ಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರರಾದ ನಟರಾಜನ್ ಮತ್ತು ಶಾರ್ದೂಲ್ ಠಾಕೂರ್ ಅವರ ಮನೆಗೆ ಮಹೀಂದ್ರಾ ಕಂಪನಿಯ ‘ಥಾರ್’ ಎಸ್‍ಯುವಿ(ಸ್ಫೋಟ್ಸ್ ಯುಟಿಲಿಟಿ ವೆಹಿಕಲ್) ಆಗಮಿಸಿದೆ.
ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಥಾರ್ ಎಸ್‍ಯುವಿಯನ್ನು ಗಿಫ್ಟ್ ನೀಡಲಾಗುವುದು ಎಂದು ಹೇಳಿದ್ದರು. ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಕಳೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗಾವಸ್ಕರ್ ಟೆಸ್ಟ್ ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ಗೆದ್ದು ಸಂಭ್ರಮಿಸಿತ್ತು. ಈ ಐತಿಹಾಸಿಕ ಗೆಲುವಿನಲ್ಲಿ ಭಾರತ ಯುವ ಆಟಗಾರರು ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನು ಗಮನಿಸಿದ್ದ ಆನಂದ್ ಮಹೀಂದ್ರಾ ಅವರು ಭಾರತದ ಯುವ ಆಟಗಾರರಾದ ನಟರಾಜನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ನವದೀಪ್ ಸೈನಿ ಅವರಿಗೆ ಗೆಲುವಿನ ಉಡುಗೊರೆಯಾಗಿ ತಮ್ಮ ಖರ್ಚಿನಲ್ಲಿ ಹೊಸ ಮಹೀಂದ್ರಾ ಥಾರ್ ಎಸ್‍ಯುವಿ ಉಡುಗೊರೆಯಾಗಿ ಕೊಡುವುದಾಗಿ ಹೇಳಿಕೊಂಡಿದ್ದರು.
ಇದೀಗ ಅವರು ನಟರಾಜನ್ ಮತ್ತು ಠಾಕೂರ್ ಅವರಿಗೆ ಥಾರ್ ನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಈ ಇಬ್ಬರು ಯುವ ಆಟಗಾರು ‘ಥಾರ್’ ಅನ್ನು ಮನೆಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇದನ್ನು ಓದಿ ಬಿಡುಗಡೆಯಾದ 4 ದಿನಕ್ಕೆ 9 ಸಾವಿರ ಬುಕ್ಕಿಂಗ್ – ಮಹೀಂದ್ರಾ ಥಾರ್ ಮೈಲುಗಲ್ಲು
ಮಹೀಂದ್ರಾ ಅವರು ಕಾರನ್ನು ಉಡುಗೊರೆಯಾಗಿ ಕೊಡುತ್ತಿದ್ದಂತೆ ನಟರಾಜನ್ ಟ್ಟಿಟ್ಟರ್ ನಲ್ಲಿ ಈ ಕುರಿತು, ನಾನು ಭಾರತದ ಪರವಾಗಿ ಕ್ರಿಕೆಟ್ ಆಡಿರುವುದು ನನಗೆ ಸಿಕ್ಕಂತಹ ಹೆಮ್ಮೆ ಹಾಗೂ ಸಾರ್ಥಕದ ಕ್ಷಣ. ಇದರೊಂದಿಗೆ ನನಗೆ ಸಾಧಕರ ಪ್ರೋತ್ಸಾಹ ಸಿಕ್ಕಿದೆ. ಹಾಗೇ ಇದೀಗ ಸಿಕ್ಕಿರುವ ಶ್ರೇಷ್ಠ ಉಡುಗೊರೆ ನನಗೆ ಯಾವತ್ತು ಸ್ಫೂರ್ತಿಯಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಆನಂದ್ ಮಹೀಂದ್ರಾ ಅವರಿಗೆ ತಾನು ಧರಿಸಿದ್ದ ಭಾರತ ಟೆಸ್ಟ್ ತಂಡದ ಜೆರ್ಸಿಯನ್ನು ತನ್ನ ಹಸ್ತಾಕ್ಷರ ಹಾಕಿ ಮರು ಉಡುಗೊರೆಯಾಗಿ ನೀಡಿದ್ದಾರೆ.
ನಟರಾಜನ್ ಅವರೊಂದಿಗೆ ಕಾರು ಸ್ವೀಕರಿಸಿದ ಇನ್ನೋರ್ವ ಸಹ ಆಟಗಾರ ಶಾರ್ದೂಲ್, ನಾನು ಎಸ್‍ಯುವಿಯನ್ನು ಚಲಾಯಿಸುವ ಮೂಲಕ ಸಂತೋಷಗೊಂಡಿದ್ದೇನೆ. ನನಗೆ ಈ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ ಜೀ ಅವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಇತ್ತ ನಟರಾಜನ್ ಮತ್ತು ಠಾಕೂರ್ ಮಹೀಂದ್ರಾ ಅವರ ಹೊಸ ಥಾರ್ ಉಡುಗೊರೆಯನ್ನು ಸ್ವೀಕರಿಸಿ ಟ್ವೀಟ್ ಮಾಡುತ್ತಿದ್ದಂತೆ, ನೆಟ್ಟಿಗರು ಮಹೀಂದ್ರಾ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿರುವುದನ್ನು ಎಲ್ಲರೂ ಮೆಚ್ಚಿಕೊಂಡು ಈ ಇಬ್ಬರು ಕ್ರಿಕೆಟಿಗರಿಗೆ ಶುಭ ಹಾರೈಸಿದ್ದಾರೆ.