Tag: theft

  • ಸೌಂಡ್ ಮಾಡದೇ, ರಸ್ತೆ ದಾಟುವವರೆಗೂ ತಳ್ಳಿ ಬೈಕ್ ಕದ್ದ ಕಳ್ಳರ ಕೈಚಳಕದ ವಿಡಿಯೋ ನೋಡಿ

    ಸೌಂಡ್ ಮಾಡದೇ, ರಸ್ತೆ ದಾಟುವವರೆಗೂ ತಳ್ಳಿ ಬೈಕ್ ಕದ್ದ ಕಳ್ಳರ ಕೈಚಳಕದ ವಿಡಿಯೋ ನೋಡಿ

    ಹುಬ್ಬಳ್ಳಿ: ಸೋಮವಾರ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್ ಕಳ್ಳತನ ಮಾಡಿರುವ ಘಟನೆ ನಗರದ ಅಗಸರ ಓಣಿಯಲ್ಲಿ ನಡೆದಿದೆ. ಇಬ್ಬರು ಕಳ್ಳತನ ಮಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸರೆಯಾಗಿವೆ.

    ಮೊದಲು ರಸ್ತೆ ಬದಿಯಲ್ಲಿ ನಿಂತಿರುವ ಬೈಕ್ ಲಾಕ್ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಬೈಕ್‍ನ ಲಾಕ್ ಓಪನ್ ಆಗದೇಯಿದ್ದಾಗ ಅದೇ ರಸ್ತೆಯ ನಿವಾಸಿ ಪ್ರದೀಪ ಅಗಸಣ್ಣವರ್ ಎಂಬುವರ ಸೇರಿದ್ದ ಬೈಕ್ ಕದ್ದು ಪರಾರಿಯಾಗಿದ್ದಾರೆ.

    ಇನ್ನು ಬೈಕ್ ಕದ್ದು ಪರಾರಿಯಾಗುವಾಗ ಯಾರಿಗೂ ಸೌಂಡ್ ಆಗಬಾರದೆಂದು, ರಸ್ತೆ ದಾಟುವವರೆಗೂ ಬೈಕ್ ತಳ್ಳಿಕೊಂಡು ಹೋಗಿದ್ದಾರೆ. ಇನ್ನು ಕಳ್ಳರ ಕೈಚಳಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=BzJihWU88FQ

     

     

     

  • ಕಳ್ಳತನವಾಗಿದ್ದ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರನ ವಜ್ರ-ಚಿನ್ನಾಭರಣ ಪತ್ತೆ!

    ಕಳ್ಳತನವಾಗಿದ್ದ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರನ ವಜ್ರ-ಚಿನ್ನಾಭರಣ ಪತ್ತೆ!

    ಬಳ್ಳಾರಿ: ಸಂಡೂರು ತಾಲೂಕಿನ ಸುಶೀಲನಗರ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದು, ಈ ಮೂಲಕ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರ ಕೃಷ್ಣಾನಾಯ್ಕ್ ಗೆ ಸೇರಿದ ವಜ್ರಾಭರಣಗಳು ಪತ್ತೆಯಾಗಿವೆ.

    ಸುಶೀಲನಗರ ನಿವಾಸಿ ಖೀರೂನಾಯ್ಕ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಸುಮಾರು 132.700 ಮಿ.ಗ್ರಾಂ ತೂಕದ ವಜ್ರ ಮತ್ತು ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಜ್ರಾಭರಣಗಳ ಮೌಲ್ಯ ಸುಮಾರು 15.90 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

    ಏನಿದು ಪ್ರಕರಣ?: 2017ರ ಜನವರಿ 3 ರಂದು ಸುಶೀಲ ನಗರ ಗ್ರಾಮದ ಉಮಾನಾಯ್ಕ್ ರ ಪತ್ನಿ ಜ್ಯೋತಿಬಾಯಿಯರನ್ನು ಕಟ್ಟಿ, ಜೀವ ಬೆದರಿಕೆ ಹಾಕಿ ಸುಮಾರು 17 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ವಜ್ರದ ಅಭರಣಗಳನ್ನು ದೋಚಿಕೊಂಡು ಪರಾಗಿಯಾಗಿದ್ದರು. ಈ ಸಂಬಂಧ ಜ್ಯೋತಿಬಾಯಿ ಸಂಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಈ ಬಂಗಾರದ ಆಭರಣಗಳು ಬೆಂಗಳೂರಿನ ವಿಶೇಷ ಭೂ ಸ್ವಾಧಿನಾಧಿಕಾರಿ ಹಾಗೂ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರ ಕೃಷ್ಣಾನಾಯ್ಕ್ ಗೆ ಸೇರಿದ್ದಾಗಿದೆ. ಕೃಷ್ಣಾನಾಯ್ಕ್ ರಿಂದ ತಗೆದುಕೊಂಡು ಬಂದಿದ್ದ ಬಂಗಾರದ ಆಭರಣಗಳನ್ನು ಜ್ಯೋತಿಭಾಯಿ ತಮ್ಮ ಮನೆಯಲ್ಲಿರಿಸಿದ್ದಾಗ ಆರೋಪಿಗಳು ಕಳ್ಳತನ ಮಾಡಿದ್ದರೆಂದು ದೂರು ದಾಖಲಾಗಿತ್ತು. ಕಳ್ಳತನದ ಆರೋಪಿ ಖೀರೂನಾಯ್ಕ್ , ಜ್ಯೋತಿಭಾಯಿ ಅವರ ಅಕ್ಕನ ಗಂಡ ಎಂದು ತಿಳಿದುಬಂದಿದೆ.

    ಬಳ್ಳಾರಿ ಡಿಸಿಬಿ ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಸನ್‍ಸಾಬ್ ಮತ್ತು ಪಿ.ಎಸ್.ಐ. ರಷೀದ್ ಅಹಮ್ಮದ್ ನೇತೃತ್ವದಲ್ಲಿ ಎಸ್.ದಿನಕರ, ಎಸ್.ಮಂಜುನಾಥ, ಸುಧೀರ್‍ಕುಮಾರ್, ಎಂ.ನವಾಬ್, ಬಿ.ಎಂ.ಸದ್ಯೋಜಾತಯ್ಯ, ಧಾರಾಸಿಂಗ್ ಉಮಾಮಹೇಶ್ವರ, ಕೆ.ಸುರೇಶ್, ಪಿ.ಲಲಿತಮ್ಮ ಅವರನ್ನು ಒಳಗೊಂಡ ತಂಡವನ್ನು ಈ ಪ್ರಕರಣದ ಪತ್ತೆಗಾಗಿ ನಿಯೋಜಿಸಲಾಗಿತ್ತು.

     

  • ಊರಿಗೆ ಇರೋದು ಒಂದೇ ದೇವಸ್ಥಾನ: ನಿಧಿಗಾಗಿ ದೇವರ ಮೂರ್ತಿಯನ್ನ ಕದ್ದ ಕಳ್ಳರು

    ಊರಿಗೆ ಇರೋದು ಒಂದೇ ದೇವಸ್ಥಾನ: ನಿಧಿಗಾಗಿ ದೇವರ ಮೂರ್ತಿಯನ್ನ ಕದ್ದ ಕಳ್ಳರು

    ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕಿನ ಕರಡಿಹಳ್ಳಿ ಗ್ರಾಮದಲ್ಲಿ ಇರೋದು ಒಂದೇ ದೇವಸ್ಥಾನ. ನಿಧಿ ಆಸೆಗಾಗಿ ಕಳ್ಳರು ದೇವಸ್ಥಾನದಲ್ಲಿರುವ ಮೂರ್ತಿಯನ್ನೇ ಕದ್ದುಕೊಂಡು ಹೋಗಿದ್ದಾರೆ.

    ಗ್ರಾಮದಲ್ಲಿ ಕೇವಲ ನಾಯಕ್ ಮತ್ತು ಭೋವಿ ಜನಾಂಗದ ಜನರೇ ವಾಸವಿದ್ದಾರೆ. ಈ ಗ್ರಾಮಸ್ಥರು ನಿತ್ಯ ಪೂಜಿಸುತ್ತಿದ್ದ ಪುರಾತನ ಕಾಲದ ವಿಜಯನಗರದ ಅರಸರ ಕಾಲದ ಈಶ್ವರ ದೇವಾಲಯದಲ್ಲಿನ ಬಸವಣ್ಣನ ಮೂರ್ತಿಯನ್ನೇ ಮಾರ್ಚ್ 17 ರಂದು ಕಳ್ಳರು ಕಳ್ಳತನ ಮಾಡಿದ್ದಾರೆ. ಹೀಗಾಗಿ ಗ್ರಾಮಸ್ಥರಿಗೆ ಪೂಜೆ ಮಾಡಲು ದೇವರ ವಿಗ್ರಹವೇ ಇಲ್ಲದಂತಾಗಿದೆ.

    ಗ್ರಾಮಸ್ಥರು ದೇವರ ಮೂರ್ತಿಯನ್ನು ಹುಡುಕಿ ಕೊಡದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಗುಡೆಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

  • ತುಮಕೂರು: ಬಾರ್ ಬೀಗ ಮುರಿದು ಕಳ್ಳತನ- ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

    ತುಮಕೂರು: ಬಾರ್ ಬೀಗ ಮುರಿದು ಕಳ್ಳತನ- ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

    – ಕಲಬುರಗಿಯ ದಾಲ್ ಮಿಲ್‍ನಲ್ಲಿ ಕಳ್ಳರ ಕಾಟ

    ತುಮಕೂರು/ಕಲಬುರಗಿ: ಕುದುರೆ ಗಾಡಿಯಲ್ಲಿ ಬಂದ ನಾಲ್ಕು ಜನ ಕಳ್ಳರ ಗುಂಪು ತುಮಕೂರಿನ ಬಾರ್ ವೊಂದರ ಬೀಗ ಮುರಿದು ಕಳ್ಳತನ ಮಾಡಿದೆ. ತುಮಕೂರಿನ ಹನುಮಂತಪುರದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಕಿಂಗ್ಸ್ ಕಾಟೇಜ್ ಬಾರ್ ನಲ್ಲಿ ಕಳ್ಳತನ ನಡೆದಿದೆ.

    ಅಂಗಡಿಯಲ್ಲಿ ದುಬಾರಿ ಬೆಲೆಯ ಡ್ರಿಂಕ್ಸ್, ಟಿವಿ, ಡಿವಿಡಿ, ಜೊತೆಗೆ 30 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಕಳ್ಳರು ಕುದುರೆ ಗಾಡಿಯಲ್ಲಿ ಬಂದು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

    ಕಲಬುರಗಿ ದಾಲ್ ಮಿಲ್ ಮಾಲೀಕರು ಕಳೆದ ಕೆಲ ವರ್ಷಗಳಿಂದ ಕಳ್ಳರ ಹಾವಳಿಯಿಂದ ಕಂಗೆಟ್ಟಿದ್ದಾರೆ. ಇದೀಗ ಮತ್ತೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು ಅದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಕಪನೂರ ಇಂಡಸ್ಟ್ರೀಸ್‍ನ ಸಂಗಾಪುರಿ ಪಲ್ಸಸ್, ಲಕ್ಷ್ಮೀ ದಾಲ್ ಮಿಲ್ ಸೇರಿದಂತೆ ಒಟ್ಟು 4 ದಾಲ್ ಮಿಲ್‍ಗಳಲ್ಲಿ ಇದೀಗ ಮತ್ತೆ ಕಳ್ಳತನವಾಗಿವೆ. ಏಪ್ರಿಲ್ 4 ಮತ್ತು ಏಪ್ರಿಲ್ 6ರ ಮಧ್ಯರಾತ್ರಿ ಈ ಘಟನೆ ನಡೆದಿದೆ.

    ಕಳೆದ ಎರಡು ವರ್ಷದಿಂದ ನಿರಂತರ ಕಳ್ಳತನ ನಡೆಯುತ್ತಿರುವ ಕಾರಣ ಔಟ್ ಪೊಲೀಸ್ ಚೆಕ್ ಪೋಸ್ಟ್ ಮಾಡಲಾಗಿದೆ. ಆದರೆ ಕಳ್ಳರ ಹಾವಳಿ ಮಾತ್ರ ನಿರಂತರವಾಗಿ ನಡೆಯುತ್ತಿರುವ ಕಾರಣ ದಾಲ್ ಮಿಲ್ ಮಾಲೀಕರ ನಿದ್ದೆಗೆಡಿಸಿದೆ. ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=uclcQMMwub4

    https://www.youtube.com/watch?v=ahATmkxzXa8

  • ಮನೆಯ ಮುಂದೆ ನಿಲ್ಲಿಸಿದ ಕಾರಿನ ಟಯರ್ ಕದ್ದ ಕಳ್ಳರು

    ಮನೆಯ ಮುಂದೆ ನಿಲ್ಲಿಸಿದ ಕಾರಿನ ಟಯರ್ ಕದ್ದ ಕಳ್ಳರು

    ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಕಾರುಗಳನ್ನ ಕದಿಯುತ್ತಿದ್ದ ಖತರ್ನಾಕ್ ಕಳ್ಳರು, ಇದೀಗ ವಾಹನಗಳ ಬಿಡಿಭಾಗಗಳಿಗೂ ಕನ್ನ ಹಾಕಲು ಆರಂಭಿಸಿದ್ದಾರೆ.

    ನಗರದ ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕವನ್ನ ತೋರಿದ್ದಾರೆ. ಇಲ್ಲಿನ ಗಜಾರಿಯಾ ಬಡಾವಣೆಯಲ್ಲಿ ವಾಸವಾಗಿರುವ ಚಂದ್ರಶೇಖರ್ ಎಂಬವರು ಐದು ದಿನದ ಹಿಂದೆಯಷ್ಟೇ ಮಾರುತಿ ಕಂಪನಿಯ ಹೊಸ ಕಾರನ್ನ ಖರೀದಿಸಿದ್ದರು. ಆದರೆ ಕಳೆದ ರಾತ್ರಿ ತಮ್ಮ ಮನೆ ಮುಂದೆಯ ರಸ್ತೆಯಲ್ಲಿ ನಿಲ್ಲಿಸಿದ್ದ ವೇಳೆ ಐನಾತಿ ಕಳ್ಳರು ಕಾರಿನ ಕೆಳಗೆ ಕಲ್ಲಿಟ್ಟು ನಾಲ್ಕು ಚಕ್ರಗಳನ್ನ ಕದ್ದು ಚಾಣಾಕ್ಷತೆಯಿಂದ ಸ್ಥಳದಿಂದ ಪರಾರಿಯಾಗಿದ್ದಾರೆ.

    ಇದನ್ನೂ ಓದಿ: 10 ರೂ. ಸ್ಕೇಲ್ ಬಳಸಿ ಕಾರುಗಳ ಕಳವು – ನಂತ್ರ ಅದೇ ಕಾರಲ್ಲಿ ಕುರಿ ಕಳ್ಳತನ ಮಾಡ್ತಿದ್ದ!

    ಬೆಳಗ್ಗೆ ಮನೆಯಿಂದ ಹೊರ ಬಂದು ಹೊಸ ಕಾರನ್ನ ನೋಡಿದರೆ ಅದರ ಟೈರ್‍ಗಳನ್ನು ಕಳ್ಳತನ ಮಾಡಲಾಗಿದೆ. ಚಂದ್ರಶೇಖರ್ ಅವರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚಿಗೆ ನೆಲಮಂಗಲ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ನೆಲಮಂಗಲ: ಅಡ್ರೆಸ್ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿಯಾದ್ರು

  • ಸಿಗ್ನಲ್‍ನಲ್ಲಿ ಕಾರು ಹತ್ತಿ ಕತ್ತಲು ಇರೋ ಕಡೆ ಕರ್ಕೊಂಡು ಹೋಗಿ ದೋಚ್ತಾರೆ ಸುಂದ್ರಿಯರು!

    ಸಿಗ್ನಲ್‍ನಲ್ಲಿ ಕಾರು ಹತ್ತಿ ಕತ್ತಲು ಇರೋ ಕಡೆ ಕರ್ಕೊಂಡು ಹೋಗಿ ದೋಚ್ತಾರೆ ಸುಂದ್ರಿಯರು!

    ಬೆಂಗಳೂರು: ಇಷ್ಟು ದಿನ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯಗಳಂತಹ ಪ್ರಕರಣಗಳು ನಡೆಯುತ್ತಿತ್ತು. ಆದ್ರೆ ಇದೀಗ ಹುಡುಗಿಯರೇ ಒಂಟಿಯಾಗಿ ಓಡಾಡೋ ಹುಡುಗರು, ವೃದ್ಧರನ್ನ ದರೋಡೆ ಮಾಡುವ ಘಟನೆಗಳು ನಡೆಯುತ್ತಿವೆ.

    ಹೌದು. ಬೆಂಗಳೂರಿನಲ್ಲಿ ತಡ ರಾತ್ರಿ ರಸ್ತೆ ಬದಿ ನಿಂತು ಸ್ಮೈಲ್ ಕೊಡುವ ಯುವತಿಯರ ಎದುರು ನೀವೇನಾದ್ರು ಗಾಡಿ ನಿಲ್ಲಿಸಿದ್ರೆ ನಿಮ್ಮ ಕಥೆ ಮುಗಿಯಿತು. ಒಂಟಿಯಾಗಿ ಓಡಾಡೊ ಪುರುಷರು, ಸಂಜೆ ವಾಕಿಂಗ್ ಮಾಡೊ ವೃದ್ಧರದಿಂದ ಹಣ, ಮೊಬೈಲ್ ದೋಚಿ ಪರಾರಿಯಾಗ್ತಾರೆ.

    ನಡೆದಿದ್ದೇನು?: 31 ವರ್ಷದ ಗೌಡ ಎಂಬವರು ಸ್ನೇಹಿತರನ್ನ ಡ್ರಾಪ್ ಮಾಡಿ ಇಂದಿರಾನಗರದ ಬಳಿ ಬಂದಾಗ ಯುವತಿಯೊಬ್ಬಳು ಸ್ಮೈಲ್ ಕೊಡ್ತಾಳೆ. ಅಂತೆಯೇ ಕಾರು ಸಿಗ್ನಲ್‍ನಲ್ಲಿ ನಿಲ್ಲಿಸಿದಾಗ ಯುವತಿ ಕಾರು ಹತ್ತಿದ್ಳು. ಮಾತಾಡ್ತಾ ಇದ್ದ ಹಾಗೆ ಮತ್ತೊಬ್ಬ ಯುವತಿಯೂ ಕಾರು ಹತ್ತಿಯೇ ಬಿಟ್ಟಳು. ಈ ವೇಳೆ ಗೌಡ ಕಾರು ಇಳಿಯುವಂತೆ ಹೇಳಿದ್ರು. ಆದ್ರೆ ಯುವತಿ ಗೌಡ ರನ್ನು ಹಿಂದಿನಿಂದ ತಬ್ಬಿಕೊಂಡು ಕಿಸ್ ಕೇಳಿದ್ದಾಳೆ. ಮಾತ್ರವಲ್ಲದೇ ಕತ್ತಲು ಇರೋ ಕಡೆ ಕಾರು ಚಲಾಯಿಸವಂತೆ ಹೇಳಿದ್ದಾಳೆ. ಈ ಸಂದರ್ಭದಲ್ಲಿ ಗೌಡ್ರು ಪೊಲೀಸ್ ಠಾಣೆಗೆ ಹೋಗ್ತೀನಿ ಅಂದ್ರು. ಇದರಿಂದ ಭಯಬಿದ್ದ ಯುವತಿಯರು ಕಾರಿನಿಂದ ಇಳಿದಿದ್ದಾರೆ. ಮನೆಗೆ ಹೋಗಿ ನೋಡಿದಾಗ ಗೌಡ್ರುಗೆ ಶಾಕ್ ಕಾದಿತ್ತು. ಯಾಕಂದ್ರೆ ಅವರ ಬಳಿಯಿದ್ದ 50 ಗ್ರಾಂ ಚಿನ್ನದ ಸರ ಕಳವಾಗಿತ್ತು.

    ಇದೇ ರೀತಿಯ ಅನುಭವ ಗೌಡ ಅವರ ಸ್ನೇಹಿತರಿಗೂ ಆಗಿತ್ತು. ಹಲಸೂರು ಬಳಿ ಯುವತಿಯೊಬ್ಬಳು ಕಾರು ಹತ್ತಿ ತನ್ನ ಟೀಶರ್ಟ್ ತೆಗೆದು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾಳೆ. ಒಂದು ವೇಳೆ ನೀನು ಹಣ ಕೊಡದಿದ್ದರೆ ಕೂಗಿಕೊಳ್ಳುವಾಗಿ ಬೆದರಿಸಿದ್ದಾಳೆ. ಹಣ ಕೊಡಲೆಂದು ವ್ಯಾಲೆಟ್ ತೆಗೆದಾಗ ವ್ಯಾಲೆಟ್ ಹಾಗೂ ಮೊಬೈಲ್ ಕಸಿದು ಯುವತಿ ಪರಾರಿಯಾಗಿದ್ದಾಳೆ.

    61 ವರ್ಷದ ನಿವೃತ್ತ ಡಿಆರ್‍ಡಿಒ ಅಧಿಕಾರಿಗೂ ಇದೇ ಅನುಭವ. ಅಧಿಕಾರಿ ನ್ಯೂ ತಿಪ್ಪಸಂದ್ರದ ವಿಶ್ವೇಶ್ವರಯ್ಯ ಪಾರ್ಕ್ ಬಳಿ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಬೆದರಿಸಿ ಹಣ ಲಪಾಟಾಯಿಸಿದ್ದಾಳೆ.

    ಹೆಲ್ಮೆಟ್ ಹಾಕಿದ್ದ ಯುವತಿ ಅಧಿಕಾರಿ ಬಳಿ ಬಂದು ನಾನು ಯಾರು ಗೊತ್ತಾಯ್ತ ಅಂದ್ಲು. ಎಲ್ಲೋ ನೋಡಿದ ಹಾಗಿದೆ ಹೆಲ್ಮೆಟ್ ತೆಗೆಯಿರಿ ಅಂತಾ ಅಧಿಕಾರಿ ಹೇಳಿದ್ರು. ಅಂತೆಯೇ ಹೆಲ್ಮೆಟ್ ತೆಗೆದು ಯುವತಿ ಬೆದರಿಸಲು ಆರಂಭಿಸಿದ್ದಾಳೆ. ಈ ವೇಳೆ ಮಾನ ಮರ್ಯಾದೆಗೆ ಅಂಜಿ ನಿವೃತ್ತ ಅಧಿಕಾರಿ ಹಣ ಕೊಟ್ಟಿದ್ದಾರೆ.

    ಸದ್ಯ ಈ ಯುವತಿಯರ ಗ್ಯಾಂಗ್ ಬಗ್ಗೆ ಜೆಬಿ ನಗರ, ಇಂದಿರಾನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.

  • ಮಹಿಳೆಯರೇ, ದೇವಸ್ಥಾನಗಳಲ್ಲಿ ಭಕ್ತಿಯಲ್ಲಿ ಮೈಮರೆಯುವ ಮುನ್ನ ಈ ಸುದ್ದಿ ಓದಿ

    ಮಹಿಳೆಯರೇ, ದೇವಸ್ಥಾನಗಳಲ್ಲಿ ಭಕ್ತಿಯಲ್ಲಿ ಮೈಮರೆಯುವ ಮುನ್ನ ಈ ಸುದ್ದಿ ಓದಿ

    ಹಾಸನ: ದೇವಸ್ಥಾನಗಳಲ್ಲಿ ಭಕ್ತಿ ಭಾವದಲ್ಲಿರುವ ಭಕ್ತರು ಮೈಮರೆಯುವ ಮುನ್ನ ಸ್ವಲ್ಪ ಎಚ್ಚರವಾಗಿರಬೇಕು. ದೇವಸ್ಥಾನದಲ್ಲಿ ಬರುವ ಮಹಿಳೆಯರು ಭಕ್ತಿಯಲ್ಲಿ ಮೈಮರೆತ್ರೆ, ಇತ್ತ ಕಳ್ಳಿಯರು ತಮ್ಮ ಕೈಚಳಕ ತೋರುತ್ತಾರೆ. ಶ್ರೀರಂಗಪಟ್ಟಣದ ಪ್ರಸಿದ್ಧ ನಿಮಿಷಾಂಭ ದೇವಸ್ಥಾನದಲ್ಲಿ ನಡೆದಿರುವ ಕಳ್ಳಿಯರ ಕೈಚಳಕದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಹಾಸನ ಮೂಲದ ಭವ್ಯ ಎಂಬವರು ನಿಮಿಷಾಂಭ ದೇವಸ್ಥಾನದಲ್ಲಿ ದರ್ಶನ ಪಡೆದು ಕುಂಕುಮ ನೀಡುವ ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಕಳ್ಳಿಯರು ತಮ್ಮ ಕರಾಮತ್ ತೋರಿಸಿದ್ದಾರೆ. ಸರದಿ ಸಾಲಿನಲ್ಲಿ ಬರುವಂತೆ ನಟಿಸಿರುವ ಕಳ್ಳಿಯರು ಭವ್ಯರನ್ನು ಹಿಂಬಾಲಿಸಿದ್ದಾರೆ. ಅರ್ಚಕರಿಂದ ಕುಂಕುಮ ಪಡೆಯುವ ನೆಪದಲ್ಲಿ ಬ್ಯಾಗ್‍ನಿಂದ ಪರ್ಸ್‍ನ್ನು ಕದ್ದು, ತನ್ನ ಸಹವರ್ತಿ ಕಳ್ಳಿಗೆ ನೀಡುತ್ತಾಳೆ. ಆ ಕಳ್ಳಿ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

    ಭವ್ಯ-ಪರ್ಸ್ ಕಳೆದುಕೊಂಡವರು

    ಮನೆಗೆ ಬಂಬ ಬಳಿಕ ಭವ್ಯ ತಮ್ಮ ಬ್ಯಾಗ್‍ನಲ್ಲಿ ಪರ್ಸ್ ಇಲ್ಲದೇ ಇರೋದನ್ನು ಗಮನಿಸಿದ್ದಾರೆ. ಪರ್ಸ್ ನಲ್ಲಿ ಮೂರು ಸಾವಿರ ರೂಪಾಯಿ ಹಣವಿದ್ದಿದ್ದು ಎಂದು ಸುಮ್ಮನಾಗುವಷ್ಟರಲ್ಲಿ ಅವರ ಬ್ಯಾಂಕ್ ಖಾತೆಯಿಂದ 40 ಸಾವಿರ ಹಣ ಡ್ರಾ ಆಗಿದೆ ಅಂತಾ ಮೆಸೇಜ್ ಬಂತು.

    ಇದನ್ನೂ ಓದಿ: ಪೋಷಕರೇ, ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೋಗುವ ಮುನ್ನ ಈ ಸುದ್ದಿ ಓದಿ

    ಸದ್ಯ ಎರಡು ಎಟಿಎಂ ಕಾರ್ಡ್‍ಗಳು ವೋಟರ್ ಐಡಿ ಜೊತೆಗೆ ಮೂರು ಸಾವಿರ ನಗದು ಕಳೆದುಕೊಂಡಿರುವ ಭವ್ಯ ಶ್ರೀರಂಗಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳಿಯರ ಕೈಚಳಕ ಸ್ಪಷ್ಟವಾಗಿ ಕಾಣುತ್ತಿದೆ. ಪೊಲೀಸರು ಕ್ರಮ ಕೈಗೊಂಡ್ರೆ ನಮ್ಮ ಹಣ ನಮಗೆ ಸಿಗುತ್ತೆ. ನಮಗೆ ನ್ಯಾಯ ಕೊಡಿಸಿ ಎಂದು ಭವ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.

    https://youtu.be/EYaWW-Nl2Bw

     

  • ಮಂಡ್ಯ: ಭಕ್ತ ಮಂಗಳಾರತಿ ತಟ್ಟೆಯಿಂದ ಹಣ ಎಗರಿಸೋ ವೀಡಿಯೋ ವೈರಲ್!

    ಮಂಡ್ಯ: ಭಕ್ತ ಮಂಗಳಾರತಿ ತಟ್ಟೆಯಿಂದ ಹಣ ಎಗರಿಸೋ ವೀಡಿಯೋ ವೈರಲ್!

    ಮಂಡ್ಯ: ದೇವರ ಪೂಜೆಗೆಂದು ಬಂದ ಭಕ್ತ ಮಹಾಶಯನೊಬ್ಬ ಮಂಗಳಾರತಿ ತಟ್ಟೆಯಲ್ಲಿದ್ದ ಹಣಕ್ಕೆ ಆಸೆಬಿದ್ದು ದೇವರನ್ನೇ ಮರೆತು ಹಣ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೂರು ದಿನಗಳ ಹಿಂದೆ ಮಂಡ್ಯ ಜಿಲ್ಲೆ, ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಭಕ್ತಮಹಾಶಯನೊಬ್ಬ ಬಂದಿದ್ದಾನೆ. ದೇವರಿಗೆ ಕೈಮುಗಿಯಲು ನಿಂತ ಭಕ್ತನಿಗೆ ಪಕ್ಕದಲ್ಲೇ ಇದ್ದ ಮಂಗಳಾರತಿ ತಟ್ಟೆ ಕಣ್ಣಿಗೆ ಬಿದ್ದಿದೆ. ಅಷ್ಟಕ್ಕೆ ಭಕ್ತ ಮಹಾಶಯನ ಭಕ್ತಿ ಹಾರಿ ಹೋಗಿ ತನ್ನ ಸುತ್ತಮುತ್ತ ಯಾರಾದರೂ ಇದ್ದಾರ ಅಂತಾ ಗಮನಿಸಿದ್ದಾನೆ. ಬಳಿಕ ದೇವರಲ್ಲಿ ಬೇಡಿಕೊಳ್ಳುವವನ ರೀತಿ ಮಂಗಳಾರತಿ ತಟ್ಟೆ ಬಳಿ ಕುಳಿತಿದ್ದಾನೆ. ತನ್ನನ್ನು ಯಾರೂ ನೋಡುತ್ತಿಲ್ಲ ಎಂದು ಖಾತ್ರಿಯಾದ ನಂತರ ಮಂಗಳಾರತಿ ತಟ್ಟೆಯಲ್ಲಿದ್ದ ಐನೂರು ರೂಪಾಯಿ ನೋಟು ಎಗರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಭಕ್ತ ಮಹಾಶಯನ ಕೃತ್ಯ ದೇವಾಲಯದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೆಯಾದ್ಯಂತ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=Wv1R74u0OC8&feature=youtu.be

  • ಬಸವೇಶ್ವರನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಮ್ಯೂಸಿಕ್ ಸಿಸ್ಟಂ ಕಳ್ಳತನ

    ಬಸವೇಶ್ವರನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಮ್ಯೂಸಿಕ್ ಸಿಸ್ಟಂ ಕಳ್ಳತನ

    ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಳ್ಳತನ ಮಾಡಿರೋ ಘಟನೆ ಬಸವೇಶ್ವರ ನಗರದ ಶಿವನಗರ 9ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ ಮನೆ ಮುಂದೆ ನಿಂತಿರುವ ಕಾರಿನ ಗಾಜು ಹೊಡೆದಿರುವ ಕಿಡಿಗೇಡಿಗಳು, ಕಾರಿನಲ್ಲಿದ್ದ ಮ್ಯೂಸಿಕ್ ಸಿಸ್ಟ್‍ಂಗಳನ್ನು ಕದ್ದೊಯ್ದಿದ್ದಾರೆ. ಈ ಹಿಂದೆ ಹಲವು ಸಹ ಈ ರಸ್ತೆಯಲ್ಲಿ ಕಳ್ಳತನ ನಡೆದಿತ್ತು.

    ದ್ವಿಚಕ್ರ ವಾಹನ ಕಳವು: ಇದೇ ರಸ್ತೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನೂ ಕೂಡ ದುಷ್ಕರ್ಮಿಗಳು ಕಳವುಗೈದಿದ್ದಾರೆ. ಬೈಕ್ ಕಳವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೇ ಕಳ್ಳರಿಂದ ಕಾರಿನಲ್ಲಿದ್ದ ಮ್ಯೂಸಿಕ್ ಸಿಸ್ಟ್‍ಂ ಕಳವು ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

    ಈ ಎರಡೂ ಘಟನೆಗಳ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೀಡಿಯೋ: ಕಾರಿನಲ್ಲಿ ಬಂದು 1 ಲಕ್ಷ ರೂ. ಮೌಲ್ಯದ 15 ಸೀರೆ ಕದ್ದು ಪರಾರಿಯಾದ ಖತರ್ನಾಕ್ ಕಳ್ಳಿಯರು

    ವೀಡಿಯೋ: ಕಾರಿನಲ್ಲಿ ಬಂದು 1 ಲಕ್ಷ ರೂ. ಮೌಲ್ಯದ 15 ಸೀರೆ ಕದ್ದು ಪರಾರಿಯಾದ ಖತರ್ನಾಕ್ ಕಳ್ಳಿಯರು

    ಮಂಡ್ಯ: ಗ್ರಾಹಕರ ವೇಷದಲ್ಲಿ ಬಂದ ನಾಲ್ವರು ಖತರ್ನಾಕ್ ಮಹಿಳೆಯರು ಸುಮಾರು 1 ಲಕ್ಷ ರೂ. ಮೌಲ್ಯದ 15 ಸೀರೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿರುವ ರಂಗೋಲಿ ಸಿಲ್ಕ್ಸ್ ಬಟ್ಟೆ ಅಂಗಡಿಗೆ ಶುಕ್ರವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ನಾಲ್ವರು ಮಹಿಳೆಯರು ಬಂದಿದ್ದಾರೆ. ಕಾರಿನಲ್ಲಿ ಬಂದಿದ್ದ ತಮಿಳು ಮಾತನಾಡುತ್ತಿದ್ದ ಮಹಿಳೆಯರು ಸೀರೆ ತೆಗೆದುಕೊಳ್ಳಲು ಬಂದಿರುವುದಾಗಿ ಹೇಳಿ ಹಲವಾರು ಸೀರೆಗಳನ್ನ ತೆಗೆಸಿ ನೋಡುವ ನಾಟಕವಾಡಿದ್ದಾರೆ. ನಂತರ ತಮ್ಮ ಸುತ್ತ ಸೀರೆಯನ್ನು ಅಡ್ಡ ಹಿಡಿದು ಸೀರೆ ನೋಡುತ್ತಿರುವಂತೆ ನಟಿಸಿ ಅಂಗಡಿಯವನಿಗೆ ತಿಳಿಯದಂತೆ ತಾವು ಉಟ್ಟಿದ್ದ ಸೀರೆಯೊಳಗೆ ಹೊಸ ಸೀರೆಗಳನ್ನ ಬಚ್ಚಿಟ್ಟುಕೊಂಡಿದ್ದಾರೆ.

    ನಾಲ್ವರು ಮಹಿಳೆಯರು ಅಂಗಡಿಯ ಕೆಲಸಗಾರನ ಎದುರೇ ಸೀರೆಯನ್ನ ಅಡ್ಡ ಹಿಡಿದು 15 ಸೀರೆ ಎಗರಿಸಿ ತಾವು ಬಂದ ಕಾರಿನಲ್ಲೇ ಪರಾರಿಯಾಗಿದ್ದಾರೆ. ಮಹಿಳೆಯರು ಹೋದ ನಂತರ ಸೀರೆ ಕಳ್ಳತನ ಆಗಿರುವುದು ಗೊತ್ತಾಗಿದ್ದು ಅಂಗಡಿ ಮಾಲೀಕ ರವೀಂದ್ರ ಈ ಬಗ್ಗೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    https://www.youtube.com/watch?v=xRJvXG2noGo