Tag: TG Srinidhi

  • ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರ ಉದ್ಘಾಟನೆ – ‘ಬೆರಳ ತುದಿಯ ಬೆರಗು’ ಪುಸ್ತಕ ಲೋಕಾರ್ಪಣೆ

    ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರ ಉದ್ಘಾಟನೆ – ‘ಬೆರಳ ತುದಿಯ ಬೆರಗು’ ಪುಸ್ತಕ ಲೋಕಾರ್ಪಣೆ

    ಬೆಂಗಳೂರು: ಅಂತಾರಾಷ್ಟ್ರೀಯ ತಾಯ್ನುಡಿ ದಿನ- 2021ರ ಸಂದರ್ಭಕ್ಕೆ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ಶನಿವಾರದಂದು ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗಾಗಿ ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರವನ್ನು ನಡೆಯಲಿದೆ. ತಂತ್ರಜ್ಞಾನ ಜಗತ್ತನ್ನು ಕುರಿತು ಲೇಖಕ ಟಿ. ಜಿ. ಶ್ರೀನಿಧಿ ಬರೆದಿರುವ ‘ಬೆರಳ ತುದಿಯ ಬೆರಗು’ ಕೃತಿ ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ.

    ಸುರಾನಾ ಕಾಲೇಜಿನ ಕನ್ನಡ ವಿಭಾಗವು ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಕುರಿತ ಕಾರ್ಯಾಗಾರಗಳನ್ನು ಹಲವು ವರ್ಷಗಳಿಂದ ಆಯೋಜಿಸುತ್ತಿದ್ದು, ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದೆ. ಸಂಸ್ಥೆಯ ಟಿ. ಜಿ. ಶ್ರೀನಿಧಿ ಹಾಗೂ ಅಭಿಷೇಕ್ ಜಿ. ಎಸ್. ಅವರು ನಡೆಸಿಕೊಡಲಿರುವ ಈ ಕಾರ್ಯಾಗಾರವು ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳು, ಕನ್ನಡ ತಂತ್ರಾಂಶಗಳು, ಕನ್ನಡದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅವಕಾಶಗಳು ಸೇರಿದಂತೆ ಹಲವು ವಿಷಯಗಳ ಸ್ಥೂಲ ಪರಿಚಯ ಮಾಡಿಕೊಡಲಿದೆ.

    ಅಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುರಾನಾ ವಿದ್ಯಾಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟೀ ಡಾ. ಅರ್ಚನಾ ಸುರಾನಾ, ಪ್ರಾಂಶುಪಾಲರಾದ ಡಾ. ಭವಾನಿ ಎಂ. ಆರ್., ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವತ್ಸಲಾ ಮೋಹನ್, ಇಜ್ಞಾನ ಟ್ರಸ್ಟ್‌ನ ಟಿ. ಜಿ. ಶ್ರೀನಿಧಿ ಉಪಸ್ಥಿತರಿರಲಿದ್ದಾರೆ. ಲೋಕಾರ್ಪಣೆಯಾಗುತ್ತಿರುವ ‘ಬೆರಳ ತುದಿಯ ಬೆರಗು’ ಕೃತಿಯನ್ನು ವಿಕಾಸ ಪ್ರಕಾಶನ ಪ್ರಕಟಿಸಿದೆ.

  • ವಿಜ್ಞಾನಿಗಳು ಸ್ಟಾರ್‌ಗಳಾದಾಗ ವಿಜ್ಞಾನ ಬೆಳೆಯಲಿದೆ – ಕೊಳ್ಳೇಗಾಲ ಶರ್ಮಾ

    ವಿಜ್ಞಾನಿಗಳು ಸ್ಟಾರ್‌ಗಳಾದಾಗ ವಿಜ್ಞಾನ ಬೆಳೆಯಲಿದೆ – ಕೊಳ್ಳೇಗಾಲ ಶರ್ಮಾ

    ಬೆಂಗಳೂರು: ವಿಜ್ಞಾನಿಯೊಬ್ಬನ ಕೂದಲ ವಿನ್ಯಾಸವನ್ನು ಕಾಲೇಜು ಯುವಕರು ಅನುಸರಿಸಿದ ದಿನ ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಕಾಣಲಿದೆ. ಸ್ಟಾರ್ ನಟರು ಇದ್ದಂತೆ, ವಿಜ್ಞಾನಿಗಳು ತಾರೆಯರಾಗಬೇಕಿದೆ ಎಂದು ಸಿಎಫ್‍ಟಿಆರ್‌ಐನ ನಿವೃತ್ತ ವಿಜ್ಞಾನಿ ಹಾಗೂ ಹಿರಿಯ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

    ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘಗಳು ಶುಕ್ರವಾರ ಜಂಟಿಯಾಗಿ ಆಯೋಜಿಸಿದ್ದ `ಭಾರತದಲ್ಲಿ ವಿಜ್ಞಾನದ ಬೆಳವಣಿಗೆ’ ಕುರಿತ ವೆಬಿನಾರ್‌ನಲ್ಲಿ `ಅಭಿವೃದ್ಧಿಶೀಲ ಭಾರತದಲ್ಲಿ ವಿಜ್ಞಾನ’ ವಿಷಯದ ಕುರಿತು ಅವರು ಮಾತನಾಡಿದರು. ಡಿಸೆಂಬರ್ 22ರಿಂದ ಆರಂಭವಾಗಲಿರುವ `ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮಹೋತ್ಸವ -2020’ಕ್ಕೆ ಪೂರ್ವಭಾವಿಯಾಗಿ ಈ ವೆಬಿನಾರ್ ಆಯೋಜಿಸಲಾಗಿತ್ತು.

    `ಭಾರತವು ಸಾವಿರಾರು ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿದ್ದರೂ ಯಂತ್ರಗಳನ್ನಾಧರಿಸಿದ ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಹಿಂದಕ್ಕೆ ಉಳಿಯಿತು. ಇದಕ್ಕೆ ಇಲ್ಲಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಕಾರಣ ಇರಬಹುದು. ಆದರೆ, 1958ರಲ್ಲಿ ಸ್ವಾತಂತ್ರ್ಯ ಬಂದ ಹೊಸದರಲ್ಲೇ ದೇಶದ ಅಭಿವೃದ್ಧಿಗೆ ವಿಜ್ಞಾನದ ಬೆಳವಣಿಗೆ ಅನಿವಾರ್ಯ ಎಂದು ಮನಗಂಡು ವೈಜ್ಞಾನಿಕ ನೀತಿಯನ್ನು ಆಡಳಿತದಲ್ಲಿ ಅಳವಡಿಸಿಕೊಂಡಿತ್ತು. ವೈಜ್ಞಾನಿಕ ಸಂಶೋಧನೆ ಮತ್ತು ಕೈಗಾರಿಕೆಗಳ ಬೆಳವಣಿಗೆಯ ನಡುವಿನ ಸಂಬಂಧ ಅರಿತುಕೊಂಡು ಸ್ವಾತಂತ್ರ್ಯಪೂರ್ವದಲ್ಲಿ 1942ರಲ್ಲೇ `ಕೌನ್ಸಿಲ್ ಆಫ್ ಸೈಂಟಿಫಿಕ್ ಎಂಡ್ ಇಂಡಸ್ಟ್ರಿಯಲ್ ರಿಸರ್ಚ್’ ಸ್ಥಾಪಿಸಲಾಗಿತ್ತು. ಪರಮಾಣು ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಕೈಗಾರಿಕೆ, ಕೃಷಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ, ದೇಶದ ಇತರ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾದ ಸಲಕರಣೆ, ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳದಂತೆ ನಾವು ಸ್ವಾವಲಂಬನೆ ಸಾಧಿಸುವ ಅಗತ್ಯವಿದೆ’ ಎಂದು ಶರ್ಮ ಅವರು ಪ್ರತಿಪಾದಿಸಿದರು.

