Tag: Text

  • ಎಚ್‍ಡಿಕೆ ಅಪ್ಪ, ಅಣ್ಣ, ಮಗ ಸೋತಿಲ್ವಾ: ಸಿದ್ದರಾಮಯ್ಯ ತಿರುಗೇಟು

    ಎಚ್‍ಡಿಕೆ ಅಪ್ಪ, ಅಣ್ಣ, ಮಗ ಸೋತಿಲ್ವಾ: ಸಿದ್ದರಾಮಯ್ಯ ತಿರುಗೇಟು

    ಬೆಂಗಳೂರು: ಕುಮಾರಸ್ವಾಮಿ ಹೇಳಿಕೆಗೆ ರಿಯಾಕ್ಟ್ ಮಾಡಲ್ಲ. ಅವರ ಭಾಷೆ ಅವರ ಸಂಸ್ಕೃತಿ ತೋರಿಸುತ್ತದೆ. ಚುನಾವಣೆಯಲ್ಲಿ ಸೋಲು ಗೆಲುವು ನಿರ್ಧಾರ ಮಾಡುವುದು ಮತದಾರ. ಮತದಾರ ಕೊಟ್ಟ ತೀರ್ಪನ್ನು ನಾವು ಸ್ವೀಕಾರ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ನಾನು ಸೋತಿದ್ದೇನೆ. ಅವರ ಅಪ್ಪ ಸೋತಿಲ್ವಾ? ಮಗ ಸೋತಿಲ್ವಾ? ಅಣ್ಣ ಸೋತಿಲ್ವಾ? ಎಂದು ಕಿಡಿಕಾರಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪು ಅಂತಿಮ. ನಾನು ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷ ಆಗಿದ್ದಾಗ ಈ ಕುಮಾರಸ್ವಾಮಿ ಎಲ್ಲಿದ್ದರೂ ಎನ್ನುವುದೇ ಗೊತ್ತಿಲ್ಲ. ನಾನೇಕೆ ಇವರ ಮುಂದೆ ಹೋಗಿ ಕೈ ಕಟ್ಟಿ ನಿಲ್ಲಲಿ. ಕಣ್ಣೀರು ಹಾಕಲಿ ಎಂದು ಪ್ರಶ್ನಿಸಿದರು.

    ಈಗ ರಾಜ್ಯದ ಜನರ ಮುಂದೆ ಕಣ್ಣೀರು ಹಾಕುತ್ತಿರುವುದು ಯಾರೆಂದು ಗೊತ್ತಿದೆ. ನಾನೇಕೆ ಕಣ್ಣಿರು ಹಾಕಲಿ. ಇವರ ಭಾಷೆ ಇವರ ರಾಜಕೀಯ ಸಂಸ್ಕೃತಿ ತೋರಿಸುತ್ತದೆ. ನನ್ನನ್ನು ಕಂಡರೆ ಕುಮಾರಸ್ವಾಮಿಗೆ ಭಯ. ನನ್ನ ವಿರುದ್ಧ ಮಾತನಾಡಿದರೆ ಅವರಿಗೆ ರಾಜಕೀಯ ಲಾಭವಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪಾದಯಾತ್ರೆ ಮೊಟಕುಗೊಳಿಸಿಲು ಸರ್ಕಾರದಿಂದ ವೀಕೆಂಡ್ ಕರ್ಫ್ಯೂ ಜಾರಿ: ಈಶ್ವರ್ ಖಂಡ್ರೆ

    ಜನರ ಮೇಲೆ ತೆರಿಗೆ ಹಾಕಬೇಡಿ: ವೀಕೆಂಡ್ ಕರ್ಫ್ಯೂ ನಿನ್ನೆ ವಾಪಸ್ ಪಡೆದಿದ್ದಾರೆ. ತೆರಿಗೆ ಈಗ ಏರಿಕೆ ಮಾಡುವುದು ಸರಿಯಲ್ಲ. ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹಾಕಬೇಕು. ಜನಸಾಮಾನ್ಯರ ಮೇಲೆ ತೆರಿಗೆ ಹಾಕಬೇಡಿ. ಈಗಾಗಲೇ ಕೊರೊನಾದಿಂದ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಸಣ್ಣಪುಟ್ಟ ಆದಾಯ ಇರುವವರು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಯಾತ್ರೆ: ಎಸ್.ಆರ್.ಹಿರೇಮಠ

    ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಇಂಧನ ಮಂತ್ರಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ದರ, ಕುಡಿಯುವ ನೀರಿನ ದರ ಏರಿಕೆ ಮಾಡಬಾರದು. ತಮಿಳುನಾಡಿನ ಹೊಗೇನಕಲ್ ಯೋಜನೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ಈ ಬಗ್ಗೆ ಕಾನೂನು ತಜ್ಞರನ್ನು ಸರ್ಕಾರ ಸಂಪರ್ಕಿಸಬೇಕು. ತಮಿಳುನಾಡು ಯೋಜನಾ ವರದಿ ಸಿದ್ಧ ಮಾಡುತ್ತಿದೆ. ಇದನ್ನು ಕೇಂದ್ರ ಸರ್ಕಾರ ಒಪ್ಪಬಾರದು. ಅದಕ್ಕೆ ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ಮೇಕೆದಾಟು ವಿಚಾರವಾಗಿ ಇನ್ನೂ 7 ದಿನ ಪಾದಯಾತ್ರೆ ಬಾಕಿ ಇದೆ. ಮೇಕೆದಾಟು ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ಯಾವುದೇ ಅಡ್ಡಿ ಇಲ್ಲ. ಈಗಾಗಲೇ ನ್ಯಾಯಾಧಿಕರಣ ತೀರ್ಪು ನೀಡಿದೆ ಎಂದರು.

  • ಸೋನಿಯಾ ಗಾಂಧಿ ಜೀವನ ಚರಿತ್ರೆ ಪಠ್ಯವಾಗಿಸಿ- ಸಿಎಂಗೆ ಮನವಿ

    ಸೋನಿಯಾ ಗಾಂಧಿ ಜೀವನ ಚರಿತ್ರೆ ಪಠ್ಯವಾಗಿಸಿ- ಸಿಎಂಗೆ ಮನವಿ

    – ಗೌರವ, ಕೃತಜ್ಞತೆ ಸಲ್ಲಿಸಲು ಪಠ್ಯದಲ್ಲಿ ಸೇರಿಸಿ

    ಹೈದರಾಬಾದ್: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯನ್ನು ಶಾಲೆ ಪಠ್ಯಕ್ಕೆ ಸೇರಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಎಐಸಿಸಿ ವಕ್ತಾರ ದಾಸೋಜು ಶ್ರವಣ್ ಮನವಿ ಮಾಡಿದ್ದಾರೆ.

    ಸೋನಿಯಾ ಗಾಂಧಿ ಅವರ 74ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಈ ಕುರಿತು ಹೇಳಿದ್ದು, ತೆಲಂಗಾಣ ಸಿಎಂಗೆ ಪತ್ರವನ್ನು ಸಹ ಬರೆಯಲಾಗಿದೆ. ಸೋನಿಯಾ ಗಾಂಧಿ ಅವರಿಗೆ ಗೌರವ ಹಾಗೂ ಕೃತಜ್ಞತೆಯ ಸಂಕೇತವಾಗಿ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಲಾಗಿದೆ.

    ತೆಲಂಗಾಣ ರಾಜ್ಯವನ್ನು ಘೋಷಿಸುವ ಮೂಲಕ ದೊಡ್ಡ ಉಡುಗುರೆಯನ್ನು ಸೋನಿಯಾ ಗಾಂಧಿ ನೀಡಿದ್ದಾರೆ. ಹೀಗಾಗಿ ಅವರನ್ನು ಗೌರವಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. ಕೆಸಿಆರ್ ಪ್ರತ್ಯೇಕ ರಾಜ್ಯದ ಮೊದಲ ಫಲಾನುಭವಿಯಾಗಿದ್ದರೂ, ಸೋನಿಯಾ ಗಾಂಧಿ ಅವರನ್ನು ಗೌರವಿಸುವ ಕುರಿತು ಆಸಕ್ತಿ ತೋರಲಿಲ್ಲ ಎಂದು ಅವರು ಹೇಳಿದ್ದಾರೆ.

    ಯುಪಿಎ ಅಧಿಕಾರದಲ್ಲಿದ್ದಾಗ ತೆಲಂಗಾಣ ರಾಜ್ಯವನ್ನು ರಚಿಸಲಾಗಿದೆ. ಅಲ್ಲದೆ ಟಿಆರ್‍ಎಸ್ ಮುಖ್ಯಸ್ಥರು ಈ ಕುರಿತು ವಿಧಾನಸಭೆಯಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿದ್ದು, ತೆಲಂಗಾಣ ಪ್ರತ್ಯೇಕ ರಾಜ್ಯದ ಕನಸು ನನಸಾಗಲು ಸೊಣಿಯಾ ಗಾಂಧಿಯವರಿಂದ ಮಾತ್ರ ಸಾಧ್ಯ ಎಂದಿದ್ದರು ಎಂದು ಶ್ರವಣ್ ಉಲ್ಲೇಖಿಸಿದ್ದಾರೆ.

    2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಅಧಿಕೃತವಾಗಿ ರಚನೆಯಾಯಿತು. 2014ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಸಹ ನಡೆಯಿತು. ಈ ವೇಳೆ ಒಟ್ಟು 119 ಸ್ಥಾನಗಳ ಪೈಕಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) 63 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿತು. 21 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಕ್ಕೆ ಸೀಮಿತವಾಯಿತು.

  • ಟಿಪ್ಪು ಸುಲ್ತಾನ್ ಪಠ್ಯವನ್ನ ಕೈ ಬಿಟ್ಟ ಸರ್ಕಾರಕ್ಕೆ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ

    ಟಿಪ್ಪು ಸುಲ್ತಾನ್ ಪಠ್ಯವನ್ನ ಕೈ ಬಿಟ್ಟ ಸರ್ಕಾರಕ್ಕೆ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ

    ಮಡಿಕೇರಿ: ಏಳನೇ ತರಗತಿಯ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಅಧ್ಯಾಯವನ್ನು ತೆಗೆದು ಹಾಕಿರುವುದರಿಂದ ರಾಜ್ಯ ಸರ್ಕಾರಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ ಸಮರ್ಪಿಸಿದ್ದಾರೆ. ಇದನ್ನೂ ಓದಿ: 7ನೇ ತರಗತಿಯಲ್ಲಿದ್ದ ಟಿಪ್ಪು ಸುಲ್ತಾನ್‌ ಪಠ್ಯವನ್ನು ಕೈ ಬಿಟ್ಟ ಸರ್ಕಾರ

    ಟಿಪ್ಪು ಸುಲ್ತಾನ್ ಎನ್ನುವ ಹೆಸರೇ ಕೊಡಗಿಗೆ ಒಂದು ಅಪಮಾನ. ಆತ ಏನನ್ನೂ ಮಾಡದಿದ್ದರೂ ಪಠ್ಯದಲ್ಲಿ ಆತನ ವಿಷಯವನ್ನಿಟ್ಟು ಐತಿಹಾಸಿಕವಾಗಿ ವಿಜೃಂಭಿಸುವ ಕೆಲಸವನ್ನು ಮಾಡಲಾಗಿತ್ತು. ಟಿಪ್ಪು ಮಾಡಿರುವುದು ಎಲ್ಲವೂ ಅನ್ಯಾಯದ ಕೆಲಸಗಳು. ಈ ಹಿನ್ನೆಲೆ ಜಿಲ್ಲೆಯ ಜನರು ಸೇರಿದಂತೆ ಅನೇಕರು ಟಿಪ್ಪು ಪಠ್ಯ ಕ್ರಮವನ್ನು ತರಬಾರದು ಎಂದು ಹೋರಾಟ ನಡೆಸಿದ್ದರು. ಇದೀಗ ರಾಜ್ಯ ಸರ್ಕಾರ ತಜ್ಞರ ಸಭೆ ನಡೆಸಿ ಏಳನೇ ತರಗತಿಯ ಪಠ್ಯದಿಂದ ಕೈ ಬಿಟ್ಟಿರುವುದು ಸಂತಸದ ವಿಷಯವಾಗಿದೆ ಎಂದರು.

    ಅಷ್ಟೇ ಅಲ್ಲದೇ ದೇಶ ವಿರೋಧಿ ಟಿಪ್ಪು ಸುಲ್ತಾನ್ ಪಠ್ಯವನ್ನ ಪುಸ್ತಕದಿಂದ ತೆಗೆದು ಹಾಕುವಂತೆ ನಾವೂ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದರಂತೆ ರಾಜ್ಯ ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿದೆ. ಇದಕ್ಕೆ ಸಹಕರಿಸಿದ ಟಿಪ್ಪು ವಿರೋಧಿ ಹೋರಾಟ ಸಮಿತಿ, ಸಂಘ ಪರಿವಾರದ ಮುಖಂಡರು ಹಾಗೂ ಸಿಎಂ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ ತಿಳಿಸಿದ್ದಾರೆ.

  • ಹುಲಿಗಳ ಜಯಂತಿಯಾಗಿದ್ದಕ್ಕೆ ಸಿಎಂಗೆ ಹೆದರಿಕೆ, ಜಯಂತಿ ಆಚರಿಸಿಯೇ ಸಿದ್ಧ – ಟಿಪ್ಪು ವೇದಿಕೆ ಅಧ್ಯಕ್ಷ

    ಹುಲಿಗಳ ಜಯಂತಿಯಾಗಿದ್ದಕ್ಕೆ ಸಿಎಂಗೆ ಹೆದರಿಕೆ, ಜಯಂತಿ ಆಚರಿಸಿಯೇ ಸಿದ್ಧ – ಟಿಪ್ಪು ವೇದಿಕೆ ಅಧ್ಯಕ್ಷ

    ಚಿತ್ರದುರ್ಗ: ಸೂರ್ಯ ಚಂದ್ರ ಇರುವವರೆಗೆ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ರಾಜ್ಯ ಟಿಪ್ಪು ಸುಲ್ತಾನ್ ವೇದಿಕೆ ಅಧ್ಯಕ್ಷ ಖಾಸಿಂ ಅಲಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೂರ್ಯ ಚಂದ್ರ ಇರುವ ತನಕ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ. ಇದು ಹುಲಿಗಳ ಜಯಂತಿ ಅದಕ್ಕೆ ಯಡಿಯೂರಪ್ಪನವರಿಗೆ ಹೆದರಿಕೆ. ಬಿಎಸ್‍ವೈ ಅವರಂತಹ 100 ಕೋಟಿ ನಾಯಕರು ಬಂದರೂ ಟಿಪ್ಪು ಜಯಂತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಟಿಪ್ಪು ಜಯಂತಿ ಹಾಗೂ ಪಠ್ಯ ತೆಗೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಯಡಿಯೂರಪ್ಪನವರಿಗೆ ಟಿಪ್ಪು ಸುಲ್ತಾನ್ ಇತಿಹಾಸ ಗೊತ್ತಿಲ್ಲ. ಯಡಿಯೂರಪ್ಪ ಒಬ್ಬ ಭ್ರಷ್ಟ ರಾಜಕಾರಣಿ. ಟಿಪ್ಪು, ರಾಮ ಮಂದಿರ, ಪುಲ್ವಾಮಾ ದಾಳಿ, ಹಿಂದೂ, ಮುಸ್ಲಿಂ, ಪಾಕಿಸ್ತಾನ ಎಂಬ ಅಜೆಂಡಾ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ಶೇ.80ರಷ್ಟು ಸ್ವಾಮೀಜಿಗಳು ಟಿಪ್ಪುವನ್ನು ಒಪ್ಪಿಕೊಂಡಿದ್ದಾರೆ ಎಂದರು.

    ಟಿಪ್ಪು ಜಯಂತಿ ಆಚರಣೆಗೆ ಶೇ.90ರಷ್ಟು ಹಿಂದೂಗಳ ಸಹಕಾರವಿದೆ. ಬಿಜೆಪಿಯವರು ಹಣ ಮಾಡಲು ಅಧಿಕಾರಕ್ಕೆ ಬರುತ್ತಾರೆ. ಹಿಂದೂ ಮುಸ್ಲಿಮರ ಮಧ್ಯೆ ಜಗಳ ಹಚ್ಚುವುದೇ ಬಿಜೆಪಿಯವರ ಅಜೆಂಡಾ ಎಂದು ಕಿಡಿಕಾರಿದರು.

  • ಹಲವು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳಿಲ್ಲ, ತಾಲೂಕಿಗೊಂದು ಕಾಲೇಜು ಮಾಡಿಕೊಂಡರೆ ಹೇಗೆ- ಡಿಕೆಶಿ ವಿರುದ್ಧ ಡಿಸಿಎಂ ಕಿಡಿ

    ಹಲವು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳಿಲ್ಲ, ತಾಲೂಕಿಗೊಂದು ಕಾಲೇಜು ಮಾಡಿಕೊಂಡರೆ ಹೇಗೆ- ಡಿಕೆಶಿ ವಿರುದ್ಧ ಡಿಸಿಎಂ ಕಿಡಿ

    ಬೆಂಗಳೂರು: ಹಲವು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ, ಇವರು ತಾಲೂಕಿಗೊಂದು ಕಾಲೇಜು ಹಾಕಿಸಿಕೊಂಡರೆ ಹೇಗೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ  ಅವರು ಕಿಡಿ ಕಾರಿದ್ದಾರೆ.

    ಮೆಡಿಕಲ್ ಕಾಲೇಜು ಸ್ಥಳಾಂತರದ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿಕಾರ ದುರ್ಬಳಕೆ ಮಾಡಿಕೊಂಡು ಅಟ್ಟಹಾಸ ಮರೆದು ಮೆಡಿಕಲ್ ಕಾಲೇಜು ಕನಕಪುರಕ್ಕೆ ಹಾಕಿಸಿಕೊಂಡಿದ್ದರು. ಜನರ ತೆರಿಗೆ ಹಣ ದುರುಪಯೋಗ ಮಾಡಿಕೊಂಡಿದ್ದರು. ಹೀಗಾಗಿ ಮೆಡಿಕಲ್ ಕಾಲೇಜು ಸ್ಥಳಾಂತರಿಸಲಾಗಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಇಲ್ಲ. ಇಂತಹ ಸಂದರ್ಭದಲ್ಲಿ ತಾಲೂಕಿಗೆ ಒಂದು ಮೆಡಿಕಲ್ ಕಾಲೇಜು ಹಾಕಿಕೊಂಡಿದ್ದು ಎಷ್ಟರಮಟ್ಟಿಗೆ ಸರಿ? ಈ ಕೆಲಸವನ್ನು ದೊಡ್ಡ ಸಾಧನೆ ಎಂದು ಡಿಕೆಶಿ ತಿಳಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಡಿಕೆ ಶಿವಕುಮಾರ್ ಮಂತ್ರಿಯಾಗಿದ್ದು ಇಡೀ ರಾಜ್ಯಕ್ಕೆ, ಕೇವಲ ಕನಕಪುರಕ್ಕೆ ಅಲ್ಲ. ಇನ್ನಾದರೂ ಅವರು ಅರ್ಥ ಮಾಡಿಕೊಳ್ಳಲಿ, ತಿಳುವಳಿಕೆ ಬರಲಿ ಎಂದು ಹರಿಹಾಯ್ದರು.

    ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತ ವಿಚಾರಗಳು ಇರಬೇಕು. ಟಿಪ್ಪು ಸುಲ್ತಾನ್ ಸಮಾಜಕ್ಕೆ ಏನು ಮಾಡಿದ್ದಾರೆ, ಅವರಿಂದ ಆಗಿರುವ ತೊಂದರೆಗಳೇನು ಎನ್ನುವುದನ್ನು ತಿಳಿಸಬೇಕು. ಸಮಾಜಕ್ಕೆ ಪದೇ ಪದೆ ದಿಕ್ಕು ತಪ್ಪಿಸುವ ಜನರಿಗೆ ಇದನ್ನು ಸರಿಯಾದ ರೀತಿಯಲ್ಲಿ ತಿಳಿಸಿಕೊಡಬೇಕು. ಟಿಪ್ಪು ಮಾಡಿರುವ ಘನಕಾರ್ಯಗಳನ್ನು ಪಠ್ಯ ಪುಸ್ತಕಗಳಲ್ಲಿ ತಿಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಇತಿಹಾಸದಲ್ಲಿ ಒಳ್ಳೆಯ ಸೈನಿಕ ಇರಬಹುದು, ಆದರೆ ನಮ್ಮ ಸಂಸ್ಕೃತಿ, ನಾಡಿಗೆ ತೊಂದರೆ ಆಗಿದೆ. ಸಾವಿರಾರು ಜನರ ಮಾರಣಹೋಮ ಆಗಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು ಎಂದು ತಿರುಗೇಟು ನೀಡಿದರು.

  • ಬಿಜೆಪಿಗೆ ಟಿಪ್ಪು ಬೇಡ, ಬಿಎಸ್‍ವೈ ಜೈಲಿಗೆ ಹೋದ ವಿಚಾರವನ್ನು ಮಕ್ಕಳು ಓದಬೇಕಿದೆ – ತನ್ವೀರ್ ಸೇಠ್

    ಬಿಜೆಪಿಗೆ ಟಿಪ್ಪು ಬೇಡ, ಬಿಎಸ್‍ವೈ ಜೈಲಿಗೆ ಹೋದ ವಿಚಾರವನ್ನು ಮಕ್ಕಳು ಓದಬೇಕಿದೆ – ತನ್ವೀರ್ ಸೇಠ್

    ಮೈಸೂರು: ಬಿಜೆಪಿಯವರಿಗೆ ಟಿಪ್ಪು ಸಾಧನೆಯನ್ನು ಮಕ್ಕಳು ಓದುವುದು ಬೇಕಾಗಿಲ್ಲ, ಬದಲಿಗೆ ಯಡಿಯೂರಪ್ಪ ಜೈಲಿಗೆ ಹೋದ ವಿಚಾರವನ್ನು ಮುಂದಿನ ಪೀಳಿಗೆಯ ಮಕ್ಕಳು ಓದಬೇಕಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

    ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಪಠ್ಯವನ್ನು ತೆಗೆಯುವ ಕುರಿತ ಸಿಎಂ ಹೇಳಿಕೆ ಕುರಿತು ಮಾತನಾಡಿದ ಅವರು, ಆಪರೇಷನ್ ಕಮಲ, ಗಣಿ ಲೂಟಿ ಮಾಡಿರುವುದು ಇವರಿಗೆ ನಿಜವಾದ ಇತಿಹಾಸ. ಇದನ್ನೇ ಮುಂದಿನ ಪೀಳಿಗೆಯ ಮಕ್ಕಳು ಓದಲಿ ಎಂದು ಬಯಸಿದ್ದಾರೆ. ಬಿಜೆಪಿಯವರು ಬ್ರಿಟಿಷರ ಪರ ನಿಂತವರು, ಗಾಂಧೀಜಿಯನ್ನು ಕೊಂದವರು. ಬಿಜೆಪಿಯವರ ಇತಿಹಾಸ ಸ್ವಾತಂತ್ರ್ಯ ಪುಟದಲ್ಲಿ ಇಲ್ಲ. ಬಿಜೆಪಿಯದು ಹಿಟ್ಲರ್ ಸಾಮ್ರಾಜ್ಯಕ್ಕಿಂತ ಕೀಳು ಎಂದು ವಾಗ್ದಾಳಿ ನಡೆಸಿದರು.

    ಅಲ್ಪಸಂಖ್ಯಾತ ಸಮುದಾಯ ಟಿಪ್ಪು ಜಯಂತಿ ಮಾಡಿ ಪಠ್ಯದಲ್ಲಿ ಸೇರಿಸಲು ಕೇಳಿರಲಿಲ್ಲ. ಟಿಪ್ಪುವಿನದು ದೊಡ್ಡ ಇತಿಹಾಸ. ಅದನ್ನು ವ್ಯವಸ್ಥಿತವಾಗಿ ತಿರುಚಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಹಾಗೂ ಅವರ ಪರ ಮಾತನಾಡುವವರನ್ನು ಘಾತಕುಶಕ್ತಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

  • ಶಾಲಾ ಪುಸ್ತಕಗಳಲ್ಲಿ ಟಿಪ್ಪು ಪಠ್ಯ ತೆಗೆಯಲು ಚಿಂತನೆ – ಸಿಎಂ

    ಶಾಲಾ ಪುಸ್ತಕಗಳಲ್ಲಿ ಟಿಪ್ಪು ಪಠ್ಯ ತೆಗೆಯಲು ಚಿಂತನೆ – ಸಿಎಂ

    – ಮುಂದಿನ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಇಲ್ಲ
    – ಮೂರು ಡಿಸಿಎಂ ಕೇಂದ್ರ ನಾಯಕರ ನಿರ್ಧಾರ

    ಬೆಂಗಳೂರು: ಶಾಲಾ ಪಠ್ಯ ಪುಸ್ತಕಗಳಿಂದ ಟಿಪ್ಪು ಕುರಿತ ಪಠ್ಯಗಳನ್ನು ತೆಗೆಯಲು ಚಿಂತನೆ ನಡೆಸಿದ್ದೇವೆ, ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿದ್ದಾರೆ.

    ಪ್ರಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದ ವೇಳೆ ಟಿಪ್ಪು ಜಯಂತಿ ಬಗ್ಗೆ ಕೇಳಲಾದ ಪ್ರಶ್ನೆಗೆ, ಸರ್ಕಾರ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ ಎಂದು ಉತ್ತರಿಸಿದರು.

    ಈ ಸಂದರ್ಭದಲ್ಲಿ ಶಾಲಾ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆಯಲಾಗುತ್ತಾ ಎನ್ನುವ ಪ್ರಶ್ನೆಗೆ, ಶಾಲಾ ಪುಸ್ತಕಗಳಲ್ಲಿನ ಟಿಪ್ಪು ಕುರಿತ ಪಠ್ಯಗಳನ್ನು ತೆಗೆಯಲು ಚರ್ಚಿಸಿದ್ದೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹ ಯಾವುದೇ ವಿಚಾರ ಪಠ್ಯ ಪುಸ್ತಕಗಳಲ್ಲಿ ಇರಬಾರದು. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಈ ಕುರಿತು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ಅಭಿವೃದ್ಧಿಯೇ ಆಡಳಿತದ ಮಂತ್ರದೊಂದಿಗೆ ಸರ್ಕಾರ ಕಾರ್ಯಾರಂಭ ಮಾಡಿದೆ. ಸರ್ಕಾರ ಬಂದ ಆರಂಭದಲ್ಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಕೈ ಜೋಡಿಸಿತು. ಕೇಂದ್ರದ ಈ ಯೋಜನೆಯ ನೆರವಿನ ಜೊತೆಗೆ ರಾಜ್ಯದಿಂದ ಹೆಚ್ಚುವರಿ ನೆರವು ಕೊಡಲಾಗುತ್ತಿದೆ. ಮೀನುಗಾರರ, ನೇಕಾರರ ಸಾಲಮನ್ನಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಿರಿಯ ಅಧಿಕಾರಿಗಳ ಜತೆಗೂ ಆರಂಭದಲ್ಲೇ ಸರ್ಕಾರದ ಧ್ಯೇಯೋದ್ದೇಶ ತಿಳಿಸಲಾಗಿದೆ. ಎಲ್ಲ ಜಿಲ್ಲೆಗಳ ಡಿಸಿಗಳ ಜತೆಗೆ ಸಭೆ ಮಾಡಿ ಅಗತ್ಯ ಸೂಚನೆಗಳನ್ನು ನೀಡಲಾಯಿತು. ದುರಾದೃಷ್ಟವಶಾತ್ ರಾಜ್ಯದಲ್ಲಿ ನೆರೆ, ಅತಿವೃಷ್ಟಿ ಬಂತು. ನೆರೆ ಅತಿವೃಷ್ಟಿ ಎದುರಿಸಲು ಅಧಿಕಾರಿಗಳು ಹಗಲು, ರಾತ್ರಿ ದುಡಿಯುತ್ತಿದ್ದಾರೆ. ನೆರೆ, ಬರ ಎರಡನ್ನೂ ರಾಜ್ಯ ಎದುರಿಸುತ್ತಿದೆ. 22 ಜಿಲ್ಲೆಗಳಲ್ಲಿ ನೆರೆ, 5 ಜಿಲ್ಲೆಗಳಲ್ಲಿ ಬರ ಇದೆ ಎಂದು ತಿಳಿಸಿದರು.

    ಎನ್‍ಡಿಆರ್‍ಎಫ್ ನಿಯಮದಡಿ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಪರಿಹಾರ ಕೊಡುತ್ತಿದ್ದೇವೆ. ಸ್ವಾತಂತ್ರ್ಯ ನಂತರ ಯಾವುದೇ ಸರ್ಕಾರ ಎನ್‍ಡಿಆರ್‍ಎಫ್ ನಿಯಮ ಮೀರಿ ಪರಿಹಾರ ಘೋಷಣೆ ಮಾಡಿರಲಿಲ್ಲ. ಪ್ರವಾಹಕ್ಕೆ ಕೇಂದ್ರದಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಮಧ್ಯಂತರ ಪರಿಹಾರವಾಗಿ ಕೇಂದ್ರ 1,200 ಕೋಟಿ, ರಾಜ್ಯದಿಂದ 2,969 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಪ್ರವಾಹ ಪರಿಹಾರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ. ತೆರಿಗೆ ಸಂಗ್ರಹದಲ್ಲಿ ಸರ್ಕಾರ ನಿಗದಿತ ಗುರಿ ಸಾಧಿಸಿದೆ. ನಿರುದ್ಯೋಗ ಪ್ರಮಾಣ ರಾಜ್ಯದಲ್ಲಿ ಶೇ.0.7ರಷ್ಟು ಇದೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು.

    ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು 5 ಲಕ್ಷ ರೂ. ಪರಿಹಾರ ಕೊಡುತ್ತಿದ್ದೇವೆ. ಈ ವರೆಗೆ ಪೂರ್ಣ ಹಾನಿಯಾದ 7,481 ಮನೆಗಳಿಗೆ 5 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ನೆರೆ ಸಂಬಂಧ ಜನರಲ್ಲಿ ಪ್ರತಿಪಕ್ಷಗಳು ಗೊಂದಲ ಹುಟ್ಟಿಸುತ್ತಿವೆ. ನಮ್ಮ ಪರಿಹಾರ ಕಾರ್ಯಗಳಲ್ಲಿ ಚ್ಯುತಿ ಆಗಿಲ್ಲ. ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಗೊಂದಲ ಹುಟ್ಟಿಸುತ್ತಿರುವುದು ಸರಿಯಲ್ಲ. ನೆರೆ, ಬರ ಸನ್ನಿವೇಶದಲ್ಲೂ ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿಲ್ಲ ಎಂದು ವಿವರಿಸಿದರು.

    ವಿಧಾನಸಭೆಯಲ್ಲಿ ಮಾಧ್ಯಮಗಳ ಚಿತ್ರೀಕರಣಕ್ಕೆ ನಿರ್ಬಂಧ ಹೇರಿದ ಕುರಿತು ಮಾತನಾಡಿದ ಅವರು, ಈ ಕುರಿತು ನಾನು ಸ್ಪೀಕರ್ ಜತೆ ಮಾತನಾಡಿ, ಮನವರಿಕೆ ಮಾಡಿದ್ದೇನೆ. ಮುಂದಿನ ಅಧಿವೇಶನದಿಂದ ಮಾಧ್ಯಮ ನಿರ್ಬಂಧ ಇರುವುದಿಲ್ಲ. ಮುಂದಿನ ಅಧಿವೇಶನದಿಂದ ಮೊದಲಿದ್ದ ವ್ಯವಸ್ಥೆಯೇ ಬರಲಿದೆ. ಮಾಧ್ಯಮಗಳಿಗೆ ಮೊದಲಿನ ಹಾಗೆ ಅವಕಾಶ ಮಾಡಿಕೊಡಲಾಗುತ್ತದೆ. ಯಡಿಯೂರಪ್ಪ ಹೇಳಿದ ಮಾತಿನಂತೆ ನಡ್ಕೋಳ್ತಾನೆ ಎಂದು ಭರವಸೆ ನೀಡಿದರು.

    ಮೂರು ಜನ ಉಪಮುಖ್ಯಮಂತ್ರಿಗಳ ಸೃಷ್ಟಿ ಕೇಂದ್ರದ ವರಿಷ್ಟರ ನಿರ್ಧಾರ. ಇದು ಕೇಂದ್ರದ ಸಹಜ ನಿರ್ಧಾರ. ಇದರಲ್ಲಿ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ನೂರು ದಿನದಲ್ಲಿ ನಾನು ಯಾವ ರೀತಿ ಆಡಳಿತ ಮಾಡಿದ್ದೇನೆ ಎಂದು ಜನತೆಗೆ ಗೊತ್ತು. ಉಳಿದ ಅವಧಿಯಲ್ಲೂ ಲೋಪದೋಷ ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ. ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡುತ್ತೇವೆ. ಕೇಂದ್ರ ಸರ್ಕಾರ ನನ್ನ ಕೈಕಟ್ಟಿ ಹಾಕಿಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನನಗೆ ವರಿಷ್ಠರು ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ ಎಂದರು.

    ಮೂರು ತಿಂಗಳಲ್ಲಿ ಐಎಎಸ್ ಅಧಿಕಾರಿಗಳ ಬದಲಾವಣೆ ಕುರಿತು ಮಾತನಾಡಿದ ಅವರು, ಆಡಳಿತಾತ್ಮಕ ದೃಷ್ಟಿಯಿಂದ ಕೆಲವು ತೀರ್ಮಾನ ಅನಿವಾರ್ಯ. ಹೀಗಾಗಿ ವರ್ಗಾವಣೆ ಮಾಡಲಾಗಿದೆ. ಆಡಳಿತದ ಹಿತದೃಷ್ಟಿಯಿಂದ ಕೆಲವೊಂದು ತೀರ್ಮಾನ ಮಾಡಬೇಕು. ನನ್ನ ಯಾವುದೇ ತೀರ್ಮಾನಗಳಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿಲ್ಲ. ಸಂಪುಟ ರಚನೆಯಲ್ಲೂ ಅಡ್ಡಿ ಬಂದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.