Tag: theft

  • ತುಮಕೂರು: ಕುರಿ ಕದಿಯಲು ಬಂದ ಕಳ್ಳನಿಗೆ ದೊಣ್ಣೆಯಿಂದ ಬಡಿದು ಕೊಲೆ

    ತುಮಕೂರು: ಕುರಿ ಕದಿಯಲು ಬಂದ ಕಳ್ಳನಿಗೆ ದೊಣ್ಣೆಯಿಂದ ಬಡಿದು ಕೊಲೆ

    ತುಮಕೂರು: ಕುರಿ ಕದಿಯಲು ಬಂದ ಕಳ್ಳನನ್ನು ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡಮಾಲೂರಿನಲ್ಲಿ ನಡೆದಿದೆ.


    ಮೃತ ಕಳ್ಳ ಆಂಧ್ರ ಮೂಲದವನು ಎನ್ನಲಾಗಿದೆ. ರಾತ್ರಿ ಮೂವರು ಕಳ್ಳರು ಸೇರಿ ದೊಡ್ಡಮಾಲೂರಿನ ರಾಮರೆಡ್ಡಿ ಎಂಬವರ ಮನೆಯಲ್ಲಿ ಕುರಿ ಕದಿಯಲು ಬಂದಿದ್ದಾರೆ. ಕಳ್ಳತನಕ್ಕೆ ಯತ್ನಿಸುವಾಗ ಮಾಲೀಕ ರಾಮರೆಡ್ಡಿ ಎಚ್ಚರಗೊಂಡಿದ್ದಾರೆ. ಈ ವೇಳೆ ಮಾಲೀಕ ಕಳ್ಳರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಆದ್ರೆ ಇಬ್ಬರು ಕಳ್ಳರು ತಪ್ಪಿಸಿಕೊಂಡು ಪರಾರಿಯಾಗಿದ್ದು, ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದಾನೆ. ಕೈಗೆ ಸಿಕ್ಕ ಕಳ್ಳನನ್ನು ರಾಮರೆಡ್ಡಿ ಹಾಗೂ ಕುಟುಂಬದ ಸದಸ್ಯರು ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಮನಬದಂತೆ ಥಳಿಸಿದ್ದಾರೆ. ತೀವ್ರ ಥಳಿತಕ್ಕೊಳಗಾದ ಕಳ್ಳ ಕಟ್ಟಿದ ಕಂಬದಲ್ಲೇ ಸಾವನ್ನಪ್ಪಿದ್ದಾನೆ.

    ಕೊಡಿಗೆನಹಳ್ಳಿ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ರಾಮರೆಡ್ಡಿ ಸೇರಿದಂತೆ ಕುಟುಂಬ ಸದಸ್ಯರಾದ ಉಮೇಶ್, ನಾಗರಾಜು ಮತ್ತು ಬಾಬು ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

  • ವಿಡಿಯೋ: ಲ್ಯಾಬ್ರಡಾರ್ ನಾಯಿಯನ್ನು ಖದೀಮರು ಹೇಗೆ ಕಳವು ಮಾಡ್ತಾರೆ ನೋಡಿ!

    ವಿಡಿಯೋ: ಲ್ಯಾಬ್ರಡಾರ್ ನಾಯಿಯನ್ನು ಖದೀಮರು ಹೇಗೆ ಕಳವು ಮಾಡ್ತಾರೆ ನೋಡಿ!

    ಕಾರವಾರ: ಕಳ್ಳತನ ಆಗುತ್ತೆ ಅಂತ ರಕ್ಷಣೆಗೆ ನಾಯಿ ಸಾಕಿದ್ರೆ ಆ ನಾಯಿಯನ್ನೇ ಕಳವು ಮಾಡೋ ಮಂದಿ ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಾಕು ನಾಯಿಗಳು ಕಳ್ಳತನವಾಗುತ್ತಿವೆ.

    ಕಾರವಾರ ನಗರದ ಮುಖ್ಯಭಾಗವಾದ ಎಂಜಿ ರೋಡ್ ಬಳಿ ಇರುವ ಮಹಾಲಕ್ಷ್ಮಿ ಶೂರೂಂ ಬಳಿ ಇರುವ ಮನೆಯೊಂದರಲ್ಲಿ ಸಾಕಿದ್ದ ಲ್ಯಾಬ್ರಡಾರ್ ತಳಿಯ ನಾಯಿ ಮರಿಯನ್ನ ಕಳ್ಳರು ಯಾಮಾರಿಸಿ ಕಳ್ಳತನ ಮಾಡಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ರೀತಿ ಹಲವು ತಳಿಗಳ ನಾಯಿಗಳು ಕಳ್ಳತನವಾಗಿದ್ದು ಕಾರವಾರ ನಗರ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ನಾಯಿ ಕಳವು ಮಾಡೋ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    https://www.youtube.com/watch?v=dkVwpWN8Fqw

  • ಬೀದರ್: ನಾಲ್ವರು ಸರಗಳ್ಳರ ಬಂಧನ, ಚಿನ್ನಾಭರಣ ವಶ

    ಬೀದರ್: ನಾಲ್ವರು ಸರಗಳ್ಳರ ಬಂಧನ, ಚಿನ್ನಾಭರಣ ವಶ

    ಬೀದರ್: ಬಹುದಿನಗಳಿಂದ ಪೊಲೀಸರಿಗೆ ಬೇಕಾಗಿದ್ದ ನಾಲ್ವರು ಸರಗಳ್ಳರನ್ನು ಬೀದರ್ ನಗರದ ಗಾಂಧಿಗಂಜ್ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಮೈಕಲ್ ಕೊಡ್ಲಿಕರ್, ಉಮೇಶ್ ಭಾವಿದೊಡ್ಡಿ, ವಿನಯ್‍ಕುಮಾರ್ ಭಾವಿಕಟ್ಟಿ ಮತ್ತು ನಿಶಾಂತ್ ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ ಎರಡು ಪಲ್ಸರ್ ಬೈಕ್ ಹಾಗು 5.50 ಲಕ್ಷ ರೂ. ಬೆಲೆಬಾಳುವ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬಂಧಿತರ ಮೇಲೆ ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ ನಡೆದ ಕಾರ್ಯಚಾರಣೆ ಮಾಡಲಾಗಿತ್ತು.

     

  • ಕಳ್ಳತನ ಕೇಸ್‍ನಲ್ಲಿ ಹೆಂಡತಿ ಸಿಕ್ಕಿಬಿದ್ದಿದ್ದಕ್ಕೆ ಪತಿ ಆತ್ಮಹತ್ಯೆ

    ಕಳ್ಳತನ ಕೇಸ್‍ನಲ್ಲಿ ಹೆಂಡತಿ ಸಿಕ್ಕಿಬಿದ್ದಿದ್ದಕ್ಕೆ ಪತಿ ಆತ್ಮಹತ್ಯೆ

    – ಕಂಗಾಲಾದ ಪತ್ನಿಯೂ ಆತ್ಮಹತ್ಯೆಗೆ ಶರಣು

    ಮೈಸೂರು: ಕಳ್ಳತನ ಕೇಸಿನಲ್ಲಿ ಹೆಂಡತಿ ಸಿಕ್ಕಿಬಿದ್ದಿದ್ದರಿಂದ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ನಗರದ ವಿವಿ ಮೊಹಲ್ಲಾದಲ್ಲಿ ನಡೆದಿದೆ.

    35 ವರ್ಷದ ರಾಜು ಆತ್ಮಹತ್ಯೆಗೆ ಶರಣಾದ ಪತಿ. ರಾಜು ಅವರ ಪತ್ನಿ ಲತಾ ಇತ್ತೀಚಿಗೆ ತಾವು ಕಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಪೊಲೀಸ್ ವಿಚಾರಣೆ ವೇಳೆ ಲತಾ ತಪ್ಪೊಪ್ಪಿಕೊಂಡು ಕದ್ದ ಪದಾರ್ಥಗಳನ್ನು ಹಿಂದಿರುಗಿಸಿ, ಜಾಮೀನು ಪಡೆದು ಹೊರಬಂದಿದ್ದರು.

    ಪತ್ನಿಯ ಕಳ್ಳತನ ಪ್ರಕರಣದಿಂದ ಮನನೊಂದ ರಾಜು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಪತಿಯ ಆತ್ಮಹತ್ಯೆಯಿಂದ ಕಂಗಾಲಾದ ಲತಾ ಕೂಡ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅಸ್ವಸ್ಥಗೊಂಡ ಲತಾರನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಗದೇ ಲತಾ ಕೂಡ ಮೃತಪಟ್ಟಿದ್ದಾರೆ.

    ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

     

  • ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು ಕದ್ದು ಸಿಕ್ಕಿಬಿದ್ದ ಅಧಿಕಾರಿ!

    ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು ಕದ್ದು ಸಿಕ್ಕಿಬಿದ್ದ ಅಧಿಕಾರಿ!

    ರಾಯಚೂರು: ದೇಶದ ಏಕೈಕ ಬಂಗಾರ ಉತ್ಪಾದಿಸುವ ಚಿನ್ನದಗಣಿ ಕಂಪನಿ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಅಧಿಕಾರಿಯೇ ಅದಿರು ಕದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಭೂತಜ್ಞ ಗಣೇಶ್ ಒಂದು ಕೆ.ಜಿ. 900 ಗ್ರಾಂ ಚಿನ್ನದ ಅದಿರನ್ನ ಹೊರಗಡೆ ಸಾಗಿಸುತ್ತಿದ್ದಾಗ ಸೆಕ್ಯೂರಿಟಿ ಗಾರ್ಡ್‍ಗೆ ಸಿಕ್ಕಿಬಿದ್ದಿದ್ದಾನೆ. ಗಣಿಗಾರಿಕೆಯಲ್ಲಿ ತೆಗೆದ ಅದಿರನ್ನ ಪ್ರಯೋಗಾಲಯಕ್ಕೆ ಅಥವಾ ಮಿಲ್‍ಗೆ ಕಳುಹಿಸಿದೆ ಸ್ವತಃ ತಾನೇ ತೆಗೆದುಕೊಂಡು ಹೊರ ಹೋಗುತ್ತಿದ್ದಾಗ ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

    ಹಟ್ಟಿ ಚಿನ್ನದಗಣಿ ಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ಸಂಗೂರಮಠ್ ಅವರು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಗಣೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

     

     

  • ಕಾಲಿಟ್ಟ ಮನೆಯಲ್ಲೇ ಕಳ್ಳಿಯಾದ ಸೊಸೆ- 1.8 ಕೆಜಿಯಷ್ಟು ಚಿನ್ನ ಕದ್ದವಳು ಜೈಲುಪಾಲು

    ಕಾಲಿಟ್ಟ ಮನೆಯಲ್ಲೇ ಕಳ್ಳಿಯಾದ ಸೊಸೆ- 1.8 ಕೆಜಿಯಷ್ಟು ಚಿನ್ನ ಕದ್ದವಳು ಜೈಲುಪಾಲು

    ದೊಡ್ಡಬಳ್ಳಾಪುರ: ಯಾರೋ ಅಪರಿಚಿತ ಮಹಿಳೆ ತನ್ನನ್ನ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದರೋಡೆ ಮಾಡಿದಳು ಅಂತ ಕಥೆ ಕಟ್ಟಿದ್ದ ಐನಾತಿ ಸೊಸೆ ಇದೀಗ ಜೈಲು ಸೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ.

    ಫೆಬ್ರವರಿ 19 ರಂದು ದೊಡ್ಡಬಳ್ಳಾಪುರದ ಶಾಂತಿ ನಗರದ ವಿಶ್ವನಾಥ್ ಎಂಬವರ ಮನೆಯಲ್ಲಿ ಸೊಸೆ ಕಾವ್ಯಾ ಒಂಟಿಯಾಗಿದ್ದಾಗ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳುವಾಗಿತ್ತು. ಘಟನೆ ನಡೆದ ದಿನ ಮನೆಯವರೆಲ್ಲರೂ ಸಂಬಂಧಿಕರ ಮದುವೆಗೆ ಅಂತ ತುಮಕೂರಿನ ಶಿರಾಗೆ ತೆರಳಿದ್ದರು. ಕಾವ್ಯಾ ಗಂಡ ವಿಶ್ವನಾಥ್ ತಿರುಪತಿಗೆ ತೆರಳಿದ್ರು. ಈ ಬಗ್ಗೆ ಕೇಳಿದ್ರೆ ಯಾರೋ ಅಪರಿಚಿತ ಮಹಿಳೆ ವಿವಾಹ ಅಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದು ದರೋಡೆ ಮಾಡಿದಳು ಅಂತ ಮನೆಯವರು ಹಾಗೂ ಪೊಲೀಸರ ಮುಂದೆ ಕಾವ್ಯಾ ಕಥೆ ಕಟ್ಟಿ ಹೇಳಿಕೆ ಕೊಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ದೊಡ್ಡಬಳ್ಳಾಪುರ ನಗರ ಪೊಲೀಸರಿಗೆ ಮನೆಯ ಸೊಸೆ ಕಾವ್ಯಾಳೇ ಕಳ್ಳಿ ಅಂತ ತಿಳಿದುಬಂದಿದೆ.

    ದರ್ಗಾಜೋಗಹಳ್ಳಿಯ ನಿವಾಸಿ ಮೆಹ್‍ಬೂಬ್ ಪಾಷಾ ಎಂಬವನ ಜೊತೆ ಸೇರಿ ಸಂಚು ರೂಪಿಸಿದ್ದ ಕಾವ್ಯಾ, ಮನೆಯಲ್ಲಿದ್ದ 1 ಕೆಜಿ 800 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದು ದೋಚಿ ಮೆಹ್‍ಬೂಬ್ ಪಾಷಾ ಮನೆಯಲ್ಲಿ ಇಟ್ಟಿದ್ದಳು. ಸದ್ಯ ಅಸಲಿ ಕಳ್ಳಿ ಕಾವ್ಯಾಳೇ ಅಂತ ತಿಳಿದುಬಂದಿದ್ದು, ಬಂಧಿತರಿಂದ 1 ಕೆಜಿ 800 ಗ್ರಾಂ ಚಿನ್ನಾಭರಣ ಹಾಗೂ 45,000 ಸಾವಿರ ರೂ. ನಗದು ಹಣವನ್ನ ಪೊಲೀಸರು ಜಪ್ತಿ ಮಾಡಿ ಕಾವ್ಯಾ ಹಾಗೂ ಮೆಹ್‍ಬೂಬ್ ಪಾಷಾನನ್ನ ಜೈಲಿಗೆ ಕಳುಹಿಸಿದ್ದಾರೆ.

     

  • ಗಂಡನ ಬೈಕ್ ಕಳ್ಳತನವಾಗಿದ್ದಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ

    ಗಂಡನ ಬೈಕ್ ಕಳ್ಳತನವಾಗಿದ್ದಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ

    ಹುಬ್ಬಳ್ಳಿ: ಗಂಡನ ಬೈಕ್ ಕಳ್ಳತನವಾಗಿದ್ದಕ್ಕೆ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ನಡೆದಿದೆ.

    ಶಶಿಕಲಾ ಕಮ್ಮಾರ (28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಶಶಿಕಲಾ ಪತಿ ಮಂಜುನಾಥ್ ಸೋಮವಾರ ಸಾಲ ಮಾಡಿ ಹೊಸ ಬೈಕ್ ಖರೀದಿ ಮಾಡಿದ್ದರು. ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಥಳಿಸಿ ಬೈಕ್ ಕದ್ದು ಪರಾರಿಯಾಗಿದ್ದರು.

    ಈ ಘಟನೆಯಿಂದ ಮನನೊಂದ ಪತ್ನಿ ಶಶಿಕಲಾ ಸಾಲಮಾಡಿ ತಂದ ಬೈಕ್ ಕಳ್ಳತನವಾಯಿತಲ್ಲ ಎಂದು ನೊಂದುಕೊಂಡಿದ್ದರು. ಬೈಕ್ ಕಳ್ಳತನವಾಗಿದೆ ಎಂದು ಪತಿ ಪೊಲೀಸರಿಗೆ ದೂರು ನೀಡಲು ಹೋದಾಗ ಮನೆಯಲ್ಲಿ ಪತ್ನಿ ಶಶಿಕಲಾ ನೇಣಿಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.

    ಬೈಕ್ ಕಳೆದುಕೊಂಡ ಚಿಂತೆ ಒಂದೆಡೆಯಾದ್ರೆ, ಪತ್ನಿ ಆತ್ಮಹತ್ಯೆ ಮಾಡಿಕೊಂಡಳಲ್ಲ ಎಂಬ ದುಖಃದಲ್ಲಿ ಪತಿ ಮಂಜುನಾಥ್ ಅವರದ್ದಾಗಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬಾಗಲಕೋಟೆಯಲ್ಲಿ ಕಳ್ಳ ಸ್ವಾಮಿಜಿಗಳಿಗೆ ಬಿತ್ತು ಚಪ್ಪಲಿ ಏಟು

    ಬಾಗಲಕೋಟೆ: ಸ್ವಾಮೀಜಿಗಳ ವೇಷ ಧರಿಸಿ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ನಕಲಿ ಸ್ವಾಮೀಜಿಗಳಿಗೆ ಗ್ರಾಮಸ್ಥರು ಚಪ್ಪಲಿ ಸೇವೆ ಮಾಡಿ ಪಾಠ ಕಲಿಸಿದ ಘಟನೆ ಬಾಗಲಕೋಟೆ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.

    ಹಾಸನ ಜಿಲ್ಲೆಯ ಅರಸಿಕೇರಿ ಮೂಲದ ಶ್ರೀನಿವಾಸ್ ಮತ್ತು ರವಿ, ಎಂಬುವರೇ ನಕಲಿ ಸ್ವಾಮಿಗಳು. ಇವರು ಕಳ್ಳತನ ಮಾಡಿದ್ದಲ್ಲದೆ, ಗ್ರಾಮದ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಹಾಗೂ ಮಹಿಳೆಯರು ನಕಲಿ ಸ್ವಾಮಿಗಳಿಗೆ ಚಪ್ಪಲಿಯಿಂದ ಸಖತ್ ಥಳಿಸಿದ್ದಾರೆ.

    ನಕಲಿ ಸ್ವಾಮಿಜಿಗಳಿಗೆ ಧರ್ಮದೇಟು ನೀಡಿದ ನಂತರ ಗ್ರಾಮಸ್ಥರು ಶ್ರೀನಿವಾಸ್ ಮತ್ತು ರವಿ ಇಬ್ಬರನ್ನು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದಾರೆ.

    https://www.youtube.com/watch?v=KcsCLb9QCd8

     

     

  • ಸತ್ಯಾರ್ಥಿ ಮನೆಯಿಂದ ನೊಬೆಲ್ ಪ್ರಶಸ್ತಿ ಕಳ್ಳತನ

    ನವದೆಹಲಿ: ಸಾಮಾಜಿಕ ಹೋರಾಟಗಾರ, ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ದಕ್ಷಿಣ ದೆಹಲಿಯ ಸತ್ಯಾರ್ಥಿ ಅವರ ಮನೆಯಲ್ಲಿದ್ದ ನೊಬೆಲ್ ಪ್ರಶಸ್ತಿಪಠಣವನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

    ಕಳೆದ ರಾತ್ರಿ ಕಳ್ಳನ ನಡೆದಿದ್ದು ಮನೆಯ ಕೆಲಸಗಾರರು ಪ್ರಶಸ್ತಿ ಕಳುವಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಸದ್ಯಕ್ಕೆ ಸತ್ಯಾರ್ಥಿ ಅವರು ಮನೆಯಲ್ಲಿಲ್ಲ ಎಂದು ಹೇಳಲಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತರ ಸಮ್ಮೇಳನದಲ್ಲಿ ಭಾಗವಹಿಸಲು ಅವರು ಲ್ಯಾಟಿನ್ ಅಮೆರಿಕಗೆ ಹೋಗಿದ್ದಾರೆ.

    ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಡಲು ಬಚ್ಪನ್ ಬಚಾವೋ ಆಂದೋಲನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ 63 ವರ್ಷದ ಸತ್ಯಾರ್ಥಿ ಅವರಿಗೆ 2014ರಲ್ಲಿ ನೊಬೆಲ್ ಗೌರವ ಸಿಕ್ಕಿತ್ತು. ಪಾಕಿಸ್ತಾನದ ಮಲಾಲಾ ಯುಸಾಫ್‍ಝಾಯಿ ಜೊತೆ ಸತ್ಯಾರ್ಥಿ ಅವರು ನೊಬೆಲ್ ಶಾಂತಿ ಪುರಸ್ಕಾರವನ್ನು ಹಂಚಿಕೊಂಡಿದ್ದರು.

  • ಚಿಕ್ಕೋಡಿ: ಒಂದು ಮನೆ ಸೇರಿ ನಾಲ್ಕು ಅಂಗಡಿಗಳ ಸರಣಿ ಕಳ್ಳತನ

    – ಕಳ್ಳರನ್ನು ಬೆನ್ನಟ್ಟಿದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ

    ಬೆಳಗಾವಿ: ಒಂದು ಮನೆ, ಮೆಡಿಕಲ್ ಸೇರಿ ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

    ನಾಲ್ಕು ಜನರ ಕಳ್ಳರ ತಂಡ ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಅಂಗಡಿಗಳಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ. ಕಳ್ಳರನ್ನು ಕಂಡು ಹಿಡಿಯಲು ಹೋದ ಶ್ರೀಕಾಂತ್ ಹಳಜೋಳೆ ಎಂಬವರ ಮೇಲೆ ಕಳ್ಳರು ರಾಡ್ ದಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಶ್ರೀಕಾಂತ್ ಅವರ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಪಟ್ಟಣದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಿ ಜನರ ಆತಂಕ ನಿವಾರಿಸಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.