    `ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನದ ಇತಿಹಾಸ’ ದ ಕುರಿತು ಮಾತನಾಡಿದ ಇಜ್ಞಾನ.ಕಾಮ್ ಸಂಪಾದಕ ಶ್ರೀನಿಧಿ ಟಿ.ಜಿ. ಅವರು, `1931ರಲ್ಲಿ ಕೋಲ್ಕತ್ತದಲ್ಲಿ `ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್’ ಸ್ಥಾಪಿಸಿದ ಪ್ರಶಾಂತ್ ಚಂದ್ರ ಮಹಾಲಾನೋಬಿಸ್ ಅವರು ವಿದೇಶಗಳಲ್ಲಿ ನಡೆಯುತ್ತಿದ್ದ ಸಂಶೋಧನೆಗಳನ್ನು ಗಮನಿಸಿ, ತಮ್ಮ ಸಂಸ್ಥೆಯ ಕೆಲಸಗಳಿಗಾಗಿ ಕಂಪ್ಯೂಟರ್ ಅಗತ್ಯ ಮನಗಂಡು 1953ರಲ್ಲೇ ಅನಲಾಗ್ ಕಂಪ್ಯೂಟರನ್ನು ತಮ್ಮ ಪ್ರಯೋಗಾಲಯದಲ್ಲೇ ರೂಪಿಸಿದರು. ಆನಂತರ ಭಾರತದ ಪರಮಾಣು ವಿಜ್ಞಾನದ ಪಿತಾಮಹ ಅನಿಸಿಕೊಂಡ ಡಾ. ಹೋಮಿ ಭಾಬಾ ಅವರು, ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮಂಟಲ್ ರಿಸರ್ಚ್‍ನಲ್ಲಿ ಕಂಪ್ಯೂಟರ್ ಅಭಿವೃದ್ಧಿಗೆ ಒತ್ತು ನೀಡಿದರು. ಟಿಐಎಫ್‍ಆರ್‌ನ ಪ್ರೊ. ನರಸಿಂಹನ್ ನೇತೃತ್ವದ ತಂಡ ಸತತ ಸಂಶೋಧನೆ ನಡೆಸಿ, 1960ರಲ್ಲಿ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ರೂಪಿಸಿತು. ಇದು ಭಾರತದಲ್ಲೇ ಸಿದ್ಧಗೊಂಡ ಮೊದಲ ಡಿಜಿಟಲ್ ಕಂಪ್ಯೂಟರ್’ ಎಂದು ಮಾಹಿತಿ ನೀಡಿದರು. 50, 60 ದಶಕದಲ್ಲೇ ನಮ್ಮ ವಿಜ್ಞಾನಿಗಳು ಮಾಡಿದ ಸಾಧನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಕಂಪ್ಯೂಟರ್ ಕ್ಷೇತ್ರದಲ್ಲಿ ನಾವು ಕೇವಲ ಬಳಕೆದಾರರಾಗದೇ ಮತ್ತಷ್ಟು ಆವಿಷ್ಕಾರಗಳನ್ನು ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

    `ಎಲ್ ಅಂಡ್ ಟಿ’ ಸಂಸ್ಥೆಯ ಡಿಜಿಟಲ್ ಸೇವೆಗಳ ಮುಖ್ಯಸ್ಥರಾದ ಶಶಿಧರ್ ಡೊಂಗ್ರೆ ಅವರು, ಜಗತ್ ಪ್ರಸಿದ್ಧ ವಿಜ್ಞಾನಿಗಳ ಬಗ್ಗೆ ನಾಟಕ ಪ್ರಸ್ತುತಪಡಿಸಿ ವಿಜ್ಞಾನವನ್ನು ಜನಪ್ರಿಯಗೊಳಿಸಬಹುದಾಗಿದೆ ಎಂದು ಹೇಳಿದರು. ಯುರೋಪ್‍ನಲ್ಲಿ ವಿಜ್ಞಾನ ನಾಟಕಗಳು ಬಹು ಪ್ರಸಿದ್ಧವಾಗಿದ್ದು, ಕೆಲ ನಾಟಕಗಳು ಕನ್ನಡಕ್ಕೂ ಅನುವಾದಗೊಂಡು ರಂಗಕ್ಕೆ ಬಂದಿವೆ ಮತ್ತು ಜನಪ್ರಿಯವೂ ಆಗಿವೆ ಎಂದು ಅವರು ತಿಳಿಸಿದರು.

    ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಅಧಿಕಾರಿ ಜಯಂತಿ ಸ್ವಾಗತಿಸಿದರು. ಪತ್ರಕರ್ತೆಯರ ಸಂಘದ ಕಾರ್ಯದರ್ಶಿ ಮಾಲತಿ ಭಟ್ ವಂದಿಸಿದರು. ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಹಿರಿಯ ಪತ್ರಕರ್ತೆಯರಾದ ಎಂ. ಪಿ. ಸುಶೀಲಾ, ಕೆ. ಎಚ್. ಸಾವಿತ್ರಿ, ಸಿ. ಜಿ. ಮಂಜುಳಾ, ಪತ್ರಕರ್ತ ಮತ್ತು ಬರಹಗಾರ ಜಿ. ಎನ್. ಮೋಹನ್, ಪತ್ರಕರ್ತೆಯರಾದ ಎಸ್. ನಯನಾ, ಚಿತ್ರಾ ಫಾಲ್ಗುಣಿ, ಶ್ರೀಜಾ ವಿ. ಎನ್. ಜಗದೀಶ್ವರಿ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.

  • ಹೊಸ ರೂಪದಲ್ಲಿ ಇಜ್ಞಾನ.ಕಾಂ

    ಹೊಸ ರೂಪದಲ್ಲಿ ಇಜ್ಞಾನ.ಕಾಂ

    –  ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ನೀಡುವ ಜಾಲತಾಣ  ಅನಾವರಣ
    – ಇಜ್ಞಾನ ಟ್ರಸ್ಟ್ ನಿರ್ವಹಿಸುತ್ತಿರುವ ಲಾಭಾಪೇಕ್ಷೆಯಿಲ್ಲದ ಜಾಲತಾಣ ಈಗ ಇನ್ನಷ್ಟು ವೈವಿಧ್ಯಮಯ

    ಮೈಸೂರು: ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿಯ ಪ್ರಕಟಣೆಗೆ ಹೆಸರುವಾಸಿಯಾಗಿರುವ  ejnana.com  ಜಾಲತಾಣದ ಹೊಸ ರೂಪ  ಲೋಕಾರ್ಪಣೆಯಾಗಿದೆ.

    ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ನಡೆಯುತ್ತಿರುವ ವಿಜ್ಞಾನ ಸಂವಹನ ಸಮಾವೇಶದ ಉದ್ಘಾಟನಾ ಸಮಾರಂಭದ ನಂತರ ಇಜ್ಞಾನ ಜಾಲತಾಣದ ಹೊಸ ಆವೃತ್ತಿಯನ್ನು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ ನಿರ್ದೇಶಕರಾದ ಡಾ. ಕೆ ಎಸ್ ಎಂ ಎಸ್ ರಾಘವರಾವ್, ಹಿರಿಯ ಪ್ರಧಾನ ವಿಜ್ಞಾನಿ ಎಎಸ್ ಕೆವಿಎಸ್ ಶರ್ಮ, ವಿಜ್ಞಾನ ಪ್ರಸಾರ್ ಪ್ರಮುಖ ವಿಜ್ಞಾನಿ ಡಾ. ಟಿ ವಿ ವೆಂಕಟೇಶ್ವರನ್   ಲೋಕಾರ್ಪಣೆಗೊಳಿಸಿದರು.

    2007ರಲ್ಲಿ ಪ್ರಾರಂಭವಾದ ಇಜ್ಞಾನ ಜಾಲತಾಣವು ವೈವಿಧ್ಯಮಯ ಮಾಹಿತಿಯ ನಿರಂತರ ಪ್ರಕಟಣೆಯಿಂದಾಗಿ ಕನ್ನಡದ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಉದ್ದೇಶದಿಂದ ಜಾಲತಾಣವನ್ನು ಇದೀಗ ಉನ್ನತೀಕರಿಸಲಾಗಿದ್ದು, ಹೊಸ ವಿನ್ಯಾಸದ ಜೊತೆಗೆ ಅನೇಕ ಹೊಸ ವಿಭಾಗಗಳನ್ನೂ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಸೆ.20, 21 ರಂದು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ

    ಹೊಸ ಸ್ವರೂಪದ ಜಾಲತಾಣದಲ್ಲಿ ಬೆಂಗಳೂರು ಮೂಲದ ಕ್ವಿನ್‍ಟೈಪ್ ಟೆಕ್ನಾಲಜೀಸ್ ಸಂಸ್ಥೆ ರೂಪಿಸಿರುವ ಡಿಜಿಟಲ್ ಪಬ್ಲಿಶಿಂಗ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಅದು ಇಜ್ಞಾನದ ಮಾಹಿತಿ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲಿದೆ. ಈ ತಂತ್ರಜ್ಞಾನವನ್ನು ಇಜ್ಞಾನ ಜಾಲತಾಣಕ್ಕೆ ಯಾವುದೇ ಶುಲ್ಕವಿಲ್ಲದೆ ಒದಗಿಸುವ ಮೂಲಕ ಕ್ವಿನ್‍ಟೈಪ್ ಸಂಸ್ಥೆ ಕನ್ನಡದಲ್ಲಿ ವಿಜ್ಞಾನ ಸಂವಹನವನ್ನು ಬಲಪಡಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.

    ಇಜ್ಞಾನ ಜಾಲತಾಣದ ಕುರಿತು:
    ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಇಜ್ಞಾನ ಜಾಲತಾಣವನ್ನು ನಿರ್ವಹಿಸುತ್ತಿದ್ದು, ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಜನರಿಗೆ ಸರಳವಾಗಿ ತಲುಪಿಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿದೆ. ತಂತ್ರಜ್ಞಾನ ಬರಹಗಾರ ಟಿ. ಜಿ. ಶ್ರೀನಿಧಿ ಈ ತಾಣದ ಸ್ಥಾಪಕ ಸಂಪಾದಕರಾಗಿದ್ದಾರೆ. 2017ರ ಇಂಡಿಯನ್ ಬ್ಲಾಗರ್ ಅವಾರ್ಡ್ಸ್‌ನಲ್ಲಿ ಇಜ್ಞಾನ ಜಾಲತಾಣಕ್ಕೆ ಅತ್ಯುತ್ತಮ ಕನ್ನಡ ಬ್ಲಾಗ್ ಎಂಬ ಗೌರವ ದೊರೆತಿದೆ.

  • ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನ.11ರಂದು ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮ

    ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನ.11ರಂದು ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮ

    ಬೆಂಗಳೂರು: ಕನ್ನಡದ ಮೊದಲ ವಿಜ್ಞಾನ ಪತ್ರಿಕೆ ‘ವಿಜ್ಞಾನ’ ಪ್ರಕಟವಾಗಿ ಇದೀಗ ನೂರು ವರ್ಷ ಸಂದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರವು ಇಜ್ಞಾನ ಟ್ರಸ್ಟ್ ಹಾಗೂ ಉದಯಭಾನು ಕಲಾಸಂಘದ ಸಹಯೋಗದೊಡನೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.

    ಈ ಕಾರ್ಯಕ್ರಮ ಬರುವ ನವೆಂಬರ್ 11ರಂದು ಬೆಳಿಗ್ಗೆ 10 ಗಂಟೆಯಿಂದ ಜಯನಗರದ ನ್ಯಾಶನಲ್ ಕಾಲೇಜು ಆವರಣದಲ್ಲಿರುವ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಕನ್ನಡದ ಮುದ್ರಣ ಮಾಧ್ಯಮ, ಟೀವಿ, ರೇಡಿಯೋ ಹಾಗೂ ಜಾಲತಾಣಗಳಲ್ಲಿ ವಿಜ್ಞಾನ ಸಂವಹನದ ಸ್ಥಿತಿ-ಗತಿಗಳನ್ನು ಕುರಿತು ಆಯಾ ಕ್ಷೇತ್ರದ ಪರಿಣತರೊಡನೆ ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಇರಲಿದೆ.

    ದಿವಂಗತ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು 1918ರಲ್ಲಿ ಪ್ರಾರಂಭಿಸಿದ್ದ ‘ವಿಜ್ಞಾನ’ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲೊಂದು ಮಹತ್ವದ ಮೈಲಿಗಲ್ಲು. ವಿಜ್ಞಾನ ಬರಹಗಳನ್ನು ಸಾಮಾನ್ಯ ಓದುಗರಿಗೂ ಪರಿಚಯಿಸಿದ ಈ ಅಪರೂಪದ ಪ್ರಯತ್ನದ ಕುರಿತು ಇದೇ ಸಂದರ್ಭದಲ್ಲಿ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಉಪನ್ಯಾಸ ನೀಡಲಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv