Tag: The separate state

  • ಉತ್ತರ ಕರ್ನಾಟಕ ಅಭಿವೃದ್ಧಿ: ಸಿಎಂ ಎಚ್‍ಡಿಕೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

    ಉತ್ತರ ಕರ್ನಾಟಕ ಅಭಿವೃದ್ಧಿ: ಸಿಎಂ ಎಚ್‍ಡಿಕೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

    ದಾವಣಗೆರೆ: ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡದಿದ್ದರೆ ಎಲ್ಲಾ ಮಠಾಧೀಶರು ಪ್ರತ್ಯೇಕ ರಾಜ್ಯದ ಪರ ನಿಲ್ಲಬೇಕಾಗುತ್ತದೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.

    ನಗರದ ತೊಗಟಿವೀರಪ್ಪ ಕಲ್ಯಾಣ ಮಂಟಪದಲ್ಲಿ ಮಾತನಾಡಿದ ಅವರು, ಸಿ.ಎಂ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿ, ಸರ್ಕಾರ ರಚನೆಯಾದ ಬಳಿಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಉತ್ತರ ಕರ್ನಾಟಕವನ್ನು ಮೈಸೂರು, ತುಮಕೂರು, ಬೆಂಗಳೂರು, ಹಾಸನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.

    ಉತ್ತರ ಕರ್ನಾಟಕದಲ್ಲಿ ಕೇವಲ ಇಲ್ಲ, ಇಲ್ಲ ಎನ್ನುವ ಧ್ವನಿ ಕೇಳಿಬರುತ್ತಿದೆ. ಕೇವಲ ದಕ್ಷಿಣ ಕರ್ನಾಟಕದ ಭಾಗಗಳು ಮಾತ್ರ ಅಭಿವೃದ್ಧಿಯಾಗಿವೆ. ಬೆಂಗಳೂರಿನಿಂದ 50 ಕಿ.ಮೀ. ದೂರವಿರುವ ಹಳ್ಳಿಗಳಿಗೂ ಮೂಲಸೌಕರ್ಯ ನೀಡಲಾಗಿದೆ. ಆದರೆ ಉತ್ತರ ಕರ್ನಾಟಕ ನಗರ ಪ್ರದೇಶದಲ್ಲಿ ಇಂತಹ ಮೂಲಸೌಕರ್ಯಗಳಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಬಳಕೆ ಮಾಡಿ ಬಿಟ್ಟ ಬಸ್ಸುಗಳನ್ನು ನಮ್ಮ ಹಳ್ಳಿಗಳಿಗೆ ಬಿಡಲಾಗುತ್ತದೆ. ಇದು ಯಾವ ನ್ಯಾಯ? ತಾರತಮ್ಯ ಹೀಗೆ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯವಾಗುತ್ತದೆ ಎಂದು ಕಿಡಿಕಾರಿದರು.

    ಜುಲೈ 31ಕ್ಕೆ ಉ.ಕ ಶ್ರೀಗಳ ಸಭೆ:
    ಇದೇ ವೇಳೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜುಲೈ 31ರಂದು ಉತ್ತರ ಕರ್ನಾಟಕ ಸ್ವಾಮೀಜಿಗಳ ಸಭೆ ಆಯೋಜಿಸಲಾಗಿದೆ. ನಮ್ಮ ಪ್ರತಿಭಟನೆ ವ್ಯಾಪಕವಾಗುವ ಮುನ್ನವೇ ಸಂಬಂಧಪಟ್ಟ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ನಿಗಾವಹಿಸಬೇಕು. ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಮಾಡಬೇಕು. ಜೊತೆಗೆ 20 ಮುಖ್ಯ ಇಲಾಖೆಗಳು ಉತ್ತರ ಕರ್ನಾಟಕದಲ್ಲಿ ವಿಕೇಂದ್ರೀಕೃತವಾಗಬೇಕು. ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದರೆ ಪ್ರತ್ಯೇಕ ರಾಜ್ಯದ ಕೂಗು ಶಮನವಾಗುತ್ತದೆ. ಇಲ್ಲದಿದ್ದರೇ ಪ್ರತಿಭಟನೆ ಬಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ತಟ್ಟಲಿದೆ ಎಂದು ಖಾರವಾಗಿಯೇ ನುಡಿದರು.

  • ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳುವವರು ಕಮಂಗಿಗಳು: ತೋಂಟದಾರ್ಯ ಶ್ರೀ

    ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳುವವರು ಕಮಂಗಿಗಳು: ತೋಂಟದಾರ್ಯ ಶ್ರೀ

    ಬಳ್ಳಾರಿ: ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳುವ ಶಾಸಕರು, ಹೋರಾಟಗಾರು ಕಮಂಗಿಗಳು ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಆಯೋಜಿಸಿದ್ದ ದಿವಂಗತ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 78 ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಪ್ರತ್ಯೇಕ ರಾಜ್ಯ ಕೇಳುವುದು ಹೇಗಿದೆ ಎಂದರೆ ಪತಿಗೆ ಹೆದರಿಸುವುದಕ್ಕೆ ಪತ್ನಿ ಪದೇ ಪದೇ ಬಾವಿಗೆ ಬೀಳುತ್ತೇನೆ ನೋಡು ಎನ್ನುವಂತಿದೆ ಎಂದು ಹೇಳಿ ಪರೋಕ್ಷವಾಗಿ ಶಾಸಕ ಶ್ರೀರಾಮುಲು, ಉಮೇಶ ಕತ್ತಿ ಸೇರಿದಂತೆ ಹಲವು ನಾಯಕರ ವಿರುದ್ಧ ವ್ಯಂಗ್ಯವಾಡಿದರು.

    ಕರ್ನಾಟಕ ಏಕೀಕರಣವಾಗಿ 70 ವರ್ಷಗಳು ಕಳೆದಿವೆ. ಈಗ ಮತ್ತೇ ಪ್ರತ್ಯೇಕ ಮಾಡುವುದು ಹುಡುಗಾಟಿಕೆ ಅಲ್ಲ. ಒಂದು ವೇಳೆ ಕರ್ನಾಟಕ ಒಡೆಯುವ ಕೆಲಸಕ್ಕೆ ಮುಂದಾದರೆ ಅದು ಮಹಾ ಪಾಪದ ಕೆಲಸವಾಗುತ್ತದೆ. ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದ್ದರೆ ಚರ್ಚೆ ನಡೆಸಿ, ಹೋರಾಟ ಮಾಡಿ. ಆದರೆ ಅದೂ ಬಿಟ್ಟು ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳಲು ಮುಂದಾಗುವ ರಾಜಕಾರಣಿಗಳು ಕಮಂಗಿಗಳು ಎಂದು ಹೇಳಿದರು.