ಈ ಖದೀಮ ಕನ್ನ ಹಾಕಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು ತನಿಖೆ ಆರಂಭಿಸಿದಾಗ ಇಂಥ ಪ್ರಕರಣದಲ್ಲೇ ಮಹಾರಾಷ್ಟ್ರ ಪೊಲೀಸರು ವ್ಯಕ್ತಿಯನ್ನು ಬಂಧಿಸಿರುವ ಮಾಹಿತಿ ಬರುತ್ತದೆ. ಆಗ ಹುಕ್ಕೇರಿ ಪೊಲೀಸರು ಮಹಾರಾಷ್ಟ್ರ ಪೊಲೀಸರನ್ನು ಸಂಪರ್ಕಿಸಿದಾಗ ಹಣ ಕಳ್ಳತನ ಮಾಡಿದ್ದಾಗಿ ಕಳ್ಳ ರೋಹಿತೇಶ್ ಒಪ್ಪಿಕೊಂಡಿದ್ದಾನೆ.

    ಅಲ್ಲದೆ ಎರಡು ಬಾರಿ ಈತ ಹುಕ್ಕೆರಿಗೆ ಬಂದು ಜನರ ಎಟಿಎಂ ಸಂಖ್ಯೆ ಹಾಗೂ ಪಿನ್ ನಮೂದಿಸಿಕೊಂಡು ಹೋಗಿರುವುದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಸದ್ಯ ಈತ ಮಹರಾಷ್ಟ್ರ ಜೈಲಿನಲ್ಲಿ ಇದ್ದು ಹುಕ್ಕೇರಿ ಪೊಲೀಸರು ಈತನನ್ನು ಹುಕ್ಕೇರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

    ಹುಕ್ಕೇರಿ ಪೊಲೀಸ್ ಠಾಣೆ ಹಾಗೂ ಮಹರಾಷ್ಟ್ರ ರಾಜ್ಯದ ಕೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಖದೀಮನ ವಿರುದ್ಧ ಪ್ರಕರಣ ದಾಖಲಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv