Tag: The Kashmir Files

  • ಇವತ್ತಿನ ತೀರ್ಪು ನ್ಯಾಯಯುತವಾಗಿದೆ: ನಟಿ ತಾರಾ

    ಇವತ್ತಿನ ತೀರ್ಪು ನ್ಯಾಯಯುತವಾಗಿದೆ: ನಟಿ ತಾರಾ

    ಗದಗ: ಶಾಲೆಯಲ್ಲಿ ಎಲ್ಲವನ್ನು ಸಮನಾಗಿ ಕಾಣುವುದೇ ಸಮವಸ್ತ್ರ. ಇವತ್ತಿನ ತೀರ್ಪು ನ್ಯಾಯಯುತವಾಗಿದೆ ಎಂದು ಚಿತ್ರನಟಿ ತಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹಿಜಬ್ ತೀರ್ಪು ಕುರಿತಂತೆ ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ನಮ್ಮ ಜಾತಿ, ಧರ್ಮ ಆಚರಣೆ ಮಾಡಲಿ. ಎಲ್ಲಾ ಜಾತಿ ಧರ್ಮ ಒಗ್ಗೂಡಿ ಹೋಗುವುದು ಅಂದರೆ ಅದೇ ಭಾರತ ದೇಶ. ಶಾಲೆಯಲ್ಲಿ ಸಮವಸ್ತ್ರ ಅಂದರೆ ಬಡವ, ಶ್ರೀಮಂತ, ಜಾತಿ ಮತ ಬೇಧ ಏನೂ ಇಲ್ಲದೆ ಕೂತು ಪಾಠ ಕಲಿಯುವ ಒಂದು ದೇವಾಲಯವಾಗಿದೆ. ಒಂದು ದೇವಾಲಯದಲ್ಲಿ ಜಾತಿ-ಧರ್ಮ ಪಾಲಿಸಬಾರದು. ಶಾಲೆಯಲ್ಲಿ ಎಲ್ಲವನ್ನು ಸಮನಾಗಿ ಕಾಣುವುದೇ ಸಮವಸ್ತ್ರ. ಇವತ್ತಿನ ತೀರ್ಪು ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರ ಪ್ರಚೋದನೆ ಮಾತುಗಳನ್ನು ಕೇಳ್ಬೇಡಿ, ನಿಮಗೆ ನಿಮ್ಮ ಭವಿಷ್ಯ ಮುಖ್ಯ: ರೇಣುಕಾಚಾರ್ಯ

    ಇದೇ ವೇಳೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಂತೆ ಪ್ರತಿಕ್ರಿಯಿಸಿದ ಅವರು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದೆ. ಹಿಂದೂ ರಾಷ್ಟ್ರ ಎಂದು ಇಡೀ ಪ್ರಪಂಚದಲ್ಲಿ ಇರುವ ಏಕೈಕ ರಾಷ್ಟ್ರ ಭಾರತ. ಈಗಲೂ ನಾವು ಎಚ್ಚೆತ್ತುಕೊಳ್ಳದೇ ಹೋದರೆ ನಮಗೆ ಕಾಶ್ಮೀರದ ಒಂದು ಘೋರವಾದ ನಿಜ ಇಡೀ ರಾಷ್ಟ್ರಕ್ಕೆ ಹಬ್ಬುತ್ತಿತ್ತೇನೋ.. ಸದ್ಯ ನಮ್ಮ ಪುಣ್ಯ ನಾವು ಎಚ್ಚೆತ್ತುಕೊಂಡಿದ್ದೇವೋ ಎನಿಸುತ್ತದೆ. ಇಂದಿಗೂ ಸಹ ಮಹಿಳೆಯ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡಿದರೆ, ನಾವು ಇನ್ನೂ ಸಂಪೂರ್ಣವಾಗಿ ಎಚ್ಚೆತ್ತುಕೊಳ್ಳಬೇಕು ಅನಿಸುತ್ತದೆ. ದಯವಿಟ್ಟು ಸಿನಿಮಾವನ್ನು ರಾಜಕೀಯ ಮಾಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

    ಸಿನಿಮಾ ಎನ್ನುವುದು ಒಂದು ಕಲೆ. ಸಾಹಸ, ಸಂಗೀತ, ನೃತ್ಯ, ಮಾತುಕತೆ, ಸತ್ಯ ಎಲ್ಲವೂ ಒಂದುಗೂಡಿದರೆ ಸಿನಿಮಾವಾಗುತ್ತದೆ. ಕಲೆಗೆ ಎಲ್ಲರನ್ನು ಒಟ್ಟಿಗೆ ಕೂರಿಸಿಕೊಂಡು ಒಟ್ಟಿಗೆ ಕರೆದುಕೊಂಡು ಹೋಗುವ ದೊಡ್ಡ ಶಕ್ತಿ ಇದೆ. ಸಿನಿಮಾಕ್ಕೆ ಜಾತಿ, ಮತ, ಧರ್ಮ, ರಾಜಕೀಯವನ್ನು ಸೇರಿಸಬೇಡಿ. ದಿ ಕಾಶ್ಮೀರ್ ಫೈಲ್ಸ್ ರಾಜಕೀಯ ಸಿನಿಮಾವಲ್ಲ. ಇದೊಂದು ಸತ್ಯ ಘಟನೆಗಳ ಬಿಚ್ಚಿಟ್ಟ ಸಿನಿಮಾವಾಗಿದೆ. ಯಾವುದೇ ರೀತಿಯ ಸುಳ್ಳನ್ನು ತೋರಿದೇ, ಯಾವುದನ್ನು ಹೆಚ್ಚಿಗೆ ತೋರಿಸದೇ ಆ ಕ್ಷಣದಲ್ಲಿ ಏನು ನಡೆದಿದೆ ಅದನ್ನು ಮಾತ್ರ ಸಿನಿಮಾದಲ್ಲಿ ಬಿಚ್ಚಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

  • ಕಾಶ್ಮೀರ್ ಫೈಲ್ಸ್‌ ಸಿನಿಮಾ ವೀಕ್ಷಣೆಗೆ ಜೆಡಿಎಸ್‌ ಶಾಸಕರ ನಿರಾಸಕ್ತಿ

    ಕಾಶ್ಮೀರ್ ಫೈಲ್ಸ್‌ ಸಿನಿಮಾ ವೀಕ್ಷಣೆಗೆ ಜೆಡಿಎಸ್‌ ಶಾಸಕರ ನಿರಾಸಕ್ತಿ

    ಬೆಂಗಳೂರು: ದಿ ಕಾಶ್ಮೀ‌ರ್‌ ಫೈಲ್ಸ್ ಸಿನಿಮಾ ನೋಡಲು ಜೆಡಿಎಸ್ ಬಹುತೇಕ ಶಾಸಕರು ನಿರಾಸಕ್ತಿ ತೋರಿಸಿದ್ದಾರೆ.

    ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಬಹುತೇಕ ಜೆಡಿಎಸ್ ಶಾಸಕರಿಂದ ಕಾಶ್ಮೀರಿ ಫೈಲ್ಸ್ ಸಿನಿಮಾ ವೀಕ್ಷಣೆಗೆ ನಿರಾಸಕ್ತಿ ತೋರಿದ್ದಾರೆ.

    ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡ ಕುರಿತ ಚಿತ್ರ ʼದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗೆ ಮಂಗಳವಾರ ವಿಧಾನಸಭೆ ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ವಿಧಾನಸಭೆ ಕಲಾಪದಲ್ಲಿಂದು ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದರು. ಆಡಳಿತ ಮತ್ತು ವಿಪಕ್ಷಗಳ ಸದಸ್ಯರಿಗೆ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಿದರು. ಇದನ್ನೂ ಓದಿ: ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ

    ಸಂಜೆ 6:45 ಕ್ಕೆ ಮಂತ್ರಿ ಮಾಲ್‍ನಲ್ಲಿ ಶಾಸಕರಿಗೆ ಸಿನಿಮಾ ವೀಕ್ಷಣೆಗೆ ವಿಧಾನಸಭೆ ಸಚಿವಾಲಯದಿಂದ ವ್ಯವಸ್ಥೆ ಮಾಡಲಾಗಿದೆ. ಸಿನಿಮಾಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಸ್ಪೀಕರ್ ಕಾಗೇರಿ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಶಾಸಕರು ಹಾಗೂ ಸಚಿವರು ಸಿನಿಮಾ ವೀಕ್ಷಿಸಲು ಬರಬೇಕು. ಎಲ್ಲರೂ ಜೊತೆಗೂಡಿ ನೋಡೋಣ. ವಿರೋಧ ಪಕ್ಷಗಳ ಸದಸ್ಯರೂ ಸಿನಿಮಾ ನೋಡಲು ಬರಬೇಕು ಎಂದು ಸ್ಪೀಕರ್ ಆಹ್ವಾನ ನೀಡಿದರು. ಭಾನುವಾರ ಸಿಎಂ ಬೊಮ್ಮಾಯಿ ಹಾಗೂ ಸಚಿವ ಮುನಿರತ್ನ ಸಹ ಸಿನಿಮಾ ವೀಕ್ಷಣೆ ಮಾಡಿದರು. ಬಳಿಕ ಸಿಎಂ ಈ ಚಿತ್ರಕ್ಕೆ ಶೇ.100 ತೆರಿಗೆ ವಿನಾಯಿತಿ ಘೋಷಣೆ ಮಾಡಿದರು. ಇದನ್ನೂ ಓದಿ: ಏನದು ಸಿನಿಮಾ? ನಾನು ಹೋಗಲ್ಲ: ಸ್ಪೀಕರ್‌ ಆಹ್ವಾನ ತಿರಸ್ಕರಿಸಿದ ಸಿದ್ದು

  • ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ

    ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿದ್ದು, ಪರ ವಿರೋಧದ ನಡುವೆಯೂ ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಶುರುವಾಗಿದೆ. 32 ವರ್ಷಗಳ ನಂತರ ಸತ್ಯವನ್ನು ಈ ಸಿನಿಮಾ ಹೊರಹಾಕಿದೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಳ್ಳಲೇಬೇಕು ಎಂದು ಅನೇಕ ನಟ ನಟಿಯರು ಸಿನಿಮಾದ ಪರವಾಗಿ ನಿಂತಿದ್ದಾರೆ. ಈ ಕುರಿತು ಕನ್ನಡದ ಹಿರಿಯ ನಟ ಅನಂತ್ ನಾಗ್ ಕೂಡ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹತ್ತು ಹಲವು ಸಂಗತಿಗಳನ್ನು ನೆನಪು ಮಾಡಿಕೊಂಡಿದ್ದಾರೆ.

    ಸಿನಿಮಾ ನೋಡಿ ವಿಚಲಿತನಾದೆ
    ನಿನ್ನೆ ‘ದಿ ಕಾಶ್ಮೀರ್ ಫೈಲ್’ ಸಿನಿಮಾವನ್ನು ಪಬ್ಲಿಕ್ ಟಿವಿ ರಂಗನಾಥ್ ಅವರ ಜೊತೆಗೆ ನೋಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಿನಿಮಾವನ್ನು ನೋಡಿ ವಿಚಲಿತನಾಗಿ ನಾನೂ ಸಹ ಬಂದಿದ್ದೇನೆ. ಆದರೆ ಈ ಹಿನ್ನೆಲೆ ನಾನೊಂದು ವಿಚಾರವನ್ನು ಶೇರ್ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ಸಿನಿಮಾ ನೋಡಿದ ಸಮಯದಲ್ಲಿ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ. ರಂಗನಾಥ್ ಅವರ ಜೊತೆ ಈ ಕುರಿತು ಮಾತನಾಡಿದ್ದೆ. ಇವತ್ತೆ ಪಬ್ಲಿಕ್ ಟಿವಿ ಜೊತೆ ಈ ಕುರಿತು ಮಾತನಾಡಬಹುದು ಎಂದು ತಿಳಿದುಕೊಂಡಿರಲಿಲ್ಲ. ಅದಕ್ಕೆ ತುಂಬಾ ಧನ್ಯವಾದಗಳು.  ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ನಮ್ಮ ಪೂರ್ವಜರು ಅದೆಷ್ಟು ಸಂಕಟ ಪಟ್ಟರೋ
    1989-90 ಜನವರಿ 20 ರಂದು ಈ ಘಟನೆ ನಡೆದಿತ್ತು. ಕೇರಳ ಕಾಂಗ್ರೆಸ್ ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದೆ. ಅಲ್ಲದೆ ನನಗೂ ಸಹ ಇದರಲ್ಲಿ ಅನುಭವವಿದೆ. 1575ರಲ್ಲಿ ನಮ್ಮ ಸುಮಾರು 200ಕ್ಕೂ ಹೆಚ್ಚು ಪೂರ್ವಜರು ಕಾಶ್ಮೀರದಿಂದ ಹೊರಗೆ ಬಂದಿದ್ದಾರೆ. 1526ರಲ್ಲಿ ಬಾಬರ್ ಬಂದ ಮೇಲೆ ಶ್ರೀರಾಮಮಂದಿರ ಕೆಡವಿ ಅಲ್ಲಿ ಮಸೀದಿ ಕಟ್ಟಿದ ಮೇಲೆ ಕಾಶ್ಮೀರದಲ್ಲಿ ಮತಾಂತರ ಶುರುವಾಗಿತ್ತು. ಅದಕ್ಕೆ ನನ್ನ 200 ಕುಟುಂಬಗಳು ಅಲ್ಲಿಂದ ಹೇಗೆ ಪ್ರಯಾಣ ಮಾಡಿದ್ದಾರೆ ಎಂಬುದು ದೇವರಿಗೆ ಗೊತ್ತು. ಅಲ್ಲಿಂದ ನದಿ, ಗುಡ್ಡ, ಕಾಡು ಎಲ್ಲವನ್ನೂ ದಾಟಿಕೊಂಡು ಗೋವಾಗೆ ಬಂದಿದ್ದಾರೆ. ಗೋವಾಗೆ ಬಂದ್ರೆ ಅಲ್ಲಿ ಪೋರ್ಚಗೀಸರು ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಸುತ್ತಿದ್ದರು. ಆಗ ಅಲ್ಲಿಂದ ಶೃಂಗೇರಿಗೆ ನಮ್ಮ ಕುಟುಂಬ ಬಂದಿದೆ. ಅಲ್ಲಿನ ಗುರುಗಳು ಕೆಳದಿ ಶಿವಪ್ಪನವರ ಮನೆತನದ ಆಡಳಿತ ನಮ್ಮ ಪೂರ್ವಜರಿಗೆ ಆಶ್ರಯ ಕೊಟ್ಟಿತ್ತು. ಇದು ನಮ್ಮ ಇತಿಹಾಸ. ನಮ್ಮ ಮಠಗಳು ಉತ್ತರ ಮತ್ತು ದಕ್ಷಿಣ ಕನ್ನಡದಲ್ಲಿ ಇವೆ.

    ನನ್ನಲ್ಲಿ ಬೇಸರ ಇನ್ನೂ ಇದೆ
    ನಾನು ಮುಂಬೈನಲ್ಲಿ ನಾಟಕ, ನಟನೆಯಲ್ಲಿ ಇದ್ದಾಗ ಕಾಶ್ಮೀರದ ಅನೇಕ ಮಿತ್ರರು ನನ್ನ ಜೊತೆಯಲ್ಲಿ ಇದ್ದರು. ಅವರಲ್ಲಿ ಅನುಪಮ್ ಖಾಬಕ್.ಕೆ ಕೂಡ ಒಬ್ಬರು. ಜನವರಿ 1990ರಲ್ಲಿ ಅವರು ನನಗೆ ದೂರವಾಣಿ ಕರೆ ಮಾಡಿದರು. ಆಗ ಇನ್ನೂ ಫೋನ್ ಬಂದಿರಲಿಲ್ಲ. ಆಗ ಅವರು, ‘ನನ್ನ ಬಗ್ಗೆ ನಿನಗೆ ಗೊತ್ತಿದೆ. ನಿನ್ನ ಬಗ್ಗೆ ನನಗೆ ಗೊತ್ತಿದೆ. ಆದರೆ ನಾವು ಭೇಟಿಯಾಗಿಲ್ಲ. ಅಂದು ಕಾಶ್ಮೀರದಿಂದ ಹೋದವರು ಅಲ್ಲೇ ನೆಲೆಯಾಗಿದ್ದೀರಿ. ನಮ್ಮನ್ನು ಸಹ ಇಲ್ಲಿಂದ ಹೊರಹಾಕಿದ್ದಾರೆ. ನಮ್ಮ ಹಿರಿಯರು, ಮಹಿಳೆಯರು, ಮಕ್ಕಳು ಎಲ್ಲರೂ ಬೀದಿಗೆ ಬಂದಿದ್ದಾರೆ. ದಯವಿಟ್ಟು ನೀವು ಇರುವ ಕಡೆ ನೆಲೆಸಲು ಅವಕಾಶವಿದೆಯಾ ನೋಡಿ ಎಂದಿದ್ದರು.

    ಅಂದು ನಾನು ಎಂಎಲ್‌ಸಿ ಆಗಿದ್ದೆ. ಅದಕ್ಕೆ ನೀವು ಸಿನಿಮಾರಂಗದಲ್ಲಿ ಮಾತ್ರವಲ್ಲ, ರಾಜಕೀಯದಲ್ಲೂ ಇದ್ದೀರಿ ಎಂದು ಮನವಿ ಮಾಡಿದರು. ಅವರ ಜೊತೆ ನನ್ನ ಅನೇಕ ಸ್ನೇಹಿತರು ಕರೆ ಮಾಡಿ ಇದಕ್ಕೆ ಏನಾದರೂ ಮಾಡಬೇಕು ಎಂದು ಕೇಳಿಕೊಂಡರು. ಏನಿದು ಮತ್ತೆ ಈ ರೀತಿ ಆಯಿತಲ್ಲ ಎಂದು ಬೇಸರವಾಯಿತು. ಆಗ ಜನತಾ ಸರ್ಕಾರ 1983 ರಿಂದ 88ರವರೆಗೂ ಇತ್ತು. ನಂತರ ಕಾಂಗ್ರೆಸ್ ಸರ್ಕಾರ ಬಂತು. ಆಗ ಬಂಗಾರಪ್ಪ ಅವರು ಸಿಎಂ ಆಗಿದ್ದರು. ವೈ.ಎನ್.ಕೃಷ್ಣಮೂರ್ತಿ(ಕನ್ನಡಪ್ರಭ ಮತ್ತು ಪ್ರಜಾವಾಣಿ ಸಂಪಾದಕರು) ಅವರನ್ನು ಸಂದಿಸಿ ಸಿಎಂ ಅವರನ್ನು ಭೇಟಿ ಮಾಡಿದೆ. ಕಾಶ್ಮೀರದಿಂದ ಕರೆ ಮಾಡಿದ ನನ್ನ ಸ್ನೇಹಿತರ ಪರಿಸ್ಥಿತಿ ವಿವರಿಸಿದೆ. ನನ್ನ ಮೂಲಕ ನಿಮ್ಮನ್ನು ಸಹಾಯ ಕೇಳಿದ್ದಾರೆ ಎಂದು ವಿವರಿಸಿದೆ. ಆಗ ಬಂಗಾರಪ್ಪ ಅವರು ಬಹಳ ಆತ್ಮೀಯವಾಗಿ ನನ್ನನ್ನು ಸ್ವಾಗತಿಸಿ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು.

    ನೀಲಿ ನಕ್ಷೆ ಮಾಡುತ್ತೇವೆ. ನಿಮ್ಮ ಸಮಾಜದವರನ್ನು ನೀವು ಮಾತನಾಡಿಸಿ ಎಂದು ಕೇಳಿಕೊಂಡರು. ಅವರು ಸಹ ನಮ್ಮ ಕೈಯಲ್ಲಿ ಆದ ಎಲ್ಲ ಕೆಲಸಗಳನ್ನು ಮಾಡಿದ್ದಾರೆ. ಅವರು ಎಲ್ಲವನ್ನು ವಿಚಾರಿಸುತ್ತಿದ್ದರು. ಕೆನರಾ, ವಿಜಯಾ ಬ್ಯಾಂಕ್ ಮೂಲಕ ನಾನು ಮಾತನಾಡಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆ. ನಂತರ ನನ್ನ ಸ್ನೇಹಿತರು ನನ್ನನ್ನು ಸಂಪರ್ಕ ಮಾಡುವುದೇ ನಿಂತು ಹೋಗಿತ್ತು. ಆಗ ಯಾವುದೇ ಫೋನ್ ಸೌಕರ್ಯಗಳು ಇರಲಿಲ್ಲ. ಅವರನ್ನು ಹೇಗೆ ಸಂಪರ್ಕ ಮಾಡುವುದು ಎಂಬುದೇ ನನಗೆ ತಿಳಿಯಲಿಲ್ಲ. ಈ ಗೊಂದಲದಲ್ಲಿ 6 ತಿಂಗಳೂ ಕಳೆದುಹೋಯ್ತು. ನನ್ನ ಸ್ನೇಹಿತರಿಗೆ ಅಂದು ಏನನ್ನು ಮಾಡಲು ಆಗಲಿಲ್ಲ ಎಂಬ ಬೇಸರ ಈಗಲೂ ನನ್ನಲ್ಲಿ ಇದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ನಿನ್ನೆ ಈ ಸಿನಿಮಾ ನೋಡುವಾಗ ನಾನು ತಲೆ ತಗ್ಗಿಸಿಕೊಂಡು ಕುಳಿತುಕೊಂಡಿದ್ದೆ. ಆ ಕೌರ್ಯವನ್ನು, ಭಯಾನಕ ರಕ್ತಪಾತವನ್ನು ನೋಡಿ ನನಗೆ ಸಿನಿಮಾ ನೋಡಲೂ ಹಿಂಸೆಯಾಗುತ್ತಿತ್ತು. ಈ ವಿಷಯ ನಮ್ಮ ಜನರಿಗೆ ತಿಳಿಯಬೇಕಾದರೆ 32 ವರ್ಷ ತೆಗೆದುಕೊಂಡಿದೆ ಎಂದರೆ ಅದು ದೊಡ್ಡ ದುರಂತ. ಆದರೆ ಈ ಮೂಲಕ ಜನರಿಗೆ ಜಾಗೃತಿ ಉಂಟಾಗುತ್ತಿದೆ ಎಂಬುದು ಸಮಾಧಾನದ ಸಂಗತಿ.

  • ನಾನು ಕಾಶ್ಮೀರಿ ಪಂಡಿತನನ್ನು ಮದ್ವೆ ಆಗಿದ್ದು, ದೌರ್ಜನ್ಯ ಕಂಡಿದ್ದೇನೆ : ನಟಿ ಯಾಮಿ ಗೌತಮ್

    ನಾನು ಕಾಶ್ಮೀರಿ ಪಂಡಿತನನ್ನು ಮದ್ವೆ ಆಗಿದ್ದು, ದೌರ್ಜನ್ಯ ಕಂಡಿದ್ದೇನೆ : ನಟಿ ಯಾಮಿ ಗೌತಮ್

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಕೆಸರಾಟಕ್ಕೂ ಕಾರಣವಾಗಿದೆ. ಕಾಶ್ಮೀರದಲ್ಲಿ ನಿಜವಾಗಿಯೂ ನಡೆದದ್ದೇ ಬೇರೆ, ಸಿನಿಮಾದಲ್ಲಿ ತೋರಿಸಿದ್ದೆ ಬೇರೆ ಎನ್ನುವ ಮಾತಿನ ಮಧ್ಯ, ನಡೆದ ಘಟನೆಯನ್ನೇ ನಿರ್ದೇಶಕರು ಸಿನಿಮಾದಲ್ಲಿ ತೋರಿಸಿದ್ದಾರೆ ಎಂದು ಹಲವು ಕ್ಷೇತ್ರಗಳ ಗಣ್ಯರು ಸಿನಿಮಾ ತಂಡದ ಬೆನ್ನಿಗೆ ನಿಂತಿದ್ದಾರೆ. ಈ ಮಧ್ಯೆ ನಟಿ ಯಾಮಿ ಗೌತಮ್ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

    ನೆನ್ನೆಯಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್, ಬಾಲಿವುಡ್ ಕಲಾವಿದರಿಗೆ ಮಾತಿನ ಚಾಟಿ ಬೀಸಿದ್ದರು. ಬಾಲಿವುಡ್ ಏಕೆ ಮೌನವಾಗಿದೆ ಎಂದು ಪ್ರಶ್ನೆ ಮಾಡಿದ್ದರು. ಈ ಮಾತಿನ ಬೆನ್ನಲ್ಲೆ ಹೆಸರಾಂತ ನಟಿ ಯಾಮಿ ಗೌತಮ್ ಟ್ವೀಟ್ ಮಾಡಿದ್ದಾರೆ. ನಾನು ಕಾಶ್ಮೀರಿ ಪಂಡಿತನನ್ನು ಮದುವೆಯಾಗಿದ್ದೇನೆ. ಪಂಡಿತರ ನೋವನ್ನು ಹತ್ತಿರದಿಂದ ಕಂಡಿದ್ದೇನೆ. ಸತ್ಯ ಹೇಳುವುದಕ್ಕೆ 32 ವರ್ಷ ಬೇಕಾಯಿತು. ಆ ಸಿನಿಮಾದಲ್ಲಿ ಇರುವುದೆಲ್ಲ ಸತ್ಯ. ಆ ನರಮೇಧದ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಈ ಸಿನಿಮಾದ ಮೂಲಕ ನಿರ್ದೇಶಕರು ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

     

    ಈ ಸಿನಿಮಾವನ್ನು ಎಲ್ಲರೂ ನೋಡಿ ಮತ್ತು ಸಪೋರ್ಟ್ ಮಾಡಿ ಎಂದು ಅವರು ನೋಡುಗರನ್ನು ಕೇಳಿಕೊಂಡಿದ್ದಾರೆ. ಹಿಂದಿಯಲ್ಲಿ ಮೂಡಿ ಬಂದಿರುವ ಈ ಸಿನಿಮಾ, ದೇಶದ ನಾನಾ ರಾಜ್ಯಗಳಲ್ಲಿ ಬಿಡುಗಡೆ ಆಗಿದೆ. ಕರ್ನಾಟಕ ರಾಜ್ಯವು ಈ ಸಿನಿಮಾಗಾಗಿ ತೆರಿಗೆ ವಿನಾಯತಿ ನೀಡಿದ್ದಾರೆ. ಅಲ್ಲದೇ ಸ್ಪೀಕರ್ ಕಾಗೇರಿ ಮಂತ್ರಿಗಳಿಗೆ ಮತ್ತು ಶಾಸಕರಿಗಾಗಿಯೇ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

  • ಏನದು ಸಿನಿಮಾ? ನಾನು ಹೋಗಲ್ಲ: ಸ್ಪೀಕರ್‌ ಆಹ್ವಾನ ತಿರಸ್ಕರಿಸಿದ ಸಿದ್ದು

    ಏನದು ಸಿನಿಮಾ? ನಾನು ಹೋಗಲ್ಲ: ಸ್ಪೀಕರ್‌ ಆಹ್ವಾನ ತಿರಸ್ಕರಿಸಿದ ಸಿದ್ದು

    ಬೆಂಗಳೂರು: ನಾಳೆ ಸಂಜೆ 6.45ಕ್ಕೆ ಮಂತ್ರಿ ಮಾಲ್‌ನ ಸ್ಕ್ರೀನ್‌ನಲ್ಲಿ ಬಾಲಿವುಡ್‌ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸದನದಲ್ಲೇ ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಹ್ವಾನ ನೀಡಿದ್ದಾರೆ. ಆದರೆ ಸ್ಪೀಕರ್‌ ಆಹ್ವಾನವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.

    ಏನದು ಸಿನಿಮಾ? ನಾನು ಸಿನಿಮಾ ನೋಡಲು ಹೋಗ್ತಾ ಇಲ್ಲ. ಆಸಕ್ತಿ ಇರುವವರು ಹೋಗುತ್ತಾರೆ ಅನಿಸುತ್ತೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡ ಕುರಿತ ಚಿತ್ರ ʻದಿ ಕಾಶ್ಮೀರ್ ಫೈಲ್ಸ್ʼ ವೀಕ್ಷಣೆಗೆ ನಾಳೆ ವಿಧಾನಸಭೆ ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ವಿಧಾನಸಭೆ ಕಲಾಪದಲ್ಲಿಂದು ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದರು. ಆಡಳಿತ ಮತ್ತು ವಿಪಕ್ಷಗಳ ಸದಸ್ಯರಿಗೆ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಿದರು.

    ನಾಳೆ ಸಂಜೆ 6.45 ಕ್ಕೆ ಮಂತ್ರಿ ಮಾಲ್‌ನಲ್ಲಿ ಶಾಸಕರಿಗೆ ಸಿನಿಮಾ ವೀಕ್ಷಣೆಗೆ ವಿಧಾನಸಭೆ ಸಚಿವಾಲಯದಿಂದ ವ್ಯವಸ್ಥೆ ಮಾಡಲಾಗಿದೆ. ಸಿನಿಮಾಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಸ್ಪೀಕರ್ ಕಾಗೇರಿ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಶಾಸಕರು ಹಾಗೂ ಸಚಿವರು ಸಿನಿಮಾ ವೀಕ್ಷಿಸಲು ಬರಬೇಕು. ಎಲ್ಲರೂ ಜೊತೆಗೂಡಿ ನೋಡೋಣ. ವಿರೋಧ ಪಕ್ಷಗಳ ಸದಸ್ಯರೂ ಸಿನಿಮಾ ನೋಡಲು ಬರಬೇಕು ಎಂದು ಸ್ಪೀಕರ್ ಆಹ್ವಾನ ನೀಡಿದರು. ನಿನ್ನೆಯಷ್ಟೇ ಸಿಎಂ‌ ಬೊಮ್ಮಾಯಿ ಹಾಗೂ ಸಚಿವ ಮುನಿರತ್ನ‌ ಸಹ ಸಿನಿಮಾ ವೀಕ್ಷಣೆ ಮಾಡಿದರು. ಬಳಿಕ‌ ಸಿಎಂ ಈ ಚಿತ್ರಕ್ಕೆ ಶೇ.100 ತೆರಿಗೆ ವಿನಾಯಿತಿ ಘೋಷಣೆ ಮಾಡಿದರು.

  • ದಿ ಕಾಶ್ಮೀರ್ ಫೈಲ್ಸ್‌ ಚಿತ್ರಕ್ಕೆ ತೆರಿಗೆ ವಿನಾಯಿತಿ : ಕನ್ನಡ ಸಂಘಟನೆಗಳ ವಿರೋಧ

    ದಿ ಕಾಶ್ಮೀರ್ ಫೈಲ್ಸ್‌ ಚಿತ್ರಕ್ಕೆ ತೆರಿಗೆ ವಿನಾಯಿತಿ : ಕನ್ನಡ ಸಂಘಟನೆಗಳ ವಿರೋಧ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿರುವುದನ್ನು ಕನ್ನಡ ಸಂಘಟನೆಗಳು ವಿರೋಧಿಸುತ್ತವೆ. ಸಮಾಜದ ಸ್ವಾಸ್ಥ್ಯ ಕದಡುವ ಕಿಡಿಗೇಡಿ ಸಿನಿಮಾಗಳಿಗೆ ತೆರಿಗೆ ನಿನಾಯಿತಿ ನೀಡಬಾರದು ಎಂದು ಕರ್ನಾಟಕ ರಣಧೀರ ಪಡೆ  ಆಗ್ರಹಿಸಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ದಿ ಕಾಶ್ಮೀರ್ ಫೈಲ್ ಎಂಬ ಸಿನಿಮಾ ಸಮಾಜದಲ್ಲಿ ಶಾಂತಿ ಕದಡಲು ಮಾಡಿರುವ ಹುನ್ನಾರವಷ್ಟೆ. ತೆರಿಗೆ ವಿನಾಯ್ತಿ ಘೋಷಿಸಲು ಇದು ಯಾವುದೇ ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿ ಸಿನಿಮಾವ‍ಲ್ಲ.  ಸುಳ್ಳು ಮತ್ತು ಅತಿರಂಜಿತ ಕತೆಯನ್ನು ಭೀಬತ್ಸವಾಗಿ ತೋರಿಸಿ ಜನರ ಮಧ್ಯೆ ಅಪನಂಬಿಕೆ ಹುಟ್ಟು ಹಾಕುವ ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವುದು ಎಂದರೆ ಕನ್ನಡಿಗರ ತೆರಿಗೆ ಹಣಕ್ಕೆ ದೋಖಾ ಬಗೆಯುವುದು ಎಂದರ್ಥ. ಇಂತಹ ಕೃತ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮಾಡಕೂಡದು.  ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

    ಕನ್ನಡ ಚಿತ್ರೋದ್ಯಮ ಈಗ ಸಂಕಷ್ಟದಲ್ಲಿದೆ. ಕೊರೋನಾ ನಂತರ ಕನ್ನಡ ಚಿತ್ರೋದ್ಯಮದ ಸಾವಿರಾರು ಕಾರ್ಮಿಕರು ಬದುಕಿಗಾಗಿ ಪರದಾಡುತ್ತಿದ್ದಾರೆ. ಕನ್ನಡ ಚಿತ್ರೋದ್ಯಮಕ್ಕೆ ಮಿಡಿಯದ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಸಂಬಂಧಪಡದ ಕಾಶ್ಮೀರ್ ಫೈಲ್ ಸಿನಿಮಾಗೆ ಯಾಕೆ ಸ್ಪಂದಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ‌. ರಾಜ್ಯ ಸರ್ಕಾರದ ಪರೋಕ್ಷ ಹೈಕಮಾಂಡ್ ಆಗಿರುವ ಆರ್ ಎಸ್ ಎಸ್ ಮನವೊಲಿಸಲು ಮುಖ್ಯಮಂತ್ರಿಗಳು ಕನ್ನಡಿಗರ ಖಜಾನೆಯನ್ನು ತೂತು ಮಾಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಮುಖ್ಯಮಂತ್ರಿಗಳು ತಕ್ಷಣ ನಿಗೂಢ, ಅದೃಶ್ಯ ಹೈಕಮಾಂಡ್ ಮನವೊಲಿಕೆಯನ್ನು ನಿಲ್ಲಿಸಬೇಕು. ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಣೆಯನ್ನು ಮುಖ್ಯಮಂತ್ರಿಗಳು ರೂಢಿಸಿಕೊಳ್ಳಬೇಕು. ಸರ್ವಜನರ ಹಿತಬಯಸುವ, ಸೌಹಾರ್ಧ ವಾತಾವರಣ ನಿರ್ಮಿಸುವ, ಸಂವಿಧಾನದ ಆಶಯದಂತೆ ನಡೆಯುವ ಸಮಾಜ ರೂಪಿಸಲು ಮುಖ್ಯಮಂತ್ರಿಗಳು ಕೆಲಸ ಮಾಡಬೇಕು. ಈ ರೀತಿ‌ ಕಿಡಿಗೇಡಿಗಳ ಸಿನಿಮಾಕ್ಕೆ ತೆರಿಗೆ ವಿನಾಯ್ತಿ ನೀಡುವುದು ಅಕ್ಷಮ್ಯ ಎಂದು ಕರ್ನಾಟಕ ರಣಧೀರ ಪಡೆ ತಿಳಿಸಿದೆ.

  • ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ‘ಸತ್ಯಕ್ಕೆ ಎರಡು ಮುಖಗಳಿರುತ್ತವೆ’ ಎನ್ನುತ್ತದೆ ಸಂಶೋಧನಾ ಪರಿಭಾಷೆ. ಯಾವುದೋ ಒಂದು ಘಟನೆ ನಡೆದಾಗ ಆ ಎರಡೂ ಮುಖಗಳೊಂದಿಗೆ ಅದು ಚಲನೆ ಪಡೆಯುತ್ತದೆ. ಬಲಾಢ್ಯತೆಯತ್ತ ಕೊನೆಗೊಳ್ಳುತ್ತದೆ. ಇದು ಸಹಜ ಪ್ರಕ್ರಿಯೆ. ಇಂತಹ ಪ್ರಕ್ರಿಯೆಯಲ್ಲೇ ಸಾಗಿ ಬಂದದ್ದು ‘ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಮಹಾವಲಸೆಯ ಚರಮಗೀತೆ. ಇದನ್ನೂ ಓದಿ : ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಸದ್ಯ ಕಾಶ್ಮೀರ ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡಂತೆ ತಣ್ಣಗಾಗಿದೆ. ರಾಜಕೀಯ ಮೇಲಾಟಗಳು ಗುದುಮುರುಗಿ ಕಟ್ಟಿಕೊಂಡು ಮೂಲೆ ಗುಂಪಾಗುತ್ತಿವೆ. ಇಂತಹ ಹೊತ್ತಿನಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾ ಮಾಡಿದ್ದಾರೆ. ಅದನ್ನು ‘ದಿ ಕಾಶ್ಮೀರ್ ಫೈಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ.

    ಸಿನಿಮಾದ ಶೀರ್ಷಿಕೆಯೇ ಪ್ರಚುರಪಡಿಸುವಂತೆ ನರಮೇಧದ ಹಿಂದಿರುವ ಇತಿಹಾಸವನ್ನು ಬಿಚ್ಚಿಡುವಂತಹ ‘ಫೈಲ್‍’ ಇದಾಗಿದೆ. ಈ ‘ಫೈಲ್’ ನ ಪುಟಪುಟದಲ್ಲೂ ರಕ್ತಸಿಕ್ತ ಅಧ್ಯಾಯಗಳಿವೆ. ಬರೆದ ಶಾಹಿ ಕೂಡ ಕೆಂಪಾಗಿದೆ. ಇಂತಹ ಹತ್ಯಾಕಾಂಡವನ್ನು ಸಿನಿಮಿಯ ರೂಪದಲ್ಲಿ ತರದೇ, ನಡೆದ ಘಟನೆಯನ್ನು ಹಸಿಹಸಿಯಾಗಿಯೇ ತರುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ.  ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

    ಸಾಮಾನ್ಯವಾಗಿ ಸಿನಿಮಾಗಳೆಂದರೆ ನಾಟಕೀಯ ನಿರೂಪಣೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಕಥೆಯ ಕುತೂಹಲವನ್ನು ಕಾಪಿಡಲು ಅಲ್ಲಲ್ಲಿ, ನಾಟಕೀಯ ತಿರುವುಗಳನ್ನೂ ನೀಡಲಾಗುತ್ತದೆ. ಪ್ರೇಕ್ಷಕನ ಆಸಕ್ತಿಯ ಅನುಗುಣವಾಗಿ ಪಾತ್ರಕ್ಕೆ ಹಿನ್ನೆಲೆ ಒದಗಿಸಲಾಗುತ್ತದೆ. ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಅದ್ಯಾವ ಗೋಜಿಗೂ ನಿರ್ದೇಶಕರು ಹೋಗಿಲ್ಲ. ತಮ್ಮ ಸಂಶೋಧನೆಯಲ್ಲಿ ಕಂಡುಂಡ ಕಥನವನ್ನು ಹಾಗೆಯೇ ಬಿಚ್ಚಿಡುತ್ತಾ ಹೋಗಿದ್ದಾರೆ. ಹಾಗಾಗಿ ಚಿತ್ರದ ತುಂಬಾ ಮನಸ್ಸಿಗೆ ಘಾಸಿಯಾಗುವಷ್ಟು ಕ್ರೌರ್ಯವೇ ತುಂಬಿದೆ.  ಅದೊಂದು ಹತ್ಯಾಕಾಂಡದ ಕಥೆಯೇ ಆಗಿದ್ದರಿಂದ ತೆರೆಯ ಮೇಲೂ ಅದನ್ನೇ ಮೂಡಿಸಿದ್ದಾರೆ.

    ಪುಷ್ಕರ್ ನಾಥ್ ಪಂಡಿತ್ (ಅನುಪಮ್ ಖೇರ್) ಪಾತ್ರವನ್ನು ಮುಖ್ಯವಾಗಿಟ್ಟುಕೊಂಡು ಕಥೆಯನ್ನು ಹೇಳುತ್ತಾ ಸಾಗುವ ನಿರ್ದೇಶಕರು, ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಮೊಮ್ಮಗನಿಗೆ ತನ್ನ ಕುಟುಂಬದ ಇತಿಹಾಸ ಹೇಳುತ್ತಾ ಸಾಗುವ ಕಥನ ಕ್ರಮದಲ್ಲಿ ಇಡೀ ಸಿನಿಮಾ ಸಾಗುತ್ತದೆ. ಈ ಪುಷ್ಕರ್ ನಾಥ್  ಮೂಲಕ ಕಾಶ್ಮೀರಿ ಪಂಡಿತರ ಮೇಲಾದ ದಾಳಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಸಾಗುತ್ತಾರೆ ನಿರ್ದೇಶಕರು. ಈ ಕಥನ ಕವಲುಗಳಲ್ಲಿ ಮಾಧ್ಯಮ, ರಾಜಕಾರಣ, ಭಯೋತ್ಪಾದನೆ, ಕೋಮುಗಲಭೆ, ಮತಾಂತರ, ಎರಡು ಕೋಮಿನ ನಡುವಿನ ಸಂಘರ್ಷ ಹೀಗೆ ಸಾಕಷ್ಟು ಘಟನೆಗಳು ದೃಶ್ಯಗಳಾಗಿ ಬಂದು ಹೋಗುತ್ತವೆ. ಇದೊಂದು ಒಪ್ಪಿತ ಸಿನಿಮಾ ಮಾಧ್ಯಮವಾಗಿರುವುದರಿಂದ ನಿರ್ದೇಶಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು, ಅವನದ್ದೇ ಆದ ರೀತಿಯಲ್ಲಿ ಅಂತ್ಯ ಕೊಡುತ್ತಾನೆ. ಅಲ್ಲಿಗೆ ನೋಡುಗನ ಮನಸ್ಸು ಹದಗೊಳ್ಳುವುದೇ ಬೇರೆ ರೀತಿಯಾಗಿ. ಅಷ್ಟರ ಮಟ್ಟಿಗೆ ಸಿನಿಮಾ ನೋಡುಗನ ಎದೆಯೂರಿ ಹೆಚ್ಚಿಸುತ್ತದೆ.  ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಭಯೋತ್ಪಾದಕರು ‘ಮತಾಂತರವಾಗಿ, ಸಾಯಿರು ಅಥವಾ ಓಡಿ ಹೋಗಿ’ ಎಂದು ಹೇಳುವ ಮಾತುಗಳು ಮತ್ತು ಮುಸ್ಲಿಂ ಹುಡುಗರೇ ತುಂಬಿರುವ ಗ್ಯಾಂಗ್ ನಲ್ಲಿ ಹಿಂದೂ ಹುಡುಗನೊಬ್ಬ ಕ್ರಿಕೆಟ್ ಆಡುತ್ತಾ, ಅಲ್ಲೊಂದು ರೆಡಿಯೋ, ಅದರಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುತ್ತಾ, ಸಡನ್ನಾಗಿ ಹಿಂದೂ ಹುಡುಗನ ಬಾಯಿಂದ ‘ಸಚಿನ್.. ಸಚಿನ್..’ ಕೂಗು. ನಂತರ ನಡೆಯೋದೆಲ್ಲ ಹಿಂಸೆ, ರಕ್ತಪಾತ, ಯುದ್ಧ, ಧರ್ಮಯುದ್ಧ. ಹೀಗೆ ಒಂದು ಕೋಮಿನ ಕ್ರೌರ್ಯವನ್ನೇ ಢಾಳಾಗಿ ತೋರಿಸುತ್ತಾ ಹೋಗಿದ್ದಾರೆ ನಿರ್ದೇಶಕರು. ಹಾಗಾಗಿ ಸಿನಿಮಾದುದ್ದಕ್ಕೂ ಅಚ್ಚರಿ ಅನಿಸುವ, ಚರ್ಚೆಗೆ ಹಚ್ಚುವ ಮತ್ತು ಭಾವುಕತೆ ಕಟ್ಟಿಕೊಡುವ ದೃಶ್ಯಗಳೇ ತುಂಬಿ ಹೋಗಿವೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ಇಡೀ ಸಿನಿಮಾ ಕಾಶ್ಮೀರಿ ಪಂಡಿತರ ದೃಷ್ಟಿಕೋನದ ಮೂಲಕವೇ ಬಿಚ್ಚಿಕೊಳ್ಳುತ್ತಾ ಹೋಗಿದ್ದರಿಂದ ಮತ್ತು ಅದನ್ನು ಭಯೋತ್ಪಾದಕರ ಚಿತ್ರಹಿಂಸೆಗೆ ನಲುಗಿ ಪ್ರಾಣಬಿಟ್ಟ ಕುಟುಂಬವೊಂದರ ಕಥೆಯ ಮೂಲಕ ಹೇಳಿದ್ದರಿಂದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಒಂದು ವರ್ಗದ ಜನಕ್ಕೆ ಇಷ್ಟವಾಗಿ ಮತ್ತು ಮತ್ತೊಂದು ವರ್ಗದ ಜನಕ್ಕೆ ಅದು ಓಲೈಕೆಯಾಗಿ ಕಾಣುವುದರಲ್ಲಿ ಅನುಮಾನವಿಲ್ಲ.

    2 ಗಂಟೆ 50 ನಿಮಿಷ ಕಾಲಾವಧಿಯ ಈ ಚಿತ್ರ, ಸಿನಿಮಾದ ಸಿದ್ಧಸೂತ್ರಗಳಾಚೆ ರೂಪುಗೊಂಡಿದ್ದರಿಂದ ಒಂದಷ್ಟು ಕಡೆ ಡಾಕ್ಯುಮೆಂಟರಿ ರೂಪವಾಗಿಯೂ ಕಾಣುತ್ತದೆ. ಉಳಿದಂತೆ ಅದೊಂದು ಕಾಶ್ಮೀರ್ ಫೈಲ್ಸ್.

  • ದಿ ಕಾಶ್ಮೀರ್ ಫೈಲ್ಸ್ ಉಚಿತ ವೀಕ್ಷಣೆ- ಜಿಲ್ಲೆಯ ಜನತೆಗೆ ಬಂಪರ್ ಆಫರ್ ಕೊಟ್ಟ ಯತ್ನಾಳ್

    ದಿ ಕಾಶ್ಮೀರ್ ಫೈಲ್ಸ್ ಉಚಿತ ವೀಕ್ಷಣೆ- ಜಿಲ್ಲೆಯ ಜನತೆಗೆ ಬಂಪರ್ ಆಫರ್ ಕೊಟ್ಟ ಯತ್ನಾಳ್

    ವಿಜಯಪುರ: ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಉಚಿತವಾಗಿ ವೀಕ್ಷಣೆ ಮಾಡುವಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಜಿಲ್ಲೆಯ ಜನತೆಗಾಗಿ ವ್ಯವಸ್ಥೆ ಮಾಡಿದ್ದಾರೆ.

    ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಇದೆ ತಿಂಗಳ 21 ರಿಂದ ಒಂದು ವಾರದ ವರೆಗೆ ಉಚಿತ ಒಂದು ಶೋ ವ್ಯವಸ್ಥೆ ಮಾಡಿದ್ದಾರೆ. ಮಧ್ಯಾಹ್ನ 3 ಗಂಟೆಯ ಶೋವನ್ನು ಸಾರ್ವಜನಿಕರು ಉಚಿತವಾಗಿ ವೀಕ್ಷಿಸಬಹುದಾಗಿದೆ. ಇನ್ನು ಇದೆ ರೀತಿ ಉರಿ ಸೇರಿದಂತೆ ಅನೇಕ ದೇಶ ಭಕ್ತಿ ಚಿತ್ರಗಳನ್ನ ಉಚಿತವಾಗಿ ಜನರಿಗೆ ವೀಕ್ಷಿಸಲು ಯತ್ನಾಳ್ ವ್ಯವಸ್ಥೆ ಮಾಡಿದ್ದರು. ಅದೇ ರೀತಿ ಈ ಬಾರಿ ಕಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆಗೂ ಅವಕಾಶ ಕಲ್ಪಿಸಿದ್ದಾರೆ. ಇದನ್ನೂ ಓದಿ:  ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಶ್ಮೀರದ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ನಮಗೂ ಅಲ್ಲಿನ ಪರಿಸ್ಥಿತಿ ಬರಬಹುದು ಎನ್ನುವ ಜಾಗೃತಿ ಸಂದೇಶ ಮೂಡಿಸುವ ಸಿನಿಮಾವಾಗಿದೆ. ಪ್ರಧಾನ ಮಂತ್ರಿಯವರನ್ನು ದಿ ಕಶ್ಮೀರ್ ಫೈಲ್ಸ್ ಚಿತ್ರದ ನಿರ್ಮಾಪಕರ, ನಿರ್ದೇಶಕರು ಭೇಟಿಯಾಗಿದ್ದಾರೆ. ಒಂದು ವಾರದವರೆಗೆ ಉಚಿತವಾಗಿ ಸಿನಿಮಾವನ್ನು ತೆರೆಯ ಮೇಲೆ ನೋಡಬಹುದಾಗಿದೆ. ನಾನು ಹಣವನ್ನು ಕೊಡುತ್ತೇನೆ ಎಂದು ಹೇಳಿದ್ದೆನೆ. ನಮ್ಮ ಜಿಲ್ಲೆಯ ಜನ ಈ ಸಿನಿಮಾವನ್ನು ನೋಡಬಹುದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

  • ಪಂಡಿತರಿಗಿಂತ ಹೆಚ್ಚಾಗಿ ಮುಸ್ಲಿಮರು ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ: ಕೇರಳ ಕಾಂಗ್ರೆಸ್‌

    ಪಂಡಿತರಿಗಿಂತ ಹೆಚ್ಚಾಗಿ ಮುಸ್ಲಿಮರು ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ: ಕೇರಳ ಕಾಂಗ್ರೆಸ್‌

    ತಿರುವನಂತಪುರಂ: ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ ಫೈಲ್ಸ್‌ ಚಿತ್ರ ಈಗ ಬಾಕ್ಸ್‌ ಆಫೀಸ್‌ನಲ್ಲಿ ದೂಳು ಎಬ್ಬಿಸುತ್ತಿದ್ದಂತೆ ಕಾಶ್ಮೀರ ಪಂಡಿತರಿಗೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್‌ ಮಾಡಿರುವ ಟ್ವೀಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.

    ಕೇರಳ ಕಾಂಗ್ರೆಸ್‌ ಆರೋಪ ಏನು?
    1990 ರಿಂದ 2007ರವರೆಗೆ 399 ಪಂಡಿತರನ್ನು ಉಗ್ರರು ಕೊಂದಿದ್ದಾರೆ. ಈ 17 ವರ್ಷಗಳಲ್ಲಿ ಉಗ್ರರಿಂದ ಹತ್ಯೆಯಾದ ಮುಸ್ಲಿಮರ ಸಂಖ್ಯೆ 15,000

    ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾಗಿದ್ದು ಅಂದಿನ ಗೌರ್ನರ್ ಜಗ್‍ಮೋಹನ್. ಆರ್‌ಎಸ್‍ಎಸ್ ಮೂಲದ ಜಗ್‍ಮೋಹನ್ ಸೂಚನೆ ಮೇಲೆ ಪಂಡಿತರು ಕಾಶ್ಮೀರ ತ್ಯಜಿಸಿದ್ದರು.

    ಬಿಜೆಪಿ ಬೆಂಬಲಿತ ವಿಪಿ ಸಿಂಗ್ ನೇತೃತ್ವದ ಸರ್ಕಾರ ಇದ್ದಾಗ ಪಂಡಿತರ ವಲಸೆ ನಡೆದಿದ್ದು. 1989ರ ಡಿಸೆಂಬರ್‌ನಲ್ಲಿ ಬಿಜೆಪಿ ಬೆಂಬಲಿತ ವಿಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಾಶ್ಮೀರದಿಂದ ಪಂಡಿತರ ವಲಸೆ ಶುರುವಾಗಿದ್ದು 1990ರ ಜನವರಿಯಲ್ಲಿ ಆಗ ಪಂಡಿತರಿಗೆ ಭದ್ರತೆ ಒದಗಿಸಲು ಜಗ್‍ಮೋಹನ್‍ಗೆ ಬಿಜೆಪಿ ಸೂಚನೆ ನೀಡಿರಲಿಲ್ಲ. ಇದನ್ನೂ ಓದಿ: ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಮಹಾ ವಲಸೆಗೆ ಸೂಚನೆ ನೀಡಿದಾಗ ಬಿಜೆಪಿ ಏನು ಮಾಡುತ್ತಿತ್ತು?. ಕೇಂದ್ರದಲ್ಲಿ 2 ಬಾರಿ, ಕಾಶ್ಮೀರದಲ್ಲಿ ಒಮ್ಮೆ ಅಧಿಕಾರಕ್ಕೇರಿದ್ದ ಬಿಜೆಪಿ ಏಕೆ ಸುಮ್ಮನಿತ್ತು? ಕಾಶ್ಮೀರಿ ಪಂಡಿತರನ್ನು ಕಾಶ್ಮೀರಕ್ಕೆ ಮತ್ತೆ ಏಕೆ ಕರೆತರಲಿಲ್ಲ? ಭದ್ರತೆ ಏಕೆ ಒದಗಿಸಲಿಲ್ಲ?

    ಬಿಜೆಪಿ ದೇಶದಲ್ಲಿ ಹಿಂದೂ-ಮುಸ್ಲಿಮರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಕಾಶ್ಮೀರಿ ಪಂಡಿತರ ವಲಸೆ ವೇಳೆ ಬಿಜೆಪಿ ಮಾಡಿದ್ದು ಅಯೋಧ್ಯೆ ರಥಯಾತ್ರೆ. ಪಂಡಿತರ ವಿಚಾರದಲ್ಲಿ ಬಿಜೆಪಿ ವಿಷ-ಸುಳ್ಳು ಬಿತ್ತಲು ಪ್ರಯತ್ನಿಸುತ್ತಿದೆ. ಈ ಮೂಲಕ ಮುಂದಿನ ಚುನಾವಣೆ ಗೆಲ್ಲಲು ಬಿಜೆಪಿ ಷಡ್ಯಂತ್ರ್ಯ ನಡೆಸಿದೆ.

    ಟ್ವೀಟ್‌ ಡಿಲೀಟ್‌:
    1990 ರಿಂದ 2007ರವರೆಗೆ 399 ಪಂಡಿತರನ್ನು ಉಗ್ರರು ಕೊಂದಿದ್ದಾರೆ. ಈ 17 ವರ್ಷಗಳಲ್ಲಿ ಉಗ್ರರಿಂದ ಹತ್ಯೆಯಾದ ಮುಸ್ಲಿಮರ ಸಂಖ್ಯೆ 15,000 ಎಂಬ ಟ್ವೀಟ್‌ ಅನ್ನು ಕೇರಳ ಕಾಂಗ್ರೆಸ್‌ ಡಿಲೀಟ್‌ ಮಾಡಿದೆ. ಈಗ ಟ್ವೀಟ್‌ ಡಿಲೀಟ್‌ ಮಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ ನೆಟ್ಟಿಗರು ಕೇರಳ ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

  • ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ನಾಳೆ ಸಂಜೆ 6.45ಕ್ಕೆ ಮಂತ್ರಿ ಮಾಲ್ ನ ಸ್ಕೀನ್ ನಲ್ಲಿ ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸದನದಲ್ಲೇ ಶಾಸಕರಿಗೆ ಆಹ್ವಾನ ನೀಡಿದ್ದಾರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ. ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

    ಮಂತ್ರಿ ಮಾಲ್ ನ ಸ್ಕ್ರೀನ್ ನಂ 6ರಲ್ಲಿ ಎಲ್ಲ ಶಾಸಕರಿಗಾಗಿ ಸಿನಿಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ  ಚಿತ್ರ  ವೀಕ್ಷಣೆಗೆ ಬರಬೇಕು ಎಂದು  ಸ್ಪೀಕರ್  ಕಾಗೇರಿ ಮನವಿ ಮಾಡಿದರು. ಜೊತೆಗೆ ಈ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದು, ವಿಪಕ್ಷ ಶಾಸಕರನ್ನು ಚಿತ್ರ ವೀಕ್ಷಣೆಗೆ ಆಹ್ವಾನಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಈ ಸಿನಿಮಾದ ಬಗ್ಗೆ ಪರ ಮತ್ತು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪೀಕರ್ ಈ ನಡೆ ಭಾರೀ ಅಚ್ಚರಿಗೆ ಕಾರಣವಾಗಬಹುದು. ನೆನ್ನೆಯಷ್ಟೇ ಈ ಸಿನಿಮಾವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸಂಪುಟದ ಹಲವು ಮಂತ್ರಿಗಳು ವೀಕ್ಷಿಸಿದ್ದರು. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ಸಿನಿಮಾ ಮುಗಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಚಿತ್ರದ ಬಗ್ಗೆ ತಕ್ಷಣವೇ ಮಾತನಾಡಲು ಸಾಧ್ಯವಾಗುತ್ತಿಲ್ಲ. ತುಂಬಾ ಭಾವುಕನಾಗಿದ್ದೇನೆ. ಕಾಶ್ಮೀರದಲ್ಲಿ ಪಂಡಿತರ ಮೇಲೆ ಯಾವ ರೀತಿ ದಾಳಿ ನಡೆಯಿತು ಎಂದು ತೋರಿಸಿದ್ದಾರೆ’ ಎಂದಿದ್ದರು. ಆನಂತರ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದರು.