Tag: Thaawarchand Gehlot

  • ರಾಜ್ಯಪಾಲರಿಂದ ಧ್ವಜಾರೋಹಣ – ಪಂಚ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗ್ತಿದೆ: ಗೆಹ್ಲೋಟ್

    ರಾಜ್ಯಪಾಲರಿಂದ ಧ್ವಜಾರೋಹಣ – ಪಂಚ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗ್ತಿದೆ: ಗೆಹ್ಲೋಟ್

    ಬೆಂಗಳೂರು: ಸ್ವಾತಂತ್ರ್ಯೋತ್ಸವದ (Independence) ಅಮೃತ ಮಹೋತ್ಸವ ಹಾಗೂ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜಭವನದ ಅಂಗಳದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thaawarchand Gehlot) ಅವರು ಧ್ವಜಾರೋಹಣ ನೆರವೇರಿಸಿದರು.

    ರಾಜಭವನದ ಅಂಗಳದಲ್ಲಿರುವ ಮಹಾತ್ಮಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ನಂತರ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಭದ್ರತಾ ಅಧಿಕಾರಿ ಎಸಿಪಿ ನಿಂಗಾರೆಡ್ಡಿ ನೇತೃತ್ವದ ಪೊಲೀಸ್ ತಂಡದಿಂದ ಗೌರವ ರಕ್ಷೆ ನೀಡಲಾಯಿತು.

    ರಾಜ್ಯದ ಜನತೆಗೆ ರಾಜ್ಯಪಾಲರ ಸಂದೇಶ:
    ಕರ್ನಾಟಕದ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಆಗಸ್ಟ್ 15 ನಮಗೆ ಐತಿಹಾಸಿಕ ದಿನ ಮತ್ತು ನಮಗೆ ಸ್ವಾತಂತ್ರ್ಯ ನೀಡಿದ ಆ ಮಹಾಪುರುಷರು ಮತ್ತು ಹುತಾತ್ಮರನ್ನು ಸ್ಮರಿಸುವ ದಿನ. ಈ ದಿನ ಅವರಿಂದ ಸ್ಫೂರ್ತಿ ಪಡೆದು ಹೊಸ ಹಾದಿ ಮತ್ತು ಹೊಸ ಸಂಕಲ್ಪದೊಂದಿಗೆ ಮುನ್ನಡೆಯಲು ಅವಕಾಶವಿದೆ ಎಂದರು.

    ಕರ್ನಾಟಕ ದೇಶದ ಪ್ರಗತಿಪರ ರಾಜ್ಯ. ಕರ್ನಾಟಕ ರಾಜ್ಯವು ಅಭಿವೃದ್ಧಿ ಉಪಕ್ರಮಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಗುರಿಯೊಂದಿಗೆ ಮೂಲ ಸೇವೆಗಳಿಗೆ ಪ್ರವೇಶ ಸೇರಿದಂತೆ ವಿವಿಧ ನವೀನ ಮತ್ತು ಅಂತರ್ಗತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಮ್ಮ ರಾಜ್ಯವು ಪ್ರವರ್ತಕವಾಗಿದೆ ಎಂದು ತಿಳಿಸಿದರು.

    ಮಹಿಳೆಯರು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ನಿರುದ್ಯೋಗಿ ಯುವಕರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರದಿಂದ 5 ಖಾತರಿ ಯೋಜನೆಗಳನ್ನು (Congress Guarantees) ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಸರ್ವತೋಮುಖ ಅಭಿವೃದ್ಧಿಯಾಗಿದ್ದು, ದೇಶದ ಆರ್ಥಿಕತೆ ಸಾಕಷ್ಟು ಬಲಿಷ್ಠವಾಗಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ ಪ್ರಮುಖ ದೇಶಗಳಲ್ಲಿ 5 ನೇ ಸ್ಥಾನದಲ್ಲಿದೆ. ಸ್ವಾತಂತ್ರ್ಯದ 100 ನೇ ವರ್ಷಾಚರಣೆಯ ಸಂದರ್ಭದಲ್ಲಿ ಭಾರತವು 100% ವಿದ್ಯಾವಂತರಾಗಿ, ಆರ್ಥಿಕವಾಗಿ ಸದೃಢವಾಗಬೇಕು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ಭಾರತದ ಜನರ ನಿರೀಕ್ಷೆಯಾಗಿದೆ. ಇದಕ್ಕಾಗಿ ನಾವೆಲ್ಲರೂ ದೇಶಕ್ಕಾಗಿ ನಮ್ಮ ಕರ್ತವ್ಯಗಳನ್ನು ಭಕ್ತಿ ಮತ್ತು ಸಮರ್ಪಣಾ ಭಾವದಿಂದ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

    ಪ್ರಸ್ತುತ ದೇಶ ಮತ್ತು ವಿಶ್ವದಲ್ಲಿ ಪರಿಸರ ಅಸಮತೋಲನದ ಗಂಭೀರ ಸಮಸ್ಯೆ ಇದೆ. ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ‘ಅಮ್ಮನ ಹೆಸರಲ್ಲಿ ಒಂದು ಮರ’ ಅಭಿಯಾನದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಬೇಕು. ಪ್ಯಾರಿಸ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ಉತ್ತಮ ಪ್ರದರ್ಶನ ನೀಡಿದ ಎಲ್ಲಾ ಭಾರತೀಯ ಕ್ರೀಡಾಪಟುಗಳಿಗೆ ಅಭಿನಂದನೆಗಳು ಎಂದು ಅವರು ಹೇಳಿದರು.

    ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸಲು, ಪರಿಸರವನ್ನು ಸಂರಕ್ಷಿಸಲು ಮತ್ತು ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮುಂಚೂಣಿಗೆ ತರಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಮತ್ತು ದೇಶದ ಭವಿಷ್ಯದ ಪೀಳಿಗೆಗಳು ನಮ್ಮ ಬಗ್ಗೆ ಉತ್ತಮ ಗ್ರಹಿಕೆಯನ್ನು ಬೆಳೆಸಿಕೊಳ್ಳುವಂತೆ ಶ್ರಮಿಸೋಣ ಎಂದು ಗೌರವಾನ್ವಿತ ರಾಜ್ಯಪಾಲರು ಕರೆ ನೀಡಿದರು.

    ಈ ಸಂದರ್ಭದಲ್ಲಿ ರಾಜಭವನದ ವಿಶೇಷ ಕಾರ್ಯದರ್ಶಿಗಳಾದ ಪ್ರಭುಶಂಕರ್, ರಾಜ್ಯಪಾಲರ ಆಪ್ತ ಕಾರ್ಯದರ್ಶಿಗಳಾದ ಪಂಕಜ್ ಮೆಹ್ತಾ, ಉಪ ಕಾರ್ಯದರ್ಶಿಗಳ ಯೋಗೇಶ್ ಉಪಧ್ಯಾಯ್,ಎಡಿಸಿ ಸಾಬುಥಾಮಸ್, ಎಡಿಸಿ ಸಂದೀಪ್ ಶರ್ಮಾ, ಒಎಸ್ ಡಿಗಳಾದ ಶಂಕರ್ ಲಾಲ್ ಗುಜರ್, ಆದರ್ಶ್ ಪಾಸ್ವಾನ್ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ ‘ಕೈ’ ನಾಯಕರು

    ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ ‘ಕೈ’ ನಾಯಕರು

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಎಂದು ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ (Thaawarchand Gehlot) ಅವರಿಗೆ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

    ಕೆಪಿಸಿಸಿ ಕಚೇರಿಯಲ್ಲಿ ಸಿಎಲ್‌ಪಿ ಸಭೆ ನಡೆಸಿದ ಬಳಿಕ ರಾಜಭವನಕ್ಕೆ ‘ಕೈ’ ನಾಯಕರು ತೆರಳಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ (DK Shivakumar) ಅವರು ರಾಜ್ಯಪಾಲರಿಗೆ ಸರ್ಕಾರ ರಚನೆ ಹಕ್ಕು ಮಂಡಿಸಿದರು. ಇವರಿಗೆ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ, ಶಾಸಕ ರಾಮಲಿಂಗ ರೆಡ್ಡಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ಸಾಥ್‌ ನೀಡಿದರು. ಇದನ್ನೂ ಓದಿ: ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದು ಆಯ್ಕೆ – ಸಿದ್ದರಾಮಯ್ಯ ಸಿಎಂ ಎಂದು ಘೋಷಿಸಿದ ಡಿಕೆಶಿ

    ಕರ್ನಾಟಕ ಸಿಎಂ ಗಾದಿಗಾಗಿ ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಹೈಡ್ರಾಮ ನಡೆದಿತ್ತು. ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರೂ ಪಟ್ಟು ಹಿಡಿದಿದ್ದರು. ಹೈಕಮಾಂಡ್‌ ಎಷ್ಟು ಮನವೊಲಿಸಿದರೂ ಬಗ್ಗಿರಲಿಲ್ಲ. ಕೆಲ ಷರತ್ತುಗಳೊಂದಿಗೆ ಕೊನೆಗೂ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಲು ಡಿಕೆಶಿ ಒಪ್ಪಿಗೆ ಸೂಚಿಸಿದರು. ತಾವು ಡಿಸಿಎಂ ಪಟ್ಟ ಪಡೆದರು.

    ಅತ್ತ ಸಿದ್ದರಾಮಯ್ಯ ಸಿಎಂ ಎಂಬುದು ಖಚಿತವಾಗುತ್ತಿದ್ದಂತೆ ಇತ್ತ ಡಾ. ಪರಮೇಶ್ವರ್‌ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಮುಂದೆ ಸರ್ಕಾರ ರಚನೆ ಕುರಿತು ಮಾಹಿತಿ ನೀಡಿದರು. ಇದೇ ಮೇ 20 ರಂದು ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌ ನಾಯಕರು ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನೂ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ನೂತನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಶುಭಕೋರಿದ ಮಾಜಿ ಸಿಎಂ ಬೊಮ್ಮಾಯಿ

  • ಆಯುಧ ಪೂಜೆ ಪ್ರಯುಕ್ತ ರಾಜಭವನದಲ್ಲಿ ರಾಜ್ಯಪಾಲರಿಂದ ವಿಶೇಷ ಪೂಜೆ

    ಆಯುಧ ಪೂಜೆ ಪ್ರಯುಕ್ತ ರಾಜಭವನದಲ್ಲಿ ರಾಜ್ಯಪಾಲರಿಂದ ವಿಶೇಷ ಪೂಜೆ

    ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ರಾಜಭವನದಲ್ಲಿ  ವಿಶೇಷ ಪೂಜೆ ಸಲ್ಲಿಸಿದರು.

    ರಾಜಭವನದ ಆಡಳಿತ ಕಚೇರಿಯಲ್ಲಿ ತಾಯಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ರಾಜ್ಯಪಾಲರು, ಆಯುಧ ಪೂಜೆ ಅಂಗವಾಗಿ ರಾಜಭವನದ ಪೊಲೀಸ್ ಗಾರ್ಡ್ ಕೊಠಡಿಯಲ್ಲಿ ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಇರಿಸಿ ಪೂಜೆ ನೆರವೇರಿಸಿದರು. ಇದನ್ನೂ ಓದಿ: ನಾಡಿನೆಲ್ಲೆಡೆ ಆಯುಧಪೂಜೆಯ ಸಂಭ್ರಮ – ರಾಜವಂಶಸ್ಥರ ಆಯುಧಗಳಿಗೆ ಪೂಜೆ ಸಲ್ಲಿಸಲಿರುವ ಯದುವೀರ್      

    ನಂತರ ರಾಜಭವನದ ವಾಹನಗಳಿಗೆ ಪೂಜೆ ಸಲ್ಲಿಸಿ, ಎಲ್ಲರಿಗೂ ಶುಭ ಕೋರಿದರು. ಈ ಸಂಧರ್ಭದಲ್ಲಿ ರಾಜಭವನದ ಆಡಳಿತ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಇದನ್ನೂ ಓದಿ:  ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